ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, August 22, 2018

Mahabharata Tatparya Nirnaya Kannada 9.113-9.118



ಅಙ್ಗದಃ ಕಾಲತಸ್ತ್ಯಕ್ತ್ವಾ ದೇಹಮಾಪ ನಿಜಾಂ ತನುಮ್
ರಾಮಾಜ್ಞಯೈವ ಕುರ್ವಾಣೋ ರಾಜ್ಯಂ ಕುಶಸಮನ್ವಿತಃ ೯.೧೧೩

ಅಂಗದನು ಕುಶನಿಂದ ಕೂಡಿ, ರಾಮನ ಆಜ್ಞೆಯಂತೆ ಕಪಿರಾಜ್ಯವನ್ನು ಆಳುತ್ತಾ, ಕಾಲತಃ ದೇಹವನ್ನು ಬಿಟ್ಟು, ತನ್ನ ಮೂಲರೂಪವನ್ನು ಸೇರಿಕೊಂಡನು.

ವಿಭೀಷಣಶ್ಚ ಧರ್ಮ್ಮಾತ್ಮಾ ರಾಘವಾಜ್ಞಾಪುರಸ್ಕೃತಃ
ಸೇನಾಪತಿರ್ದ್ಧನೇಶಸ್ಯ ಕಲ್ಪಮಾವೀತ್ ಸ ರಾಕ್ಷಸಾನ್ ೯.೧೧೪

ವಿಭೀಷಣನೂ ಕೂಡಾ ರಾಮಚಂದ್ರನ ಆಜ್ಞೆಯಂತೆ ಕುಬೇರನಿಗೆ ವಿನೀತನಾಗಿ, ಅವನ ಸೇನಾಧಿಪತಿಯಾಗಿ, ಕಲ್ಪಕಾಲಪರ್ಯಂತ ರಾಕ್ಷಸರನ್ನು ರಕ್ಷಿಸುತ್ತಾನೆ.
[ಮೂಲತಃ ಲಂಕೆ ಕುಬೇರನಿಗೆ ಸೇರಿರುವುದು. ಆದರೆ ರಾವಣ ಅದನ್ನು ಅತಿಕ್ರಮಣ ಮಾಡಿ ಕುಬೇರನಿಂದ ಕಸಿದುಕೊಂಡಿದ್ದ. ಆದರೆ ವಿಭೀಷಣ ಕುಬೇರನಿಗೆ ವಿನೀತನಾಗಿ ನಡೆದ]

ರಾಮಾಜ್ಞಯಾ ಜಾಮ್ಬವಾಂಶ್ಚ ನ್ಯವಸತ್ ಪೃಥಿವೀತಳೇ
ಉತ್ಪತ್ತ್ಯರ್ತ್ಥಂ ಜಾಮ್ಬವತ್ಯಾಸ್ತದರ್ತ್ಥಂ ಸುತಪಶ್ಚರನ್ ೯.೧೧೫

ಜಾಂಬವಂತ ರಾಮನ ಆಜ್ಞೆಯಂತೆ ಜಾಮ್ಬವತಿಯ ಉತ್ಪತ್ತಿಗಾಗಿ ತಪಸ್ಸನ್ನು ಮಾಡುತ್ತಾ  ಭೂಮಿಯಲ್ಲೇ ವಾಸಿಸಿದನು.

ಅಥೋ ರಘೂಣಾಂ ಪ್ರವರಃ ಸುರಾರ್ಚ್ಚಿತಃ ಸ್ವಯೈಕತನ್ವಾ ನ್ಯವಸತ್ ಸುರಾಲಯೇ
ದ್ವಿತೀಯಯಾ ಬ್ರಹ್ಮಸದಸ್ಯಧೀಶ್ವರಸ್ತೇನಾರ್ಚ್ಚಿತೋsಥಾಪರಾಯಾ ನಿಜಾಲಯೇ ೯.೧೧೬

ತದನಂತರ ರಘುಗಳಲ್ಲಿ ಶ್ರೇಷ್ಠರಾದ ರಾಮಚಂದ್ರನು, ಒಂದು ರೂಪದಿಂದ ದೇವತೆಗಳಿಂದ ಪೂಜಿತನಾಗಿ, ದೇವತೆಗಳ ಆಲಯದಲ್ಲಿ ನೆಲಸಿದನು. ಇನ್ನೊಂದು ರೂಪದಿಂದ ಬ್ರಹ್ಮದೇವರ ಲೋಕವಾದ ಸತ್ಯಲೋಕದಲ್ಲಿ ಅವನಿಂದ ಪೂಜಿತನಾಗಿ ನೆಲೆಸಿದನು. ಇನ್ನೊಂದು ರೂಪದಿಂದ ವಿಷ್ಣುಲೋಕದತ್ತ  ಸಾಗಿದನು.

ತೃತೀಯರೂಪೇಣ ನಿಜಂ ಪದಂ ಪ್ರಭುಂ ವ್ರಜನ್ತಮುಚ್ಚೈರನುಗಮ್ಯ  ದೇವತಾಃ
ಅಗಮ್ಯಮರ್ಯ್ಯಾದಮುಪೇತ್ಯ ಚ ಕ್ರಮಾದ್ ವಿಲೋಕಯನ್ತೋsತಿವಿದೂರತೋsಸ್ತುವನ್ ೯.೧೧೭

ಮೂರನೆಯ ರೂಪದಿಂದ ವಿಷ್ಣುಲೋಕವನ್ನು ಕುರಿತು ಹೋಗುವ ನಾರಾಯಣನನ್ನು ಅನುಸರಿಸಿದ ದೇವತೆಗಳು, ಸರ್ವಸಮರ್ಥ  ಪರಮಾತ್ಮನನ್ನು ಅವರವರ ಯೋಗ್ಯತಾನುಗುಣವಾಗಿ  ಕಾಣುತ್ತಾ, ದೂರದಿಂದಲೇ ಉತ್ಕೃಷ್ಟವಾದ ಭಕ್ತಿಯಿಂದ  ಸ್ತೋತ್ರ ಮಾಡಿದರು.

ಬ್ರಹ್ಮಾ ಮರುನ್ಮಾರುತಸೂನುರೀಶಃ ಶೇಷೋ ಗರುತ್ಮಾನ್ ಹರಿಜಃ ಶಕ್ರಕಾದ್ಯಾಃ
ಕ್ರಮಾದನುವ್ರಜ್ಯ ತು ರಾಘವಸ್ಯ ಶಿರಸ್ಯಥಾsಜ್ಞಾಂ ಪ್ರಣಿಧಾಯ ನಿರ್ಯ್ಯಯುಃ ೯.೧೧೮

ಬ್ರಹ್ಮ, ಮುಖ್ಯಪ್ರಾಣ, ಹನುಮಂತ, ಸದಾಶಿವ, ಶೇಷ, ಗರುಡ, ಕಾಮ, ಶಕ್ರಕಾ(ಇಂದ್ರ), ಹೀಗೆ ಎಲ್ಲರೂ ಕೂಡಾ ಕ್ರಮೇಣ(ಯೋಗ್ಯತಾನುಸಾರ) ಭಗವಂತನನ್ನು  ಅನುಸರಿಸಿ, ರಾಮಚಂದ್ರನ ಆಜ್ಞೆಯನ್ನು ಶಿರಸಾ ಹೊತ್ತು ಮರಳಿ ಬಂದರು.

Tuesday, August 21, 2018

Mahabharata Tatparya Nirnaya Kannada 9.108-9.112


ಯೇ ತು ದೇವಾ ಇಹೋದ್ಭೂತಾ ನೃವಾನರಶರೀರಿಣಃ
ತೇ ಸರ್ವೇ ಸ್ವಾಂಶಿತಾಮಾಪುಸ್ತನ್ಮೈನ್ದವಿವಿದಾವೃತೇ                ೯.೧೦೮

ಮೈನ್ದ ಮತ್ತು ವಿವಿದರನ್ನು ಹೊರತು ಪಡಿಸಿ,  ಶ್ರಿರಾಮನೊಂದಿಗೆ ಭೂಮಿಯಲ್ಲಿ  ಅವತರಿಸಿದ್ದ  ಇತರ ದೇವತೆಗಳು ತಮ್ಮ ತಮ್ಮ ಮೂಲರೂಪವನ್ನು ಸೇರಿದರು. 

ಅಸುರಾವೇಶತಸ್ತೌ ತು ನ ರಾಮಮನುಜಗ್ಮತುಃ
ಪೀತಾಮೃತೌ ಪುರಾ ಯಸ್ಮಾನ್ಮಮ್ರತುರ್ನ್ನಚ ತೌ ತದಾ             ೯.೧೦೯

ಮೈನ್ದ ಮತ್ತು ವಿವಿದರು ಅಸುರಾವೇಶದಿಂದ  ರಾಮಚಂದ್ರನನ್ನು ಅನುಸರಿಸಲಿಲ್ಲ. ಅವರು  ಹಿಂದೆ ಅಮೃತಮಥನ ಕಾಲದಲ್ಲಿ ಅಮೃತ ಸೇವನೆ ಮಾಡಿದ್ದರಿಂದ ಸಾಯಲೂ ಇಲ್ಲಾ.

ತಯೋಶ್ಚ ತಪಸಾ ತುಷ್ಟಶ್ಚಕ್ರೇ ತಾವಜರಾಮರೌ
ಪುರಾ ಸ್ವಯಮ್ಭುಸ್ತೇನೋಭೌ ದರ್ಪ್ಪಾದಮೃತಮನ್ಥನೇ          ೯.೧೧೦

ಪ್ರಸ̐ಹ್ಯಾಪಿಬತಾಂ ದೇವೈರ್ದ್ದೇವಾಂಶತ್ವಾದುಪೇಕ್ಷಿತೌ
ಪೀತಾಮೃತೇಷು ದೇವೇಷು ಯುದ್ಧ್ಯಮಾನೇಷು ದಾನವೈಃ         ೯.೧೧೧

ತೈರ್ದ್ದತ್ತಮಾತ್ಮಹಸ್ತೇ ತು ರಕ್ಷಾಯೈ ಪೀತಮಾಶು ತತ್
ತಸ್ಮಾದ್ ದೋಷಾದಾಪತುಸ್ತಾವಾಸುರಂ ಭಾವಮೂರ್ಜ್ಜಿತಮ್    ೯.೧೧೨

ಆಶ್ವೀದೇವತೆಗಳ ಅವತಾರವಾದ ಮೈನ್ದ–ವಿವಿದರು ಅಮೃತಮಥನ ಕಾಲಕ್ಕೂ ಮೊದಲು^  ಬ್ರಹ್ಮದೇವರನ್ನು ಕುರಿತು ತಪಸ್ಸು ಮಾಡಿ  ಅವಧ್ಯರಾಗುವ ವರವನ್ನು ಪಡೆದಿದ್ದರು.
ಅವತಾರ ರೂಪದಲ್ಲಿ ಅವರಿಗೆ ಅಮೃತ ಸಲ್ಲಬೇಕಾಗಿರಲಿಲ್ಲಾ. ಆದರೂ ಕೂಡಾ ಬಲಾತ್ಕಾರವಾಗಿ ಅವರು ಅಮೃತಪಾನ ಮಾಡಿದರು. ದೇವತಾರೂಪವಾಗಿರುವುದರಿಂದ ಇತರ ದೇವತೆಗಳು ಅದನ್ನು ಉಪೇಕ್ಷೆ ಮಾಡಿದರು(ವಿರೋಧಿಸಲಿಲ್ಲಾ).
(ಆದರೆ ಮೈನ್ದ–ವಿವಿದರಿಗೆ ಅಮೃತ ಹೇಗೆ ದೊರೆಯಿತು ಎಂದರೆ) ದೇವತೆಗಳೆಲ್ಲರು ಅಮೃತಪಾನ ಮಾಡಿ, ದೈತ್ಯರೊಂದಿಗೆ ಯುದ್ಧಕ್ಕೆಂದು ಹೊರಡುವಾಗ, ಅಮೃತಪಾತ್ರೆಯನ್ನು  ಮೈನ್ದ–ವಿವಿದರಲ್ಲಿ ಕೊಟ್ಟಿದ್ದರು. ಆಗ ಅವರು ಭಗವಂತನ ಅನುಮತಿ ಇಲ್ಲದೇ ಅಮೃತ ಸೇವನೆ ಮಾಡಿದರು.  ಈ ರೀತಿ, ಅನುಮತಿ ಇಲ್ಲದೇ ಕುಡಿದ ದೋಷದಿಂದಾಗಿ ಅಸುರ ಚಿತ್ತ ಪ್ರವೇಶವನ್ನು ಅವರು ಹೊಂದಿದರು.

[^ಅಶ್ವೀದೇವತೆಗಳ ಅವತಾರವಾದ  ಮೈನ್ದ–ವಿವಿದರು ರಾಮಾವತಾರ ಕಾಲದಲ್ಲಿ ಅವತರಿಸಿರುವುದಲ್ಲ. ಅವರು ಅಮೃತ ಮಥನ ಕಾಲಕ್ಕೂ ಮೊದಲೇ ಆ ರೂಪದಲ್ಲಿದ್ದರು. ಅಮೃತ ಮಥನಕಾಲದಲ್ಲಿ ಮೂಲರೂಪದಲ್ಲಿ ಅಶ್ವೀದೇವತೆಗಳ ಜೊತೆಗೆ ಮೈನ್ದ–ವಿವಿದರೂ ಅಲ್ಲಿ ಹಾಜರಿದ್ದರು. ಅಮೃತ ಪಾನಕ್ಕೆ ಭಗವಂತನ ಅಪ್ಪಣೆ ಇದ್ದದ್ದು ಕೇವಲ ದೇವತೆಗಳಿಗೆ, ಅದೂ ಕೇವಲ ಅವರ ಮೂಲರೂಪದಲ್ಲಿ ಮಾತ್ರ.  ಅವತಾರ ರೂಪದಲ್ಲಿದ್ದ ದೇವತೆಗಳು ಅಮೃತವನ್ನು ಕುಡಿಯಬಾರದು ಎನ್ನುವ ನಿಯಮ ಭಗವಂತನದ್ದಾಗಿತ್ತು. ಆದರೆ ಮೈನ್ದ–ವಿವಿದರು ಈ ನಿಯಮವನ್ನು ಮುರಿದು ಅಮೃತ ಕುಡಿದಿದ್ದರು. ]

Monday, August 20, 2018

Mahabharata Tatparya Nirnaya Kannada 9.101-9.107


ಅಥ ಯೇ ತ್ವತ್ಪದಾಮ್ಭೋಜಮಕರನ್ದೈಕಲಿಪ್ಸವಃ
ತ್ವಯಾ ಸಹಾsಗತಸ್ತೇಷಾಂ ವಿಧೇಹಿ ಸ್ಥಾನಮುತ್ತಮಮ್ ೯.೧೦೧

ಇನ್ನು, ನಿನ್ನ ಪಾದವೆಂಬ ಕಮಲದ ಭೃಂಗಗಳಾಗಿ ಅನೇಕ ಜೀವರು ನಿನ್ನ ಜೊತೆಗೆ ಬಂದಿದ್ದಾರೆ. ಅವರಿಗೆ ಯಾವ ಸ್ಥಾನವನ್ನು ಕೊಡಬೇಕು ಎನ್ನುವುದನ್ನು  ಆಜ್ಞೆಮಾಡು.

ಅಹಂ ಭವಃ ಸುರೇಶಾದ್ಯಾಃ ಕಿಙ್ಕರಾಃ ಸ್ಮ ತವೇಶ್ವರ
ಯಚ್ಚ ಕಾರ್ಯ್ಯಮಿಹಾಸ್ಮಾಭಿಸ್ತದಪ್ಯಾಜ್ಞಾಪಯಾsಶು ನಃ ೯.೧೦೨

ನಾನು, ಸದಾಶಿವ, ಇಂದ್ರ, ಮೊದಲಾದ ಎಲ್ಲರೂ ನಿನ್ನ ದಾಸರು. ನಿನ್ನ ಇಚ್ಛೆಯಂತೆ ನಾವು ನಡೆಯುವವರು. ಈ ಸಮಯದಲ್ಲಿ ನಮ್ಮಿಂದ ಯಾವ ಕಾರ್ಯ ನಡೆಯಬೇಕೋ ಅದನ್ನು ನೀನು ನಮಗೆ ಆಜ್ಞಾಪಿಸು.

ಇತ್ಯುದೀರಿತಮಾಕರ್ಣ್ಣ್ಯ ಶತಾನನ್ದೇನ ರಾಘವಃ
ಜಗಾದ ಭಾವಗಮ್ಭೀರಸುಸ್ಮಿತಾಧರಪಲ್ಲವಃ ೯.೧೦೩

ಈರೀತಿಯಾಗಿ,  ಜೀವರಲ್ಲಿಯೇ  ಎಣೆಯಿರದ ಆನಂದವುಳ್ಳ^  ಬ್ರಹ್ಮದೇವರು ಹೇಳಲು, ಅವರ ಮಾತನ್ನು ಕೇಳಿದ ಗಂಭೀರವಾದ ಮುಗುಳ್ನಗೆಯಿಂದ ಕೂಡಿರುವ ರಾಮಚಂದ್ರ ಮಾತನ್ನಾಡುತ್ತಾನೆ:
[^ಶತಾನನ್ದ: ಇದು ಬ್ರಹ್ಮದೇವರ ಅಸಾಧಾರಣವಾದ ನಾಮ. ಜೀವರಲ್ಲಿಯೇ ಪೂರ್ಣವಾದ ಆನಂದವನ್ನು ಹೊಂದಿರುವ ಚತುರ್ಮುಖ ‘ಶತಾನನ್ದ’]

ಜಗದ್ಗುರುತ್ವಮಾದಿಷ್ಟಂ ಮಯಾ ತೇ ಕಮಲೋದ್ಭವ
ಗುರ್ವಾದೇಶಾನುಸಾರೇಣ ಮಯಾssದಿಷ್ಟಾ ಚ ಸದ್ಗತಿಃ ೯.೧೦೪

ಅತಸ್ತ್ವಯಾ ಪ್ರದೇಯಾ ಹಿ ಲೋಕಾ ಏಷಾಂ ಮದಾಜ್ಞಯಾ
ಹೃದಿ ಸ್ಥಿತಂ ಚ ಜಾನಾಸಿ ತ್ವಮೇವೈಕಃ ಸದಾ ಮಮ ೯.೧೦೫

‘ಎಲೈ ಕಮಲೋದ್ಭವನೇ, ನಿನಗೆ ನಾನು ಜಗದ್ಗುರುತ್ವವನ್ನು ಕೊಟ್ಟಿದ್ದೇನೆ. ನಿನ್ನ ಗುರುವಾದ ನನ್ನಿಂದ ಇವರಿಗೆಲ್ಲರಿಗೂ ಕೂಡಾ ಸದ್ಗತಿಯು ಆಜ್ಞಾಪಿಸಲ್ಪಟ್ಟಿದೆ.
ಆದಕಾರಣ, ನನ್ನೊಂದಿಗೆ ಬಂದಿರುವ ಇವರೆಲ್ಲರೂ,  ನನ್ನ ಆಜ್ಞೆಯಂತೆ, ನಿನ್ನಿಂದ ಸದ್ಗತಿಯನ್ನು ಪಡೆಯಲು  ಅರ್ಹರು.  ನನ್ನ ಹೃದಯದೊಳಗೆ ಇರತಕ್ಕದ್ದನ್ನು ತಿಳಿದಿರುವವನು ನೀನೊಬ್ಬನೇ’.

ಇತೀರಿತೋ ಹರೇರ್ಭಾವವಿಜ್ಞಾನೀ ಕಞ್ಜಸಮ್ಭವಃ
ಪಿಪೀಲಿಕಾತೃಣಾನ್ತಾನಾಂ ದದೌ ಲೋಕಾನನುತ್ತಮಾನ್
ವೈಷ್ಣವಾನ್ ಸನ್ತತತ್ವಾಚ್ಚ ನಾಮ್ನಾ ಸಾನ್ತಾನಿಕಾನ್ ವಿಭುಃ ೯.೧೦೬

ತೇ ಜರಾಮೃತಿಹೀನಾಶ್ಚ ಸರ್ವದುಃಖವಿವರ್ಜ್ಜಿತಾಃ
ಸಂಸಾರಮುಕ್ತಾ ನ್ಯವಸಂಸ್ತತ್ರ ನಿತ್ಯಸುಖಾಧಿಕಾಃ ೯.೧೦೭

ಈರೀತಿಯಾಗಿ ಹೇಳಲ್ಪಟ್ಟ ಪರಮಾತ್ಮನ ಭಾವನ್ನು ತಿಳಿದ ಚತುರ್ಮುಖನು, ಎಲ್ಲಾ ಜೀವರಿಗೂ ಕೂಡಾ (ಹುಲ್ಲು, ಇರುವೆ, ಹೀಗೆ ಇತ್ಯಾದಿಯಲ್ಲಿದ್ದು, ರಾಮನನ್ನು ಹಿಂಬಾಲಿಸಿ ಬಂದಿದ್ದ ಎಲ್ಲಾ ಜೀವರಿಗೂ ಕೂಡಾ) ಉತ್ಕೃಷ್ಟವಾದ ಸಾನ್ತಾನಿಕ^ ಲೋಕವನ್ನು(ಮುಕ್ತ ಲೋಕವನ್ನು) ನೀಡಿದನು.
ಆ ಎಲ್ಲಾ ಜೀವರು ಸಂಸಾರ ಬಂಧದಿಂದ ಮುಕ್ತರಾಗಿ, ಉತ್ಕೃಷ್ಟವಾದ ಲೋಕದಲ್ಲಿ  ಮುಪ್ಪು ಇಲ್ಲದೇ, ಮರಣವಿಲ್ಲದೇ, ಸರ್ವದುಃಖದಿಂದಲೂ ಕೂಡಾ ರಹಿತರಾಗಿ, ಸಂಸಾರದಿಂದ ಮುಕ್ತರಾಗಿ, ನಿತ್ಯಸುಖದಿಂದ ಕೂಡಿದವರಾಗಿ  ಆವಾಸ ಮಾಡಿದರು.

[^ವಾಲ್ಮೀಕಿ ರಾಮಾಯಣದಲ್ಲಿ(ಉತ್ತರಕಾಂಡ ೧೧೦.೧೨) ಈ ಮಾತಿನ ಉಲ್ಲೇಖವಿದೆ: ಲೋಕಾನ್ ಸಾನ್ತಾನಿಕಾನ್ ನಾಮ ಯಾಸ್ಯನ್ತೀಮೇ  ಸಮಾಗತಾಃ  ಎಂದು ಅಲ್ಲಿ ವಾಲ್ಮೀಕಿ  ವರ್ಣಿಸಿದ್ದಾರೆ.  ಹಾಗಾಗಿ  ‘ವೈಷ್ಣವಾನ್ ಸನ್ತತತ್ವಾಚ್ಚ ನಾಮ್ನಾ ಸಾನ್ತಾನಿಕಾನ್ ವಿಭುಃ’ ಎನ್ನುವ ಆಚಾರ್ಯರ ಮಾತು, ವಾಲ್ಮೀಕಿ ರಾಮಾಯಣದಲ್ಲಿ ಹೇಳಿರುವ ‘ಸಾನ್ತಾನಿಕಾನ್’ ಎನ್ನುವ ಪದದ ವ್ಯಾಖ್ಯಾನ ರೂಪದಲ್ಲಿದೆ]