ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, August 20, 2018

Mahabharata Tatparya Nirnaya Kannada 9.101-9.107


ಅಥ ಯೇ ತ್ವತ್ಪದಾಮ್ಭೋಜಮಕರನ್ದೈಕಲಿಪ್ಸವಃ
ತ್ವಯಾ ಸಹಾsಗತಸ್ತೇಷಾಂ ವಿಧೇಹಿ ಸ್ಥಾನಮುತ್ತಮಮ್ ೯.೧೦೧

ಇನ್ನು, ನಿನ್ನ ಪಾದವೆಂಬ ಕಮಲದ ಭೃಂಗಗಳಾಗಿ ಅನೇಕ ಜೀವರು ನಿನ್ನ ಜೊತೆಗೆ ಬಂದಿದ್ದಾರೆ. ಅವರಿಗೆ ಯಾವ ಸ್ಥಾನವನ್ನು ಕೊಡಬೇಕು ಎನ್ನುವುದನ್ನು  ಆಜ್ಞೆಮಾಡು.

ಅಹಂ ಭವಃ ಸುರೇಶಾದ್ಯಾಃ ಕಿಙ್ಕರಾಃ ಸ್ಮ ತವೇಶ್ವರ
ಯಚ್ಚ ಕಾರ್ಯ್ಯಮಿಹಾಸ್ಮಾಭಿಸ್ತದಪ್ಯಾಜ್ಞಾಪಯಾsಶು ನಃ ೯.೧೦೨

ನಾನು, ಸದಾಶಿವ, ಇಂದ್ರ, ಮೊದಲಾದ ಎಲ್ಲರೂ ನಿನ್ನ ದಾಸರು. ನಿನ್ನ ಇಚ್ಛೆಯಂತೆ ನಾವು ನಡೆಯುವವರು. ಈ ಸಮಯದಲ್ಲಿ ನಮ್ಮಿಂದ ಯಾವ ಕಾರ್ಯ ನಡೆಯಬೇಕೋ ಅದನ್ನು ನೀನು ನಮಗೆ ಆಜ್ಞಾಪಿಸು.

ಇತ್ಯುದೀರಿತಮಾಕರ್ಣ್ಣ್ಯ ಶತಾನನ್ದೇನ ರಾಘವಃ
ಜಗಾದ ಭಾವಗಮ್ಭೀರಸುಸ್ಮಿತಾಧರಪಲ್ಲವಃ ೯.೧೦೩

ಈರೀತಿಯಾಗಿ,  ಜೀವರಲ್ಲಿಯೇ  ಎಣೆಯಿರದ ಆನಂದವುಳ್ಳ^  ಬ್ರಹ್ಮದೇವರು ಹೇಳಲು, ಅವರ ಮಾತನ್ನು ಕೇಳಿದ ಗಂಭೀರವಾದ ಮುಗುಳ್ನಗೆಯಿಂದ ಕೂಡಿರುವ ರಾಮಚಂದ್ರ ಮಾತನ್ನಾಡುತ್ತಾನೆ:
[^ಶತಾನನ್ದ: ಇದು ಬ್ರಹ್ಮದೇವರ ಅಸಾಧಾರಣವಾದ ನಾಮ. ಜೀವರಲ್ಲಿಯೇ ಪೂರ್ಣವಾದ ಆನಂದವನ್ನು ಹೊಂದಿರುವ ಚತುರ್ಮುಖ ‘ಶತಾನನ್ದ’]

ಜಗದ್ಗುರುತ್ವಮಾದಿಷ್ಟಂ ಮಯಾ ತೇ ಕಮಲೋದ್ಭವ
ಗುರ್ವಾದೇಶಾನುಸಾರೇಣ ಮಯಾssದಿಷ್ಟಾ ಚ ಸದ್ಗತಿಃ ೯.೧೦೪

ಅತಸ್ತ್ವಯಾ ಪ್ರದೇಯಾ ಹಿ ಲೋಕಾ ಏಷಾಂ ಮದಾಜ್ಞಯಾ
ಹೃದಿ ಸ್ಥಿತಂ ಚ ಜಾನಾಸಿ ತ್ವಮೇವೈಕಃ ಸದಾ ಮಮ ೯.೧೦೫

‘ಎಲೈ ಕಮಲೋದ್ಭವನೇ, ನಿನಗೆ ನಾನು ಜಗದ್ಗುರುತ್ವವನ್ನು ಕೊಟ್ಟಿದ್ದೇನೆ. ನಿನ್ನ ಗುರುವಾದ ನನ್ನಿಂದ ಇವರಿಗೆಲ್ಲರಿಗೂ ಕೂಡಾ ಸದ್ಗತಿಯು ಆಜ್ಞಾಪಿಸಲ್ಪಟ್ಟಿದೆ.
ಆದಕಾರಣ, ನನ್ನೊಂದಿಗೆ ಬಂದಿರುವ ಇವರೆಲ್ಲರೂ,  ನನ್ನ ಆಜ್ಞೆಯಂತೆ, ನಿನ್ನಿಂದ ಸದ್ಗತಿಯನ್ನು ಪಡೆಯಲು  ಅರ್ಹರು.  ನನ್ನ ಹೃದಯದೊಳಗೆ ಇರತಕ್ಕದ್ದನ್ನು ತಿಳಿದಿರುವವನು ನೀನೊಬ್ಬನೇ’.

ಇತೀರಿತೋ ಹರೇರ್ಭಾವವಿಜ್ಞಾನೀ ಕಞ್ಜಸಮ್ಭವಃ
ಪಿಪೀಲಿಕಾತೃಣಾನ್ತಾನಾಂ ದದೌ ಲೋಕಾನನುತ್ತಮಾನ್
ವೈಷ್ಣವಾನ್ ಸನ್ತತತ್ವಾಚ್ಚ ನಾಮ್ನಾ ಸಾನ್ತಾನಿಕಾನ್ ವಿಭುಃ ೯.೧೦೬

ತೇ ಜರಾಮೃತಿಹೀನಾಶ್ಚ ಸರ್ವದುಃಖವಿವರ್ಜ್ಜಿತಾಃ
ಸಂಸಾರಮುಕ್ತಾ ನ್ಯವಸಂಸ್ತತ್ರ ನಿತ್ಯಸುಖಾಧಿಕಾಃ ೯.೧೦೭

ಈರೀತಿಯಾಗಿ ಹೇಳಲ್ಪಟ್ಟ ಪರಮಾತ್ಮನ ಭಾವನ್ನು ತಿಳಿದ ಚತುರ್ಮುಖನು, ಎಲ್ಲಾ ಜೀವರಿಗೂ ಕೂಡಾ (ಹುಲ್ಲು, ಇರುವೆ, ಹೀಗೆ ಇತ್ಯಾದಿಯಲ್ಲಿದ್ದು, ರಾಮನನ್ನು ಹಿಂಬಾಲಿಸಿ ಬಂದಿದ್ದ ಎಲ್ಲಾ ಜೀವರಿಗೂ ಕೂಡಾ) ಉತ್ಕೃಷ್ಟವಾದ ಸಾನ್ತಾನಿಕ^ ಲೋಕವನ್ನು(ಮುಕ್ತ ಲೋಕವನ್ನು) ನೀಡಿದನು.
ಆ ಎಲ್ಲಾ ಜೀವರು ಸಂಸಾರ ಬಂಧದಿಂದ ಮುಕ್ತರಾಗಿ, ಉತ್ಕೃಷ್ಟವಾದ ಲೋಕದಲ್ಲಿ  ಮುಪ್ಪು ಇಲ್ಲದೇ, ಮರಣವಿಲ್ಲದೇ, ಸರ್ವದುಃಖದಿಂದಲೂ ಕೂಡಾ ರಹಿತರಾಗಿ, ಸಂಸಾರದಿಂದ ಮುಕ್ತರಾಗಿ, ನಿತ್ಯಸುಖದಿಂದ ಕೂಡಿದವರಾಗಿ  ಆವಾಸ ಮಾಡಿದರು.

[^ವಾಲ್ಮೀಕಿ ರಾಮಾಯಣದಲ್ಲಿ(ಉತ್ತರಕಾಂಡ ೧೧೦.೧೨) ಈ ಮಾತಿನ ಉಲ್ಲೇಖವಿದೆ: ಲೋಕಾನ್ ಸಾನ್ತಾನಿಕಾನ್ ನಾಮ ಯಾಸ್ಯನ್ತೀಮೇ  ಸಮಾಗತಾಃ  ಎಂದು ಅಲ್ಲಿ ವಾಲ್ಮೀಕಿ  ವರ್ಣಿಸಿದ್ದಾರೆ.  ಹಾಗಾಗಿ  ‘ವೈಷ್ಣವಾನ್ ಸನ್ತತತ್ವಾಚ್ಚ ನಾಮ್ನಾ ಸಾನ್ತಾನಿಕಾನ್ ವಿಭುಃ’ ಎನ್ನುವ ಆಚಾರ್ಯರ ಮಾತು, ವಾಲ್ಮೀಕಿ ರಾಮಾಯಣದಲ್ಲಿ ಹೇಳಿರುವ ‘ಸಾನ್ತಾನಿಕಾನ್’ ಎನ್ನುವ ಪದದ ವ್ಯಾಖ್ಯಾನ ರೂಪದಲ್ಲಿದೆ]

No comments:

Post a Comment