ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, September 10, 2018

Mahabharata Tatparya Nirnaya Kannada 10.28-10.32


ಇತಿ ಪ್ರಹಸ್ಯಾಭಿಹಿತಂ ನಿಶಮ್ಯ ಸ್ತ್ರೀಭಾವಮುಗ್ಧಾಸ್ತು ತಥೇತಿ ತೇsವದನ್
ತತಶ್ಚ ಸಂಸ್ಥಾಪ್ಯ ಪೃಥಕ್ ಸುರಾಸುರಾಂಸ್ತವಾತಿರೂಪೋಚ್ಚಲಿತಾನ್ ಸುರೇತರಾನ್ ೧೦.೨೮

ಸರ್ವಾನ್ ಭವದ್ದರ್ಶಿನ ಈಕ್ಷ್ಯ ಲಜ್ಜಿತಾsಸ್ಮ್ಯಹಂ ದೃಶೋ ಮೀಲಯತೇತ್ಯವೋಚಃ
ನಿಮೀಲಿತಾಕ್ಷೇಷ್ವಸುರೇಷು ದೇವತಾ ನ್ಯಪಾಯಯಃ ಸಾಧ್ವಮೃತಂ ತತಃ ಪುಮಾನ್ ೧೦.೨೯

ಈರೀತಿಯಾಗಿ ನೀನು ಮುಗುಳ್ನಗುತ್ತಾ ಹೇಳಿದ್ದನ್ನು ಕೇಳಿ, ನಿನ್ನಲ್ಲಿರುವ ಲಾವಣ್ಯದಿಂದ ಮುಗ್ಧರಾಗಿ, ‘ಹಾಗೆಯೇ ಆಗಲಿ’ ಎಂದೊಪ್ಪಿದರು ದೈತ್ಯರು.  ಆಗ ನೀನು ದೇವತೆಗಳು ಹಾಗು  ದೈತ್ಯರನ್ನು ಪ್ರತ್ಯೇಕವಾಗಿರಿಸಿದೆ. ನಿನ್ನ ರೂಪವನ್ನು ಕಾಮದ ಕಣ್ಣಿನಿಂದ ಕಾಣುತ್ತಿದ್ದ ದೈತ್ಯರನ್ನು ಕುರಿತು: ‘ನನ್ನನ್ನೇ ನೋಡುವ ನಿಮ್ಮಿಂದ ನನಗೆ ನಾಚಿಕೆಯಾಗುತ್ತಿದೆ. ನೀವು ನಿಮ್ಮ ಕಣ್ಗಳನ್ನು ಮುಚ್ಚಿ’ ಎಂದು ಹೇಳಿದೆ,  ಅಸುರರೆಲ್ಲಾ ಕಣ್ಮುಚ್ಚಿರಲು, ದೇವತೆಗಳಿಗೆ ಅಮೃತವನ್ನು ಕುಡಿಸಿದೆ.

ಕ್ಷಣೇನ ಭೂತ್ವಾ ಪಿಬತಃ ಸುಧಾಂ ಶಿರೋ ರಾಹೋರ್ನ್ನ್ಯಕೃನ್ತಶ್ಚ ಸುದರ್ಶನೇನ
ತೇನಾಮೃತಾರ್ತ್ಥಂ ಹಿ ಸಹಸ್ರಜನ್ಮಸು ಪ್ರತಪ್ಯ ಭೂಯಸ್ತಪ ಆರಿತೋ ವರಃ
ಸ್ವಯಮ್ಭುವಸ್ತೇನ ಭವಾನ್ ಕರೇsಸ್ಯ ಬಿನ್ದುಂ ಸುಧಾಂ ಪ್ರಾಸ್ಯ ಶಿರೋ ಜಹಾರ    ೧೦.೩೦

ಕ್ಷಣಮಾತ್ರದಲ್ಲಿ ಪುರುಷರೂಪದಿಂದ ಆವಿರ್ಭವಿಸಿ, ದೇವತೆಗಳ ಮಧ್ಯದಲ್ಲಿದ್ದು ಸುಧೆಯನ್ನು ಕುಡಿಯಲು ಬಯಸಿದ ರಾಹುವಿನ ಶಿರವನ್ನು ಸುದರ್ಶನದಿಂದ ಕತ್ತರಿಸಿದೆಯಷ್ಟೇ. (ಆದರೆ ಭಗವಂತ ಅಯೋಗ್ಯನಿಗೆ ಅಜ್ಞಾನದಿಂದ ಅಮೃತ ಕೊಟ್ಟಿರುವುದಲ್ಲ). ಆತ ಹಿಂದೆ ಅಮೃತಕ್ಕಾಗಿ ಸಾವಿರ ಜನ್ಮಗಳಲ್ಲಿ ಚನ್ನಾಗಿ ತಪಸ್ಸುಮಾಡಿ, ಸ್ವಯಂಭುವಿನಿಂದ(ಬ್ರಹ್ಮನಿಂದ) ವರವನ್ನು ಪಡೆದಿದ್ದ. ಬ್ರಹ್ಮನ ವರವನ್ನು ಗೌರವಿಸಿದ ನೀನು, ರಾಹುವಿನ ಕೈಯಲ್ಲಿ  ಸುಧಾ ಬಿಂದುವನ್ನು ಕೊಟ್ಟು, ತಲೆಯನ್ನು ಛೇದಿಸಿದೆ.

ಶಿರಸ್ತು ತಸ್ಯ ಗ್ರಹತಾಮವಾಪ ಸುರೈಃ ಸಮಾವಿಷ್ಟಮಥೋ ಸಬಾಹು
ಕ್ಷಿಪ್ತಃ ಕಬನ್ಧೋsಸ್ಯ ಶುಭೋದಸಾಗರೇ ತ್ವಯಾ ಸ್ಥಿತೋsದ್ಯಾಪಿ ಹಿ ತತ್ರ ಸಾಮೃತಃ       ೧೦.೩೧

ಆ ರಾಕ್ಷಸನ ಶಿರವು ದೇವತೆಗಳಿಂದ ಪ್ರವಿಷ್ಟವಾಗಿ ಗ್ರಹವಾಯಿತು.(ಆದ್ದರಿಂದ ರಾಹು ಎಂದರೆ ದೈತ್ಯ ಎಂದುಕೊಳ್ಳಬಾರದು. ಏಕೆಂದರೆ ರಾಹುವಿನ ತಲೆಯ ಒಳಗೆ ದೇವತೆಗಳ ಪ್ರವೇಶವಿರುವುದನ್ನು ನಾವು ತಿಳಿದಿರಬೇಕು). ಆತನ ದೇಹದ ಕೆಳಗಿನ ಭಾಗ  ನಿನ್ನಿಂದ ಶುಭೋದಸಾಗರಕ್ಕೆಸೆಯಲ್ಪಟ್ಟಿತು. ಅದು ಇಂದಿಗೂ ಕೂಡಾ  ಅಮೃತದಿಂದ ಕೂಡಿ  ಅಲ್ಲಿದೆ.

ಅಥಾಸುರಾಃ ಪ್ರತ್ಯಪತನ್ನುದಾಯುಧಾಃ ಸಮಸ್ತಶಸ್ತೇ ಚ ಹತಾಸ್ತ್ವಯಾ ರಣೇ
ಕಲಿಸ್ತು ಸ ಬ್ರಹ್ಮವರಾದಜೇಯೋ ಹ್ಯೃತೇ ಭವನ್ತಂ ಪುರುಷೇಷು ಸಂಸ್ಥಿತಃ ೧೦.೩೨


ತದನಂತರ  ದೈತ್ಯರೆಲ್ಲರು ತಮ್ಮ ಆಯುಧಗಳನ್ನು ಎತ್ತಿಕೊಂಡು ನಿನ್ನ ಎದುರಾಗಿ  ಬಂದರು.  ಹಾಗೆ ಬಂದ  ಅವರೆಲ್ಲರೂ ನಿನ್ನಿಂದ ಸಂಹರಿಸಲ್ಪಟ್ಟರು.  ಬ್ರಹ್ಮನ ವರದಿಂದ, ನಿನ್ನೊಬ್ಬನನ್ನು ಬಿಟ್ಟು ಇನ್ನೊಬ್ಬರಿಂದ ಗೆಲ್ಲಲಾಗದ ಕಲಿ, ನೀನು ಹಾಗು ಬ್ರಹ್ಮ-ವಾಯುವನ್ನು ಬಿಟ್ಟು  ಸಮಸ್ತ ಪುರುಷರಲ್ಲಿರುತ್ತಾನೆ. [ಇಲ್ಲಿ ಹೇಳಿದ 'ಬ್ರಹ್ಮ-ವಾಯುವನ್ನು ಬಿಟ್ಟು  ಇತರ ಸಮಸ್ತ ಪುರುಷರು'  ಎಂದರೆ: ಮನುಷ್ಯರು ಮತ್ತು ದೇವತೆಗಳು. ಸರ್ವಸಮರ್ಥನಾದ ಭಗವಂತನನ್ನು ಕಲಿ ಎದುರಿಸಲಾರ. ಅದೇ ರೀತಿ, ಚತುರ್ಮುಖನ ವರದಿಂದ ಅಜೇಯತ್ವವನ್ನು ಪಡೆದ ಕಲಿ,  ಚತುರ್ಮುಖನನ್ನು (ಮತ್ತು ಮುಖ್ಯಪ್ರಾಣನನ್ನು) ಎದುರಿಸಲು ಅಶಕ್ಯ. ಆದರೆ ಕಲಿಯ ಆವೇಶ ಮನುಷ್ಯರಲ್ಲಿ ಚನ್ನಾಗಿ ಇರುತ್ತದೆ. ದೇವತೆಗಳಲ್ಲೂ ಕೂಡಾ ಕೆಲವೊಮ್ಮೆ ಕಲ್ಯಾವೇಶದ  ಸಾಧ್ಯತೆಯನ್ನು ಇಲ್ಲಿ ಹೇಳಿದ್ದಾರೆ]      

Sunday, September 9, 2018

Mahabharata Tatparya Nirnaya Kannada 10.19-10.27


ಉಚ್ಚೈಶ್ರವಾ ನಾಮ ತುರಙ್ಗಮೋsಥ ಕರೀ ತಥೈರಾವತನಾಮಧೇಯಃ  
ಅನ್ಯೇ ಚ ದಿಕ್ಪಾಲಗಜಾ ಬಭೂವುರ್ವರಂ ತಥೈವಾಪ್ಸರಸಾಂ ಸಹಸ್ರಮ್ ೧೦.೧೯



ತದನಂತರ, ಆ ಕಡಲನ್ನು ಕಡೆಯುವಾಗ, ಉಚ್ಚೈಃಶ್ರವಾ ^ ಎನ್ನುವ ಕುದುರೆಯು ಹುಟ್ಟಿತು. ನಂತರ ಐರಾವತ ಎಂಬ ಹೆಸರಿನ ಆನೆಯೂ ಕೂಡಾ. ಅದೇ ರೀತಿ ದಿಕ್ಪಾಲಗಜಗಳು* ಹುಟ್ಟಿದವು. ಸಹಸ್ರ ಅಪ್ಸರೆಯರೂ** ಸಹ ಸಮುದ್ರ ಮಥನದಿಂದ ಹುಟ್ಟಿಬಂದರು.
[^ಉಚ್ಚೈಃಶ್ರವಾ ಎನ್ನುವುದು  ಮೂಲತಃ ಭಗವಂತನ ನಾಮಧೇಯ. ಶ್ರವಾ ಎಂದರೆ ಕೀರ್ತಿ. ಉಚ್ಚೈಶ್ರವಾ ಎಂದರೆ ಅತ್ಯಂತ ಉನ್ನತವಾದ ಕೀರ್ತಿ ಉಳ್ಳವ ಎಂದರ್ಥ.  ಈ ಕುದುರೆಯಲ್ಲೂ ಕೂಡಾ ಭಗವಂತನ ಸನ್ನಿಧಾನ ಹೆಚ್ಚಾಗಿದ್ದುದರಿಂದ ಅದಕ್ಕೂ ಉಚ್ಚೈಶ್ರವಾ ಎನ್ನುವ ಹೆಸರು ಬಂತು. *ದಿಕ್ಪಾಲಗಜಗಳು  ಅಥವಾ ದಿಗ್ಗಜಗಳು ಎಂದರೆ ಎಂಟು ದಿಕ್ಕಿನಲ್ಲಿ ನಿಂತಿರುವ, ಎಂಟು ದಿಕ್ಕಿನಿಂದ ಈ ಭೂಮಿಯನ್ನು ಹೊತ್ತಿರುವ ಆನೆಗಳು.  **ಅಪ್ಸರೆ ಎಂದರೆ  ಅದ್ಭ್ಯಃ ಯೇ ಸರಂತಿ. ಅಂದರೆ  ನೀರಿನಿಂದ ಹುಟ್ಟಿ ಬಂದವರು ಎಂದರ್ಥ ]

ತಥಾsಯುಧಾನ್ಯಾಭರಣಾನಿ ಚೈವ ದಿವೌಕಸಾಂ ಪರಿಜಾತಸ್ತರುಶ್ಚ
ತಥೈವ ಸಾಕ್ಷಾತ್ ಸುರಭಿರ್ನ್ನಿಶೇಶೋ ಬಭೂವ ತತ್ ಕೌಸ್ತುಭಂ ಲೋಕಸಾರಮ್      ೧೦. ೨೦

ಹಾಗೆಯೇ, ದೇವತೆಗಳ ಆಯುಧಗಳು, ಆಭರಣಗಳು, ಪಾರಿಜಾತ ವೃಕ್ಷವೂ ಕೂಡಾ ಕಡಲಿನಿಂದ ಹುಟ್ಟಿ ಬಂದಿತು.  ಸಾಕ್ಷಾತ್ ಗೋಮಾತೆಯಾದ ಸುರಭಿಯೂ, ಚಂದ್ರನೂ ಹುಟ್ಟಿದರು. ಲೋಕದ ಸೌಂದರ್ಯದ ಸಾರವೆನಿಸಿರುವ ಕೌಸ್ತುಭವೂ ಹುಟ್ಟಿತು.

ಅಥೇನ್ದಿರಾ ಯದ್ಯಪಿ ನಿತ್ಯದೇಹಾ ಬಭೂವ ತತ್ರಾಪರಯಾ ಸ್ವತನ್ವಾ
ತತೋ ಭವಾನ್ ದಕ್ಷಿಣಬಾಹುನಾ ಸುಧಾಕಮಣ್ಡಲುಂ ಕಲಶಂ ಚಾಪರೇಣ ೧೦.೨೧

ಪ್ರಗೃಹ್ಯ ತಸ್ಮಾನ್ನಿರಗಾತ್ ಸಮುದ್ರಾದ್ ಧನ್ವನ್ತರಿರ್ನ್ನಾಮ ಹರಿನ್ಮಣಿದ್ಯುತಿಃ
ತತೋ ಭವದ್ಧಸ್ತಗತಂ ದಿತೇಃಸುತಾಃ ಸುಧಾಭರಂ ಕಲಶಂ ಚಾಪಜಹ್ರುಃ ೧೦.೨೨

ನಿತ್ಯವಾದ ಶರೀರವುಳ್ಳ ಲಕ್ಷ್ಮೀ ದೇವಿಯು ತನ್ನ ಇನ್ನೊಂದು ಸ್ವರೂಪದಿಂದ ಆವಿರ್ಭವಿಸಿದಳು. ಲಕ್ಷ್ಮೀದೇವಿ ಬಂದಮೇಲೆ ನೀನು ಒಂದು ಕೈಯಲ್ಲಿ ಸುಧಾ ಕಮಂಡಲುವನ್ನೂ , ಇನ್ನೊಂದು ಕೈಯಲ್ಲಿ ಕಲಶವನ್ನೂ ಹಿಡಿದು, ಆ ಸಮುದ್ರದಿಂದ ನೀಲಿ ಮಣಿಯ ಕಾಂತಿಯುಳ್ಳ ಧನ್ವಂತರಿ ಎನ್ನುವ ಹೆಸರನ್ನು ಹೊತ್ತು ಬಂದೆ. ಆಗ ನಿನ್ನ ಕೈಯಲ್ಲಿದ್ದ, ಅಮೃತದಿಂದ ತುಂಬಿರುವ ಕಲಶವನ್ನು ದಿತಿಯ ಮಕ್ಕಳು ಅಪಹರಿಸಿದರು. 

ಮುಕ್ತಂ ತ್ವಯಾ ಶಕ್ತಿಮತಾsಪಿ ದೈತ್ಯಾನ್ ಸತ್ಯಚ್ಯುತಾನ್ ಕಾರಯತಾ ವಧಾಯ
ತತೋ ಭವಾನನುಪಮಮುತ್ತಮಂ ವಪುರ್ಬಭೂವ ದಿವ್ಯಪ್ರಮದಾತ್ಮಕಂ ತ್ವರನ್ ೧೦.೨೩

ಶ್ಯಾಮಂ ನಿತಮ್ಬಾರ್ಪ್ಪಿತರತ್ನಮೇಖಲಂ ಜಾಮ್ಬೂನದಾಭಾಮ್ಬರಭೃತ್ ಸುಮದ್ಧ್ಯಮಮ್
ಬೃಹನ್ನಿತಮ್ಬಂ ಕಲಶೋಪಮಸ್ತನಂ ಸತ್ಪುಣ್ಡರೀಕಾಯತನೇತ್ರಮುಜ್ಜ್ವಲಮ್ ೧೦.೨೪

ಸಮಸ್ತಸಾರಂ ಪರಿಪೂರ್ಣ್ಣಸದ್ಗುಣಂ ದೃಷ್ಟ್ವೈವ ತತ್ ಸಮ್ಮುಮುಹುಃ ಸುರಾರಯಃ
ಪರಸ್ಪರಂ ತೇsಮೃತಹೇತುತೋsಖಿಲಾ ವಿರುದ್ಧ್ಯಮಾನಾಃ ಪ್ರದದುಃ ಸ್ಮ ತೇ ಕರೇ ೧೦.೨೫

ಶಕ್ತಿ ಉಳ್ಳವನಾದರೂ, ದೈತ್ಯರು ಸತ್ಯದಿಂದ ಚ್ಯುತರಾಗಿರುವುದನ್ನು ತೋರಿಸಿ ಅವರನ್ನು ಸಂಹಾರ ಮಾಡುವ  ಕಾರಣಕ್ಕಾಗಿ ನೀನು ತಕ್ಷಣ ಎಣೆಯಿರದ ಉತ್ಕೃಷ್ಟವಾದ ಅಲೌಕಿಕವಾದ ಸ್ತ್ರೀ ದೇಹವನ್ನು ಧರಿಸಿದೆ.
ನೀಲವರ್ಣವುಳ್ಳ,  ಕಟಿಪ್ರದೇಶದಲ್ಲಿ ದಿವ್ಯವಾದ ರತ್ನದ ಉಡಿದಾರವನ್ನು ತೊಟ್ಟ, ಸುವರ್ಣದ ಕಾಂತಿಯಂತೆ ಕಾಂತಿಯುಳ್ಳ ಪೀತಾಂಬರವನ್ನು ಧರಿಸಿರುವ, ಸಮೀಚೀನವಾದ ಮಧ್ಯಭಾಗವುಳ್ಳ,  ಹೆಣ್ಣು ಮಕ್ಕಳಿಗೆ ಶೋಭಿಸುವ ನಿತಂಬವುಳ್ಳ, ಕಲಶಸದೃಶವಾದ ಕುಚಗಳುಳ್ಳ, ಕಮಲದಳದಂತೆ ಆಯತವಾದ ಬೊಗಸೆ ಕಣ್ಗಳುಳ್ಳ, ಉತ್ಕೃಷ್ಟವಾದ, ಸೌಂದರ್ಯದ ಸಾರವೆನಿಸಿರುವ, ಗುಣಗಳಿಂದ ತುಂಬಿರುವ ಆ ರೂಪವನ್ನು ನೋಡಿಯೇ ದೈತ್ಯರು ಮೋಹಗೊಂಡರು. ಅವರು ಅಮೃತಕ್ಕಾಗಿ ತಮ್ಮ-ತಮ್ಮಲ್ಲೇ ಜಗಳವಾಡ ತೊಡಗಿದರು.    

ಸಮಂ ಸುಧಾಯಾಃ ಕಲಶಂ ವಿಭಜ್ಯ ನಿಪಾಯಯಾಸ್ಮಾನಿತಿ ವಞ್ಚಿತಾಸ್ತ್ವಯಾ
ಧರ್ಮ್ಮಚ್ಛಲಂ ಪಾಪಜನೇಷು ಧರ್ಮ್ಮ ಇತಿ ತ್ವಯಾ ಜ್ಞಾಪಯಿತುಂ ತದೋಕ್ತಮ್    ೧೦.೨೬

ಯದ್ಯತ್ ಕೃತಂ ಮೇ ಭವತಾಂ ಯದೀಹ ಸಂವಾದ ಏವೋದ್ವಿಭಜೇ ಸುಧಾಮಿಮಾಮ್
ಯಥೇಷ್ಟತೋsಹಂ ವಿಭಜಾಮಿ ಸರ್ವಥಾ ನ ವಿಶ್ವಸಧ್ವಂ ಮಯಿ ಕೇನಚಿತ್ ಕ್ವಚಿತ್ ೧೦.೨೭

ಹೀಗೆ ನಿನ್ನಿಂದ ಮೊಸಗೊಳಿಸಲ್ಪಟ್ಟವರಾಗಿ, ಸುಧೆಯ ಕಲಶವನ್ನು ಸರಿಯಾಗಿ ವಿಭಾಗಿಸಿ ನಮಗೆ ಕುಡಿಸು ಎಂದು ಹೇಳಿ,  ಕಲಶವನ್ನು ನಿನ್ನ ಕೈಗೇ ಕೊಟ್ಟರು.  ‘ಧರ್ಮ ರಕ್ಷಣೆಗಾಗಿ ಪಾಪಿಷ್ಟರಲ್ಲಿ ಒಪ್ಪಂದವನ್ನು ಮೀರುವುದು ಧರ್ಮವೇ ಆಗಿದೆ’ ಎಂದು ನಿನ್ನಿಂದ ಸಜ್ಜನರಿಗೆ ಹೇಳಲ್ಪಟ್ಟಿತು.
ಅಮೃತ ವಿಭಾಗ ವಿಚಾರದಲ್ಲಿ  ನನ್ನಿಂದ ಯಾವಯಾವ ವ್ಯಾಪಾರ ಮಾಡಲ್ಪಡುತ್ತದೋ, ಆ ವಿಚಾರದಲ್ಲಿ ನಿಮ್ಮೆಲ್ಲರ ಒಪ್ಪಿಗೆ ಇದ್ದರೆ, ನಾನು ಈ ಅಮೃತವನ್ನು ವಿಭಾಗ ಮಾಡುತ್ತೇನೆ. ನಾನು ನನ್ನ ಇಷ್ಟದಂತೆ ವಿಭಾಗ ಮಾಡುತ್ತೇನೆ.  ನನ್ನಲ್ಲಿ ಯಾವರೀತಿಯಲ್ಲೂ ವಿಶ್ವಾಸ ಇಡಬೇಡಿ ಎನ್ನುವ ಮೋಹಕ ಮಾತು ನಿನ್ನಿಂದ ದೈತ್ಯರಿಗೆ ಹೇಳಲ್ಪಟ್ಟಿತು.

Saturday, September 8, 2018

Mahabharata Tatparya Nirnaya Kannada 10.13-10.18


ಶ್ರಾನ್ತೇಷು ತೇಷ್ವೇಕ ಉರುಕ್ರಮ ತ್ವಂ ಸುಧಾರಸಾಪ್ತ್ಯೈ ಮುದಿತೋ ಹ್ಯಮತ್ಥ್ನಾಃ 
ತದಾ ಜಗದ್ಗ್ರಾಸಿ ವಿಷಂ ಸಮುತ್ಥಿತಂ ತ್ವದಾಜ್ಞಯಾ ವಾಯುರಧಾತ್ ಕರೇ ನಿಜೇ೧೦.೧೩

ಆ ಎಲ್ಲಾ ದೇವ-ದೈತ್ಯರು ಬಳಲುವಿಕೆಯನ್ನು ಹೊಂದಲು, ಓ ತ್ರಿವಿಕ್ರಮನೇ, ಅಮೃತ ಬರಲೆಂದು ನೀನೇ ಸಂತೋಷದಿಂದ ಕಡಲನ್ನು ಕಡೆದೆಯಷ್ಟೇ.  ಆಗ ಆ ಕಡಲಿನಿಂದ ಎದ್ದು ಬಂದ, ಜಗತ್ತನ್ನೇ ನುಂಗುವಂತಹ ವಿಷವನ್ನು, ನಿನ್ನ ಅಣತಿಯಂತೆ ಮುಖ್ಯಪ್ರಾಣನು ತನ್ನ ಕೈಯಲ್ಲಿ ಹಿಡಿದನಷ್ಟೇ.

ಕಲೇಃ ಸ್ವರೂಪಂ ತದತೀವ ದುಷ್ಷಹಂ ವರಾದ್ ವಿಧಾತುಃ ಸಕಲೈಶ್ಚ ದುಃಸ್ಪೃಶಮ್
ಕರೇ ವಿಮತ್ಥ್ಯಾಸ್ತಬಲಂ ವಿಧಾಯ ದದೌ ಸ ಕಿಞ್ಚಿದ್ ಗಿರಿಶಾಯ ವಾಯುಃ ೧೦.೧೪

ಕಲಿಯ ಸ್ವರೂಪವಾಗಿರುವ, ಬ್ರಹ್ಮದೇವರ ವರದಿಂದ  ಯಾರಿಂದಲೂ ಸಹಿಸಲಶಕ್ಯವಾದ, ಬೇರೆ ಯಾರಿಗೂ ಕೂಡಾ ಮುಟ್ಟಲಿಕ್ಕೂ ಅಸಾಧ್ಯವಾದ ಈ ವಿಷವನ್ನು ಕೈಯಲ್ಲಿ ಹಿಡಿದು, ಚನ್ನಾಗಿ ತಿಕ್ಕಿ, ಬಲಹೀನವಾದದ್ದನ್ನಾಗಿ ಮಾಡಿದ ಮುಖ್ಯಪ್ರಾಣನು, ಅದರ  ಕಿಂಚಿತ್ ಭಾಗವನ್ನು ರುದ್ರನಿಗೋಸ್ಕರ ಕೊಟ್ಟ.

ಸ ತತ್ ಪಿಬತ್ ಕಣ್ಠಗತೇನ ತೇನ ನಿಪಾತಿತೋ ಮೂರ್ಚ್ಛಿತ ಆಶು ರುದ್ರಃ
ಹರೇಃ ಕರಸ್ಪರ್ಶಬಲಾತ್ ಸ ಸಂಜ್ಞಾಮವಾಪ ನೀಲೋsಸ್ಯ ಗಳಸ್ತದಾsಸೀತ್ ೧೦.೧೫

ಆ ವಿಷವನ್ನು ಪಾನಮಾಡಿದ ರುದ್ರನು, ಕಂಠದಲ್ಲಿರತಕ್ಕ ವಿಷದಿಂದ ಮೂರ್ಛಿತನಾದನು. (ಅಲ್ಪವಾದ್ದರಿಂದ ಅದು ಕಂಠದಲ್ಲಿ ಸಂಬಂಧವಾಗಿ ಅಲ್ಲೇ ಉಳಿಯಿತು. ಉದರವನ್ನು ಸೇರಲಿಲ್ಲ. ಈ ರೀತಿ ಕಣ್ಠಗತವಾಗಿರುವ ವಿಷದಿಂದ ಶಿವ ಮೂರ್ಛಹೊಂದಿದನು)  ತದನಂತರ ಪರಮಾತ್ಮನ ಕೈಸ್ಪರ್ಶದಿಂದ  ಸಂಜ್ಞೆಯನ್ನು ಹೊಂದಿದನು. ಇದರಿಂದಾಗಿ ಶಿವನ ಕಂಠ ಕಡುನೀಲಿಯಾಯಿತು.

[ಇಲ್ಲಿ ಸರ್ವೇ ಸಾಮಾನ್ಯವಾಗಿ ಎಲ್ಲರಿಗೂ ಒಂದು ಪ್ರಶ್ನೆ ಬರುತ್ತದೆ. ‘ಶಿವ ವಿಷವನ್ನು ಕುಡಿದ’ ಎಂದು ಭಾಗವತದಲ್ಲಿ ಕೂಡಾ ಹೇಳಲಾಗಿದೆ. ಆದರೆ ಇಲ್ಲಿ ಮೊದಲು ಮುಖ್ಯಪ್ರಾಣ ಸ್ವೀಕರಿಸಿದ ಎನ್ನಲಾಗಿದೆ. ಇದಕ್ಕೆ ಪ್ರಮಾಣ ಯಾವುದು ? ಈ ಪ್ರಶ್ನೆಗೆ ಉತ್ತರ ಮಹಾಭಾರತದ ಶಾಂತಿಪರ್ವದಲ್ಲಿನ(೩೫೧.೨೭)  ಈ ಗದ್ಯ: ಅಮೃತೋತ್ಪಾದನೋ ಪುನರ್ಭಕ್ಷಣೇನ ವಾಯುಸಮೀಕೃತಸ್ಯ ವಿಷಸ್ಯ’.  ಅಮೃತೋತ್ಪಾದನೆಯಾಗುವ ಸಂದರ್ಭದಲ್ಲಿ  ಮುಖ್ಯಪ್ರಾಣ ತಿಕ್ಕಿಕೊಟ್ಟ ವಿಷವನ್ನು ಶಿವ ಕುಡಿದ ಎಂದು ಅಲ್ಲಿ ಹೇಳಲಾಗಿದೆ.  ನೀಲಕಣ್ಠತ್ವಮುಪಗತಃ(೨೬)  ಎಂದೂ ಅಲ್ಲಿ ಹೇಳಿದ್ದಾರೆ. ಈ ರೀತಿಯಾಗಿ ಸಂಕ್ಷಿಪ್ತವಾಗಿ  ಮಹಾಭಾರತದಲ್ಲಿ ಹೇಳಿರುವುದನ್ನೇ ಇಲ್ಲಿ ಆಚಾರ್ಯರು ನಿರ್ಣಯ ರೂಪದಲ್ಲಿ ನೀಡಿದ್ದಾರೆ]

ಅಥ ತ್ವದಾಜ್ಞಾಂ ಪುರತೋ ನಿಧಾಯ ನಿಧಾಯ ಪಾತ್ರೇ ತಪನೀಯರೂಪೇ
ಸ್ವಯಂ ಚ ನಿರ್ಮ್ಮತ್ಥ್ಯ ಬಲೋಪಪನ್ನಂ ಪಪೌ ಸ ವಾಯುಸ್ತದು ಚಾಸ್ಯ ಜೀರ್ಣ್ಣಮ್         ೧೦.೧೬

ತದನಂತರ, ನಿನ್ನ ಆಜ್ಞೆಯನ್ನು ಮುಂದಿರಿಸಿಕೊಂಡು(ನಿನ್ನ ಅಣತಿಯಂತೆ), ಬಂಗಾರದಮಯವಾದ ಪಾತ್ರೆಯಲ್ಲಿ ವಿಷವನ್ನು ಇಟ್ಟ ಮುಖ್ಯಪ್ರಾಣನು,  ಮರ್ದನ ಮಾಡದೇ ಇರುವ ಆ ವಿಷವನ್ನು ಕುಡಿದ. ಆ ವಿಷವೂ ಕೂಡಾ ಅವನಿಗೆ ಜೀರ್ಣವಾಯಿತು.

ಅತ್ಯಲ್ಪಪಾನಾಚ್ಚ ಬಭೂವ ಶೂಲಾ ಶಿವಸ್ಯ ಶೀರ್ಷ್ಣಶ್ಚ ಕರಾವಶಿಷ್ಟಮ್
ಅಭೂತ್ ಕಲಿಃ ಸರ್ವಜಗತ್ಸು ಪೂರ್ಣ್ಣಂ ಪೀತ್ವಾ ವಿಕಾರೋ ನ ಬಭೂವ ವಾಯೋಃ ೧೦.೧೭

ಹೀಗೆ ಮುಖ್ಯಪ್ರಾಣ ವಿಷವನ್ನು ಕುಡಿದು ಜೀರ್ಣಿಸಿಕೊಂಡ. ಸಂಪೂರ್ಣವಾಗಿ ಕುಡಿದೂ ಕೂಡಾ ಅವನಿಗೆ ಯಾವುದೇ ವಿಕಾರ ಆಗಲಿಲ್ಲ.  ಆದರೆ ಸ್ವಲ್ಪವೇ ಪಾನ ಮಾಡಿದ್ದರಿಂದ ಅದು ಶಿವನ ತಲೆನೋವಿಗೆ ಕಾರಣವಾಯಿತು. ಅಷ್ಟೇ ಅಲ್ಲಾ, ಆತನ ಕೈಯಲ್ಲಿ ಉಳಿದಿದ್ದ  ಅತ್ಯಲ್ಪ ಪ್ರಮಾಣದ ವಿಷ ಜಗತ್ತಿನಾದ್ಯಂತ  ಹರಡಿತು. ಆ ರೀತಿ ಹರಡಿದ ವಿಷದಲ್ಲಿ ಕಲಿ ಅಭಿಮಾನಿಯಾಗಿ ಎಲ್ಲೆಡೆ ತುಂಬಿದ. (ಹಾಗಾಗಿ ಇಂದು ನಾವು ಕಾಣುವ ಕಾರ್ಖಾನೆಯ ಮಾಲಿನ್ಯಭರಿತ ವಿಷವಾಗಲೀ, ಜಿಲೆಟಿನ್ ವಿಷವಾಗಲೀ, ಈ ರೀತಿ  ಯಾವುದೇ ವಿಷವಿದ್ದರೂ ಕೂಡಾ,  ಅವೆಲ್ಲವೂ ಈ ಕಾಲಕೂಟದ ಮರಿಗಳು. ಅದಕ್ಕೆ ‘ಕಲಿ’ ಅಭಿಮಾನಿ).   

ಕಲೇಃ ಶರೀರಾದಭವನ್ ಕುನಾಗಾಃ ಸವೃಶ್ಚಿಕಾಃ ಶ್ವಾಪದಯಾತುಧಾನಾಃ
ಅಥ ತ್ವಯಾsಬ್ಧೌ ತು ವಿಮತ್ಥ್ಯಮಾನೇ ಸುರಾsಭವತ್ ತಾಮಸುರಾ ಅವಾಪುಃ       ೧೦.೧೮

ಕಲಿ ಸ್ವರೂಪವಾದ ಅಥವಾ ಕಲ್ಯಭಿಮಾನ್ಯಮಾನವಾದ ಆ ವಿಷದಿಂದ  ಚೇಳು, ಮೊದಲಾದ ಕೆಟ್ಟ ಹಿಂಸ್ರ ಪ್ರಾಣಿಗಳು, ವಿಷದ ಹಾವುಗಳು, ಮೊದಲಾದವುಗಳು ಹುಟ್ಟಿದವು.
ತದನಂತರ, ನಿನ್ನಿಂದ ಕಡಲು ಚನ್ನಾಗಿ ಕಡೆಯಲ್ಪಡಲು, ಮದ್ಯವು ಹುಟ್ಟಿತು. ಅದನ್ನು ಅಸುರರು ತಮ್ಮದನ್ನಾಗಿಸಿಕೊಂಡರು. (ಹೀಗಾಗಿ ಮದ್ಯ ಆಸುರೀ ಚಟುವಟಿಕೆಗೆ ಕಾರಣವಾಗಿ ಜಗತ್ತಿನಲ್ಲಿದೆ ).