ಉಚ್ಚೈಶ್ರವಾ ನಾಮ ತುರಙ್ಗಮೋsಥ ಕರೀ ತಥೈರಾವತನಾಮಧೇಯಃ ।
ಅನ್ಯೇ ಚ ದಿಕ್ಪಾಲಗಜಾ ಬಭೂವುರ್ವರಂ ತಥೈವಾಪ್ಸರಸಾಂ ಸಹಸ್ರಮ್ ॥೧೦.೧೯॥
ತದನಂತರ, ಆ ಕಡಲನ್ನು ಕಡೆಯುವಾಗ, ಉಚ್ಚೈಃಶ್ರವಾ
^ ಎನ್ನುವ ಕುದುರೆಯು ಹುಟ್ಟಿತು. ನಂತರ ಐರಾವತ ಎಂಬ ಹೆಸರಿನ ಆನೆಯೂ ಕೂಡಾ. ಅದೇ ರೀತಿ ದಿಕ್ಪಾಲಗಜಗಳು*
ಹುಟ್ಟಿದವು. ಸಹಸ್ರ ಅಪ್ಸರೆಯರೂ** ಸಹ ಸಮುದ್ರ ಮಥನದಿಂದ ಹುಟ್ಟಿಬಂದರು.
[^ಉಚ್ಚೈಃಶ್ರವಾ ಎನ್ನುವುದು ಮೂಲತಃ ಭಗವಂತನ ನಾಮಧೇಯ. ಶ್ರವಾ ಎಂದರೆ ಕೀರ್ತಿ. ಉಚ್ಚೈಶ್ರವಾ
ಎಂದರೆ ಅತ್ಯಂತ ಉನ್ನತವಾದ ಕೀರ್ತಿ ಉಳ್ಳವ ಎಂದರ್ಥ.
ಈ ಕುದುರೆಯಲ್ಲೂ ಕೂಡಾ ಭಗವಂತನ ಸನ್ನಿಧಾನ ಹೆಚ್ಚಾಗಿದ್ದುದರಿಂದ ಅದಕ್ಕೂ ಉಚ್ಚೈಶ್ರವಾ
ಎನ್ನುವ ಹೆಸರು ಬಂತು. *ದಿಕ್ಪಾಲಗಜಗಳು ಅಥವಾ
ದಿಗ್ಗಜಗಳು ಎಂದರೆ ಎಂಟು ದಿಕ್ಕಿನಲ್ಲಿ ನಿಂತಿರುವ, ಎಂಟು ದಿಕ್ಕಿನಿಂದ ಈ ಭೂಮಿಯನ್ನು
ಹೊತ್ತಿರುವ ಆನೆಗಳು. **ಅಪ್ಸರೆ ಎಂದರೆ ಅದ್ಭ್ಯಃ ಯೇ ಸರಂತಿ. ಅಂದರೆ ನೀರಿನಿಂದ ಹುಟ್ಟಿ ಬಂದವರು ಎಂದರ್ಥ ]
ತಥಾsಯುಧಾನ್ಯಾಭರಣಾನಿ ಚೈವ ದಿವೌಕಸಾಂ ಪರಿಜಾತಸ್ತರುಶ್ಚ
।
ತಥೈವ ಸಾಕ್ಷಾತ್ ಸುರಭಿರ್ನ್ನಿಶೇಶೋ ಬಭೂವ ತತ್ ಕೌಸ್ತುಭಂ ಲೋಕಸಾರಮ್ ॥೧೦. ೨೦ ॥
ಹಾಗೆಯೇ, ದೇವತೆಗಳ ಆಯುಧಗಳು,
ಆಭರಣಗಳು, ಪಾರಿಜಾತ ವೃಕ್ಷವೂ ಕೂಡಾ ಕಡಲಿನಿಂದ ಹುಟ್ಟಿ ಬಂದಿತು. ಸಾಕ್ಷಾತ್ ಗೋಮಾತೆಯಾದ ಸುರಭಿಯೂ, ಚಂದ್ರನೂ
ಹುಟ್ಟಿದರು. ಲೋಕದ ಸೌಂದರ್ಯದ ಸಾರವೆನಿಸಿರುವ ಕೌಸ್ತುಭವೂ ಹುಟ್ಟಿತು.
ಅಥೇನ್ದಿರಾ ಯದ್ಯಪಿ ನಿತ್ಯದೇಹಾ ಬಭೂವ ತತ್ರಾಪರಯಾ ಸ್ವತನ್ವಾ ।
ತತೋ ಭವಾನ್ ದಕ್ಷಿಣಬಾಹುನಾ ಸುಧಾಕಮಣ್ಡಲುಂ ಕಲಶಂ ಚಾಪರೇಣ ॥೧೦.೨೧॥
ಪ್ರಗೃಹ್ಯ ತಸ್ಮಾನ್ನಿರಗಾತ್ ಸಮುದ್ರಾದ್ ಧನ್ವನ್ತರಿರ್ನ್ನಾಮ
ಹರಿನ್ಮಣಿದ್ಯುತಿಃ ।
ತತೋ ಭವದ್ಧಸ್ತಗತಂ ದಿತೇಃಸುತಾಃ ಸುಧಾಭರಂ ಕಲಶಂ ಚಾಪಜಹ್ರುಃ ॥೧೦.೨೨
॥
ನಿತ್ಯವಾದ ಶರೀರವುಳ್ಳ ಲಕ್ಷ್ಮೀ
ದೇವಿಯು ತನ್ನ ಇನ್ನೊಂದು ಸ್ವರೂಪದಿಂದ ಆವಿರ್ಭವಿಸಿದಳು. ಲಕ್ಷ್ಮೀದೇವಿ ಬಂದಮೇಲೆ ನೀನು ಒಂದು
ಕೈಯಲ್ಲಿ ಸುಧಾ ಕಮಂಡಲುವನ್ನೂ , ಇನ್ನೊಂದು ಕೈಯಲ್ಲಿ ಕಲಶವನ್ನೂ ಹಿಡಿದು, ಆ ಸಮುದ್ರದಿಂದ ನೀಲಿ
ಮಣಿಯ ಕಾಂತಿಯುಳ್ಳ ಧನ್ವಂತರಿ ಎನ್ನುವ ಹೆಸರನ್ನು ಹೊತ್ತು ಬಂದೆ. ಆಗ ನಿನ್ನ ಕೈಯಲ್ಲಿದ್ದ,
ಅಮೃತದಿಂದ ತುಂಬಿರುವ ಕಲಶವನ್ನು ದಿತಿಯ ಮಕ್ಕಳು ಅಪಹರಿಸಿದರು.
ಮುಕ್ತಂ ತ್ವಯಾ ಶಕ್ತಿಮತಾsಪಿ ದೈತ್ಯಾನ್ ಸತ್ಯಚ್ಯುತಾನ್
ಕಾರಯತಾ ವಧಾಯ ।
ತತೋ ಭವಾನನುಪಮಮುತ್ತಮಂ ವಪುರ್ಬಭೂವ ದಿವ್ಯಪ್ರಮದಾತ್ಮಕಂ ತ್ವರನ್ ॥೧೦.೨೩
॥
ಶ್ಯಾಮಂ ನಿತಮ್ಬಾರ್ಪ್ಪಿತರತ್ನಮೇಖಲಂ ಜಾಮ್ಬೂನದಾಭಾಮ್ಬರಭೃತ್ ಸುಮದ್ಧ್ಯಮಮ್
।
ಬೃಹನ್ನಿತಮ್ಬಂ ಕಲಶೋಪಮಸ್ತನಂ ಸತ್ಪುಣ್ಡರೀಕಾಯತನೇತ್ರಮುಜ್ಜ್ವಲಮ್ ॥೧೦.೨೪
॥
ಸಮಸ್ತಸಾರಂ ಪರಿಪೂರ್ಣ್ಣಸದ್ಗುಣಂ ದೃಷ್ಟ್ವೈವ ತತ್ ಸಮ್ಮುಮುಹುಃ
ಸುರಾರಯಃ ।
ಪರಸ್ಪರಂ ತೇsಮೃತಹೇತುತೋsಖಿಲಾ ವಿರುದ್ಧ್ಯಮಾನಾಃ ಪ್ರದದುಃ
ಸ್ಮ ತೇ ಕರೇ ॥ ೧೦.೨೫ ॥
ಶಕ್ತಿ ಉಳ್ಳವನಾದರೂ, ದೈತ್ಯರು ಸತ್ಯದಿಂದ
ಚ್ಯುತರಾಗಿರುವುದನ್ನು ತೋರಿಸಿ ಅವರನ್ನು ಸಂಹಾರ ಮಾಡುವ ಕಾರಣಕ್ಕಾಗಿ ನೀನು ತಕ್ಷಣ ಎಣೆಯಿರದ ಉತ್ಕೃಷ್ಟವಾದ
ಅಲೌಕಿಕವಾದ ಸ್ತ್ರೀ ದೇಹವನ್ನು ಧರಿಸಿದೆ.
ನೀಲವರ್ಣವುಳ್ಳ, ಕಟಿಪ್ರದೇಶದಲ್ಲಿ ದಿವ್ಯವಾದ ರತ್ನದ ಉಡಿದಾರವನ್ನು
ತೊಟ್ಟ, ಸುವರ್ಣದ ಕಾಂತಿಯಂತೆ ಕಾಂತಿಯುಳ್ಳ ಪೀತಾಂಬರವನ್ನು ಧರಿಸಿರುವ, ಸಮೀಚೀನವಾದ ಮಧ್ಯಭಾಗವುಳ್ಳ,
ಹೆಣ್ಣು ಮಕ್ಕಳಿಗೆ ಶೋಭಿಸುವ ನಿತಂಬವುಳ್ಳ, ಕಲಶಸದೃಶವಾದ
ಕುಚಗಳುಳ್ಳ, ಕಮಲದಳದಂತೆ ಆಯತವಾದ ಬೊಗಸೆ ಕಣ್ಗಳುಳ್ಳ, ಉತ್ಕೃಷ್ಟವಾದ, ಸೌಂದರ್ಯದ
ಸಾರವೆನಿಸಿರುವ, ಗುಣಗಳಿಂದ ತುಂಬಿರುವ ಆ ರೂಪವನ್ನು ನೋಡಿಯೇ ದೈತ್ಯರು ಮೋಹಗೊಂಡರು. ಅವರು
ಅಮೃತಕ್ಕಾಗಿ ತಮ್ಮ-ತಮ್ಮಲ್ಲೇ ಜಗಳವಾಡ ತೊಡಗಿದರು.
ಸಮಂ ಸುಧಾಯಾಃ ಕಲಶಂ ವಿಭಜ್ಯ ನಿಪಾಯಯಾಸ್ಮಾನಿತಿ ವಞ್ಚಿತಾಸ್ತ್ವಯಾ।
ಧರ್ಮ್ಮಚ್ಛಲಂ ಪಾಪಜನೇಷು ಧರ್ಮ್ಮ ಇತಿ ತ್ವಯಾ ಜ್ಞಾಪಯಿತುಂ ತದೋಕ್ತಮ್ ॥೧೦.೨೬ ॥
ಯದ್ಯತ್ ಕೃತಂ ಮೇ ಭವತಾಂ ಯದೀಹ ಸಂವಾದ ಏವೋದ್ವಿಭಜೇ ಸುಧಾಮಿಮಾಮ್ ।
ಯಥೇಷ್ಟತೋsಹಂ ವಿಭಜಾಮಿ ಸರ್ವಥಾ ನ ವಿಶ್ವಸಧ್ವಂ
ಮಯಿ ಕೇನಚಿತ್ ಕ್ವಚಿತ್ ॥೧೦.೨೭
॥
ಹೀಗೆ ನಿನ್ನಿಂದ
ಮೊಸಗೊಳಿಸಲ್ಪಟ್ಟವರಾಗಿ, ಸುಧೆಯ ಕಲಶವನ್ನು ಸರಿಯಾಗಿ ವಿಭಾಗಿಸಿ ನಮಗೆ ಕುಡಿಸು ಎಂದು ಹೇಳಿ, ಕಲಶವನ್ನು ನಿನ್ನ ಕೈಗೇ ಕೊಟ್ಟರು. ‘ಧರ್ಮ ರಕ್ಷಣೆಗಾಗಿ ಪಾಪಿಷ್ಟರಲ್ಲಿ ಒಪ್ಪಂದವನ್ನು
ಮೀರುವುದು ಧರ್ಮವೇ ಆಗಿದೆ’ ಎಂದು ನಿನ್ನಿಂದ ಸಜ್ಜನರಿಗೆ ಹೇಳಲ್ಪಟ್ಟಿತು.
ಅಮೃತ ವಿಭಾಗ ವಿಚಾರದಲ್ಲಿ ನನ್ನಿಂದ ಯಾವಯಾವ ವ್ಯಾಪಾರ ಮಾಡಲ್ಪಡುತ್ತದೋ, ಆ
ವಿಚಾರದಲ್ಲಿ ನಿಮ್ಮೆಲ್ಲರ ಒಪ್ಪಿಗೆ ಇದ್ದರೆ, ನಾನು ಈ ಅಮೃತವನ್ನು ವಿಭಾಗ ಮಾಡುತ್ತೇನೆ. ನಾನು
ನನ್ನ ಇಷ್ಟದಂತೆ ವಿಭಾಗ ಮಾಡುತ್ತೇನೆ. ನನ್ನಲ್ಲಿ
ಯಾವರೀತಿಯಲ್ಲೂ ವಿಶ್ವಾಸ ಇಡಬೇಡಿ ಎನ್ನುವ ಮೋಹಕ
ಮಾತು ನಿನ್ನಿಂದ ದೈತ್ಯರಿಗೆ ಹೇಳಲ್ಪಟ್ಟಿತು.
No comments:
Post a Comment