ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, September 8, 2018

Mahabharata Tatparya Nirnaya Kannada 10.13-10.18


ಶ್ರಾನ್ತೇಷು ತೇಷ್ವೇಕ ಉರುಕ್ರಮ ತ್ವಂ ಸುಧಾರಸಾಪ್ತ್ಯೈ ಮುದಿತೋ ಹ್ಯಮತ್ಥ್ನಾಃ 
ತದಾ ಜಗದ್ಗ್ರಾಸಿ ವಿಷಂ ಸಮುತ್ಥಿತಂ ತ್ವದಾಜ್ಞಯಾ ವಾಯುರಧಾತ್ ಕರೇ ನಿಜೇ೧೦.೧೩

ಆ ಎಲ್ಲಾ ದೇವ-ದೈತ್ಯರು ಬಳಲುವಿಕೆಯನ್ನು ಹೊಂದಲು, ಓ ತ್ರಿವಿಕ್ರಮನೇ, ಅಮೃತ ಬರಲೆಂದು ನೀನೇ ಸಂತೋಷದಿಂದ ಕಡಲನ್ನು ಕಡೆದೆಯಷ್ಟೇ.  ಆಗ ಆ ಕಡಲಿನಿಂದ ಎದ್ದು ಬಂದ, ಜಗತ್ತನ್ನೇ ನುಂಗುವಂತಹ ವಿಷವನ್ನು, ನಿನ್ನ ಅಣತಿಯಂತೆ ಮುಖ್ಯಪ್ರಾಣನು ತನ್ನ ಕೈಯಲ್ಲಿ ಹಿಡಿದನಷ್ಟೇ.

ಕಲೇಃ ಸ್ವರೂಪಂ ತದತೀವ ದುಷ್ಷಹಂ ವರಾದ್ ವಿಧಾತುಃ ಸಕಲೈಶ್ಚ ದುಃಸ್ಪೃಶಮ್
ಕರೇ ವಿಮತ್ಥ್ಯಾಸ್ತಬಲಂ ವಿಧಾಯ ದದೌ ಸ ಕಿಞ್ಚಿದ್ ಗಿರಿಶಾಯ ವಾಯುಃ ೧೦.೧೪

ಕಲಿಯ ಸ್ವರೂಪವಾಗಿರುವ, ಬ್ರಹ್ಮದೇವರ ವರದಿಂದ  ಯಾರಿಂದಲೂ ಸಹಿಸಲಶಕ್ಯವಾದ, ಬೇರೆ ಯಾರಿಗೂ ಕೂಡಾ ಮುಟ್ಟಲಿಕ್ಕೂ ಅಸಾಧ್ಯವಾದ ಈ ವಿಷವನ್ನು ಕೈಯಲ್ಲಿ ಹಿಡಿದು, ಚನ್ನಾಗಿ ತಿಕ್ಕಿ, ಬಲಹೀನವಾದದ್ದನ್ನಾಗಿ ಮಾಡಿದ ಮುಖ್ಯಪ್ರಾಣನು, ಅದರ  ಕಿಂಚಿತ್ ಭಾಗವನ್ನು ರುದ್ರನಿಗೋಸ್ಕರ ಕೊಟ್ಟ.

ಸ ತತ್ ಪಿಬತ್ ಕಣ್ಠಗತೇನ ತೇನ ನಿಪಾತಿತೋ ಮೂರ್ಚ್ಛಿತ ಆಶು ರುದ್ರಃ
ಹರೇಃ ಕರಸ್ಪರ್ಶಬಲಾತ್ ಸ ಸಂಜ್ಞಾಮವಾಪ ನೀಲೋsಸ್ಯ ಗಳಸ್ತದಾsಸೀತ್ ೧೦.೧೫

ಆ ವಿಷವನ್ನು ಪಾನಮಾಡಿದ ರುದ್ರನು, ಕಂಠದಲ್ಲಿರತಕ್ಕ ವಿಷದಿಂದ ಮೂರ್ಛಿತನಾದನು. (ಅಲ್ಪವಾದ್ದರಿಂದ ಅದು ಕಂಠದಲ್ಲಿ ಸಂಬಂಧವಾಗಿ ಅಲ್ಲೇ ಉಳಿಯಿತು. ಉದರವನ್ನು ಸೇರಲಿಲ್ಲ. ಈ ರೀತಿ ಕಣ್ಠಗತವಾಗಿರುವ ವಿಷದಿಂದ ಶಿವ ಮೂರ್ಛಹೊಂದಿದನು)  ತದನಂತರ ಪರಮಾತ್ಮನ ಕೈಸ್ಪರ್ಶದಿಂದ  ಸಂಜ್ಞೆಯನ್ನು ಹೊಂದಿದನು. ಇದರಿಂದಾಗಿ ಶಿವನ ಕಂಠ ಕಡುನೀಲಿಯಾಯಿತು.

[ಇಲ್ಲಿ ಸರ್ವೇ ಸಾಮಾನ್ಯವಾಗಿ ಎಲ್ಲರಿಗೂ ಒಂದು ಪ್ರಶ್ನೆ ಬರುತ್ತದೆ. ‘ಶಿವ ವಿಷವನ್ನು ಕುಡಿದ’ ಎಂದು ಭಾಗವತದಲ್ಲಿ ಕೂಡಾ ಹೇಳಲಾಗಿದೆ. ಆದರೆ ಇಲ್ಲಿ ಮೊದಲು ಮುಖ್ಯಪ್ರಾಣ ಸ್ವೀಕರಿಸಿದ ಎನ್ನಲಾಗಿದೆ. ಇದಕ್ಕೆ ಪ್ರಮಾಣ ಯಾವುದು ? ಈ ಪ್ರಶ್ನೆಗೆ ಉತ್ತರ ಮಹಾಭಾರತದ ಶಾಂತಿಪರ್ವದಲ್ಲಿನ(೩೫೧.೨೭)  ಈ ಗದ್ಯ: ಅಮೃತೋತ್ಪಾದನೋ ಪುನರ್ಭಕ್ಷಣೇನ ವಾಯುಸಮೀಕೃತಸ್ಯ ವಿಷಸ್ಯ’.  ಅಮೃತೋತ್ಪಾದನೆಯಾಗುವ ಸಂದರ್ಭದಲ್ಲಿ  ಮುಖ್ಯಪ್ರಾಣ ತಿಕ್ಕಿಕೊಟ್ಟ ವಿಷವನ್ನು ಶಿವ ಕುಡಿದ ಎಂದು ಅಲ್ಲಿ ಹೇಳಲಾಗಿದೆ.  ನೀಲಕಣ್ಠತ್ವಮುಪಗತಃ(೨೬)  ಎಂದೂ ಅಲ್ಲಿ ಹೇಳಿದ್ದಾರೆ. ಈ ರೀತಿಯಾಗಿ ಸಂಕ್ಷಿಪ್ತವಾಗಿ  ಮಹಾಭಾರತದಲ್ಲಿ ಹೇಳಿರುವುದನ್ನೇ ಇಲ್ಲಿ ಆಚಾರ್ಯರು ನಿರ್ಣಯ ರೂಪದಲ್ಲಿ ನೀಡಿದ್ದಾರೆ]

ಅಥ ತ್ವದಾಜ್ಞಾಂ ಪುರತೋ ನಿಧಾಯ ನಿಧಾಯ ಪಾತ್ರೇ ತಪನೀಯರೂಪೇ
ಸ್ವಯಂ ಚ ನಿರ್ಮ್ಮತ್ಥ್ಯ ಬಲೋಪಪನ್ನಂ ಪಪೌ ಸ ವಾಯುಸ್ತದು ಚಾಸ್ಯ ಜೀರ್ಣ್ಣಮ್         ೧೦.೧೬

ತದನಂತರ, ನಿನ್ನ ಆಜ್ಞೆಯನ್ನು ಮುಂದಿರಿಸಿಕೊಂಡು(ನಿನ್ನ ಅಣತಿಯಂತೆ), ಬಂಗಾರದಮಯವಾದ ಪಾತ್ರೆಯಲ್ಲಿ ವಿಷವನ್ನು ಇಟ್ಟ ಮುಖ್ಯಪ್ರಾಣನು,  ಮರ್ದನ ಮಾಡದೇ ಇರುವ ಆ ವಿಷವನ್ನು ಕುಡಿದ. ಆ ವಿಷವೂ ಕೂಡಾ ಅವನಿಗೆ ಜೀರ್ಣವಾಯಿತು.

ಅತ್ಯಲ್ಪಪಾನಾಚ್ಚ ಬಭೂವ ಶೂಲಾ ಶಿವಸ್ಯ ಶೀರ್ಷ್ಣಶ್ಚ ಕರಾವಶಿಷ್ಟಮ್
ಅಭೂತ್ ಕಲಿಃ ಸರ್ವಜಗತ್ಸು ಪೂರ್ಣ್ಣಂ ಪೀತ್ವಾ ವಿಕಾರೋ ನ ಬಭೂವ ವಾಯೋಃ ೧೦.೧೭

ಹೀಗೆ ಮುಖ್ಯಪ್ರಾಣ ವಿಷವನ್ನು ಕುಡಿದು ಜೀರ್ಣಿಸಿಕೊಂಡ. ಸಂಪೂರ್ಣವಾಗಿ ಕುಡಿದೂ ಕೂಡಾ ಅವನಿಗೆ ಯಾವುದೇ ವಿಕಾರ ಆಗಲಿಲ್ಲ.  ಆದರೆ ಸ್ವಲ್ಪವೇ ಪಾನ ಮಾಡಿದ್ದರಿಂದ ಅದು ಶಿವನ ತಲೆನೋವಿಗೆ ಕಾರಣವಾಯಿತು. ಅಷ್ಟೇ ಅಲ್ಲಾ, ಆತನ ಕೈಯಲ್ಲಿ ಉಳಿದಿದ್ದ  ಅತ್ಯಲ್ಪ ಪ್ರಮಾಣದ ವಿಷ ಜಗತ್ತಿನಾದ್ಯಂತ  ಹರಡಿತು. ಆ ರೀತಿ ಹರಡಿದ ವಿಷದಲ್ಲಿ ಕಲಿ ಅಭಿಮಾನಿಯಾಗಿ ಎಲ್ಲೆಡೆ ತುಂಬಿದ. (ಹಾಗಾಗಿ ಇಂದು ನಾವು ಕಾಣುವ ಕಾರ್ಖಾನೆಯ ಮಾಲಿನ್ಯಭರಿತ ವಿಷವಾಗಲೀ, ಜಿಲೆಟಿನ್ ವಿಷವಾಗಲೀ, ಈ ರೀತಿ  ಯಾವುದೇ ವಿಷವಿದ್ದರೂ ಕೂಡಾ,  ಅವೆಲ್ಲವೂ ಈ ಕಾಲಕೂಟದ ಮರಿಗಳು. ಅದಕ್ಕೆ ‘ಕಲಿ’ ಅಭಿಮಾನಿ).   

ಕಲೇಃ ಶರೀರಾದಭವನ್ ಕುನಾಗಾಃ ಸವೃಶ್ಚಿಕಾಃ ಶ್ವಾಪದಯಾತುಧಾನಾಃ
ಅಥ ತ್ವಯಾsಬ್ಧೌ ತು ವಿಮತ್ಥ್ಯಮಾನೇ ಸುರಾsಭವತ್ ತಾಮಸುರಾ ಅವಾಪುಃ       ೧೦.೧೮

ಕಲಿ ಸ್ವರೂಪವಾದ ಅಥವಾ ಕಲ್ಯಭಿಮಾನ್ಯಮಾನವಾದ ಆ ವಿಷದಿಂದ  ಚೇಳು, ಮೊದಲಾದ ಕೆಟ್ಟ ಹಿಂಸ್ರ ಪ್ರಾಣಿಗಳು, ವಿಷದ ಹಾವುಗಳು, ಮೊದಲಾದವುಗಳು ಹುಟ್ಟಿದವು.
ತದನಂತರ, ನಿನ್ನಿಂದ ಕಡಲು ಚನ್ನಾಗಿ ಕಡೆಯಲ್ಪಡಲು, ಮದ್ಯವು ಹುಟ್ಟಿತು. ಅದನ್ನು ಅಸುರರು ತಮ್ಮದನ್ನಾಗಿಸಿಕೊಂಡರು. (ಹೀಗಾಗಿ ಮದ್ಯ ಆಸುರೀ ಚಟುವಟಿಕೆಗೆ ಕಾರಣವಾಗಿ ಜಗತ್ತಿನಲ್ಲಿದೆ ).

No comments:

Post a Comment