ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, September 18, 2018

Mahabharata Tatparya Nirnaya Kannada 10.56-10.60



ಸ ಲೋಕಧರ್ಮ್ಮಾಭಿರಿರಕ್ಷಯಾ ಪಿತುರ್ದ್ದ್ವಿಜತ್ವಮಾಪ್ಯಾsಶು ಪಿತುರ್ದ್ದದೌ ನಿಜಮ್
ಜ್ಞಾನಂ ತಯೋಃ ಸಂಸ್ಮೃತಿಮಾತ್ರತಃ ಸದಾ ಪ್ರತ್ಯಕ್ಷಭಾವಂ ಪರಮಾತ್ಮನೋ ದದೌ ೧೦.೫೬

ವೇದವ್ಯಾಸರೂಪಿ ನಾರಾಯಣನು ಲೋಕದ ಧರ್ಮವನ್ನು ರಕ್ಷಿಸಬೇಕು ಎನ್ನುವ ಇಚ್ಛಿಯಿಂದ, ಶೀಘ್ರದಲ್ಲಿ ತಂದೆಯಿಂದ ಬ್ರಾಹ್ಮಣತ್ವವನ್ನು ಹೊಂದಿ(ಅಂದರೆ ಲೋಕದ ನಿಯಮದಂತೆ ತಂದೆಯಿಂದಲೇ ಉಪನಯನವನ್ನು ಮಾಡಿಸಿಕೊಂಡು), ತಂದೆಗೇ ಜ್ಞಾನವನ್ನು ಉಪದೇಶಿಸಿದನು.  ಸತ್ಯವತಿಗೆ ಮತ್ತು ಪರಾಶರರಿಗೆ ಜ್ಞಾನವನ್ನು ನೀಡಿದ್ದಲ್ಲದೇ, ‘ನೀವು ನೆನಪಿಸಿಕೊಂಡಾಗ ತಾನು  ಪ್ರತ್ಯಕ್ಷವಾಗುತ್ತೇನೆ’ ಎನ್ನುವ ವರವನ್ನೂ  ಅವರಿಗೆ ನೀಡಿದನು. 

ದ್ವೈಪಾಯನಃ ಸೋsಥ ಜಗಾಮ ಮೇರುಂ ಚತುರ್ಮ್ಮುಖಾದ್ಯೈರನುಗಮ್ಯಮಾನಃ
ಉದ್ಧೃತ್ಯ ವೇದಾನಖಿಲಾನ್ ಸುರೇಭ್ಯೋ ದದೌ ಮುನಿಭ್ಯಶ್ಚ ಯಥಾssದಿಸೃಷ್ಟೌ ೧೦.೫೭

ಆ ದ್ವೀಪದಲ್ಲಿ ಅವತರಿಸಿ ಬಂದ ವೇದವ್ಯಾಸರು, ಬ್ರಹ್ಮಾದಿ ದೇವತೆಗಳಿಂದ ಅನುಸರಿಸಲ್ಪಟ್ಟವರಾಗಿ, ಮೇರುವನ್ನು ಕುರಿತು ತೆರಳಿದರು. ಯಾವ ರೀತಿ ಆದಿ ಸೃಷ್ಟಿಯಲ್ಲಿ ಪರಮಾತ್ಮ ವೇದಾದಿ ವಿದ್ಯೆಗಳನ್ನು ಉಪದೇಶಿಸಿದ್ದನೋ ಹಾಗೇ, ಮತ್ತೆ ದೇವತೆಗಳಿಗೂ, ಶ್ರೇಷ್ಠ ಮುನಿಗಳಿಗೂ ಉಪದೇಶ ಮಾಡಿ,  ಅವರನ್ನು ಉದ್ಧರಿಸಿದನು.

ಸರ್ವಾಣಿ ಶಾಸ್ತ್ರಾಣಿ ತಥೈವ ಕೃತ್ವಾ ವಿನಿರ್ಣ್ಣಯಂ ಬ್ರಹ್ಮಸೂತ್ರಂ ಚಕಾರ
ತಚ್ಛುಶ್ರುವುರ್ಬ್ರಹ್ಮಗಿರೀಶಮುಖ್ಯಾಃ ಸುರಾ ಮುನೀನಾಂ ಪ್ರವರಾಶ್ಚ ತಸ್ಮಾತ್       ೧೦.೫೮

ಹಾಗೆಯೇ, ಎಲ್ಲಾ ಶಾಸ್ತ್ರಗಳನ್ನೂ ರಚನೆ ಮಾಡಿ, ಎಲ್ಲಾ ಶಾಸ್ತ್ರದ ನಿರ್ಣಯ ಎನಿಸಿಕೊಂಡಿರುವ ಬ್ರಹ್ಮಸೂತ್ರವನ್ನು ರಚಿಸಿದರು. ಬ್ರಹ್ಮ-ರುದ್ರ ಮೊದಲಾದ ದೇವತೆಗಳು, ಮುನಿ ಶ್ರೇಷ್ಠರೂ ಕೂಡಾ,  ವೇದವ್ಯಾಸರಿಂದ ಬ್ರಹ್ಮಸೂತ್ರವನ್ನು ಕೇಳಿದರು. (ಬ್ರಹ್ಮ-ರುದ್ರಾದಿ ದೇವತೆಗಳಿಗೆ  ಬ್ರಹ್ಮಸೂತ್ರವನ್ನು ವೇದವ್ಯಾಸರು ಉಪದೇಶ ಮಾಡಿದರು).

ಸಮಸ್ತಶಾಸ್ತ್ರಾರ್ತ್ಥನಿದರ್ಶನಾತ್ಮಕಂ ಚಕ್ರೇ ಮಹಾಭಾರತನಾಮಧೇಯಮ್
ವೇದೋತ್ತಮಂ ತಚ್ಚ ವಿಧಾತೃಶಙ್ಕರಪ್ರಧಾನಕೈಸ್ತನ್ಮುಖತಃ ಸುರೈಃ ಶ್ರುತಮ್     ೧೦.೫೯

ವೇದ ಮೊದಲಾದ ಎಲ್ಲಾ ಶಾಸ್ತ್ರಗಳು ಏನನ್ನು ಹೇಳುತ್ತವೋ,  ಅದಕ್ಕೆ ಉದಾಹರಣೆಯಾಗಿರುವ ವೇದಗಳಿಗೂ ಮಿಗಿಲಾದ ಮಹಾಭಾರತ ಎಂಬ ಹೆಸರಿನ ಗ್ರಂಥವನ್ನು ಭಗವಂತ ವೇದವ್ಯಾಸರೂಪದಿಂದ ಸಂಕಲಿಸಿದ. ಬ್ರಹ್ಮ-ರುದ್ರ ಮೊದಲಾದವರನ್ನೇ ಮುಖ್ಯವಾಗಿ ಹೊಂದಿರುವ ದೇವತೆಗಳಿಂದ ವೇದವ್ಯಾಸರ ಮುಖದಿಂದಲೇ ಅದು ಕೇಳಲ್ಪಟ್ಟಿತು. (ಬ್ರಹ್ಮಾದಿ ದೇವತೆಗಳಿಗೆ  ಮಹಾಭಾರತವನ್ನು  ವೇದವ್ಯಾಸರು ಉಪದೇಶ ಮಾಡಿದರು).

ಅಥೋ ಗಿರೀಶಾದಿಮನೋನುಶಾಯೀ ಕಲಿರ್ಮ್ಮಮಾರಾsಶು ಸುವಾಙ್ಮಯೈಃ ಶರೈಃ
ನಿಕೃತ್ತಶೀರ್ಷೋ ಭಗವನ್ಮುಖೇರಿತೈಃ ಸುರಾಶ್ಚ ಸಜ್ಜ್ಞಾನಸುಧಾರಸಂ ಪಪುಃ        ೧೦.೬೦

ತದನಂತರ, ರುದ್ರದೇವರೇ ಮೊದಲಾದ ದೇವತೆಗಳ ಮನಸ್ಸಿನಲ್ಲಿ ನೆಲೆಸಿರುವ ಕಲಿಯು, ಪರಮಾತ್ಮನ ಮುಖದಿಂದ ಹೇಳಲ್ಪಟ್ಟ  ಜ್ಞಾನವೆಂಬ ಬಾಣಗಳಿಂದ ತಲೆಯನ್ನು ಕಳೆದುಕೊಂಡವನಾಗಿ ಸತ್ತನು. ದೇವತೆಗಳಾದರೋ, ನಿರ್ಮಲವಾದ ಜ್ಞಾನವೆಂಬ ಅಮೃತವನ್ನು ಪಡೆದರು.

Monday, September 17, 2018

Mahabharata Tatparya Nirnaya Kannada 10.52-10.55


[ಈ ರೀತಿ ವ್ಯಾಸರೂಪದಿಂದ ಭೂಮಿಯಲ್ಲಿ ಅವತರಿಸಿದ ಶ್ರೀಮನ್ನಾರಾಯಣನ ಸ್ವರೂಪ-ಸಾಮರ್ಥ್ಯದ ಸುಂದರ ಚಿತ್ರಣವನ್ನು ಆಚಾರ್ಯರು ಇಲ್ಲಿ ನೀಡಿದ್ದಾರೆ:]

ಅಗಣ್ಯದಿವ್ಯೋರುಗುಣಾರ್ಣ್ಣವಃ ಪ್ರಭುಃ ಸಮಸ್ತವಿದ್ಯಾಧಿಪತಿರ್ಜ್ಜಗದ್ಗುರುಃ
ಅನನ್ತಶಕ್ತಿರ್ಜ್ಜಗದೀಶ್ವರೇಶ್ವರಃ ಸಮಸ್ತದೋಷಾತಿವಿದೂರವಿಗ್ರಹಃ         ೧೦.೫೨


ಶುಭಮರತಕವರ್ಣ್ಣೋ ರಕ್ತಪಾದಾಭ್ಜನೇತ್ರಾಧರಕರನಖರಸನಾಗ್ರಶ್ಚಕ್ರಶಙ್ಖಾಬ್ಜರೇಖಃ
ರವಿಕರವರಗೌರಂ ಚರ್ಮ್ಮ ಚೈಣಂ ವಸಾನಸ್ತಟಿದಮಲಜಟಾಸನ್ದೀಪ್ತಜೂಟಂ ದಧಾನಃ        ೧೦.೫೩

ಎಣಿಸಲಾಗದ, ಅಲೌಕಿಕವಾದ, ಉತ್ಕೃಷ್ಟವಾದ ಗುಣಗಳಿಗೆ ಕಡಲಿನಂತೆ ಇರುವವನು; ಸರ್ವಸಮರ್ಥನಾಗಿರುವವನು; ಎಲ್ಲಾ ವಿದ್ಯೆಗೆ ಅಧಿಪತಿಯಾಗಿರುವವನು; ಜಗತ್ತಿಗೇ ಉಪದೇಶಕನಾಗಿರುವವನು;  ಎಣೆಯಿಲ್ಲದ ಶಕ್ತಿ ಉಳ್ಳವನು; ಜಗತ್ತಿಗೆ ಒಡೆಯರಾದವರಿಗೇ ಒಡೆಯನಾಗಿರುವವನು; ಎಲ್ಲಾ ದೋಷದಿಂದ ದೂರವಾಗಿರುವ ಸ್ವರೂಪಭೂತವಾದ ಶರೀರವುಳ್ಳವನು; 
ಮರತಕಮಣಿಯಂತೆ ನೀಲಿಯಾದ ಮೈಬಣ್ಣ ಉಳ್ಳವನು; ಕೆಂಪಾಗಿರತಕ್ಕಂತಹ ಪಾದ, ಕಣ್ಣಿನ ತುದಿ, ತುಟಿ, ಕೈ, ನಾಲಿಗೆಯ ತುದಿ ಉಳ್ಳವನು; ಕೈಗಳಲ್ಲಿ ಮತ್ತು ಕಾಲಿನಲ್ಲಿ ಶಂಖ-ಚಕ್ರ-ಕಮಲದ ರೇಖೆಯುಳ್ಳವನು; ಸೂರ್ಯನ ಕಾಂತಿಯಂತೆ ಹಳದಿಯಾಗಿ,  ಜಿಂಕೆಯ ಚರ್ಮವನ್ನು ಹೊದ್ದು, ಮಿಂಚಿನಂತೆ ನಿರ್ಮಲವಾಗಿರುವ ಜಟಾಜೂಟವನ್ನು ಧರಿಸಿದವನಾಗಿ ಭಗವಂತ ಆವಿರ್ಭವಿಸಿದ.

ವಿಸ್ತೀರ್ಣ್ಣವಕ್ಷಾಃ  ಕಮಳಾಯತಾಕ್ಷೋ ಬೃಹದ್ಭುಜಃ ಕಮ್ಬುಸಮಾನಕಣ್ಠಃ
ಸಮಸ್ತವೇದಾನ್ ಮುಖತಃ ಸಮುದ್ಗಿರನ್ನನ್ತಚನ್ದ್ರಾಧಿಕಕಾನ್ತಸನ್ಮುಖಃ      ೧೦.೫೪

ಪ್ರಬೋಧಮುದ್ರಾಭಯದೋರ್ದ್ಧ್ವಯಾನ್ವಿತೋ ಯಜ್ಞೋಪವೀತಾಜಿನಮೇಖಲೋಲ್ಲಸನ್
ದೃಶಾ ಮಹಾಜ್ಞಾನಭುಜಙ್ಗದಷ್ಟಮುಜ್ಜೀವಯಾನೋ ಜಗದತ್ಯರೋಚತ ೧೦.೫೫

ಅಗಲವಾದ ವಕ್ಷಃಸ್ಥಳ; ತಾವರೆಯಂತಹ ವಿಶಾಲವಾದ ಕಣ್ಣು; ಅಗಲವಾದ ಭುಜ; ಶಂಖದಂತೆ ನುಣುಪಾದ ಕೊರಳು; ಸಮಸ್ತ ವೇದಗಳನ್ನು ಹುಟ್ಟುತ್ತಲೇ ಹೇಳುತ್ತಿದ್ದವನು; ಅಸಂಖ್ಯಾತ ಚಂದ್ರರಂತೆ ಸುಖವನ್ನು ಉಂಟುಮಾಡುವ ಮುಖವುಳ್ಳವನು;
ಜ್ಞಾನಮುದ್ರೆ ಮತ್ತು ಅಭಯಮುದ್ರೆಯಿಂದ ಯುಕ್ತನಾದವನು;  ಯಜ್ಞೋಪವೀತ,  ಕೃಷ್ಣಾಜಿನ, ಹೀಗೆ ಎಲ್ಲವುದರಿಂದ ಕಂಗೊಳಿಸುತ್ತಿರುವವನು;  ಅಜ್ಞಾನವೆಂಬ ಹಾವಿನಿಂದ ಕಚ್ಚಲ್ಪಟ್ಟ ಭಕ್ತ ಸಮೂಹವನ್ನು ತನ್ನ ಪ್ರಸನ್ನದೃಷ್ಟಿಯಿಂದ ಬದುಕಿಸುತ್ತಿರುವ ವೇದವ್ಯಾಸರೂಪಿ ಭಗವಂತ  ಶೋಭಿಸಿದನು.

Sunday, September 16, 2018

Mahabharata Tatparya Nirnaya Kannada 10.47-10.51


ಇತೀರಿತಶ್ಚಕ್ರಧರೇಣ ತಾಂ ಮುನಿರ್ಜ್ಜಗಾಮ ಮಾರ್ತ್ತಾಣ್ಡಸುತಾಂ ಸಮುದ್ರಗಾಮ್
ಉತ್ತಾರಯನ್ತೀಮಥ ತತ್ರ ವಿಷ್ಣುಃ ಪ್ರಾದುರ್ಬಭೂವಾsಶು ವಿಶುದ್ಧಚಿದ್ಧನಃ        ೧೦.೪೭

ಈ ರೀತಿಯಾಗಿ ಭಗವಂತನಿಂದ ಹೇಳಲ್ಪಟ್ಟ ಪರಾಶರ ಮುನಿಯು, ಸೂರ್ಯನ ಮಗಳಾಗಿರುವ, ಸಮುದ್ರಗಾಮಿನಿಯಾದ, ಪುಣ್ಯಪ್ರದಳಾದ ಯಮುನೆಯನ್ನು ದೋಣಿಯ ಮೂಲಕ ದಾಟಿಸುವ ಸತ್ಯವತಿಯ ಬಳಿ ಬಂದು ಅವಳನ್ನು ಸೇರಿದನು. ಅಲ್ಲಿ ಜ್ಞಾನಸ್ವರೂಪಿಯಾಗಿರುವ ನಾರಾಯಣನು ತಕ್ಷಣ ಹುಟ್ಟಿದನು (ಆವಿರ್ಭವಿಸಿದನು).

ವಿದೋಷವಿಜ್ಞಾನಸುಖೈಕರೂಪೋsಪ್ಯಜೋ ಜನಾನ್ ಮೋಹಯಿತುಂ ಮೃಷೈವ
ಯೋಷಿತ್ಸು ಪುಂಸೋ ಹ್ಯಜನೀವ ದೃಷ್ಯತೇ ನ ಜಾಯತೇ ಕ್ವಾಪಿ ಬಲಾದಿವಿಗ್ರಹಃ   ೧೦.೪೮

ಯಥಾ ನೃಸಿಂಹಾಕೃತಿರಾವಿರಾಸೀತ್ ಸ್ತಮ್ಭಾತ್ ತಥಾ ನಿತ್ಯತನುತ್ವತೋ ವಿಭುಃ
ಆವಿರ್ಭವದ್ ಯೋಷಿತಿ ನೋ ಮಲೋತ್ಥಸ್ತಥಾsಪಿ ಮೋಹಾಯ ನಿದರ್ಶಯೇತ್ ತಥಾ        ೧೦.೪೯

ದೋಷವಿಲ್ಲದ,  ವಿಜ್ಞಾನಸುಖಗಳೇ ಮೈದಾಳಿ ಬಂದ, ಎಂದೂ ನಾಶವಿಲ್ಲದ ನಾರಾಯಣನು, ದುಷ್ಟ ಜನರನ್ನು ಮೋಹಗೊಳಿಸಲು, ಪುರುಷರಿಂದ ಸ್ತ್ರೀಯರಲ್ಲಿ ಹುಟ್ಟಿದಂತೆ  ತೋರುತ್ತಾನೆ. ಆದರೆ ಬಲವೇ ಮೈವೆತ್ತು ಬಂದ ನಾರಾಯಣನು ಎಲ್ಲಿಯೂ ಹುಟ್ಟುವುದಿಲ್ಲ.
ಹೇಗೆ ನರಸಿಂಹನ ಆಕೃತಿ ಉಳ್ಳವನಾಗಿ ಕಂಬದಿಂದ ಹುಟ್ಟಿದನೋ ಹಾಗೇ,  ನಿತ್ಯ ಶರೀರವುಳ್ಳ ನಾರಾಯಣನು ಹೆಣ್ಣಿನಲ್ಲಿ ಆವಿರ್ಭವಿಸುತ್ತಾನೆ. (ಅವನಿಗೆ ಹೆಣ್ಣೂ ಒಂದೇ ಕಂಬವೂ ಒಂದೇ)  ದೇವರು ಶುಕ್ಲ-ಶೋಣಿತಾಖ್ಯವಾದ ಮಲದಿಂದ ಹುಟ್ಟಿಲ್ಲ. ಆದರೂ ಕೂಡಾ ಜನರಮೋಹಕ್ಕಾಗಿ ಹಾಗೆ ತೋರಿಸುತ್ತಾನೆ.

ಸ್ತ್ರೀಪುಂಪ್ರಸಙ್ಗಾತ್ ಪರತೋ ಯತೋ ಹರಿಃ ಪ್ರಾದುರ್ಭವತ್ಯೇಷ ವಿಮೋಹಯನ್ ಜನಮ್
ಅತೋ ಮಲೋತ್ಥೋsಯಮಿತಿ ಸ್ಮ ಮನ್ಯತೇ ಜನೋsಶುಭಃ ಪೂರ್ಣ್ಣಗುಣೈಕವಿಗ್ರಹಮ್ ೧೦.೫೦

ಯಾವ ಕಾರಣದಿಂದ ಗಂಡು-ಹೆಣ್ಣುಗಳ ಸಂಸರ್ಗದ ಆಚೆಗೆ ನಾರಾಯಣನು ಜನರನ್ನು ಮೋಹಗೊಳಿಸುತ್ತಾ ಹುಟ್ಟುತ್ತಾನೋ, ಆ ಕಾರಣದಿಂದ ಕೆಟ್ಟ ಜನರು ಭಗವಂತನು ಶುಕ್ಲರಕ್ತರೂಪವಾದ  ಮಲದಿಂದ ಹುಟ್ಟಿದ್ದಾನೆ ಎಂದು ತಿಳಿಯುತ್ತಾರೆ.

ದ್ವೀಪೇ ಭಗಿನ್ಯಾಃ ಸ ಯಮಸ್ಯ ವಿಶ್ವಕೃತ್ ಪ್ರಕಾಶತೇ ಜ್ಞಾನಮರೀಚಿಮಣ್ಡಲಃ
ಪ್ರಭಾಸಯನ್ನಣ್ಡಬಹಿಸ್ತಥಾsನ್ತಃ ಸಹಸ್ರಲಕ್ಷಾಮಿತಸೂರ್ಯ್ಯದೀಧಿತಿಃ        ೧೦.೫೧

ಯಮನ ತಂಗಿಯಾಗಿರುವ ಯಮುನೆಯ ದ್ವೀಪದಲ್ಲಿ, ವಿಶ್ವವನ್ನೇ ಸೃಷ್ಟಿಸಿದ, ಜ್ಞಾನವೆಂಬ ಕಾಂತಿಯುಳ್ಳ ನಾರಾಯಣನು, ಪ್ರಕಾಶಿಸುತ್ತಾ, ಬ್ರಹ್ಮಾಂಡದ ಒಳ-ಹೊರಗೂ ಬೆಳಗುತ್ತಾ, ಸಾವಿರಾರು ಸೂರ್ಯರ ಕಾಂತಿಯುಳ್ಳವನಾಗಿ ಆವಿರ್ಭವಿಸಿದ.