ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, September 16, 2018

Mahabharata Tatparya Nirnaya Kannada 10.47-10.51


ಇತೀರಿತಶ್ಚಕ್ರಧರೇಣ ತಾಂ ಮುನಿರ್ಜ್ಜಗಾಮ ಮಾರ್ತ್ತಾಣ್ಡಸುತಾಂ ಸಮುದ್ರಗಾಮ್
ಉತ್ತಾರಯನ್ತೀಮಥ ತತ್ರ ವಿಷ್ಣುಃ ಪ್ರಾದುರ್ಬಭೂವಾsಶು ವಿಶುದ್ಧಚಿದ್ಧನಃ        ೧೦.೪೭

ಈ ರೀತಿಯಾಗಿ ಭಗವಂತನಿಂದ ಹೇಳಲ್ಪಟ್ಟ ಪರಾಶರ ಮುನಿಯು, ಸೂರ್ಯನ ಮಗಳಾಗಿರುವ, ಸಮುದ್ರಗಾಮಿನಿಯಾದ, ಪುಣ್ಯಪ್ರದಳಾದ ಯಮುನೆಯನ್ನು ದೋಣಿಯ ಮೂಲಕ ದಾಟಿಸುವ ಸತ್ಯವತಿಯ ಬಳಿ ಬಂದು ಅವಳನ್ನು ಸೇರಿದನು. ಅಲ್ಲಿ ಜ್ಞಾನಸ್ವರೂಪಿಯಾಗಿರುವ ನಾರಾಯಣನು ತಕ್ಷಣ ಹುಟ್ಟಿದನು (ಆವಿರ್ಭವಿಸಿದನು).

ವಿದೋಷವಿಜ್ಞಾನಸುಖೈಕರೂಪೋsಪ್ಯಜೋ ಜನಾನ್ ಮೋಹಯಿತುಂ ಮೃಷೈವ
ಯೋಷಿತ್ಸು ಪುಂಸೋ ಹ್ಯಜನೀವ ದೃಷ್ಯತೇ ನ ಜಾಯತೇ ಕ್ವಾಪಿ ಬಲಾದಿವಿಗ್ರಹಃ   ೧೦.೪೮

ಯಥಾ ನೃಸಿಂಹಾಕೃತಿರಾವಿರಾಸೀತ್ ಸ್ತಮ್ಭಾತ್ ತಥಾ ನಿತ್ಯತನುತ್ವತೋ ವಿಭುಃ
ಆವಿರ್ಭವದ್ ಯೋಷಿತಿ ನೋ ಮಲೋತ್ಥಸ್ತಥಾsಪಿ ಮೋಹಾಯ ನಿದರ್ಶಯೇತ್ ತಥಾ        ೧೦.೪೯

ದೋಷವಿಲ್ಲದ,  ವಿಜ್ಞಾನಸುಖಗಳೇ ಮೈದಾಳಿ ಬಂದ, ಎಂದೂ ನಾಶವಿಲ್ಲದ ನಾರಾಯಣನು, ದುಷ್ಟ ಜನರನ್ನು ಮೋಹಗೊಳಿಸಲು, ಪುರುಷರಿಂದ ಸ್ತ್ರೀಯರಲ್ಲಿ ಹುಟ್ಟಿದಂತೆ  ತೋರುತ್ತಾನೆ. ಆದರೆ ಬಲವೇ ಮೈವೆತ್ತು ಬಂದ ನಾರಾಯಣನು ಎಲ್ಲಿಯೂ ಹುಟ್ಟುವುದಿಲ್ಲ.
ಹೇಗೆ ನರಸಿಂಹನ ಆಕೃತಿ ಉಳ್ಳವನಾಗಿ ಕಂಬದಿಂದ ಹುಟ್ಟಿದನೋ ಹಾಗೇ,  ನಿತ್ಯ ಶರೀರವುಳ್ಳ ನಾರಾಯಣನು ಹೆಣ್ಣಿನಲ್ಲಿ ಆವಿರ್ಭವಿಸುತ್ತಾನೆ. (ಅವನಿಗೆ ಹೆಣ್ಣೂ ಒಂದೇ ಕಂಬವೂ ಒಂದೇ)  ದೇವರು ಶುಕ್ಲ-ಶೋಣಿತಾಖ್ಯವಾದ ಮಲದಿಂದ ಹುಟ್ಟಿಲ್ಲ. ಆದರೂ ಕೂಡಾ ಜನರಮೋಹಕ್ಕಾಗಿ ಹಾಗೆ ತೋರಿಸುತ್ತಾನೆ.

ಸ್ತ್ರೀಪುಂಪ್ರಸಙ್ಗಾತ್ ಪರತೋ ಯತೋ ಹರಿಃ ಪ್ರಾದುರ್ಭವತ್ಯೇಷ ವಿಮೋಹಯನ್ ಜನಮ್
ಅತೋ ಮಲೋತ್ಥೋsಯಮಿತಿ ಸ್ಮ ಮನ್ಯತೇ ಜನೋsಶುಭಃ ಪೂರ್ಣ್ಣಗುಣೈಕವಿಗ್ರಹಮ್ ೧೦.೫೦

ಯಾವ ಕಾರಣದಿಂದ ಗಂಡು-ಹೆಣ್ಣುಗಳ ಸಂಸರ್ಗದ ಆಚೆಗೆ ನಾರಾಯಣನು ಜನರನ್ನು ಮೋಹಗೊಳಿಸುತ್ತಾ ಹುಟ್ಟುತ್ತಾನೋ, ಆ ಕಾರಣದಿಂದ ಕೆಟ್ಟ ಜನರು ಭಗವಂತನು ಶುಕ್ಲರಕ್ತರೂಪವಾದ  ಮಲದಿಂದ ಹುಟ್ಟಿದ್ದಾನೆ ಎಂದು ತಿಳಿಯುತ್ತಾರೆ.

ದ್ವೀಪೇ ಭಗಿನ್ಯಾಃ ಸ ಯಮಸ್ಯ ವಿಶ್ವಕೃತ್ ಪ್ರಕಾಶತೇ ಜ್ಞಾನಮರೀಚಿಮಣ್ಡಲಃ
ಪ್ರಭಾಸಯನ್ನಣ್ಡಬಹಿಸ್ತಥಾsನ್ತಃ ಸಹಸ್ರಲಕ್ಷಾಮಿತಸೂರ್ಯ್ಯದೀಧಿತಿಃ        ೧೦.೫೧

ಯಮನ ತಂಗಿಯಾಗಿರುವ ಯಮುನೆಯ ದ್ವೀಪದಲ್ಲಿ, ವಿಶ್ವವನ್ನೇ ಸೃಷ್ಟಿಸಿದ, ಜ್ಞಾನವೆಂಬ ಕಾಂತಿಯುಳ್ಳ ನಾರಾಯಣನು, ಪ್ರಕಾಶಿಸುತ್ತಾ, ಬ್ರಹ್ಮಾಂಡದ ಒಳ-ಹೊರಗೂ ಬೆಳಗುತ್ತಾ, ಸಾವಿರಾರು ಸೂರ್ಯರ ಕಾಂತಿಯುಳ್ಳವನಾಗಿ ಆವಿರ್ಭವಿಸಿದ.

No comments:

Post a Comment