[ಈ ರೀತಿ ವ್ಯಾಸರೂಪದಿಂದ ಭೂಮಿಯಲ್ಲಿ
ಅವತರಿಸಿದ ಶ್ರೀಮನ್ನಾರಾಯಣನ ಸ್ವರೂಪ-ಸಾಮರ್ಥ್ಯದ ಸುಂದರ ಚಿತ್ರಣವನ್ನು ಆಚಾರ್ಯರು ಇಲ್ಲಿ ನೀಡಿದ್ದಾರೆ:]
ಅಗಣ್ಯದಿವ್ಯೋರುಗುಣಾರ್ಣ್ಣವಃ ಪ್ರಭುಃ ಸಮಸ್ತವಿದ್ಯಾಧಿಪತಿರ್ಜ್ಜಗದ್ಗುರುಃ
।
ಅನನ್ತಶಕ್ತಿರ್ಜ್ಜಗದೀಶ್ವರೇಶ್ವರಃ ಸಮಸ್ತದೋಷಾತಿವಿದೂರವಿಗ್ರಹಃ ॥೧೦.೫೨ ॥
ಶುಭಮರತಕವರ್ಣ್ಣೋ ರಕ್ತಪಾದಾಭ್ಜನೇತ್ರಾಧರಕರನಖರಸನಾಗ್ರಶ್ಚಕ್ರಶಙ್ಖಾಬ್ಜರೇಖಃ
।
ರವಿಕರವರಗೌರಂ ಚರ್ಮ್ಮ ಚೈಣಂ ವಸಾನಸ್ತಟಿದಮಲಜಟಾಸನ್ದೀಪ್ತಜೂಟಂ ದಧಾನಃ
॥೧೦.೫೩॥
ಎಣಿಸಲಾಗದ, ಅಲೌಕಿಕವಾದ,
ಉತ್ಕೃಷ್ಟವಾದ ಗುಣಗಳಿಗೆ ಕಡಲಿನಂತೆ ಇರುವವನು; ಸರ್ವಸಮರ್ಥನಾಗಿರುವವನು; ಎಲ್ಲಾ ವಿದ್ಯೆಗೆ
ಅಧಿಪತಿಯಾಗಿರುವವನು; ಜಗತ್ತಿಗೇ ಉಪದೇಶಕನಾಗಿರುವವನು; ಎಣೆಯಿಲ್ಲದ ಶಕ್ತಿ ಉಳ್ಳವನು; ಜಗತ್ತಿಗೆ ಒಡೆಯರಾದವರಿಗೇ
ಒಡೆಯನಾಗಿರುವವನು; ಎಲ್ಲಾ ದೋಷದಿಂದ ದೂರವಾಗಿರುವ ಸ್ವರೂಪಭೂತವಾದ ಶರೀರವುಳ್ಳವನು;
ಮರತಕಮಣಿಯಂತೆ ನೀಲಿಯಾದ ಮೈಬಣ್ಣ
ಉಳ್ಳವನು; ಕೆಂಪಾಗಿರತಕ್ಕಂತಹ ಪಾದ, ಕಣ್ಣಿನ ತುದಿ, ತುಟಿ, ಕೈ, ನಾಲಿಗೆಯ ತುದಿ ಉಳ್ಳವನು;
ಕೈಗಳಲ್ಲಿ ಮತ್ತು ಕಾಲಿನಲ್ಲಿ ಶಂಖ-ಚಕ್ರ-ಕಮಲದ ರೇಖೆಯುಳ್ಳವನು; ಸೂರ್ಯನ ಕಾಂತಿಯಂತೆ
ಹಳದಿಯಾಗಿ, ಜಿಂಕೆಯ ಚರ್ಮವನ್ನು ಹೊದ್ದು,
ಮಿಂಚಿನಂತೆ ನಿರ್ಮಲವಾಗಿರುವ ಜಟಾಜೂಟವನ್ನು ಧರಿಸಿದವನಾಗಿ ಭಗವಂತ ಆವಿರ್ಭವಿಸಿದ.
ವಿಸ್ತೀರ್ಣ್ಣವಕ್ಷಾಃ
ಕಮಳಾಯತಾಕ್ಷೋ ಬೃಹದ್ಭುಜಃ ಕಮ್ಬುಸಮಾನಕಣ್ಠಃ ।
ಸಮಸ್ತವೇದಾನ್ ಮುಖತಃ ಸಮುದ್ಗಿರನ್ನನ್ತಚನ್ದ್ರಾಧಿಕಕಾನ್ತಸನ್ಮುಖಃ ॥೧೦.೫೪॥
ಪ್ರಬೋಧಮುದ್ರಾಭಯದೋರ್ದ್ಧ್ವಯಾನ್ವಿತೋ ಯಜ್ಞೋಪವೀತಾಜಿನಮೇಖಲೋಲ್ಲಸನ್ ।
ದೃಶಾ ಮಹಾಜ್ಞಾನಭುಜಙ್ಗದಷ್ಟಮುಜ್ಜೀವಯಾನೋ ಜಗದತ್ಯರೋಚತ ॥೧೦.೫೫॥
ಅಗಲವಾದ ವಕ್ಷಃಸ್ಥಳ; ತಾವರೆಯಂತಹ ವಿಶಾಲವಾದ
ಕಣ್ಣು; ಅಗಲವಾದ ಭುಜ; ಶಂಖದಂತೆ ನುಣುಪಾದ ಕೊರಳು; ಸಮಸ್ತ ವೇದಗಳನ್ನು ಹುಟ್ಟುತ್ತಲೇ ಹೇಳುತ್ತಿದ್ದವನು;
ಅಸಂಖ್ಯಾತ ಚಂದ್ರರಂತೆ ಸುಖವನ್ನು ಉಂಟುಮಾಡುವ ಮುಖವುಳ್ಳವನು;
ಜ್ಞಾನಮುದ್ರೆ ಮತ್ತು ಅಭಯಮುದ್ರೆಯಿಂದ
ಯುಕ್ತನಾದವನು; ಯಜ್ಞೋಪವೀತ, ಕೃಷ್ಣಾಜಿನ, ಹೀಗೆ ಎಲ್ಲವುದರಿಂದ ಕಂಗೊಳಿಸುತ್ತಿರುವವನು; ಅಜ್ಞಾನವೆಂಬ ಹಾವಿನಿಂದ ಕಚ್ಚಲ್ಪಟ್ಟ ಭಕ್ತ ಸಮೂಹವನ್ನು
ತನ್ನ ಪ್ರಸನ್ನದೃಷ್ಟಿಯಿಂದ ಬದುಕಿಸುತ್ತಿರುವ ವೇದವ್ಯಾಸರೂಪಿ ಭಗವಂತ ಶೋಭಿಸಿದನು.
No comments:
Post a Comment