ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, November 3, 2018

Mahabharata Tatparya Nirnaya Kannada 11.22-11.24


ಅಥಾಷ್ಟಮೋ ವಸುರಾಸೀದ್ ದ್ಯುನಾಮಾ ವರಾಙ್ಗಿನಾಮ್ನ್ಯಸ್ಯ ಬಭೂವ ಭಾರ್ಯ್ಯಾ
ಬಭೂವ ತಸ್ಯಾಶ್ಚ ಸಖೀ ನೃಪಸ್ಯ ಸುವಿನ್ದನಾಮ್ನೋ ದಯಿತಾ ಸನಾಮ್ನೀ ॥೧೧.೨೨

ಕಥಾನ್ತರದಲ್ಲಿ ಭೀಷ್ಮಕಥೆಯನ್ನು ಆಚಾರ್ಯರು ಪ್ರಸ್ತುತಪಡಿಸಿದ್ದಾರೆ. ‘ದ್ಯು’ ನಾಮಕ ವಸು ಭೀಷ್ಮನಾದ ಕಥೆ ಇದಾಗಿದೆ:
ಅಷ್ಠವಸುಗಳಲ್ಲಿ^ ಕೊನೆಯವನಾದ(ಎಂಟನೆಯವನಾದ) ‘ದ್ಯು’ ಎನ್ನುವ ವಸುವಿದ್ದ. ಅವನಿಗೆ ‘ವರಾಂಗೀ’ ಎನ್ನುವ ಹೆಸರಿನ ಪತ್ನಿ ಇದ್ದಳು. ಅವಳಿಗೆ ಸುವಿನ್ದ ಎನ್ನುವ ಹೆಸರಿನ ರಾಜನ ಪತ್ನಿ ಸಖಿಯಾಗಿದ್ದಳು. ಆಕೆಯ ಹೆಸರೂ ವರಾಂಗೀ (ಸಮಾನ ನಾಮವುಳ್ಳ ಸಖಿ). 
[ಇಲ್ಲಿ ದ್ಯು ಎಂಬುವನ ಪತ್ನಿ ವರಾಂಗೀ ಎಂದು ಆಚಾರ್ಯರು ಹೇಳಿರುವುದನ್ನು ಕಾಣುತ್ತೇವೆ.  ಆದರೆ ಪ್ರಚಲಿತವಿರುವ ಮಹಾಭಾರತ ಪಾಠದಲ್ಲಿ ‘ಜಿತವತೀ’ ಎಂದೂ ಹೇಳಿದ್ದಾರೆ.  ಅದರಿಂದಾಗಿ ಇಲ್ಲಿ ಆಚಾರ್ಯರು ‘ವರಾಂಗೀ’ ಎಂದು ಹೇಳಿರುವುದು ಆಕೆಯ ನಾಮವಾಗಿದ್ದು, ಅಲ್ಲಿ ‘ಜಿತವತೀ’ ಎಂದಿರುವುದು ಆಕೆಯ ಗುಣವಾಚಕ ನಾಮವಾಗಿರಬಹುದು.
ವರಾಂಗೀ ಕುರಿತಾದ ವಿವರಣೆ ಮಹಾಭಾರತದ ಆದಿಪರ್ವದಲ್ಲಿ(೬೭,೨೬-೭) ಬರುತ್ತದೆ : ಬೃಹಸ್ಪತೇಸ್ತು ಭಗಿನಿ ವರಾಙ್ಗೀ  ಬ್ರಹ್ಮವಾದಿನಿ ಯೋಗಸಿದ್ಧಾ ಜಗತ್ ಕೃತ್ಸ್ನಮಸಕ್ತಾ ವಿಚಚಾರ ಹ ಪ್ರಭಾಸಸ್ಯ ತು ಭಾರ್ಯ್ಯಾ ಸಾ ವಸೂನಾಮಷ್ಟಮಸ್ಯ ಹಿ’.  ಇಂದು ಪ್ರಚಲಿತದಲ್ಲಿರುವ ಮಹಾಭಾರತ ಪಾಠದಲ್ಲಿ(೧.೧೦೬.೨೨) ಇನ್ನೊಂದು ಮಾತಿದೆ: ನಾಮ್ನಾ ಜಿತವತೀ ನಾಮ ರೂಪಯೌವನಶಾಲಿನೀ ಉಶಿನರಸ್ಯ ರಾಜರ್ಷೇಃ ಸತ್ಯಸಂಧಸ್ಯ ಧೀಮತಃ ದುಹಿತಾ ಪ್ರಥಿತಾ ಲೋಕೇ-’ ವಸುಗಳಲ್ಲಿ ಎಂಟನೆಯವನಾದ ದ್ಯು ಎಂಬುವನ ಪತ್ನಿ ವರಾಂಗೀ ಎಂಬ ಬೃಹಸ್ಪತಿಯ ತಂಗಿ. ಅವಳಿಗೆ ಒಬ್ಬಳು ಸಖೀ.ಅವಳಿಗೂ ವರಾಂಗೀ ಎಂದೇ ಹೆಸರು. ಅವಳು ಉಶೀನರ ಎಂಬ ರಾಜನ ಮಗಳು. ಇವತ್ತಿನ ಭಾರತದ ಪಾಠದ ಪ್ರಕಾರ ಅವಳ ಹೆಸರು ‘ಜಿತವತೀ’ ಎಂದು ಇದೆ. ಅವಳಿಗೆ ವರಾಂಗೀ ಎಂದು ಕರೆಯುತ್ತಿದ್ದರು.  ಏಕೆಂದರೆ ' ರೂಪಯೌವನಶಾಲಿನೀ ' ಆದ್ದರಿಂದ. ವರಾಂಗೀ ಎಂದರೆ ಒಳ್ಳೆಯ, ಚಂದದ ಅಂಗದವಳು ಎಂದೇ ಅರ್ಥ ಅಲ್ಲವೇ!  ಪ್ರಾಯಃ ಆಚಾರ್ಯರ ಪ್ರಕಾರ ತೆಗೆದುಕೊಂಡರೆ: ನಾಮ್ನಾವರಾಙ್ಗೀತ್ಯುದಿತಾ’ ಎನ್ನುವುದು ಪ್ರಾಚೀನ ಪಾಠ ಆಗಿರಲೂಬಹುದು].

^ಅಷ್ಟವಸುಗಳು (ಇವರಿಗೆ ನಾಮಾಂತರಗಳೂ ಇವೆ):
೧. ಧರಃ , ಆಪಃ , ದ್ರೋಣಃ, ಪೃಥುಃ ।
೫. ಅನಲಃ, ಹುತಾಶನಃ , ಅಗ್ನಿಃ
೨. ಅನಿಲಃ , ಶ್ವಸನಃ , ಪ್ರಾಣಃ
೬. ಸೋಮಃ, ಚಂದ್ರಮಾಃ, ದೋಷಃ
೩. ಧ್ರುವಃ
೭. ಪ್ರತ್ಯೂಷಃ, ವಿಭಾವಸುಃ
೪. ಅಹಃ, ಧರ್ಮಃ , ಅರ್ಕಃ ।
೮. ಪ್ರಭಾಸಃ, ವಸ್ತುಃದ್ಯುವಸುಃ ।



ತಸ್ಯಾ ಜರಾಮೃತಿವಿಧ್ವಂಸಹೇತೋರ್ವಸಿಷ್ಠಧೇನುಂ ಸ್ವಮೃತಂ ಕ್ಷರನ್ತೀಮ್ ।
ಜರಾಪಹಾಂ ನನ್ದಿನಿನಾಮಧೇಯಾಂ ಬದ್ಧುಂ ಪತಿಂ ಚೋದಯಾಮಾಸ ದೇವೀ॥೧೧.೨೩

ದ್ಯುವಸುವಿನ ಪತ್ನಿಯಾದ ವರಾಂಗೀಯು, ತನ್ನ ಸಖಿಯಾಗಿರುವ, (ಮನುಷ್ಯ ಲೋಕದಲ್ಲಿರುವ) ವರಾಙ್ಗಿಯ ಮುದಿತನ ಮತ್ತು ಮರಣವನ್ನು ನಾಶ ಮಾಡುವುದಕ್ಕಾಗಿ,  ವಸಿಷ್ಠರ ವಶದಲ್ಲಿರುವ , ಅಮೃತವನ್ನೇ ಕರೆಯುವ,  ಮುದಿತನವನ್ನು ಕಳೆಯುವ, ‘ನಂದಿನಿ’ ಎಂಬ ಹೆಸರಿನ ಧೇನುವನ್ನು ಕಟ್ಟಿ ತರುವಂತೆ ತನ್ನ ಗಂಡನನ್ನು(ದ್ಯುವಸುವನ್ನು) ಪ್ರಚೋದಿಸುತ್ತಾಳೆ.
[ಇಲ್ಲಿ ಹೇಳಿರುವ  ‘ಜರಾಪಹಾಂ’ ಎನ್ನುವ ಮಾತಿನ ಹಿನ್ನೆಲೆ ಮಹಾಭಾರತದಲ್ಲಿ(ಆದಿಪರ್ವ ೧೦೬.೧೯) ಕಾಣಸಿಗುತ್ತದೆ:  ಅಸ್ಯಾಃ ಕ್ಷೀರಂ ಪಿಬೇನ್ಮರ್ತ್ಯಃ  ಸ್ವಾದು ಯೋ ವೈ ಸುಮಧ್ಯಮೇ ದಶವರ್ಷಸಹಸ್ರಾಣಿ  ಸ ಜೀವೇತ್ ಸ್ಥಿರಯೌವನಃ’. ನಂದಿನಿಯ ಹಾಲು ಕುಡಿದವನಿಗೆ ಜರೆ ಹಾಗೂ ಮೃತ್ಯುವಿನ ಭಯವಿಲ್ಲ. ಅದರ ಸೊಗಸಾದ ಹಾಲು ಕುಡಿದವ ಸ್ಥಿರವಾದ ಯೌವ್ವನದಿಂದ ಕೂಡಿ ಹತ್ತುಸಾವಿರ ವರ್ಷಗಳ ಕಾಲ ಬದುಕಬಲ್ಲ.]

ತಯಾ ದ್ಯುನಾಮ ಸ ವಸುಃ ಪ್ರಚೋದಿತೋ ಭ್ರಾತೃಸ್ನೇಹಾತ್ ಸಪ್ತಭಿರನ್ವಿತೋsಪರೈಃ ।
ಬಬನ್ಧ ತಾಂ ಗಾಮಥ ತಾಞ್ಛಶಾಪ ವಸಿಷ್ಠಸಂಸ್ಥಃ ಕಮಲೋದ್ಭವಃ ಪ್ರಭುಃ ॥೧೧.೨೪

ತನ್ನ ಅಣ್ಣಂದಿರರಲ್ಲಿ ಸ್ನೇಹನಿಮಿತ್ತನಾದ  ದ್ಯುವಸು, ಪತ್ನಿಯಿಂದ ಪ್ರಚೋದಿತನಾಗಿ, ಪೃಥು  ಮೊದಲಾದ ಇತರ  ಏಳು ಮಂದಿ ವಸುಗಳನ್ನು ಕೂಡಿಕೊಂಡು, ವಸಿಷ್ಠರ  ಧೇನುವನ್ನು(ನಂದಿನಿಯನ್ನು) ಕಟ್ಟಿಹಾಕುತ್ತಾನೆ. ಆಗ   ವಸಿಷ್ಠರ ಒಳಗಿರುವ ಬ್ರಹ್ಮದೇವರು ಆ ಅಷ್ಟವಸುಗಳಿಗೆ ಶಾಪವನ್ನು ನೀಡುತ್ತಾರೆ.

Saturday, October 27, 2018

Mahabharata Tatparya Nirnaya Kannada 11.16-11.21


   ಪೂರ್ವೋದಧೇಸ್ತೀರಗತೇsಬ್ಜಸಮ್ಭವೇ ಗಙ್ಗಾಯುತಃ ಪರ್ವಣಿ ಘೂರ್ಣ್ಣಿತೋsಬ್ಧಿಃ        
   ಅವಾಕ್ಷಿಪತ್ ತಸ್ಯ ತನೌ ನಿಜೋದಬಿನ್ದುಂ ಶಶಾಪೈನಮಥಾಬ್ಜಯೋನಿಃ ॥೧೧.೧೬  

ಒಮ್ಮೆ ಬ್ರಹ್ಮದೇವರು ಪೂರ್ವದಿಕ್ಕಿನ ಸಮುದ್ರ ತೀರದಲ್ಲಿ ಇರುತ್ತಿರಲು, ಹುಣ್ಣಿಮೆಯ ಕಾಲದಲ್ಲಿ ವರುಣನು ಗಂಗೆಯಿಂದ ಕೂಡಿದವನಾಗಿ ಮೇಲೆ ಉಕ್ಕಿ ಬರುತ್ತಾನೆ. ಹೀಗೆ ಉಕ್ಕಿದ ಆತ  ಬ್ರಹ್ಮದೇವರ ಶರೀರದ ಮೇಲೆ ತನ್ನ ನೀರಿನ ಹನಿಗಳನ್ನು ಸಿಡಿಸುತ್ತಾನೆ. ನಿರ್ಲಕ್ಷದಿಂದೆಸಗಿದ ಈ ಕಾರ್ಯಕ್ಕಾಗಿ  ಬ್ರಹ್ಮದೇವರು ಆತನನ್ನು ಶಪಿಸುತ್ತಾರೆ. 

ಮಹಾಭಿಷಙ್   ನಾಮ ನರೇಶ್ವರಸ್ತ್ವಂ ಭೂತ್ವಾ ಪುನಃ ಶನ್ತನುನಾಮಧೇಯಃ
ಜನಿಷ್ಯಸೇ ವಿಷ್ಣುಪದೀ ತಥೈಷಾ ತತ್ರಾಪಿ ಭಾರ್ಯ್ಯಾ ಭವತೋ ಭವಿಷ್ಯತಿ       ॥೧೧.೧೭

“ನೀನು ‘ಮಹಾಭಿಷಕ್’ ಎನ್ನುವ ರಾಜನಾಗಿ ಹುಟ್ಟುವೆ. ನಂತರ (ಮಹಾಭಿಷಕ್ ರಾಜನ ದೇಹವೀಯೋಗವಾದ ನಂತರ)  ಶಂತನು ಎಂಬ ನಾಮಧೇಯವನ್ನು ಧರಿಸಿ ಹುಟ್ಟುತ್ತೀಯ. ಹಾಗೆಯೇ, ಈ ಗಂಗೆಯೂ ಕೂಡಾ ‘ಅಲ್ಲಿಯೂ’ ನಿನ್ನ ಪತ್ನಿಯಾಗುತ್ತಾಳೆ” ಎನ್ನುವ ಶಾಪವನ್ನು ಬ್ರಹ್ಮದೇವರು ವರುಣನಿಗೆ ನೀಡುತ್ತಾರೆ.
 (ಈ ಶ್ಲೋಕದಲ್ಲಿ ಬಳಕೆಯಾದ ‘ತತ್ರಾಪಿ’ ಎನ್ನುವ ಪದ ‘ಅಲ್ಲಿಯೂ’ ಎನ್ನುವ ಅರ್ಥವನ್ನು ನೀಡುತ್ತದೆ. ಅಂದರೆ: ಅವತಾರರೂಪದಲ್ಲಿ ವರುಣ ಶನ್ತನುವಾಗಿ ಹುಟ್ಟಿದರೆ,  ಗಂಗೆ ಮೂಲರೂಪದಲ್ಲಿ ಅಲ್ಲಿಯೂ ಆತನ ಪತ್ನಿಯಾಗುತ್ತಾಳೆ ಎಂದರ್ಥ. ಜಲವನ್ನು ಸೇಚಿಸಿರುವುದರಿಂದ ಮಹಾಭಿಷಕ್ ಎನ್ನುವ ನಾಮ ಅವನಿಗಾಯಿತು).

ಶಾನ್ತೋ ಭವೇತ್ಯೇವ ಮಯೋದಿತಸ್ತ್ವಂ ತನುತ್ವಮಾಪ್ತೋsಸಿ ತತಶ್ಚ ಶನ್ತನುಃ       
ಇತೀರಿತಃ ಸೋsಥ ನೃಪೋ ಬಭೂವ ಮಹಾಭಿಷಙ್ ನಾಮ ಹರೇಃ ಪದಾಶ್ರಯಃ        ॥೧೧.೧೮

 “ ‘ಶಾಂತನಾಗು’ ಎಂದು ನನ್ನಿಂದ ಹೇಳಿಸಿಕೊಳ್ಳಲ್ಪಟ್ಟ ನೀನು, ನಿನ್ನ ಪ್ರವಾಹದ ವಿಸ್ತಾರವನ್ನು ಕಡಿಮೆ ಮಾಡಿಕೊಂಡಿರುವ ಕಾರಣದಿಂದ ‘ಶನ್ತನು’ ಎನ್ನುವ ನಾಮಧೇಯನಾಗಿ ಹುಟ್ಟುತ್ತೀಯ” ಎನ್ನುತ್ತಾರೆ ಬ್ರಹ್ಮದೇವರು. ಈ ರೀತಿಯಾಗಿ ಶಪಿಸಲ್ಪಟ್ಟ ವರುಣನು  ನಾರಾಯಣನ  ಪಾದ ಭಕ್ತನಾದ ‘ಮಹಾಭಿಷಕ್’ ಎನ್ನುವ ರಾಜನಾಗಿ ಹುಟ್ಟುತ್ತಾನೆ.

   ಸ ತತ್ರ ಭುಕ್ತ್ವಾ ಚಿರಕಾಲಮುರ್ವೀಂ ತನುಂ ವಿಹಾಯಾsಪ ಸದೋ ವಿಧಾತುಃ        
   ತತ್ರಾಪಿ ತಿಷ್ಠನ್ ಸುರವೃನ್ದಸನ್ನಿಧೌ ದದರ್ಶ ಗಙ್ಗಾಂ ಶ್ಲಥಿತಾಮ್ಬರಾಂ ಸ್ವಕಾಮ್         ॥೧೧.೧೯

ಮಹಾಭಿಷಕ್ ಎನ್ನುವ ರಾಜನು ಬಹಳಕಾಲ ಭೂಮಿಯನ್ನು ಆಳಿ, ತನ್ನ ಶರೀರವನ್ನು ಬಿಟ್ಟು ಬ್ರಹ್ಮಲೋಕವನ್ನು ಹೊಂದುತ್ತಾನೆ. ಆ ಬ್ರಹ್ಮಲೋಕದಲ್ಲಿಯೂ,  ದೇವತೆಗಳ ಸನ್ನಿಧಿಯಲ್ಲಿ ಇರುತ್ತಾ, ತನ್ನವಳೇ ಆಗಿರುವ ಗಂಗೆಯನ್ನು ಅಸ್ತವ್ಯಸ್ತವಾದ ಬಟ್ಟೆಯುಳ್ಳವಳಾಗಿದ್ದಾಗ ಕಾಣುತ್ತಾನೆ.

ಅವಾಙ್ಮುಖೇಷು ಧ್ಯುಸದಸ್ಸು ರಾಗಾನ್ನಿರೀಕ್ಷಮಾಣಂ ಪುನರಾತ್ಮಸಮ್ಭವಃ ।
ಉವಾಚ ಭೂಮೌ ನೃಪತಿರ್ಭವಾsಶು ಶಪ್ತೋ ಯಥಾ ತ್ವಂ ಹಿ ಪುರಾ ಮಯೈವ ॥೧೧.೨೦

ಗಂಗೆಯ ಬಟ್ಟೆ ಅಸ್ತವ್ಯಸ್ತವಾದಾಗ, ಉಳಿದ ಎಲ್ಲಾ ದೇವತೆಗಳು ತಮ್ಮ ತಲೆಯನ್ನು ತಗ್ಗಿಸುತ್ತಾರೆ. ಆದರೆ ಮಹಾಭಿಷಕ್ ಮಾತ್ರ ಆಕೆಯನ್ನು ಅತ್ಯಂತ ಬಯಕೆಯಿಂದ ನೋಡುತ್ತಿರುತ್ತಾನೆ. ಇದರಿಂದಾಗಿ ಆತನನ್ನು ಕುರಿತು ನಾರಾಯಣ ಸೂನುವಾದ ಬ್ರಹ್ಮದೇವರು  ಮತ್ತೆ ಹೇಳುತ್ತಾರೆ: “ಹಿಂದೆ ನನ್ನಿಂದಲೇ ಪಡೆದ ಶಾಪದಂತೆ ನೀನು ಮತ್ತೆ ಭೂಮಿಯಲ್ಲಿ ರಾಜನಾಗಿ ಹುಟ್ಟು” ಎಂದು.

  ಇತೀರಿತಸ್ತತ್ಕ್ಷಣತಃ ಪ್ರತೀಪಾದ್ ಬಭೂವ ನಾಮ್ನಾ ನೃಪತಿಃ ಸ ಶನ್ತನುಃ    
  ಅವಾಪ್ಯ ಗಙ್ಗಾಂ ದಯಿತಾಂ ಸ್ವಕೀಯಾಂ ತಯಾ ಮುಮೋದಾಬ್ದಗಣಾನ್ ಬಹೂಂಶ್ಚ       ॥೧೧.೨೧

ಈರೀತಿಯಾಗಿ ಹೇಳಲ್ಪಟ್ಟ ಆ ಮಹಾಭಿಷಕ್, ಆ ಕ್ಷಣದಲ್ಲಿಯೇ,  ಪ್ರತೀಪನೆನ್ನುವ ರಾಜನಲ್ಲಿ ಶನ್ತನು ಎನ್ನುವ ಹೆಸರುಳ್ಳವನಾಗಿ ಭೂಮಿಯಲ್ಲಿ ಹುಟ್ಟಿದನು. ಅಲ್ಲಿ ತನ್ನವಳೇ ಆಗಿರುವ ಗಂಗೆಯನ್ನು ಪತ್ನಿಯಾಗಿ ಹೊಂದಿ, ಅವಳ ಜೊತೆಗೂಡಿ ಭೂಮಿಯಲ್ಲಿ ಬಹಳ ವರ್ಷಗಳ ಕಾಲ ಕ್ರೀಡಿಸಿದನು.











ಪದ್ಯ ರೂಪ:  https://go-kula.blogspot.com/

Friday, October 26, 2018

Mahabharata Tatparya Nirnaya Kannada 11.10-11.15


ಪ್ರತೀಪಪುತ್ರತಾಮಾಪ್ಯ [1]ಬಾಹೀಕೇಷ್ವಭವತ್ ಪತಿಃ ।
ರುದ್ರೇಷು ಪತ್ರತಾಪಾಖ್ಯಃ ಸೋಮದತ್ತೋsಸ್ಯ ಚಾsತ್ಮಜಃ      ॥೧೧.೧೦

ಪ್ರತೀಪನ ಮಗನಾಗಿ ಹುಟ್ಟಿಬಂದ ಪ್ರಹ್ಲಾದ, ಪುತ್ರಿಕಾಪುತ್ರತ್ವ ನಿಯಮದಂತೆ  ಬಾಹ್ಲೀಕ[2] ದೇಶದ ರಾಜನಾದ. ಬಾಹ್ಲೀಕನ ಮಗ ಸೋಮದತ್ತ. ಈತ ಮೂಲತಃ ಏಕಾದಶ ರುದ್ರರಲ್ಲಿ ‘ಪತ್ರತಾಪ’  ಎನ್ನುವ ಹೆಸರಿನ ರುದ್ರ. (ಪತ್ರತಾಪನನ್ನು ಮೃಗವ್ಯಾಧ, ವಾಮದೇವ ಇತ್ಯಾದಿ ಹೆಸರಿನಿಂದ ಪುರಾಣಗಳು ಸಂಬೋಧಿಸುತ್ತವೆ).

ಅಜೈಕಪಾದಹಿರ್ಬುಧ್ನಿರ್ವಿರೂಪಾಕ್ಷ ಇತಿ ತ್ರಯಃ ।
ರುದ್ರಾಣಾಂ ಸೋಮದತ್ತಸ್ಯ ಬಭೂವುಃ ಪ್ರಥಿತಾಃ ಸುತಾಃ ॥೧೧.೧೧

ವಿಷ್ಣೋರೇವಾಙ್ಗತಾಮಾಪ್ತುಂಭೂರಿರ್ಭೂರಿಶ್ರವಾಃ ಶಲಃ
ಶಿವಾದಿಸರ್ವರುದ್ರಾಣಾಮಾವೇಶಾದ್ ವರತಸ್ತಥಾ         ॥ ೧೧.೧೨

ಭೂರಿಶ್ರವಾ ಅತಿಬಲಸ್ತತ್ರಾsಸೀತ್ ಪರಮಾಸ್ತ್ರವಿತ್ ।
ತದರ್ಥಂ ಹಿ ತಪಶ್ಚೀರ್ಣ್ಣಂ ಸೋಮದತ್ತೇನ ಶಮ್ಭವೇ   ॥೧೧.೧೩
ಏಕಾದಶ ರುದ್ರರಲ್ಲಿ ಮೂವರಾದ  ಅಜೈಕಪಾತ್, ಅಹಿರ್ಬುಧ್ನಿ ಮತ್ತು ವಿರೂಪಾಕ್ಷ ಎನ್ನುವ ರುದ್ರರು  ಸೋಮದತ್ತನ ಮಕ್ಕಳಾಗಿ ಹುಟ್ಟಿ ಅತ್ಯಂತ ಪ್ರಖ್ಯಾತಿಯನ್ನು ಹೊಂದಿದರು.  ಈ ಮೂವರು ನಾರಾಯಣನ ಸೇವೆಯನ್ನು ಮಾಡಲು(ಸಹಾಯ ಮಾಡಲು) ಭೂರಿ, ಭೂರಿಶ್ರವಸ್ಸು  ಮತ್ತು ಶಲಃ ಎನ್ನುವ ಹೆಸರಿನಲ್ಲಿ ಭೂಮಿಯಲ್ಲಿ ಅವತರಿಸಿದರು. ಈ ಮೂವರಲ್ಲಿ ಭೂರಿಶ್ರವಸ್ಸು ಬಹಳ ಶ್ರೇಷ್ಠನಾಗಿದ್ದನು.
ಶಿವನೂ ಸೇರಿದಂತೆ ಸಮಸ್ತ ರುದ್ರರ ಆವೇಶ ಹಾಗು ವರದಿಂದಲೂ, ಭೂರೀಶ್ರವಸ್ಸು ಅತ್ಯಂತ ಸಾಮರ್ಥ್ಯವುಳ್ಳವನೂ, ಉತ್ಕೃಷ್ಟವಾದ ಅಸ್ತ್ರವಿದ್ಯೆಯನ್ನು ಬಲ್ಲವನೂ ಆಗಿದ್ದನು. ಭೂರೀಶ್ರವನಂತಹ ಮಗನನ್ನು ಪಡೆಯಬೇಕೆಂದೇ ಸೋಮದತ್ತನು ಹಿಂದೆ ರುದ್ರನನ್ನು ಕುರಿತು ತಪಸ್ಸು ಮಾಡಿದ್ದನು.
[ಏಕಾದಶ ರುದ್ರರ ವಿವರ ಈ ಕೆಳಗಿನಂತಿದೆ. ಇವರಲ್ಲಿ ಒಬ್ಬೊಬ್ಬರಿಗೂ ಅನೇಕ ಹೆಸರುಗಳುಂಟು. ಬೇರೆಬೇರೆ ಕಡೆ ಬೇರೆಬೇರೆ ಹೆಸರುಗಳ ಉಲ್ಲೇಖವನ್ನು ನಾವು ಕಾಣುತ್ತೇವೆ].

೧. ಮೃಗವ್ಯಾಧಃ, ವಾಮದೇವಃ, [ಪತ್ರತಾಪಃ]
೬. ಪಿನಾಕಿ, ಅಪರಾಜಿತಃ , ಭೀಮಃ
೨. ಸರ್ಪಃ[ಸರ್ವಃ], ಶರ್ವಃ, ಓಜಃ[ಅಜಃ]
೭. ದಹನಃ, ಬಹುರೂಪಃ, ಉಗ್ರಃ  
೩. ನಿಋತಿಃ, ತ್ರ್ಯಮ್ಬಕಃ, ವಿರೂಪಾಕ್ಷ
೮. ಕಪಾಲಿ, ಭವಃ [ವಿಷ್ಕಂಭಃ]
೪. ಅಜೈಕಪಾತ್, ಕಪರ್ದೀ
೯. ಸ್ಥಾಣುಃ, ವೃಷಾಕಪಿಃ
೫. ಅಹಿರ್ಬುಧ್ನಿಃ, ಶಂಭುಃ
೧೦. ಭಗಃ, ರೈವತಃ

೧೧. ಈಶ್ವರಃ, ಹರಃ, ಮಹಾದೇವಃ


ದತ್ತೋ ವರಶ್ಚ ತೇನಾಸ್ಯ ತ್ವತ್ ಪ್ರತೀಪಾಭಿಭೂತಿಕೃತ್ ।
ಬಲವೀರ್ಯ್ಯಗುಣೋಪೇತೋ ನಾಮ್ನಾ ಭೂರಿಶ್ರವಾಃ ಸುತಃ     ॥೧೧.೧೪

ತಪಸ್ಸಿಗೆ ಮೆಚ್ಚಿದ ರುದ್ರನಿಂದ ಸೋಮದತ್ತನಿಗೆ ‘ಶತ್ರುಗಳಿಗೆ ಪರಾಜಯವನ್ನು ಉಂಟುಮಾಡುವ, ಬಲ-ವೀರ್ಯ-ಗುಣದಿಂದ ಕೂಡಿದ, ಉದ್ದೇಶವನ್ನು ಈಡೇರಿಸುವ, ಖ್ಯಾತಿಯನ್ನು ಹೆಚ್ಚಿಸುವ   ‘ಭೂರಿಶ್ರವಾಃ’ ಎನ್ನುವ ಮಗನು ಹುಟ್ಟುತ್ತಾನೆ’ ಎನ್ನುವ ವರವು ಕೊಡಲ್ಪಟ್ಟಿತು.

ಭವಿಷ್ಯತಿ ಮಯಾssವಿಷ್ಟೋ ಯಜ್ಞಶೀಲ ಇತಿ ಸ್ಮ ಹ ।
          ತೇನ ಭೂರಿಶ್ರವಾ ಜಾತಃ ಸೋಮದತ್ತಸುತೋ ಬಲೀ ॥೧೧.೧೫

‘ನನ್ನ ಆವೇಶವುಳ್ಳವನಾಗಿ ನಿರಂತರವಾದ ಯಜ್ಞವನ್ನು ನಿನ್ನ ಮಗ  ಮಾಡುತ್ತಿರುತ್ತಾನೆ’ ಎನ್ನುವ ರುದ್ರದೇವರ  ವರದಂತೆ  ಸೋಮದತ್ತನಿಗೆ ಬಲಿಷ್ಠನಾದ   ‘ಭೂರಿಶ್ರವಸ್’ ಎನ್ನುವ ಹೆಸರುಳ್ಳ ಮಗನು ಹುಟ್ಟುತ್ತಾನೆ .



[1] ಬಾಹ್ಲೀಕೇ
[2] ಇಂದು ಭಾರತಕ್ಕೆ ಸೇರಿರುವ ಪಂಜಾಬ್ ಪ್ರಾಂತ್ಯ