ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, November 14, 2018

Mahabharata Tatparya Nirnaya Kannada 11.67-11.72


ಕಾಲೇ ಚ ತಸ್ಮಿನ್ ಪೃಷತೋsನಪತ್ಯೋ ವನೇ ತು ಪಾಞ್ಚಾಲಪತಿಶ್ಚಚಾರ ।
ತಪೋ ಮಹತ್ ತಸ್ಯ ತಥಾ ವರಾಪ್ಸರಾವಲೋಕನಾತ್ ಸ್ಕನ್ದಿತಮಾಶು ರೇತಃ          ೧೧.೬೭

ದ್ರೋಣಾಚಾರ್ಯರು ಹುಟ್ಟಿದ ಕಾಲದಲ್ಲೇ   ಮಕ್ಕಳಿಲ್ಲದ ‘ಪೃಶತ’ ಎನ್ನುವ ಪಾಂಚಾಲ ದೇಶದ ರಾಜನು  ಮಕ್ಕಳನ್ನು ಪಡೆಯಲು ಕಾಡಿನಲ್ಲಿ ಮಹತ್ತಾದ ತಪಸ್ಸನ್ನು ಮಾಡಿದನು. ಆತ ಒಮ್ಮೆ ಊರ್ವಶಿಯನ್ನು  ನೋಡಿದ್ದರಿಂದ ಆತನ ರೇತಸ್ಸು ಜಾರಿಬಿತ್ತು.  

ಸ ತದ್ ವಿಲಜ್ಜಾವಶತಃ ಪದೇನ ಸಮಾಕ್ರಮತ್ ತಸ್ಯ ಬಭೂವ ಸೂನುಃ
ಹಹೂ ತು ನಾಮ್ನಾ ಸ ವಿರಿಞ್ಚಗಾಯಕೋ ನಾಮ್ನಾssವಹೋ ಯೋ ಮರುತಾಂ ತದಂಶಯುಕ್೧೧.೬೮

ಪೃಶತ್ ರಾಜನು ವಿಶೇಷವಾದ ನಾಚಿಕೆಯಿಂದ  ಜಾರಿ ಬಿದ್ದ ರೇತಸ್ಸನ್ನು ತನ್ನ ಪಾದದಿಂದ ಮುಚ್ಚಿದನು. ಆ ರೇತಸ್ಸಿನಿಂದ  ಅವನಿಗೆ ‘ಹಹೂ’ ಎಂಬ ಹೆಸರಿನ, ಬ್ರಹ್ಮದೇವರ ಗಾಯಕನಾದ ಗಂಧರ್ವನು ಮಗನಾಗಿ ಹುಟ್ಟಿದನು. ಆತನು  ‘ಆವಹ’ನೆನ್ನುವ  ಮರುತ್ ದೇವತೆಯ ಅಂಶವುಳ್ಳವನಾಗಿದ್ದನು. (ಆವಹನೆನ್ನುವ  ಮರುತ್ ದೇವತೆಯ ಅಂಶವುಳ್ಳವನಾಗಿ ಹುಟ್ಟಿದನು)

ಸ ದ್ರೋಣತಾತಾತ್ ಸಮವಾಪ ವೇದಾನಸ್ತ್ರಾಣಿ ವಿದ್ಯಾಶ್ಚ ತಥಾ ಸಮಸ್ತಾಃ ।
ದ್ರೋಣೇನ ಯುಕ್ತಃ ಸ ತದಾ ಗುರೋಃ ಸುತಂ ಸಹೈವ ನೌ ರಾಜ್ಯಮಿತಿ ಹ್ಯವಾದೀತ್           ೧೧.೬೯

ಈ ರೀತಿ ಹುಟ್ಟಿದ ಪೃಶತ್ ರಾಜನ ಮಗನು ದ್ರೋಣಾಚಾರ್ಯರ ಅಪ್ಪನಾದ ಭರದ್ವಾಜನಿಂದ, ದ್ರೋಣರೊಂದಿಗೆ ಕೂಡಿ,  ವೇದಗಳನ್ನೂ , ಅಸ್ತ್ರಗಳನ್ನೂ , ಸಮಸ್ತ ವಿದ್ಯೆಗಳನ್ನೂ ಕೂಡಾ ಹೊಂದಿದನು. ವಿದ್ಯಾಭ್ಯಾಸ  ಕಾಲದಲ್ಲಿ ಅವನು ತನ್ನ ಗುರುಗಳ ಮಗನಾದ ದ್ರೋಣಾಚಾರ್ಯರಿಗೆ  ‘ರಾಜ್ಯದ ಭೋಗವೂ ನಮ್ಮಿಬ್ಬರಿಗೆ ಸಮನಾಗಿರಲಿ(ಒಟ್ಟಿಗೆ)’ ಎಂದು ಹೇಳಿದ್ದನಷ್ಟೇ. (ಅಂದರೆ: ನನ್ನ ರಾಜ್ಯದಲ್ಲಿ ಅರ್ಧ ರಾಜ್ಯವು ನಿನಗೆ ಎನ್ನುವ ಮಾತನ್ನಾಡಿದ್ದನು).

ಪದೇ ದ್ರುತತ್ವಾದ್ ದ್ರುಪದಾಭಿಧೇಯಃ ಸ ರಾಜ್ಯಮಾಪಾಥ ನಿಜಾಂ ಕೃಪೀಂ ಸಃ ।
ದ್ರೋಣೋsಪಿ ಭಾರ್ಯ್ಯಾಂ ಸಮವಾಪ್ಯ ಸರ್ವಪ್ರತಿಗ್ರಹೋಜ್ಝಶ್ಚ ಪುರೇsವಸತ್ ಸುಖೀ              ೧೧.೭೦

ಕಾಲಿನಿಂದ ಮುಚ್ಚಿದ್ದರಿಂದ ಪೃಶತ್ ರಾಜನ ಮಗನು ‘ದ್ರುಪದ’ ಎಂಬ ಹೆಸರುಳ್ಳವನಾದನು. ಆತನು ತಂದೆಯ ಕಾಲದ ನಂತರ ಪಾಂಚಾಲ ದೇಶದ ರಾಜನಾದನು. ಇತ್ತ ದ್ರೋಣಾಚಾರ್ಯರು ತನ್ನವಳೇ ಆದ, ಕೃಪಾಚಾರ್ಯರ ತಂಗಿಯನ್ನು ಹೆಂಡತಿಯನ್ನಾಗಿ ಹೊಂದಿ, ಹಸ್ತಿನಾವತಿಯಲ್ಲಿ, ಎಲ್ಲಾ ಪ್ರತಿಗ್ರಹಗಳಿಂದ ವಿರಹಿತರಾಗಿ  (ಅಂದರೆ ಯಾವುದೇ ದಾನ ಮೊದಲಾದುವುಗಳನ್ನು ತೆಗೆದುಕೊಳ್ಳದೇ), ಸುಖವಾಗಿ ವಾಸ ಮಾಡಿದರು.

ಸಿಲೋಞ್ಚವೃತ್ತ್ಯೈವ ಹಿ ವರ್ತ್ತಯನ್ ಸ ಧರ್ಮ್ಮಂ ಮಹಾನ್ತಂ ವಿರಜಂ ಜುಷಾಣಃ ।
ಉವಾಸ ನಾಗಾಖ್ಯಪುರೇ ಸಖಾ ಸ ದೇವವ್ರತಸ್ಯಾಥ ಕೃಪಸ್ಯ ಚೈವ                        ೧೧.೭೧

ದ್ರೋಣಾಚಾರ್ಯರು ‘ಸಿಲೋಞ್ಚ’ ಎನ್ನುವ ಧರ್ಮವನ್ನು ಆಯ್ಕೆ ಮಾಡಿಕೊಂಡು, ಅದರಿಂದಲೇ ಜೀವನ ಸಾಗಿಸುತ್ತಾ, ರಜೋಗುಣದ ಸಂಪರ್ಕ ಇಲ್ಲದ , ಪರಮಾತ್ಮನಿಗೆ  ಪ್ರೀತಿಕರವಾದ ಧರ್ಮವನ್ನು ಮಾಡುತ್ತಾ, ಹಸ್ತಿನಾವತಿಯಲ್ಲಿ ವಾಸಮಾಡಿದರು. ಅವರು ರಾಜಕುಮಾರನಾದ ದೇವವ್ರತನ ಮತ್ತು ಕೃಪಾಚಾರ್ಯರ ಗೆಳೆಯನಾಗಿಯೂ ಇದ್ದರು.

ತೇಷಾಂ ಸಮಾನೋ ವಯಸಾ ವಿರಾಟಸ್ತ್ವಭೂದ್ಧಹಾ ನಾಮ ವಿಧಾತೃಗಾಯಕಃ ।
ಮರುತ್ಸು ಯೋ ವಿವಹೋ ನಾಮ ತಸ್ಯಾಪ್ಯಂಶೇನ ಯುಕ್ತೋ ನಿಜಧರ್ಮ್ಮವರ್ತ್ತೀ    ೧೧.೭೨

ಅದೇ ರೀತಿ ಇವರೆಲ್ಲರಿಗೆ(ದೇವವ್ರತ, ಕೃಪ, ದ್ರೋಣ ಮತ್ತು ದ್ರುಪದ ಇವರಿಗೆ) ವಯಸ್ಸಿನಿಂದ ಸಮಾನನಾದವನಾಗಿ ವಿರಾಟರಾಜನಿದ್ದನು. ಮೂಲರೂಪದಲ್ಲಿ ಆತ ‘ಹಹಾ’ ಎನ್ನುವ ಹೆಸರಿನ ಬ್ರಹ್ಮದೇವರ ಹಾಡುಗಾರ(ಗಂಧರ್ವ). ವಿರಾಟನಲ್ಲಿ ‘ವಿವಹ’ ಎನ್ನುವ ಮರುತ್ ದೇವತೆಯ ಆವೇಶವಿತ್ತು (ಅಂಶದಿಂದ ಕೂಡಿದವನಾಗಿದ್ದ). ವಿರಾಟ ತನ್ನ ಧರ್ಮದಲ್ಲಿ ತೊಡಗಿದವನಾಗಿದ್ದನು.[ವಿರಾಟನ ಹುಟ್ಟಿನ ಕುರಿತಾದ ವಿವರವನ್ನು ಈಗಾಗಲೇ ಹತ್ತನೇ ಅಧ್ಯಾಯದಲ್ಲಿ ನೋಡಿದ್ದೇವೆ].

ಪದ್ಯ ರೂಪ:  https://go-kula.blogspot.com/



Tuesday, November 13, 2018

Mahabharata Tatparya Nirnaya Kannada 11.64-11.66


ಯದಾ ಹಿ ಜಾತಃ ಸ ಕೃಪಸ್ತದೈವ ಬೃಹಸ್ಪತೇಃ ಸೂನುರಗಾಚ್ಚ ಗಙ್ಗಾಮ್ ।
ಸ್ನಾತುಂ ಘೃತಾಚೀಂ ಸ ದದರ್ಶ ತತ್ರ ಶ್ಲಥದ್ದುಕೂಲಾಂ ಸುರವರ್ಯ್ಯಕಾಮಿನೀಮ್    ॥೧೧.೬೪

ಯಾವಾಗ ಕೃಪಾಚಾರ್ಯರ ಜನನವಾಯಿತೋ ಅದೇ ಕಾಲದಲ್ಲಿ ಬೃಹಸ್ಪತಿಯ ಮಗನಾದ ಭರದ್ವಾಜರು  ಸ್ನಾನ ಮಾಡಲು ಗಂಗಾನದಿಯನ್ನು ಕುರಿತು ತೆರಳಿದರು. ಅಲ್ಲಿ ದೇವತೆಗಳ ಅಪ್ಸರೆಯಾದ, ಬಟ್ಟೆ ಜಾರಿದ ಸ್ಥಿತಿಯಲ್ಲಿದ್ದ   ಘೃತಾಚೀಯನ್ನು ಕಂಡರು.

ತದ್ದರ್ಶನಾತ್ ಸ್ಕನ್ನಮಥೇನ್ದ್ರಿಯಂ ಸ ದ್ರೋಣೇ ದಧಾರಾsಶು ತತೋsಭವತ್ ಸ್ವಯಮ್ ।
ಅಮ್ಭೋಜಜಾವೇಶಯುತೋ ಬೃಹಸ್ಪತಿಃ ಕರ್ತ್ತುಂ ಹರೇಃ ಕರ್ಮ್ಮ ಬುವೋ ಭರೋದ್ಧೃತೌ    ॥೧೧.೬೫

ಘೃತಾಚೀಯನ್ನು ನೋಡಿದ್ದರಿಂದ ಜಾರಿದ ತನ್ನ ರೇತಸ್ಸನ್ನು ಭರಧ್ವಾಜರು ಕೊಳಗದಲ್ಲಿ ಹಿಡಿದರು. ಅದರಿಂದ ಬ್ರಹ್ಮದೇವರ ಆವೇಶದಿಂದ ಕೂಡಿರುವ ಬೃಹಸ್ಪತಿಯು, ಭೂಭಾರ ಹನನ ಕಾರ್ಯದಲ್ಲಿ ಪರಮಾತ್ಮನ ಸೇವೆಯನ್ನು ಮಾಡಲು ತಾನೇ ಹುಟ್ಟಿ ಬಂದರು.

ದ್ರೋಣೇತಿನಾಮಾಸ್ಯ ಚಕಾರ ತಾತೋ ಮುನಿರ್ಭರದ್ವಾಜ ಉತಾಸ್ಯ ವೇದಾನ್ ।
ಅಧ್ಯಾಪಯಾಮಾಸ ಸಶಾಸ್ತ್ರಸಙ್ಘಾನ್ ಸರ್ವಜ್ಞತಾಮಾಪ ಚ ಸೋsಚಿರೇಣ               ॥೧೧.೬೬

ಈರೀತಿ ಅವತರಿಸಿದ ಬೃಹಸ್ಪತಿಗೆ ಮುನಿ ಭರದ್ವಾಜರು  ‘ದ್ರೋಣ’ ಎಂಬ ಹೆಸರನ್ನು ಇಟ್ಟರು. ಭರದ್ವಾಜರು ದ್ರೋಣನಿಗೆ ಶಾಸ್ತ್ರಗಳಿಂದ ಕೂಡಿದ ವೇದಗಳನ್ನು ಬೋಧಿಸಿದರು. ದ್ರೋಣನು  ಅತಿ ಶೀಘ್ರದಲ್ಲಿ ಎಲ್ಲವನ್ನೂ ಕಲಿತು  ಸರ್ವಜ್ಞತ್ವವನ್ನು ಹೊಂದಿದನು.

ಪದ್ಯ ರೂಪ:  https://go-kula.blogspot.com/

Mahabharata Tatparya Nirnaya Kannada 11.56-11.63


ಯದೈವ ಗಙ್ಗಾ ಸುಷುವೇsಷ್ಟಮಂ ಸುತಂ ತದೈವ ಯಾತೋ ಮೃಗಯಾಂ ಸ ಶನ್ತನುಃ ।
ಶರದ್ವತೋ ಜಾತಮಪಶ್ಯದುತ್ತಮಂ ವನೇ ವಿಸೃಷ್ಟಂ ಮಿಥುನಂ ತ್ವಯೋನಿಜಮ್ ॥೧೧.೫೬

ಗಂಗೆಯು ಎಂಟನೆಯ ಮಗನನ್ನು ಹೆತ್ತ ಸಮಯದಲ್ಲೇ  ಶನ್ತನುವು ಭೇಟೆಗೆಂದು  ಕಾಡಿಗೆ ತೆರಳಿದ್ದ. ಆಗ ‘ಶರದ್ವಾನ್ ’  ಎಂಬ ಋಷಿಯಿಂದ ಹುಟ್ಟಿದ, ಕಾಡಿನಲ್ಲಿ ಬಿಡಲ್ಪಟ್ಟ, ಮಾತೃ ಯೋನಿಯಲ್ಲಿ ಜನಿಸದ  ಜೋಡಿಯನ್ನು(ಅವಳಿ ಮಕ್ಕಳನ್ನು) ಆತ ಕಾಣುತ್ತಾನೆ.

ಶರದ್ವಾಂಸ್ತು ತಪಃ ಕುರ್ವನ್ ದದರ್ಶ ಸಹಸೋರ್ವಶೀಮ್ ।
ಚಸ್ಕನ್ದ ರೇತಸ್ತಸ್ಯಾಥ ಶರಸ್ತಮ್ಭೇ ತತೋSಭವತ್               ॥೧೧.೫೭


ವಿಷ್ಕಮ್ಭೋ ನಾಮ ರುದ್ರಾಣಾಂ ಭೂಭಾರಹರಣೇsಙ್ಗತಾಮ್ ।
ಹರೇಃ ಪ್ರಾಪ್ತುಂ ತಥಾ ತಾರಾ ಭಾರ್ಯ್ಯಾ ಯಾ ಹಿ ಬೃಹಸ್ಪತೇಃ         ॥೧೧.೫೮


‘ಶರದ್ವಾನ್’ ಎಂಬುವ ಋಷಿ ತಪಸ್ಸು ಮಾಡುತ್ತಿರುವಾಗ , ಆಕಸ್ಮಿಕವಾಗಿ  ಊರ್ವಶಿಯನ್ನು ಕಾಣುತ್ತಾನೆ. ಆಕೆಯನ್ನು ಕಂಡಾಗ ಅವನ ರೇತಸ್ಸು ಹುಲ್ಲಿನ ಮೆದೆಯಲ್ಲಿ ಜಾರಿ ಬೀಳುತ್ತದೆ. ಈರೀತಿ ಜಾರಿದ ರೇತಸ್ಸಿನ ದೆಸೆಯಿಂದ ರುದ್ರರಲ್ಲಿ ಒಬ್ಬನಾದ  ‘ವಿಷ್ಕಮ್ಭ’ ಎನ್ನುವ ರುದ್ರನು ಪರಮಾತ್ಮನ ಭೂಭಾರ ಹರಣ ಕಾರ್ಯದಲ್ಲಿ  ಸಹಾಯಕತ್ವವನ್ನು ಹೊಂದುವುದಕ್ಕಾಗಿ ಹುಟ್ಟಿ ಬರುತ್ತಾನೆ. ಹಾಗೆಯೇ ಬೃಹಸ್ಪತಿಯ ಪತ್ನಿ ತಾರಾದೇವಿಯೂ ಕೂಡಾ ಅವನೊಂದಿಗೆ ಹುಟ್ಟಿ ಬರುತ್ತಾಳೆ.

ತಾವುಭೌ ಶನ್ತನುರ್ದ್ದೃಷ್ಟ್ವಾ ಕೃಪಾವಿಷ್ಟಃ ಸ್ವಕಂ ಗೃಹಮ್ ।
ನಿನಾಯ ನಾಮ ಚಕ್ರೇ ಚ ಕೃಪಾಯಾ ವಿಷಯೌ ಯತಃ ೧೧.೫೯

ಕೃಪಃ ಕೃಪೀತಿ ಸ ಕೃಪಸ್ತಪೋ ವಿಷ್ಣೋಶ್ಚಕಾರ ಹ
ತಸ್ಯ ಪ್ರೀತಸ್ತದಾ ವಿಷ್ಣುಃ ಸರ್ವಲೋಕೇಶ್ವರೇಶ್ವರಃ ೧೧.೬೦

ಶನ್ತನುವು ಆ ಇಬ್ಬರು ಮಕ್ಕಳನ್ನು ನೋಡಿ ಮರುಕದಿಂದ ಆವಿಷ್ಟನಾಗಿ (ಕೃಪಾವಿಷ್ಟನಾಗಿ) ಅವರನ್ನು  ತನ್ನ ಅರಮನೆಗೆ ಕೊಂಡೊಯ್ಯುತ್ತಾನೆ. ಯಾವ ಕಾರಣದಿಂದ ಆ ಮಕ್ಕಳಿಬ್ಬರು ತನ್ನ ಕೃಪೆಗೆ ವಿಷಯರಾದರೋ, ಆ ಕಾರಣದಿಂದ ಅವರಿಗೆ ಆತ ‘ಕೃಪ’ ಮತ್ತು ‘ಕೃಪಿ’ ಎನ್ನುವ ಹೆಸರನ್ನಿಡುತ್ತಾನೆ . ಆ ಕೃಪನು ಮುಂದೆ  ವಿಷ್ಣುಸಂಬಂಧಿಯಾದ ತಪಸ್ಸನ್ನು ಮಾಡುತ್ತಾನೆ. ಆಗ ಎಲ್ಲಾ  ಲೋಕಕ್ಕೂ ಒಡೆಯನಾದ ವಿಷ್ಣುವು ಅವನಿಗೆ ಪ್ರೀತನಾಗುತ್ತಾನೆ.

ಪ್ರಾದಾದೇಷ್ಯತ್ಸಪ್ತರ್ಷಿತ್ವಮಾಯುಃ ಕಲ್ಪಾನ್ತಮೇವ ಚ ।
ಸ ಶನ್ತನುಗೃಹೇ ತಿಷ್ಠನ್ ದೇವವ್ರತಸಖಾsಭವತ್ ೧೧.೬೧

ಪ್ರಸನ್ನನಾದ ವಿಷ್ಣುವು, ‘ಮುಂದೆ ಬರುವ ಸಪ್ತರ್ಷಿಗಳಲ್ಲಿ ಒಬ್ಬನಾಗುವಿಕೆ’ಯ ವರವನ್ನೂ^,  ಅಲ್ಲದೆ, ಕಲ್ಪ ಮುಗಿಯುವ ತನಕದ ಆಯುಷ್ಯವನ್ನೂ ಕೂಡಾ ಅವನಿಗೆ ಕೊಟ್ಟನು. ಆ ಕೃಪನು ಶನ್ತನು ಮನೆಯಲ್ಲೇ ಇದ್ದು, ದೇವವ್ರತನ ಗೆಳೆಯನಾದನು.
[^ಈ ಅಂಶ ಮಹಾಭಾರತದಲ್ಲಿ ವಿವರಿಸಿಲ್ಲವಾದರೂ ಕೂಡಾ, ಬೇರೆಬೇರೆ ಪುರಾಣಗಳಲ್ಲಿ  ಈ ಕುರಿತು ಹೇಳಲಾಗಿದೆ]

ಪುತ್ರವಚ್ಛನ್ತನೋಶ್ಚಾsಸೀತ್ ಸ ಚ ಪುತ್ರವದೇವ ತತ್ ।
ಮಿಥುನಂ ಪಾಲಯಾಮಾಸ ಸ ಕೃಪೋsಸ್ತ್ರಾಣ್ಯವಾಪ ಚ ॥೧೧.೬೨


ಸರ್ವವೇದಾನಧಿಜಗೌ ಸರ್ವಶಾಸ್ತ್ರಾಣಿ ಕೌಶಿಕಾತ್

ತತ್ವಜ್ಞಾನಂ ತಥಾ ವ್ಯಾಸಾದಾಪ್ಯ ಸರ್ವಜ್ಞತಾಂ ಗತಃ        ॥೧೧.೬೩

ಕೃಪನು  ಶನ್ತನುವಿಗೆ ಮಗನಂತೆಯೇ ಆದನು. ಶನ್ತನುವಾದರೋ, ಈ ಎರಡು ಜೋಡಿ ಜೀವಗಳನ್ನು ತನ್ನ ಮಕ್ಕಳಂತೆಯೇ ಪಾಲನೆ ಮಾಡಿದನು. [ಶಂತನು  ಕ್ಷತ್ರಿಯ, ಇವರು ಬ್ರಾಹ್ಮಣರು. ಆದರೆ ಅವರೆಲ್ಲರೂ ಒಟ್ಟಿಗೆ ಇರಲು ಆಗ ಯಾವ ಸಮಸ್ಯೆಯೂ ಇರಲಿಲ್ಲ. ಅವರ ಆಚರಣೆ ಅವರಿಗೆ. ಇವರ ಆಚರಣೆ ಇವರಿಗೆ. ಇದು ನಮ್ಮ ಪ್ರಾಚೀನ ಸಂಸ್ಕೃತಿ. ಇದು ನಿಜವಾದ ಜಾತ್ಯಾತೀಯತೆ] ಆ ಕೃಪನು ಕೌಶಿಕನಿಂದ ಅಸ್ತ್ರಗಳನ್ನು ಪಡೆದನು.  ಸರ್ವ ವೇದಗಳನ್ನೂ, ಸರ್ವ ಶಾಸ್ತ್ರಗಳನ್ನೂ ಅಧ್ಯಯನ ಮಾಡಿದನು. ಹಾಗೆಯೇ, ವೇದವ್ಯಾಸರಿಂದ ತತ್ತ್ವಜ್ಞಾನವನ್ನು ಹೊಂದಿ,   ಸರ್ವಜ್ಞನೆನಿಸಿದನು.

[ಗೌತಮೋ Sಪಿ ತತೋSಭ್ಯೇತ್ಯ ಧನುರ್ವೇದಪರೋSಭವತ್’ (ಮಹಾಭಾರತ: ಉತ್ತರದ ಪಾಠ ೧೨೯.೧೯ ). ಕೃಪೋSಪಿ ಚ ತದಾ ರಾಜನ್ ಧನುರ್ವೇದಪರೋSಭವತ್(ದಾಕ್ಷಿಣಾತ್ಯಪಾಠ ೧೪೦.೨೯) ಎರಡೂ ಪಾಠದಲ್ಲೂ ಒಂದೊಂದು ದೋಷವಿದ್ದಂತೆ ಕಾಣುತ್ತದೆ. ನಿಜವಾದ ಪಾಠ ಹೀಗಿರಬಹುದು:  ಕೌಶಿಕೋSಪಿ ತದಾ ರಾಜನ್ ಧನುರ್ವೇದಪರೋSಭವತ್ ಚತುರ್ವೇದಂ ಧನುರ್ವೇದಂ ಶಾಸ್ತ್ರಾಣಿ ವಿವಿಧಾನಿ ಚ | ನಿಖಿಲೇನಾಸ್ಯ ತತ್ ಸರ್ವಂ ಗುಹ್ಯಮಾಖ್ಯಾತವಾಂಸ್ತದಾ’ . ಕೌಶಿಕ ಅಂದರೆ ವಿಶ್ವಾಮಿತ್ರ. ಆತ ಆಗಲೇ ಧನುರ್ವೇದಪರನಾಗಿದ್ದನು. ನಾಲ್ಕುತರಹದ ಧನುರ್ವೇದವನ್ನು, ಸಮಗ್ರ ರಹಸ್ಯವನ್ನು ಕೌಶಿಕ ಕೃಪನಿಗೆ ಹೇಳಿದನು. ಈ ರೀತಿ ಸಂಭಾವ್ಯ ಪ್ರಾಚೀನ ಪಾಠವಿರಬಹುದು].

ಪದ್ಯ ರೂಪ:  https://go-kula.blogspot.com/