ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, December 10, 2018

Mahabharata Tatparya Nirnaya Kannada 11.131-11.138


ಇತೀರಿತೇsಸ್ತ್ವಿತ್ಯುದಿತಸ್ತಯಾsಗಮತ್ ಕೃಷ್ಣೋsಮ್ಬಿಕಾಂ ಸಾ ತು ಭಿಯಾ ನ್ಯಮೀಲಯತ್ ।
ಅಭೂಚ್ಚ ತಸ್ಯಾಂ ಧೃತರಾಷ್ಟ್ರನಾಮಕೋ ಗನ್ಧರ್ವರಾಟ್ ಪವನಾವೇಶಯುಕ್ತಃ               ॥ ೧೧.೧೩೧

ಈರೀತಿಯಾಗಿ ಹೇಳಿ, ತಾಯಿ ಸತ್ಯವತಿಯಿಂದ ‘ಆಯಿತು’ ಎಂದು ಹೇಳಲ್ಪಟ್ಟ ಕೃಷ್ಣದ್ವೈಪಾಯನರು,  ಅಂಬಿಕೆಯನ್ನು ಕುರಿತು ತೆರಳಿದರು. ಅವಳಾದರೋ, ಆ ಅತಿಭಯಂಕರವಾಗಿ ಕಾಣುತ್ತಿದ್ದ ಅವರ ರೂಪವನ್ನು ಕಂಡು, ಭಯದಿಂದ ತನ್ನ ಕಣ್ಗಳನ್ನು ಮುಚ್ಚಿಕೊಂಡಳು. ಇದರಿಂದಾಗಿ ಅವಳಲ್ಲಿ ‘ಧೃತರಾಷ್ಟ್ರ’ ಎಂದೇ ಹೆಸರಿರುವ ಗಂಧರ್ವನು, ವಾಯುದೇವರ ಆವೇಶವುಳ್ಳವನಾಗಿ ಹುಟ್ಟಿದನು.

ಸ ಮಾರುತಾವೇಶಬಲಾದ್ ಬಲಾಧಿಕೋ ಬಭೂವ ರಾಜಾ ಧೃತರಾಷ್ಟ್ರನಾಮಾ।
ಅದಾದ್ ವರಂ ಚಾಸ್ಯ ಬಲಾಧಿಕತ್ವಂ ಕೃಷ್ಣೋsನ್ಧ ಆಸೀತ್ ಸ ತು ಮಾತೃದೋಷತಃ ॥ ೧೧.೧೩೨

ಹೀಗೆ  ಧೃತರಾಷ್ಟ್ರ; ಎಂದು ಹೆಸರನ್ನು ಪಡೆದ ಆ  ರಾಜನು, ಮುಖ್ಯಪ್ರಾಣನ ಆವೇಶದಿಂದಾಗಿ  ಬಲಾಧಿಕ್ಯವುಳ್ಳವನಾದನು. ಅವನಿಗೆ ವೇದವ್ಯಾಸರು ‘ಬಲಾಧಿಕತ್ವ ರೂಪವಾದ’  ವರವನ್ನೂ ಕೊಟ್ಟರು. ಅವನಾದರೋ, ತಾಯಿಯ ತಪ್ಪಿನಿಂದಾಗಿ (ವೇದವ್ಯಾಸರನ್ನು ಸೇರುವ ಸಮಯದಲ್ಲಿ ಕಣ್ಗಳನ್ನು ಮುಚ್ಚಿದ್ದರಿಂದ) ಕುರುಡನಾಗಿ ಹುಟ್ಟಿದನು.
[ಮಹಾಭಾರತದ ಆಶ್ರಮವಾಸಿಕಪರ್ವದಲ್ಲಿ(೩೩.೮) ವೇದವ್ಯಾಸರು ಗಾಂಧಾರಿಯನ್ನು ಕುರಿತು ಮಾತನಾಡುತ್ತಾ, ‘ಧೃತರಾಷ್ಟ್ರ ಎಂಬ ಗಂಧರ್ವ  ಅಂಬಿಕೆಯಲ್ಲಿ ಅದೇ ಹೆಸರಿನಿಂದ ಹುಟ್ಟಿದ್ದಾನೆ ಎನ್ನುವ ಮಾತನ್ನು ಹೇಳುವುದನ್ನು ನಾವು ಕಾಣುತ್ತೇವೆ: ‘ಗಂಧರ್ವರಾಜೋ ಯೋ ಧೀಮಾನ್ ಧೃತರಾಷ್ಟ್ರ ಇತಿ ಶ್ರುತಃ। ಸ ಏವ ಮಾನುಷೇ ಲೋಕೇ ಧೃತರಾಷ್ಟ್ರಃ ಪತಿಸ್ತವ’ ಆದರೆ ಮಹಾಭಾರತದ ಆದಿಪರ್ವದಲ್ಲಿ(೬೮.೮೩-೮೪)  ಅರಿಷ್ಟಾಯಾಸ್ತು ಯಃ ಪುತ್ರೋ ಹಂಸ ಇತ್ಯಭಿವಿಶ್ರುತಃ । ಸ ಗಂಧರ್ವಪತಿರ್ಜಜ್ಞೇ ಕುರುವಂಶವಿವರ್ಧನಃ । ಧೃತರಾಷ್ಟ್ರ ಇತಿ ಖ್ಯಾತಃ ಕೃಷ್ಣದ್ವೈಪಾಯನಾತ್ಮಜಃ’ ಎಂದು ಹೇಳುತ್ತಾ, ಆ ಗಂಧರ್ವನ ಹೆಸರು ‘ಹಂಸ’ ಎಂದಿದ್ದಾರೆ.  ಇಲ್ಲಿ ನಾವು ತಿಳಿಯಬೇಕಾದ ಅಂಶ ಏನೆಂದರೆ: ಧೃತರಾಷ್ಟ್ರ ಎನ್ನುವುದು ಹಂಸದಲ್ಲಿ ಒಂದು ಜಾತಿಯಾಗಿರುವುದರಿಂದ  ಆದಿಪರ್ವದಲ್ಲಿ ಪರ್ಯಾಯ ಪದವಾಗಿ ಆತನನ್ನು ‘ಹಂಸ’ ಎಂದು ಕರೆದಿದ್ದಾರೆ. ಆದರೆ  ಮೂಲತಃ ಆ ಗಂಧರ್ವನ ಹೆಸರು ‘ಧೃತರಾಷ್ಟ್ರ’. ಹೀಗಾಗಿ  ಈ ಎರಡು ವಿವರಣೆ ಪರಸ್ಪರ ಅವಿರುದ್ಧ]

ಜ್ಞಾತ್ವಾ ತಮನ್ಧಂ ಪುನರೇವ ಕೃಷ್ಣಂ ಮಾತಾsಬ್ರವೀಜ್ಜನಯಾನ್ಯಂ ಗುಣಾಢ್ಯಮ್ ।
ಅಮ್ಬಾಲಿಕಾಯಾಮಿತಿ ತತ್ ತಥಾsಕರೋತ್ ಭಯಾತ್ತು ಸಾ ಪಾಣ್ಡುರಭೂನ್ಮೃಷಾದೃಕ್ ॥ ೧೧.೧೩೩

ಪರಾವಹೋ ನಾಮ ಮರುತ್ ತತೋsಭವದ್ ವರ್ಣ್ಣೇನ ಪಾಣ್ಡುಃ ಸ ಹಿ ನಾಮತಶ್ಚ ।
ಸ ಚಾsಸ ವೀರ್ಯ್ಯಾಧಿಕ ಏವ ವಾಯೋರಾವೇಶತಃ ಸರ್ವಶಸ್ತ್ರಾಸ್ತ್ರವೇತ್ತಾ                        ೧೧.೧೩೪

ಸತ್ಯವತಿಯು ಅಂಬಿಕೆಯ ಪುತ್ರ  ಕುರುಡ ಎಂಬುದನ್ನು ತಿಳಿದು, ಮತ್ತೆ ವೇದವ್ಯಾಸರನ್ನು ಕುರಿತು “ಇನ್ನೊಬ್ಬ ಗುಣವಂತನಾದ ಮಗನನ್ನು ಅಮ್ಬಾಲಿಕೆಯಲ್ಲಿ ಹುಟ್ಟಿಸು” ಎಂದು ಪ್ರಾರ್ಥಿಸಿದಳು. ವೇದವ್ಯಾಸರಾದರೋ, ತಾಯಿಯ ಮಾತಿಗೆ ಒಪ್ಪಿ ಮೊದಲಿನಂತೆಯೇ ಮಾಡಿದರು. ಕಣ್ಮುಚ್ಚಿ ಕುರುಡ ಮಗನನ್ನು ಅಂಬಿಕೆ ಪಡೆದಿರುವುದನ್ನು ತಿಳಿದಿರುವ  ಅಂಬಾಲಿಕೆ ವೇದವ್ಯಾಸರನ್ನು ಸೇರುವಾಗ ಕಣ್ಮುಚ್ಚಲಿಲ್ಲ. ಆದರೆ ಭಯದಿಂದ, ದೇವರ ಬಗ್ಗೆ ತಪ್ಪು ತಿಳಿದು, ಬಿಳಿಚಿಕೊಂಡಳು.
ಈ ರೀತಿ ಬಿಳಿಚಿಕೊಂಡ ಅಂಬಾಲಿಕೆಯಲ್ಲಿ  ‘ಪರಾವಹ’ ಎಂಬ ಹೆಸರುಳ್ಳ ಮರುತ್ದೇವತೆಯು ಹುಟ್ಟಿದನು. ಬಣ್ಣದಿಂದ ಪಾಣ್ಡುವಾಗಿದ್ದ (ಬಿಳಿಚಿದವನಾಗಿದ್ದ) ಆತ, ಪಾಣ್ಡುಃ ಎನ್ನುವ ಹೆಸರಿನವನಾದನು.  ಅವನು ಮುಖ್ಯಪ್ರಾಣನ ಆವೇಶದಿಂದ ವೀರ್ಯಾಧಿಕನೂ, ಎಲ್ಲಾ ಶಸ್ತ್ರಾಸ್ತ್ರಗಳನ್ನು ಬಲ್ಲವನೂ ಆದನು.

ತಸ್ಮೈ ತಥಾ ಬಲವೀರ್ಯ್ಯಾಧಿಕತ್ವವರಂ ಪ್ರಾದಾತ್ ಕೃಷ್ಣ ಏವಾಥ ಪಾಣ್ಡುಮ್  
ವಿಜ್ಞಾಯ ತಂ ಪ್ರಾಹ ಪುನಶ್ಚ ಮಾತಾ ನಿರ್ದ್ದೋಷಮನ್ಯಂ ಜನಯೋತ್ತಮಂ ಸುತಮ್॥ ೧೧.೧೩೫

ಹೀಗೆ ಹುಟ್ಟಿ ಬಂದ  ಪಾಂಡುವಿಗೆ ಕೃಷ್ಣನು(ವೇದವ್ಯಾಸನು)  ಬಲ ಹಾಗೂ ವೀರ್ಯದಿಂದ ಅಧಿಕನಾಗಿರು ಎಂಬ ವರವನ್ನು ಕೊಟ್ಟನು. ತದನಂತರ, ಈತ ಬಿಳಿಚಿಕೊಂಡವನು ಎಂದು ತಿಳಿದ ಸತ್ಯವತಿಯು ಮತ್ತೆ ‘ದೋಷವಿಲ್ಲದ ಇನ್ನೊಬ್ಬ ಉತ್ಕೃಷ್ಟನಾದ ಮಗನನ್ನು ಹುಟ್ಟಿಸು’ ಎಂದು ಹೇಳಿದಳು.

ಉಕ್ತ್ವೇತಿ ಕೃಷ್ಣಂ ಪುನರೇವ ಚ ಸ್ನುಷಾಮಾಹ ತ್ವಯಾsಕ್ಷ್ಣೋರ್ಹಿ ನಿಮೀಲನಂ ಪುರಾ ।
ಕೃತಂ ತತಸ್ತೇ ಸುತ ಆಸ ಚಾನ್ಧಸ್ತತಃ ಪುನಃ ಕೃಷ್ಣಮುಪಾಸ್ವ ಭಕ್ತಿತಃ ॥ ೧೧.೧೩೬

ವೇದವ್ಯಾಸರನ್ನು ಪ್ರಾರ್ಥಿಸಿಕೊಂಡ ಸತ್ಯವತಿಯು, ಸೊಸೆಯನ್ನು ಕುರಿತು: “ಹಿಂದೆ ನಿನ್ನಿಂದ ಕಣ್ಣುಗಳ ಮುಚ್ಚುವಿಕೆಯು ಮಾಡಲ್ಪಟ್ಟಿತ್ತು. ಆ ಕಾರಣದಿಂದ ನಿನ್ನ ಮಗನು ಕುರುಡನಾಗುವಂತಾಯಿತು. ಇದೀಗ ಮತ್ತೆ ಭಕ್ತಿಯಿಂದ ವೇದವ್ಯಾಸರನ್ನು ನೀನು ಉಪಾಸನೆ ಮಾಡು” ಎಂದಳು.

ಇತೀರಿತಾsಪ್ಯಸ್ಯ ಹಿ ಮಾಯಯಾ ಸಾ ಭೀತಾ ಭುಜಿಷ್ಯಾಂ ಕುಮತಿರ್ನ್ನ್ಯಯೋಜಯತ್ ।
ಸಾ ತಂ ಪರಾನನ್ದತನುಂ ಗುಣಾರ್ಣ್ಣವಂ ಸಮ್ಪ್ರಾಪ್ಯ ಭಕ್ತ್ಯಾ ಪರಯೈವ ರೇಮೇ ॥ ೧೧.೧೩೭


ತಸ್ಯಾಂ ಸ ದೇವೋsಜನಿ ಧರ್ಮ್ಮರಾಜೋ ಮಾಣ್ಡವ್ಯಶಾಪಾದ್ ಯ ಉವಾಹ ಶೂದ್ರತಾಮ್ ।
ವಸಿಷ್ಠಸಾಮ್ಯಂ ಸಮಭೀಪ್ಸಮಾನಂ ಪ್ರಚ್ಯಾವಯನ್ನಿಚ್ಛಯಾ ಶಾಪಮಾಪ              ೧೧.೧೩೮

ಸತ್ಯವತಿಯಿಂದ ಸ್ಪಷ್ಟವಾಗಿ ಹೇಳಲ್ಪಟ್ಟರೂ ಕೂಡಾ, ವೇದವ್ಯಾಸರ ಮಾಯೆಯಿಂದ ಭಯಗೊಂಡ ಅಂಬಿಕೆಯು, ಕೆಟ್ಟಬುದ್ಧಿ ಉಳ್ಳವಳಾಗಿ, ತನ್ನ ಬದಲು ದಾಸಿಯನ್ನು ವಿನಿಯೋಗಿಸಿದಳು. ಅವಳಾದರೋ, ಉತ್ಕೃಷ್ಟವಾದ ಆನಂದವೇ ಮೈದಾಳಿ ಬಂದ, ಗುಣಗಳಿಗೆ ಕಡಲಿನಂತೆ ಇರುವವನನ್ನು ಉತ್ತಮವಾದ ಭಕ್ತಿಯಿಂದ ಹೊಂದಿ ಕ್ರೀಡಿಸಿದಳು.
ಆ ಪರಿಚಾರಿಣಿಯಲ್ಲಿ ಧರ್ಮದೇವತೆಯಾದ ಯಮಧರ್ಮರಾಜನೇ ಹುಟ್ಟಿ ಬಂದನು. ವಸಿಷ್ಠರಿಗೆ ಸಮನಾಗಬೇಕು ಎಂದು ಬಯಸುತ್ತಿದ್ದ ಮಾಂಡವ್ಯ ಋಷಿಯನ್ನು ಆ ಮಾರ್ಗದಿಂದ ದೂರ ಸರಿಸಿ, ಇಚ್ಛೆಪಟ್ಟು  ಶಾಪವನ್ನು ಹೊಂದಿ,  ಅದರಿಂದಲೇ ಶೂದ್ರನಾಗಿ ಇಲ್ಲಿ ಹುಟ್ಟಿ ಬಂದನು.

Friday, December 7, 2018

Mahabharata Tatparya Nirnaya Kannada 11.124-11.130


ವಿಚಿತ್ರವೀರ್ಯ್ಯಃ ಪ್ರಮದಾದ್ವಯಂ ತತ್ ಸಮ್ಪ್ರಾಪ್ಯ ರೇಮೇsಬ್ದಗಣಾನ್ ಸುಸಕ್ತಃ ।
ತತ್ಯಾಜ ದೇಹಂ ಚ ಸ ಯಕ್ಷ್ಮಣಾsರ್ದ್ದಿತಸ್ತತೋsಸ್ಯ ಮಾತಾsಸ್ಮರದಾಶು ಕೃಷ್ಣಮ್ ॥೧೧.೧೨೪

ಇತ್ತ ವಿಚಿತ್ರವೀರ್ಯನು ಅಂಬಿಕೆ ಹಾಗು ಅಂಬಾಲಿಕೆಯರನ್ನು ಹೊಂದಿ, ಅತ್ಯಂತ ಆಸಕ್ತನಾಗಿ ಸುಮಾರು ವರ್ಷಗಳ ಕಾಲ ಅವರೊಂದಿಗೆ ಕ್ರೀಡಿಸಿದ. ಆದರೆ ನಂತರ ಅವನು ಕ್ಷಯದಿಂದ ಪೀಡಿತನಾಗಿ ದೇಹವನ್ನು ಬಿಟ್ಟನು. ವಿಚಿತ್ರವೀರ್ಯನ ಸಾವಿನ ನಂತರ ತಕ್ಷಣ ತಾಯಿ ಸತ್ಯವತಿಯು ವೇದವ್ಯಾಸರನ್ನು ಸ್ಮರಣೆ ಮಾಡಿಕೊಳ್ಳುತ್ತಾಳೆ.

ಆವಿರ್ಬಭೂವಾsಶು ಜಗಜ್ಜನಿತ್ರೋ ಜನಾರ್ದ್ದನೋ ಜನ್ಮಜರಾಭಯಾಪಹಃ ।
ಸಮಸ್ತ ವಿಜ್ಞಾನತನುಃ ಸುಖಾರ್ಣ್ಣವಃ ಸಮ್ಪೂಜಯಾಮಾಸ ಚ ತಂ ಜನಿತ್ರೀ ॥೧೧.೧೨೫

ಜಗತ್ತಿನ ಹುಟ್ಟಿಗೆ ಕಾರಣನಾದ, ಮುದಿತನ-ಅಳುಕುಗಳನ್ನು ಪರಿಹಾರ ಮಾಡುವ, ಅರಿವೇ ಮೈವೆತ್ತು ಬಂದಿರುವ, ಸುಖಕ್ಕೆ ಕಡಲಿನಂತೆ ಇರುವ ವ್ಯಾಸರೂಪಿ ನಾರಾಯಣನು  ತತ್ ಕ್ಷಣದಲ್ಲಿ ಸತ್ಯವತಿಯ ಮುಂದೆ ಆವಿರ್ಭವಿಸುತ್ತಾನೆ. ಸತ್ಯವತಿಯು  ವೇದವ್ಯಾಸರನ್ನು ಭಕ್ತಿಪೂರ್ವಕವಾಗಿ ಗೌರವಿಸುತ್ತಾಳೆ.

ತಂ ಭೀಷ್ಮಪೂರ್ವೈಃ ಪರಮಾದರಾರ್ಚ್ಚಿತಂ ಸ್ವಭಿಷ್ಟುತಂ ಚಾವದದಸ್ಯ ಮಾತಾ ।
ಪುತ್ರೌ ಮೃತೌ ಮೇ ನತು ರಾಜ್ಯಮೈಚ್ಛದ್ ಭೀಷ್ಮೋ ಮಯಾ ನಿತರಾಮರ್ತ್ಥಿತೋsಪಿ॥೧೧.೧೨೬

ಕ್ಷೇತ್ರೇ ತತೋ ಭ್ರಾತುರಪತ್ಯಮುತ್ತಮಮುತ್ಪಾದಯಾಸ್ಮತ್ಪರಮಾದರಾರ್ತ್ಥಿತಃ ।
ಇತೀರಿತಃ ಪ್ರಣತಶ್ಚಾಪ್ಯಭಿಷ್ಟುತೋ ಭೀಷ್ಮಾದಿಭಿಷ್ಚಾsಹ ಜಗದ್ಗುರುರ್ವಚಃ         ॥೧೧.೧೨೭

ಭೀಷ್ಮಾಚಾರ್ಯರೇ ಮೊದಲಾದವರಿಂದ ಅತ್ಯಂತ ಆದರದಿಂದ ಪೂಜಿಸಲ್ಪಟ್ಟ, ತನ್ನಿಂದಲೂ ಸ್ತುತಿಸಲ್ಪಟ್ಟ ವ್ಯಾಸರನ್ನು ಕುರಿತು  ಸತ್ಯವತಿಯು ಮಾತನಾಡುತ್ತಾಳೆ:
“ನನ್ನ ಮಕ್ಕಳು ಸತ್ತಿದ್ದಾರೆ. ಭೀಷ್ಮನು ನನ್ನಿಂದ ಚನ್ನಾಗಿ ಪ್ರಾರ್ಥಿಸಲ್ಪಟ್ಟರೂ ಕೂಡಾ ರಾಜ್ಯವನ್ನು ಬಯಸಲಿಲ್ಲಾ. ಈ  ಕಾರಣದಿಂದ, ನಮ್ಮಿಂದ ಚನ್ನಾಗಿ ಪೂಜೆಗೊಂಡ ನೀನು, ನಮ್ಮಿಂದ ಬೇಡಲ್ಪಟ್ಟವನಾದ ನೀನು,  ನಿನ್ನ ಸಹೋದರನ ಹೆಂಡತಿಯಲ್ಲಿ ಉತ್ಕೃಷ್ಟವಾದ ಮಗುವನ್ನು ಹುಟ್ಟಿಸು”.
ಈರೀತಿ ಹೇಳಲ್ಪಟ್ಟ, ಭೀಷ್ಮಾದಿಗಳಿಂದ ಸ್ತೋತ್ರಮಾದಲ್ಪಟ್ಟವರಾಗಿರುವ ವೇದವ್ಯಾಸರು ತಾಯಿಯನ್ನು ಕುರಿತು  ಮಾತನ್ನು ಹೇಳಿದರು:

ಋತೇ ರಮಾಂ ಜಾತು ಮಮಾಙ್ಗಯೋಗಯೋಗ್ಯಾsಙ್ಗನಾ ನೈವ ಸುರಾಲಯೇsಪಿ ।
ತಥಾsಪಿ ತೇ ವಾಕ್ಯಮಹಂ ಕರಿಷ್ಯೇ ಸಾಂವತ್ಸರಂ ಸಾ ಚರತು ವ್ರತಂ ಚ ॥೧೧.೧೨೮

ಸಾ ಪೂತದೇಹಾsಥ ಚ ವೈಷ್ಣವವ್ರತಾನ್ಮತ್ತಃ ಸಮಾಪ್ನೋತು ಸುತಂ ವರಿಷ್ಠಮ್ ।
ಇತೀರಿತೇ ರಾಷ್ಟ್ರಮುಪೈತಿ ನಾಶಮಿತಿ ಬ್ರುವನ್ತೀಂ ಪುನರಾಹ ವಾಕ್ಯಮ್ ೧೧.೧೨೯

ಸೌಮ್ಯಸ್ವರೂಪೋsಪ್ಯತಿಭೀಷಣಂ ಮೃಷಾ ತಚ್ಚಕ್ಷುಷೋ ರೂಪಮಹಂ ಪ್ರದರ್ಶಯೇ ।
ಸಹೇತ ಸಾ ತದ್ ಯದಿ ಪುತ್ರಕೋsಸ್ಯಾ ಭವೇದ್ ಗುಣಾಢ್ಯೋ ಬಲವೀರ್ಯ್ಯಯುಕ್ತಃ ॥೧೧.೧೩೦

“ಲಕ್ಷ್ಮೀ ದೇವಿಯನ್ನು ಹೊರತುಪಡಿಸಿ ನನ್ನ ಅಂಗ-ಸಂಗವನ್ನು ಪಡೆಯುವ ಭಾಗ್ಯವುಳ್ಳ ಹೆಣ್ಣು ಸ್ವರ್ಗದಲ್ಲೂ (ಯಾವ ಲೋಕದಲ್ಲೂ) ಕೂಡಾ ಇಲ್ಲಾ. ಆದರೂ ಕೂಡಾ, ನಿನ್ನ ಮಾತನ್ನು ನಾನು ನಡೆಸಿಕೊಡುತ್ತೇನೆ.  ಅವಳು (ನಿನ್ನ ಸೊಸೆ) ಒಂದು ವರ್ಷದ ಕಾಲ ಇರುವ ವ್ರತವನ್ನು ನಡೆಸಲಿ.
ಈ ರೀತಿ ವೈಷ್ಣವ ವ್ರತ ಮಾಡಿಯಾದಮೇಲೆ, ಪವಿತ್ರವಾದ ದೇಹವುಳ್ಳ ಅವಳು, ನನ್ನಿಂದ ಶ್ರೇಷ್ಠನಾದ ಮಗನನ್ನು ಹೊಂದಲಿ”  ಎಂದು ಹೇಳಲ್ಪಡುತ್ತಿರಲು, “ದೇಶವು ರಾಜನಿಲ್ಲದೇ ನಾಶ ಹೊಂದುತ್ತದೆ. ಹಾಗಾಗಿ ಈಗಲೇ ಅವರು ಗರ್ಭಧರಿಸುವಂತೆ ಮಾಡು” ಎಂದು ಹೇಳುತ್ತಿರುವ ತನ್ನ ತಾಯಿಯನ್ನು ಕುರಿತು, ಮತ್ತೆ ಹೇಳುತ್ತಾರೆ: “ನಾನು ಸುಂದರವಾದ ರೂಪವುಳ್ಳವನಾದರೂ, ಸುಮ್ಮನೆ ಅವಳ ಕಣ್ಣಿಗೆ ಮಾತ್ರ ಅತಿಭಯಂಕರವಾದ ರೂಪವನ್ನು ತೋರಿಸುತ್ತೇನೆ.  ಒಂದು ವೇಳೆ ಅವಳು ಅದನ್ನು ಸಹಿಸಿದರೆ, ಅವಳಿಗೆ ಬಲವೀರ್ಯದಿಂದ ಹಾಗು ಯುಕ್ತವಾದ ಗುಣಗಳಿಂದ ತುಂಬಿದ ಮಗನು ಹುಟ್ಟುತ್ತಾನೆ” ಎಂದು. 

Thursday, December 6, 2018

Mahabharata Tatparya Nirnaya Kannada 11.116-11.123


ಗಾನ್ಧರ್ವಂ ದೇಹಮಾವಿಶ್ಯ ಸ್ವಕೀಯಂ ಭವನಂ ಯಯೌ
ತಸ್ಯಾಸ್ತದ್ದೇಹಸಾದೃಶ್ಯಂ ಗನ್ಧರ್ವಸ್ಯ ಪ್ರಸಾದತಃ ೧೧.೧೧೬

ಪ್ರಾಪ ಗನ್ಧರ್ವದೇಹೋsಪಿ ತಯಾ ಪಶ್ಚಾದಧಿಷ್ಠಿತಃ ।
ಶ್ವೋ ದೇಹಿ ಮಮ ದೇಹಂ ಮೇ ಸ್ವಂ ಚ ದೇಹಂ ಸಮಾವಿಶ     ೧೧.೧೧೭


ಗಂಧರ್ವನಿಗೆ ಸಂಬಂಧಪಟ್ಟ ದೇಹವನ್ನು ಪ್ರವೇಶ ಮಾಡಿದ ಶಿಖಂಡಿನೀ ತನ್ನ ಮನೆಯನ್ನು ಕುರಿತು ತೆರಳಿದಳು. ಗಂಧರ್ವನ ಅನುಗ್ರಹದಿಂದ ಅವಳಿಗೆ ಆ ದೇಹದ ಸಾದೃಶ್ಯವೂ ದೊರಕಿತ್ತು.
ಹೀಗೆ ಗಂಧರ್ವ ದೇಹವು ಅವಳಿಂದ ಅಧಿಷ್ಠಿತವಾಗಿದ್ದರೂ ಕೂಡಾ, ಹಿಂದೆ ಯಾವ ರೂಪದ ದೇಹವಿತ್ತೋ, ಅದೇ ರೀತಿಯ ದೇಹದ ಸಾದೃಶ್ಯ ಅಲ್ಲಿತ್ತು. 

ಇತ್ಯುಕ್ತ್ವಾ ಸ ತು ಗನ್ಧರ್ವಃ ಕನ್ಯಾದೇಹಂ ಸಮಾಸ್ಥಿತಃ ।
ಉವಾಸೈವ ವನೇ ತಸ್ಮಿನ್ ಧನದಸ್ತತ್ರ ಚಾsಗಮತ್                ೧೧.೧೧೮

ಅಪ್ರತ್ಯುತ್ಥಾಯಿನಂ ತನ್ತುಲೀಯಮಾನಂ ವಿಲಜ್ಜಯಾ ।
ಶಶಾಪ ಧನದೋ ದೇವಶ್ಚಿರಮಿತ್ಥಂ ಭವೇತಿ ತಮ್                ೧೧.೧೧೯

ಈರೀತಿಯಾಗಿ  ‘ನನಗೆ ನಾಳೆ ನನ್ನ ದೇಹವನ್ನು ನೀಡಿ,  ನಿನ್ನದಾಗಿರುವ ದೇಹವನ್ನು ನೀನು ಪ್ರವೇಶ ಮಾಡತಕ್ಕದ್ದು’ ಎನ್ನುವ ಒಪ್ಪಂದದಂತೆ  ಆ ಗಂಧರ್ವನು ಶಿಖಂಡಿನೀಯ ದೇಹವನ್ನು ಪ್ರವೇಶ ಮಾಡಿದ್ದನು.

ಶಿಖಂಡಿನೀ ತೆರಳಿದ ಮೇಲೆ, ಕನ್ಯಾದೇಹವನ್ನು ಹೊಂದಿದ  ತುಮ್ಬುರು ಆ ಕಾಡಿನಲ್ಲೇ ಇದ್ದನು. ಆ ಸಮಯದಲ್ಲೇ ಅಲ್ಲಿಗೆ ಕುಬೇರನ ಆಗಮನವಾಗುತ್ತದೆ. ತನ್ನನ್ನು ನೋಡಿಯೂ ಕೂಡಾ ಗೌರವ ಕೊಡದೆ, ಬಳ್ಳಿಯಂತೆ ನಾಚಿಕೆಯಿಂದ ಅಡಗಿಕೊಂಡ ತುಮ್ಬುರುವನ್ನು ಕಂಡ ಕುಬೇರ ಕೋಪಗೊಂಡು:  “ಬಹುಕಾಲ ಇದೇ ರೀತಿ ಸ್ತ್ರೀದೇಹವುಳ್ಳವನಾಗಿರು” ಎಂಬುದಾಗಿ ಶಪಿಸುತ್ತಾನೆ.

ಯದಾ ಯುದ್ಧೇ ಮೃತಿಂ ಯಾತಿ ಸಾ ಕನ್ಯಾ ಪುನ್ತನುಸ್ಥಿತಾ ।
ತದಾ ಪುಂಸ್ತ್ವಂ ಪುನರ್ಯ್ಯಾಸಿ ಚಪಲತ್ವಾದಿತೀರಿತಃ ॥೧೧.೧೨೦

ಕೋಪದಿಂದ ಶಾಪವನ್ನಿತ್ತಿದ್ದ  ಕುಬೇರ, ತದನಂತರ, ತನ್ನ ಶಾಪಕ್ಕೆ ಪರಿಹಾರವನ್ನು ತಿಳಿಸುತ್ತಾ ಹೇಳುತ್ತಾನೆ:   “ಎಂದು ಯುದ್ಧದಲ್ಲಿ ನಿನ್ನ ಗಂಡು ದೇಹದಲ್ಲಿ ಇರತಕ್ಕಂತಹ ಆ ಹೆಣ್ಣು ಸಾಯುತ್ತಾಳೋ, ಆಗ ಮತ್ತೆ ನೀನು ಗಂಡಾಗುತ್ತೀಯಾ” ಎಂದು. ಮುಂದುವರಿದು ಕುಬೇರ ಹೇಳುತ್ತಾನೆ: “ಚಪಲದಿಂದ ನೀನು ದೇಹ ಬದಲಿಸುವ ಈ ಕಾರ್ಯ ಮಾಡಿರುವುದರಿಂದ,  ಅಲ್ಲಿಯ ತನಕ ಈ ಶಾಪವನ್ನು ಅನುಭವಿಸಬೇಕು” ಎಂದು.

ತಥಾsವಸತ್ ಸ ಗನ್ಧರ್ವಃ ಕನ್ಯಾ ಪಿತ್ರೋರಶೇಷತಃ
ಕಥಯಾಮಾಸಾನುಭೂತಂ ತೌ ಭೃಶಂ ಮುದಮಾಪತುಃ           ೧೧.೧೨೧

ಕುಬೇರನ ಶಾಪದಂತೆ ಆ ಗಂಧರ್ವನು ಅದೇ ದೇಹಸ್ಥಿತಿಯಲ್ಲಿಯೇ ಕಾಡಿನಲ್ಲಿ  ವಾಸಮಾಡುವಂತಾಯಿತು. ಇತ್ತ, ಗಂಡಿನ ದೇಹದೊಂದಿಗೆ ಹಿಂದಿರುಗಿದ ಶಿಖಂಡಿನೀಯು, ತಂದೆ-ತಾಯಿಗಳಿಗೆ  ಕಾಡಿನಲ್ಲಿ  ನಡೆದ ಘಟನೆಯನ್ನು ಸಂಪೂರ್ಣವಾಗಿ ತಿಳಿಸುತ್ತಾಳೆ. ಆಗ  ದ್ರುಪದ  ದಂಪತಿಗಳು ಸಂತೋಷವನ್ನು ಹೊಂದುತ್ತಾರೆ.

ಪರೀಕ್ಷ್ಯ ತಾಮುಪಾಯೈಶ್ಚ ಶ್ವಶುರೋ ಲಜ್ಜಿತೋ ಯಯೌ
ಶ್ವೋಭೂತೇ ಸಾ ತು ಗನ್ಧರ್ವಂ ಪ್ರಾಪ್ಯ ತದ್ವಚನಾತ್ ಪುನಃ            ೧೧.೧೨೨

ನಂತರ ಹಿರಣ್ಯವರ್ಮನು ಶಿಖಂಡಿನೀಯ ಪೌರುಷಪರೀಕ್ಷೆಯನ್ನು ಎಲ್ಲಾ ಉಪಾಯಗಳಿಂದ ಪರೀಕ್ಷಿಸಿ, ಸೋತು, ನಾಚಿಕೊಂಡು ಹಿಂತಿರುಗುತ್ತಾನೆ. ಮಾರನೇದಿನ ಶಿಖಂಡಿನೀ ಕೊಟ್ಟ ಮಾತಿನಂತೆ ತುಮ್ಬುರುವಿದ್ದಲ್ಲಿಗೆ  ತಾನು ಅವನಿಂದ ಪಡೆದ ಗಂಡು ದೇಹವನ್ನು ಹಿಂತಿರುಗಿಸುವ ಸಲುವಾಗಿ ತೆರಳುತ್ತಾಳೆ.

ಯಯೌ ತೇನೈವ ದೇಹೇನ ಪುಂಸ್ತ್ವಮೇವ ಸಮಾಶ್ರಿತಾ ।
ಸ ಶಿಖಣ್ಡೀ ನಾಮತೋsಭೂದಸ್ತ್ರಶಸ್ತ್ರಪ್ರತಾಪವಾನ್ ॥೧೧.೧೨೩

ಹೀಗೆ ಹಿಂದಿರುಗಿ ಬಂದ ಶಿಖಂಡಿನೀಯನ್ನು ಕುರಿತು ತುಮ್ಬುರು ಹೇಳುತ್ತಾನೆ: “ನಾನು ನಿನಗೆ ಔಧಾರ್ಯದಿಂದ ನನ್ನ ದೇಹವನ್ನು ಕೊಟ್ಟಿದ್ದೇನೆ.  ನೀನು ಬದುಕಿರುವ ತನಕ ಈ ದೇಹ ನಿನ್ನಲ್ಲಿರುತ್ತದೆ” ಎಂದು.  ಅವನ ಮಾತಿನಂತೆ, ಅದೇ ದೇಹದಿಂದ ಪುರುಷತ್ತ್ವವನ್ನು ಹೊಂದಿದವಳಾಗಿ ಶಿಖಂಡಿನೀ ಹಿಂತಿರುಗುತ್ತಾಳೆ. ಹೀಗೆ ಗಂಡು ದೇಹವನ್ನು ಪಡೆದ  ಆಕೆ,  ‘ಶಿಖಣ್ಡೀ’ ಎಂಬ ಹೆಸರಿನವನಾಗಿ,  ಶಾಸ್ತ್ರಾರ್ಥ ಪ್ರವೀಣನಾಗುತ್ತಾನೆ.