ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, May 14, 2019

Mahabharata Tatparya Nirnaya Kannada 12.120-12.125


ಯಸ್ಮಿನ್ನಬ್ದೇ ಭಾದ್ರಪದೇ ಸ ಮಾಸೇ ಸಿಂಹಸ್ಥಯೋರ್ಗ್ಗುರುರವ್ಯೋಃ ಪರೇಶಃ ।
ಉದೈತ್ ತತಃ ಫಾಲ್ಗುನೇ ಫಲ್ಗುನೋsಭೂದ್ ಗತೇ ತತೋ ಮಾದ್ರವತೀ ಬಭಾಷೇ ॥೧೨.೧೨೦

ಜಾತಾಃ ಸುತಾಸ್ತೇ ಪ್ರವರಾಃ ಪೃಥಾಯಾಮೇಕಾsನಪತ್ಯಾsಹಮತಃ ಪ್ರಸಾದಾತ್ ।
ತವೈವ ಭೂಯಾಸಮಹಂ ಸುತೇತಾ ವಿಧತ್ಸ್ವ ಕುನ್ತೀಂ ಮಮ ಮನ್ತ್ರದಾತ್ರೀಮ್ ॥೧೨.೧೨೧॥


ಯಾವ ವರ್ಷದಲ್ಲಿ,  ಭಾದ್ರಪದ ಮಾಸದಲ್ಲಿ,  ಸಿಂಹರಾಶಿಯಲ್ಲಿ ಗುರು ಮತ್ತು ಸೂರ್ಯ ಇರುತ್ತಿರಲು ಕೃಷ್ಣನು ಆವಿರ್ಭವಿಸಿದನೋ, ಅಲ್ಲಿಂದ  ಮುಂದಿನ ಫಲ್ಗುಣ ಮಾಸದಲ್ಲಿ ಅರ್ಜುನನ ಜನನವಾಯಿತು. (ಅಂದರೆ ಅರ್ಜುನ ಶ್ರೀಕೃಷ್ಣ ಜನಿಸಿದ ಆರು ತಿಂಗಳುಗಳ ನಂತರ ಜನಿಸಿದ).
ಅರ್ಜುನನ ಜನನಾನಂತರ ಮಾದ್ರಿಯು ಪಾಂಡುವನ್ನು ಕುರಿತು ಈರೀತಿ ಹೇಳುತ್ತಾಳೆ: ‘ನಿನಗೆ ಕುಂತಿಯಲ್ಲಿ ಉತ್ಕೃಷ್ಟರಾದ ಮಕ್ಕಳು ಹುಟ್ಟಿದ್ದಾರೆ. ಆದರೆ ನಾನೊಬ್ಬಳೇ ಮಕ್ಕಳಿಲ್ಲದವಳು. ಆಕಾರಣದಿಂದ ನಿನ್ನ ಅನುಗ್ರಹದಿಂದಲೇ ನಾನು ಮಕ್ಕಳೊಂದಿಗಳಾಗುತ್ತೇನೆ. ಅದರಿಂದ ಕುಂತಿಯನ್ನು ನನಗೆ ಮಂತ್ರವನ್ನು ಕೊಡುವವಳನ್ನಾಗಿ ಮಾಡು’ ಎಂದು.

ಇತೀರಿತಃ ಪ್ರಾಹ ಪೃಥಾಂ ಸ ಮಾದ್ರ್ಯೈ ದಿಶಸ್ವ ಮನ್ತ್ರಂ ಸುತದಂ ವರಿಷ್ಠಮ್
ಇತ್ಯೂಚಿವಾಂಸಂ ಪತಿಮಾಹ ಯಾದವೀ ದದ್ಯಾಂ ತ್ವದರ್ತ್ಥೇ ತು ಸಕೃತ್ ಫಲಾಯ ॥೧೨.೧೨೨॥      

ಈರೀತಿಯಾಗಿ ಮಾದ್ರಿಯಿಂದ ಹೇಳಲ್ಪಟ್ಟ ಪಾಂಡುವು ಕುಂತಿಯನ್ನು ಕುರಿತು ಹೇಳುತ್ತಾನೆ: ‘ಮಾದ್ರಿಗೆ ಉತ್ಕೃಷ್ಟವಾದ ಮಕ್ಕಳನ್ನು ಕೊಡುವ ಮಂತ್ರವನ್ನು ಕೊಡು’ ಎಂದು.
ಈ ರೀತಿಯಾಗಿ ಪತಿಯಿಂದ ಹೇಳಲ್ಪಟ್ಟ ಯದುಕುಲೋತ್ಪನ್ನಳಾದ ಕುಂತಿಯು  ‘ನಿನಗಾಗಿ ಒಮ್ಮೆಮಾತ್ರ ಫಲ ಬರುವಹಾಗೆ ಮಂತ್ರವನ್ನು ಕೊಡುತ್ತೇನೆ’ ಎನ್ನುತ್ತಾಳೆ.

ಉವಾಚ ಮಾದ್ರ್ಯೈ ಸುತದಂ ಮನುಂ ಚ ಪುನಃ ಫಲಂ ತೇ ನ ಭವಿಷ್ಯತೀತಿ ।
ಮನ್ತ್ರಂ ಸಮಾದಾಯ ಚ ಮದ್ರಪುತ್ರೀ ವ್ಯಚಿನ್ತಯತ್ ಸ್ಯಾಂ ನು ಕಥಂ ದ್ವಿಪುತ್ರಾ ॥೧೨.೧೨೩॥

ಹೀಗೆ ಮಾದ್ರಿಗೆ ಮಕ್ಕಳನ್ನು ಕೊಡುವ ಮಂತ್ರವನ್ನು ಉಪದೇಶಿಸಿದ ಕುಂತಿ,  ‘ನಿನಗೆ ಇನ್ನೊಮ್ಮೆ ಫಲವು ಆಗಲಾರದು(ಒಮ್ಮೆ ಮಾತ್ರ ಈ ಮಂತ್ರ ನಿನಗೆ ಫಲಪ್ರದವಾಗಲಿದೆ, ಇನ್ನೊಮ್ಮೆ ಆಗಲಾರದು)’  ಎಂದು ಹೇಳಿದಳು. ಕುಂತಿಯಿಂದ ಮಂತ್ರವನ್ನು ಪಡೆದ ಮಾದ್ರಿಯು ‘ಹೇಗೆ ತಾನು ಇಬ್ಬರು ಮಕ್ಕಳನ್ನು ಹೊಂದಿಯೇನು’ ಎಂದು ಯೋಚನೆ ಮಾಡಲಾರಂಭಿಸಿದಳು.

ಸದಾsವಿಯೋಗೌ ದಿವಿಜೇಷು ದಸ್ರೌ ನಚೈತಯೋರ್ನ್ನಾಮಭೇದಃ ಕ್ವಚಿದ್ಧಿ।
ಏಕಾ ಭಾರ್ಯ್ಯಾ ಸೈತಯೋರಪ್ಯುಷಾ ಹಿ ತದಾಯಾತಃ ಸಕೃದಾವರ್ತ್ತನಾದ್ ದ್ವೌ ॥೧೨.೧೨೪

‘ದೇವತೆಗಳಲ್ಲಿ ಅಶ್ವೀದೇವತೆಗಳು ಯಾವಾಗಲೂ ಬೇರ್ಪಡಲಾರರು. ಅವರಿಗೆ ನಾಮಭೇದವೂ ಇಲ್ಲಾ.  ಯಾವಾಗಲೂ ಒಂದಿಗೇ ಇರುವ ಅವರಿಬ್ಬರಿಗೆ ಉಷಾ ಒಬ್ಬಳೇ ಹೆಂಡತಿ. ಆ ಕಾರಣದಿಂದ ಒಂದಾವರ್ತಿ  ಮಂತ್ರವನ್ನು ಹೇಳುವುದರಿಂದ ಅವರಿಬ್ಬರೂ ಬರುತ್ತಾರೆ’.

ಇತೀಕ್ಷನ್ತ್ಯಾssಕಾರಿತಾವಶ್ವಿನೌ ತೌ ಶೀಘ್ರಪ್ರಾಪ್ತೌ ಪುತ್ರಕೌ ತತ್ಪ್ರಸೂತೌ ।
ತಾವೇವ ದೇವೌ ನಕುಲಃ ಪೂರ್ವಜಾತಃ ಸಹದೇವೋsಭೂತ್ ಪಶ್ಚಿಮಸ್ತೌ ಯಮೌ ಚ ॥೧೨.೧೨೫

ಈರೀತಿಯಾಗಿ ಯೋಚನೆ ಮಾಡಿದ ಅವಳಿಂದ  ಕರೆಯಲ್ಪಟ್ಟ ಅಶ್ವಿನೀದೇವತೆಗಳು, ಶೀಘ್ರದಲ್ಲಿಯೇ ಬಂದು, ಪುತ್ರೋತ್ಪತ್ತಿ ಮಾಡುವವರಾಗಿ, ತಾವೇ ಮಾದ್ರಿಯಲ್ಲಿ  ಹುಟ್ಟಿ ಬಂದರು. ಮೊದಲು ಹುಟ್ಟಿದವ ನಕುಲ, ನಂತರ ಸಹದೇವ. ಅವರು ಅವಳಿಗಳೂ ಕೂಡಾ.
[ವಿಶೇಷವಾಗಿ ಅವಳಿಗಳಲ್ಲಿ ಮೊದಲು ಹುಟ್ಟುವವನು ಚಿಕ್ಕವನು ಹಾಗು ನಂತರ ಹುಟ್ಟುವವನು ದೊಡ್ಡವನು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಸಹದೇವ ಅಣ್ಣ ಹಾಗು ನಕುಲ ತಮ್ಮ.
ಸಂಸ್ಕೃತ ಭಾಷೆಯಲ್ಲಿ ‘ಅಲ್ಪಾsಚಿತರಂ ಪೂರ್ವಂ’ ಎಂಬ ನಿಯಮದಂತೆ  ಅಲ್ಪ ಅಚ್ಚು ಯಾವುದಕ್ಕಿದೆಯೋ ಅದನ್ನು ಪೂರ್ವದಲ್ಲಿ ಉಚ್ಛಾರ ಮಾಡಬೇಕು.  (ಉದಾಹರಣೆಗೆ : ಕೃಷ್ಣಾರ್ಜುನ)  ಹಾಗಾಗಿ ಇವರನ್ನು ನಕುಲಸಹದೇವ ಎಂದು ಕರೆಯುತ್ತಾರೆ.] 

Monday, May 13, 2019

Mahabharata Tatparya Nirnaya Kannada 12.116-12.119


ಕದಾಚಿತ್ ತಂ ಲಾಳಯನ್ತೀ ಯಶೋದಾ ವೋಢುಂ ನಾಶಕ್ನೋದ್ ಭೂರಿಭಾರಾಧಿಕಾರ್ತ್ತಾ ।
ನಿಧಾಯ ತಂ ಭೂಮಿತಳೇ ಸ್ವಕರ್ಮ್ಮ ಯದಾ ಚಕ್ರೇ ದೈತ್ಯ ಆಗಾತ್ ಸುಘೋರಃ ೧೨.೧೧೬

ಒಮ್ಮೆ ಯಶೋದೆಯು ಶ್ರೀಕೃಷ್ಣನನ್ನು ಮುದ್ದಿಸುತ್ತಿರುವಾಗ, ಇದ್ದಕ್ಕಿದ್ದಂತೆ ಆತ ಬಹಳ ಭಾರವುಳ್ಳವನಾದ. ಇದರಿಂದ ಸಂಕಟಗೊಂಡವಳಾದ ಯಶೋದೆ, ಕೃಷ್ಣನನ್ನು ಹೊರಲು ಶಕ್ತಳಾಗದೇ ಆತನನ್ನು ನೆಲದ ಮೇಲೆ  ಇಟ್ಟು, ತನ್ನ ಕೆಲಸಗಳನ್ನು ಮಾಡುತ್ತಿದ್ದಳು. ಆಗಲೇ ಅತ್ಯಂತ ಘೋರರೂಪನಾದ ದೈತ್ಯನೊಬ್ಬನ ಆಗಮನವಾಗುತ್ತದೆ.

ತೃಣಾವರ್ತ್ತೋ ನಾಮತಃ ಕಂಸಭೃತ್ಯಃ ಸೃಷ್ಟ್ವಾsತ್ಯುಗ್ರಂ ಚಕ್ರವಾತಂ ಶಿಶುಂ ತಮ್ ।
ಆದಾಯಾsಯಾದನ್ತರಿಕ್ಷಂ ಸ ತೇನ ಶಸ್ತಃ ಕಣ್ಠಗ್ರಾಹಸಂರುದ್ಧವಾಯುಃ ೧೨.೧೧೭

ಹೆಸರಿನಿಂದ ತೃಣಾವರ್ತನಾಗಿರುವ ಆ ದೈತ್ಯ ಕಂಸನ ಭೃತ್ಯನಾಗಿದ್ದ. ಅವನು ಅತ್ಯಂತ ಭಯಂಕರವಾದ ಸುಂಟರಗಾಳಿಯನ್ನು ಸೃಷ್ಟಿಸಿ, ನೆಲದಮೇಲಿದ್ದ ಮಗುವನ್ನು (ಶ್ರೀಕೃಷ್ಣನನ್ನು) ಆಕಾಶಕ್ಕೆ ಕೊಂಡೊಯ್ದ. ಆದರೆ ಅಂತಹ ತೃಣಾವರ್ತನು ‘ಕೃಷ್ಣನು ಕತ್ತನ್ನು ಒತ್ತಿ ಹಿಡಿದಿದ್ದರಿಂದ’ ಉಸಿರುಗಟ್ಟಿ ನಿಗ್ರಹಿಸಲ್ಪಟ್ಟ.

ಪಪಾತ ಕೃಷ್ಣೇನ ಹತಃ ಶಿಲಾತಳೇ ತೃಣಾವರ್ತ್ತಃ ಪರ್ವತೋದಗ್ರದೇಹಃ ।
ಸುವಿಸ್ಮಯಂ ಚಾsಪುರಥೋ ಜನಾಸ್ತೇ ತೃಣಾವರ್ತ್ತಂ ವೀಕ್ಷ್ಯ ಸಞ್ಚೂರ್ಣ್ಣಿತಾಙ್ಗಮ್  ॥೧೨.೧೧೮

ಕೃಷ್ಣನಿಂದ ಕೊಲ್ಲಲ್ಪಟ್ಟ,  ಪರ್ವತದಂತೆ ದೊಡ್ಡ ದೇಹವುಳ್ಳ ತೃಣಾವರ್ತನು ಬಂಡೆಯಮೇಲೆ ಬಿದ್ದ. ಆಗ ಅಲ್ಲಿದ್ದ  ಜನರೆಲ್ಲರು ಪುಡಿಪುಡಿಯಾದ ಅವಯವಗಳುಳ್ಳ ತೃಣಾವರ್ತನನ್ನು ಕಂಡು ಅಚ್ಚರಿಪಟ್ಟರು.

ಅಕ್ರುದ್ಧ್ಯತಾಂ ಕೇಶವೋsನುಗ್ರಹಾಯ ಶುಭಂ ಸ್ವಯೋಗ್ಯಾದಧಿಕಂ ನಿಹನ್ತುಮ್ ।
ಸ ಕ್ರುದ್ಧ್ಯತಾಂ ನವನೀತಾದಿ ಮುಷ್ಣಂಶ್ಚಚಾರ ದೇವೋ ನಿಜಸತ್ಸುಖಾಮ್ಬುಧಿಃ ॥೧೨.೧೧೯

ಶ್ರೀಕೃಷ್ಣನು ಕೋಪಗೊಳ್ಳದ ಜನರ ಅನುಗ್ರಹಕ್ಕಾಗಿ ಮತ್ತು ಕೋಪಗೊಳ್ಳುವವರಿಗೆ ಅವರ ಯೋಗ್ಯತೆಗಿಂತ ಅಧಿಕವಾದ ಪುಣ್ಯವನ್ನು ನಾಶಮಾಡಲು,  ಬೆಣ್ಣೆ ಮೊದಲಾದವುಗಳನ್ನು ಕದ್ದುಕೊಳ್ಳುವವನಾಗಿ ಸಂಚರಿಸಿದ. (ಕೃಷ್ಣನ ಮೇಲೆ ಕೊಪಗೊಂಡವರಿಗೆ ಅಧಿಕ ಪುಣ್ಯವಿದ್ದಿದ್ದು ನಾಶವಾದರೆ, ಕೊಪಗೊಳ್ಳದವರ ಪುಣ್ಯ ವೃದ್ಧಿಯಾಯಿತು. ಇದು ಕೃಷ್ಣನ ಬೆಣ್ಣೆ ಕದಿಯುವುದರ ಹಿಂದಿನ ಔಚಿತ್ಯವಾಗಿತ್ತು.)

Mahabharata Tatparya Nirnaya Kannada 12.110-12.115


ಯದಾ ತ್ರಿಮಾಸಃ ಸ ಬಭೂವ ದೇವಸ್ತದಾssವಿರಾಸೀತ್ ಪುರುಷೋತ್ತಮೋsಜಃ ।
ಕೃಷ್ಣಶೇಷಾವಾಪ್ತುಕಾಮೌ ಸುತೌ ಹಿ ತಪಶ್ಚಕ್ರಾತೇ ದೇವಕೀಶೂರಪುತ್ರೌ ॥೧೨.೧೧೦

ಯಾವಾಗ ಬಲರಾಮನಿಗೆ ಮೂರು ತಿಂಗಳು ಕಳೆಯಿತೋ, ಆಗ ಎಂದೂ ಹುಟ್ಟದ ಪುರುಷೋತ್ತಮನಾದ ನಾರಾಯಣನು ಆವಿರ್ಭವಿಸಿದ.
ಹಿಂದೆ ದೇವಕೀ ಹಾಗು ವಸುದೇವರು ಕೃಷ್ಣ ಹಾಗು ಶೇಷರನ್ನು ಮಕ್ಕಳನ್ನಾಗಿ ಪಡೆಯಲು ತಪಸ್ಸು ಮಾಡಿದ್ದರಿಂದ ಅವರಲ್ಲಿ  ಭಗವಂತ ಆವಿರ್ಭವಿಸಿದ. 

ವಿಷ್ಣ್ವಾವೇಶೀ ಬಲವಾನ್ ಯೋ ಗುಣಾಧಿಕಃ ಸ ಮೇ ಸುತಃ ಸ್ಯಾದಿತಿ ರೋಹಿಣೀ ಚ ।
ತೇಪೇ ತಪೋsತೋ ಹರಿಶುಕ್ಲಕೇಶಯುತಃ ಶೇಷೋ ದೇವಕೀರೋಹಿಣೀಜಃ ೧೨.೧೧೧

‘ಯಾರು ವಿಷ್ಣುವಿನ ಆವೇಶ ಉಳ್ಳವನೋ, ಬಲಿಷ್ಠನೋ, ಗುಣಗಳಿಂದ ಶ್ರೇಷ್ಠನೋ, ಅಂಥವನು ನನ್ನ ಮಗನಾಗಬೇಕು’ ಎಂದು ರೋಹಿಣಿಯೂ ಕೂಡಾ ತಪಸ್ಸು ಮಾಡಿದ್ದಳು. ಆ ಕಾರಣದಿಂದ ಶೇಷನು ಪರಮಾತ್ಮನ ಶುಕ್ಲಕೇಶದಿಂದ ಕೂಡಿದವನಾಗಿ (ಸಂಕರ್ಷಣನ ಆವೇಶದಿಂದ ಕೂಡಿದವನಾಗಿ) ದೇವಕಿ ಹಾಗು ರೋಹಿಣಿಯರಿಬ್ಬರಲ್ಲೂ ಹುಟ್ಟಿದ.
[ಮೊದಲು ಶೇಷ ದೇವಕಿಯ ಗರ್ಭವನ್ನು ಪ್ರವೇಶಿಸಿದ. ನಂತರ ಭಗವಂತನ ಆಜ್ಞೆಯಂತೆ ದುರ್ಗೆ ದೇವಕಿಯ ಮೂರು ತಿಂಗಳ ಗರ್ಭವನ್ನು ರೋಹಿಣಿಯ ಉದರಕ್ಕೆ ವರ್ಗಾವಣೆ  ಮಾಡಿದ್ದಳು. ಆಗ ಕಂಸ ಹಾಗು ಜನರೆಲ್ಲರೂ ದೇವಕಿಗೆ ಗರ್ಭಸ್ತ್ರಾವವಾಯಿತು ಎಂದುಕೊಂಡರು.  ಹೀಗೆ ವರ್ಗಾವಣೆಗೊಂಡ ಗರ್ಭ  ರೋಹಿಣಿಯ ಉದರದಲ್ಲಿ  ಬೆಳೆಯಿತು. ಹೀಗೆ ಬಲಭದ್ರ ದೇವಕಿ ಹಾಗು ರೋಹಿಣಿಯರ ತಪಸ್ಸಿನ ಫಲದಿಂದ ಇಬ್ಬರಿಂದಲೂ ಹುಟ್ಟಿದ]

ಅವರ್ದ್ಧತಾಸೌ ಹರಿಶುಕ್ಲಕೇಶಸಮಾವೇಶೀ ಗೋಕುಲೇ ರೌಹಿಣೇಯಃ ।
ಕೃಷ್ಣೋsಪಿ ಲೀಲಾ ಲಳಿತಾಃ ಪ್ರದರ್ಶಯನ್ ಬಲದ್ವಿತೀಯೋ ರಮಯಾಮಾಸ ಗೋಷ್ಠಮ್ ॥೧೨.೧೧೨

ಹೀಗೆ ಸಂಕರ್ಷಣರೂಪಿ ಭಗವಂತನ ಆವೇಶವನ್ನು ಹೊಂದಿದ ರೋಹಿಣಿ ಪುತ್ರ ಬಲರಾಮನು ಗೊಕುಲದಲ್ಲಿಯೇ ಬೆಳೆದ. ಕೃಷ್ಣನೂ ಕೂಡಾ ಮನೋಹರವಾದ ಆಟಗಳನ್ನು ತೋರಿಸುತ್ತಾ, ಬಲರಾಮನೊಡಗೂಡಿ ಗೋಕುಲಕ್ಕೆ ಸಂತಸವನ್ನು ನೀಡಿದ.

ಸ ಪ್ರಾಕೃತಂ ಶಿಶುಮಾತ್ಮಾನಮುಚ್ಚೈರ್ವಿಜಾನನ್ತ್ಯಾ ಮಾತುರಾದರ್ಶನಾಯ
ವಿಜೃಮ್ಭಮಾಣೋsಖಿಲಮಾತ್ಮಸಂಸ್ಥಂ ಪ್ರದರ್ಶಯಾಮಾಸ ಕದಾಚಿದೀಶಃ ॥೧೨.೧೧೩

ಒಮ್ಮೆ ಆ ಕೃಷ್ಣನು ತನ್ನನ್ನು ಪ್ರಾಕೃತಶಿಶು(ಸಾಮಾನ್ಯ ಮಗು) ಎಂದು ತಿಳಿದಿರುವ ತಾಯಿಯ ಸಮ್ಯಜ್ಞಾನಕ್ಕಾಗಿ, ಆಕಳಿಸುತ್ತಾ, ತನ್ನಲ್ಲಿರುವ ಬ್ರಹ್ಮಾಂಡ ಮೊದಲಾದವುಗಳನ್ನು ತಾಯಿಗೆ ಬಾಯಲ್ಲಿ ತೋರಿದ.

ಸಾsಣ್ಡಂ ಮಹಾಭೂತಮನೋsಭಿಮಾನಮಹತ್ಪ್ರಕೃತ್ಯಾವೃತಮಬ್ಜಜಾದಿಭಿಃ ।
ಸುರೈಃ ಶಿವೇತೈರ್ನ್ನರದೈತ್ಯಸಙ್ಘೈರ್ಯ್ಯುತಂ ದದರ್ಶಾಸ್ಯ ತನೌ ಯಶೋದಾ ॥೧೨.೧೧೪

ಆ ಯಶೋದೆಯು ಪಂಚಭೂತಗಳು, ಮನೋಭಿಮಾನ, ಮಹತತ್ತ್ವ, ಪ್ರಕೃತಿ ಇವುಗಳಿಂದ ಕೂಡಿದ, ಬ್ರಹ್ಮನೇ ಮೊದಲಾಗಿರುವ, ರುದ್ರನನ್ನೂ ಒಳಗೊಂಡಿರುವ, ದೇವತೆಗಳಿಂದಲೂ, ಮನುಷ್ಯರೂ, ದೈತ್ಯರೂ ಮೊದಲಾದವರಿಂದಲೂ ಕೂಡಿರುವ ಬ್ರಹ್ಮಾಂಡವನ್ನು  ಶ್ರೀಕೃಷ್ಣನ ಬಾಯಿಯಲ್ಲಿ ಕಂಡಳು. 

ನ್ಯಮೀಲಯಚ್ಚಾಕ್ಷಿಣೀ ಭೀತಭೀತಾ ಜುಗೂಹ ಚಾsತ್ಮಾನಮಥೋ ರಮೇಶಃ ।
ವಪುಃ ಸ್ವಕೀಯಂ ಸುಖಚಿತ್ಸ್ವರೂಪಂ ಪೂರ್ಣ್ಣಂ ಸತ್ಸು ಜ್ಞಾಪಯಂಸ್ತದ್ಧ್ಯದರ್ಶಯತ್ ೧೨.೧೧೫

ಶ್ರೀಕೃಷ್ಣನ ಬಾಯಲ್ಲಿ ಬ್ರಹ್ಮಾಂಡವನ್ನು ಕಂಡು ಅತ್ಯಂತ  ಭಯಭೀತಳಾದ ಯಶೋದೆ ತನ್ನ ಕಣ್ಣುಗಳನ್ನು ಮುಚ್ಚಿಕೊಂಡಳು. ಆಗ ಶ್ರೀಕೃಷ್ಣನು ತಾಯಿಗೆ ತೋರಿದ ತನ್ನ ಸ್ವರೂಪವನ್ನು ಮುಚ್ಚಿಕೊಂಡನು.
ಸುಖ-ಜ್ಞಾನಗಳೇ ಮೈದಾಳಿರುವ ತನ್ನ ದೇಹವು ಸದಾ ಪೂರ್ಣವೇ ಎಂದು ಸಜ್ಜನರಿಗೆ ತಿಳಿಸಿಕೊಡುವವನಾಗಿ ಶ್ರೀಕೃಷ್ಣ ತಾಯಿಗೆ ತನ್ನ ವ್ಯಾಪ್ತರೂಪವನ್ನು ಈರೀತಿ ತೋರಿದ.