ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, August 11, 2019

Mahabharata Tatparya Nirnaya Kannada 1387_1391



ಆರುಹ್ಯ ತದ್ರಥವರಂ ಭಗವತ್ಪದಾಬ್ಜಮಬ್ಜೋದ್ಭವಪ್ರಣತಮನ್ತರಮನ್ತರೇಣ ।
ಸಞ್ಚಿನ್ತಯನ್ ಪಥಿ ಜಗಾಮ ಸ ಗೋಷ್ಠಮಾರಾದ್ ದೃಷ್ಟ್ವಾ ಪದಾಙ್ಕಿತಭುವಂ ಮುಮುದೇ ಪರಸ್ಯ೮೭॥

ಶ್ರೀಕೃಷ್ಣನನ್ನು ಕರೆತರಲು ಕಂಸ ನೀಡಿದ ರಥವನ್ನು ಏರಿದ ಅಕ್ರೂರ,  ಬ್ರಹ್ಮದೇವರಿಂದಲೂ ನಮಸ್ಕೃತವಾದ ಶ್ರೀಕೃಷ್ಣನ ಪಾದವನ್ನು ಒಳಮನಸ್ಸಿನಿಂದ  ಧ್ಯಾನಿಸುತ್ತಾ ಸಾಗಿದ. ನಂದಗೋಕುಲದ ಸಮೀಪದಲ್ಲಿ ಶ್ರೀಕೃಷ್ಣನ ಪಾದದಿಂದ ಅಂಕಿತವಾದ ಭೂಮಿಯನ್ನು ದೂರದಿಂದಲೇ ನೋಡಿ ಅಕ್ರೂರ ಬಹಳ ಸಂತೋಷಪಟ್ಟ.

ಸೋsವೇಷ್ಟತಾತ್ರ ಜಗದೀಶಿತುರಙ್ಗಸಙ್ಗಲಭ್ದೋಚ್ಚಯೇನ ನಿಖಿಲಾಘವಿದಾರಣೇಷು ।
ಪಾಂಸುಷ್ವಜೇಶಪುರೂಹೂತಮುಖೋಚ್ಚವಿದ್ಯುದ್ಭ್ರಾಜದ್ಕಿರೀಟಮಣಿಲೋಚನಗೋಚರೇಷು ॥೧೩.೮೮॥

ಆ ಅಕ್ರೂರನು, ಪರಮಾತ್ಮನ ಅಂಗಸಂಗದಿಂದಾಗಿ ಎಲ್ಲಾ  ಪಾಪಗಳನ್ನೂ ವಿನಾಶಪಡಿಸತಕ್ಕಂತಹ ಉತ್ಕರ್ಷತೆಯನ್ನು ಹೊಂದಿದ,  ಬ್ರಹ್ಮದೇವರು-ರುದ್ರ-ಇಂದ್ರ ಮೊದಲಾದ ದೇವತೆಗಳ ಮಿಂಚಿನಂತೆ ಶೋಭಿಸುತ್ತಿರುವ ಕಿರೀಟದ ಮಣಿಗಳಿಗೆ ಹಾಗೂ ಅವರ ನಯನಗಳಿಗೆ ವಿಷಯವಾದ(ಬ್ರಹ್ಮ, ರುದ್ರ, ಇಂದ್ರ, ಮೊದಲಾದ ದೇವತೆಗಳು ಶಿರಸ್ಸಿನಿಂದ ನಮಸ್ಕರಿಸಲ್ಪಡುವ ಮತ್ತು ಅವರು ಆದರಪೂರ್ವಕವಾಗಿ ಕಾಣುವ) ಶ್ರೀಕೃಷ್ಣನ ಪಾದದಿಂದ ಅಂಕಿತವಾದ ಭೂಮಿಯ ದೂಳಿನಲ್ಲಿ ಹೊರಳಾಡಿಬಿಟ್ಟ.

ಸೋsಪಶ್ಯತಾಥ ಜಗದೇಕಗುರುಂ ಸಮೇತಮಗ್ರೋದ್ಭವೇನ ಭುವಿ ಗಾ ಅಪಿ ದೋಹಯನ್ತಮ್
ಆನನ್ದಸಾನ್ದ್ರತನುಮಕ್ಷಯಮೇನಮೀಕ್ಷ್ಯ ಹೃಷ್ಟಃ ಪಪಾತ ಪದಯೋಃ ಪುರುಷೋತ್ತಮಸ್ಯ೧೩.೮೯

ತದನಂತರ ಆ ಅಕ್ರೂರನು ಬಲರಾಮನಿಂದ ಕೂಡಿರುವ,  ಭೂಮಿಯಲ್ಲಿ ಹಸುಗಳನ್ನು ಕರೆಯುತ್ತಿರುವ, ಆನಂದವೇ ಮೈದಾಳಿಬಂದ, ಜಗತ್ತಿಗೇ ಮುಖ್ಯಗುರುವಾದ, ನಾಶವಿಲ್ಲದ ಶ್ರೀಕೃಷ್ಣನನ್ನು ಕಂಡು, ಅವನ   ಪಾದಗಳಲ್ಲಿ ಆನಂದ ತುಮ್ಬಿದವನಾಗಿ ಬಿದ್ದನು.

ಉತ್ಥಾಪ್ಯತಂ ಯದುಪತಿಃ ಸಬಲೋ ಗೃಹಂ ಸ್ವಂ ನೀತ್ವೋಪಚಾರಮಖಿಲಂ ಪ್ರವಿಧಾಯ ತಸ್ಮಿನ್ ।
ನಿತ್ಯೋದಿತಾಕ್ಷಯಚಿದಪ್ಯಖಿಲಂ ಚ ತಸ್ಮಾಚ್ಛುಶ್ರಾವ ಲೋಕಚರಿತಾನುವಿಡಮ್ಬನೇನ ॥೧೩.೯೦॥

ಯದುಪತಿ  ಶ್ರೀಕೃಷ್ಣನು ಬಲರಾಮನಿಂದ ಕೂಡಿಕೊಂಡು, ಕಾಲಿಗೆ ಬಿದ್ದ ಅಕ್ರೂರನನ್ನು ಎತ್ತಿ, ತನ್ನ ಮನೆಯನ್ನು ಕುರಿತು ಕರೆದುಕೊಂಡುಹೋಗಿ, ಎಲ್ಲಾ ಉಪಚಾರಗಳನ್ನೂ ಅವನಲ್ಲಿ ಮಾಡಿದನು. ಸದಾ ಉದಯಿಸಿರುವ, ನಾಶವಿಲ್ಲದ ಜ್ಞಾನವುಳ್ಳವನಾದರೂ, ಲೋಕದ ವಿಡಂಬನೆಗಾಗಿ ಅಕ್ರೂರನಲ್ಲಿ ಬಂದ ಕಾರಣವೆಲ್ಲವನ್ನೂ ಕೃಷ್ಣ ಕೇಳಿದನು.

ಶ್ರುತ್ವಾ ಸ ಕಂಸಹೃದಿ ಸಂಸ್ಥಿತಮಬ್ಜನಾಭಃ ಪ್ರಾತಸ್ತು ಗೋಪಸಹಿತೋ ರಥಮಾರುರೋಹ ।
ರಾಮಶ್ವಫಲ್ಕತನಯಾಭಿಯುತೋ ಜಗಾಮಯಾನೇನ ತೇನ ಯಮುನಾತಟಮವ್ಯಯಾತ್ಮಾ॥೧೩.೯೧॥

ಪದ್ಮನಾಭನಾಗಿರುವ ಶ್ರೀಕೃಷ್ಣನು ಕಂಸನ ಹೃದಯದಲ್ಲಿರುವ ಎಲ್ಲಾ ಸಂಗತಿಗಳನ್ನೂ ಅಕ್ರೂರನಿಂದ ಕೇಳಿ, ಮರುದಿನ ಮುಂಜಾನೆ ಎದ್ದು, ಗೋಪ-ಸಹಿತನಾಗಿ, ಅಕ್ರೂರ ತಂದ ರಥವನ್ನು ಏರಿದನು. ಬಲರಾಮನಿಂದಲೂ, ಶ್ವಫಲ್ಕನ ಮಗನಾದ ಅಕ್ರೂರನಿಂದಲೂ ಕೂಡಿಕೊಂಡವನಾಗಿ ರಥದಲ್ಲಿ ಯಮುನಾತೀರದತ್ತ ತೆರಳಿದನು.

Saturday, August 10, 2019

Mahabharata Tatparya Nirnaya Kannada 1382_1386


ವ್ಯೋಮಶ್ಚ[1] ನಾಮ ಮಯಸೂನುರಜಪ್ರಸಾದಾಲ್ಲಬ್ಧಾಮಿತಾಯುರಖಿಲಾನ್ ವಿದಧೇ ಬಿಲೇ ಸಃ
ತಂ ಶ್ರೀಪತಿಃ ಪಶುಪತಿಃ ಪಶುವದ್ ವಿಶಸ್ಯ ನಿಃಸಾರಿತಾನ್ ಬಿಲಮುಖಾದಖಿಲಾಂಶ್ಚಕಾರ ॥೧೩.೮೨

ವ್ಯೋಮನೆಂಬ ಹೆಸರಿನ ಮಯನ ಮಗನು, ಬ್ರಹ್ಮನ ಅನುಗ್ರಹದಿಂದ, ಅಮಿತವಾದ ಆಯುಸ್ಸನ್ನು ಪಡೆದು, ಎಲ್ಲಾ ಗೊಲ್ಲರನ್ನು  ಗುಹೆಯಲ್ಲಿ ಬಂಧಿಸಿಟ್ಟನು.  ಆ ಅಸುರನನ್ನು ಶ್ರೀಪತಿಯೂ, ಪಶುಪತಿಯೂ ಆದ ಶ್ರೀಕೃಷ್ಣನು  ಪಶುವಂತೆ ಕೊಂದು, ಬಿಲದಿಂದ ಎಲ್ಲರನ್ನು ಬಿಡುಗಡೆ ಮಾಡಿದನು.

ಕುರ್ವತ್ಯನನ್ಯವಿಷಯಾಣಿ ದುರನ್ತಶಕ್ತೌ ಕರ್ಮ್ಮಾಣಿ ಗೋಕುಲಗತೇsಖಿಲಲೋಕನಾಥೇ ।
ಕಂಸಾಯ ಸರ್ವಮವದತ್ ಸುರಕಾರ್ಯ್ಯಹೇತೋರ್ಬ್ರಹ್ಮಾಙ್ಕಜೋ ಮುನಿರಕಾರಿ ಯದೀಶಪಿತ್ರಾ ೧೩.೮೩

ಈರೀತಿಯಾಗಿ ಗೋಕುಲದಲ್ಲಿರುವ, ಸಮಸ್ತಲೋಕದ ಒಡೆಯನಾದ, ಅಮಿತ ಪರಾಕ್ರಮಿಯಾದ ಶ್ರೀಕೃಷ್ಣನು, ಯಾರಿಗೂ ಸಾಧ್ಯವಾಗದ ಕರ್ಮಗಳನ್ನು ಮಾಡುತ್ತಿರುವಾಗಲೇ, ಸುರರ ಕಾರ್ಯ ಶೀಘ್ರ ನೆರವೇರಲಿ ಎನ್ನುವ ಉದ್ದೇಶಕ್ಕಾಗಿ ಬ್ರಹ್ಮಾಙ್ಕಜ(ಬ್ರಹ್ಮನ ತೊಡೆಯಿಂದ ಹುಟ್ಟಿದ) ನಾರದ ಮುನಿಯು ಕಂಸನಿಗೆ ಎಲ್ಲವನ್ನೂ ಹೇಳಿದರು. (ದೇವಕಿಯ ಅಷ್ಟಮಗರ್ಭದಲ್ಲಿ ಹುಟ್ಟಿದ ಮಗು ಹೇಗೆ ಗೋಕುಲದಲ್ಲಿ ಬೆಳೆಯುತ್ತಿದೆ, ಇತ್ಯಾದಿ ಎಲ್ಲಾ ರಹಸ್ಯವನ್ನು ಕಂಸನಿಗೆ, ದೇವಕಾರ್ಯವನ್ನು ಶೀಘ್ರವಾಗಿ ನೆರವೇರಿಸುವ ನಿಮಿತ್ತವಾಗಿ ಹೇಳಿದರು).

ಶ್ರುತ್ವಾsತಿಕೋಪರಭಸೋಚ್ಚಲಿತಃ ಸ ಕಂಸೋ ಬಧ್ವಾ ಸಭಾರ್ಯ್ಯಮಥ ಶೂರಜಮುಗ್ರಕರ್ಮ್ಮಾ
ಅಕ್ರೂರಮಾಶ್ವದಿಶದಾನಯನಾಯ ವಿಷ್ಣೋ ರಾಮಾನ್ವಿತಸ್ಯ ಸಹ ಗೋಪಗಣೈ ರಥೇನ ॥೧೩.೮೪

ನಾರದರ ಮಾತನ್ನು ಕೇಳಿದ ಕಂಸ, ರಭಸವಾದ ಕೋಪದಿಂದ ಪ್ರವೃತ್ತನಾದವನಾಗಿ, ವಸುದೇವ-ದೇವಕಿಯರನ್ನು ಕಟ್ಟಿಹಾಕಿದನು.  ಉಗ್ರವಾದ ಕರ್ಮವುಳ್ಳ ಆ ಕಂಸನು, ಗೋಪಗಣದೊಂದಿಗೆ ಬಲರಾಮನಿಂದ ಕೂಡಿರುವ ವಿಷ್ಣುವನ್ನು ತನ್ನ ರಥದಲ್ಲಿ ತಕ್ಷಣ ಕೊಂಡೊಯ್ದು ಬರಲು  ಅಕ್ರೂರನಿಗೆ ಆಜ್ಞಾಪಿಸಿದನು.

ಸಂಸೇವನಾಯ ಸ ಹರೇರಭವತ್ ಪುರೈವ ನಾಮ್ನಾ ಕಿಶೋರ ಇತಿ ಯಃ ಸುರಗಾಯನೋsಭೂತ್ ।
ಸ್ವಾಯಮ್ಭುವಸ್ಯ ಚ ಮನೋಃ ಪರಮಾಂಶಯುಕ್ತ ಆವೇಶಯುಕ್ ಕಮಲಜಸ್ಯ ಬಭೂವ ವಿದ್ವಾನ್ ॥೧೩.೮೫

(ಇಲ್ಲಿ ಅಕ್ರೂರನ ಮೂಲರೂಪದ ಕುರಿತಾದ ವಿವರವನ್ನು ನೀಡಿದ್ದಾರೆ:) ಮೂಲತಃ ಯಾರು ‘ಕಿಶೋರ’ ಎಂಬ ಹೆಸರಿನ ದೇವತೆಗಳ ಹಾಡುಗಾರನೋ(ಗಂಧರ್ವನೋ) ಅವನೇ ಪರಮಾತ್ಮನ ಸೇವೆಗಾಗಿ ಭೂಮಿಯಲ್ಲಿ ಜನಿಸಿದ್ದ. ಈತ ಸ್ವಾಯಮ್ಭುವ ಮನುವಿನ ಅಂಶದೊಂದಿಗೆ, ಬ್ರಹ್ಮದೇವರ ಆವೇಶದಿಂದ ಕೂಡಿದ ಜ್ಞಾನಿಯಾಗಿದ್ದ.

ಸೋsಕ್ರೂರ ಇತ್ಯಭವದುತ್ತಮಪೂಜ್ಯಕರ್ಮ್ಮಾ ವೃಷ್ಣಿಷ್ವಥಾsಸ ಸ ಹಿ ಭೋಜಪತೇಶ್ಚ ಮನ್ತ್ರೀ
ಆದಿಷ್ಟ ಏವ ಜಗದೀಶ್ವರದೃಷ್ಟಿಹೇತೋರಾನನ್ದಪೂರ್ಣ್ಣಸುಮನಾ ಅಭವತ್ ಕೃತಾರ್ತ್ಥಃ ॥೧೩.೮೬॥

ಉತ್ಕೃಷ್ಟರಿಂದಲೂ ಪೂಜ್ಯವಾದ ಕರ್ಮವುಳ್ಳವನಾದ, ವೃಷ್ಣಿಗಳಲ್ಲಿ ಹುಟ್ಟಿದ, ಕಂಸನ ಮಂತ್ರಿಯಾದ ಅವನು ಅಕ್ರೂರನೆಂಬ ಹೆಸರಿನವನಾಗಿದ್ದ. ಆತ ಕಂಸನ ಆಜ್ಞೆಯನ್ನು ಕೇಳಿ,  ಪರಮಾತ್ಮನನ್ನು ನೋಡುವೆನಲ್ಲಾ ಎಂಬ ಕಾರಣದಿಂದ ಆನಂದತುಂಬಿದ ಮನಸ್ಸುಳ್ಳವನಾಗಿ ಧನ್ಯನಾದ(ಕೃತಕತ್ಯನಾದ).




[1] ಪ್ರಾಚೀನ ಪಾಠದಲ್ಲಿ ವ್ಯಾಮಶ್ಚ ಎಂದಿದೆ. ಆದರೆ ವ್ಯಾಮಶ್ಚ ಎನ್ನುವ ಪಾಠ ಬೇರೆಲ್ಲೂ ಉಪಲಬ್ಧವಾಗಿಲ್ಲ. ಅದರಿಂದಾಗಿ ಪ್ರಾಯಃ ಇದು ವ್ಯೋಮಶ್ಚಇರಬಹುದು. ಭಾಗವತದಲ್ಲಿ – ‘ ಮಯಪುತ್ರೇ ಮಹಾಮಾಯೋ ವ್ಯೋಮೋ ಗೋಪಾಲವೇಷಧೃಕ್ ’ (೧೦.೩೫.೨೯) ಎಂದಿದೆ. ಆದ್ದರಿಂದ ಸರ್ವತ್ರಪ್ರಚಲಿತ ಪಾಠದಂತೆ ಇಲ್ಲಿ ವ್ಯೋಮಶ್ಚ ಎಂದು ಬಳಸಲಾಗಿದೆ.

Friday, August 2, 2019

Mahabharata Tatparya Nirnaya Kannada 1378_1381


ನಾಮ್ನಾsಪ್ಯರಿಷ್ಟ ಉರುಗಾಯವಿಲೋಮಚೇಷ್ಟೋ ಗೋಷ್ಠಂ ಜಗಾಮ ವೃಷಭಾಕೃತಿರಪ್ಯವದ್ಧ್ಯಃ
ಶಮ್ಭೋರ್ವರಾದನುಗತಶ್ಚ ಸದೈವ ಕಂಸಂ ಗಾ ಭೀಷಯನ್ತಮಮುಮಾಹ್ವಯದಾಶು ಕೃಷ್ಣಃ ॥೧೩.೭೮

ಕಂಸನ ಭೃತ್ಯನಾಗಿ ಪರಮಾತ್ಮನಿಗೆ ವಿರುದ್ಧವಾದ  ಕ್ರಿಯೆಯನ್ನು ಮಾಡುತ್ತಿರುವ, ಎತ್ತಿನ ವೇಷವನ್ನು ಧರಿಸಿರುವ, ರುದ್ರನ ವರದಿಂದ ಅವಧ್ಯನಾಗಿರುವ , ಹಸುಗಳನ್ನು ಹೆದರಿಸುತ್ತಿದ್ದ, ಅರಿಷ್ಟನೆಂಬ ಹೆಸರುಳ್ಳ  ದುಷ್ಟನನ್ನು ಕೃಷ್ಣನು ಶೀಘ್ರದಲ್ಲಿ  ಕರೆದನು.

ಸೋsಪ್ಯಾಸಸಾದ ಹರಿಮುಗ್ರವಿಷಾಣಕೋಟಿಮಗ್ರೇ ನಿಧಾಯ ಜಗೃಹೇsಸ್ಯ ವಿಷಾಣಮೀಶಃ ।
ಭೂಮೌ ನಿಪಾತ್ಯ ಚ ವೃಷಾಸುರಮುಗ್ರವೀರ್ಯ್ಯಂ ಯಜ್ಞೇ ಯಥಾ ಪಶುಮಮಾರಯದಗ್ರ್ಯಶಕ್ತಿಃ॥೧೩.೭೯

ಅವನಾದರೋ, ಗಟ್ಟಿಯಾಗಿರುವ ತನ್ನ ಕೊಂಬಿನ ತುದಿಯನ್ನು ಮುಂದೆ ಮಾಡಿಕೊಂಡು ಪರಮಾತ್ಮನನ್ನು ಹೊಂದಿದನು. ಸರ್ವಸಮರ್ಥನಾದ ಶ್ರೀಕೃಷ್ಣನು ಅವನ ಎರಡೂ ಕೊಂಬುಗಳನ್ನು ಹಿಡಿದುಕೊಂಡು, ಭೂಮಿಯಲ್ಲಿ ಕೆಡವಿ, ಯಜ್ಞದ ಪಶುವೋ ಎಂಬಂತೆ ಅವನನ್ನು ಕೊಂದು ಹಾಕಿದನು.

ಕೇಶೀ ಚ ಕಂಸವಿಹಿತಸ್ತುರಗಸ್ವರೂಪೋ ಗಿರ್ಯ್ಯಾತ್ಮಜಾವರಮವಾಪ್ಯ ಸದಾ ವಿಮೃತ್ಯುಃ ।
ಪಾಪಃ ಸ ಕೇಶವಮವಾಪ ಮುಖೇsಸ್ಯ ಬಾಹುಂ ಪ್ರಾವೇಶಯತ್ ಸ ಭಗವಾನ್  ವವೃಧೇsಥ ದೇಹೇ ॥೧೩.೮೦

ತತ್ಖಾದನಾಯ ಕುಮತಿಃ ಸ ಕೃತಪ್ರಯಾಸಃ ಶೀರ್ಣ್ಣಾಸ್ಯದನ್ತದಶನಚ್ಚದರುದ್ಧವಾಯುಃ ।
ದೀರ್ಣ್ಣ  ಪಪಾತ ಚ ಮೃತೋ ಹರಿರಪ್ಯಶೇಷೈರ್ಬ್ರಹ್ಮೇಶಶಕ್ರದಿನಕೃತ್ಪ್ರಮುಖೈಃ ಸ್ತುತೋsಭೂತ್ ೧೩.೮೧

ಕಂಸನಿಂದ ಕಳುಹಿಸಲ್ಪಟ್ಟ, ಕುದುರೆಯ ಸ್ವರೂಪವುಳ್ಳ, ಬೆಟ್ಟದ ಮಗಳಿಂದ (ಪಾರ್ವತಿಯಿಂದ) ಮರಣವಿಲ್ಲದ ವರವನ್ನು ಹೊಂದಿರುವ,  ಪಾಪಿಷ್ಠನಾದ ಕೇಶೀ ನಾಮಕ ಅಸುರನು ಕೇಶವನನ್ನು ಹೊಂದಿದನು. ಆಗ ಶ್ರೀಕೃಷ್ಣನು ಅವನ ಮುಖದಲ್ಲಿ(ಬಾಯೊಳಗೆ) ತನ್ನ  ಕೈಯನ್ನು ಇಟ್ಟನು. ಆ ಬಾಹುವು ಅಸುರನ ಶರೀರದಲ್ಲಿ  ಬೆಳೆಯಿತು.
ಕೃಷ್ಣನ ಕೈಯನ್ನು ತಿನ್ನಲೆಂದು ಕೆಟ್ಟ ಬುದ್ಧಿ ಇರುವ ಆ ಅಸುರ ಬಹಳ ಪ್ರಯಾಸಪಟ್ಟ. ಆದರೆ ಅವನ  ಮುಖವು ಸೀಳಲ್ಪಟ್ಟಿತು. ಹಲ್ಲುಗಳೆಲ್ಲವೂ ಮುರಿದುಬಿದ್ದು, ಉಸಿರಾಡುವುದು ಕಷ್ಟವಾಗಿ ದೇಹವೆಲ್ಲಾ ಒಡೆದುಹೋಗಿ ಆತ ಕೆಳಗೆ ಬಿದ್ದ (ಮೃತನಾದ). ಪರಮಾತ್ಮನಾದರೋ ಬ್ರಹ್ಮ, ರುದ್ರ, ಇಂದ್ರ, ಸೂರ್ಯ ಮೊದಲಾದ ಎಲ್ಲಾ ದೇವತೆಗಳಿಂದ ಸ್ತೋತ್ರಮಾಡಲ್ಪಟ್ಟವನಾದ.

[ಇಲ್ಲಿ ‘ಪಾರ್ವತಿಯ ವರ’ ಎಂದು ಹೇಳಿದ್ದಾರೆ. ಇದಕ್ಕೆ ಪೂರಕವಾಗಿರುವ ವಿವರಣೆ ನೇರವಾಗಿ ನಮಗೆ ಕಾಣಸಿಗದಿದ್ದರೂ ಕೂಡಾ, ಪುರಾಣಗಳಲ್ಲಿ ಬಂದಿರುವ  ಪರೋಕ್ಷ ವಿವರಣೆಯನ್ನು ಜೋಡಿಸಿ ನೋಡಿದಾಗ  ಇದು ಸ್ಪಷ್ಟವಾಗುತ್ತದೆ.   
ಹರಿವಂಶದ ವಿಷ್ಣುಪರ್ವದಲ್ಲಿ(೨೪.೬೩) ಹೇಳುವಂತೆ: ‘ಹಯಾದಸ್ಮಾನ್ಮಹೇಂದ್ರೋsಪಿ ಬಿಭೇತಿ ಬಲಸೂದನಃ’ ಅಂದರೆ ‘ಇಂದ್ರನೂ ಕೂಡಾ ಈ ಕುದುರೆಯನ್ನು ಕಂಡರೆ ಭಯಪಡುತ್ತಾನೆ’ ಎಂದರ್ಥ.  ಇನ್ನು ಬ್ರಹ್ಮಪುರಾಣದಲ್ಲಿ  ತುರಗಸ್ಯಾಸ್ಯ ಶಕ್ರೋsಪಿ  ಕೃಷ್ಣ ದೇವಾಶ್ಚ ಬಿಭ್ಯತಿ’ ಎಂದಿದ್ದಾರೆ. ಈ ಮಾತಿನಿಂದ ಅಸುರನಾದ ಕೇಶೀ ವರವನ್ನು ಪಡೆದಿರುವುದು ಇಂದ್ರನಿಗಿಂತ ಎತ್ತರದಲ್ಲಿರುವ ದೇವತೆಯಿಂದ ಎನ್ನುವುದು ಸ್ಪಷ್ಟವಾಗುತ್ತದೆ.
ವಿಷ್ಣುಪರ್ವದಲ್ಲೇ(೨೪.೬೦)  ಹೇಳುವಂತೆ:    ತದಿದಂ ದುಷ್ಕರಂ ಕರ್ಮ ಕೃತಂ ಕೇಶಿವಿಘಾತನಮ್ ತ್ವಯ್ಯೇವ ಕೇವಲಂ ಯುಕ್ತಂ ತ್ರಿದಿವೇ ತ್ರ್ಯಂಬಕಸ್ಯ ವಾ’ . ಇಲ್ಲಿ “ಕೇಶಿಯನ್ನು ಕೊಲ್ಲುವಿಕೆ ಎಂಬ ಬಹಳ ದುಷ್ಕರವಾದ ಕರ್ಮವನ್ನು ಮಾಡಿದ್ದೀಯ,  ಇದು ಒಂದೋ ನಿನಗೆ ಅಥವಾ ಶಿವನಿಂದ ಮಾತ್ರ ಸಾಧ್ಯ”  ಎನ್ನುವ ಮಾತನ್ನು ಹೇಳಿರುವುದನ್ನು ಕಾಣುತ್ತೇವೆ. ಈ ಮಾತಿನಿಂದ ಶಿವನಿಗಿಂತ ಕೆಳಗಿನ ಕಕ್ಷೆಯಲ್ಲಿರುವ ದೇವತೆಯ ವರವಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ಸಾಮಾನ್ಯವಾಗಿ ಅಸುರರು ಐದು ದೇವತೆಗಳಿಂದ ವರವನ್ನು ಕೇಳುತ್ತಾರೆ: ೧. ಬ್ರಹ್ಮ(೩ನೇ ಕಕ್ಷೆ), ೨. ಶಿವ(೫ನೇ ಕಕ್ಷೆ), ೩. ಪಾರ್ವತಿ(೭ನೇ ಕಕ್ಷೆ), ೪. ಸ್ಕಂದ(೮ನೇ ಕಕ್ಷೆ), ೫. ವಿನಾಯಕ(೧೮ನೇ ಕಕ್ಷೆ).  ಇಲ್ಲಿ ರುದ್ರ ಕೇಶೀಯನ್ನು ಕೊಲ್ಲಬಲ್ಲ ಎಂದು ಹೇಳಿರುವುದರಿಂದ  ಇದು ರುದ್ರನ ಅಥವಾ ಬ್ರಹ್ಮನ ವರ ಅಲ್ಲಾ ಎನ್ನುವುದು ಸ್ಪಷ್ಟವಾಗುತ್ತದೆ. (ಯಾರಿಗೆ ಯಾವ ದೇವತೆ ವರವನ್ನು ನೀಡಿರುತ್ತಾನೋ, ಅವನೇ ಅದನ್ನು ಮುರಿಯುವುದಿಲ್ಲ.  ತಮ್ಮಿಂದ ಎತ್ತರದಲ್ಲಿರುವ ದೇವತೆಯ ವರವನ್ನು ಕೆಳಗಿನ ಕಕ್ಷೆಯ ದೇವತೆ ಮುರಿಯಲು ಶಕ್ತನಾಗಿರುವುದಿಲ್ಲ).
ಸ್ಕಂದ ಇಂದ್ರನಿಗೆ ಸಮಾನ(ಎಂಟನೇ ಕಕ್ಷೆ). ಹೀಗಾಗಿ ಇಂದ್ರನಿಂದ ಕೊಲ್ಲಲು ಅಸಾಧ್ಯ ಎಂದಾಗ, ಸ್ಕಂದನಿಗೂ ಅದು  ಅಸಾಧ್ಯ ಎಂದಾಗುತ್ತದೆ. ಇನ್ನು ವಿನಾಯಕ ಹದಿನೆಂಟನೇ ಕಕ್ಷೆಯಲ್ಲಿದ್ದಾನೆ. ಈ ಎಲ್ಲಾ ವಿವರವನ್ನು ನೋಡಿದಾಗ ಕೀಶೀ ಪಾರ್ವತೀದೇವಿಯಿಂದ ವರವನ್ನು ಪಡೆದಿದ್ದ ಎನ್ನುವುದು ಸ್ಪಷ್ಟವಾಗುತ್ತದೆ.
ವಿಷ್ಣುಪರ್ವದಲ್ಲಿ(೨೪.೬೫) ಹೇಳುವಂತೆ:   ಯಸ್ಮಾತ್ ತ್ವಯಾ ಹತಃ ಕೇಶೀ ತಸ್ಮಾನ್ಮಚ್ಛಾಸನಂ ಶ್ರುಣು ಕೇಶವೋ ನಾಮ ನಾಮ್ನಾ ತ್ವಂ ಖ್ಯಾತೋ ಲೋಕೇ ಭವಿಷ್ಯಸಿ’  ಅಂದರೆ: ‘ಕೇಶೀಯನ್ನು ಕೊಂದಿದ್ದುದರಿಂದಾಗಿ ನಿನಗೆ ಕೇಶವ ಎನ್ನುವ ನಾಮ ಬರಲಿ’ . ಈ ಎಲ್ಲಾ ಮಾತಿನ  ಒಟ್ಟಾರೆ ತಾತ್ಪರ್ಯವನ್ನು ಆಚಾರ್ಯರು ಮೇಲಿನಶ್ಲೋಕದಲ್ಲಿ ಸೆರೆ ಹಿಡಿದು ನಮಗೆ ನೀಡಿದ್ದಾರೆ].