ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, August 15, 2019

Mahabharata Tatparya Nirnaya Kannada 13103_13111


ಪೂರ್ಣ್ಣೇನ್ದುವೃನ್ದನಿವಹಾಧಿಕಕಾನ್ತಶಾನ್ತಸೂರ್ಯ್ಯಾಮಿತೋರುಪರಮದ್ಯುತಿಸೌಖ್ಯದೇಹಃ ।
ಪೀತಾಮ್ಬರಃ ಕನಕಭಾಸುರಗನ್ಧಮಾಲ್ಯಃ ಶೃಙ್ಗಾರವಾರಿಧಿರಗಣ್ಯಗುಣಾರ್ಣ್ಣವೋsಗಾತ್ ॥೧೩.೧೦೩

ಪೂರ್ಣವಾಗಿರುವ ಚಂದ್ರರ ಸಮೂಹಗಳಿಗಿಂತಲೂ ಕೂಡಾ ಮಿಗಿಲಾದ, ಮನೋಹರವಾದ, ಸುಖಪೂರ್ಣವಾದ, ಸೂರ್ಯನಿಗಿಂತಲೂ ಕೂಡಾ ಅಮಿತವಾದ ಕಾಂತಿಯುಳ್ಳ(ತಂಪಾದ ಬೆಳಕುಳ್ಳ), ಸುಖವೇ ಮೈವೆತ್ತು ಬಂದಿರುವ, ಹಳದಿ ಬಟ್ಟೆಯನ್ನುಟ್ಟ, ಬಂಗಾರದಂತಿರುವ ಗಂಧವನ್ನೂ, ಹೂವಿನ ಮಾಲೆಯನ್ನೂ ಧರಿಸಿಕೊಂಡ, ಸೌಂದರ್ಯಸಾಗರನಾದ, ಎಣಿಸಲಾಗದ ಗುಣಗಳಿಗೆ ಕಡಲಿನಂತೆ ಇರುವ ನಾರಾಯಣನು ಅಲ್ಲಿಂದ ಮುನ್ನಡೆದನು.

ಪ್ರಾಪ್ಯಾಥ ಚಾsಯುಧಗೃಹಂ ಧನುರೀಶದತ್ತಂ ಕೃಷ್ಣಃ ಪ್ರಸಹ್ಯ ಜಗೃಹೇ ಸಕಲೈರಭೇದ್ಯಮ್
ಕಾಂಸಂ ಸ ನಿತ್ಯಪರಿಪೂರ್ಣ್ಣಸಮಸ್ತಶಕ್ತಿರಾರೋಪ್ಯ ಚೈನಮನುಕೃಷ್ಯ ಬಭಞ್ಜ ಮದ್ಧ್ಯೇ ॥೧೩.೧೦೪ ॥

ತದನಂತರ, ಆಯುಧದ ಮನೆಯನ್ನು ಹೊಂದಿ, (ಅಲ್ಲಿರುವವರನ್ನೆಲ್ಲಾ ಓಡಿಸಿ),  ರುದ್ರದೇವರು ಕಂಸನಿಗೆ ಕೊಟ್ಟ, ಎಲ್ಲರಿಂದಲೂ ಅಭೇದ್ಯವಾದ ಧನುಸ್ಸನ್ನು ಕೃಷ್ಣ ಎತ್ತಿದ , ಕಂಸನಿಗೆ ಸಂಬಂಧಪಟ್ಟ ಆ ಧನುಸ್ಸನ್ನು, ನಿತ್ಯಪರಿಪೂರ್ಣನೂ, ಸಮಸ್ತಶಕ್ತಿ ಉಳ್ಳವನೂ ಆದ  ಆ ನಾರಾಯಣನು ಹೆದೆಯೇರಿಸಲೆಂದು ಎಳೆದು, ಮುರಿದುಹಾಕಿದ.

ತಸ್ಮಿನ್ ಸುರಾಸುರಗಣೈರಖಿಲೈರಭೇದ್ಯೇ ಭಗ್ನೇ ಬಭೂವ ಜಗದಣ್ಡವಿಭೇದಭೀಮಃ ।
ಶಬ್ದಃ ಸ ಯೇನ ನಿಪಪಾತ ಭುವಿ ಪ್ರಭಗ್ನಸಾರೋsಸುರೋ ಧೃತಿಯುತೋsಪಿ ತದೈವ ಕಂಸಃ॥೧೩.೧೦೫॥

ದೇವತೆಗಳಿಂದಾಗಲೀ, ದೈತ್ಯಗಣದಿಂದಾಗಲೀ, ಯಾರಿಂದಲೂ ಮುರಿಯಲಾಗದ ಆ ಧನುಸ್ಸು ಮುರಿಯುತ್ತಿದ್ದಂತೇ,  ಜಗತ್ತೇ ಮುರಿದರೆ  ಯಾವರೀತಿ ಶಬ್ದ ಆಗಬಹುದೋ ಆ ರೀತಿಯ ಶಬ್ದವಾಯಿತು. ಈ ಶಬ್ದ ಕೇಳುತ್ತಿದ್ದಂತೆಯೇ ಕಂಸನು,  ಎಷ್ಟೇ ಧೈರ್ಯಉಳ್ಳವನಾಗಿದ್ದರೂ ಕೂಡಾ,  ದೇಹದ ಸಾರವೆಲ್ಲಾ ಕುಸಿದುಹೋದಂತಾಗಿ ಭೂಮಿಯಲ್ಲಿ ಬಿದ್ದನು.

ಆದಿಷ್ಟಮಪ್ಯುರು ಬಲಂ ಭಗವಾನ್ ಸ ತೇನ ಸರ್ವಂ ನಿಹತ್ಯ ಸಬಲಃ ಪ್ರಯಯೌ ಪುನಶ್ಚ
ನನ್ದಾದಿಗೋಪಸಮಿತಿಂ ಹರಿರತ್ರ ರಾತ್ರೌ ಭುಕ್ತ್ವಾ ಪಯೋsನ್ವಿತಶುಭಾನ್ನಮುವಾಸ ಕಾಮಮ್ ೧೩.೧೦೬

ಕಂಸನಿಂದ ಆದೇಶಿಸಲ್ಪಟ್ಟು ಮೊದಲೇ ತಯಾರಿಯಲ್ಲಿದ್ದ  ಆತನ ಎಲ್ಲಾ ಉತ್ಕೃಷ್ಟವಾದ ಬಲವನ್ನು(ಸೈನ್ಯವನ್ನು),  ಮುರಿದ ಬಿಲ್ಲಿನಿಂದಲೇ,  ಬಲರಾಮನಿಂದ ಕೂಡಿಕೊಂಡು ಸಂಹರಿಸಿದ ಕೃಷ್ಣ,  ತದನಂತರ ನಂದಾದಿಗಳು ಇರುವ ಜಾಗಕ್ಕೆ ತೆರಳಿದ. ಶ್ರೀಕೃಷ್ಣನು ಆ ರಾತ್ರಿ ಹಾಲಿನಿಂದ ಕೂಡಿದ ಮನೋಹರವಾದ  ಅನ್ನವನ್ನು ಸೇವಿಸಿ, ಅಲ್ಲೇ ತನ್ನ ಇಚ್ಛಾನುಸಾರ ಆವಾಸಮಾಡಿದ.

ಕಂಸೋsಪ್ಯತೀವ ಭಯಕಮ್ಪಿತಹೃತ್ಸರೋಜಃ ಪ್ರಾತರ್ನ್ನರೇನ್ದ್ರಗಣಮದ್ಧ್ಯಗತೋsಧಿಕೋಚ್ಚಮ್ ।
ಮಞ್ಚಂ ವಿವೇಶ ಸಹ ಜಾನಪದೈಶ್ಚ ಪೌರೈರ್ನ್ನಾನಾsನುಮಞ್ಚಕಗತೈರ್ಯ್ಯುವತೀಸಮೇತೈಃ ॥೧೩.೧೦೭॥

ಕಂಸನೂ ಕೂಡಾ ಆತ್ಯಂತಿಕವಾದ ಭಯದಿಂದ ನಡುಗಿದ ಎದೆಯುಳ್ಳವನಾಗಿ, ಬೆಳಗ್ಗೆ, ಯುವತಿಯರಿಂದಲೂ, ಹಳ್ಳಿಗರಿಂದಲೂ, ಪಟ್ಟಣಿಗರಿಂದಲೂ ಕೂಡಿಕೊಂಡು, ಅವರವರಿಗೆ ಯೋಗ್ಯವಾದ ಆಸನದಲ್ಲಿ ಇರುವವರಾದ ಎಲ್ಲಾ ಸಾಮಂತರಾಜರ ಮಧ್ಯದಲ್ಲಿ ತನ್ನ ಪರಿವಾರದೊಂದಿಗೆ, ಎಲ್ಲಕ್ಕಿಂತ ಎತ್ತರವಾದ ಆಸನವನ್ನು ಅಲಂಕರಿಸಿದ.(ಪ್ರವೇಶ ಮಾಡಿದ)

ಸಂಸ್ಥಾಪ್ಯ ನಾಗಮುರುರಙ್ಗಮುಖೇ ಕುವಲ್ಯಾಪೀಡಂ ಗಿರೀನ್ದ್ರಸದೃಶಂ ಕರಿಸಾದಿಯುಕ್ತಮ್
ಚಾಣೂರಮುಷ್ಟಿಕಮುಖಾನಪಿ ಮಲ್ಲವೀರಾನ್ ರಙ್ಗೇ ನಿಧಾಯ ಹರಿಸಂಯಮನಂ ಕಿಲೈಚ್ಛತ್ ೧೩.೧೦೮

ಪ್ರವೇಶಮಾಡುವ ರಂಗದ (stadium, ಕ್ರೀಡಾಂಗಣ ) ದ್ವಾರದಲ್ಲಿ,  ದೊಡ್ಡ ಬೆಟ್ಟದಂತೆ ಇರುವ, ಮಾವುತನಿಂದ ಕೂಡಿರುವ, ಕುವಲ್ಯಾಪೀಡವೆನ್ನುವ ಆನೆಯನ್ನು ಇರಿಸಿದ ಕಂಸ, ರಂಗದ ಒಳಗೆ ಚಾಣೂರ, ಮುಷ್ಟಿಕ,ಇವರೇ ಪ್ರಧಾನವಾಗಿರುವ ಎಲ್ಲಾ ಮಲ್ಲವೀರರನ್ನು ಇಟ್ಟು, ಪರಮಾತ್ಮನ ಸಂಯಮನವನ್ನು ಇಚ್ಛಿಸಿದನು.

ಅಕ್ಷೋಹಿಣೀಗಣಿತಮಸ್ಯ ಬಲಂ ಚ ವಿಂಶದಾಸೀದಸಹ್ಯಮುರುವೀರ್ಯ್ಯಮನನ್ಯವದ್ಧ್ಯಮ್
ಶಮ್ಭೋರ್ವರಾದಪಿ ಚ ತಸ್ಯ ಸುನೀಥನಾಮಾ ಯಃ ಪೂರ್ವಮಾಸ ವೃಕ ಇತ್ಯಸುರೋsನುಜೋsಭೂತ್ ೧೩.೧೦೯

ಉತ್ಕೃಷ್ಟವಾದ ವೀರ್ಯವುಳ್ಳ , ರುದ್ರನ ವರದಿಂದ ಕೃಷ್ಣನಲ್ಲದೆ ಇನ್ಯಾರಿಗೂ ಕೊಲ್ಲಲು ಅಸಾಧ್ಯವಾದ, ಇಪ್ಪತ್ತು ಅಕ್ಷೋಹಿಣಿ ಸೈನ್ಯ ಕಂಸನಲ್ಲಿತ್ತು. ಆ ಬಲಕ್ಕೆ ಸುನೀಥ ನಾಮಕ  ಕಂಸನ ತಮ್ಮನೇ ಸೇನಾಧಿಪತಿಯಾಗಿದ್ದ. (ಯಾರಾತ?) ಯಾರು ವ್ರಕನೆಂಬ(ವ್ರಕಾಸುರ/ಭಸ್ಮಾಸುರ) ಅಸುರನಿದ್ದನೋ, ಆ ಅಸುರನೇ ಕಂಸನ ತಮ್ಮನಾಗಿ ಹುಟ್ಟಿದ್ದ.

ಸಪ್ತಾನುಜಾ ಅಪಿ ಹಿ ತಸ್ಯ ಪುರಾತನಾ ಯೇ ಸರ್ವೇsಪಿ ಕಂಸಪೃತನಾಸಹಿತಾಃ ಸ್ಮ ರಙ್ಗೇ ।
ತಸ್ಥುಃ ಸರಾಮಮಭಿಯಾನ್ತಮುದೀಕ್ಷ್ಯ ಕೃಷ್ಣಮಾತ್ತಾಯುಧಾ ಯುಧಿ ವಿಜೇತುಮಜಂ ಸುಪಾಪಾಃ ॥೧೩.೧೧೦

ಸುನೀಥನಿಗೆ ಪೂರ್ವಜನ್ಮದಲ್ಲಿಯೂ   ಸಹೋದರರಾಗಿದ್ದ ಏಳು ಮಂದಿ, ಈ ಜನ್ಮದಲ್ಲಿಯೂ ಕೂಡಾ ಸಹೋದರರಾಗಿ  ಕಂಸನ ಸೇನೆಯೊಂದಿಗಿದ್ದರು. ಅತ್ಯಂತ ಪಾಪಿಷ್ಠರಾಗಿದ್ದ ಅವರು, ರಾಮನನ್ನು  ಕೂಡಿಕೊಂಡು ಬರುತ್ತಿರುವ,  ಎಂದೂ ಹುಟ್ಟದೇ ಇರುವ ಶ್ರೀಕೃಷ್ಣನನ್ನು ಯುದ್ಧದಲ್ಲಿ ಗೆಲ್ಲಲು, ಆಯುಧವನ್ನು ಹಿಡಿದು ನಿಂತಿದ್ದರು. (ಹುಟ್ಟದೇ ಇರುವವನನ್ನು ಸಾಯಿಸಲೆಂದು ನಿಂತಿದ್ದರು!)

ಕೃಷ್ಣೋsಪಿ ಸೂರ ಉದಿತೇ ಸಬಲೋ ವಯಸ್ಯೈಃ ಸಾರ್ದ್ಧಂ ಜಗಾಮ ವರರಙ್ಗಮುಖಂ ಸುರೇಶೈಃ ।
ಸಂಸ್ತೂಯಮಾನ ಉರುವಿಕ್ರಮ ಆಸುರಾಣಾಂ ನಿರ್ಮ್ಮೂಲನಾಯ ಸಕಳಾಚಲಿತೋರುಶಕ್ತಿಃ ॥೧೩.೧೧೧॥

ಸೂರ್ಯೋದಯವಾಗುತ್ತಿದ್ದಂತೆಯೇ,  ಉತ್ಕೃಷ್ಟವಾದ ಶಕ್ತಿಯುಳ್ಳ ಶ್ರೀಕೃಷ್ಣನೂ ಕೂಡಾ, ಬಲರಾಮನಿಂದ ಹಾಗೂ ತನ್ನ ಗೆಳೆಯರೊಂದಿಗೆ ಕೂಡಿಕೊಂಡು,  ಅಸುರರ ವಿನಾಶಕ್ಕಾಗಿ, ಸಮಸ್ತ ದೇವತೆಗಳಿಂದ ಸ್ತೋತ್ರಮಾಡಲ್ಪಡುವವನಾಗಿ, ಕಂಸನ ರಂಗಕ್ಕೆ ಅಭಿಮುಖವಾಗಿ ಹೊರಟನು.

Wednesday, August 14, 2019

Mahabharata Tatparya Nirnaya Kannada 1396_13102


ಅಗ್ರೇsಥ ದಾನಪತಿಮಕ್ಷಯಪೌರುಷೋsಸಾವೀಶೋ ವಿಸೃಜ್ಯ ಸಬಲಃ ಸಹಿತೋ ವಯಸ್ಯೈಃ
ದ್ರಷ್ಟುಂ ಪುರೀಮಭಿಜಗಾಮ ನರೇನ್ದ್ರಮಾರ್ಗ್ಗೇ ಪೌರೈಃ ಕುತೂಹಲಯುತೈರಭಿಪೂಜ್ಯಮಾನಃ॥೧೩.೯೬

ಮಧುರೆಯನ್ನು ತಲುಪಿದಮೇಲೆ, ದಾನಪತಿ ಎನ್ನುವ ಹೆಸರುಳ್ಳ ಅಕ್ರೂರನನ್ನು  ಮುಂದೆ ಕಳುಹಿಸಿಕೊಟ್ಟ ಎಂದೂ ನಾಶವಾಗದ ಕಸುವುಳ್ಳ ಶ್ರೀಕೃಷ್ಣನು, ಬಲರಾಮ ಹಾಗೂ ಸಮಸ್ತ ಗೆಳೆಯರಿಂದ ಕೂಡಿಕೊಂಡು ಪಟ್ಟಣವನ್ನು ನೋಡಲೆಂದು ತೆರಳಿದನು. ಹೀಗೆ ಹೋಗುತ್ತಿರುವಾಗ,  ರಾಜಮಾರ್ಗದಲ್ಲಿ ಕುತೂಹಲದಿಂದ ನೋಡುತ್ತಿರುವ  ಪಟ್ಟಣಿಗರಿಂದ, ತನ್ನ ಗುಣ-ಮೊದಲಾದವುಗಳಿಂದ ಹೊಗಳಿಸಲ್ಪಟ್ಟವನಾಗಿ ಕೃಷ್ಣ ತಿರುಗಾಡಿದ.

ಆಸಾದ್ಯ ಕುಞ್ಜರಗತಂ ರಜತಂ ಯಯಾಚೇ ವಸ್ತ್ರಾಣಿ ಕಂಸದಯಿತಂ ಗಿರಿಶಾವರೇಣ ।
ಮೃತ್ಯೂಜ್ಝಿತಂ ಸಪದಿ ತೇನ ದುರುಕ್ತಿವಿದ್ಧಃ ಪಾಪಂ ಕರಾಗ್ರಮೃದಿತಂ ವ್ಯನಯದ್ ಯಮಾಯ॥೧೩.೯೭

ಮಧುರೆಯಲ್ಲಿ ತಿರುಗಾಡುತ್ತಿರುವಾಗ ಶ್ರೀಕೃಷ್ಣ ಕಂಸನಿಗೆ ಪ್ರಿಯನಾಗಿರುವ,   ಆನೆಯಮೇಲೆ ಕುಳಿತಿರತಕ್ಕ, ಪಾರ್ವತಿಯ ವರದಿಂದ ಅವಧ್ಯನಾಗಿರುವ ಅಗಸನೊಬ್ಬನಲ್ಲಿ  ಬಟ್ಟೆಗಳನ್ನು ಕೇಳಿದ. ಆಗ ಆ ಅಗಸನಿಂದ ಕೆಟ್ಟ ವಚನಗಳಿಂದ ನಿಂದಿಸಲ್ಪಟ್ಟು ಸಿಟ್ಟುಗೊಂಡವನಾದ ಕೃಷ್ಣ, ಆ ಪಾಪಿಷ್ಠನಾದ ಅಗಸನನ್ನು ತನ್ನ ಹಸ್ತತಲದಿಂದ   ಹೊಡೆದು, ಯಮಲೋಕಕ್ಕಟ್ಟಿದ.

ಹತ್ವಾ ತಮಕ್ಷತಬಲೋ ಭಗವಾನ್ ಪ್ರಗೃಹ್ಯ ವಸ್ತ್ರಾಣಿ ಚಾsತ್ಮಸಮಿತಾನಿ ಬಲಸ್ಯ ಚಾsದಾತ್
ದತ್ವಾsಪರಾಣಿ ಸಖಿಗೋಪಜನಸ್ಯ ಶಿಷ್ಟಾನ್ಯಾಸ್ತೀರ್ಯ್ಯ ತತ್ರ ಚ ಪದಂ ಪ್ರಣಿಧಾಯ ಚಾsಗಾತ್॥೧೩.೯೮॥

ಎಂದೂ ನಾಶವಾಗದ ಬಲವುಳ್ಳ ನಾರಾಯಣನು ಆ ರಜಕನನ್ನು ಕೊಂದು, ತನಗೆ ಯೋಗ್ಯವಾದ ವಸ್ತ್ರಗಳನ್ನು ಹಿಡಿದುಕೊಂಡು,  ಬಲರಾಮನಿಗೂ ಮತ್ತು ಗೋಪಾಲಕರಿಗೂ ಕೂಡಾ ಯೋಗ್ಯವಾದ ಬಟ್ಟೆಗಳನ್ನು ಕೊಟ್ಟು, ಉಳಿದ ಬಟ್ಟೆಗಳನ್ನು ಮಾರ್ಗದಮೇಲೆ ಹಾಸಿ, ಆ ಬಟ್ಟೆಯಮೇಲೆ ಕಾಲುಗಳನ್ನು ಇಡುತ್ತಾ ಮುನ್ನೆಡೆದ.

ಗ್ರಾಹ್ಯಾಪಹೇಯರಿಹಿತೈಕಚಿದಾತ್ಮಸಾನ್ದ್ರಸ್ವಾನನ್ದಪೂರ್ಣ್ಣವಪುರಪ್ಯಯಶೋಷಹೀನಃ ।
ಲೋಕಾನ್ ವಿಡಮ್ಬ್ಯ ನರವತ್ಸಮಲಕ್ತಕಾದ್ಯೈರ್ವಪ್ತ್ರಾವಿಭೂಷಿತ ಇವಾಭವದಪ್ರಮೇಯಃ ॥೧೩.೯೯॥

ಸ್ವೀಕಾರ್ಯ, ಅಪಹೇಹ್ಯ, ತ್ಯಾಜ್ಯ ಮೊದಲಾದವುಗಳಿಂದ ರಹಿತನಾಗಿರುವ, ಕೇವಲ ಘನೀಭರಿಸಿದ ಆನಂದವೇ ಮೈದಾಳಿಬಂದಿರುವ ನಾರಾಯಣನು, ಸಮಸ್ತ ದೋಷಗಳಿಂದ ವಿಹಿತನಾದರೂ ಕೂಡಾ,  ಮನುಷ್ಯನಂತೆ ಲೋಕವನ್ನು ಮೋಹಗೊಳಿಸಿ, ಗಂಧ ಮೊದಲಾದವುಗಳಿಂದ,  ಕ್ಷೌರಿಕನಿಂದಲೂ ಕೂಡಾ ಭೂಷಿತನಾದನೋ ಎಂಬಂತೆ ತೋರಿಸುತ್ತಾನೆ.

ಮಾಲಾ ಅವಾಪ್ಯ ಚ ಸುದಾಮತ ಆತ್ಮತನ್ತ್ರಸ್ತಾವಕ್ಷಯೋsನುಜಗೃಹೇ ನಿಜಪಾರ್ಷದೌ ಹಿ ।
ಪೂರ್ವಂ ವಿಕುಣ್ಠಸದನಾದ್ಧರಿಸೇವನಾಯ ಪ್ರಾಪ್ತೌ ಭುವಂ ಮೃಜನಪುಷ್ಪಕರೌ ಪುರಾsಪಿ ॥೧೩.೧೦೦

ನಾಶವಿಲ್ಲದ ನಾರಾಯಣನು ಸರ್ವಸ್ವತಂತ್ರನಾದರೂ,  ಸುದಾಮನೆಂಬ ಮಾಲಾಕಾರನಿಂದ ಮಾಲೆಯನ್ನು ಹೊಂದಿ ಅವನನ್ನು ಅನುಗ್ರಹಿಸಿದ.
ಭಗವಂತನ ಸೇವೆ ಮಾಡುವುದಕ್ಕಾಗಿಯೇ ಭೂಮಿಯಲ್ಲಿ ಹುಟ್ಟಿದ ಆ ಕ್ಷೌರಿಕ-ಮಾಲಾಕಾರರು,  ಪೂರ್ವದಲ್ಲಿ   ವೈಕುಂಠದಲ್ಲೂ ಅದೇ ಸೇವೆಯನ್ನು  ಮಾಡುವವರಾಗಿರುವವರು.

ಸರ್ವೇಷ್ಟಪುಷ್ಟಿಮಿಹ ತತ್ರ ಸರೂಪತಾಂ ಚ ಕೃಷ್ಣಸ್ತಯೋರ್ವರಮದಾದಥ ರಾಜಮಾರ್ಗ್ಗೇ ।
ಗಚ್ಛನ್ ದದರ್ಶ ವನಿತಾಂ ನರದೇವಯೋಗ್ಯಮಾದಾಯ ಗನ್ಧಮಧಿಕಂ ಕುಟಿಲಾಂ ವ್ರಜನ್ತೀಮ್ ೧೩.೧೦೧

ಶ್ರೀಕೃಷ್ಣನು ಅಲ್ಲಿಯೇ, ಅವರಿಬ್ಬರಿಗೂ ಎಲ್ಲಾ ಇಷ್ಟಪುಷ್ಟಿಯನ್ನೂ, ಮೋಕ್ಷದಲ್ಲಿ ಸ್ವಾರೂಪ್ಯವನ್ನೂ ವರವಾಗಿ ಕೊಟ್ಟ.
ತದನಂತರ ರಾಜಮಾರ್ಗದಲ್ಲಿ ಮುಂದೆ ಸಾಗುತ್ತಾ ಶ್ರೀಕೃಷ್ಣ, ಕಂಸನಿಗೆ ಯೋಗ್ಯವಾಗಿರುವ ಗಂಧವನ್ನು ತೆಗೆದುಕೊಂಡು ಹೋಗುತ್ತಿರುವ, ಕುಟಿಲವಾದ ಅಂಗವುಳ್ಳ(ವಕ್ರ ದೇಹವುಳ್ಳ) ಸ್ತ್ರೀಯನ್ನು ಕಂಡ.

ತೇನಾರ್ತ್ಥಿತಾ ಸಪದಿ ಗನ್ಧಮದಾತ್ ತ್ರಿವಕ್ರಾ ತೇನಾಗ್ರಜೇನ ಸಹಿತೋ ಭಗವಾನ್ ಲಿಲಿಮ್ಪೇ ।
ತಾಂ ಚಾsಶ್ವೃಜುತ್ವಮನಯತ್ ಸ ತಯಾsರ್ತ್ಥಿತೋsಲಮಾಯಾಮಿ ಕಾಲತ ಇತಿ ಪ್ರಹಸನ್ನಮುಞ್ಚತ್॥೧೩.೧೦೨॥

ಶ್ರೀಕೃಷ್ಣನಿಂದ ಪ್ರಾರ್ಥಿತಳಾದ ಆ ತ್ರಿವಕ್ರೆ, ತಕ್ಷಣ ತನ್ನಲ್ಲಿದ್ದ ಗಂಧವನ್ನು ಕೃಷ್ಣನಿಗೆ ಅರ್ಪಿಸಿದಳು. ಅವನಾದರೋ, ತನ್ನ ಅಣ್ಣನೊಂದಿಗೆ ಕೂಡಿಕೊಂಡು ಮೈಗೆ ಗಂಧವನ್ನು ಹಚ್ಚಿಕೊಂಡನು. ಅಷ್ಟೇ ಅಲ್ಲ, ಅವಳನ್ನು ಕೂಡಲೇ ನೆಟ್ಟಗೆ ಮಾಡಿದ ಕೂಡಾ (ಅವಳ ಕುಟಿಲಾಂಗವನ್ನು ನಿವಾರಿಸಿದ). ತದನಂತರ ಅವಳಿಂದ (ನಿನ್ನ ಸಂಗವಾಗಬೇಕು ಎಂದು)ಬೇಡಲ್ಪಟ್ಟವನಾಗಿ, ಸ್ವಲ್ಪ ಕಾಲ ಕಳೆದ ನಂತರ ಬರುತ್ತೇನೆ ಎಂದು ನಗುತ್ತಾ ಆಕೆಯನ್ನು ಕೃಷ್ಣ ಬೀಳ್ಕೊಟ್ಟ.

Sunday, August 11, 2019

Mahabharata Tatparya Nirnaya Kannada 1392_1395


ಸಂಸ್ಥಾಪ್ಯತೌ ರಥವರೇ ಜಗತಾsಭಿವನ್ದ್ಯೌ ಶ್ವಾಫಲ್ಕಿರಾಶ್ವವತತಾರ ಯಮಸ್ವಸಾರಮ್ ।
ಸ್ನಾತ್ವ ಸ ತತ್ರ ವಿಧಿನೈವ ಕೃತಾಘಮರ್ಷಃ ಶೇಷಾಸನಂ ಪರಮಪೂರುಷಮತ್ರ ಚೈಕ್ಷತ್ ೧೩.೯೨

ಜಗತ್ತಿನಿಂದ ನಮಸ್ಕಾರ್ಯರಾದ ಅವರಿಬ್ಬರನ್ನು  ಶ್ರೇಷ್ಠವಾದ ಆ ರಥದಲ್ಲಿ ಕುಳ್ಳಿರಿಸಿ, ಶ್ವಫಲ್ಕಪುತ್ರ ಅಕ್ರೂರನು ಕೂಡಲೇ ಯಮುನಾನದಿಗಿಳಿದನು. ಅವನು ಅಲ್ಲಿ ಶಾಸ್ತ್ರಪೂರ್ವಕವಾಗಿ ಅಘಮರ್ಷಣ ಸೂಕ್ತವನ್ನು ಪಠಿಸುತ್ತಾ, ಸ್ನಾನಮಾಡಿ, ಅಲ್ಲಿಯೇ(ಜಲದಲ್ಲಿರುವಾಗಲೇ) ಶೇಷಾಸನನಾದ ಪರಮಾತ್ಮನನ್ನು ಕಂಡನು.

ನಿತ್ಯಂ ಹಿ ಶೇಷಮಭಿಪಶ್ಯತಿ ಸಿದ್ಧಮನ್ತ್ರೋ ದಾನೇಶ್ವರಃ ಸ ತು ತದಾ ದದೃಶೇ ಹರಿಂ ಚ ।
ಅಗ್ರೇ ಹಿ ಬಾಲತುನುಮೀಕ್ಷ್ಯ ಸ ಕೃಷ್ಣಮತ್ರ ಕಿಂ ನಾಸ್ತಿ ಯಾನ ಇತಿ  ಯಾನಮುಖೋ ಬಭೂವ॥೧೩.೯೩॥

ಅಘಮರ್ಷಣ ಮಂತ್ರದ ಸಿದ್ಧಿಯನ್ನು ಮಾಡಿಕೊಂಡಿದ್ದ ಅಕ್ರೂರನು ಯಾವಾಗಲೂ ಶೇಷನನ್ನು ಕಾಣುತ್ತಿದ್ದ. ಆದರೆ ಈ ಸಂದರ್ಭದಲ್ಲಿ ಆತ ಭಗವಂತನ ದರ್ಶನವನ್ನೂ ಪಡೆದ. ತನ್ನ ಮುಂದೆ ಬಾಲಕ ಶರೀರವುಳ್ಳ ಶ್ರೀಕೃಷ್ಣನನ್ನು ನದಿಯಲ್ಲೇ  ಕಂಡ ಅಕ್ರೂರ,  ರಥದಲ್ಲಿ ಕೃಷ್ಣ ಇರುವನೋ-ಇಲ್ಲವೋ ಎಂದು ರಥದತ್ತ ನೋಡುತ್ತಾನೆ.

ತತ್ರಾಪಿ ಕೃಷ್ಣಮಭಿವೀಕ್ಷ್ಯ ಪುನರ್ನ್ನಿಮಜ್ಜ್ಯ ಶೇಷೋರುಭೋಗಶಯನಂ ಪರಮಂ ದದರ್ಶ ।
ಬ್ರಹ್ಮೇಶಶಕ್ರಮುಖದೇವಮುನೀನ್ದ್ರವೃನ್ದಸಂವನ್ದಿತಾಙ್ಘ್ರಿಯುಗಮಿನ್ದಿರಯಾ ಸಮೇತಮ್ ॥೧೩.೯೪

ರಥದಲ್ಲೂ  ಕೂಡಾ ಕೃಷ್ಣನನ್ನು ಕಂಡ ಅಕ್ರೂರ,  ಮತ್ತೆ ಯಮುನೆಯಲ್ಲಿ ಮುಳುಗಿ, ಶೇಷನ ಉತ್ಕೃಷ್ಟವಾದ ಶರೀರದ ಮೇಲೆ  ಮಲಗಿರುವ, ಬ್ರಹ್ಮ-ರುದ್ರ-ಇಂದ್ರ ಮೊದಲಾದ ದೇವತೆಗಳು, ಮುನಿಶ್ರೇಷ್ಠರು, ಇವರೆಲ್ಲರ ಸಮೂಹಗಳಿಂದ ವಂದಿತವಾದ ಪಾದಗಳೆರಡನ್ನು  ಹೊಂದಿರುವ, ಲಕ್ಷ್ಮಿಯಿಂದ ಕೂಡಿರುವ, ಉತ್ಕೃಷ್ಟನಾದ ಪರಮಾತ್ಮನನ್ನು ಕಾಣುತ್ತಾನೆ.

ಸ್ತುತ್ವಾ ವರಸ್ತುತಿಭಿರವ್ಯಯಮಬ್ಜನಾಭಂ ಸೋsನ್ತರ್ಹಿತೇ ಭಗವತಿ ಸ್ವಕಮಾರುರೋಹ ।
ಯಾನಂ ಚ ತೇನ ಸಹಿತೋ ಭಗವಾನ್ ಜಗಾಮ ಸಾಯಂ ಪುರೀಂ ಸಹಬಲೋ ಮಧುರಾಮನನ್ತಃ ೧೩.೯೫

ಆ ಅಕ್ರೂರನು ಉತ್ಕೃಷ್ಟವಾದ ಸ್ತೋತ್ರಗಳಿಂದ, ಎಂದೂ ನಾಶವಾಗದ, ಪದ್ಮನಾಭನಾಗಿರುವ ಪರಮಾತ್ಮನನ್ನು ಸ್ತೋತ್ರಮಾಡಿ, ಪರಮಾತ್ಮ ಕಾಣದಂತಾಗಲು ನದಿಯಿಂದ ಮೇಲೆಬಂದು ತನ್ನ ರಥವನ್ನು ಏರಿದ.
ಹೀಗೆ ಅಕ್ರೂರ ಹಾಗೂ ಬಲರಾಮನಿಂದ ಕೂಡಿಕೊಂಡ,  ಗುಣಗಳಲ್ಲಿ ಎಣಿಯಿರದ ನಾರಾಯಣನು ಸಂಜೆಯ ಸುಮಾರಿಗೆ  ಪಟ್ಟಣವನ್ನು ತಲುಪಿದ.