ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, November 26, 2019

Mahabharata Tatparya Nirnaya Kannada 1443_1447


ಜಿತ್ವಾ ತಮೂರ್ಜ್ಜಿತಬಲಂ ಭಗವಾನಜೇಶಶಕ್ರಾದಿಭಿಃ ಕುಸುಮವರ್ಷಿಭಿರೀಡ್ಯಮಾನಃ
ರಾಮಾದಿಭಿಃ ಸಹಿತ ಆಶು ಪುರೀಂ ಪ್ರವಿಶ್ಯ ರೇಮೇsಭಿವನ್ದಿತಪದೋ ಮಹತಾಂ ಸಮೂಹೈಃ ೧೪.೪೩

ಪುಷ್ಪವೃಷ್ಟಿ ಮಾಡತಕ್ಕಂತಹ ಬ್ರಹ್ಮ-ರುದ್ರ-ಇಂದ್ರ ಮೊದಲಾದವರಿಂದ ಸ್ತುತ್ಯನಾದ ಭಗವಂತನು, ಉತ್ಕೃಷ್ಟವಾದ ಬಲವುಳ್ಳ ಜರಾಸಂಧನನ್ನು ಸೋಲಿಸಿ, ಬಲರಾಮ, ಸಾತ್ಯಕಿ, ಮೊದಲಾದವರಿಂದ ಕೂಡಿಕೊಂಡು ಶೀಘ್ರದಲ್ಲಿಯೇ ಮಧುರಾ ಪಟ್ಟಣವನ್ನು ಪ್ರವೇಶಮಾಡಿ, ಅಲ್ಲಿರುವ ಶ್ರೇಷ್ಠರೆಲ್ಲರಿಂದ ನಮಸ್ಕೃತನಾಗಿ ಕ್ರೀಡಿಸಿದನು.
[ಯಾದವರು ಹಾಗು ಜರಾಸಂಧನ ನಡುವೆ ನಡೆದ ಈ ಮೊತ್ತಮೊದಲ ಯುದ್ಧಕಾಲದಲ್ಲಿ ಪಾಂಡವರು ಎಲ್ಲಿ ಏನು ಮಾಡುತ್ತಿದ್ದರು ಎನ್ನುವ ವಿವರವನ್ನು ಮುಂದೆ ಕಾಣುತ್ತೇವೆ:]

ರ್ದ್ಧತ್ಸು ಪಾಣ್ಡುತನಯೇಷು ಚತುರ್ದ್ದಶಂ ತು  ಜನ್ಮರ್ಕ್ಷಮಾಸ ತನಯಸ್ಯ ಸಹಸ್ರದೃಷ್ಟೇಃ
ಪ್ರತ್ಯಾಬ್ದಿಕಂ ಮುನಿಗಣಾನ್ ಪರಿವೇಷಯನ್ತೀ ಕುನ್ತೀ ತದಾssಸ ಬಹುಕಾರ್ಯ್ಯಪರಾ ನಯಜ್ಞಾ೧೪.೪೪

ಪಾಂಡುಪುತ್ರರು ಬೆಳೆಯುತ್ತಿರಲು, ಸಾವಿರ ಕಣ್ಗಳವನ(ಇಂದ್ರನ) ಪುತ್ರನಿಗೆ ಅರ್ಜುನನಿಗೆ ಹದಿನಾಲ್ಕನೆಯ ಜನ್ಮನಕ್ಷತ್ರವಾಯಿತು. ಪ್ರತೀ ವರ್ಷವೂ ಕೂಡಾ ಮುನಿ ಸಮೂಹಕ್ಕೆ ಪರಿವೇಷಣ ಮಾಡುತ್ತಾ ಬಂದಿರುವ  ಕುಂತಿಯು, ಈ ಸಂದರ್ಭದಲ್ಲೂ ಕೂಡಾ ಬಹಳ ಕೆಲಸದಲ್ಲಿ ನಿರತಳಾಗಿದ್ದಳು.   

ತತ್ಕಾಲ ಏವ ನೃಪತಿಃ ಸಹ ಮಾದ್ರವತ್ಯಾ ಪುಂಸ್ಕೋಕಿಲಾಕುಲಿತಪುಲ್ಲವನಂ ದದರ್ಶ
ತಸ್ಮಿನ್ ವಸನ್ತಪವನಸ್ಪರ್ಶೇಧಿತಃ ಸ ಕನ್ದರ್ಪ್ಪಮಾರ್ಗ್ಗಣವಶಂ ಸಹಸಾ ಜಗಾಮ ೧೪.೪೫

ಇದೇ ಕಾಲದಲ್ಲಿ ಅತ್ತ ಪಾಂಡುರಾಜನು ಮಾದ್ರವತಿಯಿಂದ ಕೂಡಿಕೊಂಡು, ಗಂಡು ಕೋಗಿಲೆಗಳ ನಾದದಿಂದ ಕೂಡಿರುವ, ಚನ್ನಾಗಿ ವಿಕಸಿತವಾದ ಕಾಡನ್ನು ಕಂಡ. ಆ ಕಾಡಿನಲ್ಲಿ ವಸಂತಕಾಲದ ತಂಗಾಳಿಯ ಮುಟ್ಟುವಿಕೆಯಿಂದ ಕಾಮೋದ್ರಿಕ್ತನಾದ ಆತ, ಶೀಘ್ರದಲ್ಲೇ  ಕಾಮನ ಬಾಣದ ವಶನಾಗಿ ಹೋದ.

ಜಗ್ರಾಹ ತಾಮಥ ತಯಾ ರಮಮಾಣ ಏವ ಯಾತೋ ಯಮಸ್ಯ ಸದನಂ ಹರಿಪಾದಸಙ್ಗೀ
ಪೂರ್ವಂ ಶಚೀರಮಣಮಿಚ್ಛತ ಏ ವಿಘ್ನಂ ಶಕ್ರಸ್ಯ ತದ್ದರ್ಶನೋಪಗತೋ ಹಿ ಚಕ್ರೇ ೧೪.೪೬

ತೇನೈವ ಮಾನುಷಮವಾಪ್ಯ ರತಿಸ್ಥ ಏವ ಪಞ್ಚತ್ವಮಾಪ ರತಿವಿಘ್ನಮಪುತ್ರತಾಂ ಚ
ಸ್ವಾತ್ಮೋತ್ತಮೇಷ್ವಥ ಸುರೇಷು ವಿಶೇಷತಶ್ಚ ಸ್ವಲ್ಪೋsಪಿ ದೋಷ ಉರುತಾಮಭಿಯಾತಿ ಯಸ್ಮಾತ್ ೧೪.೪೭

ಪರಮಾತ್ಮನ ಪಾದದಲ್ಲೇ ಆಸಕ್ತಿಯುಳ್ಳ ಪಾಂಡುವು, ಕ್ರೀಡಿಸುವುದಕ್ಕೋಸ್ಕರ ಮಾದ್ರಿಯನ್ನು ಸ್ವೀಕರಿಸಿ, ಅವಳೊಂದಿಗೆ ಆನಂದಪಡುತ್ತಲೇ ಯಮನ ವಶನಾದ(ಸತ್ತ). ಪಾಂಡುವಿಗೆ ಏಕೆ ಹೀಗಾಯಿತು ಎಂದರೆ: (ಋಷಿ ಶಾಪಕ್ಕಿಂತಲೂ ಪ್ರಬಲವಾದ ಇನ್ನೊಂದು ಕಾರಣವನ್ನು ಇಲ್ಲಿ ವಿವರಿಸಿದ್ದಾರೆ: ) ಹಿಂದೆ(ಮೂಲ ರೂಪದಲ್ಲಿ ) ಇಂದ್ರನನ್ನು ಕಾಣಲೆಂದು ತೆರಳಿದ್ದಾಗ,  ಶಚಿದೇವಿಯೊಂದಿಗೆ ಕ್ರೀಡಿಸಲೆಂದು ಬಯಸಿಕೊಂಡಿದ್ದ ಇಂದ್ರನಿಗೆ, ಅವನ ಕಣ್ಣಿಗೆ ಕಾಣುವ ಮೂಲಕ ರತಿಬಂಧನವನ್ನುಂಟುಮಾಡಿದ್ದ. 
ಆರೀತಿ ವಿಘ್ನಮಾಡಿದ್ದರಿಂದಲೇ ಆತ ಮನುಷ್ಯಜನ್ಮವನ್ನು ಹೊಂದಿ, ತಾನು ಮೆಚ್ಚಿದ ಹೆಣ್ಣಿನೊಡನೆ ರತಿಯಲ್ಲಿರುವಾಗಲೇ ಪಞ್ಚತ್ವವನ್ನು(ಸಾವನ್ನು) ಹೊಂದಿದ. ಹೀಗೆ ಪಾಂಡು ತನ್ನ ರತಿಗೆ ವಿಘ್ನವನ್ನೂ, ಮಕ್ಕಳಿಲ್ಲದಿರುವಿಕೆಯನ್ನೂ ಹೊಂದುವಂತಾಯಿತು.
ವಿಶೇಷವಾಗಿ  ದೇವತೆಗಳಲ್ಲಿ ಸ್ವಲ್ಪದೋಷವೂ ಕೂಡಾ ಬಹಳದೊಡ್ಡ ಫಲವನ್ನು ಕೊಡುತ್ತದೆ. ಅದರಲ್ಲೂ ತನಗಿಂತ ಉತ್ತಮರಾಗಿರುವ ದೇವತೆಗಳ ವಿಷಯದಲ್ಲಿ ಅಲ್ಪದೋಷವೂ ಕೂಡಾ ಮಹತ್ವವನ್ನು ಹೊಂದುತ್ತದೆ. 

Tuesday, November 5, 2019

Mahabharata Tatparya Nirnaya Kannada 1437_1442


ಶ್ರುತ್ವಾsಥ ಶಙ್ಖರವಮಮ್ಬುಜಲೋಚನಸ್ಯ ವಿದ್ರಾವಿತಾನಪಿ ನೃಪಾನಭಿವೀಕ್ಷ್ಯ ರಾಮಃ
ಯುದ್ಧ್ಯನ್ತಮೀಕ್ಷ್ಯ ಚ ರಿಪುಂ ವವೃಧೇ ಬಲೇನ ತ್ಯಕ್ತ್ವಾ ರಿಪುಂ ಮುಸಲಮಾದದ ಆಶ್ವಮೋಘಮ್೧೪.೩೭

ತದನಂತರ, ತಾವರೆ ಕಣ್ಣಿನ ಪರಮಾತ್ಮನ ಶಂಖನಾದವನ್ನು ಕೇಳಿದ ಬಲರಾಮ, ಓಡುತ್ತಿರುವ ಎಲ್ಲಾ ರಾಜರುಗಳನ್ನು ಕಂಡು, ತನ್ನೊಂದಿಗೆ ಯುದ್ಧ ಮಾಡುತ್ತಿರುವ ಶತ್ರುವನ್ನು ಕಂಡು ಉತ್ಸಾಹಿತನಾಗಿ ಬಲದಿಂದ ಬೆಳೆದು ನಿಂತ. ತಕ್ಷಣ ಶತ್ರುವನ್ನು ತಿರಸ್ಕರಿಸಿ, ಎಂದೂ ವ್ಯರ್ಥವಾಗದ ತನ್ನ ಮುಸಲಾಯುಧವನ್ನು ಬಲರಾಮ ಕೈಗೆತ್ತಿಗೊಂಡ.

ತೇನಾsಹತಃ ಶಿರಸಿ ಸಮ್ಮುಮುಹೇsತಿವೇಲಂ ಬಾರ್ಹದ್ರಥೋ ಜಗೃಹ ಏನಮಥೋ ಹಲೀ ಸಃ
ತತ್ರೈಕಲವ್ಯ ಉತ ಕೃಷ್ಣಶರೈಃ ಫಲಾಯನ್ನಸ್ತ್ರಾಣಿ ರಾಮಶಿರಸಿ ಪ್ರಮುಮೋಚ ಶೀಘ್ರಮ್ ೧೪.೩೮

ಆ ಒನಕೆಯಿಂದ ತಲೆಯಲ್ಲಿ ಹೊಡೆಯಲ್ಪಟ್ಟ ಜರಾಸಂಧನು ಬಹಳ ವೇಗವಾಗಿ ಮೂರ್ಛೆಗೊಂಡನು. ಹೀಗೆ ಮೂರ್ಛೆಹೊಂದಿದ ಜರಾಸಂಧನನ್ನು ಬಲರಾಮ ಹಿಡಿದುಕೊಂಡನು. ಆಗ ಕೃಷ್ಣನ ಬಾಣಗಳಿಂದ ನೊಂದು ಓಡುತ್ತಿದ್ದ ಏಕಲವ್ಯನು ಜರಾಸಂಧನನ್ನು ಹಿಡಿದಿರುವ ಬಲರಾಮನನ್ನು ನೋಡಿ, ರಾಮನ ತಲೆಯಮೇಲೆ ವೇಗವಾಗಿ ಅಸ್ತ್ರಗಳನ್ನು ಪ್ರಯೋಗಿಸಿದನು.

ಭೀತೇನ ತೇನ ಸಮರಂ ಭಗವಾನನಿಚ್ಛನ್ ಪ್ರದ್ಯುಮ್ನಮಾಶ್ವಸೃಜದಾತ್ಮಸುತಂ ಮನೋಜಮ್
ಪ್ರದ್ಯುಮ್ನ ಏನಮಭಿಯಾಯ ಮಹಾಸ್ತ್ರಜಾಲೈ ರಾಮಾಸ್ತು ಮಾಗಧಮಥಾsತ್ಮರತಂ ನಿನಾಯ ೧೪.೩೯

ಈಗಾಗಲೇ ಭಯಗೊಂಡಿರುವ ಏಕಲವ್ಯನೊಂದಿಗೆ ಯುದ್ಧವನ್ನು ಬಯಸದ ಶ್ರೀಕೃಷ್ಣನು, ಕೂಡಲೇ ತನ್ನ ಮಗನಾದ ಪ್ರದ್ಯುಮ್ನನನ್ನು ಮನಸ್ಸಿನಿಂದಲೇ ಸೃಷ್ಟಿಮಾಡಿದ. ಹೀಗೆ ಸೃಷ್ಟಿಗೊಂಡ ಪ್ರದ್ಯುಮ್ನನು ಏಕಲವ್ಯನನ್ನು  ಮಹತ್ತರವಾದ ಅಸ್ತ್ರಗಳ ಸಮೂಹಗಳೊಂದಿಗೆ ಎದುರುಗೊಂಡ. ಇತ್ತ ಬಲರಾಮನು ಜರಾಸಂಧನನ್ನು ತನ್ನ ರಥದೆಡೆಗೆ ದರದರನೆ ಎಳೆದುಕೊಂಡು ಹೋದ.

ಯುಧ್ವಾ ಚಿರಂ ರಣಮುಖೇ ಭಗವತ್ಸುತೋsಸೌ ಚಕ್ರೇ ನಿರಾಯುಧಮಮುಂ ಸ್ಥಿರಮೇಕಲವ್ಯಮ್
ಅಂಶೇನ ಯೋ ಭುವಮಗಾನ್ಮಣಿಮಾನಿತಿ ಸ್ಮ ಸ ಕ್ರೋಧತನ್ತ್ರಗಣೇಷ್ವಧಿಪೋ ನಿಷಾದಃ ೧೪.೪೦

ಯುದ್ಧದಲ್ಲಿ ಪರಮಾತ್ಮನ ಮಗನಾದ ಪ್ರದ್ಯುಮ್ನನು ಬಹಳಕಾಲದ ತನಕ ಯುದ್ಧಮಾಡಿ, ಗಟ್ಟಿಯಾಗಿ ನಿಂತು ಯುದ್ಧಮಾಡುತ್ತಿದ್ದ ಏಕಲವ್ಯನನ್ನು  ಆಯುಧಹೀನನನ್ನಾಗಿ ಮಾಡಿದನು.
ಮೂಲತಃ ಏಕಲವ್ಯ ಯಾರು ಎನ್ನುವುದನ್ನು ಇಲ್ಲಿ ವಿವರಿಸಿದ್ದಾರೆ: ಯಾರು ಕ್ರೋಧವಶರೆಂಬ ರಾಕ್ಷಸರ ಒಡೆಯನಾಗಿದ್ದ ಮಣಿಮಂತನೋ, ಅವನೇ ಒಂದು ಅಂಶದಿಂದ ಬೇಡನಾಗಿ ಭೂಮಿಯಲ್ಲಿ ಏಕಲವ್ಯನೆಂಬ ಹೆಸರಿನಿಂದ ಹುಟ್ಟಿದ್ದನು.

ಪ್ರದ್ಯುಮ್ನಮಾತ್ಮನಿ ನಿಧಾಯ ಪುನಃ ಸ ಕೃಷ್ಣಃ ಸಂಹೃತ್ಯ ಮಾಗಧಬಲಂ ನಿಖಿಲಂ ಶರೌಘೈಃ
ಭೂಯಶ್ಚಮೂಮಭಿವಿನೇತುಮುದಾರಕರ್ಮ್ಮಾ ಬಾರ್ಹದ್ರಥಂ ತ್ವಮುಚದಕ್ಷಯಪೌರುಷೋsಜಃ೧೪.೪೧

ಎಂದೂ ಹುಟ್ಟದ ಉತ್ಕೃಷ್ಟಕ್ರಿಯೆಯುಳ್ಳ ಪರಮಾತ್ಮನು ಪ್ರದ್ಯುಮ್ನನನ್ನು ಮರಳಿ ತನ್ನಲ್ಲಿ ಇಟ್ಟುಕೊಂಡು, ಜರಾಸಂಧನ ಸಮಸ್ತ ಸೈನ್ಯವನ್ನು ತನ್ನ ಬಾಣಗಳ ಸಮೂಹದಿಂದ ನಾಶಮಾಡಿದ. ಬೃಹದೃತನ ಮಗನಾದ ಜರಾಸಂಧ ಮತ್ತೊಮ್ಮೆ ಸೇನೆಯನ್ನು ಕಟ್ಟಿಕೊಂಡು ಬರಲಿ ಎಂದು ಶ್ರೀಕೃಷ್ಣ ಆತನನ್ನು ಬಿಟ್ಟನಷ್ಟೇ.
[ಇದು ಭಗವಂತನ ಭೂಭಾರ ಹರಣದ ಒಂದು ನಡೆ. ಜರಾಸಂಧನನ್ನು ಕೊಲ್ಲದೇ ಬಿಡುವುದರಿಂದ ಆತ ಮತ್ತೆ ಸೈನ್ಯವನ್ನು ಕಟ್ಟಿಕೊಂಡು ಬರಲು ಅವಕಾಶವಾಗುತ್ತದೆ. ಆತ ತರುವ ಸೈನ್ಯ ತಾಮಸ ಸೈನ್ಯವೇ ಆಗಿರುತ್ತದೆ. ಹೀಗೆ, ಜರಾಸಂಧ ಪುನಃ ಸೈನ್ಯದೊಂದಿಗೆ ಯುದ್ಧಕ್ಕೆ ಬರಲಿ ಎಂದೇ ಶ್ರೀಕೃಷ್ಣನು ಅವನನ್ನು ಈ ಯುದ್ಧದಲ್ಲಿ ಕೊಲ್ಲಲಿಲ್ಲ].

ವ್ರೀಳಾನತಾಚ್ಛವಿಮುಖಃ ಸಹಿತೋ ನೃಪೈಸ್ತೈರ್ಬಾರ್ಹದ್ರಥಃ ಪ್ರತಿಯಯೌ ಸ್ವಪುರೀಂ ಸ ಪಾಪಃ
ಆತ್ಮಾಭಿಷಿಕ್ತಮಪಿ ಭೋಜವರಾಧಿಪತ್ಯೇ ದೌಹಿತ್ರಮಗ್ರತ ಉತ ಪ್ರಣಿಧಾಯ ಮನ್ದಃ ೧೪.೪೨

ನಾಚಿಕೆಯಿಂದ ಬಗ್ಗಿ, ಕಳೆಗುಂದಿದ ಮೋರೆಯವನಾಗಿ, ಇತರ ಎಲ್ಲಾ ರಾಜರಿಂದ ಕೂಡಿದ ಪಾಪಿಷ್ಠನಾದ ಜರಾಸಂಧನು ತನ್ನ ಪಟ್ಟಣಕ್ಕೆ ಹಿಂತಿರುಗಿದ. ಹೀಗೆ ಹೋಗುವಾಗ, ಹಿಂದೆ ಮಧುರಾ ರಾಜ್ಯದಲ್ಲಿ ತನ್ನಿಂದ ಅಭಿಷಿಕ್ತನಾದ ಕಂಸನ ಮಗನನ್ನು ಮುಂದೆ ಇಟ್ಟುಕೊಂಡು ಹೋದ.
[ಹೇಗೆ ಶ್ರೀರಾಮ ಯುದ್ಧಕ್ಕೂ ಮೊದಲು ವಿಭೀಷಣನಿಗೆ ಅಭಿಷೇಕ ಮಾಡಿಸಿದ್ದನೋ ಹಾಗೇ  ಜರಾಸಂಧನೂ ಕೂಡಾ  ಯುದ್ಧಕ್ಕೂ ಮೊದಲೇ ಕಂಸನ ಮಗನಿಗೆ ಅಭಿಷೇಕ ಮಾಡಿಸಿ ಯುದ್ಧ ಮಾಡಲು ಬಂದಿದ್ದ. ಆದರೆ ಹೀನಾಯ ಸೋಲಿನೊಂದಿಗೆ ಈ ರೀತಿ ಹಿಂತಿರುಗಿದ].

Wednesday, October 23, 2019

Mahabharata Tatparya Nirnaya Kannada 1431_1436


ನೈನಂ ಜಘಾನ ಭಗವಾನ್ ಸುಶಕಂ ಚ ಭೀಮೇ ಭಕ್ತಿಂ ನಿಜಾಂ ಪ್ರಥಯಿತುಂ ಯಶ ಉಚ್ಚಧರ್ಮ್ಮಮ್
ಚೇದೀಶಪೌಣ್ಡ್ರಕಸಕೀಚಕಮದ್ರರಾಜಸಾಲ್ವೈಕಲವ್ಯಕಮುಖಾನ್ ವಿರಥಾಂಶ್ಚಕಾರ        ೧೪.೩೧

ಪರಮಾತ್ಮನು ತನ್ನಿಂದ ಸುಲಭವಾಗಿ ಕೊಲ್ಲಲು ಸಾಧ್ಯವಾಗಿದ್ದ  ಜರಾಸಂಧನನ್ನು ಕೊಲ್ಲಲಿಲ್ಲ. (ಕಾರಣವೇನೆಂದರೆ: ) ಭೀಮನಲ್ಲಿರತಕ್ಕಂತಹ ಭಕ್ತಿ, ಉತ್ಕೃಷ್ಟವಾದ ಧರ್ಮವನ್ನು ಪ್ರಪಂಚದಲ್ಲಿ ಪ್ರಖ್ಯಾತಪಡಿಸುವುದಕ್ಕೋಸ್ಕರ (ಮುಂದೆ ‘ಜರಾಸಂಧನನ್ನು ಕೊಂದವ’ ಎನ್ನುವ ಕೀರ್ತಿ ಭೀಮನಿಗೆ ಬರುವಂತೆ ಮಾಡುವುದಕ್ಕಾಗಿ) ಶ್ರೀಕೃಷ್ಣ ಜರಾಸಂಧನನ್ನು ಈ ಯುದ್ಧದಲ್ಲಿ ಕೊಲ್ಲಲಿಲ್ಲ. ಶಿಶುಪಾಲ,  ಪೌಣ್ಡ್ರಕವಾಸುದೇವ, ಕೀಚಕ, ಶಲ್ಯ, ಏಕಲವ್ಯ ಮೊದಲಾದ ಮಹಾರಥರನ್ನು ಕೃಷ್ಣ ರಥಹೀನನ್ನಾಗಿ ಮಾಡಿದ.

ಯೇ ಚಾಪಿ ಹಂಸಡಿಭಕದ್ರುಮರುಗ್ಮಿಮುಖ್ಯಾ ಬಾಹ್ಲೀಕಭೌಮಸುತಮೈನ್ದಪುರಸ್ಸರಾಶ್ಚ
ಸರ್ವೇ ಪ್ರದುದ್ರು ವುರಜಸ್ಯ ಶರೈರ್ವಿಭಿನ್ನಾ ಅನ್ಯೇ ಚ ಭೂಮಿಪತಯೋ ಯ ಇಹಾsಸುರುರ್ವ್ಯಾಮ್ ೧೪.೩೨

ಇನ್ನು ಉಳಿದವರು: ಹಂಸ, ಡಿಭಕ, ದ್ರುಮ, ರುಗ್ಮಿ, ಬಾಹ್ಲೀಕ,  ಭೌಮಸುತ(ನರಕಾಸುರನ ಮಗ ಭಗದತ್ತ), ಮೈನ್ದ(ರಾಮಾಯಣಕಾಲದಲ್ಲಿ ಕಪಿಯಾಗಿದ್ದ ಅಶ್ವಿದೇವತೆಗಳಲ್ಲಿ ಒಬ್ಬ), ಇವರೇ ಮೊದಲಾಗಿರತಕ್ಕಂತಹ, ಭೂಮಿಯಲ್ಲಿ   ಆ ಕಾಲದಲ್ಲಿ ಯಾರು-ಯಾರು ಶ್ರೇಷ್ಠರೆನಿಸಿದ ರಾಜರುಗಳಿದ್ದರೋ, ಅವರೆಲ್ಲರೂ  ಪರಮಾತ್ಮನ ಬಾಣಗಳಿಂದ ಭೇದಿಸಲ್ಪಟ್ಟವರಾಗಿ ಓಡಿಹೋದರು. 

ಛಿನ್ನಾಯುಧಧ್ವಜಪತಾಕರಥಾಶ್ವಸೂತವರ್ಮ್ಮಾಣ ಉಗ್ರಶರತಾಡಿತಭಿನ್ನಗಾತ್ರಾಃ
ಸ್ರಸ್ತಾಮ್ಬರಾಭರಣಮೂರ್ದ್ಧಜಮಾಲ್ಯದೀನಾ ರಕ್ತಂ ವಮನ್ತ ಉರು ದುದ್ರುವುರಾಶು ಭೀತಾಃ ೧೪.೩೩

ಆಯುಧ, ಧ್ವಜ, ಪತಾಕ, ರಥ, ಕುದುರೆ, ಸಾರಥಿ, ಕವಚ, ಎಲ್ಲವನ್ನೂ ಕೂಡಾ ಕತ್ತರಿಸಿಕೊಂಡು, ಉಗ್ರವಾಗಿರುವ ಬಾಣದಿಂದ ತಾಡಿತರಾಗಿ, ಮೈಯನ್ನು ಮುರಿದುಕೊಂಡು, ಜಾರಿಹೋದ ಬಟ್ಟೆಯೊಂದಿಗೆ, ಆಭರಣ, ಕೂದಲು, ಮಾಲೆ, ಎಲ್ಲವನ್ನೂ ಕಳೆದುಕೊಂಡು, ದೀನರಾಗಿ, ಬಹಳ ರಕ್ತವನ್ನು ಕಾರುತ್ತಾ, ಭಯಗೊಂಡು ಅವರೆಲ್ಲರೂ ಬೇಗನೆ ಓಡಿಹೋದರು.

ಶೋಚ್ಯಾಂ ದಶಾಮುಪಗತೇಷು ನೃಪೇಷು ಸರ್ವೇಷ್ವಸ್ತಾಯುಧೇಷು ಹರಿಣಾ ಯುಧಿ ವಿದ್ರವತ್ಸು
ನಾನಾಯುಧಾಢ್ಯಮಪರಂ ರಥಮುಗ್ರವೀರ್ಯ್ಯ ಆಸ್ಥಾಯ ಮಾಗಧಪತಿಃ ಪ್ರಸಸಾರ ರಾಮಮ್೧೪.೩೪

ಹೀಗೆ ಎಲ್ಲಾ ರಾಜರೂ ಕೂಡಾ, ಯುದ್ಧದಲ್ಲಿ ಪರಮಾತ್ಮನಿಂದ ತಮ್ಮ ಆಯುಧಗಳನ್ನು ಕಳೆದುಕೊಂಡು, ಶೋಚನೀಯವಾದ ಅವಸ್ಥೆಯನ್ನು ಹೊಂದಿ ಓಡುತ್ತಿರಲು, ಉಗ್ರವೀರ್ಯನಾದ ಜರಾಸಂಧನು ನಾನಾ ರೀತಿಯ ಆಯುಧಗಳಿಂದ ಕೂಡಿರುವ ಇನ್ನೊಂದು ರಥವನ್ನು ಏರಿ, ಬಲರಾಮನ ಬಳಿ ಬಂದ. 

ಆಧಾವತೋsಸ್ಯ ಮುಸಲೇನ ರಥಂ ಬಭಞ್ಜ ರಾಮೋ ಗದಾಮುರುತರೋರಸಿ ಸೋsಪಿ ತಸ್ಯ
ಚಿಕ್ಷೇಪ ತಂ ಚ ಮುಸಲೇನ ತತಾಡ ರಾಮಸ್ತಾವುತ್ತಮೌ ಬಲವತಾಂ ಯುಯುಧಾತ ಉಗ್ರಮ್೧೪.೩೫

ತನ್ನತ್ತ ನುಗ್ಗಿ ಬರುತ್ತಿರುವ ಜರಾಸಂಧನ ರಥವನ್ನು ಬಲರಾಮನು ತನ್ನ ಮುಸಲಾಯುಧದಿಂದ ಒಡೆದ. ಜರಾಸಂಧನಾದರೋ, ಬಲರಾಮನ ವಿಸ್ತೀರ್ಣವಾದ ಎದೆಯಮೇಲೆ ಗದಾಪ್ರಹಾರ ಮಾಡಿದ. ಆಗ ಬಲರಾಮನು ತನ್ನ ಮುಸಲಾಯುಧದಿಂದ(ಒನಕೆಯಿಂದ) ಜರಾಸಂಧನಿಗೆ ಹೊಡೆದ. ಹೀಗೆ ಬಲಿಷ್ಠರಲ್ಲೇ ಶ್ರೇಷ್ಠರಾದ ಅವರಿಬ್ಬರೂ ಭೀಕರವಾಗಿ ಹೋರಾಡಿದರು. 

ತೌ ಚಕ್ರತುಃ ಪುರು ನಿಯುದ್ಧಮಪಿ ಸ್ಮ ತತ್ರ ಸಞ್ಚೂರ್ಣ್ಣ್ಯ  ಸರ್ವಗಿರಿವೃಕ್ಷಶಿಲಾಸಮೂಹಾನ್
ದೀರ್ಘಂ ನಿಯುದ್ಧಮಭವತ್ ಸಮಮೇತಯೋಸ್ತದ್ ವಜ್ರಾದ್ ದೃಢಾಙ್ಗತಮಯೋರ್ಬಲಿನೋರ್ನ್ನಿತಾನ್ತಮ್ ೧೪.೩೬

ವಜ್ರಕ್ಕಿಂತಲೂ ದೃಢವಾಗಿರುವ ಅಂಗವುಳ್ಳ, ಬಲಿಷ್ಠರಾಗಿದ್ದ ಅವರಿಬ್ಬರು,  ಉತ್ಕೃಷ್ಟವಾದ ಮಲ್ಲಯುದ್ಧವನ್ನು ಮಾಡುತ್ತಾ, ಸುತ್ತಮುತ್ತಲಿನ ಪ್ರದೇಶದಲ್ಲಿನ  ಬಂಡೆಗಳು, ವೃಕ್ಷ ಮೊದಲಾದವುಗಳೆಲ್ಲವನ್ನೂ ಕೂಡಾ ಪುಡಿಮಾಡಿ, ದೀರ್ಘವಾಗಿ ಯುದ್ಧಮಾಡಿದರು.