ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, December 5, 2019

Mahabharata Tatparya Nirnaya Kannada 1481_1485


ನೈಸರ್ಗ್ಗಿಕಪ್ರಿಯಮಿಮಂ ಪ್ರವದನ್ತಿ ವಿಪ್ರಾ ವಿಷ್ಣೋರ್ನ್ನಿತಾನ್ತಮಪಿ ಸತ್ಯಮಿದಂ ಧ್ರುವಂ ಹಿ ।
ನೈವಾನ್ಯಥೌರಸಬಲಂ ಭವತೀದೃಶಂ ತದುತ್ಸಾದ್ಯ ಏಷ ಹರಿಣೈವ ಸಹೈಷ ನೋSರ್ತ್ಥಃ ॥೧೪.೮೧॥

ಸಹಜವಾದುದ್ದನ್ನೇ ಹೆಚ್ಚು ಇಷ್ಟಪಡುವ ನಾರಾಯಣನಿಗೆ ನೈಸರ್ಗಿಕ ಬಲವಿರುವ ಭೀಮ ಬಹಳ ಪ್ರಿಯ ಎಂದು ವಿಪ್ರರು ಹೇಳುತ್ತಾರೆ.  ಇದು ಖಂಡಿತವಾಗಿಯೂ ಸತ್ಯ. ಇಲ್ಲದಿದ್ದರೆ ಈರೀತಿಯಾದ ಸಹಜಸಿದ್ಧವಾದ ಬಲವು ಅವನಲ್ಲಿರುತ್ತಿರಲಿಲ್ಲ. ಆ ಕಾರಣದಿಂದ ಶ್ರೀಕೃಷ್ಣನ ಜೊತೆಗೇ ಭೀಮಸೇನನನ್ನು ಸಾಯಿಸಬೇಕು. ಅದೇ ನಮಗೆ ಅನುಕೂಲವು.

ಕೃಷ್ಣಃ ಕಿಲೈಷ ಚ ಹರಿರ್ಯ್ಯದುಷು ಪ್ರಜಾತಃ ಸೋsಸ್ಯಾsಶ್ರಯಃ ಕುರುತ ತಸ್ಯ ಬಹು ಪ್ರತೀಪಮ್ ।
ಸಮ್ಮನ್ತ್ರ್ಯ ಚೈವಮತಿಪಾಪತಮಾ ನರೇನ್ದ್ರಪುತ್ರಾ ಹರೇಶ್ಚ ಬಹು ಚಕ್ರುರಥ ಪ್ರತೀಪಮ್ ॥೧೪.೮೨॥

ನಾರಾಯಣನೇ ಯದುಗಳಲ್ಲಿ ಶ್ರೀಕೃಷ್ಣನಾಗಿ ಬಂದಿದ್ದಾನೆ. ಅವನೇ ಈ ಭೀಮಸೇನನಿಗೆ ಅಶ್ರಯನಾಗಿದ್ದಾನೆ. ಆ ಕೃಷ್ಣನಿಗೆ ಬಹಳವಾಗಿ ವೈರವನ್ನು ಮಾಡಿರಿ’ ಎಂದು ಮಂತ್ರಾಲೋಚನೆ ಮಾಡಿದ ಅತ್ಯಂತ ಪಾಪಿಷ್ಠರಾದ ರಾಜಪುತ್ರರು-ಶ್ರೀಕೃಷ್ಣನಿಗೆ ಬಹಳವಾಗಿ ವಿರೋಧವನ್ನು ಮಾಡಿದರು. 

ತೈಃ ಪ್ರೇರಿತಾ ನೃಪತಯಃ ಪಿತರಶ್ಚ ತೇಷಾಂ ಸಾಕಂ ಬೃಹದ್ರಥಸುತೇನ ಹರೇಃ ಸಕಾಶಮ್ ।
ಯುದ್ಧಾಯ ಜಗ್ಮುರಮುನಾsಷ್ಟದಶೇಷು ಯುದ್ಧೇಷ್ವತ್ಯನ್ತಭಗ್ನಬಲದರ್ಪ್ಪಮದಾ ನಿವೃತ್ತಾಃ ॥೧೪.೮೩॥

ಮಕ್ಕಳಿಂದ ಪ್ರಚೋದಿಸಲ್ಪಟ್ಟ, ರಾಜರಾಗಿದ್ದ ತಂದೆಯಂದಿರು, ಜರಾಸಂಧನೂಂದಿಗೆ ಕೂಡಿಕೊಂಡು ಶ್ರೀಕೃಷ್ಣನೊಂದಿಗೆ ಯುದ್ಧಕ್ಕೆಂದು ತೆರಳಿದರು. ಕೃಷ್ಣನಿಂದ ಹದಿನೆಂಟು ಯುದ್ಧಗಳಲ್ಲಿ ಸೋತ ಅವರು,  ತಮ್ಮ ಬಲದರ್ಪದ ಮದವನ್ನು ಕಳೆದುಕೊಂಡು ನಿವೃತ್ತರಾದರು(ಹಿಂತಿರುಗಿದರು).

ತೇನಾsಗೃಹೀತಗಜವಾಜಿರಥಾ ನಿತಾನ್ತಂ ಶಸ್ತ್ರೈಃ ಪರಿಕ್ಷತತನೂಭಿರಲಂ ವಮನ್ತಃ ।
ರಕ್ತಂ ವಿಶಸ್ತ್ರಕವಚಧ್ವಜವಾಜಿಸೂತಾಃ ಸ್ತ್ರಸ್ತಾಮ್ಬರಾಃ ಶ್ಲಥಿತಮೂರ್ದ್ಧಜಿನೋ ನಿವೃತ್ತಾಃ ॥೧೪.೮೪॥

ಕೃಷ್ಣನಿಂದ ಪರಿಗ್ರಹಿಸಲ್ಪಟ್ಟ ಆನೆ, ಕುದುರೆ, ರಥ, ಎಲ್ಲವನ್ನೂ ಕೂಡಾ ಕಳೆದುಕೊಂಡು, ಗಾಯಗೊಂಡ ದೇಹವುಳ್ಳವರಾಗಿ, ಚೆನ್ನಾಗಿ ರಕ್ತವನ್ನು ವಾಂತಿಮಾಡುತ್ತಾ, ಶಸ್ತ್ರವಿಲ್ಲದೇ, ಕವಚವಿಲ್ಲದೇ, ದ್ವಜವಿಲ್ಲದೇ, ಎಲ್ಲವನ್ನೂ ಕಳೆದುಕೊಂಡವರಾಗಿ, ಜಾರುವ ಬಟ್ಟೆಯುಳ್ಳವರಾಗಿ, ಬಿಚ್ಚಿಹೋದ ಕೂದಲುಳ್ಳವರಾಗಿ ಹಿಂತಿರುಗಿದರು.   

ಏವಂ ಬೃಹದ್ರಥಸುತೋsಪಿ ಸುಶೋಚ್ಯರೂಪ ಆರ್ತ್ತೋ ಯಯೌ ಬಹುಶ ಏವ ಪುರಂ ಸ್ವಕೀಯಮ್ ।
ಕೃಷ್ಣೇನ ಪೂರ್ಣ್ಣಬಲವೀರ್ಯಗುಣೇನ ಮುಕ್ತೋ ಜೀವೇತ್ಯತೀವ ವಿಜಿತಃ ಶ್ವಸಿತಾವಶೇಷಃ ॥೧೪.೮೫॥

ಹೀಗೆಯೇ, ಬೃಹದ್ರಥನ ಮಗನಾಗಿರುವ ಜರಾಸಂಧನೂ ಕೂಡಾ ಅತ್ಯಂತ ಶೋಚನೀಯ ರೂಪವುಳ್ಳವನಾಗಿ, ಸಂಕಟಗೊಂಡವನಾಗಿ, ಬಹಳ ಬಾರಿ ಪೂರ್ಣವಾಗಿರುವ ಬಲ ಹಾಗೂ ವೀರ್ಯವೆಂಬ ಗುಣಗಳುಳ್ಳ ಶ್ರೀಕೃಷ್ಣನಿಂದ ‘ಬದುಕಿಕೋ ಹೋಗು’ ಎಂದು ಹೇಳಿ ಬಿಡಲ್ಪಟ್ಟವನಾಗಿ, ಉಸಿರುಮಾತ್ರವನ್ನು ಉಳಿಸಿಕೊಂಡು ತನ್ನ ಪಟ್ಟಣದತ್ತ ಹಿಂತಿರುಗಿದನು.

Wednesday, December 4, 2019

Mahabharata Tatparya Nirnaya Kannada 1476_1480


ದುರ್ಯ್ಯೋಧನೇನ ಪೃಥುಮನ್ತ್ರಬಲೋಪಹೂತಾಂಸ್ತತ್ಸಾರಥಿಃ ಫಣಿಗಣಾನ್ ಪವನಾತ್ಮಜಸ್ಯ।
ಸುಪ್ತಸ್ಯ ವಿಸ್ತೃತ ಉರಸ್ಯಮುಚದ್ ವಿಶೀರ್ಣ್ಣದನ್ತಾ ಬಭೂವುರಮುಮಾಶು ವಿದಶ್ಯ ನಾಗಾಃ ॥೧೪.೭೬॥

ದುರ್ಯೋಧನನಿಂದ ಉಗ್ರವಾದ ಮಂತ್ರದ ಬಲದಿಂದ ಕರೆಯಲ್ಪಟ್ಟ ಆ ಹಾವುಗಳ ಸಮೂಹವನ್ನು ದುರ್ಯೋಧನನ ಸಾರಥಿಯು ಮಲಗಿರುವ ಪವನಾತ್ಮಜನ(ಭೀಮಸೇನನ) ಅಗಲವಾದ ಎದೆಯಮೇಲೆ ಬಿಟ್ಟನು. ಈರೀತಿ ಬಿಟ್ಟ ತಕ್ಷಣ ಆ  ಉರನಾಗಗಳು ಭೀಮನನ್ನು ಕಚ್ಚಿದವು ಮತ್ತು ಕಚ್ಚಿ ತಮ್ಮ ಹಲ್ಲುಗಳನ್ನು ಮುರಿದುಕೊಂಡವು.

ಕ್ಷಿಪ್ತ್ವಾ ಸುದೂರಮುರುನಾಗವರಾನಥಾಷ್ಟೌ ತದ್ವಂಶಜಾನ್ ಸ ವಿನಿಹತ್ಯ ಪಿಪೀಲಿಕಾವತ್ ।
ಜಘ್ನೇ ಚ ಸೂತಮಪಹಸ್ತತ ಏವ ಭೀಮಃ ಸುಷ್ವಾಪ ಪೂರ್ವವದನುತ್ಥಿತ ಏವ ತಲ್ಪಾತ್ ॥೧೪.೭೭॥

ಭೀಮಸೇನನು ಹಾಸಿಗೆಯಿಂದ ಏಳದೇ, ಹೇಗೆ ಮಲಗಿದ್ದನೋ ಹಾಗೆಯೇ ಎಂಟು ಉತ್ಕೃಷ್ಟವಾದ ನಾಗಗಳ ಸಮೂಹವನ್ನು ಬಹಳ ದೂರಕ್ಕೆ ಎಸೆದು, ಆ ನಾಗ ವಂಶದಲ್ಲಿ ಬಂದಿರುವ ಹಾವುಗಳನ್ನು ಇರುವೆಗಳೋ ಎಂಬಂತೆ ಕೊಂದನು. ನಂತರ ತನ್ನಮೇಲೆ ಹಾವುಗಳನ್ನು ಹರಿಬಿಟ್ಟ ದುರ್ಯೋಧನನ ಸಾರಥಿಯನ್ನು ಕೊಂದು, ಹಾಗೆಯೇ ನಿದ್ರೆ ಮಾಡಿದ ಕೂಡಾ.
[ಈ ಘಟನೆಯ ವಿವರವನ್ನು ನಾವು ಮಹಾಭಾರತದ ಆದಿಪರ್ವದಲ್ಲಿ(೧೩೭.೪೫) ಕಾಣಬಹುದು. ‘ಪ್ರಬುದ್ಧೋ ಭೀಮಸೇನಸ್ತಾನ್  ಸರ್ವಾನ್ ಸರ್ಪಾನಪೋಥಯತ್  । ಸಾರಥಿಂ ಚಾಸ್ಯ  ದಯಿತಪಹಸ್ತೇನ ಜಘ್ನಿವಾನ್’ ಭೀಮ ಆ ಎಲ್ಲಾ ಹಾವುಗಳನ್ನು ಮತ್ತು ಸಾರಥಿಯನ್ನು ತನ್ನ ಕೈಯ ಹಿಂಬದಿಯಿಂದಲೇ ಹೊಡೆದು ಕೊಂದ]

ತತ್ ತಸ್ಯ ನೈಜಬಲಮಪ್ರಮಯಂ ನಿರೀಕ್ಷ್ಯ ಸರ್ವೇ ಕ್ಷಿತೀಶತನಯಾ ಅಧಿಕಂ ವಿಷೇದುಃ ।
ನಿಶ್ವಾಸತೋ ದರ್ಶನಾದಪಿ ಭಸ್ಮ ಯೇಷಾಂ ಭೂಯಾಸುರೇವ ಭುವನಾನಿ ಚ ತೇ ಮೃಷಾssಸನ್ ॥೧೪.೭೮॥

ಭೀಮಸೇನನ ಸಹಜವಾಗಿರುವ ಬಲವನ್ನು ತಾವು ದಾಟಲಾಗದೆಂದು ತಿಳಿದ ದ್ವೇಷಿಗಳಾದ ಆ ಎಲ್ಲಾ ರಾಜಕುಮಾರರೂ ಕೂಡಾ ಆತ್ಯಂತಿಕವಾಗಿ ದುಃಖಕ್ಕೆ ಒಳಗಾದರು. ಯಾವ ಹಾವುಗಳ ನಿಟ್ಟುಸಿರಿನಿಂದಲೂ, ದರ್ಶನದಿಂದಲೂ ಕೂಡಾ ಇಡೀ ಲೋಕಗಳೇ ಭಸ್ಮವಾಗುತ್ತವೋ,  ಅಂತಹ ಹಾವುಗಳೂ ಕೂಡಾ ಭೀಮಸೇನನ ಮುಂದೆ ವ್ಯರ್ಥವೆನಿಸಿದವು.  

ದದ್ಭಿರ್ವಿದಶ್ಯ ನ ವಿಕಾರಮಮುಷ್ಯ ಕರ್ತುಂ ಶೇಕುರ್ಭುಜಙ್ಗಮವರಾ ಅಪಿ ಸುಪ್ರಯತ್ನಾಃ ।
ಕಸ್ಯಾಪಿ ನೇದೃಶಬಲಂ ಶ್ರುತಪೂರ್ವಮಾಸೀತ್ ದೃಷ್ಟಂ ಕಿಮು ಸ್ಮ ತನಯೇsಪಿ ಹಿರಣ್ಯಕಸ್ಯ ॥೧೪.೭೯॥

ಆ ಹಾವುಗಳು ತಮ್ಮ ಹಲ್ಲುಗಳಿಂದ ಕಚ್ಚಿಯೂ ಕೂಡಾ ಭೀಮನಿಗೆ ವಿಕಾರವನ್ನು ಮಾಡಲು ಸಮರ್ಥವಾಗಲಿಲ್ಲ. ಯಾರಲ್ಲೂ ಕೂಡಾ ಈರೀತಿಯಾಗಿರುವ ಬಲವನ್ನು ಹಿಂದೆ ನಾವು ಕೇಳಿಯೇ ಇಲ್ಲಾ, ಇನ್ನು ನೋಡಲಿಲ್ಲಾ ಎಂದು ಏನು ಹೇಳತಕ್ಕದ್ದು? ಹಿರಣ್ಯಕಶಿಪುವಿನ ಪುತ್ರನಾದ ಪ್ರಹ್ಲಾದನಲ್ಲಿಯೂ ಕೂಡಾ ಈ ರೀತಿಯ ಬಲವನ್ನು ನಾವು ಕೇಳಿಲ್ಲ.
(ಭೀಮನಂತೆ ಹಾವುಗಳಿಂದ ತನ್ನನ್ನು ರಕ್ಷಿಸಿಕೊಂಡ ಪ್ರಹ್ಲಾದನ ಬಲಕ್ಕೂ ಮತ್ತು ಭೀಮಸೇನನ ಬಲಕ್ಕೂ ಇರುವ ವ್ಯೆತ್ಯಾಸವೇನು ಎನ್ನುವುದನ್ನು ವಿವರಿಸುತ್ತಾರೆ- )


ಸ್ವಾತ್ಮಾವನಾರ್ತ್ಥಮಧಿಕಾಂ ಸ್ತುತಿಮೇವ ಕೃತ್ವಾ ವಿಷ್ಣೋಃ ಸ ದೈತ್ಯತನಯೋ ಹರಿಣಾsವಿತೋsಭೂತ್ ।
ನತ್ವೌರಸಂ ಬಲಮಮುಷ್ಯ ಸ ಕೃಷ್ಯತೇ ಹಿ ಭೃತ್ಯೈರ್ಬಲಾತ್ ಸ್ವಪಿತುರೌರಸಮಸ್ಯ ವೀರ್ಯ್ಯಮ್ ॥೧೪.೮೦॥

ದೈತ್ಯನಾದ ಹಿರಣ್ಯಕಶಿಪುವಿನ ಮಗನಾದ  ಪ್ರಹ್ಲಾದನು ತನ್ನನ್ನು ರಕ್ಷಿಸಿಕೊಳ್ಳಲು ಭಗವಂತನನ್ನು ಸ್ತೋತ್ರಮಾಡಿದನು ಮತ್ತು ನಾರಾಯಣನಿಂದ ರಕ್ಷಿಸಲ್ಪಟ್ಟನು.  ಅವನಿಗೆ ಸಹಜವಾದ ದೈಹಿಕ ಸಾಮರ್ಥ್ಯ ಇರಲಿಲ್ಲ. ಹಾಗಾಗಿ ಅವನು ಭೃತ್ಯರಿಂದ ಬಲಾತ್ಕಾರವಾಗಿ ಎಳೆಯಲ್ಪಟ್ಟನು. ಇವನಿಗಾದರೋ, ತನ್ನ ತಂದೆಯಾದ ಮುಖ್ಯಪ್ರಾಣನ ಸಹಜವಾದ ವೀರ್ಯವಿದೆ.(ಅಂದರೆ: ಯಾವುದೇ ವರ, ಮಂತ್ರ ಬಲವಲ್ಲ, ಸಹಜವಾದ ಬಲದಿಂದಲೇ ಭೀಮ ಎಲ್ಲವನ್ನೂ ಮಾಡುತ್ತಿದ್ದ)

Tuesday, December 3, 2019

Mahabharata Tatparya Nirnaya Kannada 1471_1475


ಸಮ್ಮನ್ತ್ರ್ಯ ರಾಜತನಯೈರ್ದ್ಧೃತರಾಷ್ಟ್ರಜೈಸ್ತದ್ ದತ್ತಂ ಸ್ವಸೂದಮುಖತೋsಖಿಲಭಕ್ಷ್ಯಭೋಜ್ಯೇ ।
ಜ್ಞಾತ್ವಾ ಯುಯುತ್ಸುಗದಿತಂ ಬಲವಾನ್ ಸ ಭೀಮೋ ವಿಷ್ಣೋರನುಗ್ರಹಬಲಾಜ್ಜರಯಾಞ್ಚಕಾರ॥೧೪.೭೧॥

ರಾಜಕುಮಾರರೊಂದಿಗೆ ಚೆನ್ನಾಗಿ ಸಮಾಲೋಚನೆ ಮಾಡಿ, ತಮ್ಮ ಅಡಿಗೆಭಟ್ಟನ ಮುಖಾಂತರ ಎಲ್ಲಾ ಭಕ್ಷ್ಯಭೋಜ್ಯಗಳಲ್ಲಿಟ್ಟು ಕೊಡಲ್ಪಟ್ಟ ವಿಷವನ್ನು, ಧೃತರಾಷ್ಟ್ರಪುತ್ರ  ‘ಯುಯುತ್ಸು’ ಹೇಳಿದಮೇಲೆ, ತಿಳಿದೇ, ಬಲಿಷ್ಠನಾಗಿರುವ ಭೀಮಸೇನನು ವಿಷ್ಣುವಿನ ಅನುಗ್ರಹಬಲದಿಂದ ಭಕ್ಷಿಸಿ, ಜೀರ್ಣಿಸಿಕೊಂಡನು.

ಜೀರ್ಣ್ಣೇ ವಿಷೇ ಕುಮತಯಃ ಪರಮಾಭಿತಪ್ತಾಃ ಪ್ರಾಸಾದಮಾಶು ವಿದಧುರ್ಹರಿಪಾದತೋಯೇ ।
ಜ್ಞಾತ್ವಾ ಯುಯುತ್ಸುಮುಖತಃ ಸ್ವಯಮತ್ರ ಚಾನ್ತೇ ಸುಷ್ವಾಪ ಮಾರುತಿರಮಾ ಧೃತರಾಷ್ಟ್ರಪುತ್ರೈಃ ॥೧೪.೭೨॥

ವಿಷವು ಜೀರ್ಣವಾಗಲು, ಬಹಳ ಸಂಕಟಪಟ್ಟ ದುರ್ಬುದ್ಧಿಗಳಾದ ದುರ್ಯೋಧನ ಮೊದಲಾದವರು, ಗಂಗಾನದಿಯ ತೀರದಲ್ಲಿ ಕೂಡಲೇ ಒಂದು ಕೃತ್ರಿಮ ಪ್ರಾಸಾದವನ್ನು ಮಾಡಿದರು. ಅವರೆಲ್ಲರ  ಪಿತೂರಿಗಳನ್ನು ಯುಯುತ್ಸುಮುಖದಿಂದ ತಿಳಿದ ಭೀಮಸೇನನು, ಅವರಿಗೆ ಅನುಕೂಲವಾಗಲಿ ಎಂದು ತಾನೇ ಅವರೊಂದಿಗೆ ಪ್ರಾಸಾದದ ಕಡೆಯಲ್ಲಿ ಮಲಗಿದನು.

ದೋಷಾನ್ ಪ್ರಕಾಶಯಿತುಮೇವ ವಿಚಿತ್ರವೀರ್ಯ್ಯಪುತ್ರಾತ್ಮಜೇಷು ನೃವರಂ ಪ್ರತಿ ಸುಪ್ತಮೀಕ್ಷ್ಯ ।
ಬಧ್ವಾsಭಿಮನ್ತ್ರಣದೃಢೈರಯಸಾ ಕೃತೈಸ್ತಂ ಪಾಶೈರ್ವಿಚಿಕ್ಷಿಪುರುದೇ ಹರಿಪಾದಜಾಯಾಃ ॥೧೪.೭೩॥

ವಿಚಿತ್ರವೀರ್ಯನ ಪುತ್ರನಾದ ಧೃತರಾಷ್ಟ್ರನ ಮಕ್ಕಳಾಗಿರುವ ದುರ್ಯೋಧನಾದಿಗಳು, ತಮ್ಮ  ದೋಷಗಳನ್ನು ಜಗತ್ತಿಗೆ ತೋರಿಸಿಕೊಡಲೆಂದೇ ಪ್ರಾಸಾದದಲ್ಲಿ ಮಲಗಿರುವ, ಜೀವೋತ್ತಮನಾದ ಮುಖ್ಯಪ್ರಾಣನನ್ನು ಕಂಡು, ದುರ್ಮಂತ್ರದಿಂದ ಅಭಿಮಂತ್ರಸಿರುವ, ದೃಢವಾದ ಕಬ್ಬಿಣದಿಂದ ಮಾಡಿದ ಹಗ್ಗಗಳಿಂದ ಅವನನ್ನು  ಕಟ್ಟಿ, ಗಂಗಾನದಿಯ ನೀರಿನಲ್ಲಿ ಎಸೆದರು.  

ತತ್ ಕೋಟಿಯೋಜನಗಭೀರಮುದಂ ವಿಗಾಹ್ಯ ಭೀಮೋ ವಿಜೃಮ್ಭಣತ ಏವ ವಿವೃಶ್ಚ್ಯ ಪಾಶಾನ್ ।
ಉತ್ತೀರ್ಯ್ಯ ಸಜ್ಜನಗಣಸ್ಯ ವಿಧಾಯ ಹರ್ಷಂ ತಸ್ಥಾವನನ್ತಗುಣವಿಷ್ಣುಸದಾತಿಹಾರ್ದ್ದಃ ॥೧೪.೭೪॥

ಕೋಟಿ ಯೋಜನ ಆಳದ ಗಾಂಭೀರ್ಯವನ್ನು ಹೊಂದಿರುವ ಗಂಗೆಯ ನೀರಿನಲ್ಲಿ ಮುಳುಗಿದ ಭೀಮಸೇನನು, ಆಕಳಿಕೆಯಿಂದಲೇ(ಮೈಮುರಿಯುವಿಕೆಯಿಂದಲೇ) ಹಗ್ಗಗಳನ್ನು ಕತ್ತರಿಸಿ, ನದಿಯಿಂದ ಮೇಲೆದ್ದು, ಸಜ್ಜನರ ಸಮೂಹಕ್ಕೆ ಹರ್ಷವನ್ನು ಉಂಟುಮಾಡಿ, ಎಣಿಯಿರದ ಗುಣಗಳುಳ್ಳ ವಿಷ್ಣುವಿನಲ್ಲಿ ನೆಲೆಗೊಂಡ ಮನಸ್ಸುಳ್ಳವನಾಗಿದ್ದನು (ಆತ್ಯನ್ತಿಕ ಸ್ನೇಹ ಉಳ್ಳವನಾಗಿದ್ದನು).

ತಂ ವೀಕ್ಷ್ಯದುಷ್ಟಮನಸೋsತಿವಿಪನ್ನಚಿತ್ತಾಃ ಸಮ್ಮನ್ತ್ರ್ಯ ಭೂಯ ಉರುನಾಗಗಣಾನಥಾಷ್ಟೌ ।
ಶುಕ್ರೋಕ್ತಮನ್ತ್ರಬಲತಃ ಪುರ ಆಹ್ವಯಿತ್ವಾ ಪಶ್ಚಾತ್ ಸುಪಞ್ಜರಗತಾನ್ ಪ್ರದದುಃ  ಸ್ವಸೂತೇ ॥೧೪.೭೫॥

ಭೀಮನನ್ನು ಕಂಡು ಬಹಳ ಸಂಕಟಪಟ್ಟ ಆ ದುಷ್ಟಮನಸರು, ತದನಂತರ, ಶುಕ್ರಾಚಾರ್ಯರಿಂದ ಪಡೆದ ಮಂತ್ರದ ಬಲದಿಂದ ಚೆನ್ನಾಗಿ ಮಂತ್ರಣಮಾಡಿ ಕರೆಸಿದ ಎಂಟು ನಾಗಗಳ ಪ್ರಭೇದಗಳನ್ನು  ಒಳ್ಳೆ ಪಂಜರದಲ್ಲಿ ಇಟ್ಟು, ತಮ್ಮ ರಥದ ಸಾರಥಿಯಲ್ಲಿ ಕೊಟ್ಟರು.