ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, December 3, 2019

Mahabharata Tatparya Nirnaya Kannada 1471_1475


ಸಮ್ಮನ್ತ್ರ್ಯ ರಾಜತನಯೈರ್ದ್ಧೃತರಾಷ್ಟ್ರಜೈಸ್ತದ್ ದತ್ತಂ ಸ್ವಸೂದಮುಖತೋsಖಿಲಭಕ್ಷ್ಯಭೋಜ್ಯೇ
ಜ್ಞಾತ್ವಾ ಯುಯುತ್ಸುಗದಿತಂ ಬಲವಾನ್ ಸ ಭೀಮೋ ವಿಷ್ಣೋರನುಗ್ರಹಬಲಾಜ್ಜರಯಾಞ್ಚಕಾರ೧೪.೭೧

ರಾಜಕುಮಾರರೊಂದಿಗೆ ಚೆನ್ನಾಗಿ ಸಮಾಲೋಚನೆ ಮಾಡಿ, ತಮ್ಮ ಅಡಿಗೆಭಟ್ಟನ ಮುಖಾಂತರ ಎಲ್ಲಾ ಭಕ್ಷ್ಯಭೋಜ್ಯಗಳಲ್ಲಿಟ್ಟು ಕೊಡಲ್ಪಟ್ಟ ವಿಷವನ್ನು, ಧೃತರಾಷ್ಟ್ರಪುತ್ರ  ‘ಯುಯುತ್ಸು’ ಹೇಳಿದಮೇಲೆ, ತಿಳಿದೇ, ಬಲಿಷ್ಠನಾಗಿರುವ ಭೀಮಸೇನನು ವಿಷ್ಣುವಿನ ಅನುಗ್ರಹಬಲದಿಂದ ಭಕ್ಷಿಸಿ, ಜೀರ್ಣಿಸಿಕೊಂಡನು.

ಜೀರ್ಣ್ಣೇ ವಿಷೇ ಕುಮತಯಃ ಪರಮಾಭಿತಪ್ತಾಃ ಪ್ರಾಸಾದಮಾಶು ವಿದಧುರ್ಹರಿಪಾದತೋಯೇ
ಜ್ಞಾತ್ವಾ ಯುಯುತ್ಸುಮುಖತಃ ಸ್ವಯಮತ್ರ ಚಾನ್ತೇ ಸುಷ್ವಾಪ ಮಾರುತಿರಮಾ ಧೃತರಾಷ್ಟ್ರಪುತ್ರೈಃ ೧೪.೭೨

ವಿಷವು ಜೀರ್ಣವಾಗಲು, ಬಹಳ ಸಂಕಟಪಟ್ಟ ದುರ್ಬುದ್ಧಿಗಳಾದ ದುರ್ಯೋಧನ ಮೊದಲಾದವರು, ಗಂಗಾನದಿಯ ತೀರದಲ್ಲಿ ಕೂಡಲೇ ಒಂದು ಕೃತ್ರಿಮ ಪ್ರಾಸಾದವನ್ನು ಮಾಡಿದರು. ಅವರೆಲ್ಲರ  ಪಿತೂರಿಗಳನ್ನು ಯುಯುತ್ಸುಮುಖದಿಂದ ತಿಳಿದ ಭೀಮಸೇನನು, ಅವರಿಗೆ ಅನುಕೂಲವಾಗಲಿ ಎಂದು ತಾನೇ ಅವರೊಂದಿಗೆ ಪ್ರಾಸಾದದ ಕಡೆಯಲ್ಲಿ ಮಲಗಿದನು.

ದೋಷಾನ್ ಪ್ರಕಾಶಯಿತುಮೇವ ವಿಚಿತ್ರವೀರ್ಯ್ಯಪುತ್ರಾತ್ಮಜೇಷು ನೃವರಂ ಪ್ರತಿ ಸುಪ್ತಮೀಕ್ಷ್ಯ
ಬಧ್ವಾsಭಿಮನ್ತ್ರಣದೃಢೈರಯಸಾ ಕೃತೈಸ್ತಂ ಪಾಶೈರ್ವಿಚಿಕ್ಷಿಪುರುದೇ ಹರಿಪಾದಜಾಯಾಃ ೧೪.೭೩

ವಿಚಿತ್ರವೀರ್ಯನ ಪುತ್ರನಾದ ಧೃತರಾಷ್ಟ್ರನ ಮಕ್ಕಳಾಗಿರುವ ದುರ್ಯೋಧನಾದಿಗಳು, ತಮ್ಮ  ದೋಷಗಳನ್ನು ಜಗತ್ತಿಗೆ ತೋರಿಸಿಕೊಡಲೆಂದೇ ಪ್ರಾಸಾದದಲ್ಲಿ ಮಲಗಿರುವ, ಜೀವೋತ್ತಮನಾದ ಮುಖ್ಯಪ್ರಾಣನನ್ನು ಕಂಡು, ದುರ್ಮಂತ್ರದಿಂದ ಅಭಿಮಂತ್ರಸಿರುವ, ದೃಢವಾದ ಕಬ್ಬಿಣದಿಂದ ಮಾಡಿದ ಹಗ್ಗಗಳಿಂದ ಅವನನ್ನು  ಕಟ್ಟಿ, ಗಂಗಾನದಿಯ ನೀರಿನಲ್ಲಿ ಎಸೆದರು.  

ತತ್ ಕೋಟಿಯೋಜನಗಭೀರಮುದಂ ವಿಗಾಹ್ಯ ಭೀಮೋ ವಿಜೃಮ್ಭಣತ ಏವ ವಿವೃಶ್ಚ್ಯ ಪಾಶಾನ್
ಉತ್ತೀರ್ಯ್ಯ ಸಜ್ಜನಗಣಸ್ಯ ವಿಧಾಯ ಹರ್ಷಂ ತಸ್ಥಾವನನ್ತಗುಣವಿಷ್ಣುಸದಾತಿಹಾರ್ದ್ದಃ ೧೪.೭೪

ಕೋಟಿ ಯೋಜನ ಆಳದ ಗಾಂಭೀರ್ಯವನ್ನು ಹೊಂದಿರುವ ಗಂಗೆಯ ನೀರಿನಲ್ಲಿ ಮುಳುಗಿದ ಭೀಮಸೇನನು, ಆಕಳಿಕೆಯಿಂದಲೇ(ಮೈಮುರಿಯುವಿಕೆಯಿಂದಲೇ) ಹಗ್ಗಗಳನ್ನು ಕತ್ತರಿಸಿ, ನದಿಯಿಂದ ಮೇಲೆದ್ದು, ಸಜ್ಜನರ ಸಮೂಹಕ್ಕೆ ಹರ್ಷವನ್ನು ಉಂಟುಮಾಡಿ, ಎಣಿಯಿರದ ಗುಣಗಳುಳ್ಳ ವಿಷ್ಣುವಿನಲ್ಲಿ ನೆಲೆಗೊಂಡ ಮನಸ್ಸುಳ್ಳವನಾಗಿದ್ದನು (ಆತ್ಯನ್ತಿಕ ಸ್ನೇಹ ಉಳ್ಳವನಾಗಿದ್ದನು).

ತಂ ವೀಕ್ಷ್ಯದುಷ್ಟಮನಸೋsತಿವಿಪನ್ನಚಿತ್ತಾಃ ಸಮ್ಮನ್ತ್ರ್ಯ ಭೂಯ ಉರುನಾಗಗಣಾನಥಾಷ್ಟೌ 
ಶುಕ್ರೋಕ್ತಮನ್ತ್ರಬಲತಃ ಪುರ ಆಹ್ವಯಿತ್ವಾ ಪಶ್ಚಾತ್ ಸುಪಞ್ಜರಗತಾನ್ ಪ್ರದದುಃ  ಸ್ವಸೂತೇ ೧೪.೭೫

ಭೀಮನನ್ನು ಕಂಡು ಬಹಳ ಸಂಕಟಪಟ್ಟ ಆ ದುಷ್ಟಮನಸರು, ತದನಂತರ, ಶುಕ್ರಾಚಾರ್ಯರಿಂದ ಪಡೆದ ಮಂತ್ರದ ಬಲದಿಂದ ಚೆನ್ನಾಗಿ ಮಂತ್ರಣಮಾಡಿ ಕರೆಸಿದ ಎಂಟು ನಾಗಗಳ ಪ್ರಭೇದಗಳನ್ನು  ಒಳ್ಳೆ ಪಂಜರದಲ್ಲಿ ಇಟ್ಟು, ತಮ್ಮ ರಥದ ಸಾರಥಿಯಲ್ಲಿ ಕೊಟ್ಟರು.

No comments:

Post a Comment