ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, December 5, 2019

Mahabharata Tatparya Nirnaya Kannada 1486_1490


ಏವಂ ಗತೇಷು ಬಹುಶೋ ನತಕನ್ಧರೇಷು ರಾಜಸ್ವಜೋsಪಿ ಮಧುರಾಂ ಸ್ವಪುರೀಂ ಪ್ರವಿಶ್ಯ
ರಾಮೇಣ ಸಾರ್ದ್ಧಮಖಿಲೈರ್ಯ್ಯದುಭಿಃ ಸಮೇತೋ ರೇಮೇ ರಮಾಪತಿರಚಿನ್ತ್ಯಬಲೋ ಜಯಶ್ರೀಃ ೧೪.೮೬

ಈರೀತಿಯಾಗಿ ಬಹಳ ಬಾರಿ ಆ ಎಲ್ಲಾ ರಾಜರುಗಳು ತಮ್ಮ ತಲೆತಗ್ಗಿಸಿ ತೆರಳುತ್ತಿರಲು, ಅಚಿಂತ್ಯಬಲವುಳ್ಳ ರಮಾಪತಿಯಾದ ಶ್ರೀಕೃಷ್ಣನು, ಯಾವಾಗಲೂ ಜಯಶ್ರೀಯನ್ನು ಪಡೆದು, ತನ್ನ ಪಟ್ಟಣವಾದ ಮಧುರೆಯನ್ನು ಬಲರಾಮನಿಂದ ಕೂಡಿಕೊಂಡು ಪ್ರವೇಶಿಸಿ, ಎಲ್ಲಾ ಯದುಗಳೊಂದಿಗೆ ಕೂಡಿಕೊಂಡು ಕ್ರೀಡಿಸಿಕೊಂಡಿದ್ದನು.

ವ್ಯರ್ತ್ಥೋದ್ಯಮಾಃ ಪುನರಪಿ ಸ್ಮ ಸದಾರ್ತ್ತರಾಷ್ಟ್ರಾ ಭೀಮಂ ನಿಹನ್ತುಮುರುಯತ್ನಮಕುರ್ವತಾಜ್ಞಾಃ
ರಾಜ್ಞಾಂ ಸುತಾಸ್ತಮಖಿಲಂ ಸ ಮೃಷೈವ ಕೃತ್ವಾ ಚಕ್ರೇ ಜಯಾಯ ಚ ದಿಶಾಂ ಬಲವಾನ್ ಪ್ರಯತ್ನಮ್ ೧೪.೮೭

ಇತ್ತ, ದುರ್ಯೋಧನಾದಿಗಳಿಂದ ಕೂಡಿಕೊಂಡ ಅವಿವೇಕಿ ರಾಜಕುಮಾರರೆಲ್ಲರೂ ಭೀಮಸೇನನನ್ನು ಕೊಲ್ಲುವ ಯತ್ನದಲ್ಲಿ ವಿಫಲತೆಯನ್ನು ಹೊಂದಿದರೂ ಕೂಡಾ, ಮತ್ತೆಮತ್ತೆ ಭೀಮನನ್ನು ಕೊಲ್ಲಲು ಬೇರೆ-ಬೇರೆ ಪ್ರಯತ್ನಗಳನ್ನು ಮಾಡಿದರು. ಅವರ ಆ ಎಲ್ಲಾ ಪ್ರಯತ್ನಗಳನ್ನು ವ್ಯರ್ಥವನ್ನಾಗಿ ಮಾಡಿದ ಬಲಿಷ್ಠನಾದ ಭೀಮಸೇನನು, ದಿಗ್ವಿಜಯಕ್ಕಾಗಿ ಪ್ರಯತ್ನವನ್ನು ಮಾಡಿದನು. [ಈ ದಿಗ್ವಿಜಯ ಕಾಲದಲ್ಲಿ ಭೀಮಾರ್ಜುನರಿಗೆ  ಸರಿಸುಮಾರು ೧೫-೧೬ ವಯಸ್ಸು ಎನ್ನುವುದನ್ನು ಓದುಗರು ಗಮನಿಸಬೇಕು].

ಪ್ರಾಚೀಂ ದಿಶಂ ಪ್ರಥಮಮೇವ ಜಿಗಾಯ ಪಶ್ಚಾದ್ ಯಾಮ್ಯಾಂ ಜಲೇಶಪರಿಪಾಲಿತಯಾ ಸಹಾನ್ಯಾಮ್
ಯೌ ತೌ ಪುರಾತನದಶಾನನಕುಮ್ಭಕರ್ಣ್ಣೌ ಮಾತೃಷ್ವಸಾತನಯತಾಂ ಚ ಗತೌ ಜಿಗಾಯ ೧೪.೮೮

ಭೀಮಸೇನನು ಮೊದಲು ಪೂರ್ವದಿಕ್ಕನ್ನೂ, ತದನಂತರ ದಕ್ಷಿಣದಿಕ್ಕನ್ನೂ, ನಂತರ ವರುಣನಾಳುವ  ಪಶ್ಚಿಮದಿಕ್ಕಿನಿಂದ ಕೂಡಿದ ಉತ್ತರದಿಕ್ಕನ್ನೂ ಗೆದ್ದನು.
ಯಾರು ಹಿಂದೆ ರಾವಣ ಹಾಗು ಕುಂಭಕರ್ಣರಾಗಿದ್ದರೋ ಅವರೇ ಈಗ ಭೀಮನ ಚಿಕ್ಕಮ್ಮನ(ಕುಂತಿಯ ತಂಗಿಯರ) ಮಕ್ಕಳಾಗಿ ಹುಟ್ಟಿದ್ದರು. ಅವರನ್ನೂ ಭೀಮಸೇನ ಗೆದ್ದ.

ಪೂರ್ವಸ್ತಯೋರ್ಹಿ ದಮಘೋಷಸುತಃ ಪ್ರಜಾತಃ ಪ್ರಾಹುಶ್ಚ ಯಂ ನೃಪತಯಃ ಶಿಶುಪಾಲನಾಮ್ನಾ
ಅನ್ಯಂ ವದನ್ತಿ ಚ ಕರೂಶನೃಪಂ ತಥಾsನ್ಯಮಾತೃಷ್ವಸಾತನಯಮೇವ ಚ ದನ್ತವಕ್ರಮ್ ೧೪.೮೯

ಅವರಿಬ್ಬರಲ್ಲಿ ಮೊದಲಿಗನಾದ ರಾವಣನು ದಮಘೋಷನ ಮಗನಾಗಿ ಹುಟ್ಟಿದ್ದನು. ಯಾರನ್ನು ರಾಜರು ಶಿಶುಪಾಲ ಎಂಬ ಹೆಸರಿನಿಂದ ಕರೆಯುತ್ತಾರೋ ಅವನೇ ಇವನು. ಹಾಗೆಯೇ ಇನ್ನೊಬ್ಬ ತಾಯಿಯ ತಂಗಿಯ ಮಗನಾಗಿ ಹುಟ್ಟಿದ ದಂತವಕ್ರನನ್ನು ಕರೂಶರಾಜಾ ಎಂದೂ ಹೇಳುತ್ತಾರೆ. (ಇವನೇ ಹಿಂದೆ  ಕುಂಭಕರ್ಣನಾಗಿದ್ದವನು).  

ಜಿತ್ವೈವ ತಾವಪಿ ಜಿಗಾಯ ಚ ಪೌಣ್ಡ್ರಕಾಖ್ಯಂ ಶೌರೇಃ ಸುತಂ ಸುತಮಜೈದಥ ಭೀಷ್ಮಕಸ್ಯ
ಯಃ ಪೂರ್ವಮಾಸ ದಿತಿಜೋ ನರಹೇಲ್ವಲಾಖ್ಯೋ ರುಗ್ಮೀತಿ ನಾಮ ಚ ಬಭೂವ ಸ ಕುಣ್ಡೀನೇಶಃ ೧೪.೯೦

ಇವರಿಬ್ಬರನ್ನು ಗೆದ್ದು, ಪೌಣ್ಡ್ರಕ ಎನ್ನುವ ಹೆಸರಿನ ವಸುದೇವನ ಮಗನನ್ನು ಕೂಡಾ ಭೀಮ ಗೆದ್ದ. ತದನಂತರ ಭೀಷ್ಮಕನ ಮಗನಾಗಿರುವ ರುಗ್ಮಿಯನ್ನು ಭೀಮ ಗೆದ್ದ. ಯಾರು ಮೊದಲು ಮನುಷ್ಯರನ್ನು ತಿನ್ನುವ ‘ಇಲ್ವಲ’^ ಎಂಬ ಹೆಸರಿನ  ದೈತ್ಯನಾಗಿದ್ದನೋ, ಅವನು ಕುಣ್ಡಿನ ಪಟ್ಟಣದ ಒಡೆಯನಾಗಿದ್ದ. ಅವನನ್ನೂ ಭೀಮ ಗೆದ್ದ.
[^ಇಲ್ವಲನು ತನ್ನ ತಮ್ಮ ವಾತಾಪಿಯನ್ನು ಮೇಕೆಯನ್ನಾಗಿ ಮಾಡಿ, ಅವನನ್ನು ಶ್ರಾದ್ಧದ ನೆಪದಲ್ಲಿ ಕತ್ತರಿಸಿ ಎಲ್ಲರಿಗೂ ಉಣಬಡಿಸುತ್ತಿದ್ದ. ಎಲ್ಲರೂ ಆಹಾರ ಸ್ವೀಕರಿಸಿದ ಮೇಲೆ  ಇಲ್ವಲ ವಾತಾಪಿಯನ್ನು ಕರೆಯುತ್ತಿದ್ದ. ಆಗ ವಾತಾಪಿ ಅವರೆಲ್ಲರ ಹೊಟ್ಟೆಯನ್ನು ಸೀಳಿ ಹೊರಬರುತ್ತಿದ್ದ. ಆನಂತರದಲ್ಲಿ ಅವರಿಬ್ಬರೂ ಸೇರಿಕೊಂಡು ಅತಿಥಿಗಳನ್ನು ತಿಂದು ಮುಗಿಸುತ್ತಿದ್ದರು. ಹೀಗೆ, ಅವರು ಅನೇಕರನ್ನು ಕೊಂದಿದ್ದರು.
ಇಂಥಹ ಇಲ್ವಲನು ಒಮ್ಮೆ ಅಗಸ್ತ್ಯರನ್ನು ಊಟಕ್ಕೆ ಆಹ್ವಾನಿಸಿದ. ಇಲ್ವಲನ ಕ್ರೂರ ಕೃತ್ಯಗಳನ್ನು ತಿಳಿದೇ ಅಗಸ್ತ್ಯರು ಇಲ್ವಲನ ಅತಿಥಿಯಾಗಿ ಹೋದರು.  ವಾತಾಪಿಯನ್ನು ಅಗಸ್ತ್ಯಮುನಿಗಳು ಆಹಾರರೂಪದಲ್ಲಿ ಸ್ವೀಕರಿಸಿ, ಇಲ್ವಲ ಕರೆಯುವ ಮುನ್ನವೇ ‘ವಾತಾಪಿ ಜೀರ್ಣೋಭವ’ (ವಾತಾಪಿ ಜೀರ್ಣವಾಗಿ ಹೋಗು) ಎಂದರು. ಹೀಗಾಗಿ ವಾತಾಪಿ ಅವರ ಉದರದಲ್ಲಿ ಕರಗಿಹೋದ. ಹೀಗಾಗಿ ವಾತಾಪಿಯನ್ನು ಇಲ್ವಲ ಕರೆದಾಗ ಆತ ಹಿಂತಿರುಗಲಿಲ್ಲ. ಈರೀತಿ ವಾತಾಪಿಯ ಸಂಹಾರವಾಯಿತು. ಈ ಕಥೆಯ ವಿವರವನ್ನು ನಾವು ಮಹಾಭಾರತದಲ್ಲಿ ಕಾಣುತ್ತೇವೆ. ಈ ಇಲ್ವಲನೇ ಭೀಷ್ಮಕನ ಮಗ ರುಗ್ಮಿಯಾಗಿ ಹುಟ್ಟಿದ್ದ. ].

Mahabharata Tatparya Nirnaya Kannada 1481_1485


ನೈಸರ್ಗ್ಗಿಕಪ್ರಿಯಮಿಮಂ ಪ್ರವದನ್ತಿ ವಿಪ್ರಾ ವಿಷ್ಣೋರ್ನ್ನಿತಾನ್ತಮಪಿ ಸತ್ಯಮಿದಂ ಧ್ರುವಂ ಹಿ
ನೈವಾನ್ಯಥೌರಸಬಲಂ ಭವತೀದೃಶಂ ತದುತ್ಸಾದ್ಯ ಏಷ ಹರಿಣೈವ ಸಹೈಷ ನೋSರ್ತ್ಥಃ ೧೪.೮೧

ಸಹಜವಾದುದ್ದನ್ನೇ ಹೆಚ್ಚು ಇಷ್ಟಪಡುವ ನಾರಾಯಣನಿಗೆ ನೈಸರ್ಗಿಕ ಬಲವಿರುವ ಭೀಮ ಬಹಳ ಪ್ರಿಯ ಎಂದು ವಿಪ್ರರು ಹೇಳುತ್ತಾರೆ.  ಇದು ಖಂಡಿತವಾಗಿಯೂ ಸತ್ಯ. ಇಲ್ಲದಿದ್ದರೆ ಈರೀತಿಯಾದ ಸಹಜಸಿದ್ಧವಾದ ಬಲವು ಅವನಲ್ಲಿರುತ್ತಿರಲಿಲ್ಲ. ಆ ಕಾರಣದಿಂದ ಶ್ರೀಕೃಷ್ಣನ ಜೊತೆಗೇ ಭೀಮಸೇನನನ್ನು ಸಾಯಿಸಬೇಕು. ಅದೇ ನಮಗೆ ಅನುಕೂಲವು.

ಕೃಷ್ಣಃ ಕಿಲೈಷ ಚ ಹರಿರ್ಯ್ಯದುಷು ಪ್ರಜಾತಃ ಸೋsಸ್ಯಾsಶ್ರಯಃ ಕುರುತ ತಸ್ಯ ಬಹು ಪ್ರತೀಪಮ್
ಸಮ್ಮನ್ತ್ರ್ಯ ಚೈವಮತಿಪಾಪತಮಾ ನರೇನ್ದ್ರಪುತ್ರಾ ಹರೇಶ್ಚ ಬಹು ಚಕ್ರುರಥ ಪ್ರತೀಪಮ್ ೧೪.೮೨

ನಾರಾಯಣನೇ ಯದುಗಳಲ್ಲಿ ಶ್ರೀಕೃಷ್ಣನಾಗಿ ಬಂದಿದ್ದಾನೆ. ಅವನೇ ಈ ಭೀಮಸೇನನಿಗೆ ಅಶ್ರಯನಾಗಿದ್ದಾನೆ. ಆ ಕೃಷ್ಣನಿಗೆ ಬಹಳವಾಗಿ ವೈರವನ್ನು ಮಾಡಿರಿ’ ಎಂದು ಮಂತ್ರಾಲೋಚನೆ ಮಾಡಿದ ಅತ್ಯಂತ ಪಾಪಿಷ್ಠರಾದ ರಾಜಪುತ್ರರು-ಶ್ರೀಕೃಷ್ಣನಿಗೆ ಬಹಳವಾಗಿ ವಿರೋಧವನ್ನು ಮಾಡಿದರು. 

ತೈಃ ಪ್ರೇರಿತಾ ನೃಪತಯಃ ಪಿತರಶ್ಚ ತೇಷಾಂ ಸಾಕಂ ಬೃಹದ್ರಥಸುತೇನ ಹರೇಃ ಸಕಾಶಮ್
ಯುದ್ಧಾಯ ಜಗ್ಮುರಮುನಾsಷ್ಟದಶೇಷು ಯುದ್ಧೇಷ್ವತ್ಯನ್ತಭಗ್ನಬಲದರ್ಪ್ಪಮದಾ ನಿವೃತ್ತಾಃ ೧೪.೮೩

ಮಕ್ಕಳಿಂದ ಪ್ರಚೋದಿಸಲ್ಪಟ್ಟ, ರಾಜರಾಗಿದ್ದ ತಂದೆಯಂದಿರು, ಜರಾಸಂಧನೂಂದಿಗೆ ಕೂಡಿಕೊಂಡು ಶ್ರೀಕೃಷ್ಣನೊಂದಿಗೆ ಯುದ್ಧಕ್ಕೆಂದು ತೆರಳಿದರು. ಕೃಷ್ಣನಿಂದ ಹದಿನೆಂಟು ಯುದ್ಧಗಳಲ್ಲಿ ಸೋತ ಅವರು,  ತಮ್ಮ ಬಲದರ್ಪದ ಮದವನ್ನು ಕಳೆದುಕೊಂಡು ನಿವೃತ್ತರಾದರು(ಹಿಂತಿರುಗಿದರು).

ತೇನಾsಗೃಹೀತಗಜವಾಜಿರಥಾ ನಿತಾನ್ತಂ ಶಸ್ತ್ರೈಃ ಪರಿಕ್ಷತತನೂಭಿರಲಂ ವಮನ್ತಃ
ರಕ್ತಂ ವಿಶಸ್ತ್ರಕವಚಧ್ವಜವಾಜಿಸೂತಾಃ ಸ್ತ್ರಸ್ತಾಮ್ಬರಾಃ ಶ್ಲಥಿತಮೂರ್ದ್ಧಜಿನೋ ನಿವೃತ್ತಾಃ ೧೪.೮೪

ಕೃಷ್ಣನಿಂದ ಪರಿಗ್ರಹಿಸಲ್ಪಟ್ಟ ಆನೆ, ಕುದುರೆ, ರಥ, ಎಲ್ಲವನ್ನೂ ಕೂಡಾ ಕಳೆದುಕೊಂಡು, ಗಾಯಗೊಂಡ ದೇಹವುಳ್ಳವರಾಗಿ, ಚೆನ್ನಾಗಿ ರಕ್ತವನ್ನು ವಾಂತಿಮಾಡುತ್ತಾ, ಶಸ್ತ್ರವಿಲ್ಲದೇ, ಕವಚವಿಲ್ಲದೇ, ದ್ವಜವಿಲ್ಲದೇ, ಎಲ್ಲವನ್ನೂ ಕಳೆದುಕೊಂಡವರಾಗಿ, ಜಾರುವ ಬಟ್ಟೆಯುಳ್ಳವರಾಗಿ, ಬಿಚ್ಚಿಹೋದ ಕೂದಲುಳ್ಳವರಾಗಿ ಹಿಂತಿರುಗಿದರು.   

ಏವಂ ಬೃಹದ್ರಥಸುತೋsಪಿ ಸುಶೋಚ್ಯರೂಪ ಆರ್ತ್ತೋ ಯಯೌ ಬಹುಶ ಏವ ಪುರಂ ಸ್ವಕೀಯಮ್
ಕೃಷ್ಣೇನ ಪೂರ್ಣ್ಣಬಲವೀರ್ಯಗುಣೇನ ಮುಕ್ತೋ ಜೀವೇತ್ಯತೀವ ವಿಜಿತಃ ಶ್ವಸಿತಾವಶೇಷಃ ೧೪.೮೫

ಹೀಗೆಯೇ, ಬೃಹದ್ರಥನ ಮಗನಾಗಿರುವ ಜರಾಸಂಧನೂ ಕೂಡಾ ಅತ್ಯಂತ ಶೋಚನೀಯ ರೂಪವುಳ್ಳವನಾಗಿ, ಸಂಕಟಗೊಂಡವನಾಗಿ, ಬಹಳ ಬಾರಿ ಪೂರ್ಣವಾಗಿರುವ ಬಲ ಹಾಗೂ ವೀರ್ಯವೆಂಬ ಗುಣಗಳುಳ್ಳ ಶ್ರೀಕೃಷ್ಣನಿಂದ ‘ಬದುಕಿಕೋ ಹೋಗು ಎಂದು ಹೇಳಿ ಬಿಡಲ್ಪಟ್ಟವನಾಗಿ, ಉಸಿರುಮಾತ್ರವನ್ನು ಉಳಿಸಿಕೊಂಡು ತನ್ನ ಪಟ್ಟಣದತ್ತ ಹಿಂತಿರುಗಿದನು.

Wednesday, December 4, 2019

Mahabharata Tatparya Nirnaya Kannada 1476_1480


ದುರ್ಯ್ಯೋಧನೇನ ಪೃಥುಮನ್ತ್ರಬಲೋಪಹೂತಾಂಸ್ತತ್ಸಾರಥಿಃ ಫಣಿಗಣಾನ್ ಪವನಾತ್ಮಜಸ್ಯ
ಸುಪ್ತಸ್ಯ ವಿಸ್ತೃತ ಉರಸ್ಯಮುಚದ್ ವಿಶೀರ್ಣ್ಣದನ್ತಾ ಬಭೂವುರಮುಮಾಶು ವಿದಶ್ಯ ನಾಗಾಃ ೧೪.೭೬

ದುರ್ಯೋಧನನಿಂದ ಉಗ್ರವಾದ ಮಂತ್ರದ ಬಲದಿಂದ ಕರೆಯಲ್ಪಟ್ಟ ಆ ಹಾವುಗಳ ಸಮೂಹವನ್ನು ದುರ್ಯೋಧನನ ಸಾರಥಿಯು ಮಲಗಿರುವ ಪವನಾತ್ಮಜನ(ಭೀಮಸೇನನ) ಅಗಲವಾದ ಎದೆಯಮೇಲೆ ಬಿಟ್ಟನು. ಈರೀತಿ ಬಿಟ್ಟ ತಕ್ಷಣ ಆ  ಉರನಾಗಗಳು ಭೀಮನನ್ನು ಕಚ್ಚಿದವು ಮತ್ತು ಕಚ್ಚಿ ತಮ್ಮ ಹಲ್ಲುಗಳನ್ನು ಮುರಿದುಕೊಂಡವು.

ಕ್ಷಿಪ್ತ್ವಾ ಸುದೂರಮುರುನಾಗವರಾನಥಾಷ್ಟೌ ತದ್ವಂಶಜಾನ್ ಸ ವಿನಿಹತ್ಯ ಪಿಪೀಲಿಕಾವತ್
ಜಘ್ನೇ ಚ ಸೂತಮಪಹಸ್ತತ ಏವ ಭೀಮಃ ಸುಷ್ವಾಪ ಪೂರ್ವವದನುತ್ಥಿತ ಏವ ತಲ್ಪಾತ್ ೧೪.೭೭

ಭೀಮಸೇನನು ಹಾಸಿಗೆಯಿಂದ ಏಳದೇ, ಹೇಗೆ ಮಲಗಿದ್ದನೋ ಹಾಗೆಯೇ ಎಂಟು ಉತ್ಕೃಷ್ಟವಾದ ನಾಗಗಳ ಸಮೂಹವನ್ನು ಬಹಳ ದೂರಕ್ಕೆ ಎಸೆದು, ಆ ನಾಗ ವಂಶದಲ್ಲಿ ಬಂದಿರುವ ಹಾವುಗಳನ್ನು ಇರುವೆಗಳೋ ಎಂಬಂತೆ ಕೊಂದನು. ನಂತರ ತನ್ನಮೇಲೆ ಹಾವುಗಳನ್ನು ಹರಿಬಿಟ್ಟ ದುರ್ಯೋಧನನ ಸಾರಥಿಯನ್ನು ಕೊಂದು, ಹಾಗೆಯೇ ನಿದ್ರೆ ಮಾಡಿದ ಕೂಡಾ.
[ಈ ಘಟನೆಯ ವಿವರವನ್ನು ನಾವು ಮಹಾಭಾರತದ ಆದಿಪರ್ವದಲ್ಲಿ(೧೩೭.೪೫) ಕಾಣಬಹುದು. ‘ಪ್ರಬುದ್ಧೋ ಭೀಮಸೇನಸ್ತಾನ್  ಸರ್ವಾನ್ ಸರ್ಪಾನಪೋಥಯತ್  ಸಾರಥಿಂ ಚಾಸ್ಯ  ದಯಿತಪಹಸ್ತೇನ ಜಘ್ನಿವಾನ್’ ಭೀಮ ಆ ಎಲ್ಲಾ ಹಾವುಗಳನ್ನು ಮತ್ತು ಸಾರಥಿಯನ್ನು ತನ್ನ ಕೈಯ ಹಿಂಬದಿಯಿಂದಲೇ ಹೊಡೆದು ಕೊಂದ]

ತತ್ ತಸ್ಯ ನೈಜಬಲಮಪ್ರಮಯಂ ನಿರೀಕ್ಷ್ಯ ಸರ್ವೇ ಕ್ಷಿತೀಶತನಯಾ ಅಧಿಕಂ ವಿಷೇದುಃ
ನಿಶ್ವಾಸತೋ ದರ್ಶನಾದಪಿ ಭಸ್ಮ ಯೇಷಾಂ ಭೂಯಾಸುರೇವ ಭುವನಾನಿ ಚ ತೇ ಮೃಷಾssಸನ್ ೧೪.೭೮

ಭೀಮಸೇನನ ಸಹಜವಾಗಿರುವ ಬಲವನ್ನು ತಾವು ದಾಟಲಾಗದೆಂದು ತಿಳಿದ ದ್ವೇಷಿಗಳಾದ ಆ ಎಲ್ಲಾ ರಾಜಕುಮಾರರೂ ಕೂಡಾ ಆತ್ಯಂತಿಕವಾಗಿ ದುಃಖಕ್ಕೆ ಒಳಗಾದರು. ಯಾವ ಹಾವುಗಳ ನಿಟ್ಟುಸಿರಿನಿಂದಲೂ, ದರ್ಶನದಿಂದಲೂ ಕೂಡಾ ಇಡೀ ಲೋಕಗಳೇ ಸ್ಮವಾಗುತ್ತವೋ,  ಅಂತಹ ಹಾವುಗಳೂ ಕೂಡಾ ಭೀಮಸೇನನ ಮುಂದೆ ವ್ಯರ್ಥವೆನಿಸಿದವು.  

ದದ್ಭಿರ್ವಿದಶ್ಯ ನ ವಿಕಾರಮಮುಷ್ಯ ಕರ್ತುಂ ಶೇಕುರ್ಭುಜಙ್ಗಮವರಾ ಅಪಿ ಸುಪ್ರಯತ್ನಾಃ
ಕಸ್ಯಾಪಿ ನೇದೃಶಬಲಂ ಶ್ರುತಪೂರ್ವಮಾಸೀತ್ ದೃಷ್ಟಂ ಕಿಮು ಸ್ಮ ತನಯೇsಪಿ ಹಿರಣ್ಯಕಸ್ಯ ೧೪.೭೯

ಆ ಹಾವುಗಳು ತಮ್ಮ ಹಲ್ಲುಗಳಿಂದ ಕಚ್ಚಿಯೂ ಕೂಡಾ ಭೀಮನಿಗೆ ವಿಕಾರವನ್ನು ಮಾಡಲು ಸಮರ್ಥವಾಗಲಿಲ್ಲ. ಯಾರಲ್ಲೂ ಕೂಡಾ ಈರೀತಿಯಾಗಿರುವ ಬಲವನ್ನು ಹಿಂದೆ ನಾವು ಕೇಳಿಯೇ ಇಲ್ಲಾ, ಇನ್ನು ನೋಡಲಿಲ್ಲಾ ಎಂದು ಏನು ಹೇಳತಕ್ಕದ್ದು? ಹಿರಣ್ಯಕಶಿಪುವಿನ ಪುತ್ರನಾದ ಪ್ರಹ್ಲಾದನಲ್ಲಿಯೂ ಕೂಡಾ ಈ ರೀತಿಯ ಬಲವನ್ನು ನಾವು ಕೇಳಿಲ್ಲ.
(ಭೀಮನಂತೆ ಹಾವುಗಳಿಂದ ತನ್ನನ್ನು ರಕ್ಷಿಸಿಕೊಂಡ ಪ್ರಹ್ಲಾದನ ಬಲಕ್ಕೂ ಮತ್ತು ಭೀಮಸೇನನ ಬಲಕ್ಕೂ ಇರುವ ವ್ಯೆತ್ಯಾಸವೇನು ಎನ್ನುವುದನ್ನು ವಿವರಿಸುತ್ತಾರೆ- )


ಸ್ವಾತ್ಮಾವನಾರ್ತ್ಥಮಧಿಕಾಂ ಸ್ತುತಿಮೇವ ಕೃತ್ವಾ ವಿಷ್ಣೋಃ ಸ ದೈತ್ಯತನಯೋ ಹರಿಣಾsವಿತೋsಭೂತ್
ನತ್ವೌರಸಂ ಬಲಮಮುಷ್ಯ ಸ ಕೃಷ್ಯತೇ ಹಿ ಭೃತ್ಯೈರ್ಬಲಾತ್ ಸ್ವಪಿತುರೌರಸಮಸ್ಯ ವೀರ್ಯ್ಯಮ್ ೧೪.೮೦

ದೈತ್ಯನಾದ ಹಿರಣ್ಯಕಶಿಪುವಿನ ಮಗನಾದ  ಪ್ರಹ್ಲಾದನು ತನ್ನನ್ನು ರಕ್ಷಿಸಿಕೊಳ್ಳಲು ಭಗವಂತನನ್ನು ಸ್ತೋತ್ರಮಾಡಿದನು ಮತ್ತು ನಾರಾಯಣನಿಂದ ರಕ್ಷಿಸಲ್ಪಟ್ಟನು.  ಅವನಿಗೆ ಸಹಜವಾದ ದೈಹಿಕ ಸಾಮರ್ಥ್ಯ ಇರಲಿಲ್ಲ. ಹಾಗಾಗಿ ಅವನು ಭೃತ್ಯರಿಂದ ಬಲಾತ್ಕಾರವಾಗಿ ಎಳೆಯಲ್ಪಟ್ಟನು. ಇವನಿಗಾದರೋ, ತನ್ನ ತಂದೆಯಾದ ಮುಖ್ಯಪ್ರಾಣನ ಸಹಜವಾದ ವೀರ್ಯವಿದೆ.(ಅಂದರೆ: ಯಾವುದೇ ವರ, ಮಂತ್ರ ಬಲವಲ್ಲ, ಸಹಜವಾದ ಬಲದಿಂದಲೇ ಭೀಮ ಎಲ್ಲವನ್ನೂ ಮಾಡುತ್ತಿದ್ದ)