ಏವಂ ಗತೇಷು ಬಹುಶೋ ನತಕನ್ಧರೇಷು ರಾಜಸ್ವಜೋsಪಿ ಮಧುರಾಂ ಸ್ವಪುರೀಂ
ಪ್ರವಿಶ್ಯ ।
ರಾಮೇಣ ಸಾರ್ದ್ಧಮಖಿಲೈರ್ಯ್ಯದುಭಿಃ ಸಮೇತೋ ರೇಮೇ
ರಮಾಪತಿರಚಿನ್ತ್ಯಬಲೋ ಜಯಶ್ರೀಃ ॥೧೪.೮೬॥
ಈರೀತಿಯಾಗಿ ಬಹಳ ಬಾರಿ ಆ ಎಲ್ಲಾ ರಾಜರುಗಳು ತಮ್ಮ ತಲೆತಗ್ಗಿಸಿ
ತೆರಳುತ್ತಿರಲು, ಅಚಿಂತ್ಯಬಲವುಳ್ಳ ರಮಾಪತಿಯಾದ ಶ್ರೀಕೃಷ್ಣನು, ಯಾವಾಗಲೂ ಜಯಶ್ರೀಯನ್ನು ಪಡೆದು,
ತನ್ನ ಪಟ್ಟಣವಾದ ಮಧುರೆಯನ್ನು ಬಲರಾಮನಿಂದ ಕೂಡಿಕೊಂಡು ಪ್ರವೇಶಿಸಿ, ಎಲ್ಲಾ ಯದುಗಳೊಂದಿಗೆ
ಕೂಡಿಕೊಂಡು ಕ್ರೀಡಿಸಿಕೊಂಡಿದ್ದನು.
ವ್ಯರ್ತ್ಥೋದ್ಯಮಾಃ ಪುನರಪಿ ಸ್ಮ ಸದಾರ್ತ್ತರಾಷ್ಟ್ರಾ ಭೀಮಂ ನಿಹನ್ತುಮುರುಯತ್ನಮಕುರ್ವತಾಜ್ಞಾಃ ।
ರಾಜ್ಞಾಂ ಸುತಾಸ್ತಮಖಿಲಂ ಸ
ಮೃಷೈವ ಕೃತ್ವಾ ಚಕ್ರೇ ಜಯಾಯ ಚ ದಿಶಾಂ ಬಲವಾನ್ ಪ್ರಯತ್ನಮ್ ॥೧೪.೮೭॥
ಇತ್ತ, ದುರ್ಯೋಧನಾದಿಗಳಿಂದ ಕೂಡಿಕೊಂಡ ಅವಿವೇಕಿ ರಾಜಕುಮಾರರೆಲ್ಲರೂ ಭೀಮಸೇನನನ್ನು ಕೊಲ್ಲುವ
ಯತ್ನದಲ್ಲಿ ವಿಫಲತೆಯನ್ನು ಹೊಂದಿದರೂ ಕೂಡಾ, ಮತ್ತೆಮತ್ತೆ ಭೀಮನನ್ನು ಕೊಲ್ಲಲು ಬೇರೆ-ಬೇರೆ ಪ್ರಯತ್ನಗಳನ್ನು
ಮಾಡಿದರು. ಅವರ ಆ ಎಲ್ಲಾ ಪ್ರಯತ್ನಗಳನ್ನು ವ್ಯರ್ಥವನ್ನಾಗಿ ಮಾಡಿದ ಬಲಿಷ್ಠನಾದ ಭೀಮಸೇನನು, ದಿಗ್ವಿಜಯಕ್ಕಾಗಿ
ಪ್ರಯತ್ನವನ್ನು ಮಾಡಿದನು. [ಈ ದಿಗ್ವಿಜಯ ಕಾಲದಲ್ಲಿ ಭೀಮಾರ್ಜುನರಿಗೆ ಸರಿಸುಮಾರು ೧೫-೧೬ ವಯಸ್ಸು ಎನ್ನುವುದನ್ನು ಓದುಗರು
ಗಮನಿಸಬೇಕು].
ಪ್ರಾಚೀಂ ದಿಶಂ ಪ್ರಥಮಮೇವ
ಜಿಗಾಯ ಪಶ್ಚಾದ್ ಯಾಮ್ಯಾಂ ಜಲೇಶಪರಿಪಾಲಿತಯಾ ಸಹಾನ್ಯಾಮ್ ।
ಯೌ ತೌ
ಪುರಾತನದಶಾನನಕುಮ್ಭಕರ್ಣ್ಣೌ ಮಾತೃಷ್ವಸಾತನಯತಾಂ ಚ ಗತೌ
ಜಿಗಾಯ ॥೧೪.೮೮॥
ಭೀಮಸೇನನು ಮೊದಲು ಪೂರ್ವದಿಕ್ಕನ್ನೂ, ತದನಂತರ ದಕ್ಷಿಣದಿಕ್ಕನ್ನೂ, ನಂತರ ವರುಣನಾಳುವ ಪಶ್ಚಿಮದಿಕ್ಕಿನಿಂದ
ಕೂಡಿದ ಉತ್ತರದಿಕ್ಕನ್ನೂ ಗೆದ್ದನು.
ಯಾರು ಹಿಂದೆ ರಾವಣ ಹಾಗು ಕುಂಭಕರ್ಣರಾಗಿದ್ದರೋ ಅವರೇ ಈಗ ಭೀಮನ
ಚಿಕ್ಕಮ್ಮನ(ಕುಂತಿಯ ತಂಗಿಯರ) ಮಕ್ಕಳಾಗಿ ಹುಟ್ಟಿದ್ದರು. ಅವರನ್ನೂ ಭೀಮಸೇನ ಗೆದ್ದ.
ಪೂರ್ವಸ್ತಯೋರ್ಹಿ
ದಮಘೋಷಸುತಃ ಪ್ರಜಾತಃ ಪ್ರಾಹುಶ್ಚ ಯಂ ನೃಪತಯಃ ಶಿಶುಪಾಲನಾಮ್ನಾ ।
ಅನ್ಯಂ ವದನ್ತಿ ಚ ಕರೂಶನೃಪಂ
ತಥಾsನ್ಯಮಾತೃಷ್ವಸಾತನಯಮೇವ ಚ ದನ್ತವಕ್ರಮ್ ॥೧೪.೮೯॥
ಅವರಿಬ್ಬರಲ್ಲಿ ಮೊದಲಿಗನಾದ ರಾವಣನು ದಮಘೋಷನ ಮಗನಾಗಿ ಹುಟ್ಟಿದ್ದನು.
ಯಾರನ್ನು ರಾಜರು ಶಿಶುಪಾಲ ಎಂಬ ಹೆಸರಿನಿಂದ ಕರೆಯುತ್ತಾರೋ ಅವನೇ ಇವನು. ಹಾಗೆಯೇ ಇನ್ನೊಬ್ಬ
ತಾಯಿಯ ತಂಗಿಯ ಮಗನಾಗಿ ಹುಟ್ಟಿದ ದಂತವಕ್ರನನ್ನು ಕರೂಶರಾಜಾ ಎಂದೂ ಹೇಳುತ್ತಾರೆ. (ಇವನೇ ಹಿಂದೆ ಕುಂಭಕರ್ಣನಾಗಿದ್ದವನು).
ಜಿತ್ವೈವ ತಾವಪಿ ಜಿಗಾಯ ಚ
ಪೌಣ್ಡ್ರಕಾಖ್ಯಂ ಶೌರೇಃ ಸುತಂ ಸುತಮಜೈದಥ ಭೀಷ್ಮಕಸ್ಯ ।
ಯಃ ಪೂರ್ವಮಾಸ ದಿತಿಜೋ ನರಹೇಲ್ವಲಾಖ್ಯೋ ರುಗ್ಮೀತಿ ನಾಮ
ಚ ಬಭೂವ ಸ ಕುಣ್ಡೀನೇಶಃ ॥೧೪.೯೦॥
ಇವರಿಬ್ಬರನ್ನು ಗೆದ್ದು, ಪೌಣ್ಡ್ರಕ ಎನ್ನುವ ಹೆಸರಿನ ವಸುದೇವನ ಮಗನನ್ನು ಕೂಡಾ ಭೀಮ ಗೆದ್ದ. ತದನಂತರ ಭೀಷ್ಮಕನ ಮಗನಾಗಿರುವ
ರುಗ್ಮಿಯನ್ನು ಭೀಮ ಗೆದ್ದ. ಯಾರು ಮೊದಲು ಮನುಷ್ಯರನ್ನು ತಿನ್ನುವ ‘ಇಲ್ವಲ’^ ಎಂಬ ಹೆಸರಿನ ದೈತ್ಯನಾಗಿದ್ದನೋ, ಅವನು ಕುಣ್ಡಿನ ಪಟ್ಟಣದ ಒಡೆಯನಾಗಿದ್ದ. ಅವನನ್ನೂ ಭೀಮ ಗೆದ್ದ.
[^ಇಲ್ವಲನು ತನ್ನ ತಮ್ಮ ವಾತಾಪಿಯನ್ನು ಮೇಕೆಯನ್ನಾಗಿ ಮಾಡಿ, ಅವನನ್ನು ಶ್ರಾದ್ಧದ ನೆಪದಲ್ಲಿ ಕತ್ತರಿಸಿ ಎಲ್ಲರಿಗೂ ಉಣಬಡಿಸುತ್ತಿದ್ದ. ಎಲ್ಲರೂ ಆಹಾರ
ಸ್ವೀಕರಿಸಿದ ಮೇಲೆ ಇಲ್ವಲ ವಾತಾಪಿಯನ್ನು
ಕರೆಯುತ್ತಿದ್ದ. ಆಗ ವಾತಾಪಿ ಅವರೆಲ್ಲರ ಹೊಟ್ಟೆಯನ್ನು ಸೀಳಿ ಹೊರಬರುತ್ತಿದ್ದ. ಆನಂತರದಲ್ಲಿ ಅವರಿಬ್ಬರೂ
ಸೇರಿಕೊಂಡು ಅತಿಥಿಗಳನ್ನು ತಿಂದು ಮುಗಿಸುತ್ತಿದ್ದರು. ಹೀಗೆ, ಅವರು ಅನೇಕರನ್ನು ಕೊಂದಿದ್ದರು.
ಇಂಥಹ ಇಲ್ವಲನು ಒಮ್ಮೆ ಅಗಸ್ತ್ಯರನ್ನು ಊಟಕ್ಕೆ ಆಹ್ವಾನಿಸಿದ. ಇಲ್ವಲನ
ಕ್ರೂರ ಕೃತ್ಯಗಳನ್ನು ತಿಳಿದೇ ಅಗಸ್ತ್ಯರು ಇಲ್ವಲನ ಅತಿಥಿಯಾಗಿ ಹೋದರು. ವಾತಾಪಿಯನ್ನು ಅಗಸ್ತ್ಯಮುನಿಗಳು ಆಹಾರರೂಪದಲ್ಲಿ ಸ್ವೀಕರಿಸಿ, ಇಲ್ವಲ ಕರೆಯುವ ಮುನ್ನವೇ ‘ವಾತಾಪಿ ಜೀರ್ಣೋಭವ’ (ವಾತಾಪಿ ಜೀರ್ಣವಾಗಿ ಹೋಗು) ಎಂದರು.
ಹೀಗಾಗಿ ವಾತಾಪಿ ಅವರ ಉದರದಲ್ಲಿ ಕರಗಿಹೋದ. ಹೀಗಾಗಿ ವಾತಾಪಿಯನ್ನು ಇಲ್ವಲ ಕರೆದಾಗ ಆತ
ಹಿಂತಿರುಗಲಿಲ್ಲ. ಈರೀತಿ ವಾತಾಪಿಯ ಸಂಹಾರವಾಯಿತು. ಈ ಕಥೆಯ ವಿವರವನ್ನು ನಾವು ಮಹಾಭಾರತದಲ್ಲಿ
ಕಾಣುತ್ತೇವೆ. ಈ ಇಲ್ವಲನೇ ಭೀಷ್ಮಕನ ಮಗ ರುಗ್ಮಿಯಾಗಿ ಹುಟ್ಟಿದ್ದ. ].
No comments:
Post a Comment