ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, December 23, 2019

Mahabharata Tatparya Nirnaya Kannada 1516_1520


ಏವಂ ವಿಚಿನ್ತ್ಯಾಪ್ರತಿಮಃ ಸ ಭಾರ್ಗ್ಗವೋ ಬಭಾಷ ಈಷತ್ಸ್ಮಿತಶೋಚಿಷಾ ಗಿರಾ
ಅನನ್ತಶಕ್ತಿಃ ಸಕಲೇಶ್ವರೋsಪಿ ತ್ಯಕ್ತಂ ಸರ್ವಂ ನಾದ್ಯ ವಿತ್ತಂ ಮಮಾಸ್ತಿ ೧೫.೧೬

ಹೀಗೆ ಯೋಚನೆಮಾಡಿದ ಎಣೆಯಿಲ್ಲದ(ಯಾರಿಂದಲೂ ಸಂಪೂರ್ಣವಾಗಿ ತಿಳಿಯಲು ಅಸಾಧ್ಯವಾದ) ಪರಶುರಾಮದೇವರು, ಸ್ವಲ್ಪ ಮುಗುಳುನಗುವಿನ ಕಾಂತಿಯೊಂದಿಗೆ ಈರೀತಿ  ನುಡಿದರು: ‘ಅನಂತಶಕ್ತಿಯಾದರೂ, ಎಲ್ಲರಿಗೂ ಒಡೆಯನಾದರೂ ಕೂಡಾ ಈಗ ಎಲ್ಲವನ್ನೂ ಬಿಟ್ಟಿದ್ದೇನೆ. ಈಗ ನನ್ನಲ್ಲಿ ಯಾವ ಹಣವೂ ಇಲ್ಲ ಎಂದು. 

ಆತ್ಮಾ ವಿದ್ಯಾ ಶಸ್ತ್ರಮೇತಾವದಸ್ತಿ ತೇಷಾಂ ಮದ್ಧ್ಯೇ ರುಚಿತಂ ತ್ವಂ ಗೃಹಾಣ 
ಉಕ್ತಃ ಸ ಇತ್ಥಂ ಪ್ರವಿಚಿನ್ತ್ಯ ವಿಪ್ರೋ ಜಗಾದ ಕಸ್ತ್ವದ್ಗ್ರಹಣೇ ಸಮರ್ತ್ಥಃ ೧೫.೧೭

‘ತಾನು(ಆತ್ಮಾ, ಶರೀರ), ವಿದ್ಯೆ ಹಾಗೂ ಶಸ್ತ್ರ ಇಷ್ಟುಮಾತ್ರ ಇದೆ. ಈ ಮೂರರಲ್ಲಿ ಇಷ್ಟವಾದುದ್ದನ್ನು ನೀನು ಆರಿಸಿಕೋ’. ಈರೀತಿಯಾಗಿ ಪರಶುರಾಮದೇವರಿಂದ ಹೇಳಲ್ಪಟ್ಟಾಗ, ದ್ರೋಣಾಚಾರ್ಯರು ಚೆನ್ನಾಗಿ ಯೋಚನೆ ಮಾಡಿ, ಹೀಗೆ ಹೇಳುತ್ತಾರೆ:
[ಮಹಾಭಾರತದಲ್ಲಿ ಈ ಕುರಿತಾದ ವಿವರಣೆ ಕಾಣಸಿಗುತ್ತದೆ:  ಅಸ್ತ್ರಾಣಿ ವಾ ಶರೀರಂ ವಾ ಬ್ರಹ್ಮನ್ ಶಸ್ತ್ರಾಣಿ ವಾ ಪುನಃ ವೃಣೀಶ್ವ ಕಿಂ ಪ್ರಯಚ್ಛಾಮಿ ತುಭ್ಯಂ ದ್ರೋಣ ವದಾsಶು ತತ್’(ಆದಿಪರ್ವ ೧೪೦.೬೬) ‘ಶರೀರಮಾತ್ರಮೇವಾದ್ಯ ಮಯಾ ಸಮವಶೇಷಿತಮ್ ಅಸ್ತ್ರಾಣಿ ವಾ ಶರೀರಂ ವಾ ಬ್ರಹ್ಮನ್ನೇಕತಮಂ ವೃಣು’(೧೮೦.೧೦). ಅಸ್ತ್ರಗಳೋ, ಶರೀರವೋ, ಶಸ್ತ್ರಗಳೋ ? ಇರುವ ಈ ಮೂರರಲ್ಲಿ ಏನನ್ನು ಕೊಡಲಿ? ಎಂದು ಪರಶುರಾಮ ಕೇಳುತ್ತಾನೆ]

ಸರ್ವೇಶಿತಾ ಸರ್ವಪರಃ ಸ್ವತನ್ತ್ರಸ್ತ್ವಮೇವ ಕೋsನ್ಯಃ ಸದೃಶಸ್ತವೇಶ
ಸ್ವಾಮ್ಯಂ ತವೇಚ್ಛನ್ ಪ್ರತಿಯಾತ್ಯಧೋ ಹಿ ಯಸ್ಮಾನ್ನಚೋತ್ಥಾತುಮಲಂ ಕದಾಚಿತ್ ೧೫.೧೮

ಎಲ್ಲರ ಒಡೆಯನು, ಎಲ್ಲರಿಗೂ ಮಿಗಿಲು, ಎಲ್ಲರನ್ನೂ ವಶದಲ್ಲಿಟ್ಟುಕೊಂಡವನು ನೀನು. ನಿನಗೆ ಸಮಾನರಾದವರು ಯಾರು? ನಿನ್ನ ಸ್ವಾಮಿತ್ವವನ್ನು ಇಚ್ಛೆಪಡುವವನು ಕೆಳಗಡೆ ಹೋಗುತ್ತಾನೆ(ಅಂಧಸ್ತಮಸ್ಸನ್ನು  ಹೊಂದುತ್ತಾನೆ) ಮತ್ತು ಎಂದೂ ಅಲ್ಲಿಂದ ಅವನಿಗೆ ಮೇಲೇರಲು ಸಾದ್ಯವಿಲ್ಲ.

ಸರ್ವೋತ್ತಮಸ್ಯೇಶ ತವೋಚ್ಚಶಸ್ತ್ರೈಃ ಕಾರ್ಯ್ಯಂ ಕಿಮಸ್ಮಾಕಮನುದ್ಬಲಾನಾಮ್
ವಿದ್ಯೈವ ದೇಯಾ ಭವತಾ ತತೋsಜ ಸರ್ವಪ್ರಕಾಶಿನ್ಯಚಲಾ ಸುಸೂಕ್ಷ್ಮಾ ೧೫.೧೯

ಸರ್ವೋತ್ತಮನಾಗಿರುವ ನಿನ್ನ ಉತ್ಕೃಷ್ಟವಾದ ಶಸ್ತ್ರಗಳಿಂದ, ಬಲವಿಲ್ಲದ ನಮಗೆ ಏನು ಪ್ರಯೋಜನ? ಆ ಕಾರಣದಿಂದ ನಿನ್ನಿಂದ ನನಗೆ ‘ಎಲ್ಲವನ್ನೂ ತೋರಿಸುವ, ನಿರಂತರವಾಗಿರುವ, ಸುಸೂಕ್ಷ್ಮವಾಗಿರುವ’  ತತ್ತ್ವ ವಿದ್ಯೆಯೇ ಕೊಡಲರ್ಹವು.

ಇತೀರಿತಸ್ತತ್ತ್ವವಿದ್ಯಾದಿಕಾಃ ಸ ವಿದ್ಯಾಃ ಸರ್ವಾಃ ಪ್ರದದೌ ಸಾಸ್ತ್ರಶಸ್ತ್ರಾಃ
ಅಬ್ದದ್ವಿಷಟ್ಕೇನ ಸಮಾಪ್ಯ ತಾಃ ಸ ಯಯೌ ಸಖಾಯಂ ದ್ರುಪದಂ ಮಹಾತ್ಮಾ ೧೫.೨೦

ಈರೀತಿಯಾಗಿ ದ್ರೋಣಾಚಾರ್ಯರಿಂದ ಹೇಳಲ್ಪಟ್ಟವರಾದ ಪರಶುರಾಮ ದೇವರು, ತತ್ತ್ವವಿದ್ಯೆಯಿಂದ ಕೂಡಿರುವ, ಅಸ್ತ್ರಶಸ್ತ್ರಗಳಿಂದೊಡಗೂಡಿದ ವಿದ್ಯೆಗಳನ್ನು, ಹಾಗೂ ಇತರ ಎಲ್ಲಾ ತರದ ವಿದ್ಯೆಗಳನ್ನು ದ್ರೋಣಾಚಾರ್ಯರಿಗೆ ಕೊಟ್ಟರು. ಸುಮಾರು ಹನ್ನೆರಡು ವರ್ಷಗಳ ಕಾಲ ಆ ಎಲ್ಲಾ ವಿದ್ಯೆಗಳನ್ನು ಹೊಂದಿದ ದ್ರೋಣಾಚಾರ್ಯರು, ಆ ನಂತರ, ಗೆಳೆಯನಾದ ದ್ರುಪದನಿದ್ದಲ್ಲಿಗೆ ತೆರಳಿದರು.

Tuesday, December 17, 2019

Mahabharata Tatparya Nirnaya Kannada 1511_1515


ಪ್ರತಿಗ್ರಹಾತ್ ಸನ್ನಿವೃತ್ತಃ ಸ ರಾಮಂ ಯಯೌ ನ ವಿಷ್ಣೋರ್ಹಿ ಭವೇತ್ ಪ್ರತಿಗ್ರಹಃ
ದೋಷಾಯ ಯಸ್ಮಾತ್ ಸ ಪಿತಾsಖಿಲಸ್ಯ ಸ್ವಾಮೀ ಗುರುಃ ಪರಮಂ ದೈವತಂ ಚ ೧೫.೧೧

ದಾನ ತೆಗೆದುಕೊಳ್ಳುವಿಕೆಯಿಂದ ನಿವೃತ್ತರಾದ ದ್ರೋಣಾಚಾರ್ಯರು ಪರಶುರಾಮನನ್ನು ಕುರಿತು ತೆರಳಿದರು.
ನಾರಾಯಣನಿಂದ ಪಡೆಯುವ ದಾನವು ದೋಷವಲ್ಲ. ಪರಶುರಾಮನು ಸಮಸ್ತ ಪ್ರಪಂಚದ ಸ್ವಾಮಿಯಾಗಿದ್ದಾನೆ, ತಂದೆಯಾಗಿದ್ದಾನೆ, ಗುರುವಾಗಿದ್ದಾನೆ, ಪರಮ ದೇವನೂ ಆಗಿದ್ದಾನೆ. ಹೀಗಾಗಿ ದಾನದಿಂದ ರಹಿತವಾದ ಬ್ರಾಹ್ಮಣ್ಯಧರ್ಮದಲ್ಲಿ ಬದುಕುತ್ತಿದ್ದ ದ್ರೋಣಾಚಾರ್ಯರು ಭಗವಂತನ ಅವತಾರವಾದ ಪರಶುರಾಮನಿದ್ದಲ್ಲಿಗೆ ತೆರಳಿದರು.

ದೃಷ್ಟ್ವೈವೈನಂ ಜಾಮದಗ್ನ್ಯೋsಪ್ಯಚಿನ್ತಯದ್ ದ್ರೋಣಂ ಕರ್ತ್ತುಂ ಕ್ಷಿತಿಭಾರಾಪನೋದೇ
ಹೇತುಂ ಸುರಾಣಾಂ ನರಯೋನಿಜಾನಾಂ ಹನ್ತಾ ಚಾಯಂ ಸ್ಯಾತ್ ಸಹ ಪುತ್ರೇಣ ಚೇತಿ ೧೫.೧೨

ದ್ರೋಣಾಚಾರ್ಯರನ್ನು ಕಂಡ ಪರಶುರಾಮದೇವರೂ ಕೂಡಾ, ಭೂಭಾರವನ್ನು ಇಳಿಸುವುದರಲ್ಲಿ ದ್ರೋಣಾಚಾರ್ಯರನ್ನು ಹೇತುವನ್ನಾಗಿ ಮಾಡಲು ಚಿಂತಿಸಿದರು. ಮನುಷ್ಯಕುಲದಲ್ಲಿ ಹುಟ್ಟುವ ದೇವತೆಗಳ ಸಂಹಾರದಲ್ಲಿ ದ್ರೋಣಾಚಾರ್ಯರು ಅಶ್ವತ್ಥಾಮನೊಂದಿಗೆ ಕೂಡಿಕೊಂಡು ಭಾಗಿಯಾಗಬೇಕು ಎಂದು ಪರಶುರಾಮದೇವರು ಚಿಂತಿಸಿದರು.   

ಏಕೆ ಅವತರಿಸಿದ ದೇವತೆಗಳ ಸಂಹಾರದ ಕುರಿತು ಪರಶುರಾಮದೇವರು  ಚಿಂತಿಸಿದರು ಎಂದರೆ-

ತೇಷಾಂ ವೃದ್ಧಿಃ ಸ್ಯಾತ್ ಪಾಣ್ಡವಾರ್ತ್ಥೇ ಹತಾನಾಂ ಮೋಕ್ಷೇsಪಿ ಸೌಖ್ಯಸ್ಯ ನ ಸನ್ತತಿಶ್ಚ
ಯೋಗ್ಯಾ ಸುರಾಣಾಂ ಕಲಿಜಾ ಸುಪಾಪಾಃ ಪ್ರಾಯೋ ಯಸ್ಮಾತ್ ಕಲಿಜಾಃ ಸಮ್ಭವನ್ತಿ ೧೫.೧೩

ಪಾಂಡವರಿಗಾಗಿ ಯುದ್ಧದಲ್ಲಿ ಸತ್ತ, ಮನುಷ್ಯಯೋನಿಯಲ್ಲಿ ಹುಟ್ಟಿದ ದೇವತೆಗಳ ಅಭಿವೃದ್ಧಿಯಾಗಬೇಕು, ಅವರಿಗೆ ಸ್ವರ್ಗದಲ್ಲಿಯೂ, ಮೋಕ್ಷದಲ್ಲಿಯೂ ಸುಖದ ವೃದ್ಧಿಯಾಗಬೇಕು. ಮನುಷ್ಯಕುಲದಲ್ಲಿ ಹುಟ್ಟಿದ ದೇವತೆಗಳ ಸಂತತಿಯು ಕಲಿಯುಗದಲ್ಲಿ ಇರಬಾರದು. (ಏಕೆ?) ಯಾವಕಾರಣದಿಂದ ಪ್ರಾಯಃ(ಹೆಚ್ಚಾಗಿ) ಅತ್ಯಂತ ಪಾಪಿಷ್ಠರೇ ಕಲಿಯುಗದಲ್ಲಿ ಹುಟ್ಟುತ್ತಾರೋ, ಆ ಕಾರಣದಿಂದ ದೇವತೆಗಳ ಸಂತತಿ ಕಲಿಯುಗದಲ್ಲಿ ಮುಂದುವರಿಯಬಾರದು.

ಏಕೆ?

ನ ದೇವಾನಾಮಾಶತಂ ಪೂರುಷಾ ಹಿ ಸನ್ತಾನಜಾಃ ಪ್ರಾಯಶಃ ಪಾಪಯೋಗ್ಯಾಃ
ನಾಕಾರಣಾತ್ ಸನ್ತತೇರಪ್ಯಭಾವೋ ಯೋಗ್ಯಃ ಸುರಾಣಾಂ ಸದಮೋಘರೇತಸಾಮ್ ೧೫.೧೪

ದೇವತೆಗಳಲ್ಲಿ ನೂರು ತಲೆಮಾರಿನ ತನಕ  ಹುಟ್ಟುವ ಪುರುಷರು ಪ್ರಾಯಃ(ಸಾಮಾನ್ಯವಾಗಿ) ಪಾಪಯೋಗ್ಯರಾಗಿರುವುದಿಲ್ಲ. ಇನ್ನು ಯಾವುದೇ ಕಾರಣ ಇಲ್ಲದೇ ಸಂತಾನ ಇಲ್ಲದಿರುವಿಕೆಯೂ ಅವರಿಗೆ ಯೋಗ್ಯವಲ್ಲ. ಏಕೆಂದರೆ ವ್ಯರ್ಥವಾದ(ಅ-ಮೋಘವಾದ) ರೇತಸ್ಸು(ವೀರ್ಯ) ಅವರದ್ದಲ್ಲ.

ಅವ್ಯುಚ್ಛಿನ್ನೇ ಸಕಲಾನಾಂ ಸುರಾಣಾಂ ತನ್ತೌ ಕಲಿರ್ನ್ನೋ ಭವಿತಾ ಕಥಞ್ಚಿತ್
ತಸ್ಮಾದುತ್ಸಾದ್ಯಾಃ ಸರ್ವ ಏತೇ ಸುರಾಂಶಾ ಏತೇನ ಸಾಕಂ ತನಯೇನ ವೀರಾಃ ೧೫.೧೫

ಎಲ್ಲಾ ದೇವತೆಗಳ ಸಂತತಿಯು ನಾಶವಾಗದಿದ್ದರೆ ಕಲಿಯುಗದ ವ್ಯಾಪಾರವು ಸಾಗುವುದಿಲ್ಲ. ಆ ಕಾರಣದಿಂದ ಈ ಎಲ್ಲಾ ದೇವತೆಗಳ ಅವತಾರರು ಅಶ್ವತ್ಥಾಮನಿಂದ ಸಾಯಿಸಲ್ಪಡಬೇಕು. (ದ್ರೋಣಾಚಾರ್ಯ ಹಾಗು ಅಶ್ವತ್ಥಾಮರಿಂದಲೇ ಈ ಕೆಲಸವಾಗಬೇಕು).

Friday, December 13, 2019

Mahabharata Tatparya Nirnaya Kannada 1506_1510

ವ್ಯಾಸಾದವಾಪ ಪರಮಾತ್ಮಸತತ್ವವಿದ್ಯಾಂ ಧರ್ಮ್ಮಾತ್ಮಜೋsಪಿ ಸತತಂ ಭಗವತ್ಪ್ರಪನ್ನಾಃ
ತೇ ಪಞ್ಚ ಪಾಣ್ಡುತನಯಾ ಮುಮುದುರ್ನ್ನಿತಾನ್ತಂ ಸದ್ಧರ್ಮ್ಮಚಾರಿಣ ಉರುಕ್ರಮಶಿಕ್ಷಿತಾರ್ತ್ಥಾಃ  ೧೫.೦೬

ಧರ್ಮರಾಜನೂ ಕೂಡಾ ವೇದವ್ಯಾಸರಿಂದ ಪರಮಾತ್ಮನ ಪರತತ್ತ್ವ ವಿದ್ಯೆಯನ್ನು ಪಡೆದ. ಹೀಗೆ  ಆ ಐದು ಜನ ಪಾಂಡವರೂ ಕೂಡಾ, ಯಾವಾಗಲೂ ಪರಮಾತ್ಮನಲ್ಲಿಯೇ ಆಸಕ್ತರಾಗಿ, ಉತ್ತಮವಾದ  ಧರ್ಮದಲ್ಲಿ ನಡೆಯುತ್ತಾ, ಪರಮಾತ್ಮನು ತೋರಿದ ಮಾರ್ಗದಲ್ಲಿ  ಸಾಗುವವರಾಗಿ ಬಹಳ ಸಂತಸಪಟ್ಟರು.

ಯದಾ ಭರದ್ವಾಜಸುತಸ್ತ್ವಸಞ್ಚಯೀ ಪ್ರತಿಗ್ರಹೋಜ್ಝೋ ನಿಜಧರ್ಮ್ಮವರ್ತ್ತೀ
ದ್ರೌಣಿಸ್ತದಾ ಧಾರ್ತ್ತರಾಷ್ಟ್ರೈಃ ಸಮೇತ್ಯ ಕ್ರೀಡನ್ ಪಯಃ ಪಾತುಮುಪೈತಿ ಸದ್ಮ ೧೪.೦೭

ಯಾವುದನ್ನೂ ಸಂಗ್ರಹಿಸಿ ಇಟ್ಟುಕೊಳ್ಳದ, ದಾನದಿಂದ ರಹಿತವಾದ ಬ್ರಾಹ್ಮಣ್ಯಧರ್ಮದಲ್ಲಿ ಭರದ್ವಾಜರ ಮಗನಾದ ದ್ರೋಣಾಚಾರ್ಯರು ಜೀವಿಸುತ್ತಿರುವಾಗ, ಅವರ ಪುತ್ರನಾದ  ಅಶ್ವತ್ಥಾಮನು ದುರ್ಯೋಧನಾದಿಗಳಿಂದ ಕೂಡಿಕೊಂಡು ಆಟ ಆಡತಕ್ಕವನಾಗಿ, ಹಾಲು ಕುಡಿಯಲೆಂದು ಮನೆಯನ್ನು ತಲುಪಿದನು.

ತಸ್ಮೈ ಮಾತಾ ಪಿಷ್ಟಮಾಲೋಡ್ಯ ಪಾತುಂ ದದಾತಿ ಪೀತ್ವೈತಿ ತದೈಷ ನಿತ್ಯಮ್
ಪೀತಕ್ಷೀರಾನ್ ಧಾರ್ತ್ತರಾಷ್ಟ್ರಾನ್ ಸ ಚೈತ್ಯ ಮಯಾ ಪೀತಂ ಕ್ಷೀರಮಿತ್ಯಾಹ ನಿತ್ಯಮ್ ೧೫.೦೮

ಈ ರೀತಿ ಬರುತ್ತಿದ್ದ ಅಶ್ವತ್ಥಾಮನಿಗೆ ತಾಯಿ ಕೃಪಿಯು ಹಿಟ್ಟನ್ನು ಕಲಿಸಿ ಕುಡಿಯಲು ಕೊಡುತ್ತಿದ್ದಳು. ಅದನ್ನು ಕುಡಿವ ಅಶ್ವತ್ಥಾಮನು, ನಿತ್ಯವೂ ಹಾಲನ್ನು ಕುಡಿಯುತ್ತಿರುವ ದುರ್ಯೋಧನಾದಿಗಳನ್ನು ಹೊಂದಿ, ‘ನನ್ನಿಂದ ಹಾಲು ಕುಡಿಯಲ್ಪಟ್ಟಿತು’ ಎಂದು ಯಾವಾಗಲೂ ಹೇಳುತ್ತಿದ್ದ.

ನೃತ್ಯನ್ತಮೇನಂ ಪಾಯಯಾಮಾಸುರೇತೇ ಪಯಃ ಕದಾಚಿತ್  ರಸಮಸ್ಯ ಸೋsವೇತ್
ಪುನಃ ಕದಾಚಿತ್ ಸ ತು ಮಾತೃದತ್ತೇ ಪಿಷ್ಟೇ ನೇದಂ ಕ್ಷೀರಮಿತ್ಯಾರುರಾವ ೧೫.೦೯

ಹೀಗೆ ‘ಹಾಲುಕುಡಿದೆ’ ಎಂದು ಕುಣಿಯುತ್ತಿರುವ ದ್ರೋಣಿಗೆ(ಅಶ್ವತ್ಥಾಮನನ್ನು) ಒಮ್ಮೆ ದುರ್ಯೋಧನಾದಿಗಳು   ನಿಜವಾದ ಹಾಲನ್ನು ಕುಡಿಸಿದರು. ಈ ರೀತಿ ಒಮ್ಮೆ ಹಾಲಿನ ನಿಜರುಚಿಯನ್ನು ಚೆನ್ನಾಗಿ ತಿಳಿದ ಅಶ್ವತ್ಥಾಮನು,  ಮತ್ತೆ ಯಾವಾಗಲೋ ಒಮ್ಮೆ ತಾಯಿಯು ಹಿಟ್ಟನ್ನು ಕಲಿಸಿ ಕೊಡಲು, ಇದು ಹಾಲಲ್ಲಾಎಂದು ಅತ್ತನು.

ದೃಷ್ಟ್ವಾ ರುವನ್ತಂ ಸುತಮಾತ್ಮಜಸ್ಯ ಸ್ನೇಹಾನ್ನಿಯತ್ಯೈವ ಜನಾರ್ದ್ದನಸ್ಯ
ಸಮ್ಪ್ರೇರಿತಃ ಕೃಪಯಾ ಚಾsರ್ತ್ತರೂಪೋ ದ್ರೋಣೋ ಯಯಾವಾರ್ಜ್ಜಯಿತುಂ ತದಾ ಗಾಮ್ ೧೫.೧೦

ಹೀಗೆ, ಮಗನು ಅಳುತ್ತಿದ್ದಾನೆಂದು ಕಂಡು, ಮಗನಮೇಲಿನ ಪ್ರೀತಿಯಿಂದ, ಕೃಷ್ಣನ ನಿಯತಿಯಿಂದಲೇ(ಪ್ರೇರಣೆಯಿಂದಲೇ), ಕೃಪಿಯಿಂದಲೂ ಕೂಡಾ ಚೆನ್ನಾಗಿ ಪ್ರೇರೇಪಿಸಲ್ಪಟ್ಟವರಾಗಿ, ದುಃಖಿತರಾದ ದ್ರೋಣಾಚಾರ್ಯರು  ಹಸುವನ್ನು ಸಂಪಾದಿಸಲೆಂದು ಹೊರಟರು.