ಪ್ರತಿಗ್ರಹಾತ್ ಸನ್ನಿವೃತ್ತಃ ಸ ರಾಮಂ ಯಯೌ ನ ವಿಷ್ಣೋರ್ಹಿ ಭವೇತ್ ಪ್ರತಿಗ್ರಹಃ ।
ದೋಷಾಯ ಯಸ್ಮಾತ್ ಸ ಪಿತಾsಖಿಲಸ್ಯ ಸ್ವಾಮೀ ಗುರುಃ ಪರಮಂ
ದೈವತಂ ಚ ॥೧೫.೧೧॥
ದಾನ ತೆಗೆದುಕೊಳ್ಳುವಿಕೆಯಿಂದ ನಿವೃತ್ತರಾದ ದ್ರೋಣಾಚಾರ್ಯರು ಪರಶುರಾಮನನ್ನು
ಕುರಿತು ತೆರಳಿದರು.
ನಾರಾಯಣನಿಂದ ಪಡೆಯುವ ದಾನವು ದೋಷವಲ್ಲ. ಪರಶುರಾಮನು ಸಮಸ್ತ
ಪ್ರಪಂಚದ ಸ್ವಾಮಿಯಾಗಿದ್ದಾನೆ, ತಂದೆಯಾಗಿದ್ದಾನೆ, ಗುರುವಾಗಿದ್ದಾನೆ, ಪರಮ ದೇವನೂ ಆಗಿದ್ದಾನೆ. ಹೀಗಾಗಿ
ದಾನದಿಂದ ರಹಿತವಾದ ಬ್ರಾಹ್ಮಣ್ಯಧರ್ಮದಲ್ಲಿ ಬದುಕುತ್ತಿದ್ದ ದ್ರೋಣಾಚಾರ್ಯರು ಭಗವಂತನ ಅವತಾರವಾದ
ಪರಶುರಾಮನಿದ್ದಲ್ಲಿಗೆ ತೆರಳಿದರು.
ದೃಷ್ಟ್ವೈವೈನಂ ಜಾಮದಗ್ನ್ಯೋsಪ್ಯಚಿನ್ತಯದ್ ದ್ರೋಣಂ ಕರ್ತ್ತುಂ ಕ್ಷಿತಿಭಾರಾಪನೋದೇ ।
ಹೇತುಂ ಸುರಾಣಾಂ ನರಯೋನಿಜಾನಾಂ ಹನ್ತಾ ಚಾಯಂ ಸ್ಯಾತ್ ಸಹ ಪುತ್ರೇಣ ಚೇತಿ ॥೧೫.೧೨॥
ದ್ರೋಣಾಚಾರ್ಯರನ್ನು ಕಂಡ ಪರಶುರಾಮದೇವರೂ ಕೂಡಾ, ಭೂಭಾರವನ್ನು ಇಳಿಸುವುದರಲ್ಲಿ ದ್ರೋಣಾಚಾರ್ಯರನ್ನು ಹೇತುವನ್ನಾಗಿ ಮಾಡಲು ಚಿಂತಿಸಿದರು.
ಮನುಷ್ಯಕುಲದಲ್ಲಿ ಹುಟ್ಟುವ ದೇವತೆಗಳ ಸಂಹಾರದಲ್ಲಿ ದ್ರೋಣಾಚಾರ್ಯರು ಅಶ್ವತ್ಥಾಮನೊಂದಿಗೆ
ಕೂಡಿಕೊಂಡು ಭಾಗಿಯಾಗಬೇಕು ಎಂದು ಪರಶುರಾಮದೇವರು ಚಿಂತಿಸಿದರು.
ಏಕೆ ಅವತರಿಸಿದ ದೇವತೆಗಳ ಸಂಹಾರದ ಕುರಿತು ಪರಶುರಾಮದೇವರು ಚಿಂತಿಸಿದರು ಎಂದರೆ-
ತೇಷಾಂ ವೃದ್ಧಿಃ ಸ್ಯಾತ್ ಪಾಣ್ಡವಾರ್ತ್ಥೇ ಹತಾನಾಂ ಮೋಕ್ಷೇsಪಿ ಸೌಖ್ಯಸ್ಯ ನ ಸನ್ತತಿಶ್ಚ ।
ಯೋಗ್ಯಾ ಸುರಾಣಾಂ ಕಲಿಜಾ ಸುಪಾಪಾಃ ಪ್ರಾಯೋ ಯಸ್ಮಾತ್ ಕಲಿಜಾಃ ಸಮ್ಭವನ್ತಿ ॥೧೫.೧೩॥
ಪಾಂಡವರಿಗಾಗಿ ಯುದ್ಧದಲ್ಲಿ ಸತ್ತ, ಮನುಷ್ಯಯೋನಿಯಲ್ಲಿ ಹುಟ್ಟಿದ ದೇವತೆಗಳ ಅಭಿವೃದ್ಧಿಯಾಗಬೇಕು, ಅವರಿಗೆ ಸ್ವರ್ಗದಲ್ಲಿಯೂ, ಮೋಕ್ಷದಲ್ಲಿಯೂ
ಸುಖದ ವೃದ್ಧಿಯಾಗಬೇಕು. ಮನುಷ್ಯಕುಲದಲ್ಲಿ ಹುಟ್ಟಿದ ದೇವತೆಗಳ ಸಂತತಿಯು ಕಲಿಯುಗದಲ್ಲಿ ಇರಬಾರದು.
(ಏಕೆ?) ಯಾವಕಾರಣದಿಂದ ಪ್ರಾಯಃ(ಹೆಚ್ಚಾಗಿ) ಅತ್ಯಂತ ಪಾಪಿಷ್ಠರೇ
ಕಲಿಯುಗದಲ್ಲಿ ಹುಟ್ಟುತ್ತಾರೋ, ಆ ಕಾರಣದಿಂದ ದೇವತೆಗಳ ಸಂತತಿ ಕಲಿಯುಗದಲ್ಲಿ ಮುಂದುವರಿಯಬಾರದು.
ಏಕೆ? –
ನ ದೇವಾನಾಮಾಶತಂ ಪೂರುಷಾ ಹಿ ಸನ್ತಾನಜಾಃ ಪ್ರಾಯಶಃ ಪಾಪಯೋಗ್ಯಾಃ ।
ನಾಕಾರಣಾತ್ ಸನ್ತತೇರಪ್ಯಭಾವೋ ಯೋಗ್ಯಃ ಸುರಾಣಾಂ ಸದಮೋಘರೇತಸಾಮ್ ॥೧೫.೧೪॥
ದೇವತೆಗಳಲ್ಲಿ ನೂರು ತಲೆಮಾರಿನ ತನಕ ಹುಟ್ಟುವ ಪುರುಷರು ಪ್ರಾಯಃ(ಸಾಮಾನ್ಯವಾಗಿ) ಪಾಪಯೋಗ್ಯರಾಗಿರುವುದಿಲ್ಲ.
ಇನ್ನು ಯಾವುದೇ ಕಾರಣ ಇಲ್ಲದೇ ಸಂತಾನ ಇಲ್ಲದಿರುವಿಕೆಯೂ ಅವರಿಗೆ ಯೋಗ್ಯವಲ್ಲ. ಏಕೆಂದರೆ ವ್ಯರ್ಥವಾದ(ಅ-ಮೋಘವಾದ)
ರೇತಸ್ಸು(ವೀರ್ಯ) ಅವರದ್ದಲ್ಲ.
ಅವ್ಯುಚ್ಛಿನ್ನೇ ಸಕಲಾನಾಂ ಸುರಾಣಾಂ ತನ್ತೌ ಕಲಿರ್ನ್ನೋ ಭವಿತಾ ಕಥಞ್ಚಿತ್ ।
ತಸ್ಮಾದುತ್ಸಾದ್ಯಾಃ ಸರ್ವ ಏತೇ ಸುರಾಂಶಾ ಏತೇನ ಸಾಕಂ ತನಯೇನ ವೀರಾಃ ॥೧೫.೧೫॥
ಎಲ್ಲಾ ದೇವತೆಗಳ ಸಂತತಿಯು ನಾಶವಾಗದಿದ್ದರೆ ಕಲಿಯುಗದ ವ್ಯಾಪಾರವು
ಸಾಗುವುದಿಲ್ಲ. ಆ ಕಾರಣದಿಂದ ಈ ಎಲ್ಲಾ ದೇವತೆಗಳ ಅವತಾರರು ಅಶ್ವತ್ಥಾಮನಿಂದ ಸಾಯಿಸಲ್ಪಡಬೇಕು.
(ದ್ರೋಣಾಚಾರ್ಯ ಹಾಗು ಅಶ್ವತ್ಥಾಮರಿಂದಲೇ ಈ ಕೆಲಸವಾಗಬೇಕು).
No comments:
Post a Comment