ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, December 23, 2019

Mahabharata Tatparya Nirnaya Kannada 1516_1520


ಏವಂ ವಿಚಿನ್ತ್ಯಾಪ್ರತಿಮಃ ಸ ಭಾರ್ಗ್ಗವೋ ಬಭಾಷ ಈಷತ್ಸ್ಮಿತಶೋಚಿಷಾ ಗಿರಾ
ಅನನ್ತಶಕ್ತಿಃ ಸಕಲೇಶ್ವರೋsಪಿ ತ್ಯಕ್ತಂ ಸರ್ವಂ ನಾದ್ಯ ವಿತ್ತಂ ಮಮಾಸ್ತಿ ೧೫.೧೬

ಹೀಗೆ ಯೋಚನೆಮಾಡಿದ ಎಣೆಯಿಲ್ಲದ(ಯಾರಿಂದಲೂ ಸಂಪೂರ್ಣವಾಗಿ ತಿಳಿಯಲು ಅಸಾಧ್ಯವಾದ) ಪರಶುರಾಮದೇವರು, ಸ್ವಲ್ಪ ಮುಗುಳುನಗುವಿನ ಕಾಂತಿಯೊಂದಿಗೆ ಈರೀತಿ  ನುಡಿದರು: ‘ಅನಂತಶಕ್ತಿಯಾದರೂ, ಎಲ್ಲರಿಗೂ ಒಡೆಯನಾದರೂ ಕೂಡಾ ಈಗ ಎಲ್ಲವನ್ನೂ ಬಿಟ್ಟಿದ್ದೇನೆ. ಈಗ ನನ್ನಲ್ಲಿ ಯಾವ ಹಣವೂ ಇಲ್ಲ ಎಂದು. 

ಆತ್ಮಾ ವಿದ್ಯಾ ಶಸ್ತ್ರಮೇತಾವದಸ್ತಿ ತೇಷಾಂ ಮದ್ಧ್ಯೇ ರುಚಿತಂ ತ್ವಂ ಗೃಹಾಣ 
ಉಕ್ತಃ ಸ ಇತ್ಥಂ ಪ್ರವಿಚಿನ್ತ್ಯ ವಿಪ್ರೋ ಜಗಾದ ಕಸ್ತ್ವದ್ಗ್ರಹಣೇ ಸಮರ್ತ್ಥಃ ೧೫.೧೭

‘ತಾನು(ಆತ್ಮಾ, ಶರೀರ), ವಿದ್ಯೆ ಹಾಗೂ ಶಸ್ತ್ರ ಇಷ್ಟುಮಾತ್ರ ಇದೆ. ಈ ಮೂರರಲ್ಲಿ ಇಷ್ಟವಾದುದ್ದನ್ನು ನೀನು ಆರಿಸಿಕೋ’. ಈರೀತಿಯಾಗಿ ಪರಶುರಾಮದೇವರಿಂದ ಹೇಳಲ್ಪಟ್ಟಾಗ, ದ್ರೋಣಾಚಾರ್ಯರು ಚೆನ್ನಾಗಿ ಯೋಚನೆ ಮಾಡಿ, ಹೀಗೆ ಹೇಳುತ್ತಾರೆ:
[ಮಹಾಭಾರತದಲ್ಲಿ ಈ ಕುರಿತಾದ ವಿವರಣೆ ಕಾಣಸಿಗುತ್ತದೆ:  ಅಸ್ತ್ರಾಣಿ ವಾ ಶರೀರಂ ವಾ ಬ್ರಹ್ಮನ್ ಶಸ್ತ್ರಾಣಿ ವಾ ಪುನಃ ವೃಣೀಶ್ವ ಕಿಂ ಪ್ರಯಚ್ಛಾಮಿ ತುಭ್ಯಂ ದ್ರೋಣ ವದಾsಶು ತತ್’(ಆದಿಪರ್ವ ೧೪೦.೬೬) ‘ಶರೀರಮಾತ್ರಮೇವಾದ್ಯ ಮಯಾ ಸಮವಶೇಷಿತಮ್ ಅಸ್ತ್ರಾಣಿ ವಾ ಶರೀರಂ ವಾ ಬ್ರಹ್ಮನ್ನೇಕತಮಂ ವೃಣು’(೧೮೦.೧೦). ಅಸ್ತ್ರಗಳೋ, ಶರೀರವೋ, ಶಸ್ತ್ರಗಳೋ ? ಇರುವ ಈ ಮೂರರಲ್ಲಿ ಏನನ್ನು ಕೊಡಲಿ? ಎಂದು ಪರಶುರಾಮ ಕೇಳುತ್ತಾನೆ]

ಸರ್ವೇಶಿತಾ ಸರ್ವಪರಃ ಸ್ವತನ್ತ್ರಸ್ತ್ವಮೇವ ಕೋsನ್ಯಃ ಸದೃಶಸ್ತವೇಶ
ಸ್ವಾಮ್ಯಂ ತವೇಚ್ಛನ್ ಪ್ರತಿಯಾತ್ಯಧೋ ಹಿ ಯಸ್ಮಾನ್ನಚೋತ್ಥಾತುಮಲಂ ಕದಾಚಿತ್ ೧೫.೧೮

ಎಲ್ಲರ ಒಡೆಯನು, ಎಲ್ಲರಿಗೂ ಮಿಗಿಲು, ಎಲ್ಲರನ್ನೂ ವಶದಲ್ಲಿಟ್ಟುಕೊಂಡವನು ನೀನು. ನಿನಗೆ ಸಮಾನರಾದವರು ಯಾರು? ನಿನ್ನ ಸ್ವಾಮಿತ್ವವನ್ನು ಇಚ್ಛೆಪಡುವವನು ಕೆಳಗಡೆ ಹೋಗುತ್ತಾನೆ(ಅಂಧಸ್ತಮಸ್ಸನ್ನು  ಹೊಂದುತ್ತಾನೆ) ಮತ್ತು ಎಂದೂ ಅಲ್ಲಿಂದ ಅವನಿಗೆ ಮೇಲೇರಲು ಸಾದ್ಯವಿಲ್ಲ.

ಸರ್ವೋತ್ತಮಸ್ಯೇಶ ತವೋಚ್ಚಶಸ್ತ್ರೈಃ ಕಾರ್ಯ್ಯಂ ಕಿಮಸ್ಮಾಕಮನುದ್ಬಲಾನಾಮ್
ವಿದ್ಯೈವ ದೇಯಾ ಭವತಾ ತತೋsಜ ಸರ್ವಪ್ರಕಾಶಿನ್ಯಚಲಾ ಸುಸೂಕ್ಷ್ಮಾ ೧೫.೧೯

ಸರ್ವೋತ್ತಮನಾಗಿರುವ ನಿನ್ನ ಉತ್ಕೃಷ್ಟವಾದ ಶಸ್ತ್ರಗಳಿಂದ, ಬಲವಿಲ್ಲದ ನಮಗೆ ಏನು ಪ್ರಯೋಜನ? ಆ ಕಾರಣದಿಂದ ನಿನ್ನಿಂದ ನನಗೆ ‘ಎಲ್ಲವನ್ನೂ ತೋರಿಸುವ, ನಿರಂತರವಾಗಿರುವ, ಸುಸೂಕ್ಷ್ಮವಾಗಿರುವ’  ತತ್ತ್ವ ವಿದ್ಯೆಯೇ ಕೊಡಲರ್ಹವು.

ಇತೀರಿತಸ್ತತ್ತ್ವವಿದ್ಯಾದಿಕಾಃ ಸ ವಿದ್ಯಾಃ ಸರ್ವಾಃ ಪ್ರದದೌ ಸಾಸ್ತ್ರಶಸ್ತ್ರಾಃ
ಅಬ್ದದ್ವಿಷಟ್ಕೇನ ಸಮಾಪ್ಯ ತಾಃ ಸ ಯಯೌ ಸಖಾಯಂ ದ್ರುಪದಂ ಮಹಾತ್ಮಾ ೧೫.೨೦

ಈರೀತಿಯಾಗಿ ದ್ರೋಣಾಚಾರ್ಯರಿಂದ ಹೇಳಲ್ಪಟ್ಟವರಾದ ಪರಶುರಾಮ ದೇವರು, ತತ್ತ್ವವಿದ್ಯೆಯಿಂದ ಕೂಡಿರುವ, ಅಸ್ತ್ರಶಸ್ತ್ರಗಳಿಂದೊಡಗೂಡಿದ ವಿದ್ಯೆಗಳನ್ನು, ಹಾಗೂ ಇತರ ಎಲ್ಲಾ ತರದ ವಿದ್ಯೆಗಳನ್ನು ದ್ರೋಣಾಚಾರ್ಯರಿಗೆ ಕೊಟ್ಟರು. ಸುಮಾರು ಹನ್ನೆರಡು ವರ್ಷಗಳ ಕಾಲ ಆ ಎಲ್ಲಾ ವಿದ್ಯೆಗಳನ್ನು ಹೊಂದಿದ ದ್ರೋಣಾಚಾರ್ಯರು, ಆ ನಂತರ, ಗೆಳೆಯನಾದ ದ್ರುಪದನಿದ್ದಲ್ಲಿಗೆ ತೆರಳಿದರು.

No comments:

Post a Comment