ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, December 13, 2019

Mahabharata Tatparya Nirnaya Kannada 1506_1510

ವ್ಯಾಸಾದವಾಪ ಪರಮಾತ್ಮಸತತ್ವವಿದ್ಯಾಂ ಧರ್ಮ್ಮಾತ್ಮಜೋsಪಿ ಸತತಂ ಭಗವತ್ಪ್ರಪನ್ನಾಃ
ತೇ ಪಞ್ಚ ಪಾಣ್ಡುತನಯಾ ಮುಮುದುರ್ನ್ನಿತಾನ್ತಂ ಸದ್ಧರ್ಮ್ಮಚಾರಿಣ ಉರುಕ್ರಮಶಿಕ್ಷಿತಾರ್ತ್ಥಾಃ  ೧೫.೦೬

ಧರ್ಮರಾಜನೂ ಕೂಡಾ ವೇದವ್ಯಾಸರಿಂದ ಪರಮಾತ್ಮನ ಪರತತ್ತ್ವ ವಿದ್ಯೆಯನ್ನು ಪಡೆದ. ಹೀಗೆ  ಆ ಐದು ಜನ ಪಾಂಡವರೂ ಕೂಡಾ, ಯಾವಾಗಲೂ ಪರಮಾತ್ಮನಲ್ಲಿಯೇ ಆಸಕ್ತರಾಗಿ, ಉತ್ತಮವಾದ  ಧರ್ಮದಲ್ಲಿ ನಡೆಯುತ್ತಾ, ಪರಮಾತ್ಮನು ತೋರಿದ ಮಾರ್ಗದಲ್ಲಿ  ಸಾಗುವವರಾಗಿ ಬಹಳ ಸಂತಸಪಟ್ಟರು.

ಯದಾ ಭರದ್ವಾಜಸುತಸ್ತ್ವಸಞ್ಚಯೀ ಪ್ರತಿಗ್ರಹೋಜ್ಝೋ ನಿಜಧರ್ಮ್ಮವರ್ತ್ತೀ
ದ್ರೌಣಿಸ್ತದಾ ಧಾರ್ತ್ತರಾಷ್ಟ್ರೈಃ ಸಮೇತ್ಯ ಕ್ರೀಡನ್ ಪಯಃ ಪಾತುಮುಪೈತಿ ಸದ್ಮ ೧೪.೦೭

ಯಾವುದನ್ನೂ ಸಂಗ್ರಹಿಸಿ ಇಟ್ಟುಕೊಳ್ಳದ, ದಾನದಿಂದ ರಹಿತವಾದ ಬ್ರಾಹ್ಮಣ್ಯಧರ್ಮದಲ್ಲಿ ಭರದ್ವಾಜರ ಮಗನಾದ ದ್ರೋಣಾಚಾರ್ಯರು ಜೀವಿಸುತ್ತಿರುವಾಗ, ಅವರ ಪುತ್ರನಾದ  ಅಶ್ವತ್ಥಾಮನು ದುರ್ಯೋಧನಾದಿಗಳಿಂದ ಕೂಡಿಕೊಂಡು ಆಟ ಆಡತಕ್ಕವನಾಗಿ, ಹಾಲು ಕುಡಿಯಲೆಂದು ಮನೆಯನ್ನು ತಲುಪಿದನು.

ತಸ್ಮೈ ಮಾತಾ ಪಿಷ್ಟಮಾಲೋಡ್ಯ ಪಾತುಂ ದದಾತಿ ಪೀತ್ವೈತಿ ತದೈಷ ನಿತ್ಯಮ್
ಪೀತಕ್ಷೀರಾನ್ ಧಾರ್ತ್ತರಾಷ್ಟ್ರಾನ್ ಸ ಚೈತ್ಯ ಮಯಾ ಪೀತಂ ಕ್ಷೀರಮಿತ್ಯಾಹ ನಿತ್ಯಮ್ ೧೫.೦೮

ಈ ರೀತಿ ಬರುತ್ತಿದ್ದ ಅಶ್ವತ್ಥಾಮನಿಗೆ ತಾಯಿ ಕೃಪಿಯು ಹಿಟ್ಟನ್ನು ಕಲಿಸಿ ಕುಡಿಯಲು ಕೊಡುತ್ತಿದ್ದಳು. ಅದನ್ನು ಕುಡಿವ ಅಶ್ವತ್ಥಾಮನು, ನಿತ್ಯವೂ ಹಾಲನ್ನು ಕುಡಿಯುತ್ತಿರುವ ದುರ್ಯೋಧನಾದಿಗಳನ್ನು ಹೊಂದಿ, ‘ನನ್ನಿಂದ ಹಾಲು ಕುಡಿಯಲ್ಪಟ್ಟಿತು’ ಎಂದು ಯಾವಾಗಲೂ ಹೇಳುತ್ತಿದ್ದ.

ನೃತ್ಯನ್ತಮೇನಂ ಪಾಯಯಾಮಾಸುರೇತೇ ಪಯಃ ಕದಾಚಿತ್  ರಸಮಸ್ಯ ಸೋsವೇತ್
ಪುನಃ ಕದಾಚಿತ್ ಸ ತು ಮಾತೃದತ್ತೇ ಪಿಷ್ಟೇ ನೇದಂ ಕ್ಷೀರಮಿತ್ಯಾರುರಾವ ೧೫.೦೯

ಹೀಗೆ ‘ಹಾಲುಕುಡಿದೆ’ ಎಂದು ಕುಣಿಯುತ್ತಿರುವ ದ್ರೋಣಿಗೆ(ಅಶ್ವತ್ಥಾಮನನ್ನು) ಒಮ್ಮೆ ದುರ್ಯೋಧನಾದಿಗಳು   ನಿಜವಾದ ಹಾಲನ್ನು ಕುಡಿಸಿದರು. ಈ ರೀತಿ ಒಮ್ಮೆ ಹಾಲಿನ ನಿಜರುಚಿಯನ್ನು ಚೆನ್ನಾಗಿ ತಿಳಿದ ಅಶ್ವತ್ಥಾಮನು,  ಮತ್ತೆ ಯಾವಾಗಲೋ ಒಮ್ಮೆ ತಾಯಿಯು ಹಿಟ್ಟನ್ನು ಕಲಿಸಿ ಕೊಡಲು, ಇದು ಹಾಲಲ್ಲಾಎಂದು ಅತ್ತನು.

ದೃಷ್ಟ್ವಾ ರುವನ್ತಂ ಸುತಮಾತ್ಮಜಸ್ಯ ಸ್ನೇಹಾನ್ನಿಯತ್ಯೈವ ಜನಾರ್ದ್ದನಸ್ಯ
ಸಮ್ಪ್ರೇರಿತಃ ಕೃಪಯಾ ಚಾsರ್ತ್ತರೂಪೋ ದ್ರೋಣೋ ಯಯಾವಾರ್ಜ್ಜಯಿತುಂ ತದಾ ಗಾಮ್ ೧೫.೧೦

ಹೀಗೆ, ಮಗನು ಅಳುತ್ತಿದ್ದಾನೆಂದು ಕಂಡು, ಮಗನಮೇಲಿನ ಪ್ರೀತಿಯಿಂದ, ಕೃಷ್ಣನ ನಿಯತಿಯಿಂದಲೇ(ಪ್ರೇರಣೆಯಿಂದಲೇ), ಕೃಪಿಯಿಂದಲೂ ಕೂಡಾ ಚೆನ್ನಾಗಿ ಪ್ರೇರೇಪಿಸಲ್ಪಟ್ಟವರಾಗಿ, ದುಃಖಿತರಾದ ದ್ರೋಣಾಚಾರ್ಯರು  ಹಸುವನ್ನು ಸಂಪಾದಿಸಲೆಂದು ಹೊರಟರು.

No comments:

Post a Comment