ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, December 26, 2019

Mahabharata Tatparya Nirnaya Kannada 1531_1535


ಯಥೇಷ್ಟವಿತ್ತಾಶನಪಾನಮಸ್ಯ ಧರ್ಮ್ಮಾತ್ಮಜಃ ಪ್ರತಿಜಜ್ಞೇ ಸುಶೀಘ್ರಮ್
ತಥೈವ ತೇನೋದ್ಧೃತಮಙ್ಗುಲೀಯಂ ತ್ರಿವರ್ಗ್ಗಮುಖ್ಯಾತ್ಮಜವಾಕ್ಯತೋsನು             ೧೫.೩೧

ಧರ್ಮರಾಜನು ದ್ರೋಣಾಚಾರ್ಯರಿಗೆ ಅವರು ಇಷ್ಟಪಟ್ಟಷ್ಟು ಹಣ, ಊಟ, ಕುಡಿಯುವಿಕೆಗೆ ಪ್ರತಿಜ್ಞೆ ಮಾಡಿದನು. ಹಾಗೆಯೇ, ತ್ರಿವರ್ಗ(ಧರ್ಮ-ಅರ್ಥ-ಕಾಮ)ಗಳಲ್ಲಿ ಮುಖ್ಯವಾದ ಧರ್ಮನ ಮಗನಾದ ಯುಧಿಷ್ಠಿರನ ಮಾತನ್ನು ಅನುಸರಿಸಿ, ದ್ರೋಣಾಚಾರ್ಯರಿಂದ, ಚಂಡಿನಂತೆಯೇ ಉಂಗುರವೂ ಬಾವಿಯಿಂದ ಎತ್ತಲ್ಪಟ್ಟಿತು.

ಪಪ್ರಚ್ಛುರೇನಂ ಸಹಿತಾಃ ಕುಮಾರಾಃ ಕೋsಸೀತಿ ಸೋsಪ್ಯಾಹ ಪಿತಾಮಹೋ ವಃ
ವಕ್ತೇತಿ ತೇ ದುದ್ರುವುರಾಶು ಭೀಷ್ಮಂ ದ್ರೋಣೋsಯಮಿತ್ಯೇವ ಸ ತಾಂಸ್ತದೋಚೇ             ೧೫.೩೨

ಈರೀತಿಯಾಗಿ ಬಾವಿಯಿಂದ ಚೆಂಡು ಮತ್ತು ಮುದ್ರೆಯುಂಗುರವನ್ನು ತನ್ನ ಅಸ್ತ್ರಬಲದಿಂದ ಮೇಲೆತ್ತಿದ ಆ ಬ್ರಾಹ್ಮಣನನ್ನು ಎಲ್ಲಾ ಕುಮಾರರು ಸೇರಿಕೊಂಡು ‘ಯಾರು ನೀವು’ ಎಂದು ವಿಚಾರಿಸಿದರು. ಅವರಾದರೋ, ‘ನಾನು ಯಾರು ಎನ್ನುವುದನ್ನು ನಿಮ್ಮ ತಾತನು ಹೇಳಬಲ್ಲ’ ಎಂದರು. ಆಗ ಆ ಬಾಲಕರೆಲ್ಲರೂ ಕೂಡಲೇ ಭೀಷ್ಮಾಚಾರ್ಯರಲ್ಲಿಗೆ ಹೋಗಿ ವಿಷಯವನ್ನು ತಿಳಿಸಿದರು. ಆಗ ಭೀಷ್ಮಾಚಾರ್ಯರು ‘ಅವನು ದ್ರೋಣ’ ಎಂದು ನಿಶ್ಚಯವಾಗಿ  ಹೇಳಿದರು.
[ಇಲ್ಲಿ ಸಾಮಾನ್ಯವಾಗಿ ಬರುವ ಪ್ರಶ್ನೆ ಎಂದರೆ: ಅಶ್ವತ್ಥಾಮನೊಂದಿಗೆ ಸೇರಿಕೊಂಡು ಆಟವಾಡುತ್ತಿದ್ದ ಆ ಕುಮಾರರಿಗೆ ದ್ರೋಣಾಚಾರ್ಯರ ಪರಿಚಯ ಏಕಾಗಲಿಲ್ಲಾ ಎನ್ನುವುದು.  ಏಕೆಂದರೆ: ಯಾವಾಗ ದ್ರೋಣಾಚಾರ್ಯರು ಪರಶುರಾಮನಿದ್ದಲ್ಲಿಗೆ ಹೋಗಿದ್ದರೋ, ಆ ಸಮಯದಲ್ಲಿ ಪಾಂಡವರು ಕಾಡಿನಲ್ಲಿದ್ದರು. ಆಗ ದುರ್ಯೋಧನಾದಿಗಳಿಗೆ ಸುಮಾರು ಐದು ವರ್ಷ ವಯಸ್ಸು. ಹನ್ನೆರಡು ವರ್ಷಗಳ ಕಾಲ ಪರಶುರಾಮನೊಂದಿಗಿದ್ದ ದ್ರೋಣರು ಇದೀಗ ಮರಳಿ ಬಂದಿರುವುದು. ಇಂದು ಅಶ್ವತ್ಥಾಮ ಪ್ರಬುದ್ಧನಾಗಿದ್ದಾನೆ(ಅಶ್ವತ್ಥಾಮ ಬ್ರಹ್ಮವಿದ್ಯೆಯನ್ನು ಅಧ್ಯಯನ ಮಾಡುವ ವಯಸ್ಸಿನವನಾಗಿದ್ದಾನೆ. ಆದರೆ ಆತನಿಗೆ ದುರ್ಯೋಧನಾದಿಗಳ ಸಂಪರ್ಕ ಬಹಳವಾಗಿದ್ದುದರಿಂದ, ಅವರೆಲ್ಲರೊಂದಿಗೆ ಕ್ಷತ್ರಿಯನಂತೇ ಆತನಿದ್ದ). ಹೀಗೆ ಅಶ್ವತ್ಥಾಮನೂ ಸೇರಿ ಎಲ್ಲಾ ಕುಮಾರರು ದ್ರೋಣಾಚಾರ್ಯರನ್ನು ಗುರುತಿಸದೇ, ‘ನೀವು ಯಾರು’  ಎಂದು ಕೇಳುತ್ತಾರೆ. ‘ಸ ನಾಗಪುರಮಾಗಮ್ಯ ಗೌತಮಸ್ಯ ನಿವೇಶನೇ ಭಾರದ್ವಾಜೋsವಸತ್ ತತ್ರ ಪ್ರಚ್ಛನ್ನೋ ದ್ವಿಜಸತ್ತಮಃ’ - ದ್ರೋಣಾಚಾರ್ಯರು ನಾಗಪುರವೆಂಬಲ್ಲಿ ಗೌತಮಋಷಿಯ ಮನೆಯಲ್ಲಿ   ತಾವು ದ್ರೋಣ ಎನ್ನುವುದನ್ನು ಮರೆಮಾಚಿಕೊಂಡು ಸ್ವಲ್ಪ ದಿನ ಇರುತ್ತಾರೆ ಎಂದು ಮಹಾಭಾರತದ ಆದಿಪರ್ವದಲ್ಲಿ(೧೪೧.೧೫) ಹೇಳಿರುವುದನ್ನು ನಾವಿಲ್ಲಿ ಗಮನಿಸಬೇಕು.]

ದ್ರೋಣಾಚಾರ್ಯರು ಹಿಂದೆ ಅರಮನೆಗೆ ಬರುತ್ತಿರಲಿಲ್ಲವೇ? ಅರಮನೆಯಲ್ಲಿ ಬಾಲಕರು ಹಿಂದೆ ದ್ರೋಣಾಚಾರ್ಯರನ್ನು ನೋಡಿರಲಿಲ್ಲವೇ? ಎಂದರೆ-

ನ ರಾಜಗೇಹಂ ಸ ಕದಾಚಿದೇತಿ ತೇನಾದೃಷ್ಟಃ ಸ ಕುಮಾರೈಃ ಪುರಾsತಃ
ಭೀಷ್ಮೋ ವಿದ್ಯಾಸ್ತೇನ ಸಹೈವ ಚಿನ್ತಯನ್ನಸ್ತ್ರಪ್ರಾಪ್ತಿಂ ತಸ್ಯ ಶುಶ್ರಾವ ರಾಮಾತ್ ೧೫.೩೩

ದ್ರೋಣಾಚಾರ್ಯರು ರಾಜರ ಮನೆಗೆ ಯಾವತ್ತೂ ಹೋಗುತ್ತಿರಲಿಲ್ಲ. ಅದರಿಂದಾಗಿ ಕುಮಾರರಿಂದ ಅವರು ಕಾಣಲ್ಪಟ್ಟಿರಲಿಲ್ಲ. ಭೀಷ್ಮಾಚಾರ್ಯರು ಮಾತ್ರ ದ್ರೋಣಾಚಾರ್ಯರ ಜೊತೆಗೇ (ಅವರಿದ್ದಲ್ಲಿಗೆ ಹೋಗಿ ಅವರ ಜೊತೆಗೇ) ಚಿಂತನೆ ಮಾಡುತ್ತಿದ್ದರು. ಪರಶುರಾಮದೇವರಿಂದ ದ್ರೋಣಾಚಾರ್ಯರ ಅಸ್ತ್ರದ ಹೊಂದುವಿಕೆಯನ್ನೂ ಭೀಷ್ಮರು ಕೇಳಿ ತಿಳಿದಿದ್ದರು ಕೂಡಾ.

ಶ್ರುತ್ವಾ ವೃದ್ಧಂ ಕೃಷ್ಣವರ್ಣ್ಣಂ ದ್ವಿಜಂ ತಂ ಮಹಾಸ್ತ್ರವಿದ್ಯಾಮಪಿ ತಾಂ ಮಹಾಮತಿಃ
ದ್ರೋಣಂ ಜ್ಞಾತ್ವಾ ತಸ್ಯ ಶಿಷ್ಯತ್ವ ಏತಾನ್ ದದೌ ಕುಮಾರಾಂಸ್ತತ್ರ ಗತ್ವಾ ಸ್ವಯಂ ಚ ೧೫.೩೪

ಕಪ್ಪುಬಣ್ಣದ, ವೃದ್ಧನಾಗಿರುವ ಬ್ರಾಹ್ಮಣ ಹಾಗೂ ಅವನ ಅಸ್ತ್ರ ವಿದ್ಯೆಯ ಕುರಿತು ರಾಜಕುಮಾರರಿಂದ ಕೇಳಿದ ಭೀಷ್ಮಾಚಾರ್ಯರು, ನಿಶ್ಚಯವಾಗಿ  ‘ಇವನು ದ್ರೋಣನೇ’ ಎಂದು ತಿಳಿದು, ಅವರಿದ್ದಲ್ಲಿಗೆ ತಾವೇ ತೆರಳಿ, ಅವರ ಶಿಷ್ಯತ್ವಕ್ಕೆ ಆ ಕುಮಾರರನ್ನು ನೀಡಿದರು.

ದ್ರೋಣೋsಥ ತಾನವದದ್ ಯೋ ಮದಿಷ್ಟಂ ಕರ್ತ್ತುಂ ಪ್ರತಿಜ್ಞಾಂ ಪ್ರಥಮಂ ಕರೋತಿ
ತಂ ಧನ್ವಿನಾಂ ಪ್ರವರಂ ಸಾಧಯಿಷ್ಯ ಇತ್ಯರ್ಜ್ಜುನಸ್ತಾಮಕರೋತ್ ಪ್ರತಿಜ್ಞಾಮ್ ೧೫.೩೫

ತದನಂತರ ದ್ರೋಣಾಚಾರ್ಯರು ನೆರೆದಿರುವ ವಿದ್ಯಾರ್ಥಿಗಳನ್ನು ಕುರಿತು ಹೇಳಿದರು: 'ಯಾರು ನನಗೆ ಇಷ್ಟವಾದುದ್ದನ್ನು ಮಾಡಲು ಪ್ರತಿಜ್ಞೆಯನ್ನು ಮೊದಲು ಮಾಡುತ್ತಾನೋ, ಅವನನ್ನು ಧನುರ್ಧಾರಿಗಳಲ್ಲೇ ಶ್ರೇಷ್ಠರನ್ನಾಗಿ ಮಾಡುತ್ತೇನೆ’ ಎಂದು. ಆಗ ಅರ್ಜುನನು ಆ ರೀತಿಯ ಪ್ರತಿಜ್ಞೆಯನ್ನು ಮಾಡಿದನು.

Tuesday, December 24, 2019

Mahabharata Tatparya Nirnaya Kannada 1526_1530


ವಿಕ್ರೀಡತೋ ಧರ್ಮ್ಮಸೂನೋಸ್ತದೈವ ಸಹಾಙ್ಗುಲಿಯೇನ ಚ ಕನ್ದುಕೋsಪತತ್
ಕೂಪೇ ನ ಶೇಕುಃ ಸಹಿತಾಃ ಕುಮಾರಾ ಉದ್ಧರ್ತ್ತುಮೇತಂ ಪವನಾತ್ಮಜೋsವದತ್ ೧೫.೨೬

ಆಟವಾಡುತ್ತಿದ್ದ ಧರ್ಮರಾಜನ ಮುದ್ರೆಯುಂಗುರದಿಂದ ಕೂಡಿಕೊಂಡು ಚೆಂಡು ಬಾವಿಯಲ್ಲಿ ಬಿದ್ದಿತು. ಎಲ್ಲಾ ಕುಮಾರರು ಸೇರಿದರೂ ಕೂಡಾ ಅದನ್ನು ಎತ್ತಲು ಸಮರ್ಥರಾಗಲಿಲ್ಲ. ಆಗ ಭೀಮಸೇನನು ಮಾತನ್ನಾಡುತ್ತಾನೆ-

ನಿಷ್ಪತ್ಯ ಚೋದ್ಧೃತ್ಯ ಸಮುತ್ಪತಿಷ್ಯೇ ಕೂಪಾದಮುಷ್ಮಾದ್ ಭೃಶನೀಚಾದಪಿ ಸ್ಮ
ಸಕನ್ದುಕಾಂ ಮುದ್ರಿಕಾಂ ಪಶ್ಯತಾದ್ಯ ಸರ್ವೇ ಕುಮಾರಾ ಇತಿ ವೀರ್ಯ್ಯಸಂಶ್ರಯಾತ್ ೧೫.೨೭

‘ಅತ್ಯಂತ ಆಳವಾಗಿರುವ ಈ ಕೂಪಕ್ಕಿಳಿದು,  ಚೆಂಡಿನಿಂದ ಸಹಿತವಾದ ಉಂಗುರವನ್ನು ಎತ್ತಿ, ಹಾರಿ ಬರುತ್ತೇನೆ, ಎಲ್ಲರೂ ನೋಡಿರಿ’ ಎಂದು ತನ್ನ ಬಲದಿಂದ ಕೂಡಿಕೊಂಡು ಭೀಮಸೇನ ನುಡಿದನು.

ತದಾ ಕುಮಾರಾನವದತ್ ಸ ವಿಪ್ರೋ ಧಿಗಸ್ತ್ರಬಾಹ್ಯಾಂ ಭವತಾಂ ಪ್ರವೃತ್ತಿಮ್
ಜಾತಾಃ ಕುಲೇ ಭರತಾನಾಂ ನ ವಿತ್ಥ ದಿವ್ಯಾನಿ ಚಾಸ್ತ್ರಾಣಿ ಸುರಾರ್ಚ್ಚಿತಾನಿ ೧೫.೨೮

ಇದನ್ನು ನೋಡಿದ ದ್ರೋಣಾಚಾರ್ಯರು, ಆ ಎಲ್ಲಾ ಕುಮಾರರನ್ನು ಕುರಿತು ಹೀಗೆ ಹೇಳಿದರು: ‘ಅಸ್ತ್ರದಿಂದ ವಿರಹಿತವಾದ ನಿಮ್ಮ ಜೀವನಕ್ಕೇ ದಿಕ್ಕಾರ. ಉತ್ಕೃಷ್ಟವಾದ ಭರತವಂಶದಲ್ಲಿ ಹುಟ್ಟಿದ್ದೀರ. ಆದರೆ ದೇವತೆಗಳಿಂದ ಅರ್ಚಿಸಲ್ಪಟ್ಟ ದಿವ್ಯಾಸ್ತ್ರಗಳನ್ನು ನೀವು ತಿಳಿದಿಲ್ಲ’.

ಇತೀರಿತಾ ಅಸ್ತ್ರವಿದಂ ಕುಮಾರಾ ವಿಜ್ಞಾಯ ವಿಪ್ರಂ ಸುರಪೂಜ್ಯಪೌತ್ರಮ್
ಸಮ್ಪ್ರಾರ್ತ್ಥಯಾಮಾಸುರಥೋದ್ಧೃತಿಂ ಪ್ರತಿ ಪ್ರಧಾನಮುದ್ರಾಯುತಕನ್ದುಕಸ್ಯ ೧೫.೨೯

ಈರೀತಿಯಾಗಿ ದ್ರೋಣಾಚಾರ್ಯರಿಂದ ಹೇಳಲ್ಪಟ್ಟ ಕುಮಾರರು, ಬ್ರಹಸ್ಪತಿಯ ಮೊಮ್ಮಗನಾದ ಆ ವಿಪ್ರನನ್ನು ಅಸ್ತ್ರವೇತ್ತಾ ಎಂದು ತಿಳಿದು, ರಾಜಮುದ್ರೆಯಿಂದ ಕೂಡಿದ ಚೆಂಡಿನ ಎತ್ತುವಿಕೆಯನ್ನು ಅವನಲ್ಲಿ  ಬೇಡಿದರು.

ಸ ಚಾsಶ್ವಿಷೀಕಾಭಿರಥೋತ್ತರೋತ್ತರಂ ಸಮ್ಪ್ರಾಸ್ಯ ದಿವ್ಯಾಸ್ತ್ರಬಲೇನ ಕನ್ದುಕಮ್
ಉದ್ಧೃತ್ಯ ಮುದ್ರೋದ್ಧರಣಾರ್ತ್ಥಿನಃ ಪುನರ್ಜ್ಜಗಾದ ಭುಕ್ತಿರ್ಮ್ಮಮ ಕಲ್ಪ್ಯತಾಮಿತಿ ೧೫.೩೦

ಅವರಾದರೋ, ಕೂಡಲೇ ದರ್ಭೆಗಳನ್ನು ಉತ್ತರೋತ್ತರವಾಗಿ ಎಸೆದು, ದಿವ್ಯಾಸ್ತ್ರಬಲದಿಂದ ಚೆಂಡನ್ನು ಎತ್ತಿ, ಉಂಗುರವನ್ನೂ ಎತ್ತಲು ಬಯಸಿದ ಧರ್ಮರಾಜನನ್ನು ಕುರಿತು ‘ಕಡೆಯವರೆಗೂ ನನಗೆ ನೀನು ಊಟದ ವ್ಯವಸ್ಥೆ ಮಾಡಬೇಕು’ ಎಂದು ಹೇಳಿದರು.

Mahabharata Tatparya Nirnaya Kannada 1521_1525


ದಾನೇsರ್ದ್ಧರಾಜ್ಯಸ್ಯ ಹಿ ತತ್ಪ್ರತಿಜ್ಞಾಂ ಸಂಸ್ಮೃತ್ಯ ಪೂರ್ವಾಮುಪಯಾತಂ ಸಖಾಯಮ್
ಸಖಾ ತವಾಸ್ಮೀತಿ ತದೋದಿತೋsಪಿ ಜಗಾದ ವಾಕ್ಯಂ ದ್ರುಪದೋsತಿದರ್ಪ್ಪಾತ್ ೧೫.೨೧

ಹಿಂದೆ ಅರ್ಧರಾಜ್ಯದ ಕೊಡುವಿಕೆಯಲ್ಲಿ ಗೆಳೆಯ ದ್ರುಪದ ಮಾಡಿದ ಪ್ರತಿಜ್ಞೆಯನ್ನು ನೆನಪಿಸಿ, ದ್ರುಪದನನ್ನು ಕುರಿತು ‘ನಾನು ನಿನ್ನ ಗೆಳೆಯನಾಗಿದ್ದೇನೆ’ ಎಂದು ಹೇಳಿದರೂ ಕೂಡಾ, ಎಲ್ಲವೂ ನೆನಪಿದ್ದರೂ ಸಹ, ದ್ರುಪದನು ಅತ್ಯಂತ ದರ್ಪದಿಂದ ಮಾತನ್ನಾಡಿದನು.


ನ ನಿರ್ದ್ಧನೋ ರಾಜಸಖೋ ಭವೇತ ಯಥೇಷ್ಟತೋ ಗಚ್ಛ ವಿಪ್ರೇತಿ ದೈವಾತ್
ಇತೀರಿತಸ್ಯಾsಶು ಬಭೂವ ಕೋಪೋ ಜಿತೇನ್ದ್ರಿಯಸ್ಯಾಪಿ ಮುನೇರ್ಹರೀಚ್ಛಯಾ ೧೫.೨೨

‘ಎಲೈ ವಿಪ್ರನೇ, ಹಣವಿಲ್ಲದವನು ರಾಜನ ಗೆಳೆಯನಾಗಲಾರ. ನಿನಗೆ ಇಷ್ಟವಿದ್ದರೆ ಇರು. ಇಲ್ಲದಿದ್ದರೆ ಹೊರಟುಹೋಗು’  ಎಂದು ದ್ರುಪದ ದೈವಪ್ರರಣೆಯಿಂದ ನುಡಿದ. ಈ ಮಾತನ್ನು ಕೇಳಿದ  ಇಂದ್ರಿಯಗಳನ್ನು ಗೆದ್ದಿದ್ದ(ಜಿತೇನ್ದ್ರಿಯರಾದ) ದ್ರೋಣಾಚಾರ್ಯರಿಗೂ ಕೂಡಾ  ಪರಮಾತ್ಮನ ಇಚ್ಛೆಯಿಂದಾಗಿ ಕೋಪವುಂಟಾಯಿತು.

ಪ್ರತಿಗ್ರಹಾತ್ ಸನ್ನಿವೃತ್ತೇನ ಸೋsಯಂ ಮಯಾ ಪ್ರಾಪ್ತೋ ಮತ್ಪಿತುಃ ಶಿಷ್ಯಕತ್ವಾತ್
ಪಿತುಃ ಶಿಷ್ಯೋ ಹ್ಯಾತ್ಮಶಿಷ್ಯೋ ಭವೇತ ಶಿಷ್ಯಸ್ಯಾರ್ತ್ಥಃ ಸ್ವೀಯ ಏವೇತಿ ಮತ್ವಾ೧೫.೨೩

‘ಈತ ನನ್ನ ತಂದೆಯ ಶಿಷ್ಯನಾಗಿರುವುದರಿಂದ ನನಗೂ ಶಿಷ್ಯನಾಗುತ್ತಾನೆ. ಶಿಷ್ಯನ ದ್ರವ್ಯವು ನನ್ನದ್ದೇ. ಹಾಗಾಗಿ  ದಾನದಿಂದ ನಿವೃತ್ತನಾಗಿರುವ ನನ್ನಿಂದ ಇವನು ಹೊಂದಲ್ಪಟ್ಟಿದ್ದಾನೆ.

ಸೋsಯಂ ಪಾಪೋ ಮಾಮವಜ್ಞಾಯ ಮೂಢೋ ದುಷ್ಟಂ ವಚೋsಶ್ರಾವಯದಸ್ಯ ದರ್ಪ್ಪಮ್
ಹನಿಷ್ಯ ಇತ್ಯೇವ ಮತಿಂ ನಿಧಾಯ ಯಯೌ ಕುರೂಞ್ಛಷ್ಯತಾಂ ನೇತುಮೇತಾನ್ ೧೫.೨೪

ಪಾಪಿಷ್ಠನಾದ ಈ ದ್ರುಪದನು ಮೂಢನಾಗಿ, ದುಷ್ಟತನದಿಂದ ನನ್ನನ್ನು ತಿರಸ್ಕರಿಸಿ, ದರ್ಪದಿಂದ ಕೂಡಿರುವ ಮಾತನ್ನು ನನಗೆ ಕೇಳಿಸಿದ. ಇಂತಹ ಇವನ ದರ್ಪವನ್ನು ನಾನು ಕೊಲ್ಲುತ್ತೇನೆ’ ಎಂದು ಬುದ್ಧಿಯನ್ನು ಮಾಡಿದ ದ್ರೋಣಾಚಾರ್ಯರು, ಕುರುರಾಜಕುಮಾರರನ್ನು ಶಿಷ್ಯರನ್ನಾಗಿ ಮಾಡಿಕೊಳ್ಳಲು ಕುರುದೇಶದತ್ತ ತೆರಳಿದರು.  

ಪ್ರತಿಗ್ರಹಾದ್ ವಿನಿವೃತ್ತಸ್ಯ ಚಾರ್ತ್ಥಃ ಸ್ಯಾಚ್ಛಿಷ್ಯೇಭ್ಯಃ ಕೌರವೇಭ್ಯೋ ಮಮಾತ್ರ
ಏವಂ ಮನ್ವಾನಃ ಕ್ರೀಡತಃ ಪಾಣ್ಡವೇಯಾನ್ ಸಧಾರ್ತ್ತರಾಷ್ಟ್ರಾನ್ ಪುರಬಾಹ್ಯತೋsಖ್ಯತ್ ೧೫.೨೫

‘ದಾನದಿಂದ ನಿವೃತ್ತನಾದ ನನಗೆ ಶಿಷ್ಯರಾಗಿರುವ ಕೌರವರಿಂದ ನಾನು ಬಯಸಿದ ಕಾರ್ಯವು ಆದೀತು’ ಎಂದು ತಿಳಿಯುತ್ತಾ ಬಂದ ದ್ರೋಣಾಚಾರ್ಯರು, ಪಟ್ಟಣದ ಹೊರಗಡೆ ಆಟವಾಡುತ್ತಿರುವ ದುರ್ಯೋಧನಾದಿಗಳನ್ನು ಮತ್ತು ಪಾಂಡವರನ್ನು ಕಂಡರು.