ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, December 24, 2019

Mahabharata Tatparya Nirnaya Kannada 1521_1525


ದಾನೇsರ್ದ್ಧರಾಜ್ಯಸ್ಯ ಹಿ ತತ್ಪ್ರತಿಜ್ಞಾಂ ಸಂಸ್ಮೃತ್ಯ ಪೂರ್ವಾಮುಪಯಾತಂ ಸಖಾಯಮ್
ಸಖಾ ತವಾಸ್ಮೀತಿ ತದೋದಿತೋsಪಿ ಜಗಾದ ವಾಕ್ಯಂ ದ್ರುಪದೋsತಿದರ್ಪ್ಪಾತ್ ೧೫.೨೧

ಹಿಂದೆ ಅರ್ಧರಾಜ್ಯದ ಕೊಡುವಿಕೆಯಲ್ಲಿ ಗೆಳೆಯ ದ್ರುಪದ ಮಾಡಿದ ಪ್ರತಿಜ್ಞೆಯನ್ನು ನೆನಪಿಸಿ, ದ್ರುಪದನನ್ನು ಕುರಿತು ‘ನಾನು ನಿನ್ನ ಗೆಳೆಯನಾಗಿದ್ದೇನೆ’ ಎಂದು ಹೇಳಿದರೂ ಕೂಡಾ, ಎಲ್ಲವೂ ನೆನಪಿದ್ದರೂ ಸಹ, ದ್ರುಪದನು ಅತ್ಯಂತ ದರ್ಪದಿಂದ ಮಾತನ್ನಾಡಿದನು.


ನ ನಿರ್ದ್ಧನೋ ರಾಜಸಖೋ ಭವೇತ ಯಥೇಷ್ಟತೋ ಗಚ್ಛ ವಿಪ್ರೇತಿ ದೈವಾತ್
ಇತೀರಿತಸ್ಯಾsಶು ಬಭೂವ ಕೋಪೋ ಜಿತೇನ್ದ್ರಿಯಸ್ಯಾಪಿ ಮುನೇರ್ಹರೀಚ್ಛಯಾ ೧೫.೨೨

‘ಎಲೈ ವಿಪ್ರನೇ, ಹಣವಿಲ್ಲದವನು ರಾಜನ ಗೆಳೆಯನಾಗಲಾರ. ನಿನಗೆ ಇಷ್ಟವಿದ್ದರೆ ಇರು. ಇಲ್ಲದಿದ್ದರೆ ಹೊರಟುಹೋಗು’  ಎಂದು ದ್ರುಪದ ದೈವಪ್ರರಣೆಯಿಂದ ನುಡಿದ. ಈ ಮಾತನ್ನು ಕೇಳಿದ  ಇಂದ್ರಿಯಗಳನ್ನು ಗೆದ್ದಿದ್ದ(ಜಿತೇನ್ದ್ರಿಯರಾದ) ದ್ರೋಣಾಚಾರ್ಯರಿಗೂ ಕೂಡಾ  ಪರಮಾತ್ಮನ ಇಚ್ಛೆಯಿಂದಾಗಿ ಕೋಪವುಂಟಾಯಿತು.

ಪ್ರತಿಗ್ರಹಾತ್ ಸನ್ನಿವೃತ್ತೇನ ಸೋsಯಂ ಮಯಾ ಪ್ರಾಪ್ತೋ ಮತ್ಪಿತುಃ ಶಿಷ್ಯಕತ್ವಾತ್
ಪಿತುಃ ಶಿಷ್ಯೋ ಹ್ಯಾತ್ಮಶಿಷ್ಯೋ ಭವೇತ ಶಿಷ್ಯಸ್ಯಾರ್ತ್ಥಃ ಸ್ವೀಯ ಏವೇತಿ ಮತ್ವಾ೧೫.೨೩

‘ಈತ ನನ್ನ ತಂದೆಯ ಶಿಷ್ಯನಾಗಿರುವುದರಿಂದ ನನಗೂ ಶಿಷ್ಯನಾಗುತ್ತಾನೆ. ಶಿಷ್ಯನ ದ್ರವ್ಯವು ನನ್ನದ್ದೇ. ಹಾಗಾಗಿ  ದಾನದಿಂದ ನಿವೃತ್ತನಾಗಿರುವ ನನ್ನಿಂದ ಇವನು ಹೊಂದಲ್ಪಟ್ಟಿದ್ದಾನೆ.

ಸೋsಯಂ ಪಾಪೋ ಮಾಮವಜ್ಞಾಯ ಮೂಢೋ ದುಷ್ಟಂ ವಚೋsಶ್ರಾವಯದಸ್ಯ ದರ್ಪ್ಪಮ್
ಹನಿಷ್ಯ ಇತ್ಯೇವ ಮತಿಂ ನಿಧಾಯ ಯಯೌ ಕುರೂಞ್ಛಷ್ಯತಾಂ ನೇತುಮೇತಾನ್ ೧೫.೨೪

ಪಾಪಿಷ್ಠನಾದ ಈ ದ್ರುಪದನು ಮೂಢನಾಗಿ, ದುಷ್ಟತನದಿಂದ ನನ್ನನ್ನು ತಿರಸ್ಕರಿಸಿ, ದರ್ಪದಿಂದ ಕೂಡಿರುವ ಮಾತನ್ನು ನನಗೆ ಕೇಳಿಸಿದ. ಇಂತಹ ಇವನ ದರ್ಪವನ್ನು ನಾನು ಕೊಲ್ಲುತ್ತೇನೆ’ ಎಂದು ಬುದ್ಧಿಯನ್ನು ಮಾಡಿದ ದ್ರೋಣಾಚಾರ್ಯರು, ಕುರುರಾಜಕುಮಾರರನ್ನು ಶಿಷ್ಯರನ್ನಾಗಿ ಮಾಡಿಕೊಳ್ಳಲು ಕುರುದೇಶದತ್ತ ತೆರಳಿದರು.  

ಪ್ರತಿಗ್ರಹಾದ್ ವಿನಿವೃತ್ತಸ್ಯ ಚಾರ್ತ್ಥಃ ಸ್ಯಾಚ್ಛಿಷ್ಯೇಭ್ಯಃ ಕೌರವೇಭ್ಯೋ ಮಮಾತ್ರ
ಏವಂ ಮನ್ವಾನಃ ಕ್ರೀಡತಃ ಪಾಣ್ಡವೇಯಾನ್ ಸಧಾರ್ತ್ತರಾಷ್ಟ್ರಾನ್ ಪುರಬಾಹ್ಯತೋsಖ್ಯತ್ ೧೫.೨೫

‘ದಾನದಿಂದ ನಿವೃತ್ತನಾದ ನನಗೆ ಶಿಷ್ಯರಾಗಿರುವ ಕೌರವರಿಂದ ನಾನು ಬಯಸಿದ ಕಾರ್ಯವು ಆದೀತು’ ಎಂದು ತಿಳಿಯುತ್ತಾ ಬಂದ ದ್ರೋಣಾಚಾರ್ಯರು, ಪಟ್ಟಣದ ಹೊರಗಡೆ ಆಟವಾಡುತ್ತಿರುವ ದುರ್ಯೋಧನಾದಿಗಳನ್ನು ಮತ್ತು ಪಾಂಡವರನ್ನು ಕಂಡರು.

No comments:

Post a Comment