ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, December 24, 2019

Mahabharata Tatparya Nirnaya Kannada 1526_1530


ವಿಕ್ರೀಡತೋ ಧರ್ಮ್ಮಸೂನೋಸ್ತದೈವ ಸಹಾಙ್ಗುಲಿಯೇನ ಚ ಕನ್ದುಕೋsಪತತ್
ಕೂಪೇ ನ ಶೇಕುಃ ಸಹಿತಾಃ ಕುಮಾರಾ ಉದ್ಧರ್ತ್ತುಮೇತಂ ಪವನಾತ್ಮಜೋsವದತ್ ೧೫.೨೬

ಆಟವಾಡುತ್ತಿದ್ದ ಧರ್ಮರಾಜನ ಮುದ್ರೆಯುಂಗುರದಿಂದ ಕೂಡಿಕೊಂಡು ಚೆಂಡು ಬಾವಿಯಲ್ಲಿ ಬಿದ್ದಿತು. ಎಲ್ಲಾ ಕುಮಾರರು ಸೇರಿದರೂ ಕೂಡಾ ಅದನ್ನು ಎತ್ತಲು ಸಮರ್ಥರಾಗಲಿಲ್ಲ. ಆಗ ಭೀಮಸೇನನು ಮಾತನ್ನಾಡುತ್ತಾನೆ-

ನಿಷ್ಪತ್ಯ ಚೋದ್ಧೃತ್ಯ ಸಮುತ್ಪತಿಷ್ಯೇ ಕೂಪಾದಮುಷ್ಮಾದ್ ಭೃಶನೀಚಾದಪಿ ಸ್ಮ
ಸಕನ್ದುಕಾಂ ಮುದ್ರಿಕಾಂ ಪಶ್ಯತಾದ್ಯ ಸರ್ವೇ ಕುಮಾರಾ ಇತಿ ವೀರ್ಯ್ಯಸಂಶ್ರಯಾತ್ ೧೫.೨೭

‘ಅತ್ಯಂತ ಆಳವಾಗಿರುವ ಈ ಕೂಪಕ್ಕಿಳಿದು,  ಚೆಂಡಿನಿಂದ ಸಹಿತವಾದ ಉಂಗುರವನ್ನು ಎತ್ತಿ, ಹಾರಿ ಬರುತ್ತೇನೆ, ಎಲ್ಲರೂ ನೋಡಿರಿ’ ಎಂದು ತನ್ನ ಬಲದಿಂದ ಕೂಡಿಕೊಂಡು ಭೀಮಸೇನ ನುಡಿದನು.

ತದಾ ಕುಮಾರಾನವದತ್ ಸ ವಿಪ್ರೋ ಧಿಗಸ್ತ್ರಬಾಹ್ಯಾಂ ಭವತಾಂ ಪ್ರವೃತ್ತಿಮ್
ಜಾತಾಃ ಕುಲೇ ಭರತಾನಾಂ ನ ವಿತ್ಥ ದಿವ್ಯಾನಿ ಚಾಸ್ತ್ರಾಣಿ ಸುರಾರ್ಚ್ಚಿತಾನಿ ೧೫.೨೮

ಇದನ್ನು ನೋಡಿದ ದ್ರೋಣಾಚಾರ್ಯರು, ಆ ಎಲ್ಲಾ ಕುಮಾರರನ್ನು ಕುರಿತು ಹೀಗೆ ಹೇಳಿದರು: ‘ಅಸ್ತ್ರದಿಂದ ವಿರಹಿತವಾದ ನಿಮ್ಮ ಜೀವನಕ್ಕೇ ದಿಕ್ಕಾರ. ಉತ್ಕೃಷ್ಟವಾದ ಭರತವಂಶದಲ್ಲಿ ಹುಟ್ಟಿದ್ದೀರ. ಆದರೆ ದೇವತೆಗಳಿಂದ ಅರ್ಚಿಸಲ್ಪಟ್ಟ ದಿವ್ಯಾಸ್ತ್ರಗಳನ್ನು ನೀವು ತಿಳಿದಿಲ್ಲ’.

ಇತೀರಿತಾ ಅಸ್ತ್ರವಿದಂ ಕುಮಾರಾ ವಿಜ್ಞಾಯ ವಿಪ್ರಂ ಸುರಪೂಜ್ಯಪೌತ್ರಮ್
ಸಮ್ಪ್ರಾರ್ತ್ಥಯಾಮಾಸುರಥೋದ್ಧೃತಿಂ ಪ್ರತಿ ಪ್ರಧಾನಮುದ್ರಾಯುತಕನ್ದುಕಸ್ಯ ೧೫.೨೯

ಈರೀತಿಯಾಗಿ ದ್ರೋಣಾಚಾರ್ಯರಿಂದ ಹೇಳಲ್ಪಟ್ಟ ಕುಮಾರರು, ಬ್ರಹಸ್ಪತಿಯ ಮೊಮ್ಮಗನಾದ ಆ ವಿಪ್ರನನ್ನು ಅಸ್ತ್ರವೇತ್ತಾ ಎಂದು ತಿಳಿದು, ರಾಜಮುದ್ರೆಯಿಂದ ಕೂಡಿದ ಚೆಂಡಿನ ಎತ್ತುವಿಕೆಯನ್ನು ಅವನಲ್ಲಿ  ಬೇಡಿದರು.

ಸ ಚಾsಶ್ವಿಷೀಕಾಭಿರಥೋತ್ತರೋತ್ತರಂ ಸಮ್ಪ್ರಾಸ್ಯ ದಿವ್ಯಾಸ್ತ್ರಬಲೇನ ಕನ್ದುಕಮ್
ಉದ್ಧೃತ್ಯ ಮುದ್ರೋದ್ಧರಣಾರ್ತ್ಥಿನಃ ಪುನರ್ಜ್ಜಗಾದ ಭುಕ್ತಿರ್ಮ್ಮಮ ಕಲ್ಪ್ಯತಾಮಿತಿ ೧೫.೩೦

ಅವರಾದರೋ, ಕೂಡಲೇ ದರ್ಭೆಗಳನ್ನು ಉತ್ತರೋತ್ತರವಾಗಿ ಎಸೆದು, ದಿವ್ಯಾಸ್ತ್ರಬಲದಿಂದ ಚೆಂಡನ್ನು ಎತ್ತಿ, ಉಂಗುರವನ್ನೂ ಎತ್ತಲು ಬಯಸಿದ ಧರ್ಮರಾಜನನ್ನು ಕುರಿತು ‘ಕಡೆಯವರೆಗೂ ನನಗೆ ನೀನು ಊಟದ ವ್ಯವಸ್ಥೆ ಮಾಡಬೇಕು’ ಎಂದು ಹೇಳಿದರು.

No comments:

Post a Comment