ಯಥೇಷ್ಟವಿತ್ತಾಶನಪಾನಮಸ್ಯ ಧರ್ಮ್ಮಾತ್ಮಜಃ ಪ್ರತಿಜಜ್ಞೇ ಸುಶೀಘ್ರಮ್ ।
ತಥೈವ ತೇನೋದ್ಧೃತಮಙ್ಗುಲೀಯಂ ತ್ರಿವರ್ಗ್ಗಮುಖ್ಯಾತ್ಮಜವಾಕ್ಯತೋsನು ॥೧೫.೩೧॥
ಧರ್ಮರಾಜನು ದ್ರೋಣಾಚಾರ್ಯರಿಗೆ ಅವರು ಇಷ್ಟಪಟ್ಟಷ್ಟು ಹಣ, ಊಟ, ಕುಡಿಯುವಿಕೆಗೆ ಪ್ರತಿಜ್ಞೆ ಮಾಡಿದನು. ಹಾಗೆಯೇ, ತ್ರಿವರ್ಗ(ಧರ್ಮ-ಅರ್ಥ-ಕಾಮ)ಗಳಲ್ಲಿ
ಮುಖ್ಯವಾದ ಧರ್ಮನ ಮಗನಾದ ಯುಧಿಷ್ಠಿರನ ಮಾತನ್ನು ಅನುಸರಿಸಿ, ದ್ರೋಣಾಚಾರ್ಯರಿಂದ, ಚಂಡಿನಂತೆಯೇ
ಉಂಗುರವೂ ಬಾವಿಯಿಂದ ಎತ್ತಲ್ಪಟ್ಟಿತು.
ಪಪ್ರಚ್ಛುರೇನಂ ಸಹಿತಾಃ ಕುಮಾರಾಃ ಕೋsಸೀತಿ ಸೋsಪ್ಯಾಹ ಪಿತಾಮಹೋ ವಃ ।
ವಕ್ತೇತಿ ತೇ ದುದ್ರುವುರಾಶು ಭೀಷ್ಮಂ ದ್ರೋಣೋsಯಮಿತ್ಯೇವ ಸ ತಾಂಸ್ತದೋಚೇ ॥೧೫.೩೨॥
ಈರೀತಿಯಾಗಿ ಬಾವಿಯಿಂದ ಚೆಂಡು ಮತ್ತು ಮುದ್ರೆಯುಂಗುರವನ್ನು
ತನ್ನ ಅಸ್ತ್ರಬಲದಿಂದ ಮೇಲೆತ್ತಿದ ಆ ಬ್ರಾಹ್ಮಣನನ್ನು ಎಲ್ಲಾ ಕುಮಾರರು ಸೇರಿಕೊಂಡು ‘ಯಾರು ನೀವು’
ಎಂದು ವಿಚಾರಿಸಿದರು. ಅವರಾದರೋ, ‘ನಾನು ಯಾರು ಎನ್ನುವುದನ್ನು ನಿಮ್ಮ ತಾತನು ಹೇಳಬಲ್ಲ’ ಎಂದರು. ಆಗ
ಆ ಬಾಲಕರೆಲ್ಲರೂ ಕೂಡಲೇ ಭೀಷ್ಮಾಚಾರ್ಯರಲ್ಲಿಗೆ ಹೋಗಿ ವಿಷಯವನ್ನು ತಿಳಿಸಿದರು. ಆಗ
ಭೀಷ್ಮಾಚಾರ್ಯರು ‘ಅವನು ದ್ರೋಣ’ ಎಂದು ನಿಶ್ಚಯವಾಗಿ ಹೇಳಿದರು.
[ಇಲ್ಲಿ ಸಾಮಾನ್ಯವಾಗಿ ಬರುವ ಪ್ರಶ್ನೆ ಎಂದರೆ: ಅಶ್ವತ್ಥಾಮನೊಂದಿಗೆ
ಸೇರಿಕೊಂಡು ಆಟವಾಡುತ್ತಿದ್ದ ಆ ಕುಮಾರರಿಗೆ ದ್ರೋಣಾಚಾರ್ಯರ ಪರಿಚಯ ಏಕಾಗಲಿಲ್ಲಾ ಎನ್ನುವುದು. ಏಕೆಂದರೆ: ಯಾವಾಗ ದ್ರೋಣಾಚಾರ್ಯರು
ಪರಶುರಾಮನಿದ್ದಲ್ಲಿಗೆ ಹೋಗಿದ್ದರೋ, ಆ ಸಮಯದಲ್ಲಿ ಪಾಂಡವರು ಕಾಡಿನಲ್ಲಿದ್ದರು. ಆಗ ದುರ್ಯೋಧನಾದಿಗಳಿಗೆ
ಸುಮಾರು ಐದು ವರ್ಷ ವಯಸ್ಸು. ಹನ್ನೆರಡು ವರ್ಷಗಳ ಕಾಲ ಪರಶುರಾಮನೊಂದಿಗಿದ್ದ ದ್ರೋಣರು ಇದೀಗ ಮರಳಿ
ಬಂದಿರುವುದು. ಇಂದು ಅಶ್ವತ್ಥಾಮ ಪ್ರಬುದ್ಧನಾಗಿದ್ದಾನೆ(ಅಶ್ವತ್ಥಾಮ ಬ್ರಹ್ಮವಿದ್ಯೆಯನ್ನು
ಅಧ್ಯಯನ ಮಾಡುವ ವಯಸ್ಸಿನವನಾಗಿದ್ದಾನೆ. ಆದರೆ ಆತನಿಗೆ ದುರ್ಯೋಧನಾದಿಗಳ ಸಂಪರ್ಕ
ಬಹಳವಾಗಿದ್ದುದರಿಂದ, ಅವರೆಲ್ಲರೊಂದಿಗೆ ಕ್ಷತ್ರಿಯನಂತೇ ಆತನಿದ್ದ). ಹೀಗೆ ಅಶ್ವತ್ಥಾಮನೂ ಸೇರಿ
ಎಲ್ಲಾ ಕುಮಾರರು ದ್ರೋಣಾಚಾರ್ಯರನ್ನು ಗುರುತಿಸದೇ, ‘ನೀವು ಯಾರು’ ಎಂದು ಕೇಳುತ್ತಾರೆ. ‘ಸ ನಾಗಪುರಮಾಗಮ್ಯ ಗೌತಮಸ್ಯ ನಿವೇಶನೇ
। ಭಾರದ್ವಾಜೋsವಸತ್ ತತ್ರ ಪ್ರಚ್ಛನ್ನೋ ದ್ವಿಜಸತ್ತಮಃ’ - ದ್ರೋಣಾಚಾರ್ಯರು ನಾಗಪುರವೆಂಬಲ್ಲಿ ಗೌತಮಋಷಿಯ ಮನೆಯಲ್ಲಿ ತಾವು
ದ್ರೋಣ ಎನ್ನುವುದನ್ನು ಮರೆಮಾಚಿಕೊಂಡು ಸ್ವಲ್ಪ ದಿನ ಇರುತ್ತಾರೆ ಎಂದು ಮಹಾಭಾರತದ ಆದಿಪರ್ವದಲ್ಲಿ(೧೪೧.೧೫)
ಹೇಳಿರುವುದನ್ನು ನಾವಿಲ್ಲಿ ಗಮನಿಸಬೇಕು.]
ದ್ರೋಣಾಚಾರ್ಯರು ಹಿಂದೆ ಅರಮನೆಗೆ ಬರುತ್ತಿರಲಿಲ್ಲವೇ? ಅರಮನೆಯಲ್ಲಿ ಬಾಲಕರು ಹಿಂದೆ ದ್ರೋಣಾಚಾರ್ಯರನ್ನು ನೋಡಿರಲಿಲ್ಲವೇ? ಎಂದರೆ-
ನ ರಾಜಗೇಹಂ ಸ ಕದಾಚಿದೇತಿ ತೇನಾದೃಷ್ಟಃ ಸ ಕುಮಾರೈಃ ಪುರಾsತಃ ।
ಭೀಷ್ಮೋ ವಿದ್ಯಾಸ್ತೇನ ಸಹೈವ ಚಿನ್ತಯನ್ನಸ್ತ್ರಪ್ರಾಪ್ತಿಂ ತಸ್ಯ ಶುಶ್ರಾವ ರಾಮಾತ್ ॥೧೫.೩೩॥
ದ್ರೋಣಾಚಾರ್ಯರು ರಾಜರ ಮನೆಗೆ ಯಾವತ್ತೂ ಹೋಗುತ್ತಿರಲಿಲ್ಲ.
ಅದರಿಂದಾಗಿ ಕುಮಾರರಿಂದ ಅವರು ಕಾಣಲ್ಪಟ್ಟಿರಲಿಲ್ಲ. ಭೀಷ್ಮಾಚಾರ್ಯರು ಮಾತ್ರ ದ್ರೋಣಾಚಾರ್ಯರ
ಜೊತೆಗೇ (ಅವರಿದ್ದಲ್ಲಿಗೆ ಹೋಗಿ ಅವರ ಜೊತೆಗೇ) ಚಿಂತನೆ ಮಾಡುತ್ತಿದ್ದರು. ಪರಶುರಾಮದೇವರಿಂದ
ದ್ರೋಣಾಚಾರ್ಯರ ಅಸ್ತ್ರದ ಹೊಂದುವಿಕೆಯನ್ನೂ ಭೀಷ್ಮರು ಕೇಳಿ ತಿಳಿದಿದ್ದರು ಕೂಡಾ.
ಶ್ರುತ್ವಾ ವೃದ್ಧಂ ಕೃಷ್ಣವರ್ಣ್ಣಂ ದ್ವಿಜಂ ತಂ ಮಹಾಸ್ತ್ರವಿದ್ಯಾಮಪಿ ತಾಂ ಮಹಾಮತಿಃ ।
ದ್ರೋಣಂ ಜ್ಞಾತ್ವಾ ತಸ್ಯ ಶಿಷ್ಯತ್ವ ಏತಾನ್ ದದೌ ಕುಮಾರಾಂಸ್ತತ್ರ ಗತ್ವಾ ಸ್ವಯಂ ಚ ॥೧೫.೩೪॥
ಕಪ್ಪುಬಣ್ಣದ, ವೃದ್ಧನಾಗಿರುವ ಬ್ರಾಹ್ಮಣ ಹಾಗೂ ಅವನ ಅಸ್ತ್ರ
ವಿದ್ಯೆಯ ಕುರಿತು ರಾಜಕುಮಾರರಿಂದ ಕೇಳಿದ ಭೀಷ್ಮಾಚಾರ್ಯರು, ನಿಶ್ಚಯವಾಗಿ ‘ಇವನು ದ್ರೋಣನೇ’ ಎಂದು ತಿಳಿದು, ಅವರಿದ್ದಲ್ಲಿಗೆ ತಾವೇ ತೆರಳಿ, ಅವರ ಶಿಷ್ಯತ್ವಕ್ಕೆ ಆ
ಕುಮಾರರನ್ನು ನೀಡಿದರು.
ದ್ರೋಣೋsಥ ತಾನವದದ್ ಯೋ ಮದಿಷ್ಟಂ ಕರ್ತ್ತುಂ
ಪ್ರತಿಜ್ಞಾಂ ಪ್ರಥಮಂ ಕರೋತಿ ।
ತಂ ಧನ್ವಿನಾಂ ಪ್ರವರಂ ಸಾಧಯಿಷ್ಯ ಇತ್ಯರ್ಜ್ಜುನಸ್ತಾಮಕರೋತ್ ಪ್ರತಿಜ್ಞಾಮ್ ॥೧೫.೩೫॥
ತದನಂತರ ದ್ರೋಣಾಚಾರ್ಯರು ನೆರೆದಿರುವ ವಿದ್ಯಾರ್ಥಿಗಳನ್ನು
ಕುರಿತು ಹೇಳಿದರು: 'ಯಾರು ನನಗೆ ಇಷ್ಟವಾದುದ್ದನ್ನು ಮಾಡಲು ಪ್ರತಿಜ್ಞೆಯನ್ನು ಮೊದಲು ಮಾಡುತ್ತಾನೋ,
ಅವನನ್ನು ಧನುರ್ಧಾರಿಗಳಲ್ಲೇ ಶ್ರೇಷ್ಠರನ್ನಾಗಿ ಮಾಡುತ್ತೇನೆ’ ಎಂದು. ಆಗ ಅರ್ಜುನನು ಆ ರೀತಿಯ
ಪ್ರತಿಜ್ಞೆಯನ್ನು ಮಾಡಿದನು.
No comments:
Post a Comment