ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, February 22, 2020

Mahabharata Tatparya Nirnaya Kannada 1607_1612


ನಾರಾಯಣೇ ಸರ್ವದೇವೈಃ ಸಮೇತೇ ಬ್ರಹ್ಮಾದಿಭಿರ್ಹಾಸಮಾನೇ ಸುಪರ್ಣ್ಣಃ
ಗತ್ವಾ ಪಾತಾಳಂ ಯುಧಿ ಜಿತ್ವಾ ಬಲಿಂ ಚ ಕಿರೀಟಮಾದಾಯಾಭ್ಯಯಾದ್ ಯತ್ರ ಕೃಷ್ಣಃ ॥೧೬.೦೭॥

ಬ್ರಹ್ಮಾದಿ ಸಮಸ್ತ ದೇವತೆಗಳೊಂದಿಗೆ ನಾರಾಯಣನೂ ಕೂಡಾ ನಗುತ್ತಿರಲು, ಗರುಡನು ಪಾತಾಳಕ್ಕೆ ತೆರಳಿ, ಯುದ್ಧದಲ್ಲಿ ಬಲಿಯನ್ನು ಗೆದ್ದು, ಕಿರೀಟವನ್ನು ತೆಗೆದುಕೊಂಡು ಶ್ರೀಕೃಷ್ಣನಿದ್ದಲ್ಲಿಗೆ ಬಂದನು.

ತತ್ ತಸ್ಯ ಶೀರ್ಷ್ಣಿ ಪ್ರತಿಮುಚ್ಯ ನತ್ವಾ ಖಗಃ ಸ್ತುತ್ವಾ ದೇವದೇವಂ ರಮೇಶಮ್ ।
ಸ್ಮೃತ ಆಗಚ್ಛೇತ್ಯೇವ ವಿಸರ್ಜ್ಜಿತೋsಮುನಾ ಯಯೌ ದುಗ್ಧಾಬ್ಧಿಂ ಯತ್ರ ನಾರಾಯಣೋsಸೌ ॥೧೬.೦೮ ॥

ಗರುಡನು ಆ ಕಿರೀಟವನ್ನು ಶ್ರೀಕೃಷ್ಣನ ತಲೆಯಮೇಲೆ ಇಟ್ಟು, ದೇವದೇವನಾದ ರಮೇಶನನ್ನು ಸ್ತೋತ್ರಮಾಡಿ, ‘ಸ್ಮರಿಸಿದೊಡನೆ ಬಾ’ ಎಂದು ಶ್ರೀಕೃಷ್ಣನಿಂದ ಬೀಳ್ಕೊಟ್ಟವನಾಗಿ, ಭಗವಂತನ ನಾರಾಯಣ ರೂಪವಿರುವ  ದುಗ್ಧಾಬ್ಧಿಯನ್ನು(ಕ್ಷೀರಸಾಗರವನ್ನು) ಕುರಿತು ತೆರಳಿದನು.   

ಕಿರೀಟಂ ತತ್ ಕೃಷ್ಣಮೂರ್ಧ್ನಿ ಪ್ರವಿಷ್ಟಂ ತತ್ತುಲ್ಯಮಾಸೀತ್ ತಸ್ಯ ರೂಪೇಷ್ವಭೇದಾತ್ ।
ತದಿಚ್ಛಯಾ ಚೈವ ನಾರಾಯಣಸ್ಯ ಶೀರ್ಷ್ಣ್ಯಪ್ಯಾಸೀದ್ ಯುಗಪದ್ ದುಗ್ಧವಾರ್ದ್ಧೌ ॥೧೬.೦೯ ॥

ಪರಮಾತ್ಮನ ರೂಪಗಳಲ್ಲಿ ಅಭೇದವಿರುವುದರಿಂದ, ನಾರಾಯಣನ ಇಚ್ಛೆಯಿಂದಲೇ,  ಇಲ್ಲಿ ಶ್ರೀಕೃಷ್ಣನ ತಲೆಯಲ್ಲಿ ಇರಿಸಿದ್ದ ಕಿರೀಟವೇ ಕ್ಷೀರಸಾಗರದಲ್ಲಿರುವ ನಾರಾಯಣನ ರೂಪದಲ್ಲಿಯೂ ಇತ್ತು ( ಇದು ಭಗವಂತ ತನ್ನ ರೂಪದಲ್ಲಿ ಅಭೇದವನ್ನು ತೋರಿಸಿಕೊಟ್ಟ ಘಟನೆ. ಒಂದೇ ಸಂದರ್ಭದಲ್ಲಿ, ಇಲ್ಲಿ ಶ್ರೀಕೃಷ್ಣ  ಕಿರೀಟ ಧರಿಸುತ್ತಿರುವಾಗಲೇ, ಅಲ್ಲೂ ಕೂಡಾ ನಾರಾಯಣನಿಂದ ಕಿರೀಟ ಧರಿಸಲ್ಪಟ್ಟಿತು).

ಪೂರ್ವಂ ಪ್ರಾಪ್ತಾನ್ಯೇವ ದಿವ್ಯಾಯುಧಾನಿ ಪುನರ್ವೈಕುಣ್ಠಂ ಲೋಕಮಿತಾನಿ ಭೂಯಃ ।
ತದಾSವತೇರೂ ರೌಹಿಣೇಯಸ್ಯ ಚೈವಂ ಭಾರ್ಯ್ಯಾsಪ್ಯಾಯಾದ್ ವಾರುಣೀ ನಾಮ ಪೂರ್ವಾ ॥೧೬.೧೦ ॥

ಹಿಂದೆ ಜರಾಸಂಧನೊಂದಿಗೆ ಯುದ್ಧಮಾಡುವಾಗ ಹೊಂದಿದ್ದ ದಿವ್ಯಾಯುಧಗಳು ಯುದ್ಧ ಮುಗಿದಾಗ  ಮತ್ತೆ ವೈಕುಂಠಲೋಕವನ್ನು ಹೊಂದಿದ್ದವು. ಈಗ ಆ ಎಲ್ಲಾ ಆಯುಧಗಳು ಮತ್ತೆ ಇಳಿದು ಬಂದವು. ಅಷ್ಟೇ ಅಲ್ಲದೆ, ಬಲರಾಮನ ಹಿಂದಿನ ಹೆಂಡತಿಯಾದ, ‘ವಾರುಣೀ’ ಎಂದು ಯಾರು ಪ್ರಸಿದ್ಧಳೋ ಆಕೆಯೂ ಕೂಡಾ ಇಳಿದು ಬಂದಳು.

ಸೈವಾಪರಂ ರೂಪಮಾಸ್ಥಾಯ ಚಾsಗಾಚ್ಛ್ರೀರಿತ್ಯಾಖ್ಯಂ ಸೇನ್ದಿರಾವೇಶಮಗ್ರ್ಯಮ್ ।
ಕಾನ್ತಿಶ್ಚಾsಗಾತ್ ತಸ್ಯ ಸೋಮಸ್ಯ ಚಾನ್ಯಾ ಭಾರ್ಯ್ಯಾ ದ್ವಯೋಃ ಪೂರ್ವತನಾ ಸುರೂಪಾ ॥೧೬.೧೧ ॥

ಆ ವಾರುಣಿಯೇ ಶ್ರೀಃ ಎನ್ನುವ ಹೆಸರುಳ್ಳವಳಾಗಿ ಲಕ್ಷ್ಮಿಯ ಆವೇಶದಿಂದ(ಇಂದಿರಾವೇಶದಿಂದ) ಕೂಡಿದ ಇನ್ನೊಂದು ರೂಪವನ್ನು ಧರಿಸಿ ಬಂದಳು. ಬಲರಾಮನ ‘ಕಾಂತಿ ಎನ್ನುವ ಹೆಸರಿನ ಹೆಂಡತಿಯೂ ಕೂಡಾ ಇಳಿದು ಬಂದಳು. ಸೋಮನ ಹೆಂಡತಿಯ ಹೆಸರೂ ಕೂಡಾ ‘ಕಾಂತಿ. ಈ  ಇಬ್ಬರು ‘ಕಾಂತಿ’ಯರಲ್ಲಿ ಬಲರಾಮನ ಹೆಂಡತಿ ‘ಕಾಂತಿ’ ಜ್ಯೇಷ್ಠಳೂ ಹಾಗೂ ಸೌಂದರ್ಯವತಿಯೂ ಕೂಡಾ.

[ ಈ ಕುರಿತಾದ ವಿವರವನ್ನು ನಾವು ಹರಿವಂಶದಲ್ಲಿ ಕಾಣಬಹುದು: ಮದಿರಾ ರೂಪಿಣೀ ಭೂತ್ವಾ ಕಾನ್ತಿಶ್ಚ ಶಶಿನಃ ಪ್ರಿಯ । ಶ್ರೀಶ್ಚ ದೇವೀ  ವರಿಷ್ಠಾ ಸ್ತ್ರೀ ಸ್ವಯಮೇವಾಮ್ಬುಜಧ್ವಜಾ । ಸಾಞ್ಜಲಿಪ್ರಗ್ರಹ ದೇವಿ  ಬಲಭದ್ರಮುಪಸ್ಥಿತಾ’ (೪೧.೧೫)]

ತಾಭಿ ರಾಮೋ ಮುಮುದೇ ತತ್ರ ತಿಷ್ಠಞ್ಛಶಾಙ್ಕಪೂಗೋದ್ರಿಕ್ತಕಾನ್ತಿಃ ಸುಧಾಮಾ
ತಸ್ಯಾ ವಾರುಣ್ಯಾಃ ಪ್ರತಿಮಾ ಪೇಯರೂಪಾ ಕಾದಮ್ಬರೀ ವಾರುಣೀ ತಾಂ ಪಪೌ ಸಃ ॥೧೬.೧೨ ॥

ಅವರೆಲ್ಲರ(ವಾರುಣಿ, ಶ್ರೀಃ ಮತ್ತು ಕಾಂತಿ ಇವರ) ಆಗಮನದಿಂದ, ಹುಣ್ಣಿಮೆಯ ಚಂದ್ರನ ಬೆಳದಿಂಗಳಿಗಿಂತ ಉತ್ಕೃಷ್ಟವಾದ ಕಾಂತಿಯುಳ್ಳ, ಒಳ್ಳೆಯ ಮೈಬಣ್ಣವುಳ್ಳ(ಸುಧಾಮ) ರಾಮನು ಸಂತಸಪಟ್ಟನು. ವಾರುಣಿಯ ಅಭಿಮನ್ಯವಾದ ದೇಹಕ್ಕೆ ಸಮನಾದ, ಕದಂಬ ಕುಸುಮದಿಂದ ಹುಟ್ಟಿರುವುದರಿಂದ ಕಾದಂಬರಿ ಎನಿಸಿರುವ  ಮದ್ಯವನ್ನು ಬಲರಾಮ ಕುಡಿದ. (ಅಂದರೆ ಮದ್ಯದರೂಪದಲ್ಲಿರುವ ತನ್ನ ಹೆಂಡತಿ ವಾರುಣಿಯನ್ನು ಬಲಭದ್ರ  ಸೇವಿಸಿದ).   

Friday, February 21, 2020

Mahabharata Tatparya Nirnaya Kannada 1601_1606


ಶ್ರೀಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯಃ(ಭಾಗ-೦೨)

. ಸೃಗಾಲವಧಃ

ಓಂ
ಕಾಲೇ ತ್ವೇತಸ್ಮಿನ್ ಭೂಯ ಏವಾಖಿಲೈಶ್ಚ ನೃಪೈರ್ಯ್ಯುಕ್ತೋ ಮಾಗಧೋ ಯೋದ್ಧುಕಾಮಃ
ಪ್ರಾಯಾದ್ ಯದೂಂಸ್ತತ್ರ ನಿತ್ಯಾವ್ಯಯಾತಿಬಲೈಶ್ವರ್ಯ್ಯೋsಪೀಚ್ಛಯಾsಗಾತ್ ಕೃಷ್ಣಃ ೧೬.೦೧

ಇದೇ ಕಾಲದಲ್ಲಿ (ಪಾಂಡವರು ವಿದ್ಯಾಭ್ಯಾಸ ಮಾಡುತ್ತಿರುವ ಕಾಲದಲ್ಲಿ) ಜರಾಸಂಧನು ಎಲ್ಲಾ ರಾಜರೊಂದಿಗೆ ಕೂಡಿಕೊಂಡು ಯುದ್ಧಮಾಡಲು ಬಯಸಿ ಯಾದವರನ್ನು ಕುರಿತು ತೆರಳಿದನು. ಆದರೆ ಮದುರಾಪಟ್ಟಣದಲ್ಲಿ ಯಾವಾಗಲೂ ಇರುವ, ಎಂದೂ ನಾಶವಾಗದ ಶ್ರೀಕೃಷ್ಣನು, ಉತ್ಕೃಷ್ಟವಾದ ಬಲ ಎಂಬ ಐಶ್ವರ್ಯ ಇದ್ದರೂ ಕೂಡಾ, ತನ್ನ ಇಚ್ಛೆಯಿಂದಲೇ ಮದುರೆಯನ್ನು ಬಿಟ್ಟು  ತೆರಳಿದನು/ಓಡಿದನು.

ಏಕೆ ಶ್ರೀಕೃಷ್ಣ ಹೀಗೆ ಮಾಡಿದ ಎಂದರೆ:

ಸನ್ದರ್ಶಯನ್ ಬಲಿನಾಮಲ್ಪಸೇನಾದ್ಯುಪಸ್ಕರಾಣಾಂ ಬಹಳೋಪಸ್ಕರೈಶ್ಚ ।
ಪ್ರಾಪ್ತೇ ವಿರೋಧೇ ಬಲಿಭಿರ್ನ್ನೀತಿಮಗ್ರ್ಯಾಂ ಯಯೌ ಸರಾಮೋ ದಕ್ಷಿಣಾಶಾಂ ರಮೇಶಃ ॥೧೬. ೦೨ ॥

ಬಲಿಷ್ಠರಾಗಿರುವ, ಆದರೆ ಅತ್ಯಂತ ಸ್ವಲ್ಪ ಸೇನೆಯನ್ನು ಹೊಂದಿರುವ ರಾಜರಿಗೆ, ಬಹಳ ಸೈನಿಕರ ಸಂಖ್ಯೆಯನ್ನು ಹೊಂದಿರುವ ರಾಜರೊಂದಿಗೆ ವಿರೋಧವು ಒದಗಿದಾಗ, ಉತ್ಕೃಷ್ಟವಾದ ನೀತಿಯನ್ನು ತೋರಿಸುತ್ತಾ, ಬಲರಾಮನಿಂದ ಕೂಡಿದ ಶ್ರೀಕೃಷ್ಣನು ದಕ್ಷಿಣದಿಕ್ಕಿಗೆ ಓಡಿದ/ತೆರಳಿದ.
[ಒಬ್ಬ ರಾಜನಲ್ಲಿ ಬಹಳ ಸೇನೆ ಮತ್ತು ಯುದ್ಧೋಪಕರಣಗಳು(ರಥ, ಆಯುಧ, ಇತ್ಯಾದಿ) ಇದ್ದು, ಆತ ಕಡಿಮೆ ಸೈನ್ಯವಿರುವ ಇನ್ನೊಬ್ಬ ರಾಜನ ಮೇಲೆ ದಂಡೆತ್ತಿ ಹೋದಾಗ, ಕಡಿಮೆ ಸೈನ್ಯ ಹೊಂದಿರುವ ರಾಜ ಬಲಿಷ್ಠನಾಗಿದ್ದರೂ ಕೂಡಾ, ಅವನಲ್ಲಿ ಸಾಕಷ್ಟು ಸೈನ್ಯ, ಯುದ್ಧೋಪಕರಣ ಇಲ್ಲದಿದ್ದಾಗ ಏನು ಮಾಡಬೇಕು ಎನ್ನುವುದನ್ನು ಕೃಷ್ಣ ಇಲ್ಲಿ ತೋರಿಸಿದ್ದಾನೆ. ಇದನ್ನೇ ಇಂದು ಗೆರಿಲ್ಲಾ ಯುದ್ಧ ಎಂದು ಕರೆಯುತ್ತಾರೆ]    

ಸೋsನನ್ತವೀರ್ಯ್ಯಃ  ಪರಮೋsಭಯೋsಪಿ ನೀತ್ಯೈ ಗಚ್ಛನ್ ಜಾಮದಗ್ನ್ಯಂ ದದರ್ಶ ।
ಕ್ರೀಡಾರ್ತ್ಥಮೇಕೋsಪಿ ತತೋsತಿದುರ್ಗ್ಗಂ ಶ್ರುತ್ವಾ ಗೋಮನ್ತಂ ತತ್ರ ಯಯೌ ಸಹಾಗ್ರಜಃ॥೧೬.೦೩ ॥

ಎಣೆಯಿರದ ವೀರ್ಯವುಳ್ಳ, ಎಲ್ಲರಿಗಿಂತ ಉತ್ಕೃಷ್ಟನಾದ, ನಿರ್ಭಯನಾದರೂ ಕೂಡಾ, ಲೋಕಕ್ಕೆ ನೀತಿಯನ್ನು ತೋರುವುದಕ್ಕಾಗಿ ಮದುರೆಯಿಂದ ಪಲಾಯನ ಮಾಡುವವನಂತೆ ತೆರಳಿದ ಶ್ರೀಕೃಷ್ಣ, ಪರಶುರಾಮನನ್ನು ಕಂಡನು. ವಿಲಾಸಕ್ಕಾಗಿ, ಒಬ್ಬನೇ ಆದರೂ(ಶ್ರೀಕೃಷ್ಣ-ಪರಶುರಾಮ ಅವರಿಬ್ಬರೂ ಒಬ್ಬನೇ ಆದರೂ), ಪರಶುರಾಮನಿಂದ ಅತ್ಯಂತ ಗೋಪ್ಯವಾದ ಪ್ರದೇಶ ಯಾವುದೆಂದು ಕೇಳಿ, ಅದರಂತೆ ಅಣ್ಣನಿಂದ ಕೂಡಿಕೊಂಡು ಗೋಮನ್ತ ಪರ್ವತಕ್ಕೆ ತೆರಳಿದನು.

ತದಾ ದುಗ್ಧಾಬ್ಧೌ ಸಂಸೃತಿಸ್ಥೈಃ ಸುರಾದ್ಯೈಃ ಪೂಜಾಂ ಪ್ರಾಪ್ತುಂ ಸ್ಥಾನಮೇಷಾಂ ಯೋಗ್ಯಮ್ ।
ಮುಕ್ತಸ್ಥಾನಾದಾಪ ನಾರಾಯಣೋsಜೋ ಬಲಿಶ್ಚಾsಗಾತ್ ತತ್ರ ಸನ್ದೃಷ್ಟುಮೀಶಮ್ ॥ ೦೪ ॥

ಆಗಲೇ, ಕ್ಷೀರಸಾಗರದಲ್ಲಿ ಸಂಸಾರದಲ್ಲಿರುವ ದೇವತೆಗಳಿಂದ ಪೂಜೆಯನ್ನು ಹೊಂದಲು, ಆ ಸಂಸಾರದಲ್ಲಿರುವ ಸುರರಿಗೆ ಯೋಗ್ಯವಾಗಿರುವ ಅಮುಕ್ತಸ್ಥಾನವನ್ನು, ಮುಕ್ತಸ್ಥಾನದೊಳಗಡೆಯಿಂದ ನಾರಾಯಣನು ಹೊಂದಿದನು. ಆಗ ಅಲ್ಲಿಗೆ  ಬಲಿಯೂ ಕೂಡಾ ನಾರಾಯಣನನ್ನು ಕಾಣಲೆಂದು ಬಂದನು.
[ವೈಕುಂಠದಲ್ಲಿ  ಮುಕ್ತ ಹಾಗು ಅಮುಕ್ತಸ್ಥಾನ ಎನ್ನುವ ಎರಡು ವಿಭಾಗವಿದೆ. ಅಮುಕ್ತಸ್ಥಾನದಲ್ಲಿ ಸಂಸಾರದಲ್ಲಿರುವ ದೇವತೆಗಳೆಲ್ಲಾ ಪೂಜೆ ಮಾಡುತ್ತಿದ್ದರು. ಆಗ ಪರಮಾತ್ಮ ಅಲ್ಲಿ ಪ್ರಕಟನಾದ. ಅದೇ ಸಮಯದಲ್ಲಿ  ಪರಮಾತ್ಮನನ್ನು ನೋಡಲು ಬಲಿಚಕ್ರವರ್ತಿಯೂ ಅಲ್ಲಿಗೆ ಬಂದ].

ತತ್ರಾಸುರಾವೇಶಮಮುಷ್ಯ ವಿಷ್ಣುಃ ಸನ್ದರ್ಶಯನ್ ಸುಪ್ತಿಹೀನೋsಪಿ ನಿತ್ಯಮ್ ।
ಸಂಸುಪ್ತವಚ್ಛಿಶ್ಯ ಉದಾರಕರ್ಮ್ಮಾ ಸಙ್ಯಾಯೈ ದೇವಾನಾಂ ಮುಖಮೀಕ್ಷ್ಯಾಪ್ರಮೇಯಃ ॥ ೦೫ ॥

ಉತ್ಕೃಷ್ಟಕರ್ಮವುಳ್ಳ, ಯಾರಿಂದಲೂ ಸಂಪೂರ್ಣ ತಿಳಿಯಲು ಅಸಾಧ್ಯನಾದ ಭಗವಂತನು, ಅಲ್ಲಿಗೆ ಬಂದ ಬಲಿಯ ಅಸುರಾವೇಶವನ್ನು ಪ್ರಪಂಚಕ್ಕೆ ತೋರುವುದಕ್ಕಾಗಿ(ತೋರಿಸುತ್ತಾ),  ಸುಪ್ತಿಹೀನನಾದರೂ ಕೂಡಾ, ದೇವತೆಗಳ ಮುಖವನ್ನು ಕಂಡು ಅವರಿಗೂ  ನಿದ್ರಿಸುವಂತೆ ಸಂಜ್ಞೆಮಾಡಿ, ತಾನು ನಿದ್ರೆಮಾಡಿದವನಂತೆ ಮಲಗಿದನು.

ದೇವಾಶ್ಚ ತದ್ಭಾವವಿದೋsಖಿಲಾಶ್ಚ ನಿಮೀಲಿತಾಕ್ಷಾಃ ಶಯನೇಷು ಶಿಶ್ಯಿರೇ ।
ತದಾ ಬಲಿಸ್ತಸ್ಯ ವಿಷ್ಣೋಃ ಕೀರೀಟಮಾದಾಯಗಾಜ್ಜಹಸುಃ ಸರ್ವದೇವಾಃ ॥ ೧೬.೦೬ ॥

ಎಲ್ಲಾ ದೇವತೆಗಳು ಪರಮಾತ್ಮನ ಅಭಿಪ್ರಾಯವನ್ನು ತಿಳಿದು, ತಮ್ಮ ಕಣ್ಗಳನ್ನು ಮುಚ್ಚಿ ಹಾಸಿಗೆಗಳಲ್ಲಿ ನಿದ್ರಿಸಿದವರಂತೆ ಮಲಗಿಕೊಂಡರು. ಆಗ ಬಲಿಯು  ವಿಷ್ಣುವಿನ ಕಿರೀಟವನ್ನು ತೆಗೆದುಕೊಂಡು(ತನ್ನ ಲೋಕವಾದ ಪಾತಾಳಕ್ಕೆ) ಓಡಿಹೋದನು. ಇದನ್ನು ಕಂಡು ಎಲ್ಲಾ ದೇವತೆಗಳು ನಕ್ಕರು ಕೂಡಾ.
[ಈ ಕುರಿತಾದ ವಿವರವನ್ನು ನಾವು ಹರಿವಂಶದಲ್ಲಿ ಕಾಣುತ್ತೇವೆ: ಗೋಮಂತಮಿತಿ ವಿಖ್ಯಾತಂ ನೈಕಶೃಙ್ಗವಿಭೂಷಿತಂ । ಸ್ವರ್ಗತೈಕಮಹಾಶೃಙ್ಗಂ ದುರಾರೋಹಂ ಖಗೈರಪಿ(ವಿಷ್ಣುಪರ್ವಣಿ -  ೩೯.೬೪),  ‘ಉದಯಾಸ್ತಮಯೇ ಸೂರ್ಯಂ  ಸೋಮಂ ಚ ಜ್ಯೋತಿಷಾಂ ಪತಿಮ್ । ಊರ್ಮಿಮನ್ತಂ ಸಮುದ್ರಂ ಚ ಅಪಾರದ್ವೀಪಭೂಷಣಮ್ ।  ಪ್ರೇಕ್ಷಮಾಣೌ ಸುಖಂ  ತತ್ರ ನಗಾಗ್ರೇ ವಿಚರಿಷ್ಯಥಃ ।  ಶೃಙ್ಗಸ್ಥೌ ತಸ್ಯ ಶೈಲಸ್ಯ  ಗೋಮಂತಸ್ಯ ವನೇಚರೌ । ದುರ್ಗಯುದ್ಧೇನ ಧಾವಂತೌ ಜರಾಸಂಧಂ ವಿಜೇಷ್ಯಥಃ’ (೬೭-೬೯) [‘ನೀವು ಗೋಮಂತಕ ಪರ್ವತವನ್ನೇರಿ ಅಲ್ಲಿ  ಜರಾಸಂಧನನ್ನು ಗೆಲ್ಲಿ’ ಎನ್ನುವ ಪರಶುರಾಮನ ಮಾತು ಇದಾಗಿದೆ].
‘ಸುಪ್ತಸ್ಯ ಶಯನೇ ದಿವ್ಯೇ ಕ್ಷೀರೋದೇ ವರುಣಾಲಯೇ । ವಿಷ್ಣೋಃ ಕಿರೀಟಂ ದೈತ್ಯೇನ  ಹೃತಂ ವೈರೋಚನೇನ ವೈ’ (ವಿಷ್ಣುಪರ್ವಣಿ - ೪೧.೩೯) [ಮಲಗಿರುವ ಅವನ ಕಿರೀಟವು ಬಲಿಯಿಂದ ಅಪಹರಿಸಲ್ಪಟ್ಟಿತು].
‘ವೈರೋಚನೇನ ಸುಪ್ತಸ್ಯ  ಮಮ ಮೌಲಿರ್ಮಹೋದಧೌ । ಶಕ್ರಸ್ಯ ಸದೃಶಂ ರೂಪಂ ದಿವ್ಯಮಾಸ್ಥಾಯ  ಸಾಗರಾತ್ । ಗ್ರಾಹರೂಪೇಣ ಯೋ ನೀತ ಆನೀತೋsಸೌ ಗರುತ್ಮತಾ’(೪೮) (‘ವೈಕುಂಠಲೋಕದಲ್ಲಿ ಮಲಗಿದ್ದ ನನ್ನ ಕಿರೀಟವನ್ನು ಬಲಿ ಎತ್ತಿಕೊಂಡು ಹೋದ’ ಎಂದು ಹೇಳುವ ಶ್ರೀಕೃಷ್ಣನ ಮಾತು ಇದಾಗಿದೆ)].

Sunday, February 2, 2020

Mahabharata Tatparya Nirnaya Kannada 1561_1566


ಶ್ರುತ್ವಾ ರಾವಂ ಸಾರಮೇಯಸ್ಯ ದೂರಾಚ್ಛರೈರ್ಮ್ಮುಖಂ ಶಬ್ದವೇಧೀ ಪುಪೂರೇ
ಸ ಏಕಲವ್ಯೋ ವ್ರಣಮಸ್ಯ ನಾಕರೋಚ್ಛ್ವಾಪೂರಿತಾಸ್ಯಃ ಪಾಣ್ಡವಾನಭ್ಯಯಾತ್ ಸಃ ೧೫.೬೧

ಆ ಸಾರಮೇಯದ(ನಾಯಿಯ) ಬೊಗಳುವಿಕೆಯನ್ನು ದೂರದಿಂದಲೇ ಕೇಳಿ, ಬಾಣಗಳಿಂದ ಶಬ್ದವನ್ನು  ಭೇದಿಸಿ ಹೊಡೆಯುವುದರಲ್ಲಿ ಸಮರ್ಥನಾದ ಏಕಲವ್ಯನು, ತನ್ನ ಬಾಣಗಳಿಂದ ಆ ನಾಯಿಯ ಮುಖವನ್ನು ಮುಚ್ಚಿದನು. ಆದರೆ ಅದಕ್ಕೆ ಯಾವುದೇ ಗಾಯವನ್ನುಂಟುಮಾಡಲಿಲ್ಲ. ಆಗ ಆ ನಾಯಿಯು ಬಾಣಗಳಿಂದ ತುಂಬಿದ ಮುಖವುಳ್ಳದ್ದಾಗಿ ಪಾಂಡವರ ಬಳಿ ಬಂದಿತು.

ದೃಷ್ಟ್ವಾ ಚಿತ್ರಂ ಕುರವಃ ಪಾಣ್ಡವಾಶ್ಚ ದ್ರಷ್ಟುಂ ಕರ್ತ್ತಾರಂ ಮಾರ್ಗ್ಗಯಾಮಾಸುರತ್ರ
ದ್ರೋಣಾಕೃತಿಂ ಮಾರ್ತ್ತಿಕೀಂ ಪೂಜಯನ್ತಂ ದದೃಶುಶ್ಚೈನಂ ಧನುರೇವಾಭ್ಯಸನ್ತಮ್ ೧೫.೬೨

ಈ ಅಚ್ಚರಿಯನ್ನು ಕಂಡ ಕುರುಗಳು ಮತ್ತು ಪಾಂಡವರು, ಆ ಕಾರ್ಯವನ್ನು ಮಾಡಿರುವವನನ್ನು ನೋಡಬೇಕೆಂದು ಹುಡುಕಿದರು. ಸ್ವಲ್ಪಹೊತ್ತು ಹುಡುಕಿದ ಮೇಲೆ, ಮಣ್ಣಿನ ದ್ರೋಣರ ಆಕೃತಿಯನ್ನು ಪೂಜೆಮಾಡುವ, ಬಿಲ್ಲನ್ನು ಅಭ್ಯಾಸಮಾಡುವ ಏಕಲವ್ಯನನ್ನು ಅವರು ಕಂಡರು.  

ಪೈಶಾಚಮೇವೈಷ ಪಿಶಾಚಕೇಭ್ಯಃ ಪೂರ್ವಂ ವಿವೇದಾಸ್ತ್ರವೃನ್ದಂ ನಿಷಾದಃ
ದಿವ್ಯಾನ್ಯಸ್ತ್ರಾಣ್ಯಾಪ್ತುಮೇತಾಂ ಚ ಶಿಕ್ಷಾಂ ದ್ರೋಣಂ ಸದಾ ಪೂಜಯತಿ ಸ್ಮ ಭಕ್ತ್ಯಾ ೧೫.೬೩

ಏಕಲವ್ಯನು ಪಿಶಾಚಿಗಳಿಂದ ಪಿಶಾಚಿ ಸಂಬಂಧಿಯಾಗಿರುವ ಅಸ್ತ್ರವೃಂದವನ್ನು ಮೊದಲೇ ತಿಳಿದಿದ್ದ. ಈಗ ದಿವ್ಯಾಸ್ತ್ರವನ್ನು ಹೊಂದಬೇಕೆಂದು ನಿರಂತರವಾದ ಅಭ್ಯಾಸವನ್ನು ಮಾಡುತ್ತಿದ್ದ. ಅದಕ್ಕಾಗಿ ದ್ರೋಣರನ್ನು ಭಕ್ತಿಯಿಂದ ಪೂಜಿಸುತ್ತಿದ್ದ.
[ಒಂದಲ್ಲಾ ಒಂದು ದಿನ ನನ್ನ ಭಕ್ತಿಯನ್ನು ಕಂಡು ದ್ರೋಣರು ನನಗೆ ವಿದ್ಯೆಯನ್ನು ಉಪದೇಶ ಮಾಡುತ್ತಾರೆ ಎಂಬ ಭರವಸೆ ಅಷ್ಟೇ ಹೊರತು ಇನ್ನೇನೂ ಅಲ್ಲಾ. ಏಕೆಂದರೆ ಅಸ್ತ್ರವನ್ನು ಗುರುವಿನ ಉಪದೇಶದಿಂದಷ್ಟೇ ಪಡೆಯಲು ಸಾಧ್ಯ ಹೊರತು ಕೇವಲ ಅಭ್ಯಾಸದಿಂದಲ್ಲ].

ದೃಷ್ಟ್ವಾ ವಿಶೇಷಂ ತಮಮುಷ್ಯ ಪಾರ್ತ್ಥೋ ದ್ರೋಣಾಯೋಚೇ ತ್ವದ್ವರೋ ಮೇ ಮೃಷಾssಸೀತ್
ಇತ್ಯುಕ್ತ ಏನಂ ತ್ವಭಿಗಮ್ಯ ದಕ್ಷಿಣಾಂ ವಿಪ್ರೋ ಯಯಾಚೇ ದಕ್ಷಿಣಾಙ್ಗುಷ್ಠಮೇವ ೧೫.೬೪

ಅರ್ಜುನನು ಈರೀತಿಯಾದ ವಿಶೇಷವನ್ನು ಕಂಡು, ‘ನಿನ್ನ ವರವು ನನ್ನ ಪಾಲಿಗೆ ಸುಳ್ಳಾಯಿತು’ (ಧನುರ್ಧಾರಿಗಳಲ್ಲೇ ಶ್ರೇಷ್ಠನನ್ನಾಗಿ ಮಾಡುವೆ ಎನ್ನುವ ದ್ರೋಣರ ಮಾತು ನನ್ನ ಪಾಲಿಗೆ ಸುಳ್ಳಾಯಿತು) ಎಂದು ದ್ರೋಣನಿಗೆ ಹೇಳಿದನು. ಈರೀತಿಯಾದ ಮಾತನ್ನು ಕೇಳಿದ ಆ ಬ್ರಾಹ್ಮಣನು (ದ್ರೋಣನು), ಏಕಲವ್ಯನನ್ನು ಹೊಂದಿ, ಆತನ ಬಲ ಹೆಬ್ಬೆರಳನ್ನೇ ಗುರುದಕ್ಷಿಣೆಯಾಗಿ ಕೇಳಿದನು.

ತಸ್ಯ ಪ್ರಸಾದೋಪಚಿತೋರುಶಿಕ್ಷೋ ನಿಷಾದೋsದಾದ್ ದಕ್ಷಿಣಾಙ್ಗುಷ್ಠಮಸ್ಮೈ
ತತಃ ಪರಂ ನಾಸ್ಯ ಬಭೂವ ಶಿಕ್ಷಾ ಸನ್ಮುಷ್ಟಿಹೀನಸ್ಯ ಸಮಾsರ್ಜ್ಜುನೇನ ೧೫.೬೫

ದ್ರೋಣಾಚಾರ್ಯರ ಅನುಗ್ರಹದಿಂದ ಸಮೃದ್ಧವಾದ, ಉತ್ಕೃಷ್ಟವಾದ ಶಿಕ್ಷೆಯುಳ್ಳ ಏಕಲವ್ಯನು, ದ್ರೋಣಾಚಾರ್ಯರಿಗೆ ತನ್ನ ಬಲ ಹೆಬ್ಬೆರಳನ್ನು ತುಂಡರಿಸಿ ಕೊಟ್ಟನು. ಅದಾದಮೇಲೆ, ಮುಷ್ಟಿಹೀನನಾದ ಏಕಲವ್ಯನ  ಬಲ ಮತ್ತು ಶಿಕ್ಷಣವು ಅರ್ಜುನನಿಗೆ ಸಮವಾಗಲಿಲ್ಲ.   

ಪುನಃ ಕೃಪಾಲೂ ರೈವತಪರ್ವತೇ ತಂ ದ್ರೋಣಃ ಪ್ರಾಪ್ಯಾsದಾದಸ್ತ್ರವರಾಣಿ ತಸ್ಮೈ
ಏಕಾನ್ತ ಏವಾಸ್ಯ ಭಕ್ತ್ಯಾ ಸುತುಷ್ಟೋ ಧನ್ವಿಶ್ರೇಷ್ಠಂ ಕೃತವಾನರ್ಜ್ಜುನಂ ಚ ೧೫.೬೬

ಆ ಕಾರಣದಿಂದ ಪುನಃ ಕೃಪಾಳುವಾಗಿರುವ ದ್ರೋಣಾಚಾರ್ಯರು ರೈವತ ಪರ್ವತದಲ್ಲಿ ಏಕಲವ್ಯನನ್ನು ಹೊಂದಿ, ಅವನಿಗಾಗಿ ಏಕಾಂತದಲ್ಲಿ ಶ್ರೇಷ್ಠ ಅಸ್ತ್ರಗಳನ್ನು ಕೊಟ್ಟರು. ಏಕಲವ್ಯನ ಭಕ್ತಿಯಿಂದ ಸಂತಸಗೊಂಡು, ಏಕಾಂತದಲ್ಲಿ (ಅರ್ಜುನನಿಗೂ ತಿಳಿಯದಂತೆ) ಅಸ್ತ್ರ ವಿದ್ಯೆಗಳನ್ನು ಅವನಿಗೆ ನೀಡಿದರು. ಹಾಗೆಯೇ, ಅರ್ಜುನನನ್ನೂ ಕೂಡಾ ಶ್ರೇಷ್ಠ ಧನುರ್ಧಾರಿಯನ್ನಾಗಿ  ಮಾಡಿದರು.
ಈ ಮೇಲಿನ ವಿವರವನ್ನು ಹರಿವಂಶದಲ್ಲಿ(ವಿ.ಪ ೫೬.೨೭-೮).  ಹೇಳಿರುವುದನ್ನು ನಾವು  ಕಾಣುತ್ತೇವೆ,ತತ್ರ ರೈವತಕೋನಾಮ  ಪರ್ವತೋ ನಾತಿದೂರತಃ ಮಂದರೋದಾರಶಿಖರಃ  ಸರ್ವತೋsಭಿವಿರಾಜತೇ ತತ್ರೈಕಲವ್ಯ ಸಂವಾಸೋ  ದ್ರೋಣೇನಾಧ್ಯುಷಿತಶ್ಚಿರಮ್’
[ಶ್ರೀಕೃಷ್ಣ ಇನ್ನೂ ದ್ವಾರಕೆಗೆ ಬಂದಿರಲಿಲ್ಲಾ. ಅವರು ಮಧುರೆಯಲ್ಲಿದ್ದರು. ಅಂತಹ ಸಂದರ್ಭದಲ್ಲಿ ರೈವತಕ ಪರ್ವತದಲ್ಲಿ ದ್ರೋಣಾಚಾರ್ಯರು ಏಕಲವ್ಯನಿಗೆ ಅಸ್ತ್ರದ  ಶಿಕ್ಷಣವನ್ನು ನೀಡಿದರು]  
  

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ
ಪಾಣ್ಡವಶಸ್ತ್ರಾಭ್ಯಾಸೋ ನಾಮ ಪಞ್ಚದಶೋsಧ್ಯಾಯಃ