ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, April 8, 2020

Mahabharata Tatparya Nirnaya Kannada 1727_1731


ಅತೋ ನ ದೇಯಮಸ್ಯ ನಃ ಸುಭೂಭುಜಾಂ ಸಮಾಗಮೇ ।
ಕ್ವಚಿತ್ ಕದಾಚಿದಾಸನಂ ನಚಾರ್ಘ್ಯಪೂರ್ವಕೋ ವಿಧಿಃ ॥೧೭.೨೭॥

ಸ್ವಯಮ್ಬರಕ್ಕೆ  ಶ್ರೀಕೃಷ್ಣನ ಸಂಗಮವಾಗದಂತೆ ಮಾಡಲು, ದೊಡ್ಡದೊಡ್ಡ ರಾಜರೆಲ್ಲ ಬರುತ್ತಿರಲು, ಇವನಿಗೆ ಮಾತ್ರ  ಯಾವಾಗಲೂ ಯಾವ ಆಸನವನ್ನೂ ಕೊಡಬಾರದು. ಅರ್ಘ್ಯವನ್ನೇ ಕೊಡಬಾರದು.

ನಚಾsಸ್ಯತಿ ಕ್ಷಿತೌ ಕ್ವಚಿದ್ ವಿಮಾನಿತಃ ಪುರೋ ಹಿ ನಃ ।
ವರಾಸನಸ್ಥಭೂಭುಜಾಂ ಸ ಮಾನಿತೋ ಹಿ ದೈವತೈಃ ॥೧೭.೨೮॥

ಸ ದರ್ಪಮಾನಸಂಯುತಃ ಕ್ರುಧಾ ಪ್ರಯಾಸ್ಯತಿ ಧ್ರುವಮ್ ।
ಪುರೀಂ ಸ್ವಕಾಂ ತತೋ ವಯಂ ವಿಧೇಮ ಚ ಸ್ವಯಮ್ಬರಮ್ ॥೧೭.೨೯॥

ನಮ್ಮ ಎದುರುಗಡೆ ಅವಮಾನಕ್ಕೊಳಗಾಗಿ ಆತ ನೆಲದಲ್ಲಿ ಕೂಡುವುದಿಲ್ಲ. ಅವನು ದೇವತೆಗಳಿಂದಲೂ ಕೂಡಾ ಗೌರವಿಸಲ್ಪಟ್ಟವನಷ್ಟೇ. ಹೀಗಿರುವಾಗ ದೊಡ್ಡ ದೊಡ್ಡ ಆಸನದಲ್ಲಿ ಕುಳಿತಿರುವ ನಮ್ಮ ಎದುರುಗಡೆ ದರ್ಪ ಹಾಗೂ ಮಾನದಿಂದ ಕೂಡಿರುವ ಅವನು ಸಿಟ್ಟಿನಿಂದ ಖಂಡಿತವಾಗಿಯೂ ತನ್ನ ಪಟ್ಟಣಕ್ಕೆ ಹೊರಟು ಹೋಗುತ್ತಾನೆ. ಹೀಗೆ ನಾವು ಅವನು ಹೋದ ಮೇಲೆ ಸ್ವಯಮ್ಬರ ಮಾಡೋಣ. 

ಇತಿ ಸ್ಮ ಸರ್ವಭೂಭೃತಾಂ ವಿನಿಶ್ಚಯಂ ಸಕೈಶಿಕಃ ।
ಕ್ರಥೋsವಗಮ್ಯ ಭೀಷ್ಮಕಾನುಜೋsಭ್ಯಯಾದ್ಧರಿಂ ಧ್ರುತಮ್ ॥೧೭.೩೦॥

ಈರೀತಿಯಾದ ಎಲ್ಲಾ ರಾಜರ ವಿನಿಶ್ಚಯವನ್ನು ಭೀಷ್ಮಕನ ತಮ್ಮನಾದ, ಕೈಶಿಕನಿಂದ ಒಡಗೂಡಿದ  ಕೃಥನು ತಿಳಿದು,  ಶೀಘ್ರವಾಗಿ ಕುಣ್ಡಿನ ಪಟ್ಟಣದ ಹೊರಭಾಗದಲ್ಲಿರುವ ಶ್ರೀಕೃಷ್ಣನಿದ್ದಲ್ಲಿಗೆ ತೆರಳಿದನು.

ಪ್ರಣಮ್ಯ ಪಾದಪದ್ಮಯೋರ್ನ್ನಿಜಂ ಗೃಹಂ ಪ್ರವೇಶ್ಯ ಚ ।
ಮಹಾಸನಂ ಪ್ರದಾಯ ತೌ ಪ್ರಚಕ್ರತುರ್ವರಾರ್ಚ್ಚನಮ್ ॥೧೭.೩೧॥

ಅವರು (ಕೃಥ ಹಾಗು ಕೈಶಿಕರು) ಶ್ರೀಕೃಷ್ಣನ ಪಾದಕಮಲಗಳಿಗೆ ನಮಸ್ಕರಿಸಿ, ಅವನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ, ಉತ್ಕೃಷ್ಟವಾದ ಆಸನವನ್ನಿತ್ತು ಶ್ರೇಷ್ಠವಾದ ಪೂಜೆಯನ್ನುಮಾಡಿದರು.

Monday, April 6, 2020

Mahabharata Tatparya Nirnaya Kannada 1722_1726


ಪುನಶ್ಚ ತೇ ತ್ವಮನ್ತ್ರಯನ್ ಸಹೈವ ಪಾಪಬುದ್ಧಯಃ ।
ಧ್ರುವಂ ಸಮಾಗತೋ ಹರಿರ್ಲ್ಲಭೇತ ರುಗ್ಮಿಣೀಮಿಮಾಮ್ ॥೧೭.೨೨॥

ಮತ್ತೆ ಪಾಪಬುದ್ಧಿಗಳಾದ ಜರಾಸಂಧಾದಿಗಳು ಒಟ್ಟಿಗೆ ಮಂತ್ರಾಲೋಚನೆ ಮಾಡಿದರು. ಖಂಡಿತವಾಗಿಯೂ  ಶ್ರೀಕೃಷ್ಣನು ಇಲ್ಲಿಗೆ ಬಂದನೆಂದಾದರೆ ಈ ರುಗ್ಮಿಣಿಯನ್ನು ಪಡೆಯುತ್ತಾನೆ.

ಅಯಂ ತ್ರಿಲೋಕಸುನ್ದರೋsನುರೂಪಿಣೀ ಚ ರುಗ್ಮಿಣೀ ।
ಮುಖೇನ ಬಾಹುನಾsಪ್ಯಯಂ ಸಮಸ್ತಲೋಕಜಿದ್ ವಶೀ ॥೧೭.೨೩॥

ಇವನು ಮೂರು ಲೋಕದಲ್ಲಿಯೇ ಚೆಲುವ. ರುಗ್ಮಿಣಿಯೂ  ಕೂಡಾ. ಇವನು ಮುಖದಿಂದಲೂ(ತೇಜಸ್ಸಿನಿಂದಲೂ), ಬಲದಿಂದಲೂ  ಎಲ್ಲಾ ಲೋಕವನ್ನೂ ಗೆದ್ದಿದ್ದಾನೆ.  ಎಲ್ಲರನ್ನೂ ತನ್ನ ವಶದಲ್ಲಿಟ್ಟುಕೊಂಡಿದ್ದಾನೆ.

ಸಮಸ್ತವೇದಿನಾಂ ವರಂ ಜಿತಾರಿಮಗ್ರ್ಯರೂಪಿಣಮ್ ।
ಸಮಸ್ತಯೋಷಿತಾಂ ವರಾ ವ್ರಜೇತ ರುಗ್ಮಿಣೀ ದ್ಧ್ರುವಮ್ ॥೧೭.೨೪॥

ಎಲ್ಲವನ್ನೂ ಬಲ್ಲವರಲ್ಲಿ ಅಗ್ರಗಣ್ಯನಾದ, ಶತ್ರುಗಳನ್ನು ಗೆದ್ದ ಹಾಗೂ ಶ್ರೇಷ್ಠವಾದ ರೂಪವುಳ್ಳ ಇವನನ್ನು ಸಮಸ್ತ ಸ್ತ್ರೀಯರಲ್ಲೇ ಶ್ರೇಷ್ಠಳಾದ ರುಗ್ಮಿಣಿ ಖಂಡಿತವಾಗಿಯೂ ಸೇರುತ್ತಾಳೆ.

ವಯಂ ಚ ಮಾನಸಂಙ್ಕ್ಷಯಮ್ ನಿತಾನ್ತಮಾಪ್ನುಮಸ್ತದಾ ।
ನ ಶಕ್ನುಮೋ ನಿವಾರಿತುಂ ಶರೈರಮುಂ ಕಥಞ್ಚನ ॥೧೭.೨೫॥

ಆಗ ನಾವು ಆತ್ಯಂತಿಕವಾದ ಅಭಿಮಾನದ ನಾಶವನ್ನು(ಮಾನಭಂಗವನ್ನು) ಹೊಂದುತ್ತೇವೆ. ಇವನನ್ನು ಬಾಣಗಳಿಂದ ತಡೆಯಲು  ನಾವು ಸಮರ್ಥರಲ್ಲ.

ಅತಃ ಸ್ವಯಮ್ಬರೇ ಯಥಾ ನ ಸಙ್ಗಮೋ ಹರೇರ್ಭವೇತ್ ।
ತಥಾ ವಿಧಾನಮೇವ ನಃ ಸುನೀತಿರೂರ್ಜ್ಜಿತಾ ದ್ಧ್ರುವಮ್ ॥೧೭.೨೬॥

ಆ ಕಾರಣದಿಂದ ಸ್ವಯಮ್ಬರಕ್ಕೆ  ಶ್ರೀಕೃಷ್ಣನ ಸಂಗಮವಾಗದಂತೆ ಮಾಡುವಿಕೆಯೇ ನಮಗೆ ಒಳ್ಳೆಯದು. ಇದೇ ನಿಶ್ಚಯವಾಗಿ ಉತ್ತಮ ನೀತಿಯು.

Sunday, April 5, 2020

Mahabharata Tatparya Nirnaya Kannada 1716_1721


ಅಥ ಪ್ರಹಸ್ಯ ಸೌಭರಾಡ್ ವಚೋ ಜಗಾದ ಮಾಗಧಮ್ ।
ವಿನಿನ್ದ್ಯ ತೌ ಕ್ರುಧಾ ಸ್ಫುರನ್ ಕ್ರುಧಾ ಸ್ಫುರನ್ತಮೀಕ್ಷ್ಯ ಚ ॥೧೭.೧೬॥

ತದನಂತರ ಸೌಭಸಾಲ್ವನು ತಾನು ಸಿಟ್ಟಿನಿಂದ ಕಂಪಿಸುವವನಾಗಿ, ಸಿಟ್ಟಿನಿಂದ ನಡುಗುತ್ತಿರುವ ಜರಾಸಂಧನನ್ನು ನೋಡಿ, ಶಿಶುಪಾಲ-ದಂತವಕ್ರರನ್ನು ಚೆನ್ನಾಗಿ ನಿಂದಿಸಿ, ನಕ್ಕು, ಜರಾಸಂಧನನ್ನು  ಕುರಿತು ಹೀಗೆ ಹೇಳಿದನು:

ನ ತನ್ಮೃಷಾ ಹರಿಃ ಸ್ವಯಂ ಜನಾರ್ದ್ದನೋ ವಧಾಯ ನಃ ।
ಪ್ರಜಾತ ಏಷ ಯಾದವೋ ವಯಂ ಚ ದಾನವೇಶ್ವರಾಃ ॥೧೭.೧೭॥

ಈ ಇಬ್ಬರು ಹೇಳಿರುವುದರಲ್ಲಿ ಒಂದೊಂದು ಒಳ್ಳೆಯ ವಿಷಯವಿದೆ. ಅದು ಸುಳ್ಳಲ್ಲ.  ಕೃಷ್ಣನು ನಾರಾಯಣನೇ. ಆ ಜನಾರ್ದನನು ನಮ್ಮ ಸಾವಿಗಾಗಿಯೇ ಯಾದವನಾಗಿ ಹುಟ್ಟಿದ್ದಾನೆ. ಆದರೆ ನಾವು  ಶ್ರೇಷ್ಠ ದಾನವರು.   

ಸ್ವಧರ್ಮ್ಮ ಏಷ ನಃ ಸದಾ ದೃಢಪ್ರತೀಪತಾ ಹರೌ ।
ಸ್ವಧರ್ಮ್ಮಿಣೋ ಹತಾ ಅಪಿ ಪ್ರಯಾಮ ಸದ್ಗತಿಂ ಧ್ರುವಮ್ ॥೧೭.೧೮॥

ನಮ್ಮ ಸ್ವರೂಪಭೂತವಾದ ಧರ್ಮವೆಂದರೆ ಅದು  ಪರಮಾತ್ಮನನ್ನು  ದೃಢವಾಗಿ ದ್ವೇಷ ಮಾಡುವುದು.  ಸ್ವಧರ್ಮ ಪಾಲನೆಯಲ್ಲಿ ನಾವು ಸತ್ತರೂ ಕೂಡಾ, ಸದ್ಗತಿಯನ್ನೇ ಹೊಂದುತ್ತೇವೆ.

ಶಿವಶ್ಚ ನಃ ಪರಾ ಗತಿರ್ಗ್ಗುರುರ್ಭವಾನರಿರ್ಹರೇಃ ।
ಇತೀರಿತಃ ಸ ಮಾಗಧೋ ಜಗಾದ ಸಾಧುಸಾಧ್ವಿತಿ ॥೧೭.೧೯॥

ಜರಾಸಂಧಾ, ಶಿವನೇ ನಮಗೆ ಪರದೇವತೆಯು. ನಮ್ಮೆಲ್ಲರ ಶತ್ರುವಾದ ಕೃಷ್ಣನ ಶತ್ರುವಾದ  ನೀನೇ ನಮ್ಮ ಗುರುವು’. ಈ ರೀತಿಯಾಗಿ ಸಾಲ್ವನಿಂದ ಹೇಳಲ್ಪಟ್ಟಾಗ ಜರಾಸಂಧನು ‘ಹೌದು-ಹೌದು, ಸರಿಯಾಗಿ ಹೇಳಿದೆ’ ಎನ್ನುತ್ತಾನೆ.

ತಥೈವ ರುಗ್ಮಿಪೂರ್ವಕಾಃ ಕರೂಶಚೇದಿಪೌ ಚ ತೌ ।
ವಿನಿಶ್ಚಯಂ ಕುಬುದ್ಧಯೋ ಯುಧೇ ಚ ಚಕ್ರುರೂರ್ಜ್ಜಿತಮ್ ॥೧೭.೨೦॥


ಸಾಲ್ವನಂತೆ ರುಗ್ಮಿ ಮೊದಲಾದವರು, ಶಿಶುಪಾಲ-ದಂತವಕ್ರರೂ ಸೇರಿ, ಎಲ್ಲರೂ ‘ನಾರಾಯಣನಿಗೆ ಎದುರಾಗಿ ನಿಲ್ಲುವುದೇ ತಮ್ಮ ನಿಜವಾದ ಧರ್ಮ ಎಂದು ಯುದ್ಧಕ್ಕಾಗಿ ದೃಢವಾದ ನಿಶ್ಚಯ ಮಾಡಿದರು.

ಸದಾ ಪ್ರತೀಪಕಾರಿಣೌ ಭವಾವ ಕೃಷ್ಣ ಇತ್ಯಪಿ ।
ಗುರೋಃ ಪ್ರಸಾದಮಾಪ್ನುತಾಂ ಕರೂಶಚೇದಿಭೂಭೃತೌ ॥೧೭.೨೧॥

ಯಾವಾಗ ಶಿಶುಪಾಲ-ದಂತವಕ್ರರೂ ಕೃಷ್ಣನಿಗೆ ಎದುರಾಡೋಣ ಎಂದು ನಿಶ್ಚಯಮಾಡಿದರೋ, ಆಗ ಅವರು ತಮ್ಮ ಗುರುವಾದ ಜರಾಸಂಧನ ಅನುಗ್ರಹವನ್ನು ಪಡೆದರು.