ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, April 6, 2020

Mahabharata Tatparya Nirnaya Kannada 1722_1726


ಪುನಶ್ಚ ತೇ ತ್ವಮನ್ತ್ರಯನ್ ಸಹೈವ ಪಾಪಬುದ್ಧಯಃ ।
ಧ್ರುವಂ ಸಮಾಗತೋ ಹರಿರ್ಲ್ಲಭೇತ ರುಗ್ಮಿಣೀಮಿಮಾಮ್ ॥೧೭.೨೨॥

ಮತ್ತೆ ಪಾಪಬುದ್ಧಿಗಳಾದ ಜರಾಸಂಧಾದಿಗಳು ಒಟ್ಟಿಗೆ ಮಂತ್ರಾಲೋಚನೆ ಮಾಡಿದರು. ಖಂಡಿತವಾಗಿಯೂ  ಶ್ರೀಕೃಷ್ಣನು ಇಲ್ಲಿಗೆ ಬಂದನೆಂದಾದರೆ ಈ ರುಗ್ಮಿಣಿಯನ್ನು ಪಡೆಯುತ್ತಾನೆ.

ಅಯಂ ತ್ರಿಲೋಕಸುನ್ದರೋsನುರೂಪಿಣೀ ಚ ರುಗ್ಮಿಣೀ ।
ಮುಖೇನ ಬಾಹುನಾsಪ್ಯಯಂ ಸಮಸ್ತಲೋಕಜಿದ್ ವಶೀ ॥೧೭.೨೩॥

ಇವನು ಮೂರು ಲೋಕದಲ್ಲಿಯೇ ಚೆಲುವ. ರುಗ್ಮಿಣಿಯೂ  ಕೂಡಾ. ಇವನು ಮುಖದಿಂದಲೂ(ತೇಜಸ್ಸಿನಿಂದಲೂ), ಬಲದಿಂದಲೂ  ಎಲ್ಲಾ ಲೋಕವನ್ನೂ ಗೆದ್ದಿದ್ದಾನೆ.  ಎಲ್ಲರನ್ನೂ ತನ್ನ ವಶದಲ್ಲಿಟ್ಟುಕೊಂಡಿದ್ದಾನೆ.

ಸಮಸ್ತವೇದಿನಾಂ ವರಂ ಜಿತಾರಿಮಗ್ರ್ಯರೂಪಿಣಮ್ ।
ಸಮಸ್ತಯೋಷಿತಾಂ ವರಾ ವ್ರಜೇತ ರುಗ್ಮಿಣೀ ದ್ಧ್ರುವಮ್ ॥೧೭.೨೪॥

ಎಲ್ಲವನ್ನೂ ಬಲ್ಲವರಲ್ಲಿ ಅಗ್ರಗಣ್ಯನಾದ, ಶತ್ರುಗಳನ್ನು ಗೆದ್ದ ಹಾಗೂ ಶ್ರೇಷ್ಠವಾದ ರೂಪವುಳ್ಳ ಇವನನ್ನು ಸಮಸ್ತ ಸ್ತ್ರೀಯರಲ್ಲೇ ಶ್ರೇಷ್ಠಳಾದ ರುಗ್ಮಿಣಿ ಖಂಡಿತವಾಗಿಯೂ ಸೇರುತ್ತಾಳೆ.

ವಯಂ ಚ ಮಾನಸಂಙ್ಕ್ಷಯಮ್ ನಿತಾನ್ತಮಾಪ್ನುಮಸ್ತದಾ ।
ನ ಶಕ್ನುಮೋ ನಿವಾರಿತುಂ ಶರೈರಮುಂ ಕಥಞ್ಚನ ॥೧೭.೨೫॥

ಆಗ ನಾವು ಆತ್ಯಂತಿಕವಾದ ಅಭಿಮಾನದ ನಾಶವನ್ನು(ಮಾನಭಂಗವನ್ನು) ಹೊಂದುತ್ತೇವೆ. ಇವನನ್ನು ಬಾಣಗಳಿಂದ ತಡೆಯಲು  ನಾವು ಸಮರ್ಥರಲ್ಲ.

ಅತಃ ಸ್ವಯಮ್ಬರೇ ಯಥಾ ನ ಸಙ್ಗಮೋ ಹರೇರ್ಭವೇತ್ ।
ತಥಾ ವಿಧಾನಮೇವ ನಃ ಸುನೀತಿರೂರ್ಜ್ಜಿತಾ ದ್ಧ್ರುವಮ್ ॥೧೭.೨೬॥

ಆ ಕಾರಣದಿಂದ ಸ್ವಯಮ್ಬರಕ್ಕೆ  ಶ್ರೀಕೃಷ್ಣನ ಸಂಗಮವಾಗದಂತೆ ಮಾಡುವಿಕೆಯೇ ನಮಗೆ ಒಳ್ಳೆಯದು. ಇದೇ ನಿಶ್ಚಯವಾಗಿ ಉತ್ತಮ ನೀತಿಯು.

No comments:

Post a Comment