ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, April 12, 2020

Mahabharata Tatparya Nirnaya Kannada 1751_1759


ಅಥಾsಹ ಭೀಷ್ಮಕಂ ಪ್ರಭುಃ ಸ್ವಯಂವರಃ ಕಿಲ ತ್ವಯಾ ।
ಅಭೀಪ್ಸಿತಃ ಸುತಾಕೃತೇ ಶುಭಾಯ ತೇ ಭವೇನ್ನ ಸಃ ॥೧೭.೫೧॥

ತದನಂತರ ಸರ್ವಸಮರ್ಥನಾದ ಕೃಷ್ಣನು, ಭೀಷ್ಮಕನನ್ನು ಕುರಿತು ಮಾತನ್ನಾಡಿದನು: ‘ನೀನು ಮಗಳಾದ ರುಗ್ಮಿಣಿಗೋಸ್ಕರ ಸ್ವಯಂವರವನ್ನು ನಡೆಸಬೇಕೆಂದು ನಿಶ್ಚಯಿಸಿರುವಿಯಷ್ಟೇ? ಆದರೆ ಇದು ನಿನಗೆ ಶುಭವನ್ನು ತರಲಾರದು..

ಇಯಂ ರಮಾ ತವಾsತ್ಮಜಾ ಬಭೂವ ತಾಂ ಹರೇರ್ನ್ನಚ ।
ದದಾತಿ ಚೇತ್ ತದಾ ಪಿತಾ ನಿರಿನ್ದಿರೋ ವ್ರಜೇದಧಃ ॥೧೭.೫೨॥

‘ನಿನ್ನ ಮಗಳು ಸಾಕ್ಷಾತ್ ಲಕ್ಷ್ಮಿಯೇ ಆಗಿದ್ದಾಳೆ. ಅವಳನ್ನು ಪರಮಾತ್ಮನಿಗೆ ಕೊಡದಿದ್ದರೆ ಅವಳ ತಂದೆಯು ಲಕ್ಷ್ಮಿಯನ್ನು ಕಳೆದುಕೊಂಡು ಅಧಃಪತನ ಹೊಂದಬೇಕಾಗುತ್ತದೆ.

ಹಿತಾಯ ಚೈತದೀರಿತಂ ತವಾನ್ಯಥಾ ನ ಚಿನ್ತಯ ।
ನ ಯೋಷಿದಿಚ್ಛಯಾ ತ್ವಹಂ ಬ್ರವೀಮಿ ಪಶ್ಯ ಯಾದೃಶಃ ॥೧೭.೫೩॥

ಉದೀರ್ಯ್ಯ ಚೈವಮೀಶ್ವರಶ್ಚಕಾರ ಹಾsವಿರಾತ್ಮನಃ ।
ಸ ವಿಶ್ವರೂಪಮುತ್ತಮಂ ವಿಸಙ್ಖ್ಯಶೀರ್ಷಬಾಹುಕಮ್ ॥೧೭.೫೪॥

ಇದನ್ನು ನಾನು ಕೇವಲ ನಿನ್ನ ಹಿತಕ್ಕಾಗಿ ಹೇಳಿದೆ. ನೀನು ಬೇರೆ ರೀತಿಯಾಗಿ ಚಿಂತಿಸಬೇಡ. ಹೆಣ್ಣಿನ ಬಯಕೆಯಿಂದ ನಾನು ಈ ಮಾತನ್ನು ಹೇಳುತ್ತಿಲ್ಲ.  ನನ್ನ ಪಾಲಿಗೆ ನನ್ನನ್ನು ಸೇವಿಸುತ್ತಿರುವ ಯಾವ ರೀತಿಯ ಹೆಣ್ಣುಗಳಿದ್ದಾರೆ ಎನ್ನುವುದನ್ನು ನೋಡು’ ಎಂದು ಹೇಳಿದ ಪರಮಾತ್ಮನು, ಎಣಿಸಲಾಗದಷ್ಟು ಬಾಹು-ಶಿರಸ್ಸುಗಳುಳ್ಳ,  ಉತ್ಕೃಷ್ಟವಾದ ತನ್ನ ವಿಶ್ವರೂಪವನ್ನು ಭೀಷ್ಮಕನಿಗೆ ತೋರಿದ.


ಅನನ್ತತೇಜ ಆತತಂ ವಿಸಙ್ಖ್ಯರೂಪಸಂಯುತಮ್ ।
ವಿಚಿತ್ರಮೌಲಿಕುಣ್ಡಲಾಙ್ಗದೋರುಹಾರನೂಪುರಮ್ ॥೧೭.೫೫॥

ಜ್ವಲತ್ಸುಕೌಸ್ತುಭಪ್ರಭಾsಭಿಭಾಸಕಂ ಶುಭಾಮ್ಬರಮ್ ।
ಪ್ರಪಶ್ಯ ಯಾದೃಶಾಃ ಸ್ತ್ರಿಯೋ ಮಮೇತ್ಯದರ್ಶಯಚ್ಛ್ರಿಯಮ್ ॥೧೭.೫೬॥

ಅನನ್ತರೂಪಿಣೀಂ ಪರಾಂ ಮನುಷ್ಯದೃಷ್ಟಿತೋsಧಿಕಾಮ್ ।
ಸ್ವರುಗ್ಮಿಣೀತನೋರಪಿ ವ್ಯದರ್ಶಯಚ್ಚ ದೇವತಾಃ ॥೧೭.೫೭॥


ಎಣೆಯಿರದ ತೇಜಸ್ಸಿನಿಂದ ಕೂಡಿರುವ, ಅಸಂಖ್ಯವಾದ ರೂಪದಿಂದ ಕೂಡಿರುವ, ವಿಚಿತ್ರವಾಗಿರುವ  ಕಿರೀಟ, ಕುಣ್ಡಲ, ಬಾಹುಭೂಷಣ-ಹಾರ-ಕಾಲ್ಗೆಜ್ಜೆ ಇವುಗಳಿಂದ ಕೂಡಿರುವ, ಕೌಸ್ತುಭವನ್ನೇ ಹೊಳೆಯುವಂತೆ ಮಾಡುತ್ತಿರುವ, ಶೋಭನವಾದ ಪೀತಾಂಬರಧಾರಿಯಾದ ತನ್ನ ವಿಶ್ವರೂಪವನ್ನು ತೋರಿಸಿದ ಶ್ರೀಕೃಷ್ಣ, ‘ನನ್ನ ವಶದಲ್ಲಿ ಎಂತೆಂತಹ ಸ್ತ್ರೀಯರಿದ್ದಾರೆ ನೋಡು ಎಂದು ಶ್ರೀಲಕ್ಷ್ಮಿಯನ್ನೇ ತೋರಿಸಿದ. 
[ಹರಿವಂಶದಲ್ಲಿ, ಇದೇ ಪ್ರಸಂಗದಲ್ಲಿ ಒಂದು ಮಾತು ಬರುತ್ತದೆ:  ‘ರುಗ್ಮಿಣಿಗಿಂತಲೂ ಸುಂದರವಾಗಿರುವ ಹೆಣ್ಣನ್ನು ಭೀಷ್ಮಕ ಅಲ್ಲಿ ನೋಡಿದ ಎಂದು.   ಇದರ ತಾತ್ಪರ್ಯವನ್ನು ಆಚಾರ್ಯರು ಇಲ್ಲಿ ನೀಡಿದ್ದಾರೆ]
ಭಗವಂತ ತನ್ನ ವಿಶ್ವರೂಪದಲ್ಲಿ ಅನಂತರೂಪವುಳ್ಳ, ಶ್ರೇಷ್ಠಳಾಗಿರುವ ರುಗ್ಮಿಣಿಯನ್ನೇ ತೋರಿಸಿರುವುದು. ಆದರೆ ಮನುಷ್ಯ ದರ್ಶನದಿಂದಾಗಿ ಭೀಷ್ಮಕನಿಗೆ ಅಲ್ಲಿ ಲಕ್ಷ್ಮಿ, ರುಗ್ಮಿಣಿಗಿಂತಲೂ ಸುಂದರವಾಗಿ ಕಂಡಿರುವುದು. (ವಸ್ತುತಃ ಇಬ್ಬರೂ ಒಬ್ಬರೇ. ಎರಡನ್ನೂ ಒಂದೇ ಎಂದು ನೋಡುವುದರಲ್ಲಿ ಮನುಷ್ಯ ದೃಷ್ಟಿಯಲ್ಲಿ ಎಡವಿರುವುದು ಅಷ್ಟೇ). ಹೀಗೆ ಶ್ರೀಕೃಷ್ಣ ತನ್ನವಳೇ ಆದ, ರುಗ್ಮಿಣಿಗಿಂತಲೂ ಅಧಿಕಳಂತೆ ತೋರುವ ‘ಅವಳನ್ನೇ’ ತೋರಿಸಿದ. ಅಷ್ಟೇ ಅಲ್ಲದೆ, ತನ್ನ ಕೈ-ಕಾಲುಗಳಲ್ಲಿ ಆವರಿಸಿಕೊಂಡಿರುವ, ಆಶ್ರಯಪಡೆದಿರುವ ದೇವತೆಗಳನ್ನೂ ಕೃಷ್ಣ ಭೀಷ್ಮಕನಿಗೆ ತೋರಿಸಿದ.

ತದದ್ಭುತಂ ಸಮೀಕ್ಷ್ಯ ತು ಪ್ರಭೀತ ಆಶು ಭೀಷ್ಮಕಃ ।
ಪಪಾತ ಪಾದಯೋರ್ವಿಭೋಃ ಕರೋಮಿ ತತ್ ತಥೇತಿ ಚ ॥೧೭.೫೮॥

ಈ ಅದ್ಭುತವನ್ನು ನೋಡಿದ ಭೀಷ್ಮಕನು ಭಯಗೊಂಡು, ಪರಮಾತ್ಮನ ಪಾದಗಳಲ್ಲಿ ಬಿದ್ದ. ‘ಒಪ್ಪಿದೆ, ನೀನು ಹೇಳಿದಂತೆಯೇ ಮಾಡುತ್ತೇನೆ’ ಎಂದ.

ಪುನಶ್ಚ ವಿಶ್ವರೂಪತಾಂ ಪಿಧಾಯ ಪದ್ಮಲೋಚನಃ ।
ಜಗಾಮ ಪಕ್ಷಿವಾಹನಃ ಪುರೀಂ ಸ್ವಬಾಹುಪಾಲಿತಾಮ್ ॥೧೭.೫೯॥

ತದನಂತರ ತಾವರೆಯ ಕಣ್ಗಳುಳ್ಳ ಪರಮಾತ್ಮನು ತನ್ನ ವಿಶ್ವರೂಪವನ್ನು ಮುಚ್ಚಿ, ಪಕ್ಷಿವಾಹನನಾಗಿ, ತನ್ನ ಬಾಹುವಿನಿಂದ ಪಾಲಿತವಾದ ಮಧುರಾಪಟ್ಟಣವನ್ನು ಕುರಿತು ತೆರಳಿದ.

Saturday, April 11, 2020

Mahabharata Tatparya Nirnaya Kannada 1743_1750


(ಜರಾಸಂಧ ಏಕೆ ಶ್ರೀಕೃಷ್ಣನಿಗೆ ಅಭಿಷೇಕ ಮಾಡಲು ಹೋಗಲಿಲ್ಲ? ಜರಾಸಂಧ ಹೋಗದೇ ಇದ್ದರೂ  ಕೂಡಾ  ಇಂದ್ರನೇಕೆ ಕೋಪಿಸಿಕೊಳ್ಳಲಿಲ್ಲ  ಎಂದರೆ: )

ಸಮಸ್ತಶೋ ಜರಾಸುತಾದಿಭಿಃ ಕೃತೇsಭಿಷೇಚನೇ ।
ಅತೀವ ಭಗ್ನಮಾನಕಾನ್ ನಚಾನುಯಾತಿ ಕಶ್ಚನ ॥೧೭.೪೩॥

‘ಒಂದು ವೇಳೆ ಜರಾಸಂಧಾದಿಗಳೆಲ್ಲರೂ ಸೇರಿ ಶ್ರೀಕೃಷ್ಣನ ಅಭಿಷೇಕ ಮಾಡಿದರೆ, ಅವರು ತಮ್ಮ ಅಭಿಮಾನವನ್ನು ಕಳೆದುಕೊಳ್ಳುತ್ತಾರೆ ಮತ್ತು ಆಗ ಯಾರೂ ಕೂಡಾ ಅವರನ್ನು ಅನುಸರಿಸುವುದಿಲ್ಲ.

ಸಮಾಶ್ರಯಂ ಚ ಕೇಶವಂ ತದೈವ ಜೀವನಾರ್ತ್ಥಿನಃ ।
ಪ್ರಕುರ್ಯ್ಯುರಾಸುರಾ ಅಪೀತಿ ದೇವಕಾರ್ಯ್ಯಸಙ್ಕ್ಷಯಃ ॥೧೭.೪೪॥

ಹೀಗಾದರೆ ಬದುಕಬೇಕು ಎಂದು ಬಯಸುವ ಎಲ್ಲಾ ಅಸುರ ಸ್ವಭಾವದ ರಾಜರುಗಳು ಕೃಷ್ಣನನ್ನೇ ಆಶ್ರಯಿಸಿಯಾರು. ಹೀಗಾದರೆ ದೇವತಾಕಾರ್ಯದ ನಾಶವಾಗುತ್ತದೆ’.

ಇತೀಕ್ಷ್ಯ ಪಾಕಶಾಸನೋsವದಜ್ಜರಾಸುತಾದಿಕಾನ್ ।
ಸರುಗ್ಮಿಚೇದಿಸಾಲ್ವಪೋ ನ ಯಾತು ಮಾಗಧೋ ಹರಿಮ್ ॥೧೭.೪೫॥

ಈರೀತಿಯಾಗಿ ಚಿಂತಿಸಿದ ಇಂದ್ರನು, ಜರಾಸಂಧಾದಿಗಳನ್ನು ಕುರಿತು ‘ರುಗ್ಮಿ, ಚೇದಿ(ಶಿಶುಪಾಲ), ಸಾಲ್ವ, ಇವರಿಂದ ಕೂಡಿಕೊಂಡ ಜರಾಸಂಧನು ಪರಮಾತ್ಮನ ಬಳಿ ಹೋಗುವುದು ಬೇಡ’ ಎನ್ನುವ ಆದೇಶವನ್ನಿತ್ತನು.

ತತಸ್ತು ತಾನ್ ವಿನಾsಪರೇsಧಿರಾಜರಾಜ ಇತ್ಯಮುಮ್ ।
ತದಾsಭಿಷೇಕ್ತುಮುದ್ಯತಾ ನೃಪಾಃ ಸುರೇಶಶಾಸನಾತ್ ॥೧೭.೪೬॥

ಆ ಕಾರಣದಿಂದ, ಇಂದ್ರನ ಶಾಸನದಂತೆ ಈ ನಾಲ್ಕು ಜನರನ್ನು ಬಿಟ್ಟು ಉಳಿದ ಎಲ್ಲರೂ ಕೂಡಾ, ‘ಚಕ್ರವರ್ತಿ’ ಎಂದು ಶ್ರೀಕೃಷ್ಣನನ್ನು ಅಭಿಷೇಕ ಮಾಡಲು ಸಿದ್ಧರಾದರು.

ಹರಿವಂಶದಲ್ಲಿ (ವಿಷ್ಣುಪರ್ವ ೫೦.೫೬) ಇಂದ್ರನ ಶಾಸನದ ವಿವರ ಕಾಣಸಿಗುತ್ತದೆ: ಜರಾಸಂಧಶ್ಚ ಚೈಧ್ಯಶ್ಚ ರುಗ್ಮೀ  ಚೈವ  ಮಹಾರಥಃ । ಸಾಲ್ವಃ ಸೌಭಪತಿಶ್ಚೈವ ಚತ್ವಾರೋ  ರಾಜಸತ್ತಮಾಃ । ರಙ್ಗಸ್ಯಾಶೂನ್ಯತಾಹೇತೋಸ್ತಿಷ್ಠಂತ್ವತ್ರೈವ ಪಾರ್ಥಿವಾಃ ‘ಎಲ್ಲರೂ ಹೋದರೆ ರಾಜಸಭೆಯಲ್ಲಿ ಯಾರೂ ಇಲ್ಲವಾಗುತ್ತಾರೆ. ಹಾಗಾಗಿ ಈ ನಾಲ್ವರು ಇಲ್ಲೇ ಇರಲಿ’ ಎನ್ನುತ್ತಾನೆ ಇಂದ್ರ.

ಅತಃ ಶಚೀಪತಿರ್ನ್ನಿಜಂ ವರಾಸನಂ ಹರೇರದಾತ್ ।
ವಿವೇಶ ತತ್ರ ಕೇಶವೋ ನಭಸ್ತಳಾವತಾರಿತೇ ॥೧೭.೪೭॥

ತದನಂತರ ಇಂದ್ರನು ಶ್ರೀಕೃಷ್ಣನಿಗೆ ತನ್ನ ಶ್ರೇಷ್ಠವಾದ ಆಸನವನ್ನು ಕಳುಹಿಸಿಕೊಟ್ಟನು. ಆಕಾಶದಿಂದ ಇಳಿದುಬಂದ ಆ ಉತ್ಕೃಷ್ಟವಾದ ಆಸನದಲ್ಲಿ ಶ್ರೀಕೃಷ್ಣನು ಕುಳಿತನು.

ಕರೇ ಪ್ರಗೃಹ್ಯ ಕೇಶವೋ ನ್ಯವೇಶಯತ್ ಸಹಾsಸನೇ ।
ಪತತ್ರಿಪುಙ್ಗವಂ ಚ ತೌ ಸ ಭೀಷ್ಮಕಾನುಜೌ ಪ್ರಭುಃ ॥೧೭.೪೮॥

ಭೀಷ್ಮಕನ ಅನುಜರಾದ ಕ್ರಥ ಹಾಗೂ ಕೈಶಿಕರು ಪರಮಾತ್ಮನ ಹಾಗೂ ಗರುಡನ ಕೈಯನ್ನು ಹಿಡಿದು, ಅವರನ್ನು ಶ್ರೇಷ್ಠವಾದ ಆಸನದಲ್ಲಿ ಕುಳ್ಳಿರಿಸಿದರು. 

ಅಥಾಖಿಲಾ ನರೇಶ್ವರಾ ಮುನೀನ್ದ್ರಸಂಯುತಾ ಹರಿಮ್ ।
ಸುಶಾತಕೌಮ್ಭಕುಮ್ಭಕೈಃ ಪ್ರಚಕ್ರುರಾಭಿಷೇಕಿಣಮ್ ॥೧೭.೪೯॥

ತದನಂತರ ಎಲ್ಲಾ ರಾಜರೂ ಕೂಡಾ, ಮುನೀನ್ದ್ರರಿಂದ ಕೂಡಿಕೊಂಡು, ಪರಮಾತ್ಮನನ್ನು, ಬಂಗಾರದ ಕೊಡಗಗಳಲ್ಲಿ ತುಂಬಿರುವ ಶ್ರೇಷ್ಠ ಜಲದಿಂದ ಅಭಿಷೇಕ ಮಾಡಿದರು.

ವಿರಿಞ್ಚಶರ್ವಪೂರ್ವಕೈರಭಿಷ್ಟುತಃ ಸುರಾದಿಭಿಃ ।
ಸಮಸ್ತದೇವಗಾಯಕೈಃ ಪ್ರಗೀತ ಆಸ ಕೇಶವಃ ॥೧೭.೫೦॥

ಬ್ರಹ್ಮ-ರುದ್ರ ಮೊದಲಾದ ಶ್ರೇಷ್ಠ ದೇವತೆಗಳಿಂದಲೂ ಕೂಡಿರುವ, ಸಮಸ್ತ ದೇವ-ಗಂಧರ್ವರಿಂದ ಸ್ತೋತ್ರಮಾಡಲ್ಪಟ್ಟವನಾದ ಶ್ರೀಕೃಷ್ಣ ವೈಭವದಿಂದ ಆಸೀನನಾಗಿದ್ದ.

Friday, April 10, 2020

Mahabharata Tatparya Nirnaya Kannada 1732_1742



ಅಥಾsಗಮಚ್ಛತಕ್ರತೋರ್ವಚಃ ಪ್ರಗೃಹ್ಯ ಭೂಭುಜಃ ।
ಜರಾಸುತಾದಿಕಾನ್ ಪುಮಾನುವಾಚ ಚಾರ್ತ್ಥವದ್ ವಚಃ ॥೧೭.೩೨॥

ಇತ್ತ ಇಂದ್ರನ ಮಾತನ್ನು (ಸಂದೇಶವನ್ನು) ಹಿಡಿದುಕೊಂಡು ಬಂದ ಒಬ್ಬ ಪುರುಷನು(ದೂತನು) ಜರಾಸಂಧ ಮೊದಲಾದ ರಾಜರನ್ನು ಕುರಿತು  ಅರ್ಥವತ್ತಾದ ಮಾತನ್ನು ಹೇಳತಕ್ಕವನಾದನು.

ಅಹಂ ಪ್ರಿಯಃ ಶಚೀಪತೇಃ ಸದಾsಸ್ಯ ಚಾಕ್ಷಿಗೋಚರಃ ।
ಸುರೇನ್ದ್ರ ಆಜ್ಞಯಾsವದನ್ನೃಪಾನ್ ವ ಈಶ್ವರೋ ಹಿ ಸಃ ॥೧೭.೩೩॥

‘ನಾನು ಇಂದ್ರನಿಗೆ ಪ್ರಿಯನಾದವನು. ಯಾವಾಗಲೂ ಇಂದ್ರನ ಕಣ್ಣಿಗೆ ಕಾಣುತ್ತಿರುತ್ತೇನೆ(ಇಂದ್ರನಿಗೆ ಹತ್ತಿರದವನು). ಇಂದ್ರನು ತನ್ನ ಆಜ್ಞೆಯಿಂದ ನಿಮಗೆಲ್ಲರಿಗೂ ಕೂಡಾ ಮಾತನ್ನು ಹೇಳಿರುತ್ತಾನೆ. ಅವನು ನಿಮಗೆಲ್ಲರಿಗೂ ಒಡೆಯನಷ್ಟೇ.
(ಇಂದ್ರನ ಸಂದೇಶವೇನು ಎನ್ನುವುದನ್ನು ಆತ ವಿವರಿಸುತ್ತಾನೆ: )

ಸಮಸ್ತರಾಜಸತ್ಪತಿರ್ಹರಿರ್ನ್ನಚಾನ್ಯ ಇತ್ಯಪಿ ।
ವರಾಭಿಷೇಕಮೀಶಿತುಃ ಕುರುಧ್ವಮಾಶ್ವಸಂಶಯಮ್ ॥೧೭.೩೪॥

“ಸಮಸ್ತ ರಾಜರುಗಳಿಗೂ ಒಡೆಯ ನಾರಾಯಣನೇ.  (ಜರಾಸಂಧನೂ ಸೇರಿ, ಎಲ್ಲಾ ರಾಜರುಗಳಿಗೂ  ಒಡೆಯ ಆ ನಾರಾಯಣನೇ. ನೀವು ತಿಳಿದಂತೆ ಸಮಸ್ತ ರಾಜರ ಒಡೆಯ ಜರಾಸಂಧನಲ್ಲಾ ಎಂಬ ಧ್ವನಿ). ಇಂತಹ ಪರಮಾತ್ಮನಿಗೆ ಕೂಡಲೇ ಸಂಶಯವೇ ಇಲ್ಲದೆ ಉತ್ಕೃಷ್ಟವಾದ ಅಭಿಷೇಕವನ್ನು ಮಾಡಿರಿ.


ಅತೋsನ್ಯಥಾ ಶಿರಸ್ಯಹಂ ನಿಪಾತಯಾಮಿ ವೋsಶನಿಮ್ ।
ಇತೀದಮಿನ್ದ್ರಶಾಸನಂ ಕುರುಧ್ವಮಿತ್ಯಸೌ ಯಯೌ ॥೧೭.೩೫॥

ಇದಕ್ಕಿಂತ ವಿಪರೀತವಾದರೆ(ಶ್ರೀಕೃಷ್ಣನಿಗೆ ನೀವು ಅಭಿಷೇಕ ಮಾಡದೇ ಹೋದರೆ), ನಾನು ನಿಮ್ಮ ತಲೆಯಮೇಲೆ ವಜ್ರಾಯುಧವನ್ನು ಪ್ರಯೋಗ ಮಾಡುತ್ತೇನೆ”. ಇದು ಇಂದ್ರನ ಆಜ್ಞೆ ಮತ್ತು ನೀವು ಆತನ ಆಜ್ಞೆಯನ್ನು ಪಾಲಿಸಿರಿ  ಎಂದು ಹೇಳಿ ದೂತನು ಅಲ್ಲಿಂದ ತೆರಳಿದನು.
ಈ ದೂತ ಯಾರು  ಮತ್ತು ಅವನು ಜರಾಸಂಧಾದಿಗಳಿಗೆ ಏನು ಹೇಳಿದ ಎನ್ನುವ ವಿವರ ಹರಿವಂಶದಲ್ಲಿ(ವಿಷ್ಣುಪರ್ವಣಿ ೫೦.೫೭) ಕಾಣಸಿಗುತ್ತದೆ. ‘ಏವಮಾಜ್ಞಾಂ ಸುರೇಶಸ್ಯ ಶ್ರುತ್ವಾ  ಚಿತ್ರಾಙ್ಗದೇರಿತಾಂ  (ಅವನ ಹೆಸರು ಚಿತ್ರಾಙ್ಗದ ಎನ್ನುವುದು ಇಲ್ಲಿ ತಿಳಿಯುತ್ತದೆ).   ‘ಮಾನುಷಾಣಾಂ ನೃಪಾ ದೇವಾ ನೃಪಾಣಾಂ ದೇವತಾಃ ಸುರಾಃ । ಸುರಾಣಾಂ ದೇವತಾ ಶಕ್ರಃ ಶಕ್ರಸ್ಯಾಪಿ ಜನಾರ್ದನಃ । ಏಷ ವಿಷ್ಣುಃ ಪ್ರಭುರ್ದೇವೋ ದೇವಾನಾಮಪಿ ದೈವತಂ । ಜಾತೋsಯಂ  ಮಾನುಷೇ ಲೋಕೇ ನರರೂಪೇಣ ಕೇಶವಃ । ಅಜೇಯಃ ಸರ್ವಲೋಕೇಷು ದೇವದಾನವಮಾನವೈಃ’ (ವಿಷ್ಣು ಪರ್ವಣಿ ೫೦. ೪೭-೪೯).

ತದೀರಿತಂ ನಿಶಮ್ಯ ತೇ ಪುನಃ ಸುತಪ್ತಚೇತಸಃ ।
ಬಭೂವುರೂಚಿರೇ ವಚಃ ಸುಗರ್ವಿತೋ ಹಿ ವಾಸವಃ ॥೧೭.೩೬॥

ಆ ದೂತ ಹೇಳಿದ ಮಾತನ್ನು ಕೇಳಿದ ಅವರೆಲ್ಲರೂ, ಬಹಳ ಸುತಪ್ತವಾದ ಮನಸುಳ್ಳವರಾಗಿ (ಸಿಟ್ಟುಗೊಂಡವರಾಗಿ). ‘ಇಂದ್ರನಿಗೆ ಬಹಳ ಗರ್ವ ಬಂದಿದೆ’  ಎಂದು ಹೇಳಿದರು.

ಪುರಾ ಬಿಭೇತಿ ನಃ ಸದಾ ಪ್ರತಿಪ್ರತಿ ಸ್ಮ ವಾಸವಃ ।
ಉತಾದ್ಯ ಕೃಷ್ಣಸಂಶ್ರಯಾದ್ ದೃಢಂ ವಿಭೀಷಯತ್ಯಸೌ ॥೧೭.೩೭॥

‘ಹಿಂದೆ ಇಂದ್ರನಿಗೆ ನಮ್ಮ ಕುರಿತಂತೆ  ಪ್ರತಿಯೊಂದು ವಿಷಯದಲ್ಲೂ ಭಯವಿತ್ತು. ಈಗಲಾದರೋ , ಕೃಷ್ಣನ ಆಶ್ರಯ ಇರುವುದರಿಂದ ನಿಶ್ಚಯವಾಗಿ ಆತ ನಮ್ಮನ್ನು ಭಯಪಡಿಸುತ್ತಿದ್ದಾನೆ.

ಅದೃಶ್ಯ ಏವ ದೇವರಾಡ್ ಯದಿ ಸ್ಮ ವಜ್ರಮುತ್ಸೃಜೇತ್ ।
ಭವೇಮ ಪೀಡಿತಾ ವಯಂ ವರಾದಮೃತ್ಯವೋsಪಿ ಹಿ ॥೧೭.೩೮॥

ಒಂದುವೇಳೆ ಇಂದ್ರನು ನಮಗಾರಿಗೂ ಕಾಣದೇ(ಅದೃಶ್ಯನಾಗಿಯೇ) ವಜ್ರವನ್ನು ಬಿಟ್ಟರೆ, ನಮಗೆ ಅದರಿಂದ  ಪೀಡೆಯುಂಟಾಗುತ್ತದೆ. ವರದಿಂದ ನಮಗೆ ಸಾವಿಲ್ಲದೇ ಹೋದರೂ ಕೂಡಾ ಸಂಕಟವಂತೂ ಉಂಟಾಗುತ್ತದೆ.

ಪುರಾ ದಿವಿಸ್ಥಿತಸ್ಯ ಚ ಪ್ರಮರ್ದ್ದನೇ ವಯಂ ಕ್ಷಮಾಃ ।
ಉತಾದ್ಯ ಯದ್ಯಮುಂ ವಯಂ ವ್ರಜೇಮ ಕೃಷ್ಣ ಏಷ್ಯತಿ ॥೧೭.೩೯॥

ಹಿಂದೆ ಆತ ಅಲ್ಲಿದ್ದರೂ(ಸ್ವರ್ಗದಲ್ಲಿದ್ದರೂ) ಕೂಡಾ,  ಅವನನ್ನು ತುಳಿಯಲು ನಾವು ಸಮರ್ಥರಾಗಿದ್ದೆವು.  ಆದರೆ ಈಗ  ಒಂದು ವೇಳೆ ನಾವು ಇವನಮೇಲೆ ಯುದ್ಧಕ್ಕೆಂದು ಹೊರಟರೆ ಕೃಷ್ಣ ಎದುರಾಗುತ್ತಾನೆ.  

ಅತೋsಭಿಷೇಚನಾದ್ ಯದೀಹ ಶಾರ್ಙ್ಗಿಣಃ ಶಚೀಪತಿಃ ।
ನ ವಜ್ರಮುತ್ಸೃಜೇತ್ ತದಾsಭಿಷೇಚಯಾಮ ತಂ ವಯಮ್ ॥೧೭.೪೦॥

ಹೀಗಾಗಿ, ಕೇವಲ ಶಾರ್ಙ್ಗಧಾರಿ ಶ್ರೀಕೃಷ್ಣನಿಗೆ ಅಭಿಷೇಕ ಮಾಡುವುದರಿಂದ ಇಂದ್ರನು ವಜ್ರವನ್ನು ಬಿಡುವುದಿಲ್ಲವಾದರೆ, ನಾವು ಕೃಷ್ಣನಿಗೆ ಅಭಿಷೇಕ ಮಾಡೋಣ.  


ಅತೋsನ್ಯಥಾ ದನುರ್ಯ್ಯಥಾ ವರಾದಮೃತ್ಯುಕೋsಪಿ ಸನ್ ।
ಸುರೇನ್ದ್ರವಜ್ರತಾಡಿತೋ ಬಭೂವ ಕುಕ್ಷಿಗಾಸ್ಯಯುಕ್ ॥೧೭.೪೧॥

ತಥೈವ ಕೃಷ್ಣಸಂಶ್ರಯಾತ್ ಸ ನಃ ಶಚೀಪತಿರ್ನ್ನಯೇತ್ ।
ಇತಿ ಸ್ಮ ನಿಶ್ಚಿತಾ ನೃಪಾನಯಾತಯನ್ತ ಶೌರಯೇ ॥೧೭.೪೨॥

ಒಂದುವೇಳೆ ಶ್ರೀಕೃಷ್ಣನಿಗೆ ನಾವು ಅಭಿಷೇಕ ಮಾಡದೇ ಇದ್ದರೆ, ಹೇಗೆ  ಧನು ಎಂಬ ದೈತ್ಯನು ವರದಿಂದ ಸಾವನ್ನು ಗೆದ್ದಿದ್ದರೂ ಕೂಡಾ  ಇಂದ್ರನ ವಜ್ರದಿಂದ ಹೊಡೆಯಲ್ಪಟ್ಟವನಾಗಿ ಹೊಟ್ಟೆಯೊಳಗಿರತಕ್ಕ ಮೋರೆಯುಳ್ಳವನಾದನೋ, ಹಾಗೆಯೇ, ಕೃಷ್ಣನ ಆಶ್ರಯದಿಂದ ಇಂದ್ರನು ನಮ್ಮನ್ನೂ ಕೂಡಾ ಆ ದಶೆಗೆ ತಳ್ಳಬಹುದು’.  ಈರೀತಿಯಾಗಿ ನಿಶ್ಚಯಿಸಿದ  ಜರಾಸಂಧಾದಿಗಳು ಶ್ರೀಕೃಷ್ಣನ ಅಭಿಷೇಕಕ್ಕಾಗಿ ರಾಜರುಗಳನ್ನು ಕಳುಹಿಸಿದರು.