ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, April 10, 2020

Mahabharata Tatparya Nirnaya Kannada 1732_1742



ಅಥಾsಗಮಚ್ಛತಕ್ರತೋರ್ವಚಃ ಪ್ರಗೃಹ್ಯ ಭೂಭುಜಃ ।
ಜರಾಸುತಾದಿಕಾನ್ ಪುಮಾನುವಾಚ ಚಾರ್ತ್ಥವದ್ ವಚಃ ॥೧೭.೩೨॥

ಇತ್ತ ಇಂದ್ರನ ಮಾತನ್ನು (ಸಂದೇಶವನ್ನು) ಹಿಡಿದುಕೊಂಡು ಬಂದ ಒಬ್ಬ ಪುರುಷನು(ದೂತನು) ಜರಾಸಂಧ ಮೊದಲಾದ ರಾಜರನ್ನು ಕುರಿತು  ಅರ್ಥವತ್ತಾದ ಮಾತನ್ನು ಹೇಳತಕ್ಕವನಾದನು.

ಅಹಂ ಪ್ರಿಯಃ ಶಚೀಪತೇಃ ಸದಾsಸ್ಯ ಚಾಕ್ಷಿಗೋಚರಃ ।
ಸುರೇನ್ದ್ರ ಆಜ್ಞಯಾsವದನ್ನೃಪಾನ್ ವ ಈಶ್ವರೋ ಹಿ ಸಃ ॥೧೭.೩೩॥

‘ನಾನು ಇಂದ್ರನಿಗೆ ಪ್ರಿಯನಾದವನು. ಯಾವಾಗಲೂ ಇಂದ್ರನ ಕಣ್ಣಿಗೆ ಕಾಣುತ್ತಿರುತ್ತೇನೆ(ಇಂದ್ರನಿಗೆ ಹತ್ತಿರದವನು). ಇಂದ್ರನು ತನ್ನ ಆಜ್ಞೆಯಿಂದ ನಿಮಗೆಲ್ಲರಿಗೂ ಕೂಡಾ ಮಾತನ್ನು ಹೇಳಿರುತ್ತಾನೆ. ಅವನು ನಿಮಗೆಲ್ಲರಿಗೂ ಒಡೆಯನಷ್ಟೇ.
(ಇಂದ್ರನ ಸಂದೇಶವೇನು ಎನ್ನುವುದನ್ನು ಆತ ವಿವರಿಸುತ್ತಾನೆ: )

ಸಮಸ್ತರಾಜಸತ್ಪತಿರ್ಹರಿರ್ನ್ನಚಾನ್ಯ ಇತ್ಯಪಿ ।
ವರಾಭಿಷೇಕಮೀಶಿತುಃ ಕುರುಧ್ವಮಾಶ್ವಸಂಶಯಮ್ ॥೧೭.೩೪॥

“ಸಮಸ್ತ ರಾಜರುಗಳಿಗೂ ಒಡೆಯ ನಾರಾಯಣನೇ.  (ಜರಾಸಂಧನೂ ಸೇರಿ, ಎಲ್ಲಾ ರಾಜರುಗಳಿಗೂ  ಒಡೆಯ ಆ ನಾರಾಯಣನೇ. ನೀವು ತಿಳಿದಂತೆ ಸಮಸ್ತ ರಾಜರ ಒಡೆಯ ಜರಾಸಂಧನಲ್ಲಾ ಎಂಬ ಧ್ವನಿ). ಇಂತಹ ಪರಮಾತ್ಮನಿಗೆ ಕೂಡಲೇ ಸಂಶಯವೇ ಇಲ್ಲದೆ ಉತ್ಕೃಷ್ಟವಾದ ಅಭಿಷೇಕವನ್ನು ಮಾಡಿರಿ.


ಅತೋsನ್ಯಥಾ ಶಿರಸ್ಯಹಂ ನಿಪಾತಯಾಮಿ ವೋsಶನಿಮ್ ।
ಇತೀದಮಿನ್ದ್ರಶಾಸನಂ ಕುರುಧ್ವಮಿತ್ಯಸೌ ಯಯೌ ॥೧೭.೩೫॥

ಇದಕ್ಕಿಂತ ವಿಪರೀತವಾದರೆ(ಶ್ರೀಕೃಷ್ಣನಿಗೆ ನೀವು ಅಭಿಷೇಕ ಮಾಡದೇ ಹೋದರೆ), ನಾನು ನಿಮ್ಮ ತಲೆಯಮೇಲೆ ವಜ್ರಾಯುಧವನ್ನು ಪ್ರಯೋಗ ಮಾಡುತ್ತೇನೆ”. ಇದು ಇಂದ್ರನ ಆಜ್ಞೆ ಮತ್ತು ನೀವು ಆತನ ಆಜ್ಞೆಯನ್ನು ಪಾಲಿಸಿರಿ  ಎಂದು ಹೇಳಿ ದೂತನು ಅಲ್ಲಿಂದ ತೆರಳಿದನು.
ಈ ದೂತ ಯಾರು  ಮತ್ತು ಅವನು ಜರಾಸಂಧಾದಿಗಳಿಗೆ ಏನು ಹೇಳಿದ ಎನ್ನುವ ವಿವರ ಹರಿವಂಶದಲ್ಲಿ(ವಿಷ್ಣುಪರ್ವಣಿ ೫೦.೫೭) ಕಾಣಸಿಗುತ್ತದೆ. ‘ಏವಮಾಜ್ಞಾಂ ಸುರೇಶಸ್ಯ ಶ್ರುತ್ವಾ  ಚಿತ್ರಾಙ್ಗದೇರಿತಾಂ  (ಅವನ ಹೆಸರು ಚಿತ್ರಾಙ್ಗದ ಎನ್ನುವುದು ಇಲ್ಲಿ ತಿಳಿಯುತ್ತದೆ).   ‘ಮಾನುಷಾಣಾಂ ನೃಪಾ ದೇವಾ ನೃಪಾಣಾಂ ದೇವತಾಃ ಸುರಾಃ । ಸುರಾಣಾಂ ದೇವತಾ ಶಕ್ರಃ ಶಕ್ರಸ್ಯಾಪಿ ಜನಾರ್ದನಃ । ಏಷ ವಿಷ್ಣುಃ ಪ್ರಭುರ್ದೇವೋ ದೇವಾನಾಮಪಿ ದೈವತಂ । ಜಾತೋsಯಂ  ಮಾನುಷೇ ಲೋಕೇ ನರರೂಪೇಣ ಕೇಶವಃ । ಅಜೇಯಃ ಸರ್ವಲೋಕೇಷು ದೇವದಾನವಮಾನವೈಃ’ (ವಿಷ್ಣು ಪರ್ವಣಿ ೫೦. ೪೭-೪೯).

ತದೀರಿತಂ ನಿಶಮ್ಯ ತೇ ಪುನಃ ಸುತಪ್ತಚೇತಸಃ ।
ಬಭೂವುರೂಚಿರೇ ವಚಃ ಸುಗರ್ವಿತೋ ಹಿ ವಾಸವಃ ॥೧೭.೩೬॥

ಆ ದೂತ ಹೇಳಿದ ಮಾತನ್ನು ಕೇಳಿದ ಅವರೆಲ್ಲರೂ, ಬಹಳ ಸುತಪ್ತವಾದ ಮನಸುಳ್ಳವರಾಗಿ (ಸಿಟ್ಟುಗೊಂಡವರಾಗಿ). ‘ಇಂದ್ರನಿಗೆ ಬಹಳ ಗರ್ವ ಬಂದಿದೆ’  ಎಂದು ಹೇಳಿದರು.

ಪುರಾ ಬಿಭೇತಿ ನಃ ಸದಾ ಪ್ರತಿಪ್ರತಿ ಸ್ಮ ವಾಸವಃ ।
ಉತಾದ್ಯ ಕೃಷ್ಣಸಂಶ್ರಯಾದ್ ದೃಢಂ ವಿಭೀಷಯತ್ಯಸೌ ॥೧೭.೩೭॥

‘ಹಿಂದೆ ಇಂದ್ರನಿಗೆ ನಮ್ಮ ಕುರಿತಂತೆ  ಪ್ರತಿಯೊಂದು ವಿಷಯದಲ್ಲೂ ಭಯವಿತ್ತು. ಈಗಲಾದರೋ , ಕೃಷ್ಣನ ಆಶ್ರಯ ಇರುವುದರಿಂದ ನಿಶ್ಚಯವಾಗಿ ಆತ ನಮ್ಮನ್ನು ಭಯಪಡಿಸುತ್ತಿದ್ದಾನೆ.

ಅದೃಶ್ಯ ಏವ ದೇವರಾಡ್ ಯದಿ ಸ್ಮ ವಜ್ರಮುತ್ಸೃಜೇತ್ ।
ಭವೇಮ ಪೀಡಿತಾ ವಯಂ ವರಾದಮೃತ್ಯವೋsಪಿ ಹಿ ॥೧೭.೩೮॥

ಒಂದುವೇಳೆ ಇಂದ್ರನು ನಮಗಾರಿಗೂ ಕಾಣದೇ(ಅದೃಶ್ಯನಾಗಿಯೇ) ವಜ್ರವನ್ನು ಬಿಟ್ಟರೆ, ನಮಗೆ ಅದರಿಂದ  ಪೀಡೆಯುಂಟಾಗುತ್ತದೆ. ವರದಿಂದ ನಮಗೆ ಸಾವಿಲ್ಲದೇ ಹೋದರೂ ಕೂಡಾ ಸಂಕಟವಂತೂ ಉಂಟಾಗುತ್ತದೆ.

ಪುರಾ ದಿವಿಸ್ಥಿತಸ್ಯ ಚ ಪ್ರಮರ್ದ್ದನೇ ವಯಂ ಕ್ಷಮಾಃ ।
ಉತಾದ್ಯ ಯದ್ಯಮುಂ ವಯಂ ವ್ರಜೇಮ ಕೃಷ್ಣ ಏಷ್ಯತಿ ॥೧೭.೩೯॥

ಹಿಂದೆ ಆತ ಅಲ್ಲಿದ್ದರೂ(ಸ್ವರ್ಗದಲ್ಲಿದ್ದರೂ) ಕೂಡಾ,  ಅವನನ್ನು ತುಳಿಯಲು ನಾವು ಸಮರ್ಥರಾಗಿದ್ದೆವು.  ಆದರೆ ಈಗ  ಒಂದು ವೇಳೆ ನಾವು ಇವನಮೇಲೆ ಯುದ್ಧಕ್ಕೆಂದು ಹೊರಟರೆ ಕೃಷ್ಣ ಎದುರಾಗುತ್ತಾನೆ.  

ಅತೋsಭಿಷೇಚನಾದ್ ಯದೀಹ ಶಾರ್ಙ್ಗಿಣಃ ಶಚೀಪತಿಃ ।
ನ ವಜ್ರಮುತ್ಸೃಜೇತ್ ತದಾsಭಿಷೇಚಯಾಮ ತಂ ವಯಮ್ ॥೧೭.೪೦॥

ಹೀಗಾಗಿ, ಕೇವಲ ಶಾರ್ಙ್ಗಧಾರಿ ಶ್ರೀಕೃಷ್ಣನಿಗೆ ಅಭಿಷೇಕ ಮಾಡುವುದರಿಂದ ಇಂದ್ರನು ವಜ್ರವನ್ನು ಬಿಡುವುದಿಲ್ಲವಾದರೆ, ನಾವು ಕೃಷ್ಣನಿಗೆ ಅಭಿಷೇಕ ಮಾಡೋಣ.  


ಅತೋsನ್ಯಥಾ ದನುರ್ಯ್ಯಥಾ ವರಾದಮೃತ್ಯುಕೋsಪಿ ಸನ್ ।
ಸುರೇನ್ದ್ರವಜ್ರತಾಡಿತೋ ಬಭೂವ ಕುಕ್ಷಿಗಾಸ್ಯಯುಕ್ ॥೧೭.೪೧॥

ತಥೈವ ಕೃಷ್ಣಸಂಶ್ರಯಾತ್ ಸ ನಃ ಶಚೀಪತಿರ್ನ್ನಯೇತ್ ।
ಇತಿ ಸ್ಮ ನಿಶ್ಚಿತಾ ನೃಪಾನಯಾತಯನ್ತ ಶೌರಯೇ ॥೧೭.೪೨॥

ಒಂದುವೇಳೆ ಶ್ರೀಕೃಷ್ಣನಿಗೆ ನಾವು ಅಭಿಷೇಕ ಮಾಡದೇ ಇದ್ದರೆ, ಹೇಗೆ  ಧನು ಎಂಬ ದೈತ್ಯನು ವರದಿಂದ ಸಾವನ್ನು ಗೆದ್ದಿದ್ದರೂ ಕೂಡಾ  ಇಂದ್ರನ ವಜ್ರದಿಂದ ಹೊಡೆಯಲ್ಪಟ್ಟವನಾಗಿ ಹೊಟ್ಟೆಯೊಳಗಿರತಕ್ಕ ಮೋರೆಯುಳ್ಳವನಾದನೋ, ಹಾಗೆಯೇ, ಕೃಷ್ಣನ ಆಶ್ರಯದಿಂದ ಇಂದ್ರನು ನಮ್ಮನ್ನೂ ಕೂಡಾ ಆ ದಶೆಗೆ ತಳ್ಳಬಹುದು’.  ಈರೀತಿಯಾಗಿ ನಿಶ್ಚಯಿಸಿದ  ಜರಾಸಂಧಾದಿಗಳು ಶ್ರೀಕೃಷ್ಣನ ಅಭಿಷೇಕಕ್ಕಾಗಿ ರಾಜರುಗಳನ್ನು ಕಳುಹಿಸಿದರು. 

No comments:

Post a Comment