ಅಥಾsಹ ಭೀಷ್ಮಕಂ ಪ್ರಭುಃ ಸ್ವಯಂವರಃ ಕಿಲ ತ್ವಯಾ ।
ಅಭೀಪ್ಸಿತಃ
ಸುತಾಕೃತೇ ಶುಭಾಯ ತೇ ಭವೇನ್ನ ಸಃ ॥೧೭.೫೧॥
ತದನಂತರ ಸರ್ವಸಮರ್ಥನಾದ ಕೃಷ್ಣನು, ಭೀಷ್ಮಕನನ್ನು ಕುರಿತು ಮಾತನ್ನಾಡಿದನು: ‘ನೀನು ಮಗಳಾದ
ರುಗ್ಮಿಣಿಗೋಸ್ಕರ ಸ್ವಯಂವರವನ್ನು ನಡೆಸಬೇಕೆಂದು ನಿಶ್ಚಯಿಸಿರುವಿಯಷ್ಟೇ? ಆದರೆ ಇದು
ನಿನಗೆ ಶುಭವನ್ನು ತರಲಾರದು..
ಇಯಂ ರಮಾ ತವಾsತ್ಮಜಾ ಬಭೂವ ತಾಂ ಹರೇರ್ನ್ನಚ ।
ದದಾತಿ ಚೇತ್
ತದಾ ಪಿತಾ ನಿರಿನ್ದಿರೋ ವ್ರಜೇದಧಃ ॥೧೭.೫೨॥
‘ನಿನ್ನ ಮಗಳು ಸಾಕ್ಷಾತ್ ಲಕ್ಷ್ಮಿಯೇ ಆಗಿದ್ದಾಳೆ. ಅವಳನ್ನು ಪರಮಾತ್ಮನಿಗೆ ಕೊಡದಿದ್ದರೆ
ಅವಳ ತಂದೆಯು ಲಕ್ಷ್ಮಿಯನ್ನು ಕಳೆದುಕೊಂಡು ಅಧಃಪತನ ಹೊಂದಬೇಕಾಗುತ್ತದೆ.
ಹಿತಾಯ ಚೈತದೀರಿತಂ
ತವಾನ್ಯಥಾ ನ ಚಿನ್ತಯ ।
ನ
ಯೋಷಿದಿಚ್ಛಯಾ ತ್ವಹಂ ಬ್ರವೀಮಿ ಪಶ್ಯ ಯಾದೃಶಃ ॥೧೭.೫೩॥
ಉದೀರ್ಯ್ಯ
ಚೈವಮೀಶ್ವರಶ್ಚಕಾರ ಹಾsವಿರಾತ್ಮನಃ ।
ಸ ವಿಶ್ವರೂಪಮುತ್ತಮಂ
ವಿಸಙ್ಖ್ಯಶೀರ್ಷಬಾಹುಕಮ್ ॥೧೭.೫೪॥
ಇದನ್ನು ನಾನು ಕೇವಲ ನಿನ್ನ ಹಿತಕ್ಕಾಗಿ ಹೇಳಿದೆ. ನೀನು ಬೇರೆ ರೀತಿಯಾಗಿ ಚಿಂತಿಸಬೇಡ. ಹೆಣ್ಣಿನ
ಬಯಕೆಯಿಂದ ನಾನು ಈ ಮಾತನ್ನು ಹೇಳುತ್ತಿಲ್ಲ. ನನ್ನ
ಪಾಲಿಗೆ ನನ್ನನ್ನು ಸೇವಿಸುತ್ತಿರುವ ಯಾವ ರೀತಿಯ ಹೆಣ್ಣುಗಳಿದ್ದಾರೆ ಎನ್ನುವುದನ್ನು ನೋಡು’ ಎಂದು
ಹೇಳಿದ ಪರಮಾತ್ಮನು, ಎಣಿಸಲಾಗದಷ್ಟು ಬಾಹು-ಶಿರಸ್ಸುಗಳುಳ್ಳ, ಉತ್ಕೃಷ್ಟವಾದ ತನ್ನ ವಿಶ್ವರೂಪವನ್ನು ಭೀಷ್ಮಕನಿಗೆ ತೋರಿದ.
ಅನನ್ತತೇಜ
ಆತತಂ ವಿಸಙ್ಖ್ಯರೂಪಸಂಯುತಮ್ ।
ವಿಚಿತ್ರಮೌಲಿಕುಣ್ಡಲಾಙ್ಗದೋರುಹಾರನೂಪುರಮ್
॥೧೭.೫೫॥
ಜ್ವಲತ್ಸುಕೌಸ್ತುಭಪ್ರಭಾsಭಿಭಾಸಕಂ ಶುಭಾಮ್ಬರಮ್ ।
ಪ್ರಪಶ್ಯ
ಯಾದೃಶಾಃ ಸ್ತ್ರಿಯೋ ಮಮೇತ್ಯದರ್ಶಯಚ್ಛ್ರಿಯಮ್ ॥೧೭.೫೬॥
ಅನನ್ತರೂಪಿಣೀಂ
ಪರಾಂ ಮನುಷ್ಯದೃಷ್ಟಿತೋsಧಿಕಾಮ್ ।
ಸ್ವರುಗ್ಮಿಣೀತನೋರಪಿ
ವ್ಯದರ್ಶಯಚ್ಚ ದೇವತಾಃ ॥೧೭.೫೭॥
ಎಣೆಯಿರದ ತೇಜಸ್ಸಿನಿಂದ ಕೂಡಿರುವ, ಅಸಂಖ್ಯವಾದ ರೂಪದಿಂದ ಕೂಡಿರುವ, ವಿಚಿತ್ರವಾಗಿರುವ ಕಿರೀಟ, ಕುಣ್ಡಲ, ಬಾಹುಭೂಷಣ-ಹಾರ-ಕಾಲ್ಗೆಜ್ಜೆ
ಇವುಗಳಿಂದ ಕೂಡಿರುವ, ಕೌಸ್ತುಭವನ್ನೇ ಹೊಳೆಯುವಂತೆ ಮಾಡುತ್ತಿರುವ, ಶೋಭನವಾದ ಪೀತಾಂಬರಧಾರಿಯಾದ ತನ್ನ
ವಿಶ್ವರೂಪವನ್ನು ತೋರಿಸಿದ ಶ್ರೀಕೃಷ್ಣ, ‘ನನ್ನ ವಶದಲ್ಲಿ ಎಂತೆಂತಹ ಸ್ತ್ರೀಯರಿದ್ದಾರೆ ನೋಡು’ ಎಂದು ಶ್ರೀಲಕ್ಷ್ಮಿಯನ್ನೇ
ತೋರಿಸಿದ.
[ಹರಿವಂಶದಲ್ಲಿ, ಇದೇ ಪ್ರಸಂಗದಲ್ಲಿ ಒಂದು ಮಾತು ಬರುತ್ತದೆ: ‘ರುಗ್ಮಿಣಿಗಿಂತಲೂ ಸುಂದರವಾಗಿರುವ ಹೆಣ್ಣನ್ನು ಭೀಷ್ಮಕ
ಅಲ್ಲಿ ನೋಡಿದ’ ಎಂದು. ಇದರ
ತಾತ್ಪರ್ಯವನ್ನು ಆಚಾರ್ಯರು ಇಲ್ಲಿ ನೀಡಿದ್ದಾರೆ]
ಭಗವಂತ ತನ್ನ ವಿಶ್ವರೂಪದಲ್ಲಿ ಅನಂತರೂಪವುಳ್ಳ, ಶ್ರೇಷ್ಠಳಾಗಿರುವ
ರುಗ್ಮಿಣಿಯನ್ನೇ ತೋರಿಸಿರುವುದು. ಆದರೆ ಮನುಷ್ಯ ದರ್ಶನದಿಂದಾಗಿ ಭೀಷ್ಮಕನಿಗೆ ಅಲ್ಲಿ ಲಕ್ಷ್ಮಿ,
ರುಗ್ಮಿಣಿಗಿಂತಲೂ ಸುಂದರವಾಗಿ ಕಂಡಿರುವುದು. (ವಸ್ತುತಃ ಇಬ್ಬರೂ ಒಬ್ಬರೇ. ಎರಡನ್ನೂ ಒಂದೇ ಎಂದು
ನೋಡುವುದರಲ್ಲಿ ಮನುಷ್ಯ ದೃಷ್ಟಿಯಲ್ಲಿ ಎಡವಿರುವುದು ಅಷ್ಟೇ). ಹೀಗೆ ಶ್ರೀಕೃಷ್ಣ ತನ್ನವಳೇ ಆದ,
ರುಗ್ಮಿಣಿಗಿಂತಲೂ ಅಧಿಕಳಂತೆ ತೋರುವ ‘ಅವಳನ್ನೇ’ ತೋರಿಸಿದ. ಅಷ್ಟೇ ಅಲ್ಲದೆ, ತನ್ನ ಕೈ-ಕಾಲುಗಳಲ್ಲಿ
ಆವರಿಸಿಕೊಂಡಿರುವ, ಆಶ್ರಯಪಡೆದಿರುವ ದೇವತೆಗಳನ್ನೂ ಕೃಷ್ಣ ಭೀಷ್ಮಕನಿಗೆ ತೋರಿಸಿದ.
ತದದ್ಭುತಂ
ಸಮೀಕ್ಷ್ಯ ತು ಪ್ರಭೀತ ಆಶು ಭೀಷ್ಮಕಃ ।
ಪಪಾತ
ಪಾದಯೋರ್ವಿಭೋಃ ಕರೋಮಿ ತತ್ ತಥೇತಿ ಚ ॥೧೭.೫೮॥
ಈ ಅದ್ಭುತವನ್ನು ನೋಡಿದ ಭೀಷ್ಮಕನು ಭಯಗೊಂಡು, ಪರಮಾತ್ಮನ ಪಾದಗಳಲ್ಲಿ ಬಿದ್ದ. ‘ಒಪ್ಪಿದೆ, ನೀನು
ಹೇಳಿದಂತೆಯೇ ಮಾಡುತ್ತೇನೆ’ ಎಂದ.
ಪುನಶ್ಚ
ವಿಶ್ವರೂಪತಾಂ ಪಿಧಾಯ ಪದ್ಮಲೋಚನಃ ।
ಜಗಾಮ
ಪಕ್ಷಿವಾಹನಃ ಪುರೀಂ ಸ್ವಬಾಹುಪಾಲಿತಾಮ್ ॥೧೭.೫೯॥
ತದನಂತರ ತಾವರೆಯ ಕಣ್ಗಳುಳ್ಳ ಪರಮಾತ್ಮನು ತನ್ನ ವಿಶ್ವರೂಪವನ್ನು ಮುಚ್ಚಿ, ಪಕ್ಷಿವಾಹನನಾಗಿ,
ತನ್ನ ಬಾಹುವಿನಿಂದ ಪಾಲಿತವಾದ ಮಧುರಾಪಟ್ಟಣವನ್ನು ಕುರಿತು ತೆರಳಿದ.
No comments:
Post a Comment