(ಜರಾಸಂಧ ಏಕೆ ಶ್ರೀಕೃಷ್ಣನಿಗೆ ಅಭಿಷೇಕ ಮಾಡಲು ಹೋಗಲಿಲ್ಲ? ಜರಾಸಂಧ ಹೋಗದೇ
ಇದ್ದರೂ ಕೂಡಾ ಇಂದ್ರನೇಕೆ ಕೋಪಿಸಿಕೊಳ್ಳಲಿಲ್ಲ ಎಂದರೆ: )
ಸಮಸ್ತಶೋ
ಜರಾಸುತಾದಿಭಿಃ ಕೃತೇsಭಿಷೇಚನೇ ।
ಅತೀವ ಭಗ್ನಮಾನಕಾನ್
ನಚಾನುಯಾತಿ ಕಶ್ಚನ ॥೧೭.೪೩॥
‘ಒಂದು ವೇಳೆ ಜರಾಸಂಧಾದಿಗಳೆಲ್ಲರೂ ಸೇರಿ ಶ್ರೀಕೃಷ್ಣನ ಅಭಿಷೇಕ ಮಾಡಿದರೆ, ಅವರು ತಮ್ಮ
ಅಭಿಮಾನವನ್ನು ಕಳೆದುಕೊಳ್ಳುತ್ತಾರೆ ಮತ್ತು ಆಗ ಯಾರೂ ಕೂಡಾ ಅವರನ್ನು ಅನುಸರಿಸುವುದಿಲ್ಲ.
ಸಮಾಶ್ರಯಂ ಚ
ಕೇಶವಂ ತದೈವ ಜೀವನಾರ್ತ್ಥಿನಃ ।
ಪ್ರಕುರ್ಯ್ಯುರಾಸುರಾ ಅಪೀತಿ ದೇವಕಾರ್ಯ್ಯಸಙ್ಕ್ಷಯಃ ॥೧೭.೪೪॥
ಹೀಗಾದರೆ ಬದುಕಬೇಕು ಎಂದು ಬಯಸುವ ಎಲ್ಲಾ ಅಸುರ ಸ್ವಭಾವದ ರಾಜರುಗಳು ಕೃಷ್ಣನನ್ನೇ
ಆಶ್ರಯಿಸಿಯಾರು. ಹೀಗಾದರೆ ದೇವತಾಕಾರ್ಯದ ನಾಶವಾಗುತ್ತದೆ’.
ಇತೀಕ್ಷ್ಯ
ಪಾಕಶಾಸನೋsವದಜ್ಜರಾಸುತಾದಿಕಾನ್ ।
ಸರುಗ್ಮಿಚೇದಿಸಾಲ್ವಪೋ
ನ ಯಾತು ಮಾಗಧೋ ಹರಿಮ್ ॥೧೭.೪೫॥
ಈರೀತಿಯಾಗಿ ಚಿಂತಿಸಿದ ಇಂದ್ರನು, ಜರಾಸಂಧಾದಿಗಳನ್ನು ಕುರಿತು ‘ರುಗ್ಮಿ, ಚೇದಿ(ಶಿಶುಪಾಲ),
ಸಾಲ್ವ, ಇವರಿಂದ ಕೂಡಿಕೊಂಡ ಜರಾಸಂಧನು ಪರಮಾತ್ಮನ ಬಳಿ ಹೋಗುವುದು ಬೇಡ’ ಎನ್ನುವ ಆದೇಶವನ್ನಿತ್ತನು.
ತತಸ್ತು ತಾನ್
ವಿನಾsಪರೇsಧಿರಾಜರಾಜ ಇತ್ಯಮುಮ್ ।
ತದಾsಭಿಷೇಕ್ತುಮುದ್ಯತಾ ನೃಪಾಃ ಸುರೇಶಶಾಸನಾತ್ ॥೧೭.೪೬॥
ಆ ಕಾರಣದಿಂದ, ಇಂದ್ರನ ಶಾಸನದಂತೆ ಈ ನಾಲ್ಕು ಜನರನ್ನು ಬಿಟ್ಟು ಉಳಿದ ಎಲ್ಲರೂ ಕೂಡಾ, ‘ಚಕ್ರವರ್ತಿ’
ಎಂದು ಶ್ರೀಕೃಷ್ಣನನ್ನು ಅಭಿಷೇಕ ಮಾಡಲು ಸಿದ್ಧರಾದರು.
ಹರಿವಂಶದಲ್ಲಿ (ವಿಷ್ಣುಪರ್ವ ೫೦.೫೬) ಇಂದ್ರನ ಶಾಸನದ ವಿವರ ಕಾಣಸಿಗುತ್ತದೆ: ಜರಾಸಂಧಶ್ಚ
ಚೈಧ್ಯಶ್ಚ ರುಗ್ಮೀ ಚೈವ ಮಹಾರಥಃ । ಸಾಲ್ವಃ ಸೌಭಪತಿಶ್ಚೈವ ಚತ್ವಾರೋ ರಾಜಸತ್ತಮಾಃ । ರಙ್ಗಸ್ಯಾಶೂನ್ಯತಾಹೇತೋಸ್ತಿಷ್ಠಂತ್ವತ್ರೈವ
ಪಾರ್ಥಿವಾಃ ‘ಎಲ್ಲರೂ ಹೋದರೆ ರಾಜಸಭೆಯಲ್ಲಿ ಯಾರೂ ಇಲ್ಲವಾಗುತ್ತಾರೆ. ಹಾಗಾಗಿ ಈ ನಾಲ್ವರು
ಇಲ್ಲೇ ಇರಲಿ’ ಎನ್ನುತ್ತಾನೆ ಇಂದ್ರ.
ಅತಃ ಶಚೀಪತಿರ್ನ್ನಿಜಂ
ವರಾಸನಂ ಹರೇರದಾತ್ ।
ವಿವೇಶ ತತ್ರ
ಕೇಶವೋ ನಭಸ್ತಳಾವತಾರಿತೇ ॥೧೭.೪೭॥
ತದನಂತರ ಇಂದ್ರನು ಶ್ರೀಕೃಷ್ಣನಿಗೆ ತನ್ನ ಶ್ರೇಷ್ಠವಾದ ಆಸನವನ್ನು ಕಳುಹಿಸಿಕೊಟ್ಟನು.
ಆಕಾಶದಿಂದ ಇಳಿದುಬಂದ ಆ ಉತ್ಕೃಷ್ಟವಾದ ಆಸನದಲ್ಲಿ ಶ್ರೀಕೃಷ್ಣನು ಕುಳಿತನು.
ಕರೇ
ಪ್ರಗೃಹ್ಯ ಕೇಶವೋ ನ್ಯವೇಶಯತ್ ಸಹಾsಸನೇ ।
ಪತತ್ರಿಪುಙ್ಗವಂ
ಚ ತೌ ಸ ಭೀಷ್ಮಕಾನುಜೌ ಪ್ರಭುಃ ॥೧೭.೪೮॥
ಭೀಷ್ಮಕನ ಅನುಜರಾದ ಕ್ರಥ ಹಾಗೂ ಕೈಶಿಕರು ಪರಮಾತ್ಮನ ಹಾಗೂ ಗರುಡನ ಕೈಯನ್ನು ಹಿಡಿದು,
ಅವರನ್ನು ಶ್ರೇಷ್ಠವಾದ ಆಸನದಲ್ಲಿ ಕುಳ್ಳಿರಿಸಿದರು.
ಅಥಾಖಿಲಾ
ನರೇಶ್ವರಾ ಮುನೀನ್ದ್ರಸಂಯುತಾ ಹರಿಮ್ ।
ಸುಶಾತಕೌಮ್ಭಕುಮ್ಭಕೈಃ
ಪ್ರಚಕ್ರುರಾಭಿಷೇಕಿಣಮ್ ॥೧೭.೪೯॥
ತದನಂತರ ಎಲ್ಲಾ ರಾಜರೂ ಕೂಡಾ, ಮುನೀನ್ದ್ರರಿಂದ ಕೂಡಿಕೊಂಡು, ಪರಮಾತ್ಮನನ್ನು, ಬಂಗಾರದ
ಕೊಡಗಗಳಲ್ಲಿ ತುಂಬಿರುವ ಶ್ರೇಷ್ಠ ಜಲದಿಂದ ಅಭಿಷೇಕ ಮಾಡಿದರು.
ವಿರಿಞ್ಚಶರ್ವಪೂರ್ವಕೈರಭಿಷ್ಟುತಃ
ಸುರಾದಿಭಿಃ ।
ಸಮಸ್ತದೇವಗಾಯಕೈಃ
ಪ್ರಗೀತ ಆಸ ಕೇಶವಃ ॥೧೭.೫೦॥
ಬ್ರಹ್ಮ-ರುದ್ರ ಮೊದಲಾದ ಶ್ರೇಷ್ಠ ದೇವತೆಗಳಿಂದಲೂ ಕೂಡಿರುವ, ಸಮಸ್ತ ದೇವ-ಗಂಧರ್ವರಿಂದ
ಸ್ತೋತ್ರಮಾಡಲ್ಪಟ್ಟವನಾದ ಶ್ರೀಕೃಷ್ಣ ವೈಭವದಿಂದ ಆಸೀನನಾಗಿದ್ದ.
No comments:
Post a Comment