ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, April 19, 2020

Mahabharata Tatparya Nirnaya Kannada 1778_1783


ಯತೋ ಹಿ ಕೃಷ್ಣಸಂಶ್ರಯಾದ್ ಬತಾಪಹಾಸಿತಾ ವಯಮ್ ।
ಇತಿ ಬ್ರುವನ್ ವನಂ ಯಯೌ ತಪಶ್ಚ ಶೈವಮಾಚರತ್ ॥೧೭.೭೮॥

‘ಕೃಷ್ಣನನ್ನೂ ಸೇರಿಸಿ ಇಡೀ ಯಾದವ ಕುಲವನ್ನೇ ಇಲ್ಲವಾಗಿಸುತ್ತೇನೆ ಎನ್ನುವ ಪ್ರತಿಜ್ಞೆಮಾಡಿದ ಗರ್ಗಾಚಾರ್ಯರು, ‘ಕೃಷ್ಣನ ಸಂಶ್ರಯ ಇದೆ ಎಂದು ನನ್ನನ್ನು ಅಪಹಾಸ್ಯ ಮಾಡಿದಿರಷ್ಟೇ’ ಎಂದು ಹೇಳುತ್ತಾ ಕಾಡಿಗೆ ತೆರಳಿದರು  ಮತ್ತು ಶಿವನನ್ನು ಕುರಿತು ತಪಸ್ಸನ್ನಾಚರಿಸಿದರು.

ಸ ಚೂರ್ಣ್ಣಮಾಯಸಂ ತ್ವದನ್ ದದರ್ಶ ಚಾಬ್ದತಃ ಶಿವಮ್ ।
ವರಂ ತತೋsಭಿಪೇದಿವಾನ್ ಸುತಂ ಹರೇರಭಾವದಮ್ ॥೧೮.೭೯॥

ಗರ್ಗಾಚಾರ್ಯರು ಲೋಹಚೂರ್ಣವನ್ನು ತಿನ್ನುತ್ತಾ, ಒಂದು ವರ್ಷದ ನಂತರ ಶಿವನನ್ನು ಕಂಡರು ಮತ್ತು  ಅವನಿಂದ ಶ್ರೀಕೃಷ್ಣನ ಅಭಾವವನ್ನು ಉಂಟುಮಾಡುವ ಮಗನನ್ನು ವರವಾಗಿ ಪಡೆದರು.

[ಹರಿವಂಶದಲ್ಲಿ ಈ ಕುರಿತಾದ ವಿವರ ಕಾಣಸಿಗುತ್ತದೆ:   ಮಹಾಮುನಿಶ್ಚಾಯಸಚೂರ್ಣಮಶ್ನನ್ನುಪಸ್ತಿತೋ  ದ್ವಾದಶವಾರ್ಷಿಕಂ ವ್ರತಮ್ । ......... ತಪೋಬಲಾದ್ ಗರ್ಗಮುನೇರ್ಮಹಾತ್ಮನೋ  ವರಪ್ರಭಾವಾಚ್ಛಕಲೇಂದುಮೌಲಿನಃ । ಭವಂತಮಾಸಾದ್ಯ ಜನಾರ್ದನೋ ಹಿಮಂ ವಿಲೀಯತೇ  ಭಾಸ್ಕರರಶ್ಮಿನಾ ಯಥಾ’ (ವಿಷ್ಣುಪರ್ವಣಿ ೫೩.೫೪). ಅಲಿಪ್ಸಂಸ್ತು ಸ್ತ್ರಿಯಂ ಚೈವ ತಪಸ್ತೇಪೇ ಸುದಾರುಣಮ್ ।  ತತೋ ದ್ವಾದಶವರ್ಷಾಣಿ ಸೋsಯಶ್ಚೂರ್ಣಮಭಕ್ಷಯತ್’ (೫೭.೯).   ಇಲ್ಲಿ ಗರ್ಗಾಚಾರ್ಯರು ಹನ್ನೆರಡು ವರ್ಷ ತಪಸ್ಸು ಮಾಡಿದರು  ಎಂದು ಹೇಳಿದ್ದಾರೆ. ಆದರೆ ಇಲ್ಲಿ ವಾರ್ಷಿಕ ಎನ್ನುವುದು  ಕೇವಲ ಔಪಚಾರಿಕ. ಒಂದು ತಿಂಗಳನ್ನು ಒಂದು ವರ್ಷ ಎಂದು ಹೇಳಿದ್ದಾರೆಯೇ ವಿನಃ ಅದು ಹನ್ನೆರಡು ವರ್ಷವಲ್ಲ. ಇದಕ್ಕೆ ಪೂರಕವಾದ ಅಂಶವನ್ನು ನಾವು ವಿಷ್ಣುಪುರಾಣದಲ್ಲಿ(೫.೨೩.೩) ಕಾಣಬಹುದು:   ‘ಆರಾಧಯನ್ ಮಹಾದೇವಂ ಲೋಹಚೂರ್ಣಮಭಕ್ಷಯತ್  । ದದೌ ವರಂ ಚ ತುಷ್ಟೋsಸ್ಮೈ ವರ್ಷೇ ತು ದ್ವಾದಶೇ ಹರಃ

[ಶ್ರೀಕೃಷ್ಣನಿಗೆ ನಾಮಕರಣ ಮಾಡಿದ, ಕೃಷ್ಣಭಕ್ತರಾದ ಗರ್ಗಾಚಾರ್ಯರು ಏಕೆ ಈರೀತಿ ಮಾಡಿದರು ಎಂದರೆ:]

ಸ ವಿಷ್ಣುದೈವತೋsಪಿ ಸನ್ ಪ್ರವಿಷ್ಟ ಉಲ್ಬಣಾಸುರೈಃ ।
ವ್ಯಧಾದ್ಧರೇಃ ಪ್ರತೀಪಕಂ ವ್ರತಂ ಚ ನೈಷ್ಠಿಕಂ ಜಹೌ ॥೧೭.೮೦॥

ಗರ್ಗಾಚಾರ್ಯರು ವಿಷ್ಣುವನ್ನೇ ದೇವತೆಯನ್ನಾಗಿ ಪಡೆದವರಾದರೂ ಕೂಡಾ, ಭಯಂಕರವಾದ ಅಸುರರಿಂದ ಪ್ರವೇಶಿಸಿದವರಾಗಿ(ಪ್ರವಿಷ್ಟರಾದವರಾಗಿ) ಪರಮಾತ್ಮನಿಗೆ ವಿರುದ್ಧವನ್ನು ಮಾಡಿದರು. ತನ್ನ ನೈಷ್ಠಿಕ ವ್ರತವನ್ನು ಬಿಟ್ಟರು.

ತಮಾರ ಚಾsಸುರಾಪ್ಸರಾ ಬಲಿಷ್ಠಪುತ್ರಕಾಮ್ಯಯಾ ।
ಪ್ರವಿಶ್ಯ ಗೋಪಿಕಾಙ್ಗನಾಸಮೂಹಮದ್ಧ್ಯಮುಲ್ಬಣಾ ॥೧೭.೮೧॥

ಒಬ್ಬಳು ಅಸುರ ಸಂಬಂಧಿಯಾದ, ಕ್ರೂರಸ್ವಭಾವದ ಅಪ್ಸರೆ ತನಗೆ  ಬಲಿಷ್ಠನಾದ ಮಗ ಬೇಕು ಎನ್ನುವ ಬಯಕೆಯಿಂದ, ಗೋಪಿಕೆಯರ ಸಮೂಹದಲ್ಲಿ ಪ್ರವೇಶಿಸಿ, ಆ ಗರ್ಗಾಚಾರ್ಯರನ್ನು ಹೊಂದಿದಳು.
[ಅಪ್ಸರೆಯರು ಮತ್ತು ಗಂಧರ್ವರಲ್ಲಿ  ದೈವಿಕರು ಮತ್ತು ಆಸುರರು ಎಂಬ ವಿಭಾಗ ಇರುತ್ತದೆ. ಉದಾಹರಣೆಗೆ  ದ್ರಮಿಳ ಎನ್ನುವ ದೈತ್ಯಗಂಧರ್ವ. ಅವನಿಂದಾಗಿ ಉಗ್ರಸೇನನ ಹೆಂಡತಿಯಲ್ಲಿ ರಾಕ್ಷಸನಾದ ಕಂಸ ಹುಟ್ಟಿದ. ಹಾಗೇ, ಇಲ್ಲಿ  ಈಕೆ ಅಸುರ ಸ್ವಭಾವದ ಅಪ್ಸರೆ. ಈಕೆ ಗೋಪಿಕೆಯರ ಸಮೂಹದಲ್ಲಿದ್ದು ಗರ್ಗಾಚಾರ್ಯರನ್ನು ಸೇರಿ ಮಗನನ್ನು ಪಡೆಯುತ್ತಾಳೆ ].

[ಹರಿವಂಶಪರ್ವದಲ್ಲಿ (೩೫.೧೪-೧೫) ಈ ಕುರಿತ ವಿವರಣೆ ಕಾಣಸಿಗುತ್ತದೆ: ಗೋಪಕನ್ಯಾಮುಪಾದಾಯ ಮೈಥುನಾಯೋಪಚಕ್ರಮೇ । ಗೋಪಾಲೀ ತ್ವಪ್ಸರಾಸ್ತಸ್ಯ ಗೋಪಸ್ತ್ರೀವೇಷಧಾರಿಣೀ । (ಗೋಪಸ್ತ್ರೀ ವೇಷಧಾರಿಣಿಯಾಗಿ ಆಕೆ ಮೈಥುನಕ್ಕಾಗಿ ಬಂದಳು) ಧಾರಯಾಮಾಸ ಗರ್ಗಸ್ಯ ಗರ್ಭಂ ದುರ್ಧರಮಚ್ಯುತಮ್’ (ಅತ್ಯಂತ ಭಯಂಕರವಾದ ಗರ್ಭವನ್ನು ಆಕೆ ಧರಿಸಿದಳು).
ಇನ್ನು ವಿಷ್ಣುಪರ್ವದಲ್ಲೂ(೫೭.೧೨-೧೪) ಈ ಕುರಿತ ವಿವರಣೆ ಕಾಣಸಿಗುತ್ತದೆ: ‘ತತಃ ಶುಶ್ರಾವ ತಂ ರಾಜಾ ಯವನಾಧಿಪತಿರ್ವರಂ । ಪುತ್ರಪ್ರಸವಜಂ ದೈವಾದಪುತ್ರಃ ಪುತ್ರಕಾಮಿತಾ । ಸ ನೃಪಸ್ತಮುಪಾನಾಯ್ಯ ಸಾಂತ್ವಯಿತ್ವಾ  ದ್ವಿಜೋತ್ತಮಮ್ । ತಂ ಘೋಷಮಧ್ಯೇ ಯವನೋ ಗೋಪಾಸ್ತ್ರೀಷು ಸಮಾಸೃಜತ್ ।  (ಮಗ ಬೇಕು ಎನ್ನುವ ಒಬ್ಬ ರಾಜನಿದ್ದ. ಅವನಿಗೆ ಮಕ್ಕಳಿರಲಿಲ್ಲ. ಅದರಿಂದಾಗಿ ಅವನು ಒಬ್ಬ ಅಸುರಾಪ್ಸರೆಯನ್ನು ಗೋಪಿಕೆಯರ ಮಧ್ಯದಲ್ಲಿ ಕಳುಹಿಸಿ, ಅವಳ ಮೂಲಕ ಗರ್ಗನಿಂದ ಮಗನನ್ನು ಪಡೆಯುವ ಹಂಚಿಕೆಯನ್ನು ಹಾಕಿದ. ಅವನೇ ಯವನ[1] ರಾಜ). ಗೋಪಾಲಿ ತ್ವಪ್ಸರಾಸ್ತತ್ರ  ಗೋಪಸ್ತ್ರೀವೇಷಧಾರಿಣಿ । ಧಾರಯಾಮಾಸ ಗರ್ಗಸ್ಯ ಗರ್ಭಂ ದುರ್ಧರಮಚ್ಯುತಮ್ ।  ಮಾನುಷ್ಯಾಂ ಗರ್ಗಭಾರ್ಯಾಯಾಂ  ನಿಯೋಗಾಚ್ಛೂಲಪಾಣಿನಃ । ಸ ಕಾಲಯವನೋ  ನಾಮ ಜಜ್ಞೇ ಶೂರೋ ಮಹಾಬಲಃ’    

ಸ ಯಾವನೇನ ಭೂಭೃತಾ ಹಿ ಗೋಪಿಕಾಭಿರರ್ಚ್ಚಿತಃ ।
ಅಪುತ್ರಕೇಣ ಜಾನತಾ ಮುನೇರ್ಮ್ಮನೋsನುಚಿನ್ತಿತಮ್ ॥೧೭.೮೨॥

ಗರ್ಗಾಚಾರ್ಯರ ಮನಸ್ಸಿನ ಚಿಂತನೆಯನ್ನು ತಿಳಿದವನಾದ  ಯವನರಾಜನಿಂದ,  ಹಾಗೂ  ಗೋಪಿಕೆಯರಿಂದಲೂ ಕೂಡಾ ಗರ್ಗಾಚಾರ್ಯರು ಅರ್ಚಿತರಾದರು.

ಸ ಚಾಪ್ಸರಸ್ತನೌ ಸುತಂ ನಿಷಿಚ್ಯ ಯಾವನಾಯ ಚ ।
ದದೌ ವಿಮೋಹಿತಃ ಕ್ರುಧಾ ಕಿಮೇತದೀಶ ವೈರಿಣಃ ॥೧೭.೮೩॥

ಅಪ್ಸರೆಯನ್ನು ಸಂಭೋಗಿಸಿ ಮಗನನ್ನು ಪಡೆದ ಗರ್ಗಾಚಾರ್ಯರು ತನ್ನನ್ನು ಅರ್ಚಿಸಿದ ಯವನನಿಗೆ, ಸಿಟ್ಟಿನಿಂದ ಮೋಹಿತನಾಗಿ ಆ ಮಗುವನ್ನು ಕೊಟ್ಟರು. ಅಸುರಾವೇಶದಿಂದ, ಕೃಷ್ಣ ಹಾಗೂ ಯಾದವರ ಮೇಲೆ ವೈರತ್ವವನ್ನು ಸಾಧಿಸುತ್ತಿರುವ ಗರ್ಗಾಚಾರ್ಯ  ಈರೀತಿ ಮಾಡುವುದರಲ್ಲೇನು ಆಶ್ಚರ್ಯ?




[1] ಪ್ರಾಯಃ ಇಲ್ಲಿ ಹೇಳುವ ಯವನ ದೇಶ ಇಂದಿನ ದಕ್ಷಿಣ ಆಫ್ರಿಕ. ನಿಶ್ಚಿತವಾಗಿ ತಿಳಿದಿಲ್ಲ. ಆದರೆ ಅನೇಕರು ಹಾಗೆ ಹೇಳುತ್ತಾರೆ.

Thursday, April 16, 2020

Mahabharata Tatparya Nirnaya Kannada 1770_1777



ಅಯಂ ಹಿ ದತ್ತಪುತ್ರಕೋ ಮ ಔರಸಾದ್ ವಿಶಿಷ್ಯತೇ ।
ಅತೋ ನಿವೇಶ್ಯ ಏಷ ಮೇ ಸುರೂಪಿಣೀ ಚ ರುಗ್ಮಿಣೀ ॥೧೭.೭೦॥

ಮುಂದುವರಿದು ಜರಾಸಂಧ ಹೇಳುತ್ತಾನೆ: ‘ಇವನು(ಶಿಶುಪಾಲ) ನನ್ನ ಪುತ್ರ ಸಮಾನ. ನನ್ನ ಸಾಕು ಮಗನೀತ. ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗನಿಗಿಂತಲೂ ನನಗೆ ಇವನೇ ಮಿಗಿಲು. ಆ ಕಾರಣದಿಂದ ಸುರೂಪಿಣಿಯಾದ  ರುಗ್ಮಿಣಿಯು  ಇವನನ್ನು ಮದುವೆಯಾಗಬೇಕು’.
[ಹರಿವಂಶದಲ್ಲಿ(ವಿಷ್ಣುಪರ್ವಣಿ ೫೯.೨೪) ಈ ಕುರಿತಾದ ವಿವರಣೆ ಕಾಣಸಿಗುತ್ತದೆ: ‘ ಜ್ಞಾತೇಃ  ಸಮಾನವಂಶಸ್ಯ ಸುನೀಥಂ ಪ್ರದದೌ  ಸುತಮ್ । ಜರಾಸಂಧಃ ಸ್ವಸುತವದ್ ದದರ್ಶೈನಂ  ಜುಗೋಪ ಚ (ಜರಾಸಂಧ ಶಿಶುಪಾಲನನ್ನು ತನ್ನ ಸ್ವಂತ ಮಗ ಎಂಬಂತೆ ಕಾಪಾಡಿದ್ದ)]

ಶಿವಾಗಮೇಷು ಶಿಷ್ಯಕಾಃ ಸರುಗ್ಮಿಸಾಲ್ವಪೌಣ್ಡ್ರಕಾಃ ।
ಮಮಾಖಿಲಾ ನೃಪಾಸ್ತತಃ ಕುರುಧ್ವಮೇತದೇವ ಮೇ ॥೧೭.೭೧॥

ರುಗ್ಮಿ, ಸಾಲ್ವ,  ಪೌಣ್ಡ್ರ, ಇವರಿಂದ ಕೂಡಿದ ಸಮಸ್ತ ರಾಜರೂ ಶೈವಾಗಮದಲ್ಲಿ ನನ್ನ ಶಿಷ್ಯರು. ಆದ್ದರಿಂದ ನನಗೆ  ಗುರುದಕ್ಷಿಣೆಯಾಗಿ ನೀವು ಇದನ್ನೇ ಮಾಡಿರಿ (ನನ್ನ ಈ ಅಭೀಷ್ಠವನ್ನು ನೀವು ಪೂರೈಸಿ):

ಇತೀರಿತೇ ತು ಸೌಭರಾಡ್ ಜಗಾದ ರುಗ್ಮಿಸಂವಿದಾ ।
ಸ್ವಯಂವರೋ ನಿವರ್ತ್ತಿತಃ ಸ್ವಸಾರಮೇಷ ದಾಸ್ಯತಿ ॥೧೭.೭೨॥

ಈರೀತಿಯಾಗಿ ಜರಾಸಂಧ ನುಡಿಯಲು,  ಸಾಲ್ವನು ಹೇಳುತ್ತಾನೆ:  ‘ರುಗ್ಮಿಯ ಅನುಮತಿಯಂತೆ  ‘ಸ್ವಯಂವರ ಬಿಡಲ್ಪಟ್ಟಿದೆ. ಇವನಾದರೋ(ರುಗ್ಮಿಯು) ತನ್ನ ತಂಗಿಯನ್ನು ಶಿಶುಪಾಲನಿಗೆ ಕೊಡುತ್ತಿದ್ದಾನೆ ಅಷ್ಟೇ. (ಸ್ವಯಂವರ ನಡೆಯುವುದಿಲ್ಲ. ನೇರವಾಗಿ ರುಗ್ಮಿ ತನ್ನ ತಂಗಿಯನ್ನು ಶಿಶುಪಾಲನಿಗೆ ಮದುವೆ ಮಾಡಿ ಕೊಡಲಿದ್ದಾನೆ ಅಷ್ಟೇ)


ನಚಾತಿವರ್ತ್ತಿತುಂ ಕ್ಷಮಃ ಪಿತಾsಸ್ಯ ಚೇದಿಪಾಯ ತಾಮ್ ।
ಪ್ರದಾತುಕಾಮಮಾತ್ಮಜಂ ವಯೋಗತಸ್ತಥಾsಬಲಃ ॥೧೭.೭೩॥

ತಂಗಿಯನ್ನು ಶಿಶುಪಾಲನಿಗೆ ಕೊಡಲು ಬಯಸುವ ತನ್ನ ಮಗನನ್ನು ಈ ವಯಸ್ಸಾಗಿರುವ, ದುರ್ಬಲನಾದ ಭೀಷ್ಮಕನು ಮೀರಲಾಗುವುದಿಲ್ಲ.

ಸ್ವಯಂ ತು ಕೃಷ್ಣ ಏತ್ಯ ನೋ ವಿಜಿತ್ಯ ಕನ್ಯಕಾಂ ಹರೇತ್ ।
ತತೋsಸ್ಯ ಪೂರ್ವಮೇವ ನೋ ಹ್ಯಭಾವತಾ ಕೃತಾ ಶುಭಾ ॥೧೭.೭೪॥

ಆದರೆ ಕೃಷ್ಣನು ತಾನೇ ಬಂದು, ನಮ್ಮೆಲ್ಲರನ್ನು ಗೆದ್ದು, ಕನ್ಯೆಯನ್ನು ಅಪಹರಿಸಿಯಾನು. ಆ ಕಾರಣದಿಂದ ಅದಕ್ಕೂ ಮೊದಲು ನಾವು ಕೃಷ್ಣನನ್ನು ಇಲ್ಲವಾಗಿಸಬೇಕು.

[ಹೇಗೆ ಎಂದರೆ: ಅದಕ್ಕೊಂದು ಉಪಾಯವನ್ನು ಹೇಳುತ್ತಾನೆ ಸಾಲ್ವ: ]

ಉಪಾಯ ಏಷ ಚಿನ್ತಿತೋ ಮಯಾsತ್ರ ಮಾಗಧೇಶ್ವರ ।
ಮುನಿಂ ಹಿ ಗರ್ಗ್ಗನಾಮಕಂ ಹ್ಯಮುಷ್ಯ ಸಾಲ ಆಕ್ಷಿಪತ್ ॥೧೭.೭೫॥

ಮಾಗದೇಶ್ವರ, ಈ ಉಪಾಯವು ನನ್ನಿಂದ ಚಿಂತಿಸಲ್ಪಟ್ಟಿದೆ: (ಎಂದು ಹಿಂದೆ ನಡೆದ ಘಟನೆಯೊಂದನ್ನು ಉಲ್ಲೇಖಿಸುತ್ತಾನೆ).  ಗರ್ಗ ಎಂಬ ಹೆಸರಿನ ಮುನಿಯನ್ನು ಒಮ್ಮೆ ಅವನ ಹೆಂಡತಿಯ ತಮ್ಮನು ನಿಂದಿಸಿ ಮಾತನಾಡಿದ.

ಯದಾsಸ್ಯ ಷಣ್ಡತೋದಿತಾ ಮುನೇಃ ಪುರೋಹಿತಸ್ಯ ಚ ।
ಪರೇಣ ವೃಷ್ಣಯೋsಹಸಂಶ್ಚುಕೋಪ ಗರ್ಗ್ಗ ಏಷು ಹ ॥೧೭.೭೬॥

ಯಾವಾಗ ಅವನು ಇವನನ್ನು ಷಣ್ಡ ಎಂದು ಬೈದನೋ,  ಆಗ ಅಲ್ಲಿದ್ದ ಯಾದವರೆಲ್ಲಾ ಜೋರಾಗಿ ನಕ್ಕರು. ಆಗ  ಗರ್ಗನಿಗೆ ಸಿಟ್ಟು ಬಂದಿತು.

[ಹರಿವಂಶದಲ್ಲಿ ಈ ಘಟನೆಯ ಕುರಿತಾದ ವಿವರ ಕಾಣಸಿಗುತ್ತದೆ: ವೃಷ್ಣೀನಾಮನ್ಧಕಾನಾಂ    ಗುರುರ್ಗರ್ಗೋ  ಮಹಾಮನಾಃ । ಬ್ರಹ್ಮಚಾರೀ ಪುರಾ ಭೂತ್ವಾ ನ ಸ್ಮ ದಾರಾನ್ ಸ ವಿನ್ದತಿ । ತಥಾಹಿ ವರ್ತಮಾನಂ  ತಮೂರ್ಧ್ವರೇತಸಮವ್ಯಯಮ್  । ಸ್ಯಾಲೋsಭಿಶಸ್ತವಾನ್ ಗರ್ಗಮಪುಮಾನಿತಿ ಭೂಪತೇ’ (ವಿಷ್ಣುಪರ್ವಣಿ ೫೭.೭-೮)   ಗರ್ಗಂ ಗೊಷ್ಠ್ಯಾಂ ದ್ವಿಜಂ ಸ್ಯಾಲಃ  ಷಣ್ಡ ಇತ್ಯುಕ್ತವಾನ್ ದ್ವಿಜ । ಯದೂನಾಂ ಸನ್ನಿಧೌ ಸರ್ವೇ ಜಹಸುರ್ಯಾದವಾಸ್ತದಾ’ (ವಿಷ್ಣುಪರ್ವಣಿ ೫.೨೩.೧)].

ಚಕಾರ ಚ ಪ್ರತಿಶ್ರವಂ ಸಮಾರ್ಜ್ಜಯೇ ಸುತಂ ದ್ರುತಮ್ ।
ಅಕೃಷ್ಣತಾಂ ಯ ಆನಯೇದ್ ಭುವೋsಪಿ ವೃಷ್ಣಿನಾಶಕಃ ॥೧೭.೭೭॥

ಕೋಪಗೊಂಡ ಗರ್ಗಾಚಾರ್ಯರು ‘ಅತಿಶೀಘ್ರದಲ್ಲಿಯೇ ಒಬ್ಬ ಮಗನನ್ನು ಪಡೆಯುತ್ತೇನೆ. ಅವನು ಈ ಭೂಮಿಯಲ್ಲಿ ಕೃಷ್ಣ ಇಲ್ಲದಂತೆ ಮಾಡುತ್ತಾನೆ. ಕೇವಲ ಕೃಷ್ಣನಷ್ಟೇ ಅಲ್ಲ, ಸಮಸ್ತ ಯಾದವರನ್ನೇ ಇಲ್ಲವಾಗಿಸುತ್ತಾನೆ’ ಎಂದು ಪ್ರತಿಜ್ಞೆಯನ್ನು ಮಾಡಿದರು.

Tuesday, April 14, 2020

Mahabharata Tatparya Nirnaya Kannada 1760_1769


ಅಪಾಮ್ಪತಿಶ್ಚ ಮೈಥಿಲಃ ಸ್ವಯಂವರಙ್ಕೃತಾವಪಿ ।
ಹರಿಂ ವಿನಿಶ್ಚಯಾದಿಯಂ ವ್ರಜೇದಿತಿ ಸ್ಮ ಚಕ್ರತುಃ ॥೧೭.೬೦॥

ಕ್ಷೀರಸಾಗರ ಮಥನ ಕಾಲದಲ್ಲಿ ವರುಣನು, ಸೀತಾ ಸ್ವಯಂವರ ಕಾಲದಲ್ಲಿ ಜನಕನು ಸ್ವಯಂವರವನ್ನು ಮಾಡಿದ್ದರೂ ಕೂಡಾ, ಅವರು ಮಗಳು ಪರಮಾತ್ಮನನ್ನೇ ಸೇರಬೇಕು ಎನ್ನುವ ಬುದ್ಧಿಯಿಂದ ಮಾಡಿದ್ದರು.

ಸ್ವಯಂವರಃ ಕ್ಷಿತೇರ್ಭುಜಾಂ ಸ್ವಧರ್ಮ್ಮ ಇತ್ಯತೋ ದ್ವಯೋಃ ।
ನ ದೋಷ ಆಸ ಭೀಷ್ಮಕೋ ನ ಕೇಶವಾರ್ತ್ಥಮೈಚ್ಛತ ॥೧೭.೬೧॥

ಸ್ವಯಂವರವು ರಾಜರಿಗೆ ಧರ್ಮವಾಗಿದೆ. ಹೀಗಾಗಿ ಅದು ಅವರಿಬ್ಬರಿಗೂ ದೋಷವಾಗಲಿಲ್ಲ. ಆದರೆ ಭೀಷ್ಮಕನು ಮಾತ್ರ ತನ್ನ ಮಗಳು ಪರಮಾತ್ಮನನ್ನು ಸೇರಬೇಕು ಎಂದು ಚಿಂತಿಸಿ ಸ್ವಯಂವರವನ್ನು ಆಯೋಜಿಸಿರಲಿಲ್ಲ.

ಅತೋ ಹರೌ ಪ್ರಬೋದ್ಧ್ಯ ತಂ ಗತೇ ಕೃಪಾಲುಸತ್ತಮೇ ।
ವಶೀಕೃತೇ ಚ ಭೀಷ್ಮಕೇ ನೃಪಾಸ್ತ್ವಮನ್ತ್ರಯನ್ ಪುನಃ ॥೧೭.೬೨॥

ಆ ಕಾರಣದಿಂದ, ಕೃಪಾಳುಗಳಲ್ಲೇ ಶ್ರೇಷ್ಠನಾಗಿರುವ ಪರಮಾತ್ಮ ಅವನನ್ನು ಎಚ್ಚರಿಸಿದ. ಹೀಗೆ ಭೀಷ್ಮಕನೂ ಶ್ರೀಕೃಷ್ಣನ ವಶನಾಗಲು, ರಾಜರು ಮತ್ತೆ ಮಂತ್ರಾಲೋಚನೆ ಮಾಡಿದರು.

ಯಶಶ್ಚ ಧರ್ಮ್ಮಮುತ್ತಮಂ ವಿಧಿತ್ಸತಾ ವೃಕೋದರೇ ।
ನ ಕೇಶವೇನ ಸೂದಿತೋ ಜರಾಸುತೋ ಹಿ ಮನ್ಯತೇ ॥೧೭.೬೩॥

ಭೀಮಸೇನನಿಗೆ ಕೀರ್ತಿಯನ್ನೂ, ಪುಣ್ಯವನ್ನೂ ನೀಡಲು ಬಯಸುವ ಕೃಷ್ಣನಿಂದ ಜರಾಸಂಧನು ಕೊಲ್ಲಲ್ಪಡಲಿಲ್ಲ. ಆದರೆ ಜರಾಸಂಧ ಮಾತ್ರ ಇದನ್ನು ತಪ್ಪಾಗಿ ತಿಳಿಯುತ್ತಾನೆ.
[ಜರಾಸಂಧ ಏನೆಂದುಕೊಳ್ಳುತ್ತಾನೆ ಎಂದರೆ: ]

ವರಾಚ್ಛಿವಸ್ಯ ಮಾಮಯಂ ನ ಹನ್ತುಮೀಷ್ಟ ಉತ್ತಮಾತ್ ।
ಅತಃ ಶಿವಪ್ರಸಾದತೋ ಜಿತೋsಪಿ ಜೇಷ್ಯ ಉತ್ತರಮ್ ॥೧೭.೬೪॥

‘ಶಿವನ ವರದಿಂದಾಗಿ ಇವನು ನನ್ನನ್ನು ಕೊಲ್ಲಲು ಸಮರ್ಥನಾಗುತ್ತಿಲ್ಲ. ಆದ್ದರಿಂದ ಶಿವನ ಅನುಗ್ರಹದಿಂದ ಈಗ ನಾನು ಸೋತರೂ ಕೂಡಾ ಮುಂದೆ ಗೆದ್ದೇ ಗೆಲ್ಲುತ್ತೇನೆ’. 

ಮೃಧೇಮೃಧೇ ಜಿತೋsಪಿ ಸನ್ ದೃಢಾಶಯಾ ಪುನಃಪುನಃ ।
ಸಮೀಹತೇ ಯುಧೇ ಶಿವಂ ನಚಾವಮನ್ಯತೇ ಕ್ವಚಿತ್ ॥೧೭.೬೫॥

ಹೀಗೆ ಜರಾಸಂಧ ಯುದ್ಧ-ಯುದ್ಧಗಳಲ್ಲಿ(ಪ್ರತೀ ಯುದ್ಧದಲ್ಲಿ) ಸೋತರೂ ಕೂಡಾ, ಯಾವುದೋ ಒಂದು ದೃಢವಾದ ಆಸೆಯಿಂದ ಮತ್ತೆ-ಮತ್ತೆ ಪ್ರಯತ್ನಪಡುತ್ತಿದ್ದಾನೆ. ತಾರತಮ್ಯದಲ್ಲಿ ಶಿವ ಭಗವಂತನಿಗಿಂತ ಕೆಳಗೆ ಎಂದು ಅವನು ತಿಳಿಯುತ್ತಿಲ್ಲ ಮತ್ತು ಈಗ ಸೋತರೂ ಶಿವನ ಅನುಗ್ರಹದಿಂದ ಮುಂದೆ ತಾನು ಕೃಷ್ಣನನ್ನು  ಗೆಲ್ಲುತ್ತೇನೆ ಎಂದುಕೊಳ್ಳುತ್ತಿದ್ದಾನೆ.

ಅತಃ ಪುನಶ್ಚ ಭೂಮಿಪಾನುವಾಚ ಬಾರ್ಹದ್ರಥಃ ।
ಧಿಗೇವ ಪೌರುಷಂ ಹಿ ನೋ ಯದೇಷ ನೋsಜಯತ್ ಸದಾ ॥೧೭.೬೬॥

ಆದ ಕಾರಣ ಜರಾಸಂಧ ರಾಜರೆಲ್ಲರನ್ನು ಕುರಿತು ಹೇಳುತ್ತಾನೆ:  ‘ಧಿಕ್ಕಾರವಿರಲಿ ನಮ್ಮ ಪೌರುಷಕ್ಕೆ. ಏಕೆಂದರೆ ಈ ಕೃಷ್ಣನು ನಮ್ಮನ್ನು ಪ್ರತೀ ಯುದ್ಧದಲ್ಲಿಯೂ ಗೆಲ್ಲುತ್ತಾನಷ್ಟೇ.

ಅಭೂಪತೇರ್ನ್ನಚಾsಸನಂ ಪ್ರದೇಯಮಿತ್ಯುದಾಹೃತಮ್ ।
ಅಮುಷ್ಯ ನಸ್ತದನ್ಯಥಾ ಬಭೂವ ಚಿನ್ತಿತಂ ನೃಪಾಃ ॥೧೭.೬೭॥

ಯಾರು ರಾಜನಲ್ಲವೋ ಅವನಿಗೆ ಆಸನ ಕೊಡಬಾರದು ಎಂದು ನಾವು ಸಂಕಲ್ಪಿಸಿದೆವು. ಆದರೆ ಅದು ಬೇರೆಯೇ ಆಯಿತು.

ಅಯಂ ನೃಪೋತ್ತಮಾಙ್ಗಣೇ ಮಹೇನ್ದ್ರಪೀಠಮಾರುಹತ್ ।
ಸಮಸ್ತರಾಜರಾಜತಾಮವಾಪ ನೋsಪ್ಯನಿಚ್ಛತಾಮ್ ॥೧೭.೬೮॥

ಈ ಕೃಷ್ಣನೋ, ರಾಜರೆಲ್ಲರು ನೋಡುತ್ತಿರುವಾಗಲೇ  ಇಂದ್ರನ ಪೀಠವನ್ನೇರಿದ.  ನಮಗೆ ಏನು ಆಗಬಾರದು ಎನ್ನುವ ಬಯಕೆ ಇತ್ತೋ ಅದೇ ಆಗಿ ಹೋಯಿತು. ಅವನು ಎಲ್ಲಾ ರಾಜರ ರಾಜನಾದ(ಚಕ್ರವರ್ತಿ ಎನಿಸಿದ).

ಅಥಃ ಪುನಃ ಕಥಂ ಹರಿಂ ವಯಂ ಜಯೇಮ ಚಿನ್ತ್ಯತಾಮ್ ।
ಯಥಾ ಚ ಭೀಷ್ಮಕಾತ್ಮಜಾಮವಾಪ್ನುಯಾಚ್ಚ ಚೇದಿರಾಟ್ ॥೧೭.೬೯॥


ಆದ ಕಾರಣದಿಂದ ಮತ್ತೆ ಪರಮಾತ್ಮನನ್ನು ನಾವು ಹೇಗೆ ಗೆಲ್ಲುತ್ತೇವೆ,  ಹೇಗೆ ಈ ಶಿಶುಪಾಲನು ರುಗ್ಮಿಣಿಯನ್ನು ಹೊಂದಿಯಾನು ಎನ್ನುವುದು ವಿಚಾರಮಾಡಲ್ಪಡಲಿ’ ಎನ್ನುತ್ತಾನೆ ಜರಾಸಂಧ.