ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, April 19, 2020

Mahabharata Tatparya Nirnaya Kannada 1778_1783


ಯತೋ ಹಿ ಕೃಷ್ಣಸಂಶ್ರಯಾದ್ ಬತಾಪಹಾಸಿತಾ ವಯಮ್ ।
ಇತಿ ಬ್ರುವನ್ ವನಂ ಯಯೌ ತಪಶ್ಚ ಶೈವಮಾಚರತ್ ॥೧೭.೭೮॥

‘ಕೃಷ್ಣನನ್ನೂ ಸೇರಿಸಿ ಇಡೀ ಯಾದವ ಕುಲವನ್ನೇ ಇಲ್ಲವಾಗಿಸುತ್ತೇನೆ ಎನ್ನುವ ಪ್ರತಿಜ್ಞೆಮಾಡಿದ ಗರ್ಗಾಚಾರ್ಯರು, ‘ಕೃಷ್ಣನ ಸಂಶ್ರಯ ಇದೆ ಎಂದು ನನ್ನನ್ನು ಅಪಹಾಸ್ಯ ಮಾಡಿದಿರಷ್ಟೇ’ ಎಂದು ಹೇಳುತ್ತಾ ಕಾಡಿಗೆ ತೆರಳಿದರು  ಮತ್ತು ಶಿವನನ್ನು ಕುರಿತು ತಪಸ್ಸನ್ನಾಚರಿಸಿದರು.

ಸ ಚೂರ್ಣ್ಣಮಾಯಸಂ ತ್ವದನ್ ದದರ್ಶ ಚಾಬ್ದತಃ ಶಿವಮ್ ।
ವರಂ ತತೋsಭಿಪೇದಿವಾನ್ ಸುತಂ ಹರೇರಭಾವದಮ್ ॥೧೮.೭೯॥

ಗರ್ಗಾಚಾರ್ಯರು ಲೋಹಚೂರ್ಣವನ್ನು ತಿನ್ನುತ್ತಾ, ಒಂದು ವರ್ಷದ ನಂತರ ಶಿವನನ್ನು ಕಂಡರು ಮತ್ತು  ಅವನಿಂದ ಶ್ರೀಕೃಷ್ಣನ ಅಭಾವವನ್ನು ಉಂಟುಮಾಡುವ ಮಗನನ್ನು ವರವಾಗಿ ಪಡೆದರು.

[ಹರಿವಂಶದಲ್ಲಿ ಈ ಕುರಿತಾದ ವಿವರ ಕಾಣಸಿಗುತ್ತದೆ:   ಮಹಾಮುನಿಶ್ಚಾಯಸಚೂರ್ಣಮಶ್ನನ್ನುಪಸ್ತಿತೋ  ದ್ವಾದಶವಾರ್ಷಿಕಂ ವ್ರತಮ್ । ......... ತಪೋಬಲಾದ್ ಗರ್ಗಮುನೇರ್ಮಹಾತ್ಮನೋ  ವರಪ್ರಭಾವಾಚ್ಛಕಲೇಂದುಮೌಲಿನಃ । ಭವಂತಮಾಸಾದ್ಯ ಜನಾರ್ದನೋ ಹಿಮಂ ವಿಲೀಯತೇ  ಭಾಸ್ಕರರಶ್ಮಿನಾ ಯಥಾ’ (ವಿಷ್ಣುಪರ್ವಣಿ ೫೩.೫೪). ಅಲಿಪ್ಸಂಸ್ತು ಸ್ತ್ರಿಯಂ ಚೈವ ತಪಸ್ತೇಪೇ ಸುದಾರುಣಮ್ ।  ತತೋ ದ್ವಾದಶವರ್ಷಾಣಿ ಸೋsಯಶ್ಚೂರ್ಣಮಭಕ್ಷಯತ್’ (೫೭.೯).   ಇಲ್ಲಿ ಗರ್ಗಾಚಾರ್ಯರು ಹನ್ನೆರಡು ವರ್ಷ ತಪಸ್ಸು ಮಾಡಿದರು  ಎಂದು ಹೇಳಿದ್ದಾರೆ. ಆದರೆ ಇಲ್ಲಿ ವಾರ್ಷಿಕ ಎನ್ನುವುದು  ಕೇವಲ ಔಪಚಾರಿಕ. ಒಂದು ತಿಂಗಳನ್ನು ಒಂದು ವರ್ಷ ಎಂದು ಹೇಳಿದ್ದಾರೆಯೇ ವಿನಃ ಅದು ಹನ್ನೆರಡು ವರ್ಷವಲ್ಲ. ಇದಕ್ಕೆ ಪೂರಕವಾದ ಅಂಶವನ್ನು ನಾವು ವಿಷ್ಣುಪುರಾಣದಲ್ಲಿ(೫.೨೩.೩) ಕಾಣಬಹುದು:   ‘ಆರಾಧಯನ್ ಮಹಾದೇವಂ ಲೋಹಚೂರ್ಣಮಭಕ್ಷಯತ್  । ದದೌ ವರಂ ಚ ತುಷ್ಟೋsಸ್ಮೈ ವರ್ಷೇ ತು ದ್ವಾದಶೇ ಹರಃ

[ಶ್ರೀಕೃಷ್ಣನಿಗೆ ನಾಮಕರಣ ಮಾಡಿದ, ಕೃಷ್ಣಭಕ್ತರಾದ ಗರ್ಗಾಚಾರ್ಯರು ಏಕೆ ಈರೀತಿ ಮಾಡಿದರು ಎಂದರೆ:]

ಸ ವಿಷ್ಣುದೈವತೋsಪಿ ಸನ್ ಪ್ರವಿಷ್ಟ ಉಲ್ಬಣಾಸುರೈಃ ।
ವ್ಯಧಾದ್ಧರೇಃ ಪ್ರತೀಪಕಂ ವ್ರತಂ ಚ ನೈಷ್ಠಿಕಂ ಜಹೌ ॥೧೭.೮೦॥

ಗರ್ಗಾಚಾರ್ಯರು ವಿಷ್ಣುವನ್ನೇ ದೇವತೆಯನ್ನಾಗಿ ಪಡೆದವರಾದರೂ ಕೂಡಾ, ಭಯಂಕರವಾದ ಅಸುರರಿಂದ ಪ್ರವೇಶಿಸಿದವರಾಗಿ(ಪ್ರವಿಷ್ಟರಾದವರಾಗಿ) ಪರಮಾತ್ಮನಿಗೆ ವಿರುದ್ಧವನ್ನು ಮಾಡಿದರು. ತನ್ನ ನೈಷ್ಠಿಕ ವ್ರತವನ್ನು ಬಿಟ್ಟರು.

ತಮಾರ ಚಾsಸುರಾಪ್ಸರಾ ಬಲಿಷ್ಠಪುತ್ರಕಾಮ್ಯಯಾ ।
ಪ್ರವಿಶ್ಯ ಗೋಪಿಕಾಙ್ಗನಾಸಮೂಹಮದ್ಧ್ಯಮುಲ್ಬಣಾ ॥೧೭.೮೧॥

ಒಬ್ಬಳು ಅಸುರ ಸಂಬಂಧಿಯಾದ, ಕ್ರೂರಸ್ವಭಾವದ ಅಪ್ಸರೆ ತನಗೆ  ಬಲಿಷ್ಠನಾದ ಮಗ ಬೇಕು ಎನ್ನುವ ಬಯಕೆಯಿಂದ, ಗೋಪಿಕೆಯರ ಸಮೂಹದಲ್ಲಿ ಪ್ರವೇಶಿಸಿ, ಆ ಗರ್ಗಾಚಾರ್ಯರನ್ನು ಹೊಂದಿದಳು.
[ಅಪ್ಸರೆಯರು ಮತ್ತು ಗಂಧರ್ವರಲ್ಲಿ  ದೈವಿಕರು ಮತ್ತು ಆಸುರರು ಎಂಬ ವಿಭಾಗ ಇರುತ್ತದೆ. ಉದಾಹರಣೆಗೆ  ದ್ರಮಿಳ ಎನ್ನುವ ದೈತ್ಯಗಂಧರ್ವ. ಅವನಿಂದಾಗಿ ಉಗ್ರಸೇನನ ಹೆಂಡತಿಯಲ್ಲಿ ರಾಕ್ಷಸನಾದ ಕಂಸ ಹುಟ್ಟಿದ. ಹಾಗೇ, ಇಲ್ಲಿ  ಈಕೆ ಅಸುರ ಸ್ವಭಾವದ ಅಪ್ಸರೆ. ಈಕೆ ಗೋಪಿಕೆಯರ ಸಮೂಹದಲ್ಲಿದ್ದು ಗರ್ಗಾಚಾರ್ಯರನ್ನು ಸೇರಿ ಮಗನನ್ನು ಪಡೆಯುತ್ತಾಳೆ ].

[ಹರಿವಂಶಪರ್ವದಲ್ಲಿ (೩೫.೧೪-೧೫) ಈ ಕುರಿತ ವಿವರಣೆ ಕಾಣಸಿಗುತ್ತದೆ: ಗೋಪಕನ್ಯಾಮುಪಾದಾಯ ಮೈಥುನಾಯೋಪಚಕ್ರಮೇ । ಗೋಪಾಲೀ ತ್ವಪ್ಸರಾಸ್ತಸ್ಯ ಗೋಪಸ್ತ್ರೀವೇಷಧಾರಿಣೀ । (ಗೋಪಸ್ತ್ರೀ ವೇಷಧಾರಿಣಿಯಾಗಿ ಆಕೆ ಮೈಥುನಕ್ಕಾಗಿ ಬಂದಳು) ಧಾರಯಾಮಾಸ ಗರ್ಗಸ್ಯ ಗರ್ಭಂ ದುರ್ಧರಮಚ್ಯುತಮ್’ (ಅತ್ಯಂತ ಭಯಂಕರವಾದ ಗರ್ಭವನ್ನು ಆಕೆ ಧರಿಸಿದಳು).
ಇನ್ನು ವಿಷ್ಣುಪರ್ವದಲ್ಲೂ(೫೭.೧೨-೧೪) ಈ ಕುರಿತ ವಿವರಣೆ ಕಾಣಸಿಗುತ್ತದೆ: ‘ತತಃ ಶುಶ್ರಾವ ತಂ ರಾಜಾ ಯವನಾಧಿಪತಿರ್ವರಂ । ಪುತ್ರಪ್ರಸವಜಂ ದೈವಾದಪುತ್ರಃ ಪುತ್ರಕಾಮಿತಾ । ಸ ನೃಪಸ್ತಮುಪಾನಾಯ್ಯ ಸಾಂತ್ವಯಿತ್ವಾ  ದ್ವಿಜೋತ್ತಮಮ್ । ತಂ ಘೋಷಮಧ್ಯೇ ಯವನೋ ಗೋಪಾಸ್ತ್ರೀಷು ಸಮಾಸೃಜತ್ ।  (ಮಗ ಬೇಕು ಎನ್ನುವ ಒಬ್ಬ ರಾಜನಿದ್ದ. ಅವನಿಗೆ ಮಕ್ಕಳಿರಲಿಲ್ಲ. ಅದರಿಂದಾಗಿ ಅವನು ಒಬ್ಬ ಅಸುರಾಪ್ಸರೆಯನ್ನು ಗೋಪಿಕೆಯರ ಮಧ್ಯದಲ್ಲಿ ಕಳುಹಿಸಿ, ಅವಳ ಮೂಲಕ ಗರ್ಗನಿಂದ ಮಗನನ್ನು ಪಡೆಯುವ ಹಂಚಿಕೆಯನ್ನು ಹಾಕಿದ. ಅವನೇ ಯವನ[1] ರಾಜ). ಗೋಪಾಲಿ ತ್ವಪ್ಸರಾಸ್ತತ್ರ  ಗೋಪಸ್ತ್ರೀವೇಷಧಾರಿಣಿ । ಧಾರಯಾಮಾಸ ಗರ್ಗಸ್ಯ ಗರ್ಭಂ ದುರ್ಧರಮಚ್ಯುತಮ್ ।  ಮಾನುಷ್ಯಾಂ ಗರ್ಗಭಾರ್ಯಾಯಾಂ  ನಿಯೋಗಾಚ್ಛೂಲಪಾಣಿನಃ । ಸ ಕಾಲಯವನೋ  ನಾಮ ಜಜ್ಞೇ ಶೂರೋ ಮಹಾಬಲಃ’    

ಸ ಯಾವನೇನ ಭೂಭೃತಾ ಹಿ ಗೋಪಿಕಾಭಿರರ್ಚ್ಚಿತಃ ।
ಅಪುತ್ರಕೇಣ ಜಾನತಾ ಮುನೇರ್ಮ್ಮನೋsನುಚಿನ್ತಿತಮ್ ॥೧೭.೮೨॥

ಗರ್ಗಾಚಾರ್ಯರ ಮನಸ್ಸಿನ ಚಿಂತನೆಯನ್ನು ತಿಳಿದವನಾದ  ಯವನರಾಜನಿಂದ,  ಹಾಗೂ  ಗೋಪಿಕೆಯರಿಂದಲೂ ಕೂಡಾ ಗರ್ಗಾಚಾರ್ಯರು ಅರ್ಚಿತರಾದರು.

ಸ ಚಾಪ್ಸರಸ್ತನೌ ಸುತಂ ನಿಷಿಚ್ಯ ಯಾವನಾಯ ಚ ।
ದದೌ ವಿಮೋಹಿತಃ ಕ್ರುಧಾ ಕಿಮೇತದೀಶ ವೈರಿಣಃ ॥೧೭.೮೩॥

ಅಪ್ಸರೆಯನ್ನು ಸಂಭೋಗಿಸಿ ಮಗನನ್ನು ಪಡೆದ ಗರ್ಗಾಚಾರ್ಯರು ತನ್ನನ್ನು ಅರ್ಚಿಸಿದ ಯವನನಿಗೆ, ಸಿಟ್ಟಿನಿಂದ ಮೋಹಿತನಾಗಿ ಆ ಮಗುವನ್ನು ಕೊಟ್ಟರು. ಅಸುರಾವೇಶದಿಂದ, ಕೃಷ್ಣ ಹಾಗೂ ಯಾದವರ ಮೇಲೆ ವೈರತ್ವವನ್ನು ಸಾಧಿಸುತ್ತಿರುವ ಗರ್ಗಾಚಾರ್ಯ  ಈರೀತಿ ಮಾಡುವುದರಲ್ಲೇನು ಆಶ್ಚರ್ಯ?




[1] ಪ್ರಾಯಃ ಇಲ್ಲಿ ಹೇಳುವ ಯವನ ದೇಶ ಇಂದಿನ ದಕ್ಷಿಣ ಆಫ್ರಿಕ. ನಿಶ್ಚಿತವಾಗಿ ತಿಳಿದಿಲ್ಲ. ಆದರೆ ಅನೇಕರು ಹಾಗೆ ಹೇಳುತ್ತಾರೆ.

No comments:

Post a Comment