ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, April 14, 2020

Mahabharata Tatparya Nirnaya Kannada 1760_1769


ಅಪಾಮ್ಪತಿಶ್ಚ ಮೈಥಿಲಃ ಸ್ವಯಂವರಙ್ಕೃತಾವಪಿ ।
ಹರಿಂ ವಿನಿಶ್ಚಯಾದಿಯಂ ವ್ರಜೇದಿತಿ ಸ್ಮ ಚಕ್ರತುಃ ॥೧೭.೬೦॥

ಕ್ಷೀರಸಾಗರ ಮಥನ ಕಾಲದಲ್ಲಿ ವರುಣನು, ಸೀತಾ ಸ್ವಯಂವರ ಕಾಲದಲ್ಲಿ ಜನಕನು ಸ್ವಯಂವರವನ್ನು ಮಾಡಿದ್ದರೂ ಕೂಡಾ, ಅವರು ಮಗಳು ಪರಮಾತ್ಮನನ್ನೇ ಸೇರಬೇಕು ಎನ್ನುವ ಬುದ್ಧಿಯಿಂದ ಮಾಡಿದ್ದರು.

ಸ್ವಯಂವರಃ ಕ್ಷಿತೇರ್ಭುಜಾಂ ಸ್ವಧರ್ಮ್ಮ ಇತ್ಯತೋ ದ್ವಯೋಃ ।
ನ ದೋಷ ಆಸ ಭೀಷ್ಮಕೋ ನ ಕೇಶವಾರ್ತ್ಥಮೈಚ್ಛತ ॥೧೭.೬೧॥

ಸ್ವಯಂವರವು ರಾಜರಿಗೆ ಧರ್ಮವಾಗಿದೆ. ಹೀಗಾಗಿ ಅದು ಅವರಿಬ್ಬರಿಗೂ ದೋಷವಾಗಲಿಲ್ಲ. ಆದರೆ ಭೀಷ್ಮಕನು ಮಾತ್ರ ತನ್ನ ಮಗಳು ಪರಮಾತ್ಮನನ್ನು ಸೇರಬೇಕು ಎಂದು ಚಿಂತಿಸಿ ಸ್ವಯಂವರವನ್ನು ಆಯೋಜಿಸಿರಲಿಲ್ಲ.

ಅತೋ ಹರೌ ಪ್ರಬೋದ್ಧ್ಯ ತಂ ಗತೇ ಕೃಪಾಲುಸತ್ತಮೇ ।
ವಶೀಕೃತೇ ಚ ಭೀಷ್ಮಕೇ ನೃಪಾಸ್ತ್ವಮನ್ತ್ರಯನ್ ಪುನಃ ॥೧೭.೬೨॥

ಆ ಕಾರಣದಿಂದ, ಕೃಪಾಳುಗಳಲ್ಲೇ ಶ್ರೇಷ್ಠನಾಗಿರುವ ಪರಮಾತ್ಮ ಅವನನ್ನು ಎಚ್ಚರಿಸಿದ. ಹೀಗೆ ಭೀಷ್ಮಕನೂ ಶ್ರೀಕೃಷ್ಣನ ವಶನಾಗಲು, ರಾಜರು ಮತ್ತೆ ಮಂತ್ರಾಲೋಚನೆ ಮಾಡಿದರು.

ಯಶಶ್ಚ ಧರ್ಮ್ಮಮುತ್ತಮಂ ವಿಧಿತ್ಸತಾ ವೃಕೋದರೇ ।
ನ ಕೇಶವೇನ ಸೂದಿತೋ ಜರಾಸುತೋ ಹಿ ಮನ್ಯತೇ ॥೧೭.೬೩॥

ಭೀಮಸೇನನಿಗೆ ಕೀರ್ತಿಯನ್ನೂ, ಪುಣ್ಯವನ್ನೂ ನೀಡಲು ಬಯಸುವ ಕೃಷ್ಣನಿಂದ ಜರಾಸಂಧನು ಕೊಲ್ಲಲ್ಪಡಲಿಲ್ಲ. ಆದರೆ ಜರಾಸಂಧ ಮಾತ್ರ ಇದನ್ನು ತಪ್ಪಾಗಿ ತಿಳಿಯುತ್ತಾನೆ.
[ಜರಾಸಂಧ ಏನೆಂದುಕೊಳ್ಳುತ್ತಾನೆ ಎಂದರೆ: ]

ವರಾಚ್ಛಿವಸ್ಯ ಮಾಮಯಂ ನ ಹನ್ತುಮೀಷ್ಟ ಉತ್ತಮಾತ್ ।
ಅತಃ ಶಿವಪ್ರಸಾದತೋ ಜಿತೋsಪಿ ಜೇಷ್ಯ ಉತ್ತರಮ್ ॥೧೭.೬೪॥

‘ಶಿವನ ವರದಿಂದಾಗಿ ಇವನು ನನ್ನನ್ನು ಕೊಲ್ಲಲು ಸಮರ್ಥನಾಗುತ್ತಿಲ್ಲ. ಆದ್ದರಿಂದ ಶಿವನ ಅನುಗ್ರಹದಿಂದ ಈಗ ನಾನು ಸೋತರೂ ಕೂಡಾ ಮುಂದೆ ಗೆದ್ದೇ ಗೆಲ್ಲುತ್ತೇನೆ’. 

ಮೃಧೇಮೃಧೇ ಜಿತೋsಪಿ ಸನ್ ದೃಢಾಶಯಾ ಪುನಃಪುನಃ ।
ಸಮೀಹತೇ ಯುಧೇ ಶಿವಂ ನಚಾವಮನ್ಯತೇ ಕ್ವಚಿತ್ ॥೧೭.೬೫॥

ಹೀಗೆ ಜರಾಸಂಧ ಯುದ್ಧ-ಯುದ್ಧಗಳಲ್ಲಿ(ಪ್ರತೀ ಯುದ್ಧದಲ್ಲಿ) ಸೋತರೂ ಕೂಡಾ, ಯಾವುದೋ ಒಂದು ದೃಢವಾದ ಆಸೆಯಿಂದ ಮತ್ತೆ-ಮತ್ತೆ ಪ್ರಯತ್ನಪಡುತ್ತಿದ್ದಾನೆ. ತಾರತಮ್ಯದಲ್ಲಿ ಶಿವ ಭಗವಂತನಿಗಿಂತ ಕೆಳಗೆ ಎಂದು ಅವನು ತಿಳಿಯುತ್ತಿಲ್ಲ ಮತ್ತು ಈಗ ಸೋತರೂ ಶಿವನ ಅನುಗ್ರಹದಿಂದ ಮುಂದೆ ತಾನು ಕೃಷ್ಣನನ್ನು  ಗೆಲ್ಲುತ್ತೇನೆ ಎಂದುಕೊಳ್ಳುತ್ತಿದ್ದಾನೆ.

ಅತಃ ಪುನಶ್ಚ ಭೂಮಿಪಾನುವಾಚ ಬಾರ್ಹದ್ರಥಃ ।
ಧಿಗೇವ ಪೌರುಷಂ ಹಿ ನೋ ಯದೇಷ ನೋsಜಯತ್ ಸದಾ ॥೧೭.೬೬॥

ಆದ ಕಾರಣ ಜರಾಸಂಧ ರಾಜರೆಲ್ಲರನ್ನು ಕುರಿತು ಹೇಳುತ್ತಾನೆ:  ‘ಧಿಕ್ಕಾರವಿರಲಿ ನಮ್ಮ ಪೌರುಷಕ್ಕೆ. ಏಕೆಂದರೆ ಈ ಕೃಷ್ಣನು ನಮ್ಮನ್ನು ಪ್ರತೀ ಯುದ್ಧದಲ್ಲಿಯೂ ಗೆಲ್ಲುತ್ತಾನಷ್ಟೇ.

ಅಭೂಪತೇರ್ನ್ನಚಾsಸನಂ ಪ್ರದೇಯಮಿತ್ಯುದಾಹೃತಮ್ ।
ಅಮುಷ್ಯ ನಸ್ತದನ್ಯಥಾ ಬಭೂವ ಚಿನ್ತಿತಂ ನೃಪಾಃ ॥೧೭.೬೭॥

ಯಾರು ರಾಜನಲ್ಲವೋ ಅವನಿಗೆ ಆಸನ ಕೊಡಬಾರದು ಎಂದು ನಾವು ಸಂಕಲ್ಪಿಸಿದೆವು. ಆದರೆ ಅದು ಬೇರೆಯೇ ಆಯಿತು.

ಅಯಂ ನೃಪೋತ್ತಮಾಙ್ಗಣೇ ಮಹೇನ್ದ್ರಪೀಠಮಾರುಹತ್ ।
ಸಮಸ್ತರಾಜರಾಜತಾಮವಾಪ ನೋsಪ್ಯನಿಚ್ಛತಾಮ್ ॥೧೭.೬೮॥

ಈ ಕೃಷ್ಣನೋ, ರಾಜರೆಲ್ಲರು ನೋಡುತ್ತಿರುವಾಗಲೇ  ಇಂದ್ರನ ಪೀಠವನ್ನೇರಿದ.  ನಮಗೆ ಏನು ಆಗಬಾರದು ಎನ್ನುವ ಬಯಕೆ ಇತ್ತೋ ಅದೇ ಆಗಿ ಹೋಯಿತು. ಅವನು ಎಲ್ಲಾ ರಾಜರ ರಾಜನಾದ(ಚಕ್ರವರ್ತಿ ಎನಿಸಿದ).

ಅಥಃ ಪುನಃ ಕಥಂ ಹರಿಂ ವಯಂ ಜಯೇಮ ಚಿನ್ತ್ಯತಾಮ್ ।
ಯಥಾ ಚ ಭೀಷ್ಮಕಾತ್ಮಜಾಮವಾಪ್ನುಯಾಚ್ಚ ಚೇದಿರಾಟ್ ॥೧೭.೬೯॥


ಆದ ಕಾರಣದಿಂದ ಮತ್ತೆ ಪರಮಾತ್ಮನನ್ನು ನಾವು ಹೇಗೆ ಗೆಲ್ಲುತ್ತೇವೆ,  ಹೇಗೆ ಈ ಶಿಶುಪಾಲನು ರುಗ್ಮಿಣಿಯನ್ನು ಹೊಂದಿಯಾನು ಎನ್ನುವುದು ವಿಚಾರಮಾಡಲ್ಪಡಲಿ’ ಎನ್ನುತ್ತಾನೆ ಜರಾಸಂಧ.

No comments:

Post a Comment