ಅಯಂ ಹಿ
ದತ್ತಪುತ್ರಕೋ ಮ ಔರಸಾದ್ ವಿಶಿಷ್ಯತೇ ।
ಅತೋ ನಿವೇಶ್ಯ
ಏಷ ಮೇ ಸುರೂಪಿಣೀ ಚ ರುಗ್ಮಿಣೀ ॥೧೭.೭೦॥
ಮುಂದುವರಿದು ಜರಾಸಂಧ ಹೇಳುತ್ತಾನೆ: ‘ಇವನು(ಶಿಶುಪಾಲ) ನನ್ನ ಪುತ್ರ ಸಮಾನ. ನನ್ನ ಸಾಕು ಮಗನೀತ.
ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗನಿಗಿಂತಲೂ ನನಗೆ ಇವನೇ ಮಿಗಿಲು. ಆ ಕಾರಣದಿಂದ ಸುರೂಪಿಣಿಯಾದ ರುಗ್ಮಿಣಿಯು ಇವನನ್ನು ಮದುವೆಯಾಗಬೇಕು’.
[ಹರಿವಂಶದಲ್ಲಿ(ವಿಷ್ಣುಪರ್ವಣಿ ೫೯.೨೪) ಈ ಕುರಿತಾದ ವಿವರಣೆ ಕಾಣಸಿಗುತ್ತದೆ: ‘ ಜ್ಞಾತೇಃ ಸಮಾನವಂಶಸ್ಯ ಸುನೀಥಂ ಪ್ರದದೌ ಸುತಮ್ । ಜರಾಸಂಧಃ ಸ್ವಸುತವದ್ ದದರ್ಶೈನಂ ಜುಗೋಪ ಚ’ (ಜರಾಸಂಧ
ಶಿಶುಪಾಲನನ್ನು ತನ್ನ ಸ್ವಂತ ಮಗ ಎಂಬಂತೆ ಕಾಪಾಡಿದ್ದ)]
ಶಿವಾಗಮೇಷು
ಶಿಷ್ಯಕಾಃ ಸರುಗ್ಮಿಸಾಲ್ವಪೌಣ್ಡ್ರಕಾಃ ।
ಮಮಾಖಿಲಾ
ನೃಪಾಸ್ತತಃ ಕುರುಧ್ವಮೇತದೇವ ಮೇ ॥೧೭.೭೧॥
ರುಗ್ಮಿ, ಸಾಲ್ವ, ಪೌಣ್ಡ್ರ, ಇವರಿಂದ ಕೂಡಿದ ಸಮಸ್ತ ರಾಜರೂ ಶೈವಾಗಮದಲ್ಲಿ
ನನ್ನ ಶಿಷ್ಯರು. ಆದ್ದರಿಂದ ನನಗೆ ಗುರುದಕ್ಷಿಣೆಯಾಗಿ
ನೀವು ಇದನ್ನೇ ಮಾಡಿರಿ (ನನ್ನ ಈ ಅಭೀಷ್ಠವನ್ನು ನೀವು ಪೂರೈಸಿ):
ಇತೀರಿತೇ ತು
ಸೌಭರಾಡ್ ಜಗಾದ ರುಗ್ಮಿಸಂವಿದಾ ।
ಸ್ವಯಂವರೋ ನಿವರ್ತ್ತಿತಃ
ಸ್ವಸಾರಮೇಷ ದಾಸ್ಯತಿ ॥೧೭.೭೨॥
ಈರೀತಿಯಾಗಿ ಜರಾಸಂಧ ನುಡಿಯಲು, ಸಾಲ್ವನು
ಹೇಳುತ್ತಾನೆ: ‘ರುಗ್ಮಿಯ ಅನುಮತಿಯಂತೆ ‘ಸ್ವಯಂವರ ಬಿಡಲ್ಪಟ್ಟಿದೆ. ಇವನಾದರೋ(ರುಗ್ಮಿಯು) ತನ್ನ
ತಂಗಿಯನ್ನು ಶಿಶುಪಾಲನಿಗೆ ಕೊಡುತ್ತಿದ್ದಾನೆ ಅಷ್ಟೇ. (ಸ್ವಯಂವರ ನಡೆಯುವುದಿಲ್ಲ. ನೇರವಾಗಿ
ರುಗ್ಮಿ ತನ್ನ ತಂಗಿಯನ್ನು ಶಿಶುಪಾಲನಿಗೆ ಮದುವೆ ಮಾಡಿ ಕೊಡಲಿದ್ದಾನೆ ಅಷ್ಟೇ)
ನಚಾತಿವರ್ತ್ತಿತುಂ
ಕ್ಷಮಃ ಪಿತಾsಸ್ಯ ಚೇದಿಪಾಯ ತಾಮ್ ।
ಪ್ರದಾತುಕಾಮಮಾತ್ಮಜಂ
ವಯೋಗತಸ್ತಥಾsಬಲಃ ॥೧೭.೭೩॥
ತಂಗಿಯನ್ನು ಶಿಶುಪಾಲನಿಗೆ ಕೊಡಲು ಬಯಸುವ ತನ್ನ ಮಗನನ್ನು ಈ ವಯಸ್ಸಾಗಿರುವ, ದುರ್ಬಲನಾದ ಭೀಷ್ಮಕನು
ಮೀರಲಾಗುವುದಿಲ್ಲ.
ಸ್ವಯಂ ತು
ಕೃಷ್ಣ ಏತ್ಯ ನೋ ವಿಜಿತ್ಯ ಕನ್ಯಕಾಂ ಹರೇತ್ ।
ತತೋsಸ್ಯ ಪೂರ್ವಮೇವ ನೋ ಹ್ಯಭಾವತಾ ಕೃತಾ ಶುಭಾ ॥೧೭.೭೪॥
ಆದರೆ ಕೃಷ್ಣನು ತಾನೇ ಬಂದು, ನಮ್ಮೆಲ್ಲರನ್ನು ಗೆದ್ದು, ಕನ್ಯೆಯನ್ನು
ಅಪಹರಿಸಿಯಾನು. ಆ ಕಾರಣದಿಂದ ಅದಕ್ಕೂ ಮೊದಲು ನಾವು ಕೃಷ್ಣನನ್ನು ಇಲ್ಲವಾಗಿಸಬೇಕು.
[ಹೇಗೆ ಎಂದರೆ: ಅದಕ್ಕೊಂದು ಉಪಾಯವನ್ನು ಹೇಳುತ್ತಾನೆ ಸಾಲ್ವ: ]
ಉಪಾಯ ಏಷ ಚಿನ್ತಿತೋ
ಮಯಾsತ್ರ ಮಾಗಧೇಶ್ವರ ।
ಮುನಿಂ ಹಿ ಗರ್ಗ್ಗನಾಮಕಂ
ಹ್ಯಮುಷ್ಯ ಸಾಲ ಆಕ್ಷಿಪತ್ ॥೧೭.೭೫॥
ಮಾಗದೇಶ್ವರ, ಈ ಉಪಾಯವು ನನ್ನಿಂದ ಚಿಂತಿಸಲ್ಪಟ್ಟಿದೆ: (ಎಂದು ಹಿಂದೆ ನಡೆದ
ಘಟನೆಯೊಂದನ್ನು ಉಲ್ಲೇಖಿಸುತ್ತಾನೆ). ಗರ್ಗ ಎಂಬ
ಹೆಸರಿನ ಮುನಿಯನ್ನು ಒಮ್ಮೆ ಅವನ ಹೆಂಡತಿಯ ತಮ್ಮನು ನಿಂದಿಸಿ ಮಾತನಾಡಿದ.
ಯದಾsಸ್ಯ ಷಣ್ಡತೋದಿತಾ ಮುನೇಃ ಪುರೋಹಿತಸ್ಯ ಚ ।
ಪರೇಣ
ವೃಷ್ಣಯೋsಹಸಂಶ್ಚುಕೋಪ ಗರ್ಗ್ಗ ಏಷು ಹ ॥೧೭.೭೬॥
ಯಾವಾಗ ಅವನು ಇವನನ್ನು ಷಣ್ಡ ಎಂದು ಬೈದನೋ,
ಆಗ ಅಲ್ಲಿದ್ದ ಯಾದವರೆಲ್ಲಾ ಜೋರಾಗಿ ನಕ್ಕರು. ಆಗ ಗರ್ಗನಿಗೆ ಸಿಟ್ಟು ಬಂದಿತು.
[ಹರಿವಂಶದಲ್ಲಿ ಈ ಘಟನೆಯ ಕುರಿತಾದ ವಿವರ ಕಾಣಸಿಗುತ್ತದೆ: ವೃಷ್ಣೀನಾಮನ್ಧಕಾನಾಂ ಚ
ಗುರುರ್ಗರ್ಗೋ ಮಹಾಮನಾಃ । ಬ್ರಹ್ಮಚಾರೀ
ಪುರಾ ಭೂತ್ವಾ ನ ಸ್ಮ ದಾರಾನ್ ಸ ವಿನ್ದತಿ । ತಥಾಹಿ ವರ್ತಮಾನಂ ತಮೂರ್ಧ್ವರೇತಸಮವ್ಯಯಮ್ । ಸ್ಯಾಲೋsಭಿಶಸ್ತವಾನ್
ಗರ್ಗಮಪುಮಾನಿತಿ ಭೂಪತೇ’ (ವಿಷ್ಣುಪರ್ವಣಿ ೫೭.೭-೮) ಗರ್ಗಂ
ಗೊಷ್ಠ್ಯಾಂ ದ್ವಿಜಂ ಸ್ಯಾಲಃ ಷಣ್ಡ
ಇತ್ಯುಕ್ತವಾನ್ ದ್ವಿಜ । ಯದೂನಾಂ ಸನ್ನಿಧೌ ಸರ್ವೇ ಜಹಸುರ್ಯಾದವಾಸ್ತದಾ’ (ವಿಷ್ಣುಪರ್ವಣಿ ೫.೨೩.೧)].
ಚಕಾರ ಚ
ಪ್ರತಿಶ್ರವಂ ಸಮಾರ್ಜ್ಜಯೇ ಸುತಂ ದ್ರುತಮ್ ।
ಅಕೃಷ್ಣತಾಂ ಯ
ಆನಯೇದ್ ಭುವೋsಪಿ ವೃಷ್ಣಿನಾಶಕಃ ॥೧೭.೭೭॥
ಕೋಪಗೊಂಡ ಗರ್ಗಾಚಾರ್ಯರು ‘ಅತಿಶೀಘ್ರದಲ್ಲಿಯೇ ಒಬ್ಬ ಮಗನನ್ನು ಪಡೆಯುತ್ತೇನೆ. ಅವನು ಈ
ಭೂಮಿಯಲ್ಲಿ ಕೃಷ್ಣ ಇಲ್ಲದಂತೆ ಮಾಡುತ್ತಾನೆ. ಕೇವಲ ಕೃಷ್ಣನಷ್ಟೇ ಅಲ್ಲ, ಸಮಸ್ತ
ಯಾದವರನ್ನೇ ಇಲ್ಲವಾಗಿಸುತ್ತಾನೆ’ ಎಂದು ಪ್ರತಿಜ್ಞೆಯನ್ನು ಮಾಡಿದರು.
No comments:
Post a Comment