ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, August 1, 2020

Mahabharata Tatparya Nirnaya Kannada 17192_17201

ಪತಿಂ ಸುಪೂರ್ಣ್ಣಯೌವನಂ ನಿರೀಕ್ಷ್ಯತಾಂ ವಿಷಜ್ಜತೀಮ್ ।

ಉವಾಚ ಕಾರ್ಷ್ಣ್ಣಿರಮ್ಬ ತೇ ಕುಚೇಷ್ಟಿತಂ ಕಥಂ ನ್ವಿತಿ ॥೧೭.೧೯೨॥

 

ಪೂರ್ಣಯೌವನವನ್ನು ಪಡೆದ ಮನ್ಮಥನನ್ನು ಕಂಡು ನಾಚಿಕೊಳ್ಳುತ್ತಿರುವ ರತಿಯನ್ನು ಕುರಿತು: ‘ಅಮ್ಮಾ, ಏಕೆ ಈರೀತಿ ಕೆಟ್ಟಚೇಷ್ಟೆ ಮಾಡುತ್ತಿದ್ದೀಯಾ’ ಎಂದು ಕಾರ್ಷ್ಣಿ(ಕೃಷ್ಣಪುತ್ರನಾದ ಪ್ರದ್ಯುಮ್ನ) ಪ್ರಶ್ನಿಸುತ್ತಾನೆ.

 

ಜಗಾದ ಸಾsಖಿಲಂ ಪತೌ ತದಸ್ಯ ಜನ್ಮ ಚಾsಗತಿಮ್ ।

ತತೋsಗ್ರಹೀತ್ ಸ ತಾಂ ಪ್ರಿಯಾಂ ರತಿಂ ರಮಾಪತೇಃ  ಸುತಃ ॥೧೭.೧೯೩॥

 

ಪ್ರದ್ಯುಮ್ನನ ಪ್ರಶ್ನೆಗೆ ಉತ್ತರಿಸಿದ ರತಿ,  ಅವನ ಜನ್ಮವನ್ನೂ, ಅವನು ಬಂದ ಕಾರಣವನ್ನು, ಹೀಗೆ ಎಲ್ಲವನ್ನೂ ತನ್ನ  ಗಂಡನಿಗೆ ಹೇಳಿದಳು. ತದನಂತರ ಪರಮಾತ್ಮನ ಮಗನಾದ ಪ್ರದ್ಯುಮ್ನನು ರತಿಯನ್ನು ತನ್ನ ಪ್ರಿಯೆಯನ್ನಾಗಿ ಸ್ವೀಕರಿಸಿದನು.

[ಈ ಕುರಿತಾದ ವಿವರಣೆ ಹರಿವಂಶದಲ್ಲಿ(೧೦೪.೨೪-೨೫) ಕಾಣಸಿಗುತ್ತದೆ: ‘ನ ತ್ವಂ ಮಮ ಸುತಃ ಕಾಂತ ನಾಪಿ ತೇ ಶಮ್ಬರಃ ಪಿತಾ । .... ಪುತ್ರಸ್ತ್ವಂ ವಾಸುದೇವಸ್ಯ ರುಗ್ಮಿಣ್ಯಾನಂದವರ್ಧನಃ  । ದಿವಸೇ ಸಪ್ತಮೇ ಬಾಲೋ ಜಾತಮಾತ್ರೋsಪವಾಹಿತಃ’

ಇನ್ನು ಭಾಗವತದಲ್ಲೂ (೧೦.೬೮.೧೫) ಈ ವಿವರಣೆ ಕಾಣಸಿಗುತ್ತದೆ: ‘ಭವಾನ್ ನಾರಾಯಣಸುತಃ  ಶಮ್ಬರೇಣಾsಹೃತೋ ಗೃಹಾತ್ । ಅಹಂ ತೇsಧಿಕೃತಾ ಪತ್ನೀ ರತಿಃ ಕಾಮೋ ಭವಾನ್ ಪ್ರಭೋ’]

 

ದದೌ ಚ ಮನ್ತ್ರಮುತ್ತಮಂ ಸಮಸ್ತಮಾಯಿನಾಶಕಮ್ ।

ಭೃಗೂತ್ಥರಾಮದೈವತಂ ರತಿರ್ಹರೇಃ ಸುತಾಯ ಸಾ ॥೧೭.೧೯೪॥

 

 

ರತಿಯು, ಎಲ್ಲಾ ಮಾಯೆಯನ್ನೂ ನಾಶಮಾಡುವ ಶಕ್ತಿಯುಳ್ಳ,  ಪರಶುರಾಮನೇ ದೇವತೆಯಾಗಿರುವ, ಉತ್ಕೃಷ್ಟವಾದ ಮಂತ್ರವನ್ನು ಪ್ರದ್ಯುಮ್ನನಿಗೆ ಕೊಟ್ಟಳು.

 

ತತಃ ಸ್ವದಾರಧರ್ಷಕಂ ಸಮಾಹ್ವಯದ್ ಯುಧೇsಙ್ಗಜಃ ।

ಸ ಶಮ್ಬರಂ ಸ ಚೈತ್ಯ ತಂ ಯುಯೋಧ ಶಕ್ತಿತೋ ಬಲೀ ॥೧೭.೧೯೫॥

 

ತದನಂತರ, ಪರಮಾತ್ಮನ ಅಂಗದಿಂದ ಹುಟ್ಟಿದ ಪ್ರದ್ಯುಮ್ನನು, ತನ್ನ ಹೆಂಡತಿಯನ್ನು ಇಷ್ಟು ದಿನ ಬಲಾತ್ಕಾರ ಮಾಡಿದ ಶಮ್ಬರನನ್ನು ಹೊಂದಿ, ಅವನನ್ನು ಯುದ್ಧಕ್ಕೆ ಕರೆದನು. ಶಕ್ತಿಯಿಂದ ಬಲಿಷ್ಠನಾಗಿ ಅವನೊಂದಿಗೆ ಯುದ್ಧಮಾಡಿದನು ಕೂಡಾ.

 

ಸ ಚರ್ಮ್ಮಖಡ್ಗಧಾರಿಣಂ ವರಾಸ್ತ್ರಶಸ್ತ್ರಪಾದಪೈಃ ।

ಯದಾ ನ ಯೋದ್ಧುಮಾಶಕದ್ಧರೇಃ ಸುತಂ ನ ದೃಶ್ಯತೇ ॥೧೭.೧೯೬॥

 

ಖಡ್ಗ ಹಾಗೂ ಚರ್ಮಧಾರಿಯಾಗಿರುವ, ಅಸ್ತ್ರ, ಶಸ್ತ್ರ, ಪಾದಪಗಳಿಂದ ಯುದ್ಧಮಾಡುವ ಪರಮಾತ್ಮನ ಮಗನೊಂದಿಗೆ ಯುದ್ಧಮಾಡಲು ಶಮ್ಬರನು ಯಾವಾಗ ಸಮರ್ಥನಾಗಲಿಲ್ಲವೋ, ಆಗ ಅವನು ತನ್ನ ಮಾಯಾವಿದ್ಯೆಯನ್ನು ಬಳಸಿ ಅದೃಶ್ಯನಾದನು.

 

ಸಹಸ್ರಮಾಯಮುಲ್ಬಣಂ ತ್ವದೃಶ್ಯಮಮ್ಬರಾದ್ ಗಿರೀನ್ ।

ಸೃಜನ್ತಮೇತ್ಯ ವಿದ್ಯಯಾ ಜಘಾನ ಕೃಷ್ಣನನ್ದನಃ ॥೧೭.೧೯೭॥

 

ಪ್ರದ್ಯುಮ್ನನು ಸಾವಿರಾರು ಕುಟಿಲ ವಿದ್ಯೆಗಳುಳ್ಳ, ಕಣ್ಣಿಗೆ ಕಾಣದೆ ಎಲ್ಲೋ ಆಕಾಶದಿಂದ ಬಂಡೆಗಳನ್ನು ತನ್ನೆಡೆಗೆ ಎಸೆಯುವ ಶಮ್ಬರಾಸುರನನ್ನು, ರತಿಯಿಂದ ಕೊಡಲ್ಪಟ್ಟ ಪರಶುರಾಮ  ದೇವಾತ್ಮಕವಾದ ವಿದ್ಯೆಯನ್ನು ಬಳಸಿ ಕೊಂದನು.

 

ಸ ವಿದ್ಯಯಾ ವಿನಾಶಿತೋರುಮಾಯ ಆಶು ಶಮ್ಬರಃ ।

ನಿಕೃತ್ತಕನ್ಧರೋsಪತದ್ ವರಾಸಿನಾsಮುನಾ ಕ್ಷಣಾತ್ ॥೧೭.೧೯೮॥

 

ಆ ಶಮ್ಬರನು  ತನ್ನ ಕುಟಿಲ ವಿದ್ಯೆಗಳನ್ನೆಲ್ಲವನ್ನೂ ಕಳೆದುಕೊಂಡು, ಪ್ರದ್ಯುಮ್ನನ ಕತ್ತಿಯಿಂದ ಕತ್ತರಿಸಲ್ಪಟ್ಟ ಕತ್ತುಳ್ಳವನಾಗಿ ಕೆಳಗೆ ಬಿದ್ದನು.  

 

ನಿಹತ್ಯ ತಂ ಹರೇಃ ಸುತಃ ತಯೈವ ವಿದ್ಯಯಾsಮ್ಬರಮ್ ।

ಸಮಾಸ್ಥಿತಃ ಸ್ವಭಾರ್ಯ್ಯಯಾ ಸಮಂ ಕುಷಸ್ಥಲೀಂ ಯಯೌ ॥೧೭.೧೯೯॥

 

ಈರೀತಿ ಶಮ್ಬರನನ್ನು ಕೊಂದ ಪ್ರದ್ಯುಮ್ನನು, ಅದೇ ವಿದ್ಯೆಯನ್ನು ಬಳಸಿ, ಆಕಾಶವನ್ನು ಏರಿ, ತನ್ನ ಹೆಂಡತಿಯೊಂದಿಗೆ ಕೂಡಿಕೊಂಡು ದ್ವಾರಕೆಗೆ ತೆರಳಿದನು.

 

 

ಸಮಸ್ತವೇದಿನೋರ್ಮ್ಮುನಿರ್ನ್ನರಾನ್ ವಿಡಮ್ಬಮಾನಯೋಃ ।

ರಮಾರಮೇಶಯೋಃ ಸುತಂ ಜಗಾದ ತಂ ಸ್ಮ ನಾರದಃ ॥೧೭.೨೦೦॥

 

ಎಲ್ಲವನ್ನೂ ಬಲ್ಲ, ನರರನ್ನು ಅನುಕರಿಸುತ್ತಿರುವ ರಮಾ-ರಮೇಶರಿಗೆ ನಾರದರು, ಪ್ರದ್ಯುಮ್ನ ಅವರ ಮಗ ಎಂದು ಹೇಳಿದರು.

 

ಸ ರುಗ್ಮಿಣೀಜನಾರ್ದ್ದನಾದಿಭಿಃ ಸರಾಮಯಾದವೈಃ ।

ಪಿತಾಮಹೇನ ಚಾsದರಾತ್ ಸುಲಾಳಿತೋsವಸತ್ ಸುಖಮ್ ॥೧೭.೨೦೧॥

 

ಪ್ರದ್ಯುಮ್ನನು ರಾಮನಿಂದ ಕೂಡಿದ ಯಾದವರಿಂದ, ರುಗ್ಮಿಣಿ-ಜನಾರ್ದನ ಮೊದಲಾದವರಿಂದ, ತಾತನಿಂದಲೂ(ವಸುದೇವನಿಂದಲೂ) ಕೂಡಾ ಅತ್ಯಂತ ಗೌರವಿಸಲ್ಪಟ್ಟು, ಸುಖವಾಗಿ ವಾಸಮಾಡಿದ.

 


Mahabharata Tatparya Nirnaya Kannada 17187_17191

ಅನಙ್ಗತಾಮುಪಾಗತೇ ಪುರಾ ಹರೇಣ ಸಾsಙ್ಗಜೇ।

ವಶಂ ವಿರಿಞ್ಚಶಾಪತೋ ಜಗಾಮ ಶಮ್ಬರಸ್ಯ ಹಿ ॥೧೭.೧೮೭॥

 

ಹಿಂದೆ, ರುದ್ರನಿಂದ ಮನ್ಮಥನು ಅವಯವಗಳನ್ನು ಕಳೆದುಕೊಳ್ಳಲು, ಬ್ರಹ್ಮದೇವರ ಶಾಪದಿಂದ ರತಿ ಶಮ್ಬರನ ವಶವನ್ನು ಹೊಂದಿದಳು.

 

(ಬ್ರಹ್ಮದೇವರ ಶಾಪಕ್ಕೆ ಕಾರಣವನ್ನು ಹೇಳುತ್ತಾರೆ: )

 

ಪುರಾ ಹಿ ಪಞ್ಚಭರ್ತ್ತೃಕಾಂ ನಿಶಮ್ಯ ಕಞ್ಜಜೋದಿತಾಮ್ ।

ಜಹಾಸ ಪಾರ್ಶತಾತ್ಮಜಾಂ ಶಶಾಪ ತಾಂ ತತಸ್ತ್ವಜಃ ॥೧೭.೧೮೮॥

 

ಒಮ್ಮೆ, ಬ್ರಹ್ಮದೇವರಿಂದ ಹೇಳಲ್ಪಟ್ಟ ಐದು ಗಂಡಂದಿರುಳ್ಳ ದ್ರೌಪದಿಯ ವಿಷಯವನ್ನು ಕೇಳಿ ರತಿ ಅಪಹಾಸ್ಯ ಮಾಡಿ ನಕ್ಕಳು. ಆಕಾರಣದಿಂದ ಬ್ರಹ್ಮದೇವರು ಅವಳನ್ನು ಶಪಿಸಿದರು.

[ಈ ಕಾರಣದಿಂದಲೇ ಉತ್ತಮರನ್ನು ಅಪಹಾಸ್ಯ ಮಾಡಬಾರದು ಎಂದು ಹೇಳುವುದು. ಅದರಲ್ಲೂ ವಿಶೇಷವಾಗಿ ದೇವೋತ್ತಮರನ್ನಂತೂ ಎಂದೆಂದಿಗೂ ಅಪಹಾಸ್ಯ ಮಾಡಲೇಬಾರದು]

 

ಭವಾಸುರೇಣ ದೂಷಿತೇತಿ ಸಾ ತತೋ ಹಿ ಮಾಯಯಾ ।

ವಿಧಾಯ ತಾಂ ನಿಜಾಂ ತನುಂ ಜಗಾಮ ಚಾನ್ಯಯಾsಸುರಮ್ ॥೧೭.೧೮೯॥

 

ಒಬ್ಬ ರಾಕ್ಷಸನಿಂದ ನಿನ್ನ ಮೈಕೊಳೆಯಾಗಲೀ ಎಂದು ಬ್ರಹ್ಮನಿಂದ ಶಪಿಸಲ್ಪಟ್ಟ ರತಿಯು, ಮಾಯೆಯಿಂದ ತನ್ನ ಶರೀರವನ್ನು ಮುಚ್ಚಿಕೊಂಡು, ಇನ್ನೊಂದು ಶರೀರದಿಂದ ಅಸುರನನ್ನು ಕುರಿತು ತೆರಳಿದಳು.

 

ಗೃಹೇsಪಿಸಾssಸುರೇ ಸ್ಥಿತಾ ನಿಜಸ್ವರೂಪತೋsಸುರಮ್ ।

ನ ಗಚ್ಛತಿ ಸ್ಮ ಸಾ ಪತಿಂ ನಿಜಂ ಸಮೀಕ್ಷ್ಯ ಹರ್ಷಿತಾ ॥೧೭.೧೯೦॥

 

ಅಸುರನಿಗೆ ಸಂಬಂಧಪಟ್ಟ ಮನೆಯಲ್ಲಿ ಇದ್ದವಳಾದರೂ, ತನ್ನ ಸ್ವರೂಪದಿಂದ ಅಸುರನನ್ನು ಸೇರಲಿಲ್ಲ. ಅಂಥಹ ರತಿ ತನ್ನ ಗಂಡನನ್ನು (ಮಗುವಿನ ಶರೀರದೊಂದಿಗೆ) ನೋಡಿ, ಅತ್ಯಂತ ಸಂತೋಷಗೊಂಡಳು.

 

ರಸಾಯನೈಃ ಕುಮಾರಕಂ ವ್ಯವರ್ದ್ಧಯದ್ ರತಿಃ ಪತಿಮ್ ।

ಸ  ಪೂರ್ಣ್ಣಯೌವನೋsಭವಚ್ಚತುರ್ಭಿರೇವ ವತ್ಸರೈಃ ॥೧೭.೧೯೧॥

 

ರತಿಯು ಪುಟ್ಟರೂಪದಲ್ಲಿರುವ ತನ್ನ ಗಂಡನನ್ನು ರಸಾಯನದಿಂದ ಬೆಳೆಸಿದಳು. ಅವನು ನಾಲ್ಕೇ ವರ್ಷಗಳಲ್ಲಿ ಸಂಪೂರ್ಣ ಯುವಕನಾಗಿ ಬೆಳೆದನು.

 

[ಇಲ್ಲಿ ‘ರಸಾಯನೈಃ ಕುಮಾರಕಂ’ ಎಂದು ಹೇಳಿದ್ದಾರೆ. ಈ ಕುರಿತಾದ ವಿವರಣೆಯನ್ನು ಹರಿವಂಶದಲ್ಲಿ(ವಿಷ್ಣುಪರ್ವಣಿ ೧೦೪.೧೨-೧೩) ಕಾಣಬಹುದು.  `  ಕಥಮಸ್ಯ ಸ್ತನಂ ದಾಸ್ಯೇ ಮಾತೃಭಾವೇನ ಜಾನತೀ । (ನನಗೆ ಅವನು ಯಾರೆಂಬುದು ಗೊತ್ತಿದೆ. ಹೀಗಿರುವಾಗ ಅವನಿಗೆ ಹೇಗೆ ಸ್ತನಪಾನ ಮಾಡಲಿ?) ಭರ್ತುರ್ಭಾರ್ಯಾ ತ್ವಹಂ ಭೂತ್ವಾ ವಕ್ಷ್ಯೇ ವಾ ಪುತ್ರ ಇತ್ಯುತಾ ।  (ಈತನ ಹೆಂಡತಿಯಾಗಿದ್ದು, ಅವನನ್ನು ‘ಮಗನೇ’ ಎಂದು ಯಾವರೀತಿ ಕರೆಯಲಿ?)  ಏವಂ ಸಞ್ಚಿಂತ್ಯ ಮನಸಾ ಧಾತ್ರ್ಯಾಸ್ತಂ ಸಾ ಸಮರ್ಪಯತ್ । (ಹೀಗೆ ಚಿಂತಿಸಿದ ಆಕೆ ಮಗುವಿನ ಆರೈಕೆಗಾಗಿ  ಒಬ್ಬ ದಾದಿಯನ್ನು ನೇಮಿಸಿದಳು). ರಸಾಯನಪ್ರಯೋಗೈಶ್ಚ ಶೀಘ್ರಮೇವ ವ್ಯವರ್ಧಯತ್’ (ರಸಾಯನ ಪ್ರಯೋಗದಿಂದ ಅವನನ್ನು ಶೀಘ್ರದಲ್ಲಿ  ದೊಡ್ಡವನನ್ನಾಗಿ ಬೆಳೆಸಿದಳು).  


Mahabharata Tatparya Nirnaya Kannada 17181_17186

ತಯಾ ರಮನ್ ಜನಾರ್ದ್ದನೋ ವಿಯೋಗಶೂನ್ಯಯಾ ಸದಾ।

ಅಧತ್ತ ಪುತ್ರಮುತ್ತಮಂ ಮನೋಭವಂ ಪುರಾತನಮ್ ॥೧೭.೧೮೧॥

 

ಎಂದೂ ವಿಯೋಗವಿಲ್ಲದ ರುಗ್ಮಿಣಿಯೊಂದಿಗೆ ಕ್ರೀಡಿಸುತ್ತಾ ಶ್ರೀಕೃಷ್ಣನು, ಅತ್ಯಂತ ಹಿಂದಿನವನಾದ, ತನ್ನ ಮನಸ್ಸಿನಿಂದ ಹುಟ್ಟಿದ, ಉತ್ಕೃಷ್ಟನಾದ ಮಗನಾದ ‘ಕಾಮನನ್ನು ಅವಳ ಗರ್ಭದಲ್ಲಿಟ್ಟನು.

 

[ಇಲ್ಲಿ ಮನೋಭವ, ಪುರಾತನ, ಇತ್ಯಾದಿ ವಿಶೇಷಣಗಳ ಬಳಕೆಯನ್ನು ಕಾಣುತ್ತೇವೆ. ಈ ವಿವರಣೆಗೆ ಪೂರಕವಾದ ಮಾಹಿತಿಯನ್ನು ನಾವು ಹರಿವಂಶದಲ್ಲಿ[ವಿಷ್ಣುಪರ್ವಣಿ ೧೦೪.೨]ಕಾಣಬಹುದು: ‘ರುಗ್ಮಿಣ್ಯಾಂ ವಾಸುದೇವಸ್ಯ ಲಕ್ಷ್ಮ್ಯಾಂ  ಕಾಮೋ ಧೃತವೃತಃ । ಶಮ್ಬರಾನ್ತಕರೋ ಜಜ್ಞೇ ಪ್ರದ್ಯುಮ್ನಃ  ಕಾಮದರ್ಶನಃ । ಸನತ್ಕುಮಾರ ಇತಿ ಯಃ  ಪುರಾಣೇ ಪರಿಗೀಯತೇ’  (ಪೂರ್ವದಲ್ಲಿ  ಪುತ್ರನಾಗಿದ್ದ ಸನತ್ಕುಮಾರನೇ (ಅವನೇ ಮನ್ಮಥ) ಇಲ್ಲಿ ಪ್ರದ್ಯುಮ್ನನಾಗಿ ಹುಟ್ಟಿದ) ] 


ಚತುಸ್ತನೋರ್ಹರೇಃ ಪ್ರಭೋಸ್ತೃತೀಯರೂಪಸಂಯುತಃ ।

ತತಸ್ತದಾಹ್ವಯೋSಭವತ್ ಸ ರುಗ್ಮಿಣೀಸುತೋ ಬಲೀ ॥೧೭.೧೮೨॥

 

ಬಲಿಷ್ಠನಾದ ಆ ರುಗ್ಮಿಣೀಪುತ್ರ, ನಾಲ್ಕು ರೂಪಗಳುಳ್ಳ[1], ಸರ್ವಸಮರ್ಥನಾದ ಪರಮಾತ್ಮನ ಮೂರನೇ ರೂಪವಾದ ಪ್ರದ್ಯುಮ್ನ ರೂಪದಿಂದ ಪ್ರವಿಷ್ಟನಾದ. ಆ ಕಾರಣದಿಂದ ‘ಪ್ರದ್ಯುಮ್ನ’ ಎನ್ನುವ ಹೆಸರುಳ್ಳವನೇ ಆದ.

 

ಪುರೈವ ಮೃತ್ಯವೇsವದತ್ ತಮೇವ ಶಮ್ಬರಸ್ಯ ಹ ।

ಪ್ರಜಾತಮಬ್ಜಜಾಙ್ಕಜಸ್ತವಾನ್ತಕೋsಯಮಿತ್ಯಪಿ ॥೧೭.೧೮೩॥

 

ಪ್ರದ್ಯುಮ್ನ ಹುಟ್ಟುವುದಕ್ಕೂ ಮೊದಲೇ, ‘ನಿನ್ನನ್ನು ಕೊಲ್ಲುವವನು ಮುಂದೆ ಹುಟ್ಟುತ್ತಾನೆ’ ಎಂದು ಬ್ರಹ್ಮನ ತೊಡೆಯಿಂದ ಹುಟ್ಟಿದ ನಾರದರು ಶಮ್ಬರನಿಗೆ ಹೇಳಿದ್ದರು. ಪ್ರದ್ಯುಮ್ನ ಹುಟ್ಟಿದ ಮೇಲೆ ‘ಈ ರುಗ್ಮಿಣಿಪುತ್ರನೇ ನಿನ್ನ ಮೃತ್ಯು’ ಎಂದು ಹೇಳುತ್ತಾರೆ ಕೂಡಾ. 

 

ಸ ಮಾಯಯಾ ಹರೇಃ ಸುತಂ ಪ್ರಗೃಹ್ಯ ಸೂತಿಕಾಗೃಹಾತ್ ।

ಅವಾಕ್ಷಿಪನ್ಮಹೋದಧಾವುಪೇಕ್ಷಿತೋsರಿಪಾಣಿನಾ ॥೧೭.೧೮೪॥

 

ತಮಗ್ರಸಜ್ಜಲೇಚರಃ ಸ ದಾಶಹಸ್ತಮಾಗತಃ ।

ಕುಮಾರಮಸ್ಯ ತೂದರೇ ನಿರೀಕ್ಷ್ಯ ಶಮ್ಬರೇ ದದುಃ ॥೧೭.೧೮೫॥

 

ಆ ಶಮ್ಬರಾಸುರನು ತನ್ನ ಕೂಟವಿದ್ಯೆಯಿಂದ, ಪರಮಾತ್ಮನಿಂದ ಉಪೇಕ್ಷಿತನಾಗಿ, ಪ್ರಸೂತ ಗೃಹದಿಂದ  ಶ್ರೀಕೃಷ್ಣನ ಪುತ್ರನಾದ ಪ್ರದ್ಯುಮ್ನನನ್ನು ಹಿಡಿದು ಸಮುದ್ರದಲ್ಲಿ ಎಸೆದನು.

ಈರೀತಿ ಎಸೆಯಲ್ಪಟ್ಟ ಆ ಮಗುವನ್ನು ಮೀನೊಂದು ನುಂಗಿತು. ಆ ಮೀನು ಬೆಸ್ತನ ಕೈಯನ್ನು ಸೇರಿತು.  ಮೀನಿನ ಹೊಟ್ಟೆಯಲ್ಲಿ ಮಗುವಿರುವುದನ್ನು ಕಂಡ ಬೆಸ್ತರು ಆ ಮಗುವನ್ನು ಶಮ್ಬರನಿಗೇ ನೀಡಿದರು.

 

[ಹರಿವಂಶದಲ್ಲಿ(ವಿಷ್ಣುಪರ್ವಣಿ: ೧೦೪.೩) ಈ ಕುರಿತಾದ ವಿವರಣೆ ಕಾಣಸಿಗುತ್ತದೆ: ‘ತಂ ಸಪ್ತರಾತ್ರೇ ಸಂಪೂರ್ಣೇ ನಿಶೀಥೇ ಸೂತಿಕಾಗೃಹಾತ್ । ಜಹಾರ ಕೃಷ್ಣಸ್ಯ ಸುತಂ ಶಿಶುಂ  ವೈ ಕಾಲಶಮ್ಬರಃ’.

 ವಿಷ್ಣುಪುರಾಣದಲ್ಲೂ[೫.೨೭.೪-೫] ಈ ಕುರಿತಾದ ವಿವರಣೆ ಇದೆ: ‘ಹೃತ್ವಾ ಚಿಕ್ಷೇಪ ಚೈವೈನಂ ಗ್ರಹೋಗ್ರೇ ಲವಣಾರ್ಣವೇ । ಕಲ್ಲೋಲಜನಿತಾವರ್ತೇ ಸುಘೋರೇ ಮಕರಾಲಯೇ । ಪಾತಿತಂ ತತ್ರ ಚೈವೈಕೋ  ಮತ್ಸ್ಯೋ  ಜಗ್ರಾಹ ಬಾಲಕಮ್ । ನ ಮಮಾರ ಚ ತಸ್ಯಾಪಿ ಜಠರಾಗ್ನಿಪ್ರದೀಪಿತಃ’ (ಶಮ್ಬರನು ತನ್ನ ಕೂಟವಿದ್ಯೆಯನ್ನು ಬಳಸಿ, ಸೂತಿಕಾಗೃಹದಿಂದ ಶ್ರೀಕೃಷ್ಣನ ಪುತ್ರನನ್ನು ಅಪಹರಿಸಿ, ಆ ಮಗುವನ್ನು ಸಮುದ್ರದಲ್ಲಿ ಎಸೆದನು. ಈರೀತಿ ಎಸೆಯಲ್ಪಟ್ಟ ಮಗು ಮೀನಿನಿಂದ ನುಂಗಲ್ಪಟ್ಟು,  ಜಠರಾಗ್ನಿಯಿಂದ ಸುಟ್ಟರೂ ಕೂಡಾ ಸಾಯಲಿಲ್ಲ)]

 

ವಿಪಾಟ್ಯ ಮತ್ಸ್ಯಕೋದರಂ ಸ ಶಮ್ಬರಃ ಕುಮಾರಕಮ್ ।

ನ್ಯವೇದಯನ್ಮನೋಭವಪ್ರಿಯಾಕರೇ ಸುರೂಪಿಣಮ್ ॥೧೭.೧೮೬॥

 

ಆ ಶಮ್ಬರನು ಮೀನಿನ ಹೊಟ್ಟೆಯನ್ನು ಸೀಳಿ, ಸುರೂಪಿಯಾದ ಆ ಬಾಲಕನನ್ನು ಪ್ರದ್ಯುಮ್ನನ ಹೆಂಡತಿಯಾದ ರತಿಯ ಕೈಯಲ್ಲಿ ನೀಡಿದನು.

 

[ಇಲ್ಲಿ ‘ಮನೋಭವಪ್ರಿಯಾಕರೇ’ ಎನ್ನುವ ವಿಶೇಷ ಪ್ರಯೋಗವನ್ನು ಬಳಸಲಾಗಿದೆ. ಇದರ ವಿವರಣೆಯನ್ನು  ಹರಿವಂಶದಲ್ಲಿ(ವಿಷ್ಣುಪರ್ವಣಿ-೧೦೪) ಹೀಗೆ ಸಂಗ್ರಹಿಸಲಾಗಿದೆ:  ತಸ್ಯ ಮಾಯಾವತೀ ನಾಮ ಪತ್ನೀ ಸರ್ವಗೃಹೇಶ್ವರೀ । ಕಾರಯಾಮಾಸ ಸೂದಾನಾಮಾಧಿಪತ್ಯಮನಿನ್ದಿತಾ’(೭) (ಅಲ್ಲಿ, ನಿಂದಿತಳಲ್ಲದ, ಕಾಮನ ಪತ್ನಿ, ಮಾಯಾವತೀ ಎಂಬ ಹೆಸರಿನಿಂದ ಕರೆಯಲ್ಪಟ್ಟು, ಶಮ್ಬರನ ಅಡುಗೆ ಮನೆಯ ಮೇಲುಸ್ತುವಾರಿ  ನೋಡಿಕೊಳ್ಳುತ್ತಿದ್ದಳು) ‘ಅನಪತ್ಯಾ ತು ತಸ್ಯಾsಸೀದ್ ಭಾರ್ಯಾ ರೂಪಗುಣಾನ್ವಿತಾ ।  ನಾಮ್ನಾ ಮಾಯಾವತೀ ನಾಮ ಮಾಯೇವ ಶುಭದರ್ಶನಾ । ದದೌ  ಸ ವಾಸುದೇವಸ್ಯ  ಪುತ್ರಂ ಪುತ್ರಮಿವಾsತ್ಮಜಮ್ ।  ತಸ್ಯಾ ಮಹಿಷ್ಯಾ ಮಾದಿನ್ಯಾ ದಾನವಃ ಕಾಲಚೋದಿತಃ’ (೫-೬)]

 

(ಈ ಹಿನ್ನೆಲೆಯಲ್ಲಿನ ಕಥೆಯನ್ನು ಮುಂದೆ ಹೇಳುತ್ತಾರೆ: )



[1] ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಮತ್ತು  ಅನಿರುದ್ಧ