ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, August 1, 2020

Mahabharata Tatparya Nirnaya Kannada 17187_17191

ಅನಙ್ಗತಾಮುಪಾಗತೇ ಪುರಾ ಹರೇಣ ಸಾsಙ್ಗಜೇ।

ವಶಂ ವಿರಿಞ್ಚಶಾಪತೋ ಜಗಾಮ ಶಮ್ಬರಸ್ಯ ಹಿ ॥೧೭.೧೮೭॥

 

ಹಿಂದೆ, ರುದ್ರನಿಂದ ಮನ್ಮಥನು ಅವಯವಗಳನ್ನು ಕಳೆದುಕೊಳ್ಳಲು, ಬ್ರಹ್ಮದೇವರ ಶಾಪದಿಂದ ರತಿ ಶಮ್ಬರನ ವಶವನ್ನು ಹೊಂದಿದಳು.

 

(ಬ್ರಹ್ಮದೇವರ ಶಾಪಕ್ಕೆ ಕಾರಣವನ್ನು ಹೇಳುತ್ತಾರೆ: )

 

ಪುರಾ ಹಿ ಪಞ್ಚಭರ್ತ್ತೃಕಾಂ ನಿಶಮ್ಯ ಕಞ್ಜಜೋದಿತಾಮ್ ।

ಜಹಾಸ ಪಾರ್ಶತಾತ್ಮಜಾಂ ಶಶಾಪ ತಾಂ ತತಸ್ತ್ವಜಃ ॥೧೭.೧೮೮॥

 

ಒಮ್ಮೆ, ಬ್ರಹ್ಮದೇವರಿಂದ ಹೇಳಲ್ಪಟ್ಟ ಐದು ಗಂಡಂದಿರುಳ್ಳ ದ್ರೌಪದಿಯ ವಿಷಯವನ್ನು ಕೇಳಿ ರತಿ ಅಪಹಾಸ್ಯ ಮಾಡಿ ನಕ್ಕಳು. ಆಕಾರಣದಿಂದ ಬ್ರಹ್ಮದೇವರು ಅವಳನ್ನು ಶಪಿಸಿದರು.

[ಈ ಕಾರಣದಿಂದಲೇ ಉತ್ತಮರನ್ನು ಅಪಹಾಸ್ಯ ಮಾಡಬಾರದು ಎಂದು ಹೇಳುವುದು. ಅದರಲ್ಲೂ ವಿಶೇಷವಾಗಿ ದೇವೋತ್ತಮರನ್ನಂತೂ ಎಂದೆಂದಿಗೂ ಅಪಹಾಸ್ಯ ಮಾಡಲೇಬಾರದು]

 

ಭವಾಸುರೇಣ ದೂಷಿತೇತಿ ಸಾ ತತೋ ಹಿ ಮಾಯಯಾ ।

ವಿಧಾಯ ತಾಂ ನಿಜಾಂ ತನುಂ ಜಗಾಮ ಚಾನ್ಯಯಾsಸುರಮ್ ॥೧೭.೧೮೯॥

 

ಒಬ್ಬ ರಾಕ್ಷಸನಿಂದ ನಿನ್ನ ಮೈಕೊಳೆಯಾಗಲೀ ಎಂದು ಬ್ರಹ್ಮನಿಂದ ಶಪಿಸಲ್ಪಟ್ಟ ರತಿಯು, ಮಾಯೆಯಿಂದ ತನ್ನ ಶರೀರವನ್ನು ಮುಚ್ಚಿಕೊಂಡು, ಇನ್ನೊಂದು ಶರೀರದಿಂದ ಅಸುರನನ್ನು ಕುರಿತು ತೆರಳಿದಳು.

 

ಗೃಹೇsಪಿಸಾssಸುರೇ ಸ್ಥಿತಾ ನಿಜಸ್ವರೂಪತೋsಸುರಮ್ ।

ನ ಗಚ್ಛತಿ ಸ್ಮ ಸಾ ಪತಿಂ ನಿಜಂ ಸಮೀಕ್ಷ್ಯ ಹರ್ಷಿತಾ ॥೧೭.೧೯೦॥

 

ಅಸುರನಿಗೆ ಸಂಬಂಧಪಟ್ಟ ಮನೆಯಲ್ಲಿ ಇದ್ದವಳಾದರೂ, ತನ್ನ ಸ್ವರೂಪದಿಂದ ಅಸುರನನ್ನು ಸೇರಲಿಲ್ಲ. ಅಂಥಹ ರತಿ ತನ್ನ ಗಂಡನನ್ನು (ಮಗುವಿನ ಶರೀರದೊಂದಿಗೆ) ನೋಡಿ, ಅತ್ಯಂತ ಸಂತೋಷಗೊಂಡಳು.

 

ರಸಾಯನೈಃ ಕುಮಾರಕಂ ವ್ಯವರ್ದ್ಧಯದ್ ರತಿಃ ಪತಿಮ್ ।

ಸ  ಪೂರ್ಣ್ಣಯೌವನೋsಭವಚ್ಚತುರ್ಭಿರೇವ ವತ್ಸರೈಃ ॥೧೭.೧೯೧॥

 

ರತಿಯು ಪುಟ್ಟರೂಪದಲ್ಲಿರುವ ತನ್ನ ಗಂಡನನ್ನು ರಸಾಯನದಿಂದ ಬೆಳೆಸಿದಳು. ಅವನು ನಾಲ್ಕೇ ವರ್ಷಗಳಲ್ಲಿ ಸಂಪೂರ್ಣ ಯುವಕನಾಗಿ ಬೆಳೆದನು.

 

[ಇಲ್ಲಿ ‘ರಸಾಯನೈಃ ಕುಮಾರಕಂ’ ಎಂದು ಹೇಳಿದ್ದಾರೆ. ಈ ಕುರಿತಾದ ವಿವರಣೆಯನ್ನು ಹರಿವಂಶದಲ್ಲಿ(ವಿಷ್ಣುಪರ್ವಣಿ ೧೦೪.೧೨-೧೩) ಕಾಣಬಹುದು.  `  ಕಥಮಸ್ಯ ಸ್ತನಂ ದಾಸ್ಯೇ ಮಾತೃಭಾವೇನ ಜಾನತೀ । (ನನಗೆ ಅವನು ಯಾರೆಂಬುದು ಗೊತ್ತಿದೆ. ಹೀಗಿರುವಾಗ ಅವನಿಗೆ ಹೇಗೆ ಸ್ತನಪಾನ ಮಾಡಲಿ?) ಭರ್ತುರ್ಭಾರ್ಯಾ ತ್ವಹಂ ಭೂತ್ವಾ ವಕ್ಷ್ಯೇ ವಾ ಪುತ್ರ ಇತ್ಯುತಾ ।  (ಈತನ ಹೆಂಡತಿಯಾಗಿದ್ದು, ಅವನನ್ನು ‘ಮಗನೇ’ ಎಂದು ಯಾವರೀತಿ ಕರೆಯಲಿ?)  ಏವಂ ಸಞ್ಚಿಂತ್ಯ ಮನಸಾ ಧಾತ್ರ್ಯಾಸ್ತಂ ಸಾ ಸಮರ್ಪಯತ್ । (ಹೀಗೆ ಚಿಂತಿಸಿದ ಆಕೆ ಮಗುವಿನ ಆರೈಕೆಗಾಗಿ  ಒಬ್ಬ ದಾದಿಯನ್ನು ನೇಮಿಸಿದಳು). ರಸಾಯನಪ್ರಯೋಗೈಶ್ಚ ಶೀಘ್ರಮೇವ ವ್ಯವರ್ಧಯತ್’ (ರಸಾಯನ ಪ್ರಯೋಗದಿಂದ ಅವನನ್ನು ಶೀಘ್ರದಲ್ಲಿ  ದೊಡ್ಡವನನ್ನಾಗಿ ಬೆಳೆಸಿದಳು).  


No comments:

Post a Comment