ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, September 3, 2020

Mahabharata Tatparya Nirnaya Kannada 18152_18157

 

ಪಞ್ಚದೇವೀತನುಸ್ತ್ವೇಷಾ ದ್ರೌಪದೀ ನಾಮ ಚಾಭವತ್ ।

ವೇದೇಷು ಸಪುರಾಣೇಷು ಭಾರತೇ ಚಾವಗಮ್ಯತೇ ॥೧೮.೧೫೨॥

 

ಉಕ್ತೋsರ್ತ್ಥಃ ಸರ್ವ ಏವಾಯಂ ತಥಾ ಪೂರ್ವೋದಿತಾಶ್ಚ ಯೇ 

ಮುಮುದುಃ ಸರ್ವಪಾಞ್ಚಾಲಾ ಜಾತಯೋಃ ಸುತಯೋಸ್ತಯೋಃ ॥೧೮.೧೫೩॥

 

ಈರೀತಿಯಾಗಿ, ಪಂಚದೇವಿಯರ ಏಕಶರೀರವುಳ್ಳ ಆ ಇಂದ್ರಸೇನೆಯು ‘ದ್ರೌಪದೀ’ ಎನ್ನುವ ಹೆಸರನ್ನು ಪಡೆದು, ಅಗ್ನಿಕುಂಡದಲ್ಲಿ ಜನಿಸಿದಳು ಮತ್ತು ವೇದ-ಪುರಾಣ ಹಾಗೂ ಭಾರತದಲ್ಲಿ ಹೇಳಲ್ಪಟ್ಟ ಭಾರತೀ ಎನ್ನುವ ಹೆಸರುಳ್ಳವಳಾದಳು.

[ಮಹಾಭಾರತದ ಆದಿಪರ್ವದಲ್ಲಿ(೨೧೪.೩೫) ದ್ರೌಪದೀ ಕುರಿತು ಹೇಳಿರುವ ಮಾತು ಹೀಗಿದೆ: ಏವಮೇತೆ   ಪಾಣ್ಡವಾಃ ಸಮ್ಬಭೂವುರ್ಯೇ ತೇ ರಾಜನ್ ಪೂರ್ವಮಿಂದ್ರಾ ಬಭೂವುಃ । ಲಕ್ಷ್ಮೀಶ್ಚೈಷಾಂ ಪೂರ್ವಮೇವೋಪದಿಷ್ಟಾ ಭಾರ್ಯಾ ಯೈಷ ದ್ರೌಪದೀ ದಿವ್ಯರೂಪಾ’].

ಇದೆಲ್ಲವನ್ನೂ ಕೂಡಾ ಮಹಾಭಾರತದಲ್ಲೇ ಹೇಳಿದ್ದಾರೆ (ಆದರೆ ಅದನ್ನು ನಾವು ಅರ್ಥೈಸಿಕೊಳ್ಳಬೇಕು ಅಷ್ಟೇ). ಹೀಗೆ ದ್ರೌಪದೀ ಮತ್ತು ಧೃಷ್ಟದ್ಯುಮ್ನರಿಬ್ಬರು ಹುಟ್ಟುತ್ತಿರಲು, ಎಲ್ಲಾ ಪಾಞ್ಚಾಲರೂ  ಸಂತಸಪಟ್ಟರು.

 

ಮಾನುಷಾನ್ನೋಪಭೋಗೇನ ಸಂಸರ್ಗ್ಗಾನ್ಮಾನುಷೇಷು ಚ ।

ಮನುಷ್ಯಪುತ್ರತಾಯಾಶ್ಚ ಭಾವೋ ಮಾನುಷ ಏತಯೋಃ ॥೧೮.೧೫೪॥

 

ಅಭೂನ್ನಾತಿತರಾಮಾಸೀತ್ ತದಯೋನಿತ್ವಹೇತುತಃ ।

ಯಾಜೋಪಯಾಜೌ ತಾವೇವ ದಯಿತಾ ದ್ರುಪದಸ್ಯ ಸಾ ॥೧೮.೧೫೫॥

 

ಮಾತೃಸ್ನೇಹಾರ್ತ್ಥಮನಯೋರ್ಯ್ಯಯಾಚೇ ದದತುಶ್ಚ ತೌ ।

ಜಾತಮಾತ್ಮನಿಹನ್ತಾರಂ ಭಾರದ್ವಜೋ ನಿಶಮ್ಯ ತಮ್ ॥೧೮.೧೫೬॥

 

ಯಶೋರ್ತ್ಥಮಸ್ತ್ರಾಣಿ ದದಾವಗ್ರಹೀತ್ ಸೋsಪಿ ಲೋಭತಃ ।

ರಾಮಾಸ್ತ್ರಾಣಾಂ ದುರ್ಲ್ಲಭತ್ವಾತ್ ತ್ರಿದಶೇಷ್ವಪಿ ವೀರ್ಯ್ಯವಾನ್ ॥೧೮.೧೫೭॥

ಮಾನುಷಾನ್ನದ ಸ್ವೀಕಾರದಿಂದ, ಮನುಷ್ಯರ ಸಂಸರ್ಗದಿಂದ, ಮನುಷ್ಯರಿಂದ ಪ್ರೇರಿಸಲ್ಪಟ್ಟು ಯಾಗ ಮಾಡಲ್ಪಟ್ಟಿದ್ದರಿಂದ, ಅವರಿಬ್ಬರಲ್ಲಿ ಮನುಷ್ಯ ಭಾವವೆಂಬುದು ಬಂತು. ಆದರೆ ಆಯೋಜಿನರಾಗಿರುವ(ತಾಯಿಯ ಗರ್ಭದಿಂದ ಹುಟ್ಟಿಲ್ಲವಾದ್ದರಿಂದ) ಅವರಲ್ಲಿ, ಜನಸಾಮಾನ್ಯರಂತೆ ಅಭಿಮಾನ(ದೇಶಾಭಿಮಾನ, ಮಾತೃ-ಪಿತೃ ಅಭಿಮಾನ ಇತ್ಯಾದಿ)  ಬರಲಿಲ್ಲ.

ದ್ರುಪದನ ಹೆಂಡತಿಯು, ಈರೀತಿ ಹುಟ್ಟಿದ ಇವರಿಬ್ಬರ ತಾಯಿಯಾಗಿ ಸ್ನೇಹಪಡೆಯಬೇಕು ಎಂದು ಬಯಸಿ,  ಯಾಜ ಹಾಗೂ ಉಪಯಾಜರನ್ನೇ ‘ಅವರಿಬ್ಬರೂ ನನ್ನನ್ನು ತಾಯೀ ಎಂದು ಭಾವಿಸಲಿ’ ಎಂದು ಬೇಡಿಕೊಂಡಳು. ಆಗ ಯಾಜ-ಉಪಯಾಜರು ಅವಳಿಗೆ ಆರೀತಿ ಆಶೀರ್ವದಿಸಿದರು ಕೂಡಾ.

 ಭಾರದ್ವಜ ಋಷಿಗಳ ಮಗನಾದ ದ್ರೋಣಾಚಾರ್ಯರು, ತನ್ನನ್ನು ಕೊಲ್ಲಬಲ್ಲ ಧೃಷ್ಟದ್ಯುಮ್ನನು ಹುಟ್ಟಿದ್ದಾನೆ ಎಂದು ಕೇಳಿಯೂ,  ಕೀರ್ತಿಗಾಗಿ ಅವನಿಗೆ ಅಸ್ತ್ರವಿದ್ಯೆಯನ್ನು ಕೊಟ್ಟರು. ಧೃಷ್ಟದ್ಯುಮ್ನ ಲಾಭದಿಂದ ಅಸ್ತ್ರವನ್ನು ಸ್ವೀಕರಿಸಿದ ಕೂಡಾ. ಏಕೆಂದರೆ ಭೂಲೋಕದಲ್ಲಿ ಪರಶುರಾಮದೇವರು ಹೇಳಿಕೊಟ್ಟ ಅಸ್ತ್ರಗಳು ದೇವತೆಗಳ ಬಳಿಯೂ ಇರಲಿಲ್ಲ. ಅದರಿಂದಾಗಿ ಅವನು ಅದನ್ನು ಸ್ವೀಕರಿಸಿದ.

[ಒಟ್ಟು ತಾತ್ಪರ್ಯ ಇಷ್ಟು: ದ್ರೋಣಾಚಾರ್ಯರಿಗೆ ತನ್ನನ್ನು ಕೊಲ್ಲುವ ಧೃಷ್ಟದ್ಯುಮ್ನ ಹುಟ್ಟಿದ್ದಾನೆ ಎನ್ನುವ ವಿಷಯ ತಿಳಿಯಿತು. ಧೃಷ್ಟದ್ಯುಮ್ನ ವಿದ್ಯಾಕಾಂಕ್ಷಿಯಾಗಿ ದ್ರೋಣರ ಬಳಿಗೇ ಬಂದ. ಹೇಗೂ ಮರಣ ನಿಶ್ಚಿತ ಎಂದು ಅರಿತಿದ್ದ ದ್ರೋಣರು, ಕಂಸನಂತೆ ಭಯಪಡಲಿಲ್ಲ. ತನ್ನನ್ನು ಕೊಲ್ಲುವವನು ಎಂದು ತಿಳಿದಿದ್ದರೂ ಕೂಡಾ, ಧೃಷ್ಟದ್ಯುಮ್ನನಿಗೆ ಅಸ್ತ್ರವಿದ್ಯೆಯನ್ನು ನೀಡಿ ಕೀರ್ತಿಯನ್ನು ಪಡೆದರು].  

Wednesday, September 2, 2020

Mahabharata Tatparya Nirnaya Kannada 18144_18151

 

ಮದವಜ್ಞಾನಿಮಿತ್ತೇನ ಪತಿತಾ ಇತಿ ತಾನ್ ಸುರಾನ್ ।

ಮಾರುತಾದೀನ್ ಮೃಷಾsವಾದೀರಿತಿ ಬ್ರಹ್ಮಾ ಶಿವಂ ತದಾ ॥೧೮.೧೪೪॥

 

ಶಶಾಪ ಮಾನುಷೇಷು ತ್ವಂ ಕ್ಷಿಪ್ರಂ ಜಾತಃ ಪರಾಭವಮ್ ।

ಶಕ್ರಾನ್ನರತನೋರ್ಯ್ಯಾಸಿ ಯಸ್ಮೈ ತ್ವಂ ತು ಮೃಷಾsವದಃ ॥೧೮.೧೪೫॥

 

ಆಗ ಬ್ರಹ್ಮದೇವರು ಸಿಟ್ಟಿನಿಂದ ಹೇಳುತ್ತಾರೆ: “ನಿನ್ನನ್ನು ತಿರಸ್ಕಾರ ಮಾಡಿದ್ದರಿಂದಾಗಿ ಆ ದೇವತೆಗಳು ಕೆಳಗೆ ಬಿದ್ದಿದ್ದಾರೆ ಎಂದು ದೇವತೆಗಳ ಕುರಿತು ನೀನು ಇಂದ್ರನಿಗೆ ಸುಳ್ಳು  ಹೇಳಿದೆಯಲ್ಲಾ, ಅದರಿಂದಾಗಿ ನಾನು ನಿನಗೆ ಶಾಪ ಕೊಡುತ್ತಿದ್ದೇನೆ. ನೀನು ಶೀಘ್ರದಲ್ಲಿ ಮನುಷ್ಯಯೋನಿಯಲ್ಲಿ ಹುಟ್ಟು. ಈ ನರನ ಆವೇಶವುಳ್ಳ ಇಂದ್ರನಿಂದ ಸೋಲು. ಯಾರಿಗೆ ನೀನು ಸುಳ್ಳು ಹೇಳಿದೆಯೋ, ಅವರಿಂದಲೇ ನಿನಗೆ ಸೋಲುಂಟಾಗಲಿ”

 

ಮಚ್ಛಪ್ತಾನಾಂ ಚ ದೇವೀನಾಮವಿಚಾರ್ಯ್ಯ ಮಯಾ ಯತಃ ।

ಪತಿಯೋಗವರಂ ಪ್ರಾದಾ ನಾವಾಪ್ಸ್ಯಸಿ ತತಃ ಪ್ರಿಯಾಮ್ ॥೧೮.೧೪೬॥

 

ಮಾನುಷೇಷು ತತಃ ಪಶ್ಚಾದ್ ಭಾರತೀದೇಹನಿರ್ಗ್ಗತಾಮ್ ।

ಸ್ವಲೋಕೇ ಪ್ರಾಪ್ಸ್ಯಸಿ ಸ್ವಾರ್ತ್ಥೇ ವರೋsಯಂ ತೇ ಮೃಷಾ ಭವೇತ್ ॥೧೮.೧೪೭॥

 

“ಯಾವ ಕಾರಣದಿಂದ ನೀನು ನನ್ನಿಂದ ಶಾಪಹೊಂದಲ್ಪಟ್ಟ ದೇವಿಯರ ಕುರಿತು, ನನ್ನಲ್ಲಿ ವಿಚಾರ ಮಾಡದೇ (ನನ್ನ ಅನುಜ್ಞೆ ಪಡೆಯದೇ), ಅವರಿಗೆ ಪತಿ-ಯೋಗದ ವರವನ್ನು ನೀಡಿದೆಯೋ, ಆ ಕಾರಣದಿಂದ ಮನುಷ್ಯಲೋಕದಲ್ಲಿ ನೀನು ಹೆಂಡತಿಯನ್ನು ಹೊಂದಲಾರೆ. ಮುಂದೆ ಭಾರತೀದೇವಿಯ  ದೇಹದಿಂದ ಹೊರಬಂದ ಪಾರ್ವತಿಯನ್ನು ನೀನು ಕೈಲಾಸದಲ್ಲಿ ಹೊಂದುವೆ. ಆದ್ದರಿಂದ ನೀನು ನೀಡಿರುವ ವರ ನಿನ್ನ ವಿಚಾರದಲ್ಲಿ ಮಾತ್ರ ಸುಳ್ಳಾಗಲಿ, ಉಳಿದ ನಾಲ್ವರ ವಿಷಯದಲ್ಲಿ ಸತ್ಯವಾಗಲಿ”.

(ಇಂದ್ರಸೇನೆಯಲ್ಲಿ ಪಾರ್ವತಿಯೂ ಇದ್ದು ವರವನ್ನು ಪಡೆದಿದ್ದಳು. ಶಿವನೇ ನೀಡಿರುವ ವರದಂತೆ ಪಾರ್ವತಿಗೆ ಮಾನುಷಯೋನಿಯಲ್ಲಿ ಶಿವ ಪತಿಯಾಗಿ ಸಿಗಬೇಕಿತ್ತು. ಆದರೆ ಅದನ್ನು ಬ್ರಹ್ಮದೇವರು ತಡೆದರು) 

 

ಏಷಾ ಸಾ ದ್ರೌಪದೀ ನಾಮ ಪಞ್ಚದೇವೀತನುರ್ಭವೇತ್ ।

ಮೃಷಾವಾಗ್ ಯೇಷು ತೇ ಪ್ರೋಕ್ತಾ ಮಾರುತಾದ್ಯಾಸ್ತು ತೇsಖಿಲಾಃ ॥೧೮.೧೪೮॥

 

“ಐದು ದೇವಿಯರ ಸ್ವರೂಪಭೂತಳಾದ ಆ ಇನ್ದ್ರಸೇನೆಯು ‘ದ್ರೌಪದೀ’ ಎನ್ನುವವಳಾಗಲಿ. ನೀನು ಯಾರನ್ನು ಕುರಿತು ಸುಳ್ಳು ಹೇಳಿದೆಯೋ, ಆ ಎಲ್ಲಾ ಮಾರುತಾದಿ ದೇವತೆಗಳು(ಮುಖ್ಯಪ್ರಾಣ, ಯಮ ಮತ್ತು ಅಶ್ವೀದೇವತೆಗಳು) ಅವಳ  ಗಂಡಂದಿರಾಗುತ್ತಾರೆ”.

 

ತಾಸಾಂ ಪತಿತ್ವಮಾಪ್ಸ್ಯನ್ತಿ ಭಾರತ್ಯೈವ ತು ಪಾರ್ವತೀ ।

ಸಂಯುಕ್ತಾ ವ್ಯವಹಾರೇಷು ಪ್ರವರ್ತ್ತೇತ ನಚಾನ್ಯಥಾ ॥೧೮.೧೪೯॥

 

“ಪಾರ್ವತೀದೇವಿ, ಭಾರತೀದೇವಿಯೊಂದಿಗೆ ಸಂಯುಕ್ತಳಾಗಿ, ಎಲ್ಲಾ ವ್ಯವಹಾರದಲ್ಲಿ ಒಟ್ಟಿಗೇ ಇರಲಿ. ಉಳಿದವರಿಗೆ ಆ ಸೌಲಭ್ಯ ಸಿಗದಿರಲಿ”.

 

ಏತೇ ಹಿ ಮಾರುತಾದ್ಯಾಸ್ತೇ ದೇವಕಾರ್ಯ್ಯಾರ್ತ್ಥಗೌರವಾತ್ ।

ಜಾತಾ ಇತಿ ಶ್ರುತಿಸ್ತತ್ರ ನಾವಜ್ಞಾ ತೇsತ್ರ ಕಾರಣಮ್ ॥೧೮.೧೫೦॥

 

“ಈ ವಾಯುವೇ ಮೊದಲಾದ ದೇವತೆಗಳು ದೇವಕಾರ್ಯ ಮಾಡಲೆಂದೇ ಹುಟ್ಟಿರುತ್ತಾರೆ’ ಎಂದು ವೇದದಲ್ಲಿ ಹೇಳಲಾಗಿದೆ. ಹಾಗಾಗಿ  ನಿನ್ನನ್ನು ಅವಮಾನ ಮಾಡಿರುವುದು ಅಲ್ಲಿ ಕಾರಣವೇ ಅಲ್ಲ”.

 

ದೀರ್ಘಕಾಲಂ ಮನುಷ್ಯೇಷು ತತಸ್ತ್ವಂ ಸ್ಥಿತಿಮಾಪ್ಸ್ಯಸಿ ।

ಇತ್ಯುಕ್ತ್ವಾ ಪ್ರಯಯೌ ಬ್ರಹ್ಮಾ ಸೋsಶ್ವತ್ಥಾಮಾ ಶಿವೋsಭವತ್ ॥೧೮.೧೫೧॥

 

“ಆದಕಾರಣ ನೀನು ಧೀರ್ಘಕಾಲದಲ್ಲಿ ಮನುಷ್ಯಯೋನಿಯಲ್ಲಿ ಅವಸ್ಥಿತಿಯನ್ನು ಹೊಂದುವೆ” ಎಂದು ಹೇಳಿದ ಬ್ರಹ್ಮದೇವರು ಅಲ್ಲಿಂದ ಹೊರಟುಹೋದರು.  ಆ ಶಿವನೇ ಅಶ್ವತ್ಥಾಮನಾಗಿ ಭೂಮಿಯಲ್ಲಿ ಅವತರಿಸಿದ.

Tuesday, September 1, 2020

Mahabharata Tatparya Nirnaya Kannada 18137_18143

 

ಕಿಮರ್ತ್ಥಂ ರೋದಿಷೀತ್ಯೇವ ಸಾsಬ್ರವೀದ್ ವಟುರೂಪಿಣಮ್ ।

ಶಙ್ಕರಂ ದರ್ಶಯಿತ್ವೈವ ಪಞ್ಚಭರ್ತ್ತೃತ್ವಮೇಷ ಮೇ ॥೧೮.೧೩೭॥

 

ವರಾರ್ತ್ಥಮರ್ತ್ಥಿತಃ ಪ್ರಾದಾದಿತಿ ತಂ ಶಿವ ಇತ್ಯಥ ।

ಅಜಾನನ್ ಶಕ್ರ ಆಹೋಚ್ಚೈಃ ಕಿಮೇತದ್ ಭುವನತ್ರಯೇ  ॥೧೮.೧೩೮॥

 

‘ಏಕಾಗಿ ಅಳುವೇ’ ಎಂದು ಕೇಳಿದ ದೇವೇಂದ್ರನಿಗೆ ಅವಳು, ಅಲ್ಲಿದ್ದ ವಟುರೂಪಿ ಶಂಕರನನ್ನು ತೋರಿಸಿ, ‘ಇವನಲ್ಲಿ ವರವನ್ನು ಬೇಡಿಕೊಂಡರೆ, ಐದು ಜನ ಗಂಡಂದಿರಾಗಲಿ ಎಂದು ವರವನ್ನು ನೀಡಿದ’ ಎಂದಳು. ಆಗ ವಟುರೂಪದಲ್ಲಿರುವವನನ್ನು ಶಿವನೆಂದು ಗುರುತಿಸದ ಇಂದ್ರ ಗಟ್ಟಿಯಾಗಿ ಮಾತನಾಡಿದ.

 

ಮತ್ಪಾಲಿತೇ ಯೋಷಿತಂ ತ್ವಂ ವೃಥಾ ಶಪಸಿ ದುರ್ಮ್ಮತೇ ।

ಇತೀರಿತೇ ಶಿವಃ ಪ್ರಾಹ ಪತ ಮಾನುಷ್ಯಮಾಪ್ನುಹಿ ॥೧೮.೧೩೯॥

 

ಅಸ್ಯಾಶ್ಚ ಭರ್ತ್ತಾ ಭವಸಿ ತ್ವಾಮೇವೈಷಾ ವರಿಷ್ಯತಿ ।

ಪಶ್ಯಾತ್ರ ಮದವಜ್ಞಾನಾತ್ ಪತಿತಾಂಸ್ತ್ವಾದೃಶಾನ್ ಸುರಾನ್ ॥೧೮.೧೪೦॥

 

ಗಿರೇರಧಸ್ತಾದಸ್ಯೈವೇತ್ಯುಕ್ತೋsಸೌ ಪಾಕಶಾಸನಃ ।

ಉದ್ಬಬರ್ಹ ಗಿರಿಂ ತಂ ತು ದದರ್ಶಾತ್ರ ಚ ತಾನ್ ಸುರಾನ್ ॥೧೮.೧೪೧॥

 

‘ನಾನು ಈ ಮೂರುಲೋಕದ ರಾಜ. ನನ್ನ ಆಳ್ವಿಕೆಯಲ್ಲಿ ಒಂದು ಹೆಣ್ಣಿಗೆ ದುರ್ಮತಿಯಾಗಿ ಶಪಿಸಿರುವೆಯಲ್ಲಾ’ ಎಂದು ದೇವೇಂದ್ರ ಏರಿದ ಧ್ವನಿಯಲ್ಲಿ ಕೇಳಿದಾಗ,  ಶಿವನು : ‘ನೀನೂ ಕೂಡಾ ಮನುಷ್ಯನಾಗು’ ಎಂದು ಇಂದ್ರನನ್ನು ಶಪಿಸಿದನು.

‘ನೀನೂ ಇವಳ ಗಂಡನೇ ಆಗುತ್ತೀಯಾ. ನನ್ನನ್ನು ಅವಮಾನ ಮಾಡಿದ್ದರಿಂದ^ ನಿನ್ನಂತಹ ಇತರ  ದೇವತೆಗಳು ಅಲ್ಲಿ ಪರ್ವತದ ಕೆಳಗೆ ಬಿದ್ದಿದ್ದಾರೆ ನೋಡು’ ಎನ್ನುತ್ತಾನೆ ಶಿವ.

‘ಇದೇ ಪರ್ವತದ ಕೆಳಗೆ ಅವರೆಲ್ಲಾ ಯೋಚನೆ ಮಾಡುತ್ತಿದ್ದಾರೆ’ ಎಂದು ಶಿವನಿಂದ ಹೇಳಲ್ಪಟ್ಟಾಗ, ಪಾಕಶಾಸನನಾದ (ಪಾಕನೆಂಬ ಅಸುರನನ್ನು ಕೊಂದ) ಇಂದ್ರನು ಬೆಟ್ಟವನ್ನು ತೆಗೆದು ನೋಡಿದ ಮತ್ತು ಅಲ್ಲಿ ಆ ದೇವತೆಗಳನ್ನು ಕಂಡ ಕೂಡಾ.

 

ಪೂರ್ವೇನ್ದ್ರಾನ್ ಮಾರುತವೃಷನಾಸತ್ಯಾಂಶ್ಚತುರಃ ಸ್ಥಿತಾನ್ ।

ಮಾನುಷೇಷ್ವವತಾರಾಯ ಮನ್ತ್ರಂ ರಹಸಿ ಕುರ್ವತಃ ॥೧೮.೧೪೨॥

 

ತತೋ ವರೇಣ್ಯಂ ವರದಂ ವಿಷ್ಣುಂ ಪ್ರಾಪ್ಯ ಸ ವಾಸವಃ ।

ತತ್ಪ್ರಸಾದಾನ್ನರಾಂಶೇನ ಯುಕ್ತೋ ಭೂಮಾವಜಾಯತ ॥೧೮.೧೪೩॥

 

ಪೂರ್ವ ಮನ್ವಂತರದಲ್ಲಿ ಇಂದ್ರರಾದ ವಾಯು, ಯಮ, ಮತ್ತು ಅಶ್ವಿನೀದೇವತೆಗಳಿಬ್ಬರಿಂದ ಕೂಡಿದ  ನಾಲ್ವರನ್ನು ಇಂದ್ರ ನೋಡಿದ. ಅವರು ಮುಂದೆ ಮನುಷ್ಯರಾಗಿ ಹುಟ್ಟುವುದರ ಕುರಿತು ಅಲ್ಲಿ ಮಂತ್ರಾಲೋಚನೆ ಮಾಡುತ್ತಿದ್ದರು.

ಈರೀತಿ ಶಿವನಿಂದ ಶಾಪಗ್ರಸ್ಥನಾದ ಇಂದ್ರನು ತದನಂತರ, ಉತ್ಕೃಷ್ಟನೂ, ವರಪ್ರದನೂ ಆದ ವಿಷ್ಣುವನ್ನು ಹೊಂದಿ, ಅವನ ಅನುಗ್ರಹದಿಂದ, ಭಗವಂತನ ನರಾವೇಶದಿಂದ ಕೂಡಿಕೊಂಡು ಭೂಮಿಯಲ್ಲಿ ಹುಟ್ಟಿದನು.

[^ಆ ನಾಲ್ವರು ದೇವತೆಗಳು ಮನುಷ್ಯರಲ್ಲಿ ಅವತಾರ ಮಾಡಲು ಪರ್ವತದ ಕೆಳಗೆ ಮಂತ್ರಾಲೋಚನೆ ಮಾಡುತ್ತಿದ್ದರೇ ವಿನಃ, ರುದ್ರದೇವರಿಗೆ ಅವಮಾನ ಮಾಡಿ ಕೆಳಗೆ ಬಿದ್ದಿರಲಿಲ್ಲ. ಹಾಗಾಗಿ ಶಿವನಿಂದ ನುಡಿಯಲ್ಪಟ್ಟ ಆ ಮಾತು ಮಿಥ್ಯವಾಗಿತ್ತು ಮತ್ತು ಅದು ಬ್ರಹ್ಮದೇವರ ಕೋಪಕ್ಕೆ ಕಾರಣವಾಗಿ  ಅವರು ಶಿವನಿಗೆ ಶಾಪ ನೀಡಲು ಕಾರಣವಾಯಿತು].