ಮದವಜ್ಞಾನಿಮಿತ್ತೇನ ಪತಿತಾ ಇತಿ ತಾನ್ ಸುರಾನ್ ।
ಮಾರುತಾದೀನ್ ಮೃಷಾsವಾದೀರಿತಿ ಬ್ರಹ್ಮಾ ಶಿವಂ ತದಾ ॥೧೮.೧೪೪॥
ಶಶಾಪ ಮಾನುಷೇಷು ತ್ವಂ ಕ್ಷಿಪ್ರಂ ಜಾತಃ ಪರಾಭವಮ್ ।
ಶಕ್ರಾನ್ನರತನೋರ್ಯ್ಯಾಸಿ ಯಸ್ಮೈ ತ್ವಂ ತು ಮೃಷಾsವದಃ ॥೧೮.೧೪೫॥
ಆಗ ಬ್ರಹ್ಮದೇವರು ಸಿಟ್ಟಿನಿಂದ ಹೇಳುತ್ತಾರೆ: “ನಿನ್ನನ್ನು
ತಿರಸ್ಕಾರ ಮಾಡಿದ್ದರಿಂದಾಗಿ ಆ ದೇವತೆಗಳು ಕೆಳಗೆ ಬಿದ್ದಿದ್ದಾರೆ ಎಂದು ದೇವತೆಗಳ ಕುರಿತು ನೀನು ಇಂದ್ರನಿಗೆ
ಸುಳ್ಳು ಹೇಳಿದೆಯಲ್ಲಾ, ಅದರಿಂದಾಗಿ ನಾನು ನಿನಗೆ
ಶಾಪ ಕೊಡುತ್ತಿದ್ದೇನೆ. ನೀನು ಶೀಘ್ರದಲ್ಲಿ ಮನುಷ್ಯಯೋನಿಯಲ್ಲಿ ಹುಟ್ಟು. ಈ ನರನ ಆವೇಶವುಳ್ಳ
ಇಂದ್ರನಿಂದ ಸೋಲು. ಯಾರಿಗೆ ನೀನು ಸುಳ್ಳು ಹೇಳಿದೆಯೋ, ಅವರಿಂದಲೇ ನಿನಗೆ ಸೋಲುಂಟಾಗಲಿ”
ಮಚ್ಛಪ್ತಾನಾಂ ಚ ದೇವೀನಾಮವಿಚಾರ್ಯ್ಯ ಮಯಾ ಯತಃ ।
ಪತಿಯೋಗವರಂ ಪ್ರಾದಾ ನಾವಾಪ್ಸ್ಯಸಿ ತತಃ ಪ್ರಿಯಾಮ್ ॥೧೮.೧೪೬॥
ಮಾನುಷೇಷು ತತಃ ಪಶ್ಚಾದ್ ಭಾರತೀದೇಹನಿರ್ಗ್ಗತಾಮ್ ।
ಸ್ವಲೋಕೇ ಪ್ರಾಪ್ಸ್ಯಸಿ ಸ್ವಾರ್ತ್ಥೇ ವರೋsಯಂ ತೇ ಮೃಷಾ ಭವೇತ್ ॥೧೮.೧೪೭॥
“ಯಾವ ಕಾರಣದಿಂದ ನೀನು ನನ್ನಿಂದ ಶಾಪಹೊಂದಲ್ಪಟ್ಟ ದೇವಿಯರ ಕುರಿತು,
ನನ್ನಲ್ಲಿ ವಿಚಾರ ಮಾಡದೇ (ನನ್ನ ಅನುಜ್ಞೆ ಪಡೆಯದೇ), ಅವರಿಗೆ ಪತಿ-ಯೋಗದ ವರವನ್ನು ನೀಡಿದೆಯೋ, ಆ
ಕಾರಣದಿಂದ ಮನುಷ್ಯಲೋಕದಲ್ಲಿ ನೀನು ಹೆಂಡತಿಯನ್ನು ಹೊಂದಲಾರೆ. ಮುಂದೆ ಭಾರತೀದೇವಿಯ ದೇಹದಿಂದ ಹೊರಬಂದ ಪಾರ್ವತಿಯನ್ನು ನೀನು ಕೈಲಾಸದಲ್ಲಿ
ಹೊಂದುವೆ. ಆದ್ದರಿಂದ ನೀನು ನೀಡಿರುವ ವರ ನಿನ್ನ ವಿಚಾರದಲ್ಲಿ ಮಾತ್ರ ಸುಳ್ಳಾಗಲಿ, ಉಳಿದ ನಾಲ್ವರ ವಿಷಯದಲ್ಲಿ ಸತ್ಯವಾಗಲಿ”.
(ಇಂದ್ರಸೇನೆಯಲ್ಲಿ ಪಾರ್ವತಿಯೂ ಇದ್ದು ವರವನ್ನು
ಪಡೆದಿದ್ದಳು. ಶಿವನೇ ನೀಡಿರುವ ವರದಂತೆ ಪಾರ್ವತಿಗೆ ಮಾನುಷಯೋನಿಯಲ್ಲಿ ಶಿವ ಪತಿಯಾಗಿ
ಸಿಗಬೇಕಿತ್ತು. ಆದರೆ ಅದನ್ನು ಬ್ರಹ್ಮದೇವರು ತಡೆದರು)
ಏಷಾ ಸಾ ದ್ರೌಪದೀ ನಾಮ ಪಞ್ಚದೇವೀತನುರ್ಭವೇತ್ ।
ಮೃಷಾವಾಗ್ ಯೇಷು ತೇ ಪ್ರೋಕ್ತಾ ಮಾರುತಾದ್ಯಾಸ್ತು ತೇsಖಿಲಾಃ ॥೧೮.೧೪೮॥
“ಐದು ದೇವಿಯರ ಸ್ವರೂಪಭೂತಳಾದ ಆ ಇನ್ದ್ರಸೇನೆಯು ‘ದ್ರೌಪದೀ’
ಎನ್ನುವವಳಾಗಲಿ. ನೀನು ಯಾರನ್ನು ಕುರಿತು ಸುಳ್ಳು ಹೇಳಿದೆಯೋ, ಆ ಎಲ್ಲಾ ಮಾರುತಾದಿ ದೇವತೆಗಳು(ಮುಖ್ಯಪ್ರಾಣ, ಯಮ ಮತ್ತು ಅಶ್ವೀದೇವತೆಗಳು) ಅವಳ ಗಂಡಂದಿರಾಗುತ್ತಾರೆ”.
ತಾಸಾಂ ಪತಿತ್ವಮಾಪ್ಸ್ಯನ್ತಿ ಭಾರತ್ಯೈವ ತು ಪಾರ್ವತೀ ।
ಸಂಯುಕ್ತಾ ವ್ಯವಹಾರೇಷು ಪ್ರವರ್ತ್ತೇತ ನಚಾನ್ಯಥಾ ॥೧೮.೧೪೯॥
“ಪಾರ್ವತೀದೇವಿ, ಭಾರತೀದೇವಿಯೊಂದಿಗೆ ಸಂಯುಕ್ತಳಾಗಿ, ಎಲ್ಲಾ
ವ್ಯವಹಾರದಲ್ಲಿ ಒಟ್ಟಿಗೇ ಇರಲಿ. ಉಳಿದವರಿಗೆ ಆ ಸೌಲಭ್ಯ ಸಿಗದಿರಲಿ”.
ಏತೇ ಹಿ ಮಾರುತಾದ್ಯಾಸ್ತೇ ದೇವಕಾರ್ಯ್ಯಾರ್ತ್ಥಗೌರವಾತ್ ।
ಜಾತಾ ಇತಿ ಶ್ರುತಿಸ್ತತ್ರ ನಾವಜ್ಞಾ ತೇsತ್ರ ಕಾರಣಮ್ ॥೧೮.೧೫೦॥
“ಈ ವಾಯುವೇ ಮೊದಲಾದ ದೇವತೆಗಳು ದೇವಕಾರ್ಯ ಮಾಡಲೆಂದೇ ಹುಟ್ಟಿರುತ್ತಾರೆ’
ಎಂದು ವೇದದಲ್ಲಿ ಹೇಳಲಾಗಿದೆ. ಹಾಗಾಗಿ ನಿನ್ನನ್ನು ಅವಮಾನ ಮಾಡಿರುವುದು ಅಲ್ಲಿ ಕಾರಣವೇ ಅಲ್ಲ”.
ದೀರ್ಘಕಾಲಂ ಮನುಷ್ಯೇಷು ತತಸ್ತ್ವಂ ಸ್ಥಿತಿಮಾಪ್ಸ್ಯಸಿ ।
ಇತ್ಯುಕ್ತ್ವಾ ಪ್ರಯಯೌ ಬ್ರಹ್ಮಾ ಸೋsಶ್ವತ್ಥಾಮಾ ಶಿವೋsಭವತ್ ॥೧೮.೧೫೧॥
“ಆದಕಾರಣ ನೀನು ಧೀರ್ಘಕಾಲದಲ್ಲಿ ಮನುಷ್ಯಯೋನಿಯಲ್ಲಿ ಅವಸ್ಥಿತಿಯನ್ನು
ಹೊಂದುವೆ” ಎಂದು ಹೇಳಿದ ಬ್ರಹ್ಮದೇವರು ಅಲ್ಲಿಂದ ಹೊರಟುಹೋದರು. ಆ ಶಿವನೇ ಅಶ್ವತ್ಥಾಮನಾಗಿ ಭೂಮಿಯಲ್ಲಿ ಅವತರಿಸಿದ.
No comments:
Post a Comment