ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, September 3, 2020

Mahabharata Tatparya Nirnaya Kannada 18152_18157

 

ಪಞ್ಚದೇವೀತನುಸ್ತ್ವೇಷಾ ದ್ರೌಪದೀ ನಾಮ ಚಾಭವತ್ ।

ವೇದೇಷು ಸಪುರಾಣೇಷು ಭಾರತೇ ಚಾವಗಮ್ಯತೇ ॥೧೮.೧೫೨॥

 

ಉಕ್ತೋsರ್ತ್ಥಃ ಸರ್ವ ಏವಾಯಂ ತಥಾ ಪೂರ್ವೋದಿತಾಶ್ಚ ಯೇ 

ಮುಮುದುಃ ಸರ್ವಪಾಞ್ಚಾಲಾ ಜಾತಯೋಃ ಸುತಯೋಸ್ತಯೋಃ ॥೧೮.೧೫೩॥

 

ಈರೀತಿಯಾಗಿ, ಪಂಚದೇವಿಯರ ಏಕಶರೀರವುಳ್ಳ ಆ ಇಂದ್ರಸೇನೆಯು ‘ದ್ರೌಪದೀ’ ಎನ್ನುವ ಹೆಸರನ್ನು ಪಡೆದು, ಅಗ್ನಿಕುಂಡದಲ್ಲಿ ಜನಿಸಿದಳು ಮತ್ತು ವೇದ-ಪುರಾಣ ಹಾಗೂ ಭಾರತದಲ್ಲಿ ಹೇಳಲ್ಪಟ್ಟ ಭಾರತೀ ಎನ್ನುವ ಹೆಸರುಳ್ಳವಳಾದಳು.

[ಮಹಾಭಾರತದ ಆದಿಪರ್ವದಲ್ಲಿ(೨೧೪.೩೫) ದ್ರೌಪದೀ ಕುರಿತು ಹೇಳಿರುವ ಮಾತು ಹೀಗಿದೆ: ಏವಮೇತೆ   ಪಾಣ್ಡವಾಃ ಸಮ್ಬಭೂವುರ್ಯೇ ತೇ ರಾಜನ್ ಪೂರ್ವಮಿಂದ್ರಾ ಬಭೂವುಃ । ಲಕ್ಷ್ಮೀಶ್ಚೈಷಾಂ ಪೂರ್ವಮೇವೋಪದಿಷ್ಟಾ ಭಾರ್ಯಾ ಯೈಷ ದ್ರೌಪದೀ ದಿವ್ಯರೂಪಾ’].

ಇದೆಲ್ಲವನ್ನೂ ಕೂಡಾ ಮಹಾಭಾರತದಲ್ಲೇ ಹೇಳಿದ್ದಾರೆ (ಆದರೆ ಅದನ್ನು ನಾವು ಅರ್ಥೈಸಿಕೊಳ್ಳಬೇಕು ಅಷ್ಟೇ). ಹೀಗೆ ದ್ರೌಪದೀ ಮತ್ತು ಧೃಷ್ಟದ್ಯುಮ್ನರಿಬ್ಬರು ಹುಟ್ಟುತ್ತಿರಲು, ಎಲ್ಲಾ ಪಾಞ್ಚಾಲರೂ  ಸಂತಸಪಟ್ಟರು.

 

ಮಾನುಷಾನ್ನೋಪಭೋಗೇನ ಸಂಸರ್ಗ್ಗಾನ್ಮಾನುಷೇಷು ಚ ।

ಮನುಷ್ಯಪುತ್ರತಾಯಾಶ್ಚ ಭಾವೋ ಮಾನುಷ ಏತಯೋಃ ॥೧೮.೧೫೪॥

 

ಅಭೂನ್ನಾತಿತರಾಮಾಸೀತ್ ತದಯೋನಿತ್ವಹೇತುತಃ ।

ಯಾಜೋಪಯಾಜೌ ತಾವೇವ ದಯಿತಾ ದ್ರುಪದಸ್ಯ ಸಾ ॥೧೮.೧೫೫॥

 

ಮಾತೃಸ್ನೇಹಾರ್ತ್ಥಮನಯೋರ್ಯ್ಯಯಾಚೇ ದದತುಶ್ಚ ತೌ ।

ಜಾತಮಾತ್ಮನಿಹನ್ತಾರಂ ಭಾರದ್ವಜೋ ನಿಶಮ್ಯ ತಮ್ ॥೧೮.೧೫೬॥

 

ಯಶೋರ್ತ್ಥಮಸ್ತ್ರಾಣಿ ದದಾವಗ್ರಹೀತ್ ಸೋsಪಿ ಲೋಭತಃ ।

ರಾಮಾಸ್ತ್ರಾಣಾಂ ದುರ್ಲ್ಲಭತ್ವಾತ್ ತ್ರಿದಶೇಷ್ವಪಿ ವೀರ್ಯ್ಯವಾನ್ ॥೧೮.೧೫೭॥

ಮಾನುಷಾನ್ನದ ಸ್ವೀಕಾರದಿಂದ, ಮನುಷ್ಯರ ಸಂಸರ್ಗದಿಂದ, ಮನುಷ್ಯರಿಂದ ಪ್ರೇರಿಸಲ್ಪಟ್ಟು ಯಾಗ ಮಾಡಲ್ಪಟ್ಟಿದ್ದರಿಂದ, ಅವರಿಬ್ಬರಲ್ಲಿ ಮನುಷ್ಯ ಭಾವವೆಂಬುದು ಬಂತು. ಆದರೆ ಆಯೋಜಿನರಾಗಿರುವ(ತಾಯಿಯ ಗರ್ಭದಿಂದ ಹುಟ್ಟಿಲ್ಲವಾದ್ದರಿಂದ) ಅವರಲ್ಲಿ, ಜನಸಾಮಾನ್ಯರಂತೆ ಅಭಿಮಾನ(ದೇಶಾಭಿಮಾನ, ಮಾತೃ-ಪಿತೃ ಅಭಿಮಾನ ಇತ್ಯಾದಿ)  ಬರಲಿಲ್ಲ.

ದ್ರುಪದನ ಹೆಂಡತಿಯು, ಈರೀತಿ ಹುಟ್ಟಿದ ಇವರಿಬ್ಬರ ತಾಯಿಯಾಗಿ ಸ್ನೇಹಪಡೆಯಬೇಕು ಎಂದು ಬಯಸಿ,  ಯಾಜ ಹಾಗೂ ಉಪಯಾಜರನ್ನೇ ‘ಅವರಿಬ್ಬರೂ ನನ್ನನ್ನು ತಾಯೀ ಎಂದು ಭಾವಿಸಲಿ’ ಎಂದು ಬೇಡಿಕೊಂಡಳು. ಆಗ ಯಾಜ-ಉಪಯಾಜರು ಅವಳಿಗೆ ಆರೀತಿ ಆಶೀರ್ವದಿಸಿದರು ಕೂಡಾ.

 ಭಾರದ್ವಜ ಋಷಿಗಳ ಮಗನಾದ ದ್ರೋಣಾಚಾರ್ಯರು, ತನ್ನನ್ನು ಕೊಲ್ಲಬಲ್ಲ ಧೃಷ್ಟದ್ಯುಮ್ನನು ಹುಟ್ಟಿದ್ದಾನೆ ಎಂದು ಕೇಳಿಯೂ,  ಕೀರ್ತಿಗಾಗಿ ಅವನಿಗೆ ಅಸ್ತ್ರವಿದ್ಯೆಯನ್ನು ಕೊಟ್ಟರು. ಧೃಷ್ಟದ್ಯುಮ್ನ ಲಾಭದಿಂದ ಅಸ್ತ್ರವನ್ನು ಸ್ವೀಕರಿಸಿದ ಕೂಡಾ. ಏಕೆಂದರೆ ಭೂಲೋಕದಲ್ಲಿ ಪರಶುರಾಮದೇವರು ಹೇಳಿಕೊಟ್ಟ ಅಸ್ತ್ರಗಳು ದೇವತೆಗಳ ಬಳಿಯೂ ಇರಲಿಲ್ಲ. ಅದರಿಂದಾಗಿ ಅವನು ಅದನ್ನು ಸ್ವೀಕರಿಸಿದ.

[ಒಟ್ಟು ತಾತ್ಪರ್ಯ ಇಷ್ಟು: ದ್ರೋಣಾಚಾರ್ಯರಿಗೆ ತನ್ನನ್ನು ಕೊಲ್ಲುವ ಧೃಷ್ಟದ್ಯುಮ್ನ ಹುಟ್ಟಿದ್ದಾನೆ ಎನ್ನುವ ವಿಷಯ ತಿಳಿಯಿತು. ಧೃಷ್ಟದ್ಯುಮ್ನ ವಿದ್ಯಾಕಾಂಕ್ಷಿಯಾಗಿ ದ್ರೋಣರ ಬಳಿಗೇ ಬಂದ. ಹೇಗೂ ಮರಣ ನಿಶ್ಚಿತ ಎಂದು ಅರಿತಿದ್ದ ದ್ರೋಣರು, ಕಂಸನಂತೆ ಭಯಪಡಲಿಲ್ಲ. ತನ್ನನ್ನು ಕೊಲ್ಲುವವನು ಎಂದು ತಿಳಿದಿದ್ದರೂ ಕೂಡಾ, ಧೃಷ್ಟದ್ಯುಮ್ನನಿಗೆ ಅಸ್ತ್ರವಿದ್ಯೆಯನ್ನು ನೀಡಿ ಕೀರ್ತಿಯನ್ನು ಪಡೆದರು].  

No comments:

Post a Comment