ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, October 3, 2020

Mahabharata Tatparya Nirnaya Kannada 19123_19129

 

ಕೇಚಿನ್ನಿರೀಕ್ಷ್ಯಧನುರೇತ್ಯ ನ ಮೇ ಸುಶಕ್ಯಮಿತ್ಯೇವ ಚಾಪಯಯುರನ್ಯ ಉತ ಪ್ರಚಾಲ್ಯ ।

ತತ್ರಾsಸಸಾದ ಶಿಶುಪಾಲ ಉರುಪ್ರತಾಪಃ ಸಙ್ಗೃಹ್ಯ ತತ್ ಸಮನುರೋಪಣಯತ್ನ ಆಸೀತ್ ॥೧೯.೧೨೩॥

 

ಕೆಲವರು ಬಿಲ್ಲನ್ನು ನೋಡಿಯೇ ‘ಇದು ನನ್ನಿಂದ ಸಾಧ್ಯವಿಲ್ಲಾ’ ಎಂದುಕೊಂಡು  ಹೊರಟುಹೋದರು. ಇನ್ನು ಕೆಲವರು ಬಿಲ್ಲನ್ನು ಅಲುಗಾಡಿಸಿ ನೋಡಿ ಹೊರಟುಹೋದರು. ಆಗ ಉತ್ಕೃಷ್ಟ ಬಲವುಳ್ಳ ಶಿಶುಪಾಲನು ಧನುಸ್ಸನ್ನು ಎತ್ತಿ, ದಾರವನ್ನು ಕಟ್ಟುವ ಯತ್ನದಲ್ಲಿ ಮುಳುಗಿದ.

 

ಮಾಷಾನ್ತರಾಯ ಸ ಚಕರ್ಷ ಯದೈವ ಕೋಟ್ಯಾ ಉನ್ನಮ್ಯ ತತ್ ಪ್ರತಿಜಘಾನ ತಮೇವ ಚಾsಶು ।

ಅನ್ಯತ್ರ ಫಲ್ಗುನತ ಏತದಶಕ್ಯಮೇವೇತ್ಯಞ್ಜೋ ಗಿರೀಶವರತಃ ಸ ಯಯೌ ಚ ಭಗ್ನಃ ॥೧೯.೧೨೪॥

 

ಯಾವಾಗ ಶಿಶುಪಾಲನು ಧನುಸ್ಸನ್ನೆತ್ತಿ ಉದ್ದಿನಕಾಳಿನಷ್ಟು ವ್ಯತ್ಯಾಸದ ತನಕ ಸೆಳೆದನೋ ಆಗ  (ಉದ್ದಿನಕಾಳಿನಷ್ಟು ಹೆಚ್ಚು ಸೆಳೆದಿದ್ದರೆ ಕಟ್ಟಿಬಿಡುತ್ತಿದ್ದ, ಆದರೆ ಅಷ್ಟು ವ್ಯತ್ಯಾಸವಿರುವಾಗ), ಅದು ಸೆಟೆದು ಅವನಿಗೇ ಹೊಡೆಯಿತು. ‘ಅರ್ಜುನನನ್ನು ಬಿಟ್ಟು ಇತರರಿಗೆ ಈ ಬಿಲ್ಲನ್ನು ಹೆದೆಯೇರಿಸಲು ಸಾಧ್ಯವಿಲ್ಲಾ’ ಎಂಬ ರುದ್ರದೇವರ ವರವಿರುವುದರಿಂದ ಹಾಗಾಯಿತು ಮತ್ತು ಅದರಿಂದಾಗಿ ಸೋತ ಶಿಶುಪಾಲ ಅಲ್ಲಿಂದ ನಿರ್ಗಮಿಸಿದ.

[ಮಹಾಭಾರತ ವಾಕ್ಯ ಹೀಗಿದೆ: ‘ತದಧ್ಯಾರೋಪ್ಯಮಾಣಂ ತು ಮಾಶಮಾತ್ರೇsಭ್ಯತಾಡಯತ್ । ಧನುಷಾ ಪೀಡ್ಯಮಾನಸ್ತು ಜಾನುಭ್ಯಾಮಗಮನ್ಮಹೀಮ್’ (ಆದಿಪರ್ವ ೨೦೨.೨೩)]

 

ಮದ್ರೇಶ ಏತ್ಯ ಚಕೃಷೇ ಸ್ಥವಿರೋsಪಿ ವೀರ್ಯ್ಯಾಚ್ಚೇದೀಶತೋsಪ್ಯಧಿಕಮೇವ ಸ ಮುದ್ಗಮಾತ್ರೇ ।

ಶಿಷ್ಟೇsಮುನಾ ಪ್ರತಿಹತಃ ಸ ಯಯಾವಶಕ್ಯಂ ಮತ್ವಾssತ್ಮನಸ್ತದನು ಭೂಪತಯೋ ವಿಷಣ್ಣಾಃ ॥೧೯.೧೨೫॥

 

ಮಾದ್ರದೇಶದ ಅಧಿಪತಿ ಶಲ್ಯನು ಮುದಿಯನಾದರೂ ಕೂಡಾ, ಮುಂದೆ ಬಂದು, ವೀರ್ಯದಿಂದ, ಶಿಶುಪಾಲನಿಗಿಂತಲೂ ಕೂಡಾ ಹೆಚ್ಚಾಗಿಯೇ ಧನುಸ್ಸನ್ನು ಸೆಳೆದು, ಹೆಸರುಕಾಳಿನ ಅಂತರವಿದ್ದಾಗ ಧನುರ್ದಂಡದಿಂದ ಹೊಡೆಯಲ್ಪಟ್ಟವನಾಗಿ ಅಲ್ಲಿಂದ ಹಿಂದೆ ಸರಿದನು. ಅವನೇ ಸೋತಮೇಲೆ ತಮಗೆ ಇದು ಅಶಕ್ಯ ಎಂದು ತಿಳಿದು ಅನೇಕ ಜನ ರಾಜರು ವಿಷಾದಕ್ಕೊಳಗಾದರು.    

[ಮಹಾಭಾರತ ವಾಕ್ಯ: ‘ತತಃ ಶಲ್ಯೋ ಮಹಾವೀರ್ಯೋ ಮದ್ರರಾಜೋ ಮಹಾಬಲಃ । ಧನುರಾರೋಪ್ಯಮಾಣಂ ತು ಮುದ್ಗಮಾತ್ರೇsಭ್ಯತಾಡಯತ್’(೨೫).]

 

ಸನ್ನೇಷು ಭೂಪತಿಷು ಮಾಗಧ ಆಸಸಾದ ಸೋsವಜ್ಞಯೈವ ಬಲವೀರ್ಯ್ಯಮದೇನ ದೃಪ್ತಃ ।

ಚಾಪಂ ಚಕರ್ಷ ಚಲಪಾದತಳೋ ಬಲೇನ ಶಿಷ್ಟೇ ಸ ಸರ್ಷಪಮಿತೇsಭಿಹತೋsಮುನೈವ ॥೧೯.೧೨೬॥

 

ಹೀಗೆ ಎಲ್ಲಾ ರಾಜರೂ ಸೋಲಲು, ಜರಾಸಂಧನು ಬಿಲ್ಲಿನ ಬಳಿ ಬಂದ. ಒಂದು ರೀತಿಯ ಉಡಾಫೆಯಿಂದ, ತನ್ನಲ್ಲಿ ಬಲ ವೀರ್ಯವಿದೆ ಎಂದು ದರ್ಪವನ್ನು ಹೊಂದಿ, ಸರಿಯಾಗಿ ಕಾಲೂರದೇ(ನಿಂತುಕೊಳ್ಳದೇ), ಬಿಲ್ಲನ್ನು ಸೆಳೆದ. ಒಂದು ಸಾಸಿವೆ ಕಾಳಿನಷ್ಟು ಅಂತರ ಉಳಿಯಲು, ಬಿಲ್ಲಿನ ದಂಡದಿಂದಲೇ ಹೊಡೆಯಲ್ಪಟ್ಟ. 

[ಮಹಾಭಾರತ ವಾಕ್ಯ: ‘ತತೋ ರಾಜಾ ಜರಾಸನ್ಧೋ ಮಹಾವೀರ್ಯೋ ಮಹಾಬಲಃ । ಕಮ್ಬುಗ್ರೀವಃ ಪೃಥುವ್ಯಂಸೋ ಮತ್ತವಾರಣವಿಕ್ರಮಃ ।  ಮತ್ತವಾರಣತಾಮ್ರಾಕ್ಷೋ ಮತ್ತವಾರಣವೇಗವಾನ್ । ಧನುಷೋsಭ್ಯಾಶಮಾಗತ್ಯ ತಸ್ಥೌ ಗಿರಿರಿವಾಚಲಃ । ಧನುರಾರೋಪ್ಯಮಾಣಂ ತು ಸರ್ಷಮಾತ್ರೇsಭ್ಯತಾಡಯತ್’(೨೪-೨೬), (ಇಲ್ಲಿ ‘ಸರ್ಷಪಃ’ ಎನ್ನುವ ಪದವನ್ನು ವೇದವ್ಯಾಸರು ‘ಸರ್ಷಃ’ ಎಂದು ಬಳಸಿರುವುದು ವಿಶೇಷ)]   

 

ಜಾನುನ್ಯಮುಷ್ಯ ಧರಣೀಂ ಯಯತುಸ್ತದೈವ ದರ್ಪ್ಪೇಣ ಚಾಸ್ಥಿರಪದಸ್ಥಿತಿಮಾತ್ರಹೇತೋಃ ।

ರೌದ್ರಾದ್ ವರಾತ್ ಸ ಜಳತಾಂ ಗಮಿತೋsಥ ರಾಜಾ ರಾಜ್ಞಾಂ ಮುಖಾನ್ಯನಭಿವೀಕ್ಷ್ಯ ಯಯೌ ಸ್ವರಾಷ್ಟ್ರಮ್ ॥೧೯.೧೨೭॥

 

ದರ್ಪದಿಂದ ಸರಿಯಾಗಿ ನಿಲ್ಲದೇ ಬಿಲ್ಲನ್ನು ಸೆಳೆದ ಕಾರಣದಿಂದ ಜರಾಸಂಧನ ಮೊಣಕಾಲುಗಳು ಭೂಮಿಗೆ ತಾಗಿತು(ಆತ ಕುಸಿದುಬಿದ್ದ).  ರುದ್ರದೇವರ ವರದಿಂದ ಅವನು ನಿಷ್ಕ್ರಿಯನಾದ. ತದನಂತರ ಅವನು ಅಲ್ಲಿದ್ದ ರಾಜರುಗಳ ಮುಖವನ್ನೂ ನೋಡದೆಯೇ ತನ್ನ ದೇಶಕ್ಕೆ ತೆರಳಿದ. 

[ಮಹಾಭಾರತ ವಾಕ್ಯ: ‘ತದೈವಾಗಾತ್ ಸ್ವಯಂ ರಾಜ್ಯಂ  ಪಶ್ಚಾದನವಲೋಕಯನ್ (೨೦೨.೨೮)  (ಶಲ್ಯ ಧನುಸ್ಸನ್ನು ಮುರಿಯಲು ತೆರಳಿ ಭಗ್ನವಾದ ಪ್ರಸಂಗದಲ್ಲಿ ಈ ಮಾತನ್ನು ಹೇಳಿದ್ದಾರೆ. ಅದರೆ ಆ ಮಾತು ಜರಾಸಂಧನ ಕುರಿತಾದುದು. ಪೂರ್ವಕಥೆಯನ್ನು ನಂತರ, ನಂತರದ ಕಥೆಯನ್ನು ಮೊದಲು ಹೇಳುವ ಶೈಲಿಯಲ್ಲಿ ಈರೀತಿ ಬಂದಿದೆ)]

 

ಪ್ರಾಯೋ ಗತಾಸ್ತಮನು ಭೂಪತಯೋsಥ ಕರ್ಣ್ಣೋ ದುರ್ಯ್ಯೋಧನಾರ್ತ್ಥಮನುಗೃಹ್ಯ ಧನುಶ್ಚಕರ್ಷ ।

ರಾಮಾದುಪಾತ್ತಶುಭಶಿಕ್ಷಿತಮಾತ್ರತೋsಸೌ ರೋಮಾವಶಿಷ್ಟಮಕರೋದ್ ಧನುಷೋsನ್ತಮಾಶು ॥೧೯.೧೨೮॥

 

ಜರಾಸಂಧನನ್ನು ಅನುಸರಿಸಿ, ಹೆಚ್ಚಿನ ರಾಜರು ಹೊರಟುಹೋದರು. ತದನಂತರ ಕರ್ಣನು ‘ದುರ್ಯೋಧನನಿಗಾಗಿ’ ಎಂದು ಹೇಳಿ, ಬಿಲ್ಲನ್ನು ಸೆಳೆದ. ಪರಶುರಾಮನಿಂದ ಒಳ್ಳೆಯ ಶಿಕ್ಷಣವನ್ನು ಪಡೆದಿದ್ದ ಆತ ತಕ್ಷಣ ಒಂದು ಕೂದಲೆಳೆಯ ಅಂತರವಿರುವಷ್ಟು ಸೆಳೆದ. 

 

ತಸ್ಮಿಂಶ್ಚ ತೇನ ವಿಹತೇ ಪ್ರತಿಸನ್ನಿವೃತ್ತೇ ಭೀಮಾರ್ಜ್ಜುನೌ ದ್ವಿಜಸದಸ್ಯುಪಸನ್ನಿವಿಷ್ಟೌ ।

ಉತ್ತಸ್ಥತೂ ರವಿಶಶಿಪ್ರತಿಮಾನರೂಪೌ ವಿಪ್ರೇಷು ತತ್ರ ಚ ಭಿಯಾ ವಿನಿವಾರಯತ್ಸು ॥೧೯.೧೨೯॥

 

ಕರ್ಣನೂ ಕೂಡಾ ಬಿಲ್ಲಿನಿಂದ ಹೊಡೆಯಲ್ಪಟ್ಟು ಹಿಂತಿರುಗಲು, ಬ್ರಾಹ್ಮಣರ ಮಧ್ಯದಲ್ಲಿ ಕುಳಿತಿರುವ, ಸೂರ್ಯಚಂದ್ರರಂತೆ ಕಂಗೊಳಿಸುತ್ತಿರುವ ಭೀಮಸೇನಾ ಹಾಗೂ ಅರ್ಜುನರು, ಉಳಿದ ಬ್ರಾಹ್ಮಣರು ಭಯದಿಂದ ತಡೆಯುತ್ತಿದ್ದರೂ ಕೂಡಾ ಎದ್ದು ನಿಂತರು.

[‘ಕರ್ಣ ಬಿಲ್ಲನ್ನು ಎತ್ತಿ ಹಿಡಿಯುತ್ತಾನೆ, ಆಗ ದ್ರೌಪದಿ 'ನೀನು ಸೂತಪುತ್ರ' ಎಂದು ಹೇಳುತ್ತಾಳೆ’ ಇತ್ಯಾದಿ ಕಥೆ ಉತ್ತರದ ಪಾಠದಲ್ಲಿಲ್ಲ. ದಾಕ್ಷಿಣಾತ್ಯ ಪಾಠದಲ್ಲಿ ಮಾತ್ರ ಕಾಣಸಿಗುತ್ತದೆ. ಕರ್ಣ ದುರ್ಯೋಧನನ ಪರ ಬಿಲ್ಲನ್ನು ಎತ್ತಲು ಹೋದಾಗ ದ್ರೌಪದಿ ಮಾತನಾಡುವ ಅಗತ್ಯವೇ ಇಲ್ಲ. ಏಕೆಂದರೆ ಆಕೆ ಮದುವೆಯಾಗುವ ಗಂಡು ಆ ಧನುಸ್ಸನ್ನು ಎತ್ತಬೇಕೇ ಹೊರತು, ಗಂಡಿನ ಪರ ಇನ್ನೊಬ್ಬ ಅದನ್ನು ಮಾಡಲಾಗುವುದಿಲ್ಲ. ಇನ್ನು, ರುದ್ರದೇವರ ವರವಿದ್ದುದರಿಂದ ಕರ್ಣ ಬಿಲ್ಲನ್ನು ಹೆದೆಯೇರಿಸಿ ಯಶಸ್ವೀಯಾಗುವ ಪ್ರಶ್ನೆಯೇ ಇಲ್ಲ].

Friday, October 2, 2020

Mahabharata Tatparya Nirnaya Kannada 19118_19122

 

ತೇ ಧೌಮ್ಯಮಾಪ್ಯ ಚ ಪುರೋಧಸಮುತ್ತಮಜ್ಞಂ ವಿಪ್ರಾತ್ಮಜೋಪಮತಯಾ ವಿವಿಶುಃ ಪುರಂ ಚ ।

ಪಾಞ್ಚಾಲಕಸ್ಯ ನಿಖಿಲಾಂ ದದೃಶುಶ್ಚ ತತ್ರ ಮೂರ್ದ್ಧಾವಸಿಕ್ತಸಮಿತಂ ಸಮಲಙ್ಕೃತಾಂ ಚ ॥೧೯.೧೧೮॥

 

ಪಾಂಡವರು ಎಲ್ಲವನ್ನೂ ಚನ್ನಾಗಿ ಬಲ್ಲ ಧೌಮ್ಯರನ್ನು ತಮ್ಮ ಪುರೋಹಿತರನ್ನಾಗಿ ಹೊಂದಿ, ಬ್ರಾಹ್ಮಣ ಕುಮಾರರಂತೆ ಪಾಂಚಾಲರಾಜನ ಪಟ್ಟಣವನ್ನು (ಕಾಮ್ಪಿಲ್ಯನಗರವನ್ನು) ಪ್ರವೇಶಿಸಿದರು. ನಗರ  ತುಂಬಿತ್ತು ಸಡಗರ, ಸಂಭ್ರಮಾಚರಣೆಯಲ್ಲಿ.  ಅಲ್ಲಿ ಅವರು ಅಲಂಕರಿಸಿಕೊಂಡಿರುವ, ಪಟ್ಟಾಭಿಷಿಕ್ತರಾದ ಎಲ್ಲಾ ರಾಜರುಗಳು ಸೇರಿರುವುದನ್ನು ಕಂಡರು. 

 

ರಾಜನ್ಯಮಣ್ಡಲಮುದೀಕ್ಷ್ಯ ಸುಪೂರ್ಣ್ಣಮತ್ರ ಕೃಷ್ಣಾಂ ಪ್ರಗೃಹ್ಯ ಸಹಜಃ ಪ್ರಗೃಹೀತಮಾಲಾಮ್ ।

ತೇಷಾಂ ಚ ಮದ್ಧ್ಯಮಗಮತ್ ಕುಲವೀರ್ಯ್ಯಸಮ್ಪದ್ಯುಕ್ತಾಂ ವಿಭೂತಿಮಥ ಚಾsಹ ಸಮಸ್ತರಾಜ್ಞಾಮ್ ॥೧೯.೧೧೯॥

 

ಮಾಲೆಯನ್ನು ಹಿಡಿದ ದ್ರೌಪದಿಯನ್ನು ಕರೆದುಕೊಂಡು ಬಂದು ಧೃಷ್ಟದ್ಯುಮ್ನನು, ಎಲ್ಲೆಡೆ ತುಂಬಿರುವ ಕ್ಷತ್ರಿಯರ ಸಮೂಹವನ್ನು ಕಂಡು, ಅವರ ಮಧ್ಯದಲ್ಲಿ ನಡೆದು, ಎಲ್ಲಾ ರಾಜರ ಕುಲ, ವೀರ್ಯ, ಸಂಪತ್ತುಗಳಿಂದ ಕೂಡಿರುವ ಅವರ ಮಹಿಮೆಯನ್ನು ದ್ರೌಪದಿಗೆ ಹೇಳಿದನು. (ಧೃಷ್ಟದ್ಯುಮ್ನ ದ್ರೌಪದಿಗೆ ಎಲ್ಲರ ಪರಿಚಯ ಮಾಡಿಕೊಟ್ಟ)

 

ತಾಂಶ್ಚಪ್ರದರ್ಶ್ಯ ಸಕಲಾನ್ ಸ ಹುತಾಶನಾಂಶಶ್ಚಾಪಂ ಚ ತತ್ ಪ್ರತಿನಿಧಾಯ ಸಪಞ್ಚಬಾಣಮ್ ।

ಆಹಾಭಿಭಾಷ್ಯ ಸಕಲಾನ್ ನೃಪತೀನಥೋಚ್ಚೈರ್ದ್ದೀಪ್ಯದ್ಧುತಾಶನವಪುರ್ಘನತುಲ್ಯಘೋಷಃ ॥೧೯.೧೨೦॥

 

ಬೆಳಗುವ ಬೆಂಕಿಯಂತಹ ಮೈಯುಳ್ಳ, ಮೇಘಕ್ಕೆ ಸಮನಾದ ಧ್ವನಿಯುಳ್ಳ ಧೃಷ್ಟದ್ಯುಮ್ನನು, ಆ ಎಲ್ಲಾ ರಾಜರುಗಳನ್ನು ಪರಿಚಯಿಸಿದ ನಂತರ, ಐದು ಬಾಣಗಳಿಂದ ಕೂಡಿರುವ ಧನುಸ್ಸನ್ನು ರಾಜರುಗಳ  ಮುಂದೆ ಸ್ಥಾಪಿಸಿ,  ಎಲ್ಲರನ್ನೂ ಉದ್ದೇಶಿಸಿ ಮಾತನಾಡಿದ.

[ಈ ಕುರಿತಾದ ಮಹಾಭಾರತದ ವಾಕ್ಯ ಹೀಗಿದೆ: ರಙ್ಗಮಧ್ಯಂ ಗತಸ್ತತ್ರ  ಮೇಘಗಮ್ಭೀರಯಾ ಗಿರಾ । ವಾಕ್ಯಮುಚ್ಚೈರ್ಜಗಾದೇದಂ ಶ್ಲಕ್ಷ್ಣಮರ್ಥವದುತ್ತಮಮ್’(೨೦೦.೫೯) ]

 

ಏತೇನ ಕಾರ್ಮ್ಮುಕವರೇಣ ತರೂಪರಿಸ್ಥಂ ಮತ್ಸ್ಯಾವಭಾಸಮುದಕೇ ಪ್ರತಿವೀಕ್ಷ್ಯ ಯೇನ ।

ಏತೈಃ ಶರೈಃ ಪ್ರತಿಹತೋ ಭವತೀಹ ಮತ್ಸ್ಯಃ ಕೃಷ್ಣಾsನುಯಾಸ್ಯತಿ ತಮದ್ಯ ನರೇನ್ದ್ರವೀರಾಃ ॥೧೯.೧೨೧ ॥

 

‘ವೀರರಾದ ರಾಜಶ್ರೇಷ್ಠರೇ(ನರೇನ್ದ್ರವೀರಾಃ), ಈ ಬಿಲ್ಲಿನಿಂದ, ಮರದ ಮೇಲ್ಗಡೆಯಿರುವ ಮೀನಿನ ಗೊಂಬೆಯನ್ನು, ನೀರಿನಲ್ಲಿ ನೋಡಿ, ಯಾರಿಂದ ಈ ಬಾಣಗಳಿಂದ ಮೀನು ಕೆಡವಲ್ಪಡುತ್ತದೋ, ಅವನನ್ನು ದ್ರೌಪದಿಯು ಅನುಸರಿಸಲಿದ್ದಾಳೆ(ಹೊಂದುತ್ತಾಳೆ)’.

 

ಇತ್ಯಸ್ಯ ವಾಕ್ಯಮನು ಸರ್ವನರೇನ್ದ್ರಪುತ್ರಾ ಉತ್ತಸ್ಥುರುದ್ಧತಮದಾಶ್ಚಲಕುಣ್ಡಲಾಸ್ಯಾಃ ।

ಅಸ್ತ್ರಂ ಬಲಂ ಚ ಬಹು ನೈಜಮಭೀಕ್ಷಮಾಣಾಃ ಸ್ಪರ್ದ್ಧನ್ತ ಏವ ಚ ಮಿಥಃ ಸಮಲಙ್ಕೃತಾಙ್ಗಾಃ ॥೧೯.೧೨೨॥

 

ಈರೀತಿಯಾಗಿ ಧೃಷ್ಟದ್ಯುಮ್ನನು ಹೇಳಿದಾಗ, ದರ್ಪದಿಂದ ಕೂಡಿದವರಾದ, ಅಲುಗಾಡುವ ಕುಂಡಲವುಳ್ಳ ಮೊರೆಯುಳ್ಳವರಾದ, ಅಲಂಕರಿಸಿಕೊಂಡ ಅಂಗವುಳ್ಳ ಎಲ್ಲಾ ರಾಜರೂ ಕೂಡಾ, ತಮ್ಮ ಅಸ್ತ್ರವನ್ನೂ, ದೇಹಬಲವನ್ನೂ ಬಹಳಾ ಎಂದು ತಿಳಿದವರಾಗಿ, ಪರಸ್ಪರರಲ್ಲೇ ಸ್ಪರ್ಧೆಯಿಂದ ಕೂಡಿದವರಾಗಿ ಎದ್ದು ನಿಂತರು.   

Mahabharata Tatparya Nirnaya Kannada 19113_19117

 

ಪಾರ್ತ್ಥೇನ ಸನ್ಧರ್ಷಿತಃ ಶರಣಂ ಜಗಾಮ ಧರ್ಮ್ಮಾತ್ಮಜಂ ತಮಪಿ ಸೋsಥ ನಿಜಾಸ್ತ್ರಮುಗ್ರಮ್ ।

ಸಞ್ಜಹ್ರ ಏವ ತತ ಆಸ ಚ ನಾಮತೋsಸಾವಙ್ಗಾರವರ್ಣ್ಣ ಇತಿ ವರ್ಣ್ಣವಿಪರ್ಯ್ಯಯೇಣ ॥೧೯.೧೧೩॥

 

ಪಾರ್ಥನಿಂದ ಸೋಲಿಸಲ್ಪಟ್ಟು, ಶಿಕ್ಷಿಸಲ್ಪಟ್ಟ ಚಿತ್ರಸೇನ, ಧರ್ಮರಾಜನಲ್ಲಿ ಶರಣುಹೊಂದಿದ. ಆಗ  ಅರ್ಜುನನೂ ತಾನು ಪ್ರಯೋಗಿಸಿದ ಉಗ್ರವಾಗಿರುವ ಆಗ್ನೇಯಾಸ್ತ್ರವನ್ನು ಉಪಸಂಹಾರ ಮಾಡಿದ ಕೂಡಾ. ಈ ಘಟನೆಯಲ್ಲಿ ಮೈಯ ಬಣ್ಣದ  ಬದಲಾವಣೆಯನ್ನು ಹೊಂದಿದ ಚಿತ್ರಸೇನನು ‘ಅನ್ಗಾರವರ್ಣ’ ಎನ್ನುವ ಹೆಸರಿನವನಾದ.     

[ಮಹಾಭಾರತದಲ್ಲಿ(ಆದಿಪರ್ವ ೧೮೬. ೩೪) ಈ ಘಟನೆಯ ವಿವರ ಕಾಣಸಿಗುತ್ತದೆ. ಯುಧಿಷ್ಠಿರಂ ತಸ್ಯ ಭಾರ್ಯಾ ಪ್ರಪೇದೇ ಶರಣಾರ್ಥಿನೀ । ನಾಮ್ನಾ ಕುಮ್ಭೀನಸೀ ನಾಮ ಪರಿತ್ರಾಣಮಭೀಪ್ಸತೀ’ ಇಲ್ಲಿ ಯುಧಿಷ್ಠಿರನನ್ನು ಚಿತ್ರಸೇನನ ಹೆಂಡತಿಯಾದ  ಕುಮ್ಭೀನಸೀ ಶರಣುಹೊಂದಿದಳು ಎಂದು ಹೇಳಿದ್ದಾರೆ. ಆದರೆ ಆಚಾರ್ಯರು    ಪಾರ್ತ್ಥೇನ ಸನ್ಧರ್ಷಿತಃ ಶರಣಂ ಜಗಾಮ ಧರ್ಮ್ಮಾತ್ಮಜಂ.....’ ಎನ್ನುವ ನಿರ್ಣಯ ನೀಡಿದ್ದಾರೆ. ಇದರ ತಾತ್ಪರ್ಯ ಇಷ್ಟು: ಮೊದಲು ಅವನ ಪತ್ನಿ ಶರಣುಹೊಂದಿದಳು ನಂತರ ಚಿತ್ರಸೇನನೂ ಶರಣುಹೊಂದಿದ. ಹೀಗಾಗಿ ಇಲ್ಲಿ ಯಾವುದೇ ವಿರೋಧವಿಲ್ಲ.]

 

ಗನ್ಧರ್ವ ಉಲ್ಬಣಸುರಕ್ತತನುಃ ಸ ಭೂತ್ವಾ ಸ್ವರ್ಣ್ಣಾವದಾತ ಉತ ಪೂರ್ವಮುಪೇತ್ಯ ಸಖ್ಯಮ್ ।

ಪಾರ್ತ್ಥೇನ ದುರ್ಲ್ಲಭಮಹಾಸ್ತ್ರಮಿದಂ ಯಯಾಚೇ ಜಾನನ್ನಪಿ ಸ್ಮ ನಹಿ ತಾದೃಶಮೇಷ ವೇದ ॥೧೯.೧೧೪ ॥

 

ಗಂಧರ್ವನು ಮೊದಲು ಬಂಗಾರದ ಮೈಬಣ್ಣವುಳ್ಳವನಾಗಿದ್ದ. ಅಂಥವನು ಬೆಂಕಿ ಸುಟ್ಟಿದ್ದರಿಂದ ಕಡುಕೆಂಪು ಮೈಬಣ್ಣದವನಾದ. ಇಂತಹ ಚಿತ್ರಸೇನ ಅರ್ಜುನನೊಂದಿಗೆ ಗೆಳೆತನವನ್ನು ಹೊಂದಿ, ಅವನಲ್ಲಿ  ಆಗ್ನೇಯಾಸ್ತ್ರವನ್ನು ಬೇಡಿದ. ಮೊದಲು ಅವನು ಈ ಅಸ್ತ್ರವನ್ನು ತಿಳಿದಿದ್ದರೂ ಕೂಡಾ, ಈರೀತಿಯಾಗಿ ಅರ್ಜುನ ತಿಳಿದಂತೆ ತಿಳಿದಿರಲಿಲ್ಲ.

[ಇದನ್ನು ಮಹಾಭಾರತದ ಆದಿಪರ್ವದಲ್ಲಿ ಈರೀತಿ ವಿವರಿಸಿದ್ದಾರೆ: ಜಿತೋsಹಂ ಪೂರ್ವಕಂ ನಾಮ ಮುಞ್ಚಾಮ್ಯಙ್ಗಾರಪರ್ಣತಾಮ್ । ಯಶೋಹೀನಂ ನಚ ಶ್ಲಾಘ್ಯಂ ಸ್ವಂ ನಾಮಜನಸಂಸದಿ’ (೧೮೬.೩೮)  ‘ಅಙ್ಗಾರಪರ್ಣಂ ಗನ್ಧರ್ವಂ ವಿತ್ತ ಮಾಂ ಸ್ವಬಲಾಶ್ರಯಮ್ ।   ಅಹಂ ಹಿ ಮಾನಿ ಚೇರ್ಷ್ಯುಶ್ಚ ಕುಬೇರಸ್ಯ ಪ್ರಿಯಃ ಸಖಾ ।  ಅಙ್ಗಾರಪರ್ಣಮಿತ್ಯೇವಂ ಖ್ಯಾತಂ ಚೇದಂ ವನಂ ಮಮ । ಅನುಗಙ್ಗಂ ಚರನ್ ಕಾಮಾಂಶ್ಚಿತ್ರಂ ಯತ್ರ ರಮಾಮ್ಯಹಮ್’ (೧೮೬.೧೩-೧೪)

 

ವಿದ್ಯಾ ಸುಶಿಕ್ಷಿತತಮಾ ಹಿ ಸುರೇಶಸೂನೌ ತಾಮಸ್ಯ ಚಾವದದಸಾವಪಿ ಕಾಲತೋsಸ್ಮೈ ।

ಗನ್ಧರ್ವಗಾಮವದದನ್ವಗದೃಶ್ಯವಿದ್ಯಾಂ ಪಶ್ಚಾದಿತಿ ಸ್ಮ ಪುರುಹೂತಸುತಸ್ಯ ವಾಕ್ಯಾತ್ ॥೧೯.೧೧೫॥

 

ಅರ್ಜುನನಲ್ಲಿ ಅತ್ಯಂತ ಶಿಕ್ಷಿತವಾದ ಅಸ್ತ್ರವಿದ್ಯೆ ಇದ್ದುದರಿಂದ ಅದನ್ನು ಅವನು ಗಂಧರ್ವನಿಗೆ ಕೊಟ್ಟ. ಹಾಗೆಯೇ, ಅರ್ಜುನನ ವಾಕ್ಯದಂತೇ, ಆ ಗಂಧರ್ವನು ತನ್ನಲ್ಲಿರುವ ಅದೃಶ್ಯವಿದ್ಯೆಯನ್ನು ಕಾಲಾಂತರದಲ್ಲಿ (ಅನುಕೂಲವಾದ ಕಾಲದಲ್ಲಿ) ಅರ್ಜುನನಿಗೆ ನೀಡಿದ.  

 

[ಅರ್ಜುನ ಒಂದು ವಿದ್ಯೆಯನ್ನು ಚಿತ್ರಸೇನನಿಗೆ ಕೊಟ್ಟ. ಅದಕ್ಕೆ ಪ್ರತಿಯಾಗಿ ಚಿತ್ರಸೇನ ಒಂದು ವಿದ್ಯೆಯನ್ನು ಅರ್ಜುನನಿಗೆ ಕೊಟ್ಟ. ಚಿತ್ರಸೇನನಿಗೆ ಅಭಿಮಾನ ಅಡ್ಡ ಬಂದು ಹೀಗೆ ಮಾಡಿರಬಹುದು. ಆದರೆ ಅರ್ಜುನ ಈ ವಿನಿಮಯವನ್ನು ಏಕೆ ಒಪ್ಪಿಕೊಂಡ ಎಂದರೆ:]

 

ಆಧಿಕ್ಯತಃ ಸ್ವಗತಸಂವಿದ ಏವ ಸಾಮ್ಯೇ ನೈವೇಚ್ಛತಿ ಸ್ಮ ನಿಮಯಂ ಸ ಧನಞ್ಜಯೋsತ್ರ ।

ಧರ್ಮಾರ್ತ್ಥಮೇವ ಸ ತು ತಾಂ ಪರಿದಾಯ ತಸ್ಮೈ ಕಾಲೇನ ಸಂವಿದಮಮುಷ್ಯ ಚ ಧರ್ಮ್ಮತೋsಯಾತ್ ॥೧೯.೧೧೬॥

 

ತನ್ನಲ್ಲಿ ಜ್ಞಾನದ ಆಧಿಕ್ಯವಿರಲು, ಸಮಾನವಾದ ಪಕ್ಷದಲ್ಲಿ ಮಾತ್ರ ವಿನಿಮಯ ಸಾಧ್ಯವಿರುವುದರಿಂದ, ಅರ್ಜುನ ಈ ವಿನಿಮಯವನ್ನು ಬಯಸಿರಲಿಲ್ಲ. ಅವನು ಕೇವಲ ಸೌಜನ್ಯಕ್ಕಾಗಿ ಅಥವಾ ಪುಣ್ಯಕ್ಕಾಗಿ ಗಂಧರ್ವನಿಗೆ ಆ ವಿದ್ಯೆಯನ್ನು ಕೊಟ್ಟು, ಕೆಲವು ಕಾಲವಾದಮೇಲೆ, ಧರ್ಮದಿಂದಲೇ ಗಂಧರ್ವವಿದ್ಯೆಯನ್ನು ಪಡೆದ.

[ಅರ್ಜುನನಿಗೆ ಅದೃಶ್ಯ ವಿದ್ಯೆ ಬೇಕಿರಲಿಲ್ಲ. ಅಲ್ಲದೇ, ಅರ್ಜುನನಲ್ಲಿದ್ದ ಅಸ್ತ್ರವಿದ್ಯೆ  ಗಂಧರ್ವನಲ್ಲಿದ್ದ ಅದೃಶ್ಯ ವಿದ್ಯೆಗಿಂತ ಶ್ರೇಷ್ಠವಾಗಿತ್ತು. ಹಾಗಾಗಿ ಅವನಿಗೆ ವಿನಿಮಯ ಇಷ್ಟವಿರಲಿಲ್ಲ. ಆದರೂ ಏಕೆ ಕಾಲಾಂತರದಲ್ಲಿ ಗಂಧರ್ವನಿಂದ ಪಡೆದ ಎಂದರೆ: ವಿದ್ಯೆಯನ್ನು ಪಡೆಯುವವನು ಗುರುಗಳಿಗೆ ಎನನ್ನಾದರೂ ಕೊಡಬೇಕು.  ಕ್ಷತ್ರಿಯನಾದ್ದರಿಂದ ಅರ್ಜುನ ವಿದ್ಯೋಪ ಜೀವನ ಮಾಡುವಂತಿಲ್ಲ. ಆ ಕಾರಣದಿಂದ ವಿದ್ಯಾ ವಿನಿಮಯವನ್ನೇ ಮಾಡಿಕೊಳ್ಳೋಣ ಎಂದು ಚಿಂತನೆ ನಡೆಸಿ, ಆ ಸೌಜನ್ಯಕ್ಕಾಗಿಯೇ ಕಾಲಾಂತರದಲ್ಲಿ ಅರ್ಜುನ ಪಡೆದ ಹೊರತು, ಅದರ ಬಯಕೆ ಅವನಿಗಿರಲಿಲ್ಲ]. 

 

ಪಾರ್ತ್ಥೇನ ಸೋsಪಿ ಬಹುಲಾಶ್ಚ ಕಥಾಃ ಕಥಿತ್ವಾ ಧೌಮ್ಯಸ್ಯ ಸಙ್ಗ್ರಹಣಮಾಹ ಪುರೋಹಿತತ್ವೇ ।

ದಾಸ್ಯಾಮಿ ದಿವ್ಯತುರಗಾನಿತಿ ಸೋsರ್ಜ್ಜುನಾಯಾ ವಾಚಂ ನಿಗದ್ಯ ದಿವಮಾರುಹದಪ್ಯಗುಸ್ತೇ ॥೧೯.೧೧೭॥

 

ಈರೀತಿ ಅರ್ಜುನನ ಜೊತೆಗೆ ಗೆಳೆತನ ಬೆಳೆಸಿದ ಗನ್ಧರ್ವ, ಅವನಿಗೆ ಅನೇಕ ಕಥೆಗಳನ್ನು ಹೇಳಿದ.(ಆದಿಪರ್ವದಲ್ಲಿ ಈ ಕಥೆಗಳ ವಿವರವನ್ನು ನಾವು ಕಾಣಬಹುದು)  ಧೌಮ್ಯ ಎಂಬುವವನ ಪೌರೋಹಿತ್ಯಕ್ಕಾಗಿ ಗ್ರಹಿಕೆಯನ್ನೂ ಕೂಡಾ ಅವನು ಹೇಳಿದ.(ಬ್ರಾಹ್ಮಣ ರಹಿತರಾಗಿ ಕ್ಷತ್ರಿಯರಿರಬಾರದು. ಅದಕ್ಕಾಗಿ ಧೌಮ್ಯರನ್ನು ರಾಜಗುರುವಾಗಿ ಪರಿಗ್ರಹಿಸಿ.  ಅವರು ಇಲ್ಲೇ ಸ್ವಲ್ಪ ದೂರದಲ್ಲಿದ್ದಾರೆ ಎನ್ನುವ ಸಲಹೆಯನ್ನೂ ಚಿತ್ರಸೇನ ನೀಡಿದ) . ಅವನು ಅರ್ಜುನನಿಗಾಗಿ ‘ದೇವಲೋಕದ ಕುದುರೆಗಳನ್ನು ಕೊಡುತ್ತೇನೆ’ ಎನ್ನುವ ಮಾತನ್ನು ಹೇಳಿ ಅಂತರಿಕ್ಷವನ್ನೇರಿದ. ತದನಂತರ ಪಾಂಡವರು ಅಲ್ಲಿಂದ ಮುಂದೆ ನಡೆದರು.