ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, October 2, 2020

Mahabharata Tatparya Nirnaya Kannada 19118_19122

 

ತೇ ಧೌಮ್ಯಮಾಪ್ಯ ಚ ಪುರೋಧಸಮುತ್ತಮಜ್ಞಂ ವಿಪ್ರಾತ್ಮಜೋಪಮತಯಾ ವಿವಿಶುಃ ಪುರಂ ಚ ।

ಪಾಞ್ಚಾಲಕಸ್ಯ ನಿಖಿಲಾಂ ದದೃಶುಶ್ಚ ತತ್ರ ಮೂರ್ದ್ಧಾವಸಿಕ್ತಸಮಿತಂ ಸಮಲಙ್ಕೃತಾಂ ಚ ॥೧೯.೧೧೮॥

 

ಪಾಂಡವರು ಎಲ್ಲವನ್ನೂ ಚನ್ನಾಗಿ ಬಲ್ಲ ಧೌಮ್ಯರನ್ನು ತಮ್ಮ ಪುರೋಹಿತರನ್ನಾಗಿ ಹೊಂದಿ, ಬ್ರಾಹ್ಮಣ ಕುಮಾರರಂತೆ ಪಾಂಚಾಲರಾಜನ ಪಟ್ಟಣವನ್ನು (ಕಾಮ್ಪಿಲ್ಯನಗರವನ್ನು) ಪ್ರವೇಶಿಸಿದರು. ನಗರ  ತುಂಬಿತ್ತು ಸಡಗರ, ಸಂಭ್ರಮಾಚರಣೆಯಲ್ಲಿ.  ಅಲ್ಲಿ ಅವರು ಅಲಂಕರಿಸಿಕೊಂಡಿರುವ, ಪಟ್ಟಾಭಿಷಿಕ್ತರಾದ ಎಲ್ಲಾ ರಾಜರುಗಳು ಸೇರಿರುವುದನ್ನು ಕಂಡರು. 

 

ರಾಜನ್ಯಮಣ್ಡಲಮುದೀಕ್ಷ್ಯ ಸುಪೂರ್ಣ್ಣಮತ್ರ ಕೃಷ್ಣಾಂ ಪ್ರಗೃಹ್ಯ ಸಹಜಃ ಪ್ರಗೃಹೀತಮಾಲಾಮ್ ।

ತೇಷಾಂ ಚ ಮದ್ಧ್ಯಮಗಮತ್ ಕುಲವೀರ್ಯ್ಯಸಮ್ಪದ್ಯುಕ್ತಾಂ ವಿಭೂತಿಮಥ ಚಾsಹ ಸಮಸ್ತರಾಜ್ಞಾಮ್ ॥೧೯.೧೧೯॥

 

ಮಾಲೆಯನ್ನು ಹಿಡಿದ ದ್ರೌಪದಿಯನ್ನು ಕರೆದುಕೊಂಡು ಬಂದು ಧೃಷ್ಟದ್ಯುಮ್ನನು, ಎಲ್ಲೆಡೆ ತುಂಬಿರುವ ಕ್ಷತ್ರಿಯರ ಸಮೂಹವನ್ನು ಕಂಡು, ಅವರ ಮಧ್ಯದಲ್ಲಿ ನಡೆದು, ಎಲ್ಲಾ ರಾಜರ ಕುಲ, ವೀರ್ಯ, ಸಂಪತ್ತುಗಳಿಂದ ಕೂಡಿರುವ ಅವರ ಮಹಿಮೆಯನ್ನು ದ್ರೌಪದಿಗೆ ಹೇಳಿದನು. (ಧೃಷ್ಟದ್ಯುಮ್ನ ದ್ರೌಪದಿಗೆ ಎಲ್ಲರ ಪರಿಚಯ ಮಾಡಿಕೊಟ್ಟ)

 

ತಾಂಶ್ಚಪ್ರದರ್ಶ್ಯ ಸಕಲಾನ್ ಸ ಹುತಾಶನಾಂಶಶ್ಚಾಪಂ ಚ ತತ್ ಪ್ರತಿನಿಧಾಯ ಸಪಞ್ಚಬಾಣಮ್ ।

ಆಹಾಭಿಭಾಷ್ಯ ಸಕಲಾನ್ ನೃಪತೀನಥೋಚ್ಚೈರ್ದ್ದೀಪ್ಯದ್ಧುತಾಶನವಪುರ್ಘನತುಲ್ಯಘೋಷಃ ॥೧೯.೧೨೦॥

 

ಬೆಳಗುವ ಬೆಂಕಿಯಂತಹ ಮೈಯುಳ್ಳ, ಮೇಘಕ್ಕೆ ಸಮನಾದ ಧ್ವನಿಯುಳ್ಳ ಧೃಷ್ಟದ್ಯುಮ್ನನು, ಆ ಎಲ್ಲಾ ರಾಜರುಗಳನ್ನು ಪರಿಚಯಿಸಿದ ನಂತರ, ಐದು ಬಾಣಗಳಿಂದ ಕೂಡಿರುವ ಧನುಸ್ಸನ್ನು ರಾಜರುಗಳ  ಮುಂದೆ ಸ್ಥಾಪಿಸಿ,  ಎಲ್ಲರನ್ನೂ ಉದ್ದೇಶಿಸಿ ಮಾತನಾಡಿದ.

[ಈ ಕುರಿತಾದ ಮಹಾಭಾರತದ ವಾಕ್ಯ ಹೀಗಿದೆ: ರಙ್ಗಮಧ್ಯಂ ಗತಸ್ತತ್ರ  ಮೇಘಗಮ್ಭೀರಯಾ ಗಿರಾ । ವಾಕ್ಯಮುಚ್ಚೈರ್ಜಗಾದೇದಂ ಶ್ಲಕ್ಷ್ಣಮರ್ಥವದುತ್ತಮಮ್’(೨೦೦.೫೯) ]

 

ಏತೇನ ಕಾರ್ಮ್ಮುಕವರೇಣ ತರೂಪರಿಸ್ಥಂ ಮತ್ಸ್ಯಾವಭಾಸಮುದಕೇ ಪ್ರತಿವೀಕ್ಷ್ಯ ಯೇನ ।

ಏತೈಃ ಶರೈಃ ಪ್ರತಿಹತೋ ಭವತೀಹ ಮತ್ಸ್ಯಃ ಕೃಷ್ಣಾsನುಯಾಸ್ಯತಿ ತಮದ್ಯ ನರೇನ್ದ್ರವೀರಾಃ ॥೧೯.೧೨೧ ॥

 

‘ವೀರರಾದ ರಾಜಶ್ರೇಷ್ಠರೇ(ನರೇನ್ದ್ರವೀರಾಃ), ಈ ಬಿಲ್ಲಿನಿಂದ, ಮರದ ಮೇಲ್ಗಡೆಯಿರುವ ಮೀನಿನ ಗೊಂಬೆಯನ್ನು, ನೀರಿನಲ್ಲಿ ನೋಡಿ, ಯಾರಿಂದ ಈ ಬಾಣಗಳಿಂದ ಮೀನು ಕೆಡವಲ್ಪಡುತ್ತದೋ, ಅವನನ್ನು ದ್ರೌಪದಿಯು ಅನುಸರಿಸಲಿದ್ದಾಳೆ(ಹೊಂದುತ್ತಾಳೆ)’.

 

ಇತ್ಯಸ್ಯ ವಾಕ್ಯಮನು ಸರ್ವನರೇನ್ದ್ರಪುತ್ರಾ ಉತ್ತಸ್ಥುರುದ್ಧತಮದಾಶ್ಚಲಕುಣ್ಡಲಾಸ್ಯಾಃ ।

ಅಸ್ತ್ರಂ ಬಲಂ ಚ ಬಹು ನೈಜಮಭೀಕ್ಷಮಾಣಾಃ ಸ್ಪರ್ದ್ಧನ್ತ ಏವ ಚ ಮಿಥಃ ಸಮಲಙ್ಕೃತಾಙ್ಗಾಃ ॥೧೯.೧೨೨॥

 

ಈರೀತಿಯಾಗಿ ಧೃಷ್ಟದ್ಯುಮ್ನನು ಹೇಳಿದಾಗ, ದರ್ಪದಿಂದ ಕೂಡಿದವರಾದ, ಅಲುಗಾಡುವ ಕುಂಡಲವುಳ್ಳ ಮೊರೆಯುಳ್ಳವರಾದ, ಅಲಂಕರಿಸಿಕೊಂಡ ಅಂಗವುಳ್ಳ ಎಲ್ಲಾ ರಾಜರೂ ಕೂಡಾ, ತಮ್ಮ ಅಸ್ತ್ರವನ್ನೂ, ದೇಹಬಲವನ್ನೂ ಬಹಳಾ ಎಂದು ತಿಳಿದವರಾಗಿ, ಪರಸ್ಪರರಲ್ಲೇ ಸ್ಪರ್ಧೆಯಿಂದ ಕೂಡಿದವರಾಗಿ ಎದ್ದು ನಿಂತರು.   

No comments:

Post a Comment