ಪಾರ್ತ್ಥೇನ ಸನ್ಧರ್ಷಿತಃ ಶರಣಂ ಜಗಾಮ ಧರ್ಮ್ಮಾತ್ಮಜಂ ತಮಪಿ ಸೋsಥ ನಿಜಾಸ್ತ್ರಮುಗ್ರಮ್ ।
ಸಞ್ಜಹ್ರ ಏವ ತತ ಆಸ ಚ ನಾಮತೋsಸಾವಙ್ಗಾರವರ್ಣ್ಣ ಇತಿ ವರ್ಣ್ಣವಿಪರ್ಯ್ಯಯೇಣ ॥೧೯.೧೧೩॥
ಪಾರ್ಥನಿಂದ ಸೋಲಿಸಲ್ಪಟ್ಟು, ಶಿಕ್ಷಿಸಲ್ಪಟ್ಟ ಚಿತ್ರಸೇನ, ಧರ್ಮರಾಜನಲ್ಲಿ
ಶರಣುಹೊಂದಿದ. ಆಗ ಅರ್ಜುನನೂ ತಾನು ಪ್ರಯೋಗಿಸಿದ ಉಗ್ರವಾಗಿರುವ
ಆಗ್ನೇಯಾಸ್ತ್ರವನ್ನು ಉಪಸಂಹಾರ ಮಾಡಿದ ಕೂಡಾ. ಈ ಘಟನೆಯಲ್ಲಿ ಮೈಯ ಬಣ್ಣದ ಬದಲಾವಣೆಯನ್ನು ಹೊಂದಿದ ಚಿತ್ರಸೇನನು ‘ಅನ್ಗಾರವರ್ಣ’
ಎನ್ನುವ ಹೆಸರಿನವನಾದ.
[ಮಹಾಭಾರತದಲ್ಲಿ(ಆದಿಪರ್ವ ೧೮೬. ೩೪) ಈ ಘಟನೆಯ ವಿವರ
ಕಾಣಸಿಗುತ್ತದೆ. ಯುಧಿಷ್ಠಿರಂ ತಸ್ಯ ಭಾರ್ಯಾ ಪ್ರಪೇದೇ ಶರಣಾರ್ಥಿನೀ । ನಾಮ್ನಾ ಕುಮ್ಭೀನಸೀ
ನಾಮ ಪರಿತ್ರಾಣಮಭೀಪ್ಸತೀ’ ಇಲ್ಲಿ ಯುಧಿಷ್ಠಿರನನ್ನು ಚಿತ್ರಸೇನನ ಹೆಂಡತಿಯಾದ ಕುಮ್ಭೀನಸೀ ಶರಣುಹೊಂದಿದಳು ಎಂದು ಹೇಳಿದ್ದಾರೆ. ಆದರೆ ಆಚಾರ್ಯರು
‘ಪಾರ್ತ್ಥೇನ
ಸನ್ಧರ್ಷಿತಃ ಶರಣಂ ಜಗಾಮ ಧರ್ಮ್ಮಾತ್ಮಜಂ.....’ ಎನ್ನುವ ನಿರ್ಣಯ ನೀಡಿದ್ದಾರೆ. ಇದರ ತಾತ್ಪರ್ಯ
ಇಷ್ಟು: ಮೊದಲು ಅವನ ಪತ್ನಿ ಶರಣುಹೊಂದಿದಳು ನಂತರ ಚಿತ್ರಸೇನನೂ ಶರಣುಹೊಂದಿದ. ಹೀಗಾಗಿ ಇಲ್ಲಿ
ಯಾವುದೇ ವಿರೋಧವಿಲ್ಲ.]
ಗನ್ಧರ್ವ ಉಲ್ಬಣಸುರಕ್ತತನುಃ ಸ ಭೂತ್ವಾ ಸ್ವರ್ಣ್ಣಾವದಾತ ಉತ
ಪೂರ್ವಮುಪೇತ್ಯ ಸಖ್ಯಮ್ ।
ಪಾರ್ತ್ಥೇನ ದುರ್ಲ್ಲಭಮಹಾಸ್ತ್ರಮಿದಂ ಯಯಾಚೇ ಜಾನನ್ನಪಿ ಸ್ಮ
ನಹಿ ತಾದೃಶಮೇಷ ವೇದ ॥೧೯.೧೧೪ ॥
ಗಂಧರ್ವನು ಮೊದಲು ಬಂಗಾರದ ಮೈಬಣ್ಣವುಳ್ಳವನಾಗಿದ್ದ. ಅಂಥವನು
ಬೆಂಕಿ ಸುಟ್ಟಿದ್ದರಿಂದ ಕಡುಕೆಂಪು ಮೈಬಣ್ಣದವನಾದ. ಇಂತಹ ಚಿತ್ರಸೇನ ಅರ್ಜುನನೊಂದಿಗೆ ಗೆಳೆತನವನ್ನು
ಹೊಂದಿ, ಅವನಲ್ಲಿ ಆಗ್ನೇಯಾಸ್ತ್ರವನ್ನು ಬೇಡಿದ.
ಮೊದಲು ಅವನು ಈ ಅಸ್ತ್ರವನ್ನು ತಿಳಿದಿದ್ದರೂ ಕೂಡಾ, ಈರೀತಿಯಾಗಿ ಅರ್ಜುನ ತಿಳಿದಂತೆ ತಿಳಿದಿರಲಿಲ್ಲ.
[ಇದನ್ನು ಮಹಾಭಾರತದ ಆದಿಪರ್ವದಲ್ಲಿ ಈರೀತಿ ವಿವರಿಸಿದ್ದಾರೆ: ಜಿತೋsಹಂ ಪೂರ್ವಕಂ ನಾಮ ಮುಞ್ಚಾಮ್ಯಙ್ಗಾರಪರ್ಣತಾಮ್ ।
ಯಶೋಹೀನಂ ನಚ ಶ್ಲಾಘ್ಯಂ ಸ್ವಂ ನಾಮಜನಸಂಸದಿ’ (೧೮೬.೩೮) ‘ಅಙ್ಗಾರಪರ್ಣಂ
ಗನ್ಧರ್ವಂ ವಿತ್ತ ಮಾಂ ಸ್ವಬಲಾಶ್ರಯಮ್ । ಅಹಂ
ಹಿ ಮಾನಿ ಚೇರ್ಷ್ಯುಶ್ಚ ಕುಬೇರಸ್ಯ ಪ್ರಿಯಃ ಸಖಾ । ಅಙ್ಗಾರಪರ್ಣಮಿತ್ಯೇವಂ
ಖ್ಯಾತಂ ಚೇದಂ ವನಂ ಮಮ । ಅನುಗಙ್ಗಂ ಚರನ್ ಕಾಮಾಂಶ್ಚಿತ್ರಂ ಯತ್ರ ರಮಾಮ್ಯಹಮ್’ (೧೮೬.೧೩-೧೪)
ವಿದ್ಯಾ ಸುಶಿಕ್ಷಿತತಮಾ ಹಿ ಸುರೇಶಸೂನೌ ತಾಮಸ್ಯ ಚಾವದದಸಾವಪಿ
ಕಾಲತೋsಸ್ಮೈ ।
ಗನ್ಧರ್ವಗಾಮವದದನ್ವಗದೃಶ್ಯವಿದ್ಯಾಂ ಪಶ್ಚಾದಿತಿ ಸ್ಮ
ಪುರುಹೂತಸುತಸ್ಯ ವಾಕ್ಯಾತ್ ॥೧೯.೧೧೫॥
ಅರ್ಜುನನಲ್ಲಿ ಅತ್ಯಂತ ಶಿಕ್ಷಿತವಾದ ಅಸ್ತ್ರವಿದ್ಯೆ
ಇದ್ದುದರಿಂದ ಅದನ್ನು ಅವನು ಗಂಧರ್ವನಿಗೆ ಕೊಟ್ಟ. ಹಾಗೆಯೇ, ಅರ್ಜುನನ ವಾಕ್ಯದಂತೇ, ಆ ಗಂಧರ್ವನು
ತನ್ನಲ್ಲಿರುವ ಅದೃಶ್ಯವಿದ್ಯೆಯನ್ನು ಕಾಲಾಂತರದಲ್ಲಿ (ಅನುಕೂಲವಾದ ಕಾಲದಲ್ಲಿ) ಅರ್ಜುನನಿಗೆ
ನೀಡಿದ.
[ಅರ್ಜುನ ಒಂದು ವಿದ್ಯೆಯನ್ನು ಚಿತ್ರಸೇನನಿಗೆ ಕೊಟ್ಟ. ಅದಕ್ಕೆ
ಪ್ರತಿಯಾಗಿ ಚಿತ್ರಸೇನ ಒಂದು ವಿದ್ಯೆಯನ್ನು ಅರ್ಜುನನಿಗೆ ಕೊಟ್ಟ. ಚಿತ್ರಸೇನನಿಗೆ ಅಭಿಮಾನ ಅಡ್ಡ ಬಂದು
ಹೀಗೆ ಮಾಡಿರಬಹುದು. ಆದರೆ ಅರ್ಜುನ ಈ ವಿನಿಮಯವನ್ನು ಏಕೆ ಒಪ್ಪಿಕೊಂಡ ಎಂದರೆ:]
ಆಧಿಕ್ಯತಃ ಸ್ವಗತಸಂವಿದ ಏವ ಸಾಮ್ಯೇ ನೈವೇಚ್ಛತಿ ಸ್ಮ ನಿಮಯಂ ಸ
ಧನಞ್ಜಯೋsತ್ರ ।
ಧರ್ಮಾರ್ತ್ಥಮೇವ ಸ ತು ತಾಂ ಪರಿದಾಯ ತಸ್ಮೈ ಕಾಲೇನ
ಸಂವಿದಮಮುಷ್ಯ ಚ ಧರ್ಮ್ಮತೋsಯಾತ್ ॥೧೯.೧೧೬॥
ತನ್ನಲ್ಲಿ ಜ್ಞಾನದ ಆಧಿಕ್ಯವಿರಲು, ಸಮಾನವಾದ ಪಕ್ಷದಲ್ಲಿ ಮಾತ್ರ
ವಿನಿಮಯ ಸಾಧ್ಯವಿರುವುದರಿಂದ, ಅರ್ಜುನ ಈ ವಿನಿಮಯವನ್ನು ಬಯಸಿರಲಿಲ್ಲ. ಅವನು ಕೇವಲ
ಸೌಜನ್ಯಕ್ಕಾಗಿ ಅಥವಾ ಪುಣ್ಯಕ್ಕಾಗಿ ಗಂಧರ್ವನಿಗೆ ಆ ವಿದ್ಯೆಯನ್ನು ಕೊಟ್ಟು, ಕೆಲವು ಕಾಲವಾದಮೇಲೆ, ಧರ್ಮದಿಂದಲೇ
ಗಂಧರ್ವವಿದ್ಯೆಯನ್ನು ಪಡೆದ.
[ಅರ್ಜುನನಿಗೆ ಅದೃಶ್ಯ ವಿದ್ಯೆ ಬೇಕಿರಲಿಲ್ಲ. ಅಲ್ಲದೇ,
ಅರ್ಜುನನಲ್ಲಿದ್ದ ಅಸ್ತ್ರವಿದ್ಯೆ
ಗಂಧರ್ವನಲ್ಲಿದ್ದ ಅದೃಶ್ಯ ವಿದ್ಯೆಗಿಂತ ಶ್ರೇಷ್ಠವಾಗಿತ್ತು. ಹಾಗಾಗಿ ಅವನಿಗೆ ವಿನಿಮಯ ಇಷ್ಟವಿರಲಿಲ್ಲ.
ಆದರೂ ಏಕೆ ಕಾಲಾಂತರದಲ್ಲಿ ಗಂಧರ್ವನಿಂದ ಪಡೆದ ಎಂದರೆ: ವಿದ್ಯೆಯನ್ನು ಪಡೆಯುವವನು ಗುರುಗಳಿಗೆ ಎನನ್ನಾದರೂ
ಕೊಡಬೇಕು. ಕ್ಷತ್ರಿಯನಾದ್ದರಿಂದ ಅರ್ಜುನ
ವಿದ್ಯೋಪ ಜೀವನ ಮಾಡುವಂತಿಲ್ಲ. ಆ ಕಾರಣದಿಂದ ವಿದ್ಯಾ ವಿನಿಮಯವನ್ನೇ ಮಾಡಿಕೊಳ್ಳೋಣ ಎಂದು ಚಿಂತನೆ
ನಡೆಸಿ, ಆ ಸೌಜನ್ಯಕ್ಕಾಗಿಯೇ ಕಾಲಾಂತರದಲ್ಲಿ ಅರ್ಜುನ ಪಡೆದ ಹೊರತು, ಅದರ ಬಯಕೆ ಅವನಿಗಿರಲಿಲ್ಲ].
ಪಾರ್ತ್ಥೇನ ಸೋsಪಿ ಬಹುಲಾಶ್ಚ ಕಥಾಃ ಕಥಿತ್ವಾ ಧೌಮ್ಯಸ್ಯ ಸಙ್ಗ್ರಹಣಮಾಹ ಪುರೋಹಿತತ್ವೇ
।
ದಾಸ್ಯಾಮಿ ದಿವ್ಯತುರಗಾನಿತಿ ಸೋsರ್ಜ್ಜುನಾಯಾ ವಾಚಂ ನಿಗದ್ಯ ದಿವಮಾರುಹದಪ್ಯಗುಸ್ತೇ ॥೧೯.೧೧೭॥
ಈರೀತಿ ಅರ್ಜುನನ ಜೊತೆಗೆ ಗೆಳೆತನ ಬೆಳೆಸಿದ ಗನ್ಧರ್ವ, ಅವನಿಗೆ
ಅನೇಕ ಕಥೆಗಳನ್ನು ಹೇಳಿದ.(ಆದಿಪರ್ವದಲ್ಲಿ ಈ ಕಥೆಗಳ ವಿವರವನ್ನು ನಾವು ಕಾಣಬಹುದು) ಧೌಮ್ಯ ಎಂಬುವವನ ಪೌರೋಹಿತ್ಯಕ್ಕಾಗಿ ಗ್ರಹಿಕೆಯನ್ನೂ
ಕೂಡಾ ಅವನು ಹೇಳಿದ.(ಬ್ರಾಹ್ಮಣ ರಹಿತರಾಗಿ ಕ್ಷತ್ರಿಯರಿರಬಾರದು. ಅದಕ್ಕಾಗಿ ಧೌಮ್ಯರನ್ನು
ರಾಜಗುರುವಾಗಿ ಪರಿಗ್ರಹಿಸಿ. ಅವರು ಇಲ್ಲೇ
ಸ್ವಲ್ಪ ದೂರದಲ್ಲಿದ್ದಾರೆ ಎನ್ನುವ ಸಲಹೆಯನ್ನೂ ಚಿತ್ರಸೇನ ನೀಡಿದ) . ಅವನು ಅರ್ಜುನನಿಗಾಗಿ ‘ದೇವಲೋಕದ
ಕುದುರೆಗಳನ್ನು ಕೊಡುತ್ತೇನೆ’ ಎನ್ನುವ ಮಾತನ್ನು ಹೇಳಿ ಅಂತರಿಕ್ಷವನ್ನೇರಿದ. ತದನಂತರ ಪಾಂಡವರು
ಅಲ್ಲಿಂದ ಮುಂದೆ ನಡೆದರು.
No comments:
Post a Comment