ಕೇಚಿನ್ನಿರೀಕ್ಷ್ಯಧನುರೇತ್ಯ ನ ಮೇ ಸುಶಕ್ಯಮಿತ್ಯೇವ
ಚಾಪಯಯುರನ್ಯ ಉತ ಪ್ರಚಾಲ್ಯ ।
ತತ್ರಾsಸಸಾದ ಶಿಶುಪಾಲ ಉರುಪ್ರತಾಪಃ
ಸಙ್ಗೃಹ್ಯ ತತ್ ಸಮನುರೋಪಣಯತ್ನ ಆಸೀತ್ ॥೧೯.೧೨೩॥
ಕೆಲವರು ಬಿಲ್ಲನ್ನು ನೋಡಿಯೇ ‘ಇದು ನನ್ನಿಂದ ಸಾಧ್ಯವಿಲ್ಲಾ’ ಎಂದುಕೊಂಡು
ಹೊರಟುಹೋದರು. ಇನ್ನು ಕೆಲವರು ಬಿಲ್ಲನ್ನು ಅಲುಗಾಡಿಸಿ
ನೋಡಿ ಹೊರಟುಹೋದರು. ಆಗ ಉತ್ಕೃಷ್ಟ ಬಲವುಳ್ಳ ಶಿಶುಪಾಲನು ಧನುಸ್ಸನ್ನು ಎತ್ತಿ, ದಾರವನ್ನು
ಕಟ್ಟುವ ಯತ್ನದಲ್ಲಿ ಮುಳುಗಿದ.
ಮಾಷಾನ್ತರಾಯ ಸ ಚಕರ್ಷ ಯದೈವ ಕೋಟ್ಯಾ ಉನ್ನಮ್ಯ ತತ್
ಪ್ರತಿಜಘಾನ ತಮೇವ ಚಾsಶು ।
ಅನ್ಯತ್ರ ಫಲ್ಗುನತ ಏತದಶಕ್ಯಮೇವೇತ್ಯಞ್ಜೋ ಗಿರೀಶವರತಃ ಸ ಯಯೌ
ಚ ಭಗ್ನಃ ॥೧೯.೧೨೪॥
ಯಾವಾಗ ಶಿಶುಪಾಲನು ಧನುಸ್ಸನ್ನೆತ್ತಿ ಉದ್ದಿನಕಾಳಿನಷ್ಟು
ವ್ಯತ್ಯಾಸದ ತನಕ ಸೆಳೆದನೋ ಆಗ
(ಉದ್ದಿನಕಾಳಿನಷ್ಟು ಹೆಚ್ಚು ಸೆಳೆದಿದ್ದರೆ ಕಟ್ಟಿಬಿಡುತ್ತಿದ್ದ, ಆದರೆ ಅಷ್ಟು
ವ್ಯತ್ಯಾಸವಿರುವಾಗ), ಅದು ಸೆಟೆದು ಅವನಿಗೇ ಹೊಡೆಯಿತು. ‘ಅರ್ಜುನನನ್ನು ಬಿಟ್ಟು ಇತರರಿಗೆ ಈ
ಬಿಲ್ಲನ್ನು ಹೆದೆಯೇರಿಸಲು ಸಾಧ್ಯವಿಲ್ಲಾ’ ಎಂಬ ರುದ್ರದೇವರ ವರವಿರುವುದರಿಂದ ಹಾಗಾಯಿತು ಮತ್ತು
ಅದರಿಂದಾಗಿ ಸೋತ ಶಿಶುಪಾಲ ಅಲ್ಲಿಂದ ನಿರ್ಗಮಿಸಿದ.
[ಮಹಾಭಾರತ ವಾಕ್ಯ ಹೀಗಿದೆ: ‘ತದಧ್ಯಾರೋಪ್ಯಮಾಣಂ ತು
ಮಾಶಮಾತ್ರೇsಭ್ಯತಾಡಯತ್ । ಧನುಷಾ ಪೀಡ್ಯಮಾನಸ್ತು
ಜಾನುಭ್ಯಾಮಗಮನ್ಮಹೀಮ್’ (ಆದಿಪರ್ವ ೨೦೨.೨೩)]
ಮದ್ರೇಶ ಏತ್ಯ ಚಕೃಷೇ ಸ್ಥವಿರೋsಪಿ ವೀರ್ಯ್ಯಾಚ್ಚೇದೀಶತೋsಪ್ಯಧಿಕಮೇವ ಸ ಮುದ್ಗಮಾತ್ರೇ ।
ಶಿಷ್ಟೇsಮುನಾ ಪ್ರತಿಹತಃ ಸ ಯಯಾವಶಕ್ಯಂ
ಮತ್ವಾssತ್ಮನಸ್ತದನು ಭೂಪತಯೋ ವಿಷಣ್ಣಾಃ ॥೧೯.೧೨೫॥
ಮಾದ್ರದೇಶದ ಅಧಿಪತಿ ಶಲ್ಯನು ಮುದಿಯನಾದರೂ ಕೂಡಾ, ಮುಂದೆ ಬಂದು, ವೀರ್ಯದಿಂದ, ಶಿಶುಪಾಲನಿಗಿಂತಲೂ ಕೂಡಾ ಹೆಚ್ಚಾಗಿಯೇ ಧನುಸ್ಸನ್ನು ಸೆಳೆದು, ಹೆಸರುಕಾಳಿನ ಅಂತರವಿದ್ದಾಗ ಧನುರ್ದಂಡದಿಂದ ಹೊಡೆಯಲ್ಪಟ್ಟವನಾಗಿ ಅಲ್ಲಿಂದ ಹಿಂದೆ ಸರಿದನು. ಅವನೇ ಸೋತಮೇಲೆ ತಮಗೆ ಇದು ಅಶಕ್ಯ ಎಂದು ತಿಳಿದು ಅನೇಕ ಜನ ರಾಜರು ವಿಷಾದಕ್ಕೊಳಗಾದರು.
[ಮಹಾಭಾರತ ವಾಕ್ಯ: ‘ತತಃ ಶಲ್ಯೋ ಮಹಾವೀರ್ಯೋ ಮದ್ರರಾಜೋ
ಮಹಾಬಲಃ । ಧನುರಾರೋಪ್ಯಮಾಣಂ ತು ಮುದ್ಗಮಾತ್ರೇsಭ್ಯತಾಡಯತ್’(೨೫).]
ಸನ್ನೇಷು ಭೂಪತಿಷು ಮಾಗಧ ಆಸಸಾದ ಸೋsವಜ್ಞಯೈವ ಬಲವೀರ್ಯ್ಯಮದೇನ ದೃಪ್ತಃ ।
ಚಾಪಂ ಚಕರ್ಷ ಚಲಪಾದತಳೋ ಬಲೇನ ಶಿಷ್ಟೇ ಸ ಸರ್ಷಪಮಿತೇsಭಿಹತೋsಮುನೈವ ॥೧೯.೧೨೬॥
ಹೀಗೆ ಎಲ್ಲಾ ರಾಜರೂ ಸೋಲಲು, ಜರಾಸಂಧನು ಬಿಲ್ಲಿನ ಬಳಿ ಬಂದ.
ಒಂದು ರೀತಿಯ ಉಡಾಫೆಯಿಂದ, ತನ್ನಲ್ಲಿ ಬಲ ವೀರ್ಯವಿದೆ ಎಂದು ದರ್ಪವನ್ನು ಹೊಂದಿ, ಸರಿಯಾಗಿ ಕಾಲೂರದೇ(ನಿಂತುಕೊಳ್ಳದೇ), ಬಿಲ್ಲನ್ನು ಸೆಳೆದ.
ಒಂದು ಸಾಸಿವೆ ಕಾಳಿನಷ್ಟು ಅಂತರ ಉಳಿಯಲು, ಬಿಲ್ಲಿನ ದಂಡದಿಂದಲೇ ಹೊಡೆಯಲ್ಪಟ್ಟ.
[ಮಹಾಭಾರತ ವಾಕ್ಯ: ‘ತತೋ ರಾಜಾ ಜರಾಸನ್ಧೋ ಮಹಾವೀರ್ಯೋ
ಮಹಾಬಲಃ । ಕಮ್ಬುಗ್ರೀವಃ ಪೃಥುವ್ಯಂಸೋ ಮತ್ತವಾರಣವಿಕ್ರಮಃ । ಮತ್ತವಾರಣತಾಮ್ರಾಕ್ಷೋ ಮತ್ತವಾರಣವೇಗವಾನ್ । ಧನುಷೋsಭ್ಯಾಶಮಾಗತ್ಯ ತಸ್ಥೌ ಗಿರಿರಿವಾಚಲಃ ।
ಧನುರಾರೋಪ್ಯಮಾಣಂ ತು ಸರ್ಷಮಾತ್ರೇsಭ್ಯತಾಡಯತ್’(೨೪-೨೬), (ಇಲ್ಲಿ ‘ಸರ್ಷಪಃ’ ಎನ್ನುವ ಪದವನ್ನು ವೇದವ್ಯಾಸರು ‘ಸರ್ಷಃ’
ಎಂದು ಬಳಸಿರುವುದು ವಿಶೇಷ)]
ಜಾನುನ್ಯಮುಷ್ಯ ಧರಣೀಂ ಯಯತುಸ್ತದೈವ ದರ್ಪ್ಪೇಣ ಚಾಸ್ಥಿರಪದಸ್ಥಿತಿಮಾತ್ರಹೇತೋಃ ।
ರೌದ್ರಾದ್ ವರಾತ್ ಸ ಜಳತಾಂ ಗಮಿತೋsಥ ರಾಜಾ ರಾಜ್ಞಾಂ ಮುಖಾನ್ಯನಭಿವೀಕ್ಷ್ಯ ಯಯೌ ಸ್ವರಾಷ್ಟ್ರಮ್ ॥೧೯.೧೨೭॥
ದರ್ಪದಿಂದ ಸರಿಯಾಗಿ ನಿಲ್ಲದೇ ಬಿಲ್ಲನ್ನು ಸೆಳೆದ ಕಾರಣದಿಂದ
ಜರಾಸಂಧನ ಮೊಣಕಾಲುಗಳು ಭೂಮಿಗೆ ತಾಗಿತು(ಆತ ಕುಸಿದುಬಿದ್ದ). ರುದ್ರದೇವರ ವರದಿಂದ ಅವನು ನಿಷ್ಕ್ರಿಯನಾದ. ತದನಂತರ ಅವನು
ಅಲ್ಲಿದ್ದ ರಾಜರುಗಳ ಮುಖವನ್ನೂ ನೋಡದೆಯೇ ತನ್ನ ದೇಶಕ್ಕೆ ತೆರಳಿದ.
[ಮಹಾಭಾರತ ವಾಕ್ಯ: ‘ತದೈವಾಗಾತ್ ಸ್ವಯಂ ರಾಜ್ಯಂ ಪಶ್ಚಾದನವಲೋಕಯನ್ (೨೦೨.೨೮) (ಶಲ್ಯ ಧನುಸ್ಸನ್ನು ಮುರಿಯಲು ತೆರಳಿ ಭಗ್ನವಾದ
ಪ್ರಸಂಗದಲ್ಲಿ ಈ ಮಾತನ್ನು ಹೇಳಿದ್ದಾರೆ. ಅದರೆ ಆ ಮಾತು ಜರಾಸಂಧನ ಕುರಿತಾದುದು. ಪೂರ್ವಕಥೆಯನ್ನು
ನಂತರ, ನಂತರದ ಕಥೆಯನ್ನು ಮೊದಲು ಹೇಳುವ
ಶೈಲಿಯಲ್ಲಿ ಈರೀತಿ ಬಂದಿದೆ)]
ಪ್ರಾಯೋ ಗತಾಸ್ತಮನು ಭೂಪತಯೋsಥ ಕರ್ಣ್ಣೋ ದುರ್ಯ್ಯೋಧನಾರ್ತ್ಥಮನುಗೃಹ್ಯ ಧನುಶ್ಚಕರ್ಷ ।
ರಾಮಾದುಪಾತ್ತಶುಭಶಿಕ್ಷಿತಮಾತ್ರತೋsಸೌ ರೋಮಾವಶಿಷ್ಟಮಕರೋದ್ ಧನುಷೋsನ್ತಮಾಶು ॥೧೯.೧೨೮॥
ಜರಾಸಂಧನನ್ನು ಅನುಸರಿಸಿ, ಹೆಚ್ಚಿನ ರಾಜರು ಹೊರಟುಹೋದರು. ತದನಂತರ ಕರ್ಣನು ‘ದುರ್ಯೋಧನನಿಗಾಗಿ’
ಎಂದು ಹೇಳಿ, ಬಿಲ್ಲನ್ನು ಸೆಳೆದ. ಪರಶುರಾಮನಿಂದ ಒಳ್ಳೆಯ ಶಿಕ್ಷಣವನ್ನು
ಪಡೆದಿದ್ದ ಆತ ತಕ್ಷಣ ಒಂದು ಕೂದಲೆಳೆಯ ಅಂತರವಿರುವಷ್ಟು ಸೆಳೆದ.
ತಸ್ಮಿಂಶ್ಚ ತೇನ ವಿಹತೇ ಪ್ರತಿಸನ್ನಿವೃತ್ತೇ ಭೀಮಾರ್ಜ್ಜುನೌ
ದ್ವಿಜಸದಸ್ಯುಪಸನ್ನಿವಿಷ್ಟೌ ।
ಉತ್ತಸ್ಥತೂ ರವಿಶಶಿಪ್ರತಿಮಾನರೂಪೌ ವಿಪ್ರೇಷು ತತ್ರ ಚ ಭಿಯಾ
ವಿನಿವಾರಯತ್ಸು ॥೧೯.೧೨೯॥
ಕರ್ಣನೂ ಕೂಡಾ ಬಿಲ್ಲಿನಿಂದ ಹೊಡೆಯಲ್ಪಟ್ಟು ಹಿಂತಿರುಗಲು,
ಬ್ರಾಹ್ಮಣರ ಮಧ್ಯದಲ್ಲಿ ಕುಳಿತಿರುವ, ಸೂರ್ಯಚಂದ್ರರಂತೆ ಕಂಗೊಳಿಸುತ್ತಿರುವ ಭೀಮಸೇನಾ ಹಾಗೂ ಅರ್ಜುನರು,
ಉಳಿದ ಬ್ರಾಹ್ಮಣರು ಭಯದಿಂದ ತಡೆಯುತ್ತಿದ್ದರೂ ಕೂಡಾ ಎದ್ದು ನಿಂತರು.
[‘ಕರ್ಣ ಬಿಲ್ಲನ್ನು ಎತ್ತಿ ಹಿಡಿಯುತ್ತಾನೆ, ಆಗ ದ್ರೌಪದಿ 'ನೀನು ಸೂತಪುತ್ರ' ಎಂದು ಹೇಳುತ್ತಾಳೆ’ ಇತ್ಯಾದಿ ಕಥೆ ಉತ್ತರದ ಪಾಠದಲ್ಲಿಲ್ಲ. ದಾಕ್ಷಿಣಾತ್ಯ ಪಾಠದಲ್ಲಿ ಮಾತ್ರ ಕಾಣಸಿಗುತ್ತದೆ. ಕರ್ಣ ದುರ್ಯೋಧನನ ಪರ ಬಿಲ್ಲನ್ನು ಎತ್ತಲು ಹೋದಾಗ ದ್ರೌಪದಿ ಮಾತನಾಡುವ ಅಗತ್ಯವೇ ಇಲ್ಲ. ಏಕೆಂದರೆ ಆಕೆ ಮದುವೆಯಾಗುವ ಗಂಡು ಆ ಧನುಸ್ಸನ್ನು ಎತ್ತಬೇಕೇ ಹೊರತು, ಗಂಡಿನ ಪರ ಇನ್ನೊಬ್ಬ ಅದನ್ನು ಮಾಡಲಾಗುವುದಿಲ್ಲ. ಇನ್ನು, ರುದ್ರದೇವರ ವರವಿದ್ದುದರಿಂದ ಕರ್ಣ ಬಿಲ್ಲನ್ನು ಹೆದೆಯೇರಿಸಿ ಯಶಸ್ವೀಯಾಗುವ ಪ್ರಶ್ನೆಯೇ ಇಲ್ಲ].
No comments:
Post a Comment