ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, October 4, 2020

Mahabharata Tatparya Nirnaya Kannada 19142_19147

 

ಅಗ್ರೇsಶ್ವಿಪುತ್ರಸಹಿತಃ ಸ ತು ಧರ್ಮ್ಮಸೂನುಃ ಪ್ರಾಯಾತ್ ಕುಲಾಲಗೃಹಮನ್ವಪಿ ಭೀಮಪಾರ್ತ್ಥೌ 

ಭಿಕ್ಷೇತಿ ತೈರಭಿಹಿತೇ ಪ್ರಜಗಾದ ಕುನ್ತೀ ಭುಙ್ಗ್ಧ್ವಂ  ಸಮಸ್ತಶ ಇತಿ ಪ್ರ ದದರ್ಶ ಕನ್ಯಾಮ್ ॥೧೯.೧೪೨॥

 

ಆ ಧರ್ಮರಾಜನು ಎಲ್ಲರಿಗಿಂತ ಮೊದಲೇ ನಕುಲ ಸಹದೇವರಿಂದ ಕೂಡಿಕೊಂಡು ಕುಂಬಾರನ ಮನೆಯನ್ನು ಕುರಿತು ತೆರಳಿದನು. ತದನಂತರ ಭೀಮಾರ್ಜುನರೂ ತೆರಳಿದರು. ಅವರಿಂದ ‘ಭಿಕ್ಷೆ’ ಎಂದು ಹೇಳಲ್ಪಡುತ್ತಿರಲು, ಕುಂತಿಯು ‘ಎಲ್ಲರೂ ಸ್ವೀಕರಿಸಿ’ ಎಂದು ಹೇಳಿದಳು. ಹೀಗೆ ಹೇಳಿದಮೇಲೆ ಆಕೆ ಕನ್ಯೆಯನ್ನು ಕಂಡಳು ಕೂಡಾ.   

 

ಪ್ರಾಮಾದಿಕಂ ಚ ವಚನಂ ನ ಮೃಷಾ ತಯೋಕ್ತಂ ಪ್ರಾಯೋ ಹಿ ತೇನ ಕಥಮೇತದಿತಿ ಸ್ಮ ಚಿನ್ತಾ ।

ತೇಷಾಂ ಬಭೂವ ವಸುದೇವಸುತೋ ಹರಿಶ್ಚ ತತ್ರಾsಜಗಾಮ ಪರಮೇಣ ಹಿ ಸೌಹೃದೇನ ॥೧೯.೧೪೩॥

 

ಕುಂತಿ ಪ್ರಮಾದದಿಂದ ಆಡಿದ ಮಾತೂ ಕೂಡಾ ಎಂದೂ ಸುಳ್ಳಾಗುವುದಿಲ್ಲ. ಅದರಿಂದ ಇದು ಹೇಗೆ ಸತ್ಯವಾಗುವುದು(ಒಬ್ಬ ಕನ್ಯೆಯನ್ನು ಐದು ಜನ ಮದುವೆಯಾಗುವುದು ಹೇಗೆ) ಎಂದು ಅವರೆಲ್ಲರಿಗೂ ಚಿಂತೆಯಾಯಿತು. ಅದೇ ಸಮಯದಲ್ಲಿ ಆತ್ಯಂತಿಕವಾದ ಸ್ನೇಹದಿಂದ ಶ್ರೀಕೃಷ್ಣನೂ ಕೂಡಾ ಅಲ್ಲಿಗೆ ಬಂದ.

[ಶ್ರೀಕೃಷ್ಣನಲ್ಲಿ ಯುಧಿಷ್ಠಿರ ‘ನಿನಗೆ ಹೇಗೆ ತಿಳಿಯಿತು’ ಎಂದು ಕೇಳುತ್ತಾನೆ. ಅದಕ್ಕೆ ಶ್ರೀಕೃಷ್ಣ ಹೇಳುತ್ತಾನೆ : ‘ಗೂಢೋಪ್ಯರ್ಗ್ನಿಜ್ಞಾಯಾತ ಎವ ರಾಜನ್’– ‘ಬೆಂಕಿಯನ್ನು ಮುಚ್ಚಿಟ್ಟರೂ ತಿಳಿದೇ ತಿಳಿಯುತ್ತದೆ’ ಎನ್ನುತ್ತಾನೆ].

 

ಸಮ್ಭಾಷ್ಯ ತೈಃ ಸ ಭಗವಾನಮಿತಾತ್ಮಶಕ್ತಿಃ ಪ್ರಾಯಾನ್ನಿಜಾಂ ಪುರಮಮಾ ಯದುಭಿಃ ಸಮಸ್ತೈಃ ।

ಜ್ಞಾತುಂ ಚ ತಾನ್ ನಿಶಿ ಸ ತು ದ್ರುಪದಃ ಸ್ವಪುತ್ರಂ ಪ್ರಾಸ್ಥಾಪಯತ್ ಸ ಚ ವಿಲೀನ ಇಮಾನಪಶ್ಯತ್ ॥೧೯.೧೪೪॥

 

ಎಣಿಯಿರದ ಕಸುವಿನ, ಷಡ್ಗುಣಸಂಪನ್ನನಾದ ಶ್ರೀಕೃಷ್ಣನು ಅವರೊಂದಿಗೆ ಮಾತನಾಡಿ, ತನ್ನೊಂದಿಗೆ ಬಂದಿದ್ದ ಎಲ್ಲಾ ಯದುಗಳಿಂದ ಕೂಡಿಕೊಂಡು ತನ್ನ ಪಟ್ಟಣಕ್ಕೆ ಹಿಂತಿರುಗಿದ. ಇತ್ತ ದ್ರುಪದರಾಜನು ಸ್ವಯಮ್ಬರದಲ್ಲಿ ದ್ರೌಪದಿಯನ್ನು ಗೆದ್ದವರ ಕುರಿತು ತಿಳಿಯಲು ರಾತ್ರಿಯಲ್ಲಿ ತನ್ನ ಮಗನಾದ ಧೃಷ್ಟದ್ಯುಮ್ನನನ್ನು ಅವರಿದ್ದಲ್ಲಿಗೆ  ಕಳುಹಿಸಿದನು. ಅವನಾದರೋ,  ಅಡಗಿದವನಾಗಿ ಪಾಂಡವರನ್ನು ಕಂಡ.

 

ಭಿಕ್ಷಾನ್ನಭೋಜಿನ ಉತೋ ಭಗಿನೀಂ ನಿಜಾಂ ಚ ತತ್ರಾತಿತೃಪ್ತಹೃದಯಾಮಥ ಯುದ್ಧವಾರ್ತ್ತಾಮ್ ।

ತೇಷಾಂ ನಿಶಮ್ಯ ನದತಾಂ ಘನವದ್ ಗಭೀರಾಂ ಕ್ಷತ್ರೋತ್ತಮಾ ಇತಿ ಮತಿಂ ಸ ಚಕಾರ ವೀರಃ ॥೧೯.೧೪೫॥

 

ಭಿಕ್ಷಾನ್ನವನ್ನು ಸ್ವೀಕರಿಸುವ ಅವರನ್ನು, ಜೊತೆಗೆ ಅತ್ಯಂತ ತೃಪ್ತವಾದ  ಮನಸ್ಸಿನಿಂದ ಕೂಡಿದ ತನ್ನ ತಂಗಿಯನ್ನು ಧೃಷ್ಟದ್ಯುಮ್ನ ಅಲ್ಲಿ ನೋಡಿದ. ತದನಂತರ ಮೋಡದಂತೆ ಗಂಭೀರವಾಗಿ ಘರ್ಜಿಸುವ ಧ್ವನಿಯಲ್ಲಿ ಅವರು ಯುದ್ಧದ ಕುರಿತು ಮಾತನಾಡುವುದನ್ನು ಕೇಳಿದ ಅವನು, ‘ಇವರು ಕ್ಷತ್ರಿಯರೇ’ ಎನ್ನುವ ನಿಶ್ಚಯಕ್ಕೆ ಬಂದ.

 

ಪ್ರಾತಸ್ತು ತಸ್ಯ ಜನಿತುರ್ವಚಸಾ ಪುರೋಧಾಸ್ತಾನ್ ಪ್ರಾಪ್ಯ ಮನ್ತ್ರವಿಧಿನಾ ಮರುದಾತ್ಮಜೇನ ।

ಸಮ್ಪೂಜಿತೋsತಿವಿದುಷಾ ಪ್ರತಿಗೃಹ್ಯ ತಾಂಶ್ಚ ಪ್ರಾವೇಶಯನ್ನೃಪತಿಗೇಹಮಮೈವ ಮಾತ್ರಾ ॥೧೯.೧೪೬

 

ಪ್ರಾತಃಕಾಲದಲ್ಲಿ ಧೃಷ್ಟದ್ಯುಮ್ನನ ತಂದೆಯಾದ ದ್ರುಪದನ ಮಾತಿನಂತೆ ಅವರ ಪುರೋಹಿತನು ಪಾಂಡವರನ್ನು ಹೊಂದಿ, ಶಾಸ್ತ್ರಪೂರ್ವಕವಾಗಿ, ಅತಿವಿದುಷನಾದ  ಮರುದಾತ್ಮಜನಿಂದ(ಭೀಮಸೇನನಿಂದ) ಪೂಜಿತನಾಗಿ,  ಅವರನ್ನು ಅವರ ತಾಯಿಯ ಜತೆಗೇ ಕರೆದುಕೊಂಡು ಬಂದು,  ರಾಜನ ಮನೆಯನ್ನು ಪ್ರವೇಶಮಾಡಿಸಿದನು.   

[ಇಲ್ಲಿ ಜನಿತುಃ  ಎನ್ನುವ ಪ್ರಯೋಗವನ್ನು ಕಾಣುತ್ತೇವೆ. ಜನಯಿತುಃ ಎಂದು ರೂಪವಾಗಬೇಕು ಆದರೆ  ಜನಿತುಃ ಎನ್ನುವ ಪ್ರಯೋಗ ಹೇಗೆ ಎನ್ನುವ ಪ್ರಶ್ನೆ ಇಲ್ಲಿ ಸಹಜ.  ಯೋ ನಃ ಪಿತಾ ಜನಿತಾ’ ಎಂದು ವೇದಲ್ಲಿ ಹೇಳಿರುವುದನ್ನು ಗಮನಿಸಿದಾಗ, ಅಲ್ಲಿಯೂ ಜನಿತಾ ಎನ್ನುವ ಪ್ರಯೋಗವಿರುವುದು ಕಾಣಸಿಗುತ್ತದೆ.  ಹೀಗಾಗಿ, ಜನಯಿತ್ರಿ-ಜನಿತ್ರಿ ಎಂದಾಗುತ್ತದೆ, ಜನಯಿತಾ ಎನ್ನುವುದು  ಜನಿತಾ ಎಂದಾಗುತ್ತದೆ. ಅಂದರೆ ಹುಟ್ಟಿಸಿದವ(ಜನಕ) ಎಂದರ್ಥವೇ ಹೊರತು ಹುಟ್ಟಿದವ ಎಂದರ್ಥವಲ್ಲ.

ರಾತ್ರಿ ಧೃಷ್ಟದ್ಯುಮ್ನ ಅಡಗಿಕುಳಿತು ಪಾಂಡವರು ಕ್ಷತ್ರಿಯರಂತೆ ಯುದ್ಧದ ಕುರಿತಾಗಿ ಮಾತನಾಡುವುದನ್ನು ಕಂಡರೆ, ಬೆಳಿಗ್ಗೆ ಪುರೋಹಿತರನ್ನು ಅವರು ಮಂತ್ರಪೂರ್ವಕ ವಿಧಿ-ವಿಧಾನದಿಂದ ಸ್ವಾಗತ ಮಾಡಿದರು. ಹೀಗಾಗಿ ಅವರು ಕ್ಷತ್ರಿಯ ವೈದಿಕರು ಎನ್ನುವುದು ದ್ರುಪದನಿಗೆ ಖಾತ್ರಿಯಾಯಿತು].

 

ತಾನಾಗತಾನ್ ಸಮಭಿಪೂಜ್ಯ ನಿಜಾತ್ಮಜಾಂ ಚ ವಿಪ್ರಾದಿಯೋಗ್ಯಪೃಥಗುಕ್ತಪದಾರ್ತ್ಥಜಾತೈಃ ।

ಪೂರ್ಣ್ಣಾನ್ ಗೃಹಾಂಶ್ಚತುರ ಏವ ದಿದೇಶ ರಾಜಾ ತತ್ರಾsಯುಧಾದಿಪರಿಪೂರ್ಣ್ಣಗೃಹಂ ಚ ತೇsಗುಃ ॥೧೯.೧೪೭॥

 

ಬಂದಿರುವ ಅವರನ್ನೂ, ತನ್ನ ಮಗಳನ್ನೂ ಪೂಜಿಸಿದ(ಸತ್ಕರಿಸಿದ) ದ್ರುಪದ, ಬ್ರಾಹ್ಮಣ ಮೊದಲಾದ ನಾಲ್ಕು ವರ್ಣದವರಿಗೆ ಯೋಗ್ಯವಾಗಿರುವ ಪ್ರತ್ಯೇಕಪ್ರತ್ಯೇಕವಾಗಿಟ್ಟ ಪದಾರ್ಥಗಳಿಂದ ಕೂಡಿರುವ ನಾಲ್ಕು ಮನೆಗಳನ್ನು  ಅವರಿಗೆ ತೋರಿಸಿದ. ಅವುಗಳಲ್ಲಿ ಅವರು ಆಯುಧಗಳಿಂದ ತುಂಬಿರುವ(ಕ್ಷತ್ರಿಯ ವರ್ಣದವರಿಗೆ ಯೋಗ್ಯವಾಗಿದ್ದ) ಮನೆಯನ್ನು ಹೊಂದಿದರು.

Saturday, October 3, 2020

Mahabharata Tatparya Nirnaya Kannada 19136_19141

 

ಪ್ರೀತೇಷು ಸರ್ವಯದುಷು ಪ್ರಪಲಾಯಿತೇಷು ದುರ್ಯೋಧನಾದಿನೃಪತಿಷ್ವಖಿಲೇಷು ಭೀಮಾತ್ ।

ಕರ್ಣ್ಣೋsಭ್ಯಯಾದ್ಧರಿಹಯಾತ್ಮಜಮಾಶು ಮದ್ರರಾಜೋ ಜಗಾಮ ಪವನಾತ್ಮಜಮೇವ ವೀರಃ ॥೧೯.೧೩೬॥

 

ಎಲ್ಲಾ ಯಾದವರೂ ಸಂತಸಗೊಂಡಿರಲು, ದುರ್ಯೋಧನಾದಿ ರಾಜರು ಭೀಮನಿಂದ ಓಡುತ್ತಿರಲು, ಕರ್ಣನು ಇಂದ್ರನ ಮಗನನ್ನು ಕುರಿತು ಕೂಡಲೇ ಯುದ್ಧಕ್ಕಾಗಿ ಎದುರುಗೊಂಡ. (ಇಲ್ಲಿ ಹರಿಹಯಾತ್ಮಜ ಎಂದರೆ ಇಂದ್ರಪುತ್ರ ಅರ್ಜುನ). ಕೂಡಲೇ ಬಲಿಷ್ಠನಾಗಿರುವ ಮದ್ರರಾಜ ಶಲ್ಯನು, ಪವನಾತ್ಮಜ ಭೀಮಸೇನನನ್ನು ಕುರಿತು ಹೋದನು.  

 

ವಿಪ್ರೇಷು ದಣ್ಡಪಟದರ್ಭಮಹಾಜಿನಾನಿ ಕೋಪಾತ್ ಕ್ಷಿಪತ್ಸು ನ ವಿನಾಶನಮತ್ರ ಭೂಯಾತ್ ।

ಕ್ಷತ್ರಸ್ಯ ವೈರತ ಇತಿ ದ್ರುಪದೇ ಚ ಕೃಷ್ಣಂ ವಿಪ್ರಾಂಶ್ಚ ಯಾಚತಿ ಸ ಮಾರುತಿರಾರ ಶಲ್ಯಮ್ ॥೧೯.೧೩೭॥

 

ಈರೀತಿ ಘಟನೆ ನಡೆದಾಗ, ಅಲ್ಲಿ ಸೇರಿದ್ದ ಬ್ರಾಹ್ಮಣರು ಕೋಪದಿಂದ ದಣ್ಡ, ವಸ್ತ್ರ, ದರ್ಭೆ, ಕೃಷ್ಣಾಜಿನ, ಮೊದಲಾದವುಗಳನ್ನು (ಪ್ರತಿಭಟನೆಯ ಸಲುವಾಗಿ) ಎಸೆಯುತ್ತಿರಲು, ತನ್ನ ರಾಜಸಭೆಯಲ್ಲಿ ಕ್ಷತ್ರಿಯರನ್ನು ಬ್ರಾಹ್ಮಣರು  ದ್ವೇಷಿಸುವುದರಿಂದ ಯಾವುದೇ ನಾಶ ಆಗದಿರಲಿ ಎಂದು ದ್ರುಪದನು, ಕೃಷ್ಣನನ್ನೂ ಮತ್ತು ಬ್ರಾಹ್ಮಣರನ್ನೂ ಬೇಡುತ್ತಿರಲು, ಮಾರುತಿಯು (ಭೀಮಸೇನನು) ಶಲ್ಯನನ್ನು ಎದುರುಗೊಂಡನು.    

 

ವೃಕ್ಷಂ ತ್ವಸೌ ಪ್ರತಿನಿಧಾಯ ಚ ಮದ್ರರಾಜಂ ದೋರ್ಭ್ಯಾಂ ಪ್ರಗೃಹ್ಯ ಜವತೋ ಗಗನೇ ನಿಧಾಯ ।

ಬನ್ಧುತ್ವತೋ ಭುವಿ ಶನೈರದಧಾತ್ ಸ ತಸ್ಯ ವಿಜ್ಞಾಯ ವೀರ್ಯ್ಯಮಗಮನ್ನಿಜರಾಜಧಾನೀಮ್ ॥೧೯.೧೩೮॥

 

ಭೀಮನಾದರೋ, ಮರವನ್ನು ಪಕ್ಕಕ್ಕಿಟ್ಟು, ಶಲ್ಯನನ್ನು ತನ್ನೆರಡು ತೋಳುಗಳಿಂದ ಹಿಡಿದು, ಅವನನ್ನು ವೇಗವಾಗಿ ಆಕಾಶದಲ್ಲಿ ಎತ್ತಿ ಹಿಡಿದು, ನಂತರ ಆತ ತನ್ನ ಬಂಧುವಾದ್ದರಿಂದ, ಮೆಲ್ಲಗೆ ಕೆಳಗೆ ಭೂಮಿಯಲ್ಲಿ ಬಿಟ್ಟ. ಮದ್ರರಾಜನಾದರೋ, ಭೀಮನ ಪರಾಕ್ರಮವನ್ನು ತಿಳಿದು, ತನ್ನ ರಾಜಧಾನಿಯನ್ನು ಕುರಿತು ತೆರಳಿದ. 

[ಮಹಾಭಾರತ ವಾಕ್ಯ: ತತೋ ಭೀಮಃ ಸಮುತ್ಕ್ಷಿಪ್ಯ  ಬಾಹುಭ್ಯಾಂ ಶಲ್ಯಮಾಹವೇ । ಅಪಾತಯತ್  ಕುರುಶ್ರೇಷ್ಠೋ ಬ್ರಾಹ್ಮಣಾ  ಜಹಸುಸ್ತದಾ । ತತ್ರಾsಶ್ಚರ್ಯಂ ಭೀಮಸೇನಶ್ಚಕಾರ ಪುರುಷರ್ಷಭಃ । ಯಚ್ಛಲ್ಯಂ ಪತಿತಂ ಭೂಮೌ ನಾವಧೀದ್  ಬಲಿನಂ ಬಲೀ’(೨೦೫.೩೫). ಇಲ್ಲಿ ‘ಅಪಾತಯತ್’ ಎನ್ನುವುದು ದರ್ಶನ ಭಾಷೆ. ಅಲ್ಲಿ ನೆರೆದ ಬ್ರಾಹ್ಮಣರಿಗೆ ಕಂಡದ್ದು ಭೀಮ ಶಲ್ಯನನ್ನು ನೆಲದಮೇಲೆ ಬೀಳಿಸಿದಂತೆ. ಆದರೆ ನಿಜವಾಗಿ ಭೀಮ ಶಲ್ಯನನ್ನು ಮೆಲ್ಲಗೆ ಕೆಳಗಿಳಿಸಿದ ಎಂದು ಆಚಾರ್ಯರು ವ್ಯಾಖ್ಯಾನಿಸಿದ್ದಾರೆ. ಇನ್ನು ಇಲ್ಲಿ ‘ಬಲಿಷ್ಠನಾಗಿರುವ ಭೀಮಸೇನನು ಬಹಳ ಅಚ್ಚರಿಯನ್ನುಂಟುಮಾಡುವಂತೆ ಕೆಳಗಡೆ ಇದ್ದ ಶಲ್ಯನನ್ನು ಕೊಲ್ಲಲಿಲ್ಲ’ ಎಂದಿದ್ದಾರೆ. ಇದಕ್ಕೆ ಆಚಾರ್ಯರು ‘ಬನ್ಧುತ್ವಃ’ (ಬಂಧುವಾದ್ದರಿಂದ) ಎಂದು ವ್ಯಾಖ್ಯಾನ ನೀಡಿದ್ದಾರೆ].

 

ಪಾರ್ತ್ಥೋsಪಿ ತೇನ ಧನುಷಾ ಯುಯುಧೇ ಸ್ಮ ಕರ್ಣ್ಣಂ ಸೋsಪ್ಯಸ್ತ್ರಬಾಹುಬಲಮಾವಿರಮುತ್ರ ಚಕ್ರೇ ।

ತೌ ಧನ್ವಿನಾಮನುಪಮೌ ಚಿರಮಸ್ಯತಾಂ ಚ ಸೂರ್ಯ್ಯಾತ್ಮಜೋsತ್ರ ವಚನಂ ವ್ಯಥಿತೋ ಬಭಾಷೇ ॥೧೯.೧೩೯॥

 

ಇತ್ತ ಅರ್ಜುನನು ಕರ್ಣನೊಂದಿಗೆ ಆ ಧನುಸ್ಸಿನಿಂದಲೇ ಯುದ್ಧಮಾಡಿದನು. ಅವನಾದರೋ, ಅಸ್ತ್ರಬಲ ಮತ್ತು ಬಾಹುಬಲಗಳೆರಡನ್ನೂ ತನ್ನ ಯುದ್ಧದಲ್ಲಿ ಆವಿಷ್ಕರಿಸಿದ(ತೋರಿಸಿದ). ಬಿಲ್ಗಾರಿಕೆಯಲ್ಲಿ ಎಣೆಯಿರದ ಪರಾಕ್ರಮಿಗಳಾದ ಅವರಿಬ್ಬರೂ, ನಿರಂತರವಾಗಿ ಬಾಣಗಳನ್ನು ಎಸೆದುಕೊಂಡರು(ಪರಸ್ಪರ ಬಹಳಕಾಲ ಯುದ್ಧಮಾಡಿದರು). ಈ ಯುದ್ಧದಲ್ಲಿ ಸೂರ್ಯನಮಗನಾದ ಕರ್ಣನು ಖತಿಯಿಂದ ಹೀಗೆ ಕೇಳಿದನು:

 

ತ್ವಂ ಫಲ್ಗುನೋ ಹರಿಹಯೋ ದ್ವಿಜಸತ್ತಪೋ ವಾ ಮೂರ್ತ್ತಂ ನ ಮೇ ಪ್ರಮುಖತಃ ಸ್ಥಿತಿಮನ್ಯ ಈಷ್ಟೇ ।

ಯೋ ವಾsಸ್ಮಿ ಕೋsಪಿ ಯದಿ ತೇ ಕ್ಷಮಮದ್ಯ ಬಾಣಾನ್ ಮುಞ್ಚಾನ್ಯಥೇಹಿ ರಣತಸ್ತ್ವಿತಿ ಪಾರ್ತ್ಥ ಆಹ ॥೧೯.೧೪೦॥

 

‘ನೀನು ಅರ್ಜುನನೋ? ಇಂದ್ರನೋ? ಮೂರ್ತಿಮತ್ತಾದ(ಮೈತಳೆದು ಬಂದ) ಬ್ರಾಹ್ಮಣನ ತಪಸ್ಸೋ? ನನ್ನ ಎದುರು ಇನ್ನೊಬ್ಬ ನಿಲ್ಲಲು ಶಕ್ತನಲ್ಲ’  ಎಂದು ಹೇಳಿದಾಗ, ಅರ್ಜುನ ಹೇಳುತ್ತಾನೆ: ನಾನು ಯಾರಾದರೇನು, ಒಂದುವೇಳೆ ನಿನಗೆ ತಾಕತ್ತಿದ್ದರೆ ಬಾಣಗಳನ್ನು ಬಿಡು. ಇಲ್ಲದಿದ್ದರೆ ತೊಲಗು’ ಎಂದು. 

[ಮಹಾಭಾರತ ವಾಕ್ಯ: ‘ಕಿಂ ತ್ವಂ ಸಾಕ್ಷಾದ್ ಧನುರ್ವೇದೋ ರಾಮೋ ವಾ ವಿಪ್ರಸತ್ತಮಃ । ಅಥ ಸಾಕ್ಷಾದ್ ಹರಿಹಯಃ ಸಾಕ್ಷಾದ್  ವಾ ವಿಷ್ಣುರಚ್ಯುತಃ(೨೦೫.೧೭). ಇಲ್ಲಿ ‘ನೀನು ಬ್ರಾಹ್ಮಣರಲ್ಲೇ ಶ್ರೇಷ್ಠನಾದ ಪರಶುರಾಮನೋ’ ಎಂದು ಅರ್ಜುನನನ್ನು ಕರ್ಣ ಕೇಳಿದ ಎನ್ನುವಂತಿದೆ.  ಆದರೆ ಪರಶುರಾಮ ಕರ್ಣನ ಗುರು. ಅಲ್ಲದೇ ಪರಶುರಾಮ ದ್ರೌಪದಿಯನ್ನು ಮದುವೆಯಾಗಲು ಅಲ್ಲಿಗೆ ಬಂದಿದ್ದಾನೆ ಎಂದು ಆ ಕ್ಷಣದಲ್ಲಿ ಕರ್ಣನಿಗೆ ಅನಿಸಲು ಸಾಧ್ಯವಿಲ್ಲ. ಈಎಲ್ಲಾ ಅನುಪಪತ್ತಿಯನ್ನು ನೋಡಿದಾಗ, ‘ರಾಮೋ ವಾ ವಿಪ್ರಸತ್ತಮಃ’  ಎನ್ನುವುದು ಪಾಠಾಂತರವಿದ್ದರೂ ಇರಬಹುದು. ಹಾಗಾಗಿ ಆಚಾರ್ಯರು   ಮೂರ್ತಂ ವಾ ವಿಪ್ರಸತ್ತಪಃ’ ಎನ್ನುವ ವ್ಯಾಖ್ಯಾನವನ್ನು ನೀಡಿದ್ದಾರೆ ಅನಿಸುತ್ತದೆ].  

 

ಕಾರ್ಯ್ಯಂ ನ ಮೇ ದ್ವಿಜವರೈಃ ಪ್ರತಿಯೋಧನೇನೇತ್ಯುಕ್ತ್ವಾ ಯಯೌ ರವಿಸುತಃ ಸ ಸುಯೋಧನಾದ್ಯೈಃ ।

ನಾಗಾಹ್ವಯಂ ಪುರಮಥ ದ್ರುಪದಾತ್ಮಜಾಂ ತಾಮಾದಾಯ ಚಾರ್ಜ್ಜುನಯುತಃ ಪ್ರಯಯೌ ಸ ಭೀಮಃ ॥೧೯.೧೪೧॥

 

ನನಗೆ ಶ್ರೇಷ್ಠಬ್ರಾಹ್ಮಣರೊಂದಿಗೆ ಯುದ್ಧ ಮಾಡುವುದರಿಂದ ಏನೂ ಪ್ರಯೋಜನವಿಲ್ಲಾ’ ಎಂದು ಹೇಳಿದ ಕರ್ಣನು, ದುರ್ಯೋಧನ ಮೊದಲಾದವರೊಂದಿಗೆ ಕೂಡಿಕೊಂಡು ಹಸ್ತಿನಾವತಿಗೆ ಹಿಂತಿರುಗಿ ಹೋದನು. ತದನಂತರ ಅರ್ಜುನನಿಂದ ಕೂಡಿರುವ ಭೀಮಸೇನನು ದ್ರೌಪದಿಯನ್ನು ಕರೆದುಕೊಂಡು ತನ್ನ ಬಿಡಾರಕ್ಕೆ ತೆರಳಿದನು.

Mahabharata Tatparya Nirnaya Kannada 19130_19135

 

ವಿಪ್ರಾಶ್ಚ ಕೇಚಿದತಿಯುಕ್ತಮಿಮೌ ಹಿ ವೀರೌ ದೇವೋಪಮಾವಿತಿ ವಚೋ ಜಗದುಸ್ತತಸ್ತೌ ।

ದೃಷ್ಟ್ವೈವ ಕೃಷ್ಣಮುಖಪಙ್ಕಜಮಾಶು ಚಾಪಸಾನ್ನಿದ್ಧ್ಯಮಾಯಯತುರುತ್ತಮವೀರ್ಯ್ಯಸಾರೌ ॥೧೯.೧೩೦॥

 

ಭೀಮಾರ್ಜುನರು ಎದ್ದು ನಿಂತಾಗ, ಅಲ್ಲಿದ್ದ ಕೆಲವು ಬ್ರಾಹ್ಮಣರು ‘ಇವರಿಬ್ಬರು ದೇವತೆಗಳಿಗೆ ಸದೃಶರಾಗಿರುವ ವೀರರು. ಆದ್ದರಿಂದ ಇದು ಅತ್ಯಂತ ವಿಹಿತ’  ಎನ್ನುವ ಮಾತನ್ನಾಡಿದರು. ತದನಂತರ ಅವರಿಬ್ಬರೂ ಕೃಷ್ಣನ ತಾವರೆಯಂತಿರುವ ಮುಖವನ್ನು ನೋಡಿ(ಕೃಷ್ಣನ ಸಮ್ಮತಿ ಪಡೆದು), ಬಿಲ್ಲಿನ ಸಮೀಪಕ್ಕೆ ಬಂದರು. 

 

ತತ್ರಾರ್ಜ್ಜುನಃ ಪವನಜಾತ್ ಪ್ರಿಯತೋsಪ್ಯನುಜ್ಞಾಮಾದಾಯ ಕೇಶವಮಜಂ ಮನಸಾ ಪ್ರಣಮ್ಯ ।

ಕೃತ್ವಾ ಗುಣಾನ್ವಿತಮದೋ ಧನುರಶ್ರಮೇಣ ಯನ್ತ್ರಾನ್ತರೇಣ ಸ ಶರೈರಧುನೋಚ್ಚ ಲಕ್ಷಮ್ ॥೧೯.೧೩೧॥

 

ಅಲ್ಲಿ ಅರ್ಜುನನು ತನಗೆ ಅತ್ಯಂತ ಪ್ರಿಯನಾದ ಭೀಮಸೇನನ ಅಣತಿಯನ್ನು ಪಡೆದು, ಎಂದೂ ಹುಟ್ಟದ ನಾರಾಯಣನಿಗೆ(ಶ್ರೀಕೃಷ್ಣನಿಗೆ) ಮನಸ್ಸಿನಿಂದಲೇ ನಮಸ್ಕರಿಸಿ, ಯಾವುದೇ ಶ್ರಮವಿಲ್ಲದೇ ಬಿಲ್ಲನ್ನು ಹೆದೆಯೇರಿಸಿ, ಬಾಣಗಳಿಂದ ಗುರಿಯನ್ನು ಭೇದಿಸಿದನು.  

[ಮಹಾಭಾರತ ವಾಕ್ಯ: ‘ಕೃಷ್ಣಂ ಚ ಮನಸಾ ಕೃತ್ವಾ ಜಗೃಹೇ ಚಾರ್ಜುನೋ ಧನುಃ’ (ಆದಿಪರ್ವ ೨೦೩.೨೨)]

 

ಕೃಷ್ಣಾ ತದಾsಸ್ಯ ವಿದಧೇ ನವಕಞ್ಜಮಾಲಾಂ ಮದ್ಧ್ಯೇ ಚ ತಾಂ ಪ್ರತಿವಿಧಾಯ ನರೇನ್ದ್ರಪುತ್ರೌ ।

ಭೀಮಾರ್ಜ್ಜುನೌ ಯಯತುರಚ್ಯುತಮಾಭಿನಮ್ಯ ಕ್ಷುಬ್ಧಂ[1] ತದಾ ನೃಪವರಾಬ್ಧಿರಿಮಾವಧಾವತ್ ॥೧೯.೧೩೨॥

 

ಆಗ ದ್ರೌಪದಿಯು ಅರ್ಜುನನ ಕಂಠಕ್ಕೆ ವಿಜಯಸಂಕೇತವಾಗಿ ನವತಾವರೆಯ ಮಾಲೆಯನ್ನು ಹಾಕಿದಳು. ನಂತರ    ರಾಜಕುಮಾರರಾದ ಭೀಮಾರ್ಜುನರು ದ್ರೌಪದಿಯನ್ನು ತಮ್ಮ ಮಧ್ಯದಲ್ಲಿರಿಸಿಕೊಂಡು ಬಂದು,  ಶ್ರೀಕೃಷ್ಣನಿಗೆ ನಮಸ್ಕರಿಸಿ ತೆರಳಿದರು. ಆಗ ತಟಸ್ಥವಾಗಿದ್ದ ಕ್ಷತ್ರಿಯರೆಲ್ಲರೂ ಕೂಡಾ, ಇವರಿಬ್ಬರನ್ನು ಕುರಿತು ಧಾವಿಸಿ ಬಂದರು.  

 

ದ್ರಷ್ಟುಂ ಹಿ ಕೇವಲಗತಿರ್ನ್ನತು ಕನ್ಯಕಾಯಾ ಅರ್ತ್ಥೇ ನ ಚಾಪಮಿಹ ವೃಷ್ಣಿವರಾಃ ಸ್ಪೃಶನ್ತು ।

ಇತ್ಯಾಜ್ಞಯೈವ ವರಚಕ್ರಧರಸ್ಯ ಲಿಪ್ಸಾಮಪ್ಯತ್ರ ಚಕ್ರುರಿಹ ನೈವ ಯದುಪ್ರವೀರಾಃ ॥೧೯.೧೩೩॥

 

‘ನಮ್ಮ ಉಪಸ್ಥಿತಿ ಕೇವಲ ನೋಡಲು ಮಾತ್ರ, ಕನ್ನಿಕೆಗಾಗಿ ಅಲ್ಲಾ. ಆದ್ದರಿಂದ ಸ್ವಯಮ್ಬರದಲ್ಲಿ ಯಾರೂ   ಧನುಸ್ಸನ್ನು ಮುಟ್ಟಬೇಡಿ’ ಎಂದು ಸುದರ್ಶನ ಚಕ್ರಧಾರಿ ಪರಮಾತ್ಮನ ಆಜ್ಞೆಯಿದ್ದುದರಿಂದ, ಯಾದವರು ದ್ರೌಪದಿಯ ವಿಚಾರದಲ್ಲಿ ಅಥವಾ ಧನುಸ್ಸನ್ನು ಹೆದೆಯೇರಿಸುವ ವಿಚಾರದಲ್ಲಿ ಬಯಕೆಯನ್ನೇ ಮಾಡಲಿಲ್ಲ.

 

ಭೀಮಸ್ತು ರಾಜಸಮಿತಿಂ ಪ್ರತಿಸಮ್ಪ್ರಯಾತಾಂ ದೃಷ್ಟ್ವೈವ ಯೋಜನದಶೋಚ್ಛ್ರಯಮಾಶು ವೃಕ್ಷಮ್ ।

ಆರುಜ್ಯ ಸರ್ವನೃಪತೀನಭಿತೋsಪ್ಯತಿಷ್ಠದ್ ದೃಷ್ಟ್ವಾಪಲಾಯನಪರಾಶ್ಚ ಬಭೂವುರೇತೇ ॥೧೯.೧೩೪॥

 

ಭೀಮಸೇನನಾದರೋ, ತನ್ನೆದುರು ರಭಸದಿಂದ ಬರುತ್ತಿರುವ ರಾಜರ ಸಮೂಹವನ್ನು ಕಂಡು, ಬಹಳ ಎತ್ತರವಿರುವ ಮರವನ್ನು ಕೂಡಲೇ ಕಿತ್ತು, ಎಲ್ಲಾ ರಾಜರ ಎದುರು ನಿಂತ. ಅದನ್ನು ಕಂಡು ಕೆಲವರು ಪಲಾಯನಪರರಾದರು(ಇನ್ನು ಕೆಲವರು ನಿಂತಿದ್ದರು ಕೂಡಾ)

 

ಭೀಮೋsಯಮೇಷ ಪುರುಹೂತಸುತೋsನ್ಯ ಏತೇ ಪಾರ್ತ್ಥಾ ಇತಿ ಸ್ಮ ಹಲಿನೇ ಹರಿರಭ್ಯವೋಚತ್ ।

ದೃಷ್ಟ್ವೈವ ಸೋsಪಿ ಮುದಮಾಪ ಶಿನೇಶ್ಚ ಪೌತ್ರಃ ಖಡ್ಗಂ ಪ್ರಗೃಹ್ಯ ಹರ್ಷಾತ್ ಪರಿಪುಪ್ಲುವೇsತ್ರ ॥೧೯.೧೩೫॥

 

‘ಇವನು ಭೀಮಸೇನನು, ಇನ್ನೊಬ್ಬ ಅರ್ಜುನ. ಉಳಿದ ಮೂವರು ಕುಂತಿಯ ಮಕ್ಕಳು’ ಎಂದು ಪರಮಾತ್ಮನು ಬಲರಾಮನಿಗಾಗಿ ಹೇಳಿದನು. ಬಲರಾಮನಾದರೋ, ಅವರನ್ನು ನೋಡಿಯೇ ಸಂತೋಷವನ್ನು ಹೊಂದಿದನು. ಶಿನಿಯ ಮೊಮ್ಮೊಗನಾದ ಸಾತ್ಯಕಿಯಂತೂ  ಖಡ್ಗವನ್ನು ಹಿಡಿದು ಸ್ವಯಮ್ಬರ ಮಂಟಪದಲ್ಲಿ ಹರ್ಷದಿಂದ ಕುಣಿದಾಡಿದನು.



[1] ಕ್ಷುಬ್ಧಸ್ತದಾ