ಪ್ರೀತೇಷು ಸರ್ವಯದುಷು ಪ್ರಪಲಾಯಿತೇಷು
ದುರ್ಯೋಧನಾದಿನೃಪತಿಷ್ವಖಿಲೇಷು ಭೀಮಾತ್ ।
ಕರ್ಣ್ಣೋsಭ್ಯಯಾದ್ಧರಿಹಯಾತ್ಮಜಮಾಶು ಮದ್ರರಾಜೋ
ಜಗಾಮ ಪವನಾತ್ಮಜಮೇವ ವೀರಃ ॥೧೯.೧೩೬॥
ಎಲ್ಲಾ ಯಾದವರೂ ಸಂತಸಗೊಂಡಿರಲು, ದುರ್ಯೋಧನಾದಿ ರಾಜರು ಭೀಮನಿಂದ
ಓಡುತ್ತಿರಲು, ಕರ್ಣನು ಇಂದ್ರನ ಮಗನನ್ನು ಕುರಿತು ಕೂಡಲೇ ಯುದ್ಧಕ್ಕಾಗಿ ಎದುರುಗೊಂಡ. (ಇಲ್ಲಿ
ಹರಿಹಯಾತ್ಮಜ ಎಂದರೆ ಇಂದ್ರಪುತ್ರ ಅರ್ಜುನ). ಕೂಡಲೇ ಬಲಿಷ್ಠನಾಗಿರುವ ಮದ್ರರಾಜ ಶಲ್ಯನು,
ಪವನಾತ್ಮಜ ಭೀಮಸೇನನನ್ನು ಕುರಿತು ಹೋದನು.
ವಿಪ್ರೇಷು ದಣ್ಡಪಟದರ್ಭಮಹಾಜಿನಾನಿ ಕೋಪಾತ್ ಕ್ಷಿಪತ್ಸು ನ
ವಿನಾಶನಮತ್ರ ಭೂಯಾತ್ ।
ಕ್ಷತ್ರಸ್ಯ ವೈರತ ಇತಿ ದ್ರುಪದೇ ಚ ಕೃಷ್ಣಂ ವಿಪ್ರಾಂಶ್ಚ
ಯಾಚತಿ ಸ ಮಾರುತಿರಾರ ಶಲ್ಯಮ್ ॥೧೯.೧೩೭॥
ಈರೀತಿ ಘಟನೆ ನಡೆದಾಗ, ಅಲ್ಲಿ ಸೇರಿದ್ದ ಬ್ರಾಹ್ಮಣರು ಕೋಪದಿಂದ
ದಣ್ಡ, ವಸ್ತ್ರ, ದರ್ಭೆ, ಕೃಷ್ಣಾಜಿನ, ಮೊದಲಾದವುಗಳನ್ನು (ಪ್ರತಿಭಟನೆಯ ಸಲುವಾಗಿ) ಎಸೆಯುತ್ತಿರಲು,
ತನ್ನ ರಾಜಸಭೆಯಲ್ಲಿ ಕ್ಷತ್ರಿಯರನ್ನು ಬ್ರಾಹ್ಮಣರು ದ್ವೇಷಿಸುವುದರಿಂದ ಯಾವುದೇ ನಾಶ ಆಗದಿರಲಿ ಎಂದು
ದ್ರುಪದನು, ಕೃಷ್ಣನನ್ನೂ ಮತ್ತು ಬ್ರಾಹ್ಮಣರನ್ನೂ ಬೇಡುತ್ತಿರಲು, ಮಾರುತಿಯು (ಭೀಮಸೇನನು)
ಶಲ್ಯನನ್ನು ಎದುರುಗೊಂಡನು.
ವೃಕ್ಷಂ ತ್ವಸೌ ಪ್ರತಿನಿಧಾಯ ಚ ಮದ್ರರಾಜಂ ದೋರ್ಭ್ಯಾಂ
ಪ್ರಗೃಹ್ಯ ಜವತೋ ಗಗನೇ ನಿಧಾಯ ।
ಬನ್ಧುತ್ವತೋ ಭುವಿ ಶನೈರದಧಾತ್ ಸ ತಸ್ಯ ವಿಜ್ಞಾಯ ವೀರ್ಯ್ಯಮಗಮನ್ನಿಜರಾಜಧಾನೀಮ್
॥೧೯.೧೩೮॥
ಭೀಮನಾದರೋ, ಮರವನ್ನು ಪಕ್ಕಕ್ಕಿಟ್ಟು, ಶಲ್ಯನನ್ನು ತನ್ನೆರಡು ತೋಳುಗಳಿಂದ
ಹಿಡಿದು, ಅವನನ್ನು ವೇಗವಾಗಿ ಆಕಾಶದಲ್ಲಿ ಎತ್ತಿ ಹಿಡಿದು, ನಂತರ ಆತ ತನ್ನ ಬಂಧುವಾದ್ದರಿಂದ, ಮೆಲ್ಲಗೆ ಕೆಳಗೆ ಭೂಮಿಯಲ್ಲಿ ಬಿಟ್ಟ.
ಮದ್ರರಾಜನಾದರೋ, ಭೀಮನ ಪರಾಕ್ರಮವನ್ನು ತಿಳಿದು, ತನ್ನ ರಾಜಧಾನಿಯನ್ನು
ಕುರಿತು ತೆರಳಿದ.
[ಮಹಾಭಾರತ ವಾಕ್ಯ: ತತೋ ಭೀಮಃ ಸಮುತ್ಕ್ಷಿಪ್ಯ ಬಾಹುಭ್ಯಾಂ ಶಲ್ಯಮಾಹವೇ । ಅಪಾತಯತ್ ಕುರುಶ್ರೇಷ್ಠೋ ಬ್ರಾಹ್ಮಣಾ ಜಹಸುಸ್ತದಾ । ತತ್ರಾsಶ್ಚರ್ಯಂ ಭೀಮಸೇನಶ್ಚಕಾರ ಪುರುಷರ್ಷಭಃ । ಯಚ್ಛಲ್ಯಂ ಪತಿತಂ ಭೂಮೌ ನಾವಧೀದ್ ಬಲಿನಂ ಬಲೀ’(೨೦೫.೩೫). ಇಲ್ಲಿ ‘ಅಪಾತಯತ್’ ಎನ್ನುವುದು ದರ್ಶನ ಭಾಷೆ. ಅಲ್ಲಿ
ನೆರೆದ ಬ್ರಾಹ್ಮಣರಿಗೆ ಕಂಡದ್ದು ಭೀಮ ಶಲ್ಯನನ್ನು ನೆಲದಮೇಲೆ ಬೀಳಿಸಿದಂತೆ. ಆದರೆ ನಿಜವಾಗಿ ಭೀಮ
ಶಲ್ಯನನ್ನು ಮೆಲ್ಲಗೆ ಕೆಳಗಿಳಿಸಿದ ಎಂದು ಆಚಾರ್ಯರು ವ್ಯಾಖ್ಯಾನಿಸಿದ್ದಾರೆ. ಇನ್ನು ಇಲ್ಲಿ ‘ಬಲಿಷ್ಠನಾಗಿರುವ
ಭೀಮಸೇನನು ಬಹಳ ಅಚ್ಚರಿಯನ್ನುಂಟುಮಾಡುವಂತೆ ಕೆಳಗಡೆ ಇದ್ದ ಶಲ್ಯನನ್ನು ಕೊಲ್ಲಲಿಲ್ಲ’
ಎಂದಿದ್ದಾರೆ. ಇದಕ್ಕೆ ಆಚಾರ್ಯರು ‘ಬನ್ಧುತ್ವಃ’ (ಬಂಧುವಾದ್ದರಿಂದ) ಎಂದು ವ್ಯಾಖ್ಯಾನ
ನೀಡಿದ್ದಾರೆ].
ಪಾರ್ತ್ಥೋsಪಿ ತೇನ ಧನುಷಾ ಯುಯುಧೇ ಸ್ಮ ಕರ್ಣ್ಣಂ ಸೋsಪ್ಯಸ್ತ್ರಬಾಹುಬಲಮಾವಿರಮುತ್ರ ಚಕ್ರೇ
।
ತೌ ಧನ್ವಿನಾಮನುಪಮೌ ಚಿರಮಸ್ಯತಾಂ ಚ ಸೂರ್ಯ್ಯಾತ್ಮಜೋsತ್ರ ವಚನಂ ವ್ಯಥಿತೋ ಬಭಾಷೇ ॥೧೯.೧೩೯॥
ಇತ್ತ ಅರ್ಜುನನು ಕರ್ಣನೊಂದಿಗೆ ಆ ಧನುಸ್ಸಿನಿಂದಲೇ ಯುದ್ಧಮಾಡಿದನು.
ಅವನಾದರೋ, ಅಸ್ತ್ರಬಲ ಮತ್ತು ಬಾಹುಬಲಗಳೆರಡನ್ನೂ ತನ್ನ ಯುದ್ಧದಲ್ಲಿ ಆವಿಷ್ಕರಿಸಿದ(ತೋರಿಸಿದ). ಬಿಲ್ಗಾರಿಕೆಯಲ್ಲಿ
ಎಣೆಯಿರದ ಪರಾಕ್ರಮಿಗಳಾದ ಅವರಿಬ್ಬರೂ, ನಿರಂತರವಾಗಿ ಬಾಣಗಳನ್ನು ಎಸೆದುಕೊಂಡರು(ಪರಸ್ಪರ ಬಹಳಕಾಲ
ಯುದ್ಧಮಾಡಿದರು). ಈ ಯುದ್ಧದಲ್ಲಿ ಸೂರ್ಯನಮಗನಾದ ಕರ್ಣನು ಖತಿಯಿಂದ ಹೀಗೆ ಕೇಳಿದನು:
ತ್ವಂ ಫಲ್ಗುನೋ ಹರಿಹಯೋ ದ್ವಿಜಸತ್ತಪೋ ವಾ ಮೂರ್ತ್ತಂ ನ ಮೇ
ಪ್ರಮುಖತಃ ಸ್ಥಿತಿಮನ್ಯ ಈಷ್ಟೇ ।
ಯೋ ವಾsಸ್ಮಿ ಕೋsಪಿ ಯದಿ ತೇ ಕ್ಷಮಮದ್ಯ ಬಾಣಾನ್ ಮುಞ್ಚಾನ್ಯಥೇಹಿ ರಣತಸ್ತ್ವಿತಿ ಪಾರ್ತ್ಥ
ಆಹ ॥೧೯.೧೪೦॥
‘ನೀನು ಅರ್ಜುನನೋ? ಇಂದ್ರನೋ? ಮೂರ್ತಿಮತ್ತಾದ(ಮೈತಳೆದು ಬಂದ)
ಬ್ರಾಹ್ಮಣನ ತಪಸ್ಸೋ? ನನ್ನ ಎದುರು ಇನ್ನೊಬ್ಬ ನಿಲ್ಲಲು ಶಕ್ತನಲ್ಲ’ ಎಂದು ಹೇಳಿದಾಗ, ಅರ್ಜುನ ಹೇಳುತ್ತಾನೆ: ನಾನು
ಯಾರಾದರೇನು, ಒಂದುವೇಳೆ ನಿನಗೆ ತಾಕತ್ತಿದ್ದರೆ ಬಾಣಗಳನ್ನು ಬಿಡು. ಇಲ್ಲದಿದ್ದರೆ ತೊಲಗು’ ಎಂದು.
[ಮಹಾಭಾರತ ವಾಕ್ಯ: ‘ಕಿಂ ತ್ವಂ ಸಾಕ್ಷಾದ್ ಧನುರ್ವೇದೋ
ರಾಮೋ ವಾ ವಿಪ್ರಸತ್ತಮಃ । ಅಥ ಸಾಕ್ಷಾದ್ ಹರಿಹಯಃ ಸಾಕ್ಷಾದ್ ವಾ ವಿಷ್ಣುರಚ್ಯುತಃ(೨೦೫.೧೭). ಇಲ್ಲಿ ‘ನೀನು ಬ್ರಾಹ್ಮಣರಲ್ಲೇ
ಶ್ರೇಷ್ಠನಾದ ಪರಶುರಾಮನೋ’ ಎಂದು ಅರ್ಜುನನನ್ನು ಕರ್ಣ ಕೇಳಿದ ಎನ್ನುವಂತಿದೆ. ಆದರೆ ಪರಶುರಾಮ ಕರ್ಣನ ಗುರು. ಅಲ್ಲದೇ ಪರಶುರಾಮ
ದ್ರೌಪದಿಯನ್ನು ಮದುವೆಯಾಗಲು ಅಲ್ಲಿಗೆ ಬಂದಿದ್ದಾನೆ ಎಂದು ಆ ಕ್ಷಣದಲ್ಲಿ ಕರ್ಣನಿಗೆ ಅನಿಸಲು
ಸಾಧ್ಯವಿಲ್ಲ. ಈಎಲ್ಲಾ ಅನುಪಪತ್ತಿಯನ್ನು ನೋಡಿದಾಗ, ‘ರಾಮೋ ವಾ ವಿಪ್ರಸತ್ತಮಃ’ ಎನ್ನುವುದು ಪಾಠಾಂತರವಿದ್ದರೂ ಇರಬಹುದು. ಹಾಗಾಗಿ ಆಚಾರ್ಯರು
‘ಮೂರ್ತಂ ವಾ ವಿಪ್ರಸತ್ತಪಃ’ ಎನ್ನುವ
ವ್ಯಾಖ್ಯಾನವನ್ನು ನೀಡಿದ್ದಾರೆ ಅನಿಸುತ್ತದೆ].
ಕಾರ್ಯ್ಯಂ ನ ಮೇ ದ್ವಿಜವರೈಃ ಪ್ರತಿಯೋಧನೇನೇತ್ಯುಕ್ತ್ವಾ ಯಯೌ
ರವಿಸುತಃ ಸ ಸುಯೋಧನಾದ್ಯೈಃ ।
ನಾಗಾಹ್ವಯಂ ಪುರಮಥ ದ್ರುಪದಾತ್ಮಜಾಂ ತಾಮಾದಾಯ ಚಾರ್ಜ್ಜುನಯುತಃ
ಪ್ರಯಯೌ ಸ ಭೀಮಃ ॥೧೯.೧೪೧॥
ನನಗೆ ಶ್ರೇಷ್ಠಬ್ರಾಹ್ಮಣರೊಂದಿಗೆ ಯುದ್ಧ ಮಾಡುವುದರಿಂದ ಏನೂ
ಪ್ರಯೋಜನವಿಲ್ಲಾ’ ಎಂದು ಹೇಳಿದ ಕರ್ಣನು, ದುರ್ಯೋಧನ ಮೊದಲಾದವರೊಂದಿಗೆ ಕೂಡಿಕೊಂಡು ಹಸ್ತಿನಾವತಿಗೆ
ಹಿಂತಿರುಗಿ ಹೋದನು. ತದನಂತರ ಅರ್ಜುನನಿಂದ ಕೂಡಿರುವ ಭೀಮಸೇನನು ದ್ರೌಪದಿಯನ್ನು ಕರೆದುಕೊಂಡು ತನ್ನ
ಬಿಡಾರಕ್ಕೆ ತೆರಳಿದನು.
No comments:
Post a Comment