ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, October 3, 2020

Mahabharata Tatparya Nirnaya Kannada 19130_19135

 

ವಿಪ್ರಾಶ್ಚ ಕೇಚಿದತಿಯುಕ್ತಮಿಮೌ ಹಿ ವೀರೌ ದೇವೋಪಮಾವಿತಿ ವಚೋ ಜಗದುಸ್ತತಸ್ತೌ ।

ದೃಷ್ಟ್ವೈವ ಕೃಷ್ಣಮುಖಪಙ್ಕಜಮಾಶು ಚಾಪಸಾನ್ನಿದ್ಧ್ಯಮಾಯಯತುರುತ್ತಮವೀರ್ಯ್ಯಸಾರೌ ॥೧೯.೧೩೦॥

 

ಭೀಮಾರ್ಜುನರು ಎದ್ದು ನಿಂತಾಗ, ಅಲ್ಲಿದ್ದ ಕೆಲವು ಬ್ರಾಹ್ಮಣರು ‘ಇವರಿಬ್ಬರು ದೇವತೆಗಳಿಗೆ ಸದೃಶರಾಗಿರುವ ವೀರರು. ಆದ್ದರಿಂದ ಇದು ಅತ್ಯಂತ ವಿಹಿತ’  ಎನ್ನುವ ಮಾತನ್ನಾಡಿದರು. ತದನಂತರ ಅವರಿಬ್ಬರೂ ಕೃಷ್ಣನ ತಾವರೆಯಂತಿರುವ ಮುಖವನ್ನು ನೋಡಿ(ಕೃಷ್ಣನ ಸಮ್ಮತಿ ಪಡೆದು), ಬಿಲ್ಲಿನ ಸಮೀಪಕ್ಕೆ ಬಂದರು. 

 

ತತ್ರಾರ್ಜ್ಜುನಃ ಪವನಜಾತ್ ಪ್ರಿಯತೋsಪ್ಯನುಜ್ಞಾಮಾದಾಯ ಕೇಶವಮಜಂ ಮನಸಾ ಪ್ರಣಮ್ಯ ।

ಕೃತ್ವಾ ಗುಣಾನ್ವಿತಮದೋ ಧನುರಶ್ರಮೇಣ ಯನ್ತ್ರಾನ್ತರೇಣ ಸ ಶರೈರಧುನೋಚ್ಚ ಲಕ್ಷಮ್ ॥೧೯.೧೩೧॥

 

ಅಲ್ಲಿ ಅರ್ಜುನನು ತನಗೆ ಅತ್ಯಂತ ಪ್ರಿಯನಾದ ಭೀಮಸೇನನ ಅಣತಿಯನ್ನು ಪಡೆದು, ಎಂದೂ ಹುಟ್ಟದ ನಾರಾಯಣನಿಗೆ(ಶ್ರೀಕೃಷ್ಣನಿಗೆ) ಮನಸ್ಸಿನಿಂದಲೇ ನಮಸ್ಕರಿಸಿ, ಯಾವುದೇ ಶ್ರಮವಿಲ್ಲದೇ ಬಿಲ್ಲನ್ನು ಹೆದೆಯೇರಿಸಿ, ಬಾಣಗಳಿಂದ ಗುರಿಯನ್ನು ಭೇದಿಸಿದನು.  

[ಮಹಾಭಾರತ ವಾಕ್ಯ: ‘ಕೃಷ್ಣಂ ಚ ಮನಸಾ ಕೃತ್ವಾ ಜಗೃಹೇ ಚಾರ್ಜುನೋ ಧನುಃ’ (ಆದಿಪರ್ವ ೨೦೩.೨೨)]

 

ಕೃಷ್ಣಾ ತದಾsಸ್ಯ ವಿದಧೇ ನವಕಞ್ಜಮಾಲಾಂ ಮದ್ಧ್ಯೇ ಚ ತಾಂ ಪ್ರತಿವಿಧಾಯ ನರೇನ್ದ್ರಪುತ್ರೌ ।

ಭೀಮಾರ್ಜ್ಜುನೌ ಯಯತುರಚ್ಯುತಮಾಭಿನಮ್ಯ ಕ್ಷುಬ್ಧಂ[1] ತದಾ ನೃಪವರಾಬ್ಧಿರಿಮಾವಧಾವತ್ ॥೧೯.೧೩೨॥

 

ಆಗ ದ್ರೌಪದಿಯು ಅರ್ಜುನನ ಕಂಠಕ್ಕೆ ವಿಜಯಸಂಕೇತವಾಗಿ ನವತಾವರೆಯ ಮಾಲೆಯನ್ನು ಹಾಕಿದಳು. ನಂತರ    ರಾಜಕುಮಾರರಾದ ಭೀಮಾರ್ಜುನರು ದ್ರೌಪದಿಯನ್ನು ತಮ್ಮ ಮಧ್ಯದಲ್ಲಿರಿಸಿಕೊಂಡು ಬಂದು,  ಶ್ರೀಕೃಷ್ಣನಿಗೆ ನಮಸ್ಕರಿಸಿ ತೆರಳಿದರು. ಆಗ ತಟಸ್ಥವಾಗಿದ್ದ ಕ್ಷತ್ರಿಯರೆಲ್ಲರೂ ಕೂಡಾ, ಇವರಿಬ್ಬರನ್ನು ಕುರಿತು ಧಾವಿಸಿ ಬಂದರು.  

 

ದ್ರಷ್ಟುಂ ಹಿ ಕೇವಲಗತಿರ್ನ್ನತು ಕನ್ಯಕಾಯಾ ಅರ್ತ್ಥೇ ನ ಚಾಪಮಿಹ ವೃಷ್ಣಿವರಾಃ ಸ್ಪೃಶನ್ತು ।

ಇತ್ಯಾಜ್ಞಯೈವ ವರಚಕ್ರಧರಸ್ಯ ಲಿಪ್ಸಾಮಪ್ಯತ್ರ ಚಕ್ರುರಿಹ ನೈವ ಯದುಪ್ರವೀರಾಃ ॥೧೯.೧೩೩॥

 

‘ನಮ್ಮ ಉಪಸ್ಥಿತಿ ಕೇವಲ ನೋಡಲು ಮಾತ್ರ, ಕನ್ನಿಕೆಗಾಗಿ ಅಲ್ಲಾ. ಆದ್ದರಿಂದ ಸ್ವಯಮ್ಬರದಲ್ಲಿ ಯಾರೂ   ಧನುಸ್ಸನ್ನು ಮುಟ್ಟಬೇಡಿ’ ಎಂದು ಸುದರ್ಶನ ಚಕ್ರಧಾರಿ ಪರಮಾತ್ಮನ ಆಜ್ಞೆಯಿದ್ದುದರಿಂದ, ಯಾದವರು ದ್ರೌಪದಿಯ ವಿಚಾರದಲ್ಲಿ ಅಥವಾ ಧನುಸ್ಸನ್ನು ಹೆದೆಯೇರಿಸುವ ವಿಚಾರದಲ್ಲಿ ಬಯಕೆಯನ್ನೇ ಮಾಡಲಿಲ್ಲ.

 

ಭೀಮಸ್ತು ರಾಜಸಮಿತಿಂ ಪ್ರತಿಸಮ್ಪ್ರಯಾತಾಂ ದೃಷ್ಟ್ವೈವ ಯೋಜನದಶೋಚ್ಛ್ರಯಮಾಶು ವೃಕ್ಷಮ್ ।

ಆರುಜ್ಯ ಸರ್ವನೃಪತೀನಭಿತೋsಪ್ಯತಿಷ್ಠದ್ ದೃಷ್ಟ್ವಾಪಲಾಯನಪರಾಶ್ಚ ಬಭೂವುರೇತೇ ॥೧೯.೧೩೪॥

 

ಭೀಮಸೇನನಾದರೋ, ತನ್ನೆದುರು ರಭಸದಿಂದ ಬರುತ್ತಿರುವ ರಾಜರ ಸಮೂಹವನ್ನು ಕಂಡು, ಬಹಳ ಎತ್ತರವಿರುವ ಮರವನ್ನು ಕೂಡಲೇ ಕಿತ್ತು, ಎಲ್ಲಾ ರಾಜರ ಎದುರು ನಿಂತ. ಅದನ್ನು ಕಂಡು ಕೆಲವರು ಪಲಾಯನಪರರಾದರು(ಇನ್ನು ಕೆಲವರು ನಿಂತಿದ್ದರು ಕೂಡಾ)

 

ಭೀಮೋsಯಮೇಷ ಪುರುಹೂತಸುತೋsನ್ಯ ಏತೇ ಪಾರ್ತ್ಥಾ ಇತಿ ಸ್ಮ ಹಲಿನೇ ಹರಿರಭ್ಯವೋಚತ್ ।

ದೃಷ್ಟ್ವೈವ ಸೋsಪಿ ಮುದಮಾಪ ಶಿನೇಶ್ಚ ಪೌತ್ರಃ ಖಡ್ಗಂ ಪ್ರಗೃಹ್ಯ ಹರ್ಷಾತ್ ಪರಿಪುಪ್ಲುವೇsತ್ರ ॥೧೯.೧೩೫॥

 

‘ಇವನು ಭೀಮಸೇನನು, ಇನ್ನೊಬ್ಬ ಅರ್ಜುನ. ಉಳಿದ ಮೂವರು ಕುಂತಿಯ ಮಕ್ಕಳು’ ಎಂದು ಪರಮಾತ್ಮನು ಬಲರಾಮನಿಗಾಗಿ ಹೇಳಿದನು. ಬಲರಾಮನಾದರೋ, ಅವರನ್ನು ನೋಡಿಯೇ ಸಂತೋಷವನ್ನು ಹೊಂದಿದನು. ಶಿನಿಯ ಮೊಮ್ಮೊಗನಾದ ಸಾತ್ಯಕಿಯಂತೂ  ಖಡ್ಗವನ್ನು ಹಿಡಿದು ಸ್ವಯಮ್ಬರ ಮಂಟಪದಲ್ಲಿ ಹರ್ಷದಿಂದ ಕುಣಿದಾಡಿದನು.



[1] ಕ್ಷುಬ್ಧಸ್ತದಾ

No comments:

Post a Comment